1. ಅವರಿಬ್ಬರೂ ಪ್ರಜಾತಂತ್ರ ಮತ್ತು ಸ್ವತಂತ್ರ ಭಾರತವನ್ನು ಬಯಸಿದ್ದರು.
2. ಬ್ರಿಟಿಷ್ ಆಡಳಿತದ ವಿರುದ್ಧ ಅವರಿಬ್ಬರೂ ಹೋರಾಡಿದ್ದರು. ಆದರೆ ರೀತಿ ಬೇರೆ ಬೇರೆಯಾಗಿತ್ತು.
3. ಇಬ್ಬರೂ ಉನ್ನತ ವಿದ್ಯಾಭ್ಯಾಸವನ್ನು ಪಡೆದವರು ಮತ್ತು ವಕೀಲರಾಗಿದ್ದರು.
4. ತಾವಿರುವ ಸಾಮಾಜಿಕ, ರಾಜಕೀಯ ಪರಿಸ್ಥಿತಿಯ ಬಗ್ಗೆ ಅತ್ಯುತ್ತಮ ಮಟ್ಟದ ತಿಳುವಳಿಕೆಯನ್ನು ಹೊಂದಿದ್ದರು.
5. ಭಾರತದ ಸ್ವಾತಂತ್ರ್ಯ ಹೋರಾಟದ ವಿಷಯದಲ್ಲಿ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಇರಲಿಲ್ಲ.
6. ಬಂದೂಕಿನ ಮೂಲಕ ನಾವು ಬ್ರಿಟಿಷರಿಂದ ಸ್ವಾತಂತ್ರ್ಯ ಗಳಿಸಲಾರೆವು ಎಂಬ ಬಗ್ಗೆ ಅವರಿಬ್ಬರಲ್ಲಿ ಖಚಿತ ಅಭಿಪ್ರಾಯವಿತ್ತು.
7. ಧಾರ್ಮಿಕ ಮತ್ತು ಸಾಮಾಜಿಕ ವಿಷಯಗಳಲ್ಲಿ ಅವರಿಬ್ಬರ ನಡುವೆ ತೀವ್ರ ಭಿನ್ನಾಭಿಪ್ರಾಯ ಇತ್ತು. ಆದರೂ ಅವರು ಪರಸ್ಪರರನ್ನು ದ್ವೇಷಿಸುತ್ತಿರಲಿಲ್ಲ.
ಇವರೇ ಮಹಾತ್ಮ ಗಾಂಧೀಜಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್. 1947 ಆಗಸ್ಟ್ 29ರಿಂದ ತೊಡಗಿ 2 ವರ್ಷ, 11 ತಿಂಗಳು ಮತ್ತು 18 ದಿನಗಳ ಕಾಲ ತೀವ್ರ ಪರಿಶ್ರಮ ಪಟ್ಟು ವಿಶ್ವದಲ್ಲಿಯೇ ಅತೀ ಬೃಹತ್ತಾದ ಮತ್ತು ಅತ್ಯುತ್ತಮವಾದ ಸಂವಿಧಾನವನ್ನು ರಚಿಸಿಕೊಟ್ಟವರು ಅಂಬೇಡ್ಕರ್‍ರಾದರೆ, ಸತ್ಯಾಗ್ರಹವೆಂಬ ಹೊಸ ಪರಿಕಲ್ಪನೆಯ ಮೂಲಕ ಹೋರಾಟದ ಹೊಸ ಸಾಧ್ಯತೆಯನ್ನು ಆವಿಷ್ಕರಿಸಿಕೊಟ್ಟವರು ಗಾಂಧೀಜಿ. 1949 ನವೆಂಬರ್ 26 ರಂದು ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನಾ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ಒಪ್ಪಿಸುವ ಮೊದಲು ಮಾಡಿರುವ ಅಧ್ಯಯನ, ಸಂಶೋಧನೆ, ವ್ಯಯಿಸಿದ ಶ್ರಮ, ಬದ್ಧತೆ ಇತ್ಯಾದಿಗಳನ್ನು ಅಭ್ಯಸಿಸುವಾಗ ಅಚ್ಚರಿಯಾಗುತ್ತದೆ. ಅಸ್ಪೃಶ್ಯತೆ ಮತ್ತು ಅವಹೇಳನದ ಕಟು ಅನುಭವವನ್ನು ಹೊಂದಿರುವ ಅಂಬೇಡ್ಕರ್ ರಂತಹ ವ್ಯಕ್ತಿಯ ಹೊರತು ಬೇರೆ ಯಾರೇ ಆಗಿದ್ದರೂ ಇಂಥದ್ದೊಂದು ವಿಶಿಷ್ಟ ಸಂವಿಧಾನವನ್ನು ರಚಿಸಲು ಸಾಧ್ಯವಿರಲಿಲ್ಲವೇನೋ ಎಂದೇ ಅನಿಸುತ್ತದೆ. ಒಂದುವೇಳೆ, ಗಾಂಧೀಜಿಯ ನೇತೃತ್ವದಲ್ಲೇ ಇದು ನಡೆದಿರುತ್ತಿದ್ದರೂ ಇಂಥದ್ದೊಂದು ಸಂವಿಧಾನ ರಚನೆಯ ಸಾಧ್ಯತೆ ತೀರಾ ತೀರಾ ಕಡಿಮೆಯಿತ್ತು. ಯಾಕೆಂದರೆ, ಗಾಂಧೀಜಿ ಸ್ವತಃ ಅಸ್ಪೃಶ್ಯತೆಯನ್ನು ಅನುಭವಿಸಿರಲಿಲ್ಲ. ಕಂಡದ್ದು ಮತ್ತು ಕೇಳಿದ್ದೇ ಅವರ ಅನುಭವವಾಗಿತ್ತು. ಆದರೆ, ಗಾಂಧೀಜಿಯವರು ಕಂಡಿದ್ದ ಮತ್ತು ಕೇಳಿದ್ದ ಸಂಗತಿಯನ್ನು ಅಂಬೇಡ್ಕರ್ ಸ್ವತಃ ಅನುಭವಿಸಿದ್ದರು. ಮಾತ್ರವಲ್ಲ, ಗಾಂಧಿ ಕಂಡಿರದ ಮತ್ತು ಕೇಳಿರದ ಅಸ್ಪೃಶ್ಯತೆಯ ಅತಿ ಕ್ರೂರ ದೌರ್ಜನ್ಯಗಳನ್ನು ಅಂಬೇಡ್ಕರ್ ಸ್ವತಃ ಉಂಡಿದ್ದರು. ಆದ್ದರಿಂದಲೇ,
ಅಸ್ಪೃಶ್ಯತೆಯನ್ನು ನಿರ್ಮೂಲನ ಮಾಡುವ ವಿಷಯದಲ್ಲಿ ಅಂಬೇಡ್ಕರ್ ಅವರು ಅತಿ ಉಗ್ರತಮ ನಿಲುವನ್ನು ಪ್ರದರ್ಶಿಸುತ್ತಿದ್ದರು. ದಲಿತರಿಗೆ ಪ್ರತ್ಯೇಕ ಚುನಾವಣೆ ಬೇಕೆಂಬ ಅವರ ವಾದದಲ್ಲಿ ನಮಗೆ ಇದನ್ನು ದರ್ಶಿಸಬಹುದು. ಪೂನಾ ಒಪ್ಪಂದದ ಮೂಲಕ ಗಾಂಧಿಯವರು ಈ ಆಗ್ರಹಕ್ಕೆ ತಡೆ ನೀಡುವಲ್ಲಿ ಯಶಸ್ವಿಯಾದರೂ ಅಂಬೇಡ್ಕರ್ ಆಂತರಿಕವಾಗಿ ಈ ವಾದವನ್ನು ಬಿಟ್ಟು ಕೊಟ್ಟಿರಲಿಲ್ಲ. ಅಸ್ಪೃಶ್ಯತೆಯ ನಿವಾರಣೆಯ ಕುರಿತಂತೆ ಮಹಾತ್ಮಾ ಗಾಂಧಿಯವರ ನಿಲುವನ್ನು ಅವರು ಸೋಗಿನದೆಂಬಂತೆ ಕಂಡರು. ಗಾಂಧಿಯವರ ಸಹನೆ, ತಾಳ್ಮೆ ಮತ್ತು ಹೋರಾಟ ನೀತಿ ಅಂಬೇಡ್ಕರ್ ರಿಗೆ ಪಥ್ಯವಾಗಿರಲೇ ಇಲ್ಲ. ‘ಹರಿಜನ’ ಎಂಬ ಗಾಂಧಿ ಸಂಶೋಧಿತ ಪದಪುಂಜವನ್ನೇ ಅಂಬೇಡ್ಕರ್ ವಿರೋಧಿಸಿದರು. ಜಾತಿ ವ್ಯವಸ್ಥೆಯನ್ನು ಊರ್ಜಿತ ದಲ್ಲಿಡುವ ತಂತ್ರದ ಭಾಗವಾಗಿ ಅವರು ಈ ‘ಹರಿಜನ’ ಪದವನ್ನು ಪರಿಗಣಿಸಿದರು. ಇದಕ್ಕೆ ಕಾರಣವೂ ಇದೆ.
ಅಸ್ಪೃಶ್ಯತೆಯ ನಿರ್ಮೂಲನದ ವಿಷಯದಲ್ಲಿ ಗಾಂಧಿ ಮತ್ತು ಅಂಬೇಡ್ಕರ್‍ರ ನಡುವೆ ತೀವ್ರ ಭಿನ್ನಾಭಿಪ್ರಾಯವಿತ್ತು ಎಂಬುದು ಅವರಿಬ್ಬರ ಮಾತು-ಕೃತಿಗಳಿಂದ ಸ್ಪಷ್ಟವಾಗುತ್ತದೆ. ಹುಟ್ಟಿನಿಂದಲೇ ಅಸ್ಪೃಶ್ಯತೆಯ ಕರಾಳ ಅನುಭವಗಳನ್ನು ಪಡೆಯುತ್ತಲೇ ಬೆಳೆದ ಅಂಬೇಡ್ಕರ್ ರು, ಆ ಕಾರಣದಿಂದಲೋ ಏನೋ ಮಾತಿನಲ್ಲಿ ಖಂಡಿತವಾದಿಯಾಗಿದ್ದರು. ನೇರ ಮತ್ತು ನಿಖರ ಮಾತು ಅವರದಾಗಿತ್ತು. ಜಾತಿ ವ್ಯವಸ್ಥೆ ನಾಶವಾಗದೇ ಅಸ್ಪೃಶ್ಯತೆ ನಾಶವಾಗದು ಎಂಬುದು ಅವರ ಖಚಿತ ಧ್ವನಿಯಾದರೆ ಗಾಂಧಿ ಇಷ್ಟೊಂದು ಖಚಿತವಾಗಿ ಮಾತಾಡಿದ್ದು ಶೂನ್ಯ ಅನ್ನುವಷ್ಟು ಕಡಿಮೆ. ಅಸ್ಪೃಶ್ಯತೆಯನ್ನು ಅವರು ಪ್ರಬಲವಾಗಿ ವಿರೋಧಿಸುತ್ತಿದ್ದರು. ಆದರೆ, ಜಾತಿ ವ್ಯವಸ್ಥೆಯ ನಿರ್ಮೂಲನದ ಬಗ್ಗೆ ಅವೇ ನಿಲುವನ್ನು ಅವರು ಎಲ್ಲೂ ವ್ಯಕ್ತಪಡಿಸಲಿಲ್ಲ. ಹಿಂದೂ ಸಮುದಾಯವನ್ನು ಒಗ್ಗೂಡಿಸುವುದಕ್ಕೆ ಜಾತಿ ವ್ಯವಸ್ಥೆಯ ಅಗತ್ಯ ಇದೆ ಎಂದು ಅವರು ನಂಬಿದ್ದರು ಎಂಬ ಆರೋಪ ಇದೆ. ಅಸ್ಪೃಶ್ಯರ ಕೆಲಸ ಎಂದು ಸ್ಪೃಶ್ಯ ಸಮಾಜ ಯಾವುದನ್ನೆಲ್ಲ ವಿಂಗಡಿಸಿತ್ತೋ ಅವನ್ನು ಸ್ವತಃ ಮಾಡುವ ಮೂಲಕ ಸ್ಪೃಶ್ಯ ಮನಸ್ಥಿತಿಗೆ ಅವರು ಹೊಡೆತವನ್ನೂ ನೀಡಿದ್ದರು. ಶೌಚಾಲಯ ಶುಚಿಗೊಳಿಸುವ ಕೆಲಸವನ್ನು ಸ್ವತಃ ಗಾಂಧಿಯೇ ಮಾಡಿದರು. ಮಲ ಎತ್ತುವುದು ಅಸ್ಪೃಶ್ಯರ ಕೆಲಸ ಎಂದು ನಂಬಿದ್ದ ಜಾತಿ ಮೇಲ್ಮೆಯ ಮನಸ್ಥಿತಿಗೆ ಕೊಟ್ಟ ಏಟೆಂದು ಇದನ್ನು ವ್ಯಾಖ್ಯಾನಿಸಲಾಗುತ್ತದೆ. ಪ್ಲೇಗ್‍ನ ಸಮಯದಲ್ಲಿ ಅವರು ಮನೆ ಮನೆ ಸಂದರ್ಶಿಸಿದ್ದು ಮತ್ತು ಜಾತಿಯಲ್ಲಿ ಶ್ರೇಷ್ಠರಾಗಿದ್ದವರ ಮನೆಗಳು ದುರ್ವಾಸನೆಯಿಂದ ಕೂಡಿದ್ದುದನ್ನೂ ಅವರು ತಮ್ಮ ಆತ್ಮಕತೆಯಲ್ಲಿ ವಿವರಿಸಿದ್ದಾರೆ. ಗ್ರಾಮ ಸ್ವರಾಜ್ಯವೆಂಬ ಗಾಂಧಿಯವರ ಪರಿಕಲ್ಪನೆಗೆ ತೀರಾ ಭಿನ್ನವಾದ ಪರಿಕಲ್ಪನೆ ಅಂಬೇಡ್ಕರ್ ಗಿತ್ತು. ದಲಿತರು ಗ್ರಾಮ ದಲ್ಲೇ ಉಳಿದು ಆರ್ಥಿಕವಾಗಿ ಬಲಿಷ್ಠರಾಗುವ ಬಗ್ಗೆ ಗಾಂಧಿ ವಾದಿಸಿದರೆ, ದಲಿತರು ನಗರಕ್ಕೆ ವಲಸೆ ಬರಬೇಕು ಮತ್ತು ಉತ್ತಮ ಶಿಕ್ಷಣ ಪಡೆದು ಉದ್ಯೋಗ ಗಿಟ್ಟಿಸಿಕೊಂಡು ಸಬಲರಾಗಬೇಕು ಎಂಬುದು ಅಂಬೇಡ್ಕರ್ ವಾದವಾಗಿತ್ತು. ಸತ್ಯಾಗ್ರಹದಲ್ಲಿ ಬಲವಾದ ನಂಬಿಕೆಯನ್ನಿಟ್ಟಿದ್ದ ಗಾಂಧೀಜಿಯದ್ದು ಒಂದು ತುದಿಯಾದರೆ ಅಂಬೇಡ್ಕರ್ ರದ್ದು ಅದರ ಇನ್ನೊಂದು ತುದಿ. ಅಸ್ಪೃಶ್ಯತೆಯನ್ನು ಸತ್ಯಾಗ್ರಹದ ಮೂಲಕ ನಿಭಾಯಿಸಲು ಸಾಧ್ಯವಿಲ್ಲ ಎಂದವರು ಬಲವಾಗಿ ನಂಬಿದ್ದರು. ಆದರೆ,
ಮಂದಿರದ ಬಾಗಿಲನ್ನು ಅಸ್ಪೃಶ್ಯರಿಗೆ ತೆರೆದು ಕೊಡುವುದರಿಂದ ಬದಲಾವಣೆ ಸಾಧ್ಯ ಎಂದು ಗಾಂಧೀಜಿ ನಂಬಿದ್ದರು. ಮಾತ್ರವಲ್ಲ, ಹಿಂದೂ ಧರ್ಮದ ಮೇಲ್ಜಾತಿಯಿಂದ ಮಾತ್ರ ಅಸ್ಪೃಶ್ಯತೆ ನಿವಾರಣೆ ಸಾಧ್ಯ ಎಂದೂ ನಂಬಿದ್ದರು. ಆದರೆ, ದಲಿತರು ಶಿಕ್ಷಣ ಪಡೆಯುವುದೇ ಅಸ್ಪೃಶ್ಯತೆಗೆ ಔಷಧ ಎಂಬುದು ಅಂಬೇಡ್ಕರ್ ರ ವಾದವಾಗಿತ್ತು.
“ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು. ಶಿಕ್ಷಣ ಖಡ್ಗದಂತೆ. ಖಡ್ಗಕ್ಕೆ ಪ್ರತಿಯೊಬ್ಬರೂ ಹೆದರುತ್ತಾರೆ. ಇಂದು ನಾವು ಕೋರ್ಟು-ಕಚೇರಿಗೆ ಹೋದರೆ ನಿಮಗೆ ಕಾಣಿಸುವುದೇನು? ನ್ಯಾಯಾಧೀಶ ಬ್ರಾಹ್ಮಣ. ಗುಮಾಸ್ತ ಬ್ರಾಹ್ಮಣ. ಫೌಜಿದಾರ ಬ್ರಾಹ್ಮಣ. ಇಂಥ ಪರಿಸ್ಥಿತಿಯಲ್ಲಿ ನಮ್ಮ ಖಟ್ಲೆಯ ನ್ಯಾಯಕ್ಕಾಗಿ ಕೋರ್ಟು ಕಟ್ಟೆ ಏರಿದರೆ ನ್ಯಾಯ ಸಿಗಬಹುದೇ? ಎಷ್ಟೋ ಖಟ್ಲೆಯ ನಿರ್ಣಯದಲ್ಲಿ ನ್ಯಾಯಾಧೀಶರು ಮಹಾರರ (ಅಸ್ಪೃಶ್ಯ ಜಾತಿ) ಪರವಾಗಿ ಮಹಾರ ಸಾಕ್ಷಿದಾರನಾಗಿರುವುದರಿಂದ ಆ ಸಾಕ್ಷ್ಯವನ್ನು ನಂಬುವಂತಿಲ್ಲ ಎಂದು ತಿರಸ್ಕರಿಸಿದ್ದಾರೆ. ಆದರೆ ಸ್ಪೃಶ್ಯ (ಮೇಲ್ಜಾತಿ) ಜಾತಿಯ ಪರವಾಗಿ ಸ್ಪೃಶ್ಯ ಜಾತಿಯ ಸಾಕ್ಷಿದಾರನಿದ್ದರೆ ನ್ಯಾಯಾಧೀಶರು ಆಕ್ಷೇಪವೆತ್ತುವುದಿಲ್ಲ” ಎಂದು ಅವರು ಭಾಷಣದಲ್ಲಿ (ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿರುವ ಅಂಬೇಡ್ಕರ್ ಭಾಷಣ ಮತ್ತು ಬರಹಗಳ ಸಂಪುಟ) ಹೇಳಿದ್ದಿದೆ. ಹಾಗಂತ,
ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರೂ ಪರಸ್ಪರ ವೈರಿಗಳಂತಿದ್ದರು ಎಂದು ಇದರರ್ಥವಲ್ಲ.
1953ರ ‘ಹಿಂದುಳಿದ ಜಾತಿ ಮತ್ತು ವರ್ಗಗಳ ಆಯುಕ್ತರ ವರದಿ’ಯ ಮೇಲೆ 1954 ಸೆಪ್ಟೆಂಬರ್ 6ರಂದು ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ವೇಳೆ ಅಂಬೇಡ್ಕರ್ ಆಡಿರುವ ಮಾತು ಇದಕ್ಕೊಂದು ಉತ್ತಮ ಉದಾಹರಣೆ.
“ಗಾಂಧಿಯವರ ಸ್ಮರಣೆಗೋಸ್ಕರ ಈ ದೇಶದಲ್ಲಿ ಉಪ್ಪಿಗೆ ತೆರಿಗೆಯನ್ನು ನಿಷೇಧಿಸಲಾಗಿದೆ. ಗಾಂಧಿಯವರನ್ನು ನಾನು ಗೌರ ವಿಸುತ್ತೇನೆ. ಆದರೆ ನನ್ನ ನಿಲುವು ಏನೆಂದರೆ, ಸರಕಾರ ಉಪ್ಪಿಗೆ ತೆರಿಗೆ ವಿಧಿಸಬೇಕು ಮತ್ತು ತೆರಿಗೆಯಿಂದ ಸಂಗ್ರಹವಾದ ಮೊತ್ತ ವನ್ನು ಗಾಂಧಿಯ ಹೆಸರಲ್ಲಿ ಸ್ಥಾಪಿತವಾದ ನಿಧಿಗೆ ವರ್ಗಾಯಿಸಿ, ಅದನ್ನು ದಲಿತರ ಅಭಿವೃದ್ಧಿಗೆ ಬಳಸಬೇಕು” ಎಂದಿದ್ದರು. “ಇದು ಸ್ವರ್ಗದಲ್ಲಿರುವ ಗಾಂಧಿಗೆ ಅತ್ಯಂತ ಸಂತಸ ಕೊಡುವ ಕೆಲಸವಾಗ ಬಹುದು” ಎಂದೂ ಹೇಳಿದ್ದರು. ಇನ್ನೊಂದು ಸಂದರ್ಭದಲ್ಲಿ,
ಗಾಂಧಿಯ ಸತ್ಯ ಮತ್ತು ಅಹಿಂಸೆ ಎಂಬ ತತ್ವವನ್ನು ಲೇವಡಿಗೂ ಒಳಪಡಿಸಿದ್ದರು. 1955ರಲ್ಲಿ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಗಾಂಧಿಯನ್ನು ಇಬ್ಬಗೆ ಧೋರಣೆಯ ವ್ಯಕ್ತಿ ಎಂದು ಟೀಕಿಸಿದ್ದರು. ಇಂಗ್ಲಿಷ್ ಭಾಷೆಯ ಪತ್ರಿಕೆಗಳಲ್ಲಿ ಜಾತಿ ವ್ಯವಸ್ಥೆಗೆದುರಾಗಿ ಬರೆಯುವ ಗಾಂಧಿ, ಗುಜರಾತಿ ಭಾಷೆಯ ಪತ್ರಿಕೆಯಲ್ಲಿ ಜಾತಿ ವ್ಯವಸ್ಥೆಯನ್ನು ಬೆಂಬಲಿಸಿ ಬರೆಯುತ್ತಾರೆ ಎಂದೂ ದೂರಿದ್ದರು. ಆದರೆ,
ಈ ಭಿನ್ನಾಭಿಪ್ರಾಯಗಳ ಹೊರತಾಗಿಯೂ ದೇಶದ ಪ್ರಥಮ ಕಾನೂನು ಸಚಿವರಾಗುವಂತೆ ಅಂಬೇಡ್ಕರ್ ರನ್ನು ಆಹ್ವಾನಿಸಿದ್ದು ಇದೇ ಗಾಂಧೀಜಿಯ ಕಾಂಗ್ರೆಸ್. ಅಂಬೇಡ್ಕರ್ ರು ಕಾನೂನು ಸಚಿವರಾದುದು ಮತ್ತು ಬಳಿಕ ಸಂವಿಧಾನ ರಚನಾ ಸಮಿತಿಯ ನೇತೃತ್ವ ವಹಿಸಿಕೊಂಡದ್ದು ಇದೇ ಗಾಂಧಿಯ ಕಣ್ಣೆದುರಲ್ಲೇ. ಅಂಬೇಡ್ಕರ್ ಅವರು ಈ ಹೊಣೆಗಾರಿಕೆಯನ್ನು ಎಷ್ಟು ಬದ್ಧತೆಯಿಂದ ನಿರ್ವಹಿಸಿದರೆಂದರೆ, 395 ವಿಧಿಗಳು, 8 ಅನುಸೂಚಿಗಳು ಮತ್ತು 8 ಭಾಗಗಳನ್ನೊಳಗೊಂಡ ಸಂವಿಧಾನವೇ ಇದಕ್ಕೆ ಸಾಕ್ಷಿ. ಈ ಸಂವಿಧಾನವನ್ನು ರಚಿಸುವುದಕ್ಕಾಗಿ ಅವರು ಮತ್ತು ತಂಡವು ಬ್ರಿಟನ್, ಅಮೇರಿಕ, ಐರ್ಲೆಂಡ್, ಫ್ರಾನ್ಸ್, ಕೆನಡ, ಆಸ್ಟ್ರೇಲಿಯಾ, ರಷ್ಯಾ, ಜಪಾನ್ ಮುಂತಾದ ರಾಷ್ಟ್ರಗಳ ಸಂವಿಧಾನವನ್ನು ಅಭ್ಯಸಿಸಿತು. ವಿದೇಶಗಳಿಗೆ ತೆರಳಿ ಅಲ್ಲಿನ ತಜ್ಞರೊಂದಿಗೆ ಸಮಾಲೋಚನೆ ನಡೆಸಿತು. ಸಂವಿಧಾನ ತಜ್ಞರಿಂದ ಸಲಹೆಗಳನ್ನು ಪಡೆಯಿತು. ಮುಖ್ಯವಾಗಿ ಜಪಾನ್‍ನ ಸಂವಿಧಾನದ ಪ್ರೇರಣೆಯಿಂದ ಸುಪ್ರೀಮ್ ಕೋರ್ಟಿನ ಕಾರ್ಯಕಲಾಪಗಳ ವಿಧಾನವನ್ನು ರಚಿಸಲಾಯಿತು. ಪಂಚವಾರ್ಷಿಕ ಯೋಜನೆ ರೂಪು ತಳೆದದ್ದು ರಷ್ಯಾದ ಪ್ರೇರಣೆಯಿಂದ. ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಪರಿಕಲ್ಪನೆಯನ್ನು ಫ್ರಾನ್ಸ್ ನಿಂದ ಹೆಕ್ಕಿಕೊಳ್ಳಲಾಯಿತು. ಹೀಗೆ ದೀರ್ಘ ಅಧ್ಯಯನದ ಬಳಿಕ ತಯಾರಿಸಲಾದ ಕರಡು ಪ್ರತಿಯನ್ನು 1949 ನವೆಂಬರ್ 26ರಂದು ಸಲ್ಲಿಸಲಾಯಿತು. 1950 ಜನವರಿ 26ರಂದು ಇದನ್ನು ಅಂಗೀಕರಿಸಿ ಮಾನ್ಯ ಮಾಡಲಾಯಿತು. ನಿಜವಾಗಿ,
ಸ್ವತಂತ್ರ ಭಾರತದ ಎರಡು ವಿಶಿಷ್ಯ ಚೇತನಗಳಾಗಿ ನಾವು ಗಾಂಧಿ ಮತ್ತು ಅಂಬೇಡ್ಕರ್ ರನ್ನು ಗುರುತಿಸಬಹುದು. ತಾವು ಬೆಳೆದು ಬಂದ ರೀತಿ, ಹಿನ್ನೆಲೆ, ಆಗಿನ ಸಾಮಾಜಿಕ ಪರಿಸ್ಥಿತಿ... ಇತ್ಯಾದಿಗಳ ಪಡಿಯಚ್ಚಾಗಿ ಅವರಿಬ್ಬರೂ ಮಾತಾಡಿದರು. ಬದುಕಿದರು. ಗಾಂಧಿ ಬೆಳೆದ ರೀತಿಯೇ ಬೇರೆ. ಅಂಬೇಡ್ಕರ್ ಬೆಳೆದ ರೀತಿಯೇ ಬೇರೆ. ಆದ್ದರಿಂದ ಸಮಸ್ಯೆಯೊಂದರ ಬಗ್ಗೆ ಅವರಿಬ್ಬರ ನಿಲುವುಗಳಲ್ಲಿ ವ್ಯತ್ಯಾಸ ಇರುವುದು ಅಸಹಜವೂ ಅಲ್ಲ, ಅನುಮಾನಾಸ್ಪದವೂ ಅಲ್ಲ. ಸದ್ಯದ ಭಾರತದಲ್ಲಿ ಇವರಿಬ್ಬರೂ ಚರ್ಚೆಗೊಳಗಾಗಬೇಕಾದ ತುರ್ತು ಅಗತ್ಯ ಇದೆ. ಭಿನ್ನಾಭಿಪ್ರಾಯಗಳನ್ನು ಸಹಿಸಿಕೊಳ್ಳಲಾರದ ಮತ್ತು ಅಭಿಪ್ರಾಯಗಳನ್ನು ದೇಶದ ಪರ ಇಲ್ಲವೇ ವಿರುದ್ಧ ಎಂಬ ಎರಡೇ ಎರಡು ವಿಭಾಗಗಳಾಗಿ ವಿಭಜಿಸಿ ದಮನಿಸುವ ರೀತಿಯ ವಾತಾವರಣದ ಮಧ್ಯೆ ಗಾಂಧಿ ಮತ್ತು ಅಂಬೇಡ್ಕರ್ ರನ್ನು ಮುಖಾಮುಖಿಗೊಳಿಸಿ ಸಾರ್ವಜನಿಕ ಚರ್ಚೆಗೆ ಒಳಗಾಗಿಸಬೇಕಾಗಿದೆ. ಅವರಿಬ್ಬರ ನಡುವಿನ ಭಿನ್ನಾಭಿಪ್ರಾಯ ಶತ್ರುತ್ವಕ್ಕೆ ಕಾರಣವಾಗಿರಲಿಲ್ಲ. ಗಾಂಧಿಯನ್ನು ಕಂಡರಾಗದು ಅನ್ನುವ ಸ್ಥಿತಿ ಅಂಬೇಡ್ಕರ್ ರದ್ದಾ ಗಿರಲಿಲ್ಲ. ಗಾಂಧಿಯ ವಿಚಾರಧಾರೆಗಳ ಜೊತೆಗೆ ಅವರಿಗೆ ತಕರಾರಿತ್ತೇ ಹೊರತು ಗಾಂಧಿಯ ಜೊತೆಗಲ್ಲ. ಭಿನ್ನಾಭಿಪ್ರಾಯವನ್ನು ಮೀರಿದ ಸ್ನೇಹ ಸಂವಾದ ಅವರಿಂದ ಸಾಧ್ಯವಾಗಿತ್ತು.
ಸಂವಿಧಾನವನ್ನು ಒಪ್ಪಿಕೊಂಡು 70 ವರ್ಷಗಳಾಗಿರುವ ಮತ್ತು ಎಲ್ಲೆಲ್ಲೂ "ಶತ್ರು"ಗಳೇ ತುಂಬಿ ಹೋಗಿರುವ ಈ ಹೊತ್ತಿನಲ್ಲಿ ಈ ದೇಶದ ನಾಗರಿಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದರ್ಭ ಇದು.
No comments:
Post a Comment