Monday, March 2, 2020

ಅದುಮಿಟ್ಟ ಅತೃಪ್ತಿಯನ್ನು ಸ್ಫೋಟಿಸುವುದಕ್ಕೆ ಆ ಅಝೀಝ್ ನೆಪವಷ್ಟೇ ಆಗಿದ್ದ



ಚುನಾಯಿತ ಸರಕಾರದ ಜನವಿರೋಧಿ ನೀತಿಯನ್ನು ಪ್ರಶ್ನಿಸಿ ಜನರು ಬೀದಿಗಿಳಿಯುವುದು 2019 ಡಿಸೆಂಬರ್ ನಲ್ಲಿ ದಿಢೀರನೇ ಪ್ರತ್ಯಕ್ಷವಾದ ಹೊಸ ಪ್ರಾಕಾರ ಏನಲ್ಲ. ಪ್ರಭುತ್ವದ ಆದೇಶಗಳನ್ನು  ಉಲ್ಲಂಘಿಸುವಂತೆ ಕರೆ ಕೊಡುವುದೂ ಹೊಸತಲ್ಲ. 1975 ಜೂನ್ 25ರಂದು ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಈ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರುವ ಮೊದಲಿನ ವಾತಾವರಣ  ಸರಿಸುಮಾರು ಈಗಿನ ವಾತಾವರಣದಂತೆಯೇ ಇತ್ತು. 1974ರಲ್ಲಿ ಪ್ರಭುತ್ವ ವಿರೋಧಿ ಕಿಡಿಯೊಂದು ಗುಜರಾತ್‍ನಲ್ಲಿ ಹುಟ್ಟಿಕೊಂಡಿತು. ವಿದ್ಯಾರ್ಥಿಗಳು ಇದಕ್ಕೆ ನೇತೃತ್ವ ನೀಡಿದ್ದರು. ಆ ಕಿಡಿ ಗುರಿಯಿರಿಸಿ  ಕೊಂಡಿದ್ದು ಆಗಿನ ಗುಜರಾತ್‍ನಲ್ಲಿದ್ದ ಕಾಂಗ್ರೆಸ್ ಸರಕಾರವನ್ನು. ಸರಕಾರ ಈ ಕಿಡಿಯನ್ನು ದಮನಿಸಲು ನೋಡಿತು. ಆಗ ಆ ಕಿಡಿ ಬಿಹಾರಕ್ಕೂ ವ್ಯಾಪಿಸಿತು. ನೋಡನೋಡುತ್ತಲೇ ಪ್ರತಿಭಟನೆಯು  ಸಂಘರ್ಷ, ಬೆಂಕಿ ಹಚ್ಚುವಿಕೆಯ ಹಂತಕ್ಕೆ ತಲುಪಿತು. ಪ್ರಾಣಾಹುತಿಯಾಯಿತು. ಈ ಹಂತದಲ್ಲಿ ಜಯಪ್ರಕಾಶ್ ನಾರಾಯಣ್ ಅವರು ಜನ ಚಳವಳಿಯ ನೇತೃತ್ವವನ್ನು ವಹಿಸಿಕೊಂಡರು. ನೇತೃತ್ವ  ಅವರದ್ದಾಗಿದ್ದರೂ ಅವರ ಜೊತೆಗಿದ್ದುದು ವಿದ್ಯಾರ್ಥಿಗಳು. ಪ್ರತಿಭಟನಾಕಾರರ ಬೇಡಿಕೆಗಳ ಪಟ್ಟಿ ಉದ್ದವಾಯಿತು. ‘ನಿಮಗೆ ಸರಿ ಕಾಣದ ಪ್ರಭುತ್ವದ ಆದೇಶಗಳನ್ನು ಉಲ್ಲಂಘಿಸಿ ಬಿಡಿ’ ಎಂದು ಜೆ.ಪಿ.ಯವರು ಆ  ಸಂದರ್ಭದಲ್ಲಿ ಭಾರತೀಯರಿಗೆ ಕರೆ ಕೊಟ್ಟರು. ಆದ್ದರಿಂದ,

2019 ಡಿಸೆಂಬರ್ ಮಧ್ಯಭಾಗದಿಂದ ಹಿಡಿದು ಈವರೆಗೆ ಭಾರತೀಯರು ಬೀದಿಯಲ್ಲಿರುವುದಾದರೆ ಮತ್ತು ಪ್ರಭುತ್ವವನ್ನು ಪ್ರಶ್ನಿಸಿ ಪ್ರತಿದಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದಾದರೆ ಅದಕ್ಕೆ  ಹುಬ್ಬೇರಿಸಬೇಕಿಲ್ಲ. ‘ಕೇಂದ್ರ ಸರಕಾರದ ಎನ್‍ಪಿಆರ್ ನೀತಿಯನ್ನು ಬಹಿಷ್ಕರಿಸಿ’ ಎಂಬ ನಾಗರಿಕ ಧ್ವನಿಯನ್ನು ದೇಶದ್ರೋಹಿಯಾಗಿ ಕಾಣಬೇಕಾಗಿಯೂ ಇಲ್ಲ. ಅಂದಹಾಗೆ, 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ವಿರುದ್ಧ ದೇಶದಲ್ಲಿ ಹುಟ್ಟಿಕೊಂಡಿರುವ ಚಳವಳಿ ಸ್ವರೂಪದ ಪ್ರತಿಭಟನೆಗಳಿಗೆ ಸಿಎಎ ಒಂದೇ ಕಾರಣ ಅಲ್ಲ. ಸಿಡಿಯಲು ಸಿದ್ಧವಾಗಿದ್ದ ನಾಗರಿಕರ  ಅತೃಪ್ತಿಗೆ ಅದೊಂದು ದಾಳವಾಗಿ ಬಳಕೆಯಾಗಿದೆ ಅಷ್ಟೇ. ನಿಜವಾಗಿ,

2010 ಡಿಸೆಂಬರ್ 17ರಂದು ಮುಹಮ್ಮದ್ ಅಜೀಜ್ ಅನ್ನುವ 26 ವರ್ಷದ ಯುವಕ ನಗರ ಪಾಲಿಕೆಯ ಎದುರು ಆತ್ಮಾಹುತಿಗೆ ಶ್ರಮಿಸಿದ್ದೇ  ಟುನೀಶ್ಯನ್ ಕ್ರಾಂತಿಗೆ ಮತ್ತು ಅಧ್ಯಕ್ಷ ಝೈನುಲ್ ಆಬಿದೀನ್ ಬಿನ್ ಅಲಿಯವರ ಪದತ್ಯಾಗಕ್ಕೆ ಏಕೈಕ ಕಾರಣ ಆಗಿರಲಿಲ್ಲ. ಪ್ರಭುತ್ವದ ವಿರುದ್ಧ ತಮ್ಮ ಅತೃಪ್ತಿಯನ್ನು ಸೂಚಿಸುವುದಕ್ಕೆ ನಾಗರಿಕರಿಗೆ ಒದಗಿದ ಸೂಕ್ತ ಟೂಲ್ ಅದಾಗಿತ್ತು. ಟುನೀಶ್ಯಾದ ನಿರುದ್ಯೋಗದ  ಪ್ರಮಾಣ ತೀವ್ರ ಮಟ್ಟದಲ್ಲಿ ಏರಿಕೆಯಾಗಿತ್ತು. ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ಬಡತನದ ಪ್ರಮಾಣವೂ ದಿನನಿತ್ಯ ಏರುಗತಿಯಲ್ಲೇ  ಸಾಗುತ್ತಿತ್ತು. ಜನರು ಅತೃಪ್ತಿಯಿಂದ ಕುದಿಯುತ್ತಿದ್ದರು. ಇಂಥ  ಸಂದರ್ಭದಲ್ಲಿ ಮುಹಮ್ಮದ್ ಅಝೀಝ್ ನ ಆತ್ಮಾಹುತಿ ಯತ್ನ ಅವರನ್ನು ಪ್ರಚೋದಿಸಿತು. ಪದವಿ ಶಿಕ್ಷಣ ಪಡೆದೂ ಕಲಿಕೆಗೆ ತಕ್ಕ ಉದ್ಯೋಗ ಲಭಿಸದೇ ತಳ್ಳುಗಾಡಿಯಲ್ಲಿ ಹಣ್ಣು-ಹಂಪಲು ಮಾರುತ್ತಿದ್ದ  ಅಝೀಝನಿಗೆ ಅದರಲ್ಲೂ ಸುಖವಿರಲಿಲ್ಲ. ಲಂಚಕ್ಕಾಗಿ ಅಧಿಕಾರಿಗಳು ನಿರಂತರ ಪೀಡಿಸುತ್ತಿದ್ದರು. ಇದರಿಂದ ಬೇಸತ್ತು ಆತ ಆತ್ಮಾಹುತಿಗೆ ಯತ್ನಿಸಿದ್ದು ಟುನೀಶ್ಯನ್ ನಾಗರಿಕರನ್ನು ಕೆರಳಿಸಿತು. ನಿರಂತರ  28 ದಿನಗಳ ಕಾಲ ಟುನೀಶ್ಯಾದಾದ್ಯಂತ ಪ್ರತಿಭಟನೆಗಳು ನಡೆದುವು. ನಿಜವಾಗಿ,

ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ವ್ಯಕ್ತವಾಗುತ್ತಿರುವುದೂ ಇದುವೇ. 2012ರ ನಿರ್ಭಯ ಪ್ರಕರಣ ಮತ್ತು ಅಣ್ಣಾ ಹಜಾರೆ ನೇತೃತ್ವದಲ್ಲಿ 2013ರಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಚಳವಳಿಗಳು ಮನ್‍ಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರಕಾರದ ವರ್ಚಸ್ಸಿಗೆ ಭಾರೀ ಹೊಡೆತ ನೀಡಿದ್ದುವು. ಕಾಮನ್‍ವೆಲ್ತ್ ಹಗರಣ, ಕಲ್ಲಿದ್ದಲು ಹಗರಣ ಮತ್ತು ಟೆಲಿಕಾಂ ಹಗರಣಗಳು ಮನ್‍ಮೋಹನ್ ಸಿಂಗ್  ಸರಕಾರವನ್ನು ಇನ್ನಿಲ್ಲದಂತೆ ಕಾಡಿದ್ದುವು. ಆಗ ಭ್ರಷ್ಟಾಚಾರ ರಹಿತ ಆಡಳಿತದ ಬಗ್ಗೆ ಜನರು ಸಹಜವಾಗಿ ಕನಸು ಕಂಡರು. ಗುಜರಾತ್ ಮಾಡೆಲ್ ಮುನ್ನೆಲೆಗೆ ಬಂದದ್ದೂ ಆ ಸಂದರ್ಭದಲ್ಲೇ. ಗುಜರಾತ್  ಎಂಬುದು ದೇಶದಲ್ಲೇ  ಅತ್ಯಂತ ಹೆಚ್ಚು ಅಭಿವೃದ್ಧಿ ಹೊಂದಿದ ಮತ್ತು ಭ್ರಷ್ಟಾಚಾರ ರಹಿತವಾದ ರಾಜ್ಯ ಎಂಬ ರೀತಿಯಲ್ಲಿ ಪ್ರಚಾರ ಪಡೆಯಿತು. ನರೇಂದ್ರ ಮೋದಿಯವರು ಸಹಜವಾಗಿ ಪರ್ಯಾಯ  ನಾಯಕರಾಗಿ ಬೆಳೆದು ಬಂದರು. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ಜನರು ಚುನಾಯಿಸಿದ್ದರೆ, ಅದರ ಹಿಂದೆ ಜನಪರ ಆಡಳಿತದ ಬಯಕೆ ಇತ್ತೇ ಹೊರತು ಇನ್ನೇನೂ ಅಲ್ಲ. ಆದ್ದರಿಂದಲೇ, 2016ರ ಒಂದು ಮಧ್ಯರಾತ್ರಿಯಂದು ಅವರು ನೋಟು ನಿಷೇಧ ಮಾಡಿದಾಗಲೂ ಜನರು ದೊಡ್ಡ ಮಟ್ಟದಲ್ಲಿ ಬೀದಿಗಿಳಿಯಲಿಲ್ಲ. ಬ್ಯಾಂಕ್‍ನ ಮುಂದೆ ಸರತಿಯಲ್ಲಿ ನಿಂತು ನೂರಕ್ಕಿಂತಲೂ ಅಧಿಕ ಮಂದಿ ಪ್ರಾಣ ತೆತ್ತಾಗಲೂ ಜನರು ಅದಕ್ಕೊಂದು ಚಳವಳಿಯ ಸ್ವರೂಪ ಕೊಡಲು ಮುಂದಾಗಲಿಲ್ಲ. ಪ್ರಧಾನಿಯವರು ತನ್ನ ತಾಯಿಯನ್ನೇ ಸರತಿಯಲ್ಲಿ ನಿಲ್ಲಿಸಿ ತಾನು ಎಷ್ಟು ಪ್ರಾಮಾಣಿಕ ಎಂಬುದನ್ನು ಒಪ್ಪಿಸಲು ಯತ್ನಿಸಿದರು. ದೇಶದ ಅರ್ಥವ್ಯವಸ್ಥೆಗೆ ಅನುಕೂಲ ಆಗುವುದಾದರೆ ಸಹನೆ ವಹಿಸೋಣ ಅನ್ನುವ ಭಾವದಲ್ಲಿ ನಾಗರಿಕರು ಅನನುಕೂಲತೆಯನ್ನು ಸಹಿಸಿಕೊಂಡರು. ಆ ಬಳಿಕ ಜಿಎಸ್‍ಟಿ ಜಾರಿಯಾಯಿತು. ಅದು ಉದ್ಯಮ ವಲಯದ ಮೇಲೆ ಕಡು ಕೆಟ್ಟ ಪರಿಣಾಮವನ್ನು ಬೀರಿತು. ಅಲ್ಲಲ್ಲಿ ಅಸಹನೆ ವ್ಯಕ್ತವಾದರೂ ಜನ ಸಹಿಸಿಕೊಂಡರು. ಸರಕಾರಕ್ಕೆ  ಇನ್ನಷ್ಟು ಕಾಲಾವಕಾಶದ ಅಗತ್ಯ ಇದೆ ಎಂದು ಸುಮ್ಮನಾದರು. ಇವೆರಡನ್ನೂ ಪ್ರಧಾನಿಯವರ ಬೆಂಬಲಿಗರು ಪೊಲಿಟಿಕಲ್ ಮಾಸ್ಟರ್ ಸ್ಟ್ರೋಕ್ ಎಂದು ಸಮರ್ಥಿಸಿಕೊಂಡರು. ಆದರೆ,

2019ರಲ್ಲಿ ಮರಳಿ ಬಹುಮತವನ್ನು ಪಡೆದುಕೊಂಡ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡ ತುರ್ತು ನಿರ್ಧಾರಗಳು ಅವರ ಮೇಲಿನ ಎಲ್ಲ ಭರವಸೆಗೂ ಮಂಕು ಕವಿಯುವಂತೆ  ಮಾಡಿತು. ಅಂದಹಾಗೆ, 2014ರಿಂದ 2019ರ ನಡುವಿನ ಈ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರು ಮಾತುಗಾರಿಕೆಯಲ್ಲಿ ಮಿಂಚಿದ್ದರೇ ಹೊರತು ಆಡಳಿತಾತ್ಮಕ ನೀತಿಯ ಮಟ್ಟಿಗೆ  ದಯನೀಯ ವೈಫಲ್ಯವನ್ನು ಕಂಡಿದ್ದರು. ಏರುತ್ತಿರುವ ನಿರುದ್ಯೋಗಿಗಳ ಸಂಖ್ಯೆಗೆ ಅವರಲ್ಲಿ ಉತ್ತರ ಇರಲಿಲ್ಲ. ಕುಸಿಯುತ್ತಿರುವ ಜಿಡಿಪಿಯನ್ನು ಮೇಲೆತ್ತುವುದಕ್ಕೆ ಅವರಲ್ಲಿ ಯೋಜನೆಗಳಿರಲಿಲ್ಲ.  ರೈತರಂತೂ ದೆಹಲಿಗೆ ಬಂದು ತಿಂಗಳುಗಟ್ಟಲೆ ಚಪ್ಪರ ಹಾಕಿ ಕುಳಿತರು. ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳೆರಡಕ್ಕೂ ಜೊಂಪು ಹತ್ತಿತು. ಅಗತ್ಯ ವಸ್ತುಗಳು ಮತ್ತು ತೈಲದ ಬೆಲೆ ಏರಿಕೆಯನ್ನು ನಿಯಂತ್ರಿಸುವ  ಯಾವ ತಂತ್ರವೂ ಅವರಲ್ಲಿರಲಿಲ್ಲ. ಲೋಕಸಭಾ ಚುನಾವಣೆಗಿಂತ ತುಸು ಮೊದಲು ಪುಲ್ವಾಮಾ ಘಟನೆ ನಡೆಯದೇ ಇರುತ್ತಿದ್ದರೆ ಮೋದಿಯವರು ಮರಳಿ ಅಧಿಕಾರಕ್ಕೇರುವ ಸಾಧ್ಯತೆ ಕಡಿಮೆ ಇತ್ತು ಎಂಬ  ವಿಶ್ಲೇಷಣೆಗೆ ಕಾರಣ ಈ ಸಮಸ್ಯೆಗಳೇ. ಆದ್ದರಿಂದಲೇ, 

2019 ಮೇ ಬಳಿಕದ ನರೇಂದ್ರ ಮೋದಿಯನ್ನು ಜನರು ಭಿನ್ನವಾಗಿ ನೋಡಬಯಸಿದ್ದರು. 2014ರಿಂದ 19ರ ವರೆಗಿನ ಮೋದಿಯಲ್ಲಿ ಅವರು  ನಿರೀಕ್ಷಿಸಿದ್ದೇನೂ ಸಿಕ್ಕಿರಲಿಲ್ಲ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಲಿಷ್ಠ ಭಾರತವನ್ನು ನಿರ್ಮಿಸುವ ಮೋದಿ ಭಾರತೀಯರಿಗೆ ಬೇಕಾಗಿತ್ತು. ಉದ್ಯೋಗ, ವಿದೇಶಿ ಹೂಡಿಕೆ, ರೈತರ ಸಮಸ್ಯೆಗೆ ಪರಿಹಾರ,  ಕೈಗಾರಿಕೆಗಳ ಅಭಿವೃದ್ಧಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಹಾಗೂ ಭ್ರಷ್ಟಾಚಾರವನ್ನು ಕನಿಷ್ಠ ಮಟ್ಟಕ್ಕೆ ಇಳಿಸುವುದು ಇತ್ಯಾದಿಗಳೇ ಗುಜರಾತ್ ಮಾಡೆಲ್‍ನ ಮಾದರಿಗಳಾಗಿದ್ದುದರಿಂದ ಅದನ್ನು  ಪ್ರಧಾನಿ ಮೋದಿಯಲ್ಲೂ ಅವರು ನಿರೀಕ್ಷಿಸಿದ್ದರು. ಆದರೆ, ಮರಳಿ ಅಧಿಕಾರಕ್ಕೆ ಬಂದ ಆರೇ ತಿಂಗಳೊಳಗೆ ಅವರು ತೆಗೆದುಕೊಂಡ ಮೂರ್ನಾಲ್ಕು ನಿರ್ಧಾರಗಳು ನಾಗರಿಕರ ನಿರೀಕ್ಷೆಯನ್ನು ಸಂಪೂರ್ಣವಾಗಿ ಧರಾಶಾಹಿ ಮಾಡಿಬಿಟ್ಟಿತು. ಆರಂಭದಲ್ಲಿ ಅವರು ತ್ರಿವಳಿ ತಲಾಕನ್ನು ಕ್ರಿಮಿನಲ್ ಕೃತ್ಯವಾಗಿ ಪರಿಗಣಿಸುವ ಕಾನೂನನ್ನು ಜಾರಿಗೆ ತಂದರು. ನಿಜವಾಗಿ, ಇದು ಸುಪ್ರೀಮ್ ಕೋರ್ಟ್‍ನ ಬೇಡಿಕೆ  ಆಗಿರಲಿಲ್ಲ. ತ್ರಿವಳಿ ತಲಾಕನ್ನು ಸುಪ್ರೀಮ್ಕೋರ್ಟು ಅಸಿಂಧುಗೊಳಿಸಿತ್ತೇ ಹೊರತು ಅದನ್ನು ಕ್ರಿಮಿನಲ್ ಕೃತ್ಯವೆಂದು ಸಾರಿ 3 ವರ್ಷಗಳ ತನಕ ಜೈಲು ಶಿಕ್ಷೆಗೆ ಅರ್ಹಗೊಳಿಸುವ ಅಪರಾಧವಾಗಿ ವ್ಯಾಖ್ಯಾನಿಸಿರಲಿಲ್ಲ. ಅದರ ಬಳಿಕ ಮೋದಿಯು  ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸಿದರು. ಬಳಿಕ ದೇಶದಾದ್ಯಂತ ಎನ್‍ಆರ್ ಸಿ ಮಾಡುವುದಾಗಿಯೂ ಅದಕ್ಕಿಂತ ಮೊದಲು ಎನ್‍ಪಿಆರ್ ಕೈಗೊಳ್ಳುವುದಾಗಿಯೂ ಘೋಷಿಸಿದರು. ಅಲ್ಲದೇ,  ತರಾತುರಿಯಿಂದ ಸಿಎಎಯನ್ನೂ ಕಾನೂನಾಗಿ ಜಾರಿಗೊಳಿಸಿದರು. ತಕ್ಷಣ ಜನರು ಬೀದಿಗಿಳಿದರು. ಒಂದು ರೀತಿಯಲ್ಲಿ,

1974ರಲ್ಲಿ ವಿದ್ಯಾರ್ಥಿಗಳು ಹೇಗೆ ಪ್ರಭುತ್ವದ ವಿರುದ್ಧ ಬೀದಿಗಿಳಿದರೋ ಅದೇ ರೀತಿಯಲ್ಲಿ ವಿದ್ಯಾರ್ಥಿಗಳೇ ಈಗಿನ ಚಳವಳಿಯಲ್ಲೂ ಮುಂಚೂಣಿಯಲ್ಲಿದ್ದಾರೆ. ಅಲಿಗಢ ವಿಶ್ವವಿದ್ಯಾಲಯದಲ್ಲಿ  ಆರಂಭವಾದ ವಿದ್ಯಾರ್ಥಿ ಪ್ರತಿಭಟನೆಯು ಜಾಮಿಯ ಮಿಲ್ಲಿಯ ವಿವಿ ಘಟನೆಯ ಬಳಿಕ ದೇಶದಾದ್ಯಂತ ವಿಸ್ತರಿಸಿದೆ. ಪ್ರತಿಭಟನೆ, ರ್ಯಾಲಿ, ಧರಣಿ, ಮುಷ್ಕರ, ಭಾರತ್ ಬಂದ್ ಇತ್ಯಾದಿಗಳೊಂದಿಗೆ ಈ  ಚಳವಳಿ ಬೆಳೆಯುತ್ತಲೇ ಇದೆ. ನಾಟಕ, ಹಾಡು, ಭಾಷಣ, ಚಿತ್ರಕಲೆ, ಧರಣಿ.. ಹೀಗೆ ಭಿನ್ನ ರೀತಿಯಲ್ಲಿ ಇದು ಸಾಗುತ್ತಲೂ ಇದೆ. ದೆಹಲಿಯ ಶಾಹೀನ್‍ಬಾಗ್, ಕೊಲ್ಕತ್ತಾದ ಪಾರ್ಕ್ ಸರ್ಕಸ್,  ಮುಂಬಯಿಯ ಗೇಟ್ ವೇ ಆಫ್ ಇಂಡಿಯಾ, ಬೆಂಗಳೂರಿನ ಟೌನ್‍ಹಾನ್ ಎಂದು ಮುಂತಾಗಿ ಎಲ್ಲೆಡೆಯೂ ಪ್ರತಿರೋಧದ ಕಾವು ಹೆಚ್ಚುತ್ತಿದೆ. ಸರ್ ಅಲ್ಲಾಮಾ ಇಕ್ಬಾಲ್‍ರ ಸಾರೇ ಜಹಾಂಸೆ ಅಚ್ಚಾ,  ಫೈಝ್ ಅಹ್ಮದ್ ಫೈಝ್ರ ಹಮ್ ದೇಖೇಂಗೆ, ರವೀಂದ್ರನಾಥ್ ಠಾಗೂರರ ಜನಗಣಮನ ಹಾಡುಗಳು ಮತ್ತು ಆಝಾದಿ ಕೂಗು, ಇಂಕ್ವಿಲಾಬ್ ಜಿಂದಾಬಾದ್, ಸ್ವರಾಜ್ ಘೋಷಣೆಗಳು ಪ್ರತಿ ಗಲ್ಲಿಗಲ್ಲಿಯಲ್ಲೂ ಕೇಳಿ ಬರತೊಡಗಿವೆ. ರಾಷ್ಟ್ರಗೀತೆ ಹಾಡುತ್ತಾ, ರಾಷ್ಟ್ರಧ್ವಜವನ್ನು ಹಾರಿಸುತ್ತಾ ಮತ್ತು ಸಂವಿಧಾನದ ಪ್ರಸ್ತಾವನೆಗಳನ್ನು ಓದುತ್ತಾ ಭಾರತೀಯರು ಬೀದಿಯಲ್ಲಿ ಸೇರುತ್ತಿದ್ದಾರೆ. ಗಾಂಧಿ, ಅಂಬೇಡ್ಕರ್  ಭಾವಚಿತ್ರಗಳನ್ನು ಎದೆಗಪ್ಪಿ ಹಿಡಿದಿದ್ದಾರೆ. ಜನವರಿ 26ರ ಗಣರಾಜ್ಯೋತ್ಸವ ಮತ್ತು ಜನವರಿ 30ರ ಗಾಂಧಿ ಹುತಾತ್ಮ ದಿನವು ಈ ದೇಶದಲ್ಲಿ ಮೊದಲ ಬಾರಿ ಪ್ರಭುತ್ವವನ್ನು ವಿರೋಧಿಸುವ ದಿನವಾಗಿ  ಆಚರಣೆಗೆ ಒಳಗಾಗಿದೆ. ವಿಶೇಷ ಏನೆಂದರೆ, 

ಮುಸ್ಲಿಮ್ ಮಹಿಳೆಯರು ಬಹುಸಂಖ್ಯೆಯಲ್ಲಿ ಚಳವಳಿಯಲ್ಲಿ ತೊಡಗಿಸಿಕೊಂಡಿರುವುದು. ತ್ರಿವಳಿ ತಲಾಕ್ ಕಾನೂನನ್ನು ಜಾರಿಗೊಳಿಸಲಾದ ಸಂದರ್ಭದಲ್ಲೂ  ಇಷ್ಟು ವ್ಯಾಪಕ ಪ್ರಮಾಣದಲ್ಲಿ ಮುಸ್ಲಿಮ್ ಮಹಿಳೆಯರು ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿರಲಿಲ್ಲ. ಮಾತ್ರವಲ್ಲ, ಆ ಕಾನೂನಿನ ಪರ ಮತ್ತು ವಿರುದ್ಧ ಧ್ವನಿಗಳು ಮುಸ್ಲಿಮ್ ಮಹಿಳೆಯರ ಒಳಗಿನಿಂದಲೇ ಕೇಳಿ  ಬಂದಿತ್ತು. ಆದರೆ, ಈ ಬಾರಿ ಕೇಂದ್ರ ಸರಕಾರದ ಪರ ಧ್ವನಿಗಳೇ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಂತೂ ಡಿಸೆಂಬರ್ 10ರ ಬಳಿಕ ನಿರಂತರ ಸಿಎಎ ಸುತ್ತ ಚರ್ಚೆಯಾಗುತ್ತಲೇ ಇದೆ. ಪ್ರಭುತ್ವದ ವಿರುದ್ಧ  ಒಂದೇ ವಿಷಯದ ಮೇಲೆ ಇಷ್ಟು ದೀರ್ಘ ಅವಧಿ ವರೆಗೆ ಚರ್ಚೆಯಾಗುತ್ತಿರುವುದು ಬಹುಶಃ ಇದುವೇ ಮೊದಲು. ಅಲ್ಲದೇ, ಈ ಚಳವಳಿಯ ನೇತೃತ್ವವನ್ನು ಯಾವ ರಾಜಕೀಯ ಪಕ್ಷಕ್ಕೂ ಜನರು ಬಿಟ್ಟು  ಕೊಟ್ಟಿಲ್ಲ. ಪ್ರತಿಭಟನಾಕಾರರು ಕಾಂಗ್ರೆಸ್ಸನ್ನೂ ಲೆಕ್ಕಿಸುತ್ತಿಲ್ಲ. ಬಿಜೆಪಿಯನ್ನೂ ಬಿಡುತ್ತಿಲ್ಲ. ಸಣ್ಣ ಸಣ್ಣ ನಗರಗಳಲ್ಲಿ ಏರ್ಪಡುವ ಪ್ರತಿಭಟನಾ ಸಭೆಯಲ್ಲೂ ಸಾವಿರಾರು ಮಂದಿ ಭಾಗವಹಿಸುತ್ತಿದ್ದಾರೆ. ರಾಷ್ಟ್ರಧ್ವಜವ ನ್ನು ಹಾರಿಸುತ್ತಾರೆ. ರಾಷ್ಟ್ರಗೀತೆಯನ್ನು ಹಾಡುತ್ತಾರೆ. ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯ ಜಾಗದಲ್ಲಿ ಇನ್ನಾವ ಧ್ವಜವನ್ನೂ ಗೀತೆಯನ್ನೂ ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ ಎಂಬ ಸಂದೇಶವನ್ನು ಸಾರುತ್ತಿದ್ದಾರೆ.  ನಿಜವಾಗಿ,
ಪ್ರಧಾನಿ ಮೋದಿಯು ತನ್ನ ಐದೂವರೆ ವರ್ಷಗಳ ಆಡಳಿತಾವಧಿಯಲ್ಲಿ ಎದುರಿಸಿದ ಅತಿದೊಡ್ಡ ಪ್ರತಿರೋಧ ಇದು. ಆದ್ದರಿಂದ,

1975 ಮರಳಿ ಬಂದರೂ ಆಶ್ಚರ್ಯವಿಲ್ಲ.

No comments:

Post a Comment