ಜಗತ್ತು ಎಷ್ಟು ಅದ್ಭುತ ಅನಿಸ್ತು.
ಮೊನ್ನೆ ಯೂಟ್ಯೂಬ್ ವೀಡಿಯೋಗಳ ಮೇಲೆ ಕಣ್ಣಾಡಿಸ್ತಾ ಇದ್ದಾಗ ಆ ಆಮೆ ಕಾಣಿಸಿಕೊಂಡ್ತು. ಆಮೆಯ ಬಗ್ಗೆ ವಿಪರೀತ ಕುತೂಹಲವೇನೂ ನನ್ನಲ್ಲಿ ಇರಲಿಲ್ಲ. ಆಮೆಗಳು ಸುಮಾರು 80 ವರ್ಷಗಳ ವರೆಗೆ ಬದುಕ್ತವೆ ಎಂಬ ಮಾಹಿತಿಯನ್ನು ಹೊರತುಪಡಿಸಿ ಹೆಚ್ಚಿನ ವಿವರಗಳೂ ನನ್ನಲ್ಲಿರಲಿಲ್ಲ. ಕುತೂಹಲಕ್ಕೆಂದು ಆ ವೀಡಿಯೋವನ್ನು ವೀಕ್ಷಿಸುತ್ತಾ ಹೋದಂತೆ, ಕುತೂಹಲ ಇಮ್ಮಡಿ ಗೊಳ್ಳುತ್ತಾ ಹೋಯಿತು. ಅತ್ಯಂತ ನಿಧಾನಗತಿಯಿಂದ ಚಲಿಸುವ ಮತ್ತು ಒಂದು ರೀತಿಯಲ್ಲಿ ಅತ್ಯಂತ ಉದಾಸೀನ ಪ್ರಾಣಿಯಂತೆ ಕಾಣುವ ಆಮೆಯು ತನ್ನ ಒಡಲಲ್ಲಿ ಇಷ್ಟೊಂದು ಒಳರಹಸ್ಯಗಳನ್ನು ಹುದುಗಿಸಿಟ್ಟಿದೆಯೇ ಎಂದು ಆಶ್ಚರ್ಯವಾಯಿತು. ವೀಡಿಯೋ ವೀಕ್ಷಿಸುವುದನ್ನು ನಿಲ್ಲಿಸಿ ಆ ಆಮೆಯ ಬಗ್ಗೆ ಮಾಹಿತಿಗಳನ್ನು ಹುಡುಕತೊಡಗಿದೆ. ಆಶ್ಚರ್ಯ, ಅಚ್ಚರಿ, ಕುತೂಹಲಗಳ ಜೊತೆಜೊತೆಗೇ ಆಳ ಚಿಂತನೆಗೆ ಹಚ್ಚುವ ವಿಶಿಷ್ಟ ಜೀವಿಯಾಗಿ ಆಮೆ ನನ್ನೊಳಗನ್ನು ಸೇರಿಕೊಂಡಿತು. ಚಿಂತನೆಗೆ ಹಚ್ಚಿತು. ನಾನು ವೀಕ್ಷಿಸಿದ ಆಮೆ ಒಮಾನ್ ದೇಶದ್ದು. ಅಲ್ಲಿನ ಅಲ್ ಜಿನ್ಝ್ ಎಂಬ ಪ್ರದೇಶದ ಬೀಚ್‍ನಲ್ಲಿ ಕಾಣಿಸಿಕೊಳ್ಳುವ ಆಮೆ.
ಈ ಆಮೆಗಳ ಬದುಕೇ ಬಲು ವಿಚಿತ್ರ.
ತಡರಾತ್ರಿಯಾದ ಕೂಡಲೇ ಅಲ್ ಜಿನ್ಝ್ ಪ್ರದೇಶದ ಸಮುದ್ರ ದಿಂದ ಗರ್ಭಿಣಿ ಆಮೆಗಳು ತೀರ ಪ್ರದೇಶಕ್ಕೆ ತೆವಳಿಕೊಂಡಂತೆ ಬರುತ್ತವೆ. ಅದರ ಹೊಟ್ಟೆಯಲ್ಲಿ ಸುಮಾರು 100ರಷ್ಟು ಮೊಟ್ಟೆ ಗಳಿರುತ್ತವೆ. ಆದ್ದರಿಂದಲೇ, ಗರ್ಭ ಧರಿಸಿರುವ ಮತ್ತು ಧರಿಸಿಲ್ಲದ ಆಮೆಗಳ ಗಾತ್ರದಲ್ಲಿ ಸಾಕಷ್ಟು ವ್ಯತ್ಯಾಸಗಳು ಕಾಣಿಸುತ್ತವೆ. ಹೀಗೆ ತೆವಳಿಕೊಂಡಂತೆ ಬರುವ ಆಮೆ ದಾರಿಯುದ್ದಕ್ಕೂ ಕಣ್ಣನ್ನು ಅತ್ತಿತ್ತ ತಿರುಗಿಸುತ್ತಲೇ ಇರುತ್ತದೆ. ಕೊನೆಗೆ ಅದು ಒಂದು ಸ್ಥಳದಲ್ಲಿ ನಿಲ್ಲುತ್ತದೆ. ಅತ್ತಿತ್ತ ನೋಡಿ ಮರಳನ್ನು ಅಗೆಯಲು ಪ್ರಾರಂಭಿಸುತ್ತದೆ. ಅನುಮಾನ ಬಂದಾಗಲೆಲ್ಲ ಅದು ಅಗೆಯುವುನ್ನು ನಿಲ್ಲಿಸಿ ಕಣ್ಣನ್ನು ಅತ್ತಿತ್ತ ಹೊರಳಿಸಿ ಪರಿಶೀಲನೆ ನಡೆಸುವುದಿದೆ. ಹೀಗೆ ಪರಿಶೀಲಿಸುತ್ತಾ ಅಗೆಯುತ್ತಾ ಆಳ ಗುಂಡಿಯೊಂದು ನಿರ್ಮಾಣವಾದ ಬಳಿಕ ಮೊಟ್ಟೆಗಳನ್ನಿಡುತ್ತವೆ ಮತ್ತು ಅಗೆಯುವು ದಕ್ಕಿಂತ ಮೊದಲು ಆ ಸ್ಥಳ ಹೇಗಿತ್ತೋ ಅದೇ ರೀತಿಯಲ್ಲಿ ಗುಂಡಿಯನ್ನು ಮರಳಿನಿಂದ ಮುಚ್ಚಿಬಿಡುತ್ತದೆ. ಆದರೆ, ಅಲ್ಲಿಗೇ ಅದರ ಕರ್ತವ್ಯ ಮುಗಿಯುವುದಿಲ್ಲ. ಇಲ್ಲೇ ಇರುವುದು ಕುತೂಹಲ. ಅದು ಆ ಗುಂಡಿಯಿಂದ ತುಸು ದೂರದಲ್ಲಿ ಇಂಥದ್ದೇ ಇನ್ನೊಂದು ಗುಂಡಿಯನ್ನು ತೋಡುತ್ತದೆ. ಅಷ್ಟಕ್ಕೂ, ಪುಟ್ಟ ಪುಟ್ಟ ಕಾಲುಗಳಿರುವ ಮತ್ತು ಭಾರ ದೇಹದ ಆಮೆಗೆ ಗುಂಡಿ ತೋಡುವುದು ಸುಲಭ ಅಲ್ಲ. ಮರಳನ್ನು ಸರಿಸಿ ಗುಂಡಿ ತೋಡುತ್ತಾ ಹೋದಂತೆಲ್ಲಾ ಸರಿಸಿದ ಮರಳು ಮತ್ತೆ ಮತ್ತೆ ಗುಂಡಿಯೊಳಗೆ ಜಾರಿ ಬೀಳುತ್ತಲೂ ಇರುತ್ತದೆ. ಅವನ್ನು ಸಹಿಸಿಕೊಳ್ಳುತ್ತಾ, ಹೊರ ಹಾಕುತ್ತಾ ಗುಂಡಿ ತೋಡಬೇಕು. ಗುಂಡಿ ಆಳವಾಗುತ್ತಾ ಹೋದಷ್ಟೂ ಈ ಸಮಸ್ಯೆಯ ಪ್ರಮಾಣ ಹಿಗ್ಗುತ್ತಾ ಹೋಗುತ್ತದೆ. ಹೀಗೆ ಸೆಣಸಾಡಿ ಸೆಣಸಾಡಿ ಇನ್ನೊಂದು ಗುಂಡಿಯನ್ನು ಅದು ಸಿದ್ಧಪಡಿಸುತ್ತದೆ. ಆದರೆ ಈ ಗುಂಡಿಯನ್ನು ಅದು ಮೊದಲಿನ ಗುಂಡಿಯಂತೆ ಮರಳಿ ನಿಂದ ಮುಚ್ಚುವುದಿಲ್ಲ. ಬಾಹ್ಯದೃಷ್ಟಿಗೆ ಗೋಚರವಾಗುವಂತೆ ಆ ಗುಂಡಿಯನ್ನು ಹಾಗೆಯೇ ಇರಗೊಟ್ಟು ಸೂರ್ಯೋದಯಕ್ಕಿಂತ ಮೊದಲೇ ಅದು ಸಮುದ್ರ ಸೇರಿಕೊಳ್ಳುತ್ತದೆ.
ಇದೊಂದು ತಂತ್ರ
ಮೊಟ್ಟೆಯಿಟ್ಟ ಗುಂಡಿಯನ್ನು ಮುಚ್ಚಿ ಮೊಟ್ಟೆಯಿಡದ ಗುಂಡಿ ಯನ್ನು ಮುಚ್ಚದೇ ಬಿಟ್ಟು ಬಿಡುವುದರ ಹಿಂದೆ ತನ್ನ ಸಂತಾನ ವನ್ನು ಕಾಪಾಡುವ ಅಪಾರ ಕಾಳಜಿಯ ಕತೆಯಿದೆ. ಆಮೆಯ ಮೊಟ್ಟೆಯನ್ನು ತಿನ್ನುವುದಕ್ಕೆಂದೇ ನರಿ, ಸಮುದ್ರ ಹಕ್ಕಿ ಮತ್ತು ಏಡಿಗಳು ಕಾಯುತ್ತಿರುತ್ತವೆ. ಮರಳನ್ನು ಅಗೆದು ಗುಂಡಿ ತೋಡಿ ಆಮೆ ಮೊಟ್ಟೆ ಇಡುತ್ತದೆ ಎಂಬುದೂ ಅವಕ್ಕೆ ಗೊತ್ತಿದೆ. ಅದನ್ನು ಕಬಳಿಸುವುದಕ್ಕೆ ಅವು ಕಾಯುತ್ತಲೂ ಇರುತ್ತವೆ. ಆದ್ದರಿಂದ ಅವನ್ನು ವಂಚಿಸುವುದಕ್ಕಾಗಿ ಆಮೆ ಕಂಡುಕೊಂಡ ಉಪಾಯವೇ ಈ ನಕಲಿ ಗುಂಡಿ. ಅವು ಈ ಗುಂಡಿಯಲ್ಲಿ ಮೊಟ್ಟೆಯನ್ನು ಹುಡುಕಿ ಹೊರಟು ಹೋಗಬೇಕೆಂಬುದು ಆಮೆಯ ಬಯಕೆ. ವಿಶೇಷ ಏನೆಂದರೆ, ಇಡೀ ಪ್ರಕ್ರಿಯೆಯಲ್ಲಿ ಗಂಡು ಆಮೆಯ ಯಾವ ಪಾತ್ರವೂ ಇರುವುದಿಲ್ಲ. ಗರ್ಭಿಣಿ ಆಮೆ ತಡರಾತ್ರಿ ಸಮುದ್ರದಿಂದ ಹೊರಬಂದು ತೀರ ಪ್ರದೇಶಕ್ಕೆ ಸಾಗುವಾಗ ಅದು ಕಾವಲು ನಿಲ್ಲುವುದೂ ಇಲ್ಲ. ಮೊಟ್ಟೆ ಇಡುವುದಕ್ಕೆಂದು ಗುಂಡಿ ಅಗೆಯುವಾಗ ನೆರವು ನೀಡುವುದೂ ಇಲ್ಲ. ಒಂಟಿಯಾಗಿಯೇ ಸಮುದ್ರದಿಂದ ಹೊರಬಂದು ತನ್ನ ಸಂತಾನವನ್ನು ಬೆಳೆಸುವ ಪ್ರಕ್ರಿಯೆಯಲ್ಲಿ ಒಂಟಿಯಾಗಿಯೇ ತೊಡಗಿಸಿಕೊಂಡು ಕೊನೆಗೆ ಒಂಟಿಯಾಗಿಯೇ ಮರಳಿ ಸಮುದ್ರ ಸೇರುವ ಈ ಹೆಣ್ಣು ಆಮೆಗಳು ಪ್ರಕೃತಿಯ ಒಂದು ವಿಶಿಷ್ಟ ಜೀವಿ. ಹೆಣ್ಣಿನ ಸಾಮರ್ಥ್ಯ, ಬುದ್ಧಿವಂತಿಕೆ ಮತ್ತು ಸಂತಾನದ ಕುರಿತಾದ ಕಾಳಜಿಗೆ ಅನ್ವರ್ಥ ಈ ಆಮೆ. ಆಮೆ ಎಂಬ ಒಂದಿಡೀ ಸಂತತಿಯ ಸಂತಾನವನ್ನು ಉಳಿಸಿ ಬೆಳೆಸುವ, ಕಾಪಾಡುವ ದೊಡ್ಡದೊಂದು ಹೊಣೆಗಾರಿಕೆಯನ್ನು ಅದು ಒಂಟಿಯಾಗಿಯೇ ನಿರ್ವಹಿಸುತ್ತದೆ. ವೈರಿಗಳಿಂದ ತಪ್ಪಿಸಿ ಕೊಳ್ಳುವ ಚಾತುರ್ಯವೂ ಅದಕ್ಕಿದೆ. ಮೊಟ್ಟೆಗಳನ್ನು ಹೇಗೆ ಶತ್ರು ಗಳಿಂದ ರಕ್ಷಿಸಿಕೊಳ್ಳಬೇಕು ಎಂಬ ಸೂಕ್ಷ್ಮತೆಯೂ ಅದಕ್ಕೆ ಗೊತ್ತಿದೆ. ನಿಧಾನವಾಗಿ ಚಲಿಸುವ ತಾನು ಸಮುದ್ರದಿಂದ ಯಾವಾಗ ತೀರಕ್ಕೆ ಬರಬೇಕು ಮತ್ತು ಯಾವಾಗ ಸಮುದ್ರ ಸೇರಿಕೊಳ್ಳಬೇಕು ಎಂಬ ಸಮಯ ಪ್ರಜ್ಞೆಯೂ ಅದಕ್ಕಿದೆ. ಆದರೂ,
ಅದರಾಚೆಗಿನ ಮಹತ್ವದ ಜವಾಬ್ದಾರಿಯೊಂದನ್ನು ಅದು ನಿಭಾಯಿಸುವುದೇ ಇಲ್ಲ.
ಮರಳನ್ನು ಮೊಟ್ಟೆಯಲ್ಲಿ ಅಡಗಿಸಿಟ್ಟು ಹೊರಟು ಹೋಗುವ ಆಮೆ ಮರಳಿ ಮೊಟ್ಟೆಯನ್ನು ಪರಿಶೀಲಿಸುವುದಕ್ಕೋ ಅಥವಾ ಮರಿಗಳನ್ನು ಕರೆದುಕೊಂಡು ಹೋಗುವುದಕ್ಕೋ ಎಂದೂ ಬರುವುದೇ ಇಲ್ಲ. ಅದರ ಕೆಲಸ ಗುಂಡಿ ತೋಡಿ ಮೊಟ್ಟೆ ಇಟ್ಟು ಮರಳಿ ಸಮುದ್ರ ಸೇರಿಕೊಳ್ಳುವಲ್ಲಿಗೆ ಮುಗಿದು ಹೋಗುತ್ತದೆ. ಆ ಬಳಿಕ ಬದುಕುಳಿಯುವ ಕೆಲಸವನ್ನು ಮೊಟ್ಟೆ ಮತ್ತು ಅದರಿಂದ ಹೊರಬರುವ ಮರಿಗಳು ಸ್ವಯಂ ಹೊತ್ತುಕೊಳ್ಳಬೇಕು. ಸುಮಾರು 55 ದಿನಗಳ ವರೆಗೆ ಎಲ್ಲವೂ ಸಹಜವಾಗಿಯೇ ಇರುತ್ತದೆ. ಆದರೆ, 55 ದಿನಗಳ ಬಳಿಕ ಮೊಟ್ಟೆ ಇರುವ ಗುಂಡಿಯಲ್ಲಿ ಚಲನೆ ಕಾಣಿಸಿಕೊಳ್ಳುತ್ತದೆ. ಕ್ಪಣಮಾತ್ರದಲ್ಲಿ ಒಂದೊಂದೇ ಮರಿ ಆಮೆಗಳು ಭೂಮಿಯೊಳಗಿನಿಂದ ಹೊರಬರಲು ಪ್ರಾರಂಭಿಸುತ್ತವೆ. ಹಾಗಂತ, ಈ ಮರಿಗಳಿಗೆ ಸಮುದ್ರದ ದಾರಿಯನ್ನು ತೋರಿಸುವುದಕ್ಕೆ ಅಮ್ಮ ಇಲ್ಲ. ಒಂದುವೇಳೆ ಸಮುದ್ರ ಸೇರಿಕೊಳ್ಳದಿದ್ದರೆ ಅದು ಜೀವಂತ ಉಳಿಯುವುದಕ್ಕೆ ಸಾಧ್ಯವೂ ಇಲ್ಲ. ಅದನ್ನು ತಿನ್ನುವುದ ಕ್ಕೆಂದೇ ಶತ್ರುಗಳು ಹುಡುಕುತ್ತಾ ತಿರುಗುತ್ತಿರುವುದರಿಂದ ಅಪಾಯ ಬೆನ್ನ ಹಿಂದೆಯೇ ಇರುತ್ತದೆ. ನಿಜವಾಗಿ, ಇದು ಅತ್ಯಂತ ಅಪಾಯಕಾರಿ ಸ್ಥಿತಿ. ಭೂಮಿಯೊಳಗಿನಿಂದ ಒಂಟಿಯಾಗಿಯೇ ಬಾಹ್ಯ ಜಗತ್ತನ್ನು ಪ್ರವೇಶಿಸುವ ಪುಟ್ಟ ಪುಟ್ಟ ಆಮೆಗಳು ಆ ಕ್ಷಣದಲ್ಲೇ ಶತ್ರುಗಳಿಂದ ರಕ್ಷಿಸಿಕೊಳ್ಳುವ ಕಲೆಯನ್ನೂ ಕಲಿತುಕೊಳ್ಳಬೇಕು. ತಮ್ಮ ಸುರಕ್ಷಿತ ಜಾಗವನ್ನು ಆ ಶೈಶವಾವಸ್ಥೆಯಲ್ಲೇ ಸ್ವತಃ ಕಷ್ಟಪಟ್ಟು ಕಂಡುಕೊಳ್ಳಬೇಕು. ವಿಸ್ಮಯ ಏನೆಂದರೆ, ಈ ಮರಿಗಳು ಭೂಮಿಯೊಳಗಿನಿಂದ ಹೊರಬರುವುದು ಸೂರ್ಯ ಮುಳುಗುವ ಸಮಯದಲ್ಲಿ. ಪ್ರಕೃತಿಯ ವೈಶಿಷ್ಟ್ಯ ನೋಡಿ. ಸೂರ್ಯ ಮುಳುಗಿ ಚಂದ್ರನ ಪ್ರವೇಶವಾಗುತ್ತದೆ. ಚಂದ್ರನ ಬೆಳಕು ಸಮುದ್ರದ ಮೇಲೆ ಬಿದ್ದು ಆ ಬೆಳಕು ಮರಳಿನ ಮೇಲೆ ಪ್ರತಿಫಲನಗೊಳ್ಳತೊಡಗಿದಾಗ ಈ ಮರಿಗಳು ಚುರುಕಾಗುತ್ತವೆ. ಸಮುದ್ರ ಯಾವ ದಿಕ್ಕಿನಲ್ಲಿದೆ ಎಂಬುದನ್ನು ಆ ಮೂಲಕ ಅದು ಕಂಡುಕೊಳ್ಳುತ್ತವೆ. ಮಾತ್ರವಲ್ಲ, ಕ್ಷಣಮಾತ್ರದಲ್ಲಿ ಅವು ಸಾಲುಸಾಲಾಗಿ ಸಮುದ್ರದೆಡೆಗೆ ಧಾವಿಸುತ್ತವೆ. ಆದರೂ ಅವು ಸಂಪೂರ್ಣ ಸುರಕ್ಷಿತವೆಂದೇನೂ ಅಲ್ಲ, ಈ ಎಚ್ಚರಿಕೆಯ ನಡೆಯ ನಡುವೆಯೂ ಈ ಮರಿಗಳು ಶತ್ರುಗಳ ದಾಳಿಗೆ ತುತ್ತಾಗುವುದಿದೆ. ಸಮುದ್ರ ಸೇರುವುದರ ಮಧ್ಯೆ ಶತ್ರುಗಳ ಆಹಾರವಾಗುವುದೂ ಇದೆ. ಕುತೂ ಹಲದ ಸಂಗತಿ ಏನೆಂದರೆ, ಹೀಗೆ ಸಮುದ್ರ ಸೇರುವ ಮರಿಗಳು ಆ ಬಳಿಕ ದೀರ್ಘ ವಲಸೆಯೊಂದಕ್ಕೆ ಸಿದ್ಧವಾಗುತ್ತವೆ. ಈ ಆಮೆಗಳ 5 ಮುಖ್ಯ ಪ್ರಬೇಧಗಳಲ್ಲಿ ಕೆಲವು ಈಜಿಪ್ಟ್ ಗೆ ವಲಸೆ ಹೋದರೆ ಇನ್ನು ಕೆಲವು ಮಾಲ್ದೀವ್ಸ್ ಗೆ ವಲಸೆ ಹೋಗುತ್ತವೆ. ಈ ಆಮೆಗಳು ಪ್ರೌಢಾವಸ್ಥೆಗೆ ಬರುವುದೇ 18ರಿಂದ 35 ವರ್ಷಗಳ ನಡುವೆ. ಆ ಬಳಿಕ ಅವು ತಾವು ಹುಟ್ಟಿದ ಅದೇ ಸ್ಥಳಕ್ಕೆ ಮರಳಿ ಯಾತ್ರೆಯನ್ನು ಕೈಗೊಳ್ಳುತ್ತವೆ. ಅಲ್ಲಿ ಗಂಡು ಆಮೆಗಳೊಂದಿಗೆ ಸೇರಿಕೊಂಡು ಗರ್ಭ ಧರಿಸುತ್ತವೆ. ಜೊತೆಗೇ ಮೊಟ್ಟೆಯಿಡುವ ಪ್ರಕ್ರಿಯೆಗೆ ತನ್ನನ್ನು ಸಜ್ಜುಗೊಳಿಸತೊಡಗುತ್ತದೆ. ಪ್ರತಿ ಋತುವಿನಲ್ಲಿ ಏಳೆಂಟು ಬಾರಿ ಅದು ಸಮುದ್ರ ತೀರಕ್ಕೆ ಬಂದು ಮರಳಲ್ಲಿ ಗುಂಡಿ ತೋಡುವ ಅಭ್ಯಾಸ ಮಾಡಿ ಮರಳಿ ಸಮುದ್ರಕ್ಕೆ ಹೋಗುತ್ತಿರುತ್ತದೆ. ಹೀಗೆ ಮೊಟ್ಟೆ ಇಡುವುದಕ್ಕೆ ಪೂರ್ವದಲ್ಲೇ ಅದು ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಂಡಿರುತ್ತದೆ. ಸಾಮಾನ್ಯ ವಾಗಿ ಪ್ರತಿವರ್ಷ ಓಮಾನ್ ಸಮುದ್ರ ತೀರಕ್ಕೆ ಸುಮಾರು 20 ಸಾವಿರ ಭಿನ್ನ ಭಿನ್ನ ಜಾತಿಯ ಆಮೆಗಳು ಬರುತ್ತವೆ ಎಂದು ಹೇಳಲಾಗುತ್ತದೆ. ಇವು ಏ ನಿಲ್ಲವೆಂದರೂ ಸುಮಾರು 50ರಿಂದ 60 ಸಾವಿರ ಮೊಟ್ಟೆಗಳನ್ನಿಡುತ್ತವೆ... ಅಂದಹಾಗೆ,
ಆಮೆಯ ಈ ಅದ್ಭುತ ಜೀವನಗಾಥೆಯನ್ನು ಓದುತ್ತಾ ಹೋದಂತೆ ಜಗತ್ತು ಎಷ್ಟು ವೈಶಿಷ್ಟ್ಯಪೂರ್ಣ ಎಂದು ಅನಿಸಿತು. ಮಾತ್ರವಲ್ಲ, ಈ ಜಗತ್ತಿನಲ್ಲಿ ಮನುಷ್ಯ ಎಷ್ಟು ದುರ್ಬಲ ಎಂದೂ ತೋಚಿತು. ಮಾ ನವನ ಸಂತಾನ ಪ್ರಕ್ರಿಯೆಯೇ ಒಂದು ಸೋಜಿಗ. ಹೆಣ್ಣು ಗರ್ಭ ಧರಿಸುವಲ್ಲಿಂದಲೇ ಮಗುವಿನ ಸ್ವಾಗತಕ್ಕೆ ಸಿದ್ಧತೆ ನಡೆಯುತ್ತದೆ. ಗರ್ಭಿಣಿಯ ಆರೋಗ್ಯದ ಮೇಲೆ ದಿನವಹಿ ನಿಗಾ ಇಡಲಾಗುತ್ತದೆ. ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ, ವಿವಿಧ ಬಗೆಯ ಔಷಧಗಳು, ವಿಶೇಷ ಆಹಾರಗಳು, ಕೌನ್ಸಿಲಿಂಗ್‍ಗಳು ಇತ್ಯಾದಿ ಇತ್ಯಾದಿ ಹೆರಿಗೆಯವರೆಗೂ ನಡೆಯುತ್ತದೆ. ಆ ಬಳಿಕ ಬಾಣಂತಿ ಮತ್ತು ಮಗು ಇಬ್ಬರಿಗೂ ಆರೈಕೆಯ ಅಗತ್ಯ ಬೀಳು ತ್ತದೆ. ಬಾಣಂತಿ ಕೆಲವು ಸಮಯದಲ್ಲೇ ಸಹಜ ಸ್ಥಿತಿಗೆ ಮರಳಿದರೂ ಮಗು ದೀರ್ಘಕಾಲದ ಆರೈಕೆಯನ್ನು ಬಯಸುತ್ತದೆ. ಹುಟ್ಟಿದ ತಕ್ಷಣ ಅಳುವುದನ್ನು ಬಿಟ್ಟರೆ ಮಗುವಿಗೆ ಬೇರೇನೂ ಮಾಡುವ ಸಾಮರ್ಥ್ಯ ಇರುವುದಿಲ್ಲ. ಸ್ವರಕ್ಷಣೆ ಗೊತ್ತಿಲ್ಲ. ಆಹಾರವನ್ನು ಸ್ವತಃ ಪಡೆಯುವುದು ಗೊತ್ತಿಲ್ಲ. ತನ್ನ ಅಗತ್ಯಗಳನ್ನು ತಾನೇ ಮಾಡಿಕೊಳ್ಳುವ ಸಾಮರ್ಥ್ಯ ಇಲ್ಲ. ಇದೊಂದು ಉದ್ದದ ಪಟ್ಟಿ. ಪ್ರೌಢಾವಸ್ಥೆಗೆ ಬರುವವರೆಗೆ ಮಗು ಇತರರನ್ನು ಅವಲಂಬಿಸಿಯೇ ಬದುಕುತ್ತಿರುತ್ತದೆ. ಆದರೆ, ಆಮೆ ಇದಕ್ಕೆ ತದ್ವಿರುದ್ಧ. ಬಹುಶಃ, ಈ ಜಗತ್ತಿನ ಅಸಂಖ್ಯ ವೈಶಿಷ್ಟ್ಯಗಳಲ್ಲಿ ಆಮೆ ಒಂದು ತುದಿ ಮಾತ್ರ. ಒಂದುವೇಳೆ, ಅದರ ಇನ್ನೊಂದು ತುದಿಯವರೆಗೆ ಮನುಷ್ಯ ಸಂಚರಿಸಿ ಬಿಟ್ಟರೆ ಈ ಪ್ರಕೃತಿಯ ಮುಂದೆ ತಾನೆಷ್ಟು ಅಲ್ಪ ಅನ್ನುವುದು ಆತನಿಗೆ ಮನದಟ್ಟಾಗಬಹುದು. ಈ ಜಗತ್ತಿನಲ್ಲಿ ಕೋಟ್ಯಂತರ ಜೀವಜಾಲಗಳಿವೆ. ಪ್ರತಿಯೊಂದರ ಹುಟ್ಟೂ ಭಿನ್ನ ಭಿನ್ನ. ಬದುಕೂ ಹಾಗೆಯೇ. ಹಾಗಿದ್ದರೆ ಈ ಪ್ರಕೃತಿಯನ್ನು ಸೃಷ್ಟಿಸಿದವ ಎಷ್ಟು ದೊಡ್ಡ ಕಲಾಕಾರನಾಗಿರಬಹುದು? ಅಷ್ಟಕ್ಕೂ,
ಮನುಷ್ಯ ಒಳ್ಳೆಯವನಾಗುವುದಕ್ಕೆ, ಪ್ರಾಕೃತಿಕ ಸತ್ಯಗಳಿಗೆ ಶರಣಾಗಿ ಬದುಕುವುದಕ್ಕೆ, ಬದುಕನ್ನು ಮೌಲ್ಯಯುತಗೊಳಿಸುವುದಕ್ಕೆ ಮತ್ತು ಅಹಂ, ಸ್ವಾರ್ಥ, ಅಸೂಯೆ, ಜಂಭ ಇತ್ಯಾದಿ ಇತ್ಯಾದಿಗಳಿಂದ ಕಳಚಿಕೊಂಡು ಜೀವಿಸುವುದಕ್ಕೆ ಪುಸ್ತಕಗಳ ರಾಶಿಯ ಮೇಲೆ ಕುಳಿತು ಗಾಢ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕೆಂದೇನೂ ಇಲ್ಲ. ಪ್ರಕೃತಿಯೆಡೆಗೆ ಬೆರಗಿನಿಂದ ನೋಡಿದರೂ ಸಾಕು, ಒಳಗಣ್ಣು ತೆರೆಯುತ್ತಲೇ ಹೋಗುತ್ತದೆ.
‘ನೀವು ಭೂಮಿಯಲ್ಲಿ ಸಂಚರಿಸಿ ಮತ್ತು ಅಲ್ಲಾಹನು ಯಾವ ರೀತಿ ಸೃಷ್ಟಿ ಕಾರ್ಯವನ್ನು ಆರಂಭಿಸುತ್ತಾನೆ ಎಂಬುದನ್ನು ನೋಡಿ’ (ಅಧ್ಯಾಯ 29: 20) ಎಂಬ ಪವಿತ್ರ ಕುರ್ ಆನಿನ ವಚನದ ತಾತ್ಪರ್ಯವೂ ಇದುವೇ. ಅಂದಹಾಗೆ,
ವಲಸೆ ಹೋದ ಆಮೆಗೆ ದಶಕಗಳ ಬಳಿಕ ಮರಳಿ ಹುಟ್ಟಿದೂರಿಗೆ ದಾರಿ ತೋರುವವನಾರೋ?
No comments:
Post a Comment