Wednesday, October 3, 2018

ವಿವಾಹೇತರ ಸಂಬಂಧದ ಸರಿ-ತಪ್ಪುಗಳ ಆಚೆ..



     ಬಯಾಲಜಿ, ಅಂಟೋಲಜಿ ಮತ್ತು ಝುವಾಲಜಿಯಲ್ಲಿ ಪ್ರೊಫೆಸರ್ ಆಗಿರುವ ಹಾಗೂ ಇಂಡಿಯಾನ ಯುನಿವರ್ಸಿಟಿಯಲ್ಲಿ ಲಿಂಗ ಸಂಶೋಧನಾ ವಿಭಾಗವನ್ನು ಸ್ಥಾಪಿಸಿರುವ ಲೈಂಗಿಕ ತಜ್ಞ ಅಮೇರಿಕದ ಅಲ್ಫ್ರೆಡ್ ಕಿನ್ಸೆ ಅವರು ದಶಕಗಳ ಹಿಂದೆ ಅಧ್ಯಯನ ವರದಿಯೊಂದನ್ನು ಬಿಡುಗಡೆಗೊಳಿಸಿದ್ದರು. ಅಮೇರಿಕದ ವಿವಾಹಿತ ದಂಪತಿಗಳ ಪೈಕಿ 50% ಪುರುಷರು ಮತ್ತು 26% ಮಹಿಳೆಯರು ಜೀವನದಲ್ಲಿ ಒಮ್ಮೆಯಾದರೂ ವಿವಾಹೇತರ ಲೈಂಗಿಕ ಸಂಬಂಧವನ್ನು ಅನುಭವಿಸಿದ್ದಾರೆ ಎಂದು ಅವರು ಆ ವರದಿಯಲ್ಲಿ ಹೇಳಿದ್ದರು. ಲೈಂಗಿಕ ಕ್ಷೇತ್ರದಲ್ಲಿ ಸಂಶೋಧಕನಾಗಿ ಮುಂಚೂಣಿಯಲ್ಲಿ ಗುರುತಿಸಿ ಕೊಂಡಿರುವ ಅವರ ಎರಡು ಕೃತಿಗಳು- ಸೆಕ್ಷುವಲ್ ಬಿಹೇವಿಯರ್ ಇನ್ ದ ಹ್ಯೂಮನ್ ಮೇಲ್ ಮತ್ತು ಸೆಕ್ಷುವಲ್ ಬಿಹೇವಿಯರ್ ಇನ್ ದ ಹ್ಯೂಮನ್ ಫಿಮೇಲ್- ಬೆಸ್ಟ್ ಸೆಲ್ಲರ್ ಕೃತಿಗಳಾಗಿ ಜನಪ್ರಿಯವಾಗಿದ್ದುವು. ಹಾಗಂತ,

    ಇವರು ಈ ಅಧ್ಯಯನ ವರದಿಯನ್ನು ಬಿಡುಗಡೆಗೊಳಿಸುವಾಗ, ಭಾರತದಂತೆ, Adultery is not a crime (ಪರಸಂಗ ಅಪರಾಧ ಅಲ್ಲ) ಎಂದು ಇಡೀ ಅಮೇರಿಕಕ್ಕೆ ಅಮೇರಿಕವೇ ಘೋಷಿಸಿಕೊಂಡಿರಲಿಲ್ಲ. ಅಮೇರಿಕ ಸಂಯುಕ್ತ ಸಂಸ್ಥಾನವೆಂಬ ಅಮೇರಿಕದಲ್ಲಿ 50 ರಾಜ್ಯಗಳಿವೆ. ಈ ರಾಜ್ಯಗಳೆಲ್ಲ ಒಂದು ರೀತಿಯ ಸ್ವಾಯತ್ತ ಸ್ವಾತಂತ್ರ್ಯವನ್ನು ಅನುಭವಿಸುತ್ತಲೂ ಇವೆ. ಅಲ್ಲಿ, ಒಂದು ರಾಜ್ಯದ ಕಾನೂನಿಗೆ ವಿರುದ್ಧವಾದ ಕಾನೂನು ಇನ್ನೊಂದು ರಾಜ್ಯದಲ್ಲಿ ಇವತ್ತಿಗೂ ಚಲಾವಣೆಯಲ್ಲಿ ಇದೆ. ಅಮೇರಿಕದ 20 ರಾಜ್ಯಗಳಲ್ಲಿ ಪರಸಂಗವು ಇವತ್ತೂ ಅಪರಾಧವೇ. ಆದರೆ, ಅಮೇರಿಕನ್ ಜನತೆ ಪರಸಂಗಕ್ಕೆ ಹೇಗೆ ಒಗ್ಗಿ ಹೋಗಿವೆಯೆಂದರೆ, ಪರಸಂಗದ ವಿರುದ್ಧ ಬಗ್ಗೆ ದೂರು ಕೊಡುವವರೇ ಕಡಿಮೆ. ದಕ್ಷಿಣ ಕರೋಲಿನಾ ರಾಜ್ಯದ ರಾಜ್ಯಪಾಲ ಮಾರ್ಕ್ ಸ್ಟಾನ್‍ಫೋರ್ಡ್ ಅವರು 2009ರಲ್ಲಿ ತನ್ನ ವಿವಾಹೇತರ ಸಂಬಂಧವನ್ನು ಬಹಿರಂಗವಾಗಿಯೇ ಒಪ್ಪಿಕೊಂಡರು. ಆ ರಾಜ್ಯದ ಕಾನೂನಿನ ಪ್ರಕಾರ ಇಂಥ ಸಂಬಂಧ ಸ್ವೀಕೃತವಲ್ಲ. ಆದರೆ, ಅವರ ಆ ಒಪ್ಪಿಗೆಗೇ ಆ ಪ್ರಕರಣ ಮುಗಿಯಿತೇ ಹೊರತು ಅದು ಕೋರ್ಟು ವಿಚಾರಣೆಯ ಹಂತಕ್ಕೆ ಬರಲೇ ಇಲ್ಲ. ಕಿನ್ಸೆ ಅವರ ಅಧ್ಯಯನ ವರದಿಯ ಬಳಿಕವಂತೂ ಅನೇಕಾರು ವರದಿಗಳು ಅಮೇರಿಕದಲ್ಲಿ ಬಿಡುಗಡೆಗೊಳ್ಳುತ್ತಲೇ ಇವೆ. ಅಮೇರಿಕದ ವಿವಾಹಿತ ದಂಪತಿಗಳಲ್ಲಿ 85% ಮಹಿಳೆಯರು ತಮ್ಮ ಗಂಡಂದಿರನ್ನು ಮೋಸಗಾರರೆಂದು ಭಾವಿಸುತ್ತಿದ್ದಾರೆ ಮತ್ತು 50% ಪುರುಷರು ತಮ್ಮ ಪತ್ನಿಯರ ಬಗ್ಗೆ ಇಂಥದ್ದೇ ಭಾವನೆಯಲ್ಲಿದ್ದಾರೆಂದು ಕೌಟುಂಬಿಕ ಅಂಕಿ-ಅಂಶಗಳ ವೆಬ್‍ಸೈಟ್ ವರದಿಗಳು ಹೇಳುತ್ತಿವೆ. ವಿವಾಹ ವಿಚ್ಛೇದನಾ ಪ್ರಕರಣಗಳ ಪೈಕಿ 17% ವಿಚ್ಛೇದನಕ್ಕೆ ಪರಸಂಗವೇ ಕಾರಣವೆಂದೂ ವರದಿಗಳು ಹೇಳುತ್ತವೆ. ಅಮೇರಿಕದ ಯುವ ಸಮೂಹದಲ್ಲಿ ಪರಸಂಗ ಮತ್ತು ವ್ಯಭಿಚಾರ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದೆ ಎಂದೂ ಹೇಳಲಾಗುತ್ತಿದೆ. ಆದ್ದರಿಂದ,

ಪರಸಂಗವನ್ನು ಅಪರಾಧ ಮುಕ್ತಗೊಳಿಸಿದ ಸುಪ್ರೀಮ್ ಕೋರ್ಟಿನ ತೀರ್ಪಿಗೆ ಯಾರಾದರೂ ತಕರಾರು ವ್ಯಕ್ತಪಡಿಸಿದರೆ ಅದನ್ನು ಪುರಾತನ ಮನಃಸ್ಥಿತಿಯಾಗಿ ನೋಡಬೇಕಿಲ್ಲ.

ಸುಪ್ರೀಮ್ ಕೋರ್ಟಿನ ಮುಂದಿದ್ದುದು- ಪರ ಸಂಗಕ್ಕೆ ಸಂಬಂಧಿಸಿ ಪುರುಷನನ್ನು ಮಾತ್ರ ಅಪರಾಧಿಯನ್ನಾಗಿಸುವ 158 ವರ್ಷಗಳ ಪುರಾತನವಾದ ಭಾರತೀಯ ದಂಡಸಂಹಿತೆಯ (ಐಪಿಸಿ) ಸೆಕ್ಷನ್ 497ನ್ನು ಅನೂರ್ಜಿತಗೊಳಿಸಬೇಕು ಎಂಬ ಮನವಿ. ಈ ಮನವಿಗೂ ಒಂದು ಕಾರಣ ಇದೆ.

ವಿವಾಹಿತ ಮಹಿಳೆಯರ ಅನುಮತಿ ಪಡೆಯದೇ ಓರ್ವ ವ್ಯಕ್ತಿ ಆಕೆಯನ್ನು ಲೈಂಗಿಕವಾಗಿ ಬಳಸಿದರೆ, ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಆದರೆ ಆಕೆ ಶಿಕ್ಷಾರ್ಹಳಾಗುವುದಿಲ್ಲ. ಒಂದು ವೇಳೆ, ಆಕೆಯ ಅನುಮತಿ ಪಡೆದೇ ಓರ್ವ ದೇಹ ಸಂಬಂಧ ಬೆಳೆಸಿದರೂ ಆತ ಶಿಕ್ಷಾರ್ಹ ಅಪರಾಧಿಯಾಗುತ್ತಾನೆ. ಆದರೆ, ಆಕೆ ಅಲ್ಲ. ಇದು ಸೆಕ್ಷನ್ 497ರಲ್ಲಿ ಅಡಕವಾಗಿರುವ ಅಂಶ. ಇದೊಂದು ಅಸಮತೋಲನವುಳ್ಳ ಮತ್ತು ಹೆಣ್ಣು-ಗಂಡಿನ ನಡುವೆ ತಾರತಮ್ಯ ತೋರುವ ವಿಧಿ ಎಂಬುದು ಯಾರಿಗೇ ಆಗಲಿ ಬಾಹ್ಯನೋಟಕ್ಕೇ ಗೊತ್ತಾಗಿ ಬಿಡುತ್ತದೆ. ಒಂದೇ ಕೃತ್ಯಕ್ಕೆ ಬೇರೆ ಬೇರೆ ನಿರ್ಣಯಗಳೇಕೆ ಎಂದು ಮನವಿದಾರರು ಪ್ರಶ್ನಿಸಿದ್ದರು. ಕೋರ್ಟು ಇದನ್ನು ಒಪ್ಪಿಕೊಂಡಿತು ಮತ್ತು ಇಬ್ಬರನ್ನೂ ಅಪರಾಧ ಮುಕ್ತಗೊಳಿಸಿತು. ಇದೇ ವೇಳೆ,

ಇದೊಂದು ಸೂಕ್ಷ್ಮ  ತೀರ್ಪು ಅನ್ನುವುದರಲ್ಲಿ ಎರಡು ಮಾತಿಲ್ಲ. ಇಬ್ಬರನ್ನೂ ಅಪರಾಧ ಮುಕ್ತಗೊಳಿಸುವುದಕ್ಕಿಂತ ಇಬ್ಬರನ್ನೂ ಅಪರಾಧಿಗಳನ್ನಾಗಿಸಿಯೂ ಸಮಾನತೆ ಕಾಯ್ದುಕೊಳ್ಳಬಹುದಿತ್ತಲ್ಲವೇ ಎಂಬ ಜಿಜ್ಞಾಸೆಯೂ ಮುಗ್ಧವಲ್ಲ. ಹೀಗೆ ವಿವಾಹಬಾಹಿರ ಸಂಬಂಧವನ್ನು ಸಿಂಧುಗೊಳಿಸುವುದರಿಂದ ಉದ್ಭವವಾಗಬಹುದಾದ ಕೌಟುಂಬಿಕ, ಸಾಮಾಜಿಕ ಮತ್ತು ಭಾವನಾತ್ಮಕವಾದ ಸಮಸ್ಯೆಗಳ ಕುರಿತಾಗಿ ಕೋರ್ಟಿನ ನಿಲುವು ಏನು, ಅದು ಹೇಗೆ ಈ ಸಮಸ್ಯೆಗಳನ್ನು ನಿಭಾಯಿಸಬಯಸಿದೆ ಎಂಬ ಪ್ರಶ್ನೆಗೂ ಸದ್ಯ ಉತ್ತರ ಸಿಕ್ಕಿಲ್ಲ. ಕಾಗೆಯ ಗೂಡಿನಲ್ಲಿ ಕೋಗಿಲೆಯೊಂದು ಮೊಟ್ಟೆ ಇಟ್ಟಂತಹ ಪ್ರಕೃತಿ ಸಹಜ ಪ್ರಕರಣ ಇದಲ್ಲ. ಈ ವಿವಾಹೇತರ ಸಂಬಂಧ ಭಾವನಾತ್ಮಕವಾದುದು. ವಿಶ್ವಾಸದ್ರೋಹವಾಗಿ ಪರಿಗಣಿತವಾಗುವಂಥದ್ದು. ಕಾನೂನು ಪ್ರಕಾರ ಶಿಕ್ಷೆ ಇಲ್ಲದಿದ್ದರೂ ಗಂಡು ಮತ್ತು ಹೆಣ್ಣು ಇದರ ಪರಿಣಾಮಗಳನ್ನು ಎದುರಿಸಲು ಸಿದ್ಧವಾಗಬೇಕಾದಂಥದ್ದು. ಇಂಥ ಸಂಬಂಧ ಪತಿ-ಪತ್ನಿಯರ ನಡುವೆ ಹುಟ್ಟು ಹಾಕುವ ಮಾನಸಿಕ ಒತ್ತಡವೂ ನಿರ್ಲಕ್ಷಿಸುವಂಥದ್ದಲ್ಲ. ಹುಟ್ಟಿದ ಮಗುವಿನ ತಂದೆ ಯಾರು ಅನ್ನುವ ಪ್ರಶ್ನೆಯ ಹುಟ್ಟಿಗೂ ಈ ತೀರ್ಪು ಕಾರಣವಾಗಬಹುದು. ನಿಜವಾಗಿ,

ಈಗಾಗಲೇ ಇಂಥ ಸಮಸ್ಯೆ ಯುರೋಪಿಯನ್ ರಾಷ್ಟ್ರಗಳಲ್ಲಿ ದೊಡ್ಡ ಮಟ್ಟದ ತಲೆನೋವಿಗೂ ಕಾರಣವಾಗಿದೆ. ‘ಪರಸಂಗ ಅಪರಾಧವಲ್ಲ’ ಅನ್ನುವ ರಾಷ್ಟ್ರಗಳಾದ ಇಟಲಿ, ಮಾಲ್ಟಾ, ಫ್ರಾನ್ಸ್, ಸ್ಪೈನ್, ಪೋರ್ಚುಗಲ್, ಗ್ರೀಸ್, ಬೆಲ್ಜಿಯಂ, ಸ್ವಿಟ್ಜರ್ಲೆಂಡ್, ಆಸ್ಟ್ರಿಯ, ನಾರ್ವೆ, ಬ್ರೆಝಿಲ್, ಅರ್ಜಂಟೀನ, ನಿಕಾರಾಗ್ವ, ಚಿಲಿ, ಬ್ರಿಟನ್, ಅಮೇರಿಕ ಸಹಿತ ಅನೇಕ ರಾಷ್ಟ್ರಗಳು ಹೊಸ ಹೊಸ ಸಮಸ್ಯೆಗಳನ್ನು ಇವತ್ತು ಕೊರಳಿಗೆ ಹಾಕಿಕೊಂಡಿವೆ. ಇದರಲ್ಲಿ ಬಹುದೊಡ್ಡ ಸಮಸ್ಯೆ ವಿಚ್ಛೇದನದ್ದು. ಒಂದುಕಡೆ, ಹೆಣ್ಣು ಮತ್ತು ಗಂಡಿನ ನಡುವೆ ಲೈಂಗಿಕ ಸಂಬಂಧವನ್ನು ಹೊಂದಲು ಇರುವ ಪರವಾನಿಗೆಯಾಗಿ ಮದುವೆಯನ್ನು ಪರಿಗಣಿಸಲಾಗುತ್ತದೆ. ಧಾರ್ಮಿಕವಾಗಿಯೂ ಪರಂಪರಾಗತ ನಂಬಿಕೆಯಾಗಿಯೂ ಇದು ಅಸ್ತಿತ್ವದಲ್ಲಿದೆ. ಋಗ್ವೇದದ 4.5.5ನೇ ವಚನವು ಪರಸಂಗವನ್ನು ಅಪರಾಧವೆಂದು ಸಾರುತ್ತದೆ. ಬೌದ್ಧ ಧರ್ಮದ ಮೇಲೆ ಅಧ್ಯಯನ ನಡೆಸಿರುವ ವೆಂಡಿ ಡೊನಿಗರ್ ಅವರು, ಬುದ್ಧ ಧರ್ಮದಲ್ಲಿ ಪರಸಂಗವು ಪಾಪಕರ ಎಂದು ಬರೆದಿದ್ದಾರೆ. ಕ್ರಿಸ್ತಪೂರ್ವದ ಹಮ್ಮುರಾಬಿ ಶಾಸನದಲ್ಲಿ, ಮೆಸಪಟೋಮಿಯ- ಬ್ಯಾಬಿಲೋನಿಯನ್ ಕಾನೂನು, ಹರಪ್ಪ-ಮೊಹೆಂಜೋದಾರೋ ಕಾಲದಲ್ಲೂ ಪರಸಂಗವನ್ನು ಶಿಕ್ಷಾರ್ಹವೆಂದೇ ಪರಿಗಣಿಸಲಾಗಿತ್ತು. ಇಸ್ಲಾಮ್, ಕ್ರೈಸ್ತ ಮತ್ತು ಯಹೂದಿ ಧರ್ಮಗಳೂ ವಿವಾಹೇತರ ಸಂಬಂಧವನ್ನು ಅಪರಾಧವೆಂದೇ ಪರಿಗಣಿಸುತ್ತವೆ. ಅಲ್ಲದೇ, ಹೆಣ್ಣು-ಗಂಡು ದೈಹಿಕ ಸಂಬಂಧವನ್ನು ಹೊಂದುವುದಕ್ಕೆ ವಿವಾಹವೇ ರುಜುಮಾರ್ಗ ಎಂಬ ಬಲವಾದ ವಿಶ್ವಾಸ ಇವತ್ತೂ ಇದೆ. ಆದರೆ, ಸುಪ್ರೀಮ್ ಕೋರ್ಟಿನ ತೀರ್ಪು ಈ ನಂಬಿಕೆಯ ಬುಡವನ್ನೇ ಅಲುಗಾಡಿಸುತ್ತದೆ. ಮಾತ್ರವಲ್ಲ, ಗೊಂದಲವನ್ನೂ ಹುಟ್ಟು ಹಾಕುತ್ತದೆ. ಒಂದುವೇಳೆ, ವಿವಾಹದ ಆಚೆಗೆ ಗಂಡು-ಹೆಣ್ಣು ತನ್ನಿಷ್ಟದವರೊಂದಿಗೆ ದೈಹಿಕ ಸಂಬಂಧ ಹೊಂದುವುದು ಸಮ್ಮತ ಎಂದಾದರೆ, ವಿಚ್ಛೇದನಕ್ಕೆ ಈ ಸಂಬಂಧವನ್ನು ಕಾರಣವಾಗಿ ಕೊಡಬಹುದೇ? ಸಮ್ಮತಾರ್ಹವಾದ ಸಂಬಂಧವೊಂದನ್ನು ವಿಚ್ಛೇದನಕ್ಕೆ ಅರ್ಹ ಕಾರಣವಾಗಿ ಪರಿಗಣಿಸಲಾಗುತ್ತದೆಯೇ? ಪತಿಯ ಅಥವಾ ಪತ್ನಿಯ ವಿವಾಹೇತರ ಸಂಬಂಧವನ್ನು ಕಾರಣವಾಗಿ ಕೊಟ್ಟುಕೊಂಡು ಸಂಬಂಧಿತರು ವಿಚ್ಛೇದನಕ್ಕೆ ಮನವಿ ಸಲ್ಲಿಸಬಹುದೇ? ಹಾಗೆ ಮಾಡಿದರೆ ಕೋರ್ಟು ತಪ್ಪಲ್ಲ ಎಂದು ಹೇಳಿದ ಕೃತ್ಯವನ್ನು ತಪ್ಪು ಎಂದು ಪತಿ-ಪತ್ನಿ ಕೋರ್ಟಿನ ಮುಂದೆ ವಾದಿಸಿದಂತಾಗುವುದಿಲ್ಲವೇ? ಅಥವಾ ವಿವಾಹವನ್ನು ಹೆಣ್ಣು-ಗಂಡಿನ ದೈಹಿಕ ಸಂಬಂಧಕ್ಕೆ ಇರುವ ಒಪ್ಪಿಗೆಯಾಗಿ ಸ್ವೀಕರಿಸುವುದಾದರೆ ವಿವಾಹೇತರ ಸಂಬಂಧವು ಅನೈತಿಕವೇ ಆಗಬೇಕಲ್ಲವೇ? ಬಹುಶಃ,

ಪರಸಂಗ ಅಪರಾಧವಲ್ಲ ಎಂದು ತೀರ್ಪು ನೀಡಿದ ಐವರು ನ್ಯಾಯಾಧೀಶರ ಪೀಠದಲ್ಲಿದ್ದ ಇಂದೂ ಮಲ್ಹೋತ್ರರನ್ನು ಇಂಥದ್ದೊಂದು  ಪ್ರಶ್ನೆ ಕಾಡಿರಬೇಕು. ಆದ್ದರಿಂದಲೇ ಅವರು ಪರಸಂಗವು ನೈತಿಕವಾಗಿ ತಪ್ಪು ಎಂದು ಅಭಿಪ್ರಾಯಪಟ್ಟರು.

ದೀಪಕ್ ಮಿಶ್ರಾ
ಅಬ್ದುಲ್ ನಝೀರ್
ಡಿ.ವೈ. ಚಂದ್ರಚೂಡ್
ಇವರೆಲ್ಲ ಬೇರೆ ಬೇರೆ ಸಂದರ್ಭಗಳಲ್ಲಿ ಭಿನ್ನ ನಿಲುವುಗಳನ್ನು ವ್ಯಕ್ತಪಡಿಸಿದವರೇ. ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಎಲ್ಲಾ  ವಯೋಮಾನದ ಮಹಿಳೆಯರು ಪ್ರವೇಶಿಸುವುದು ಸರಿಯೋ ತಪ್ಪೋ ಎಂಬ ವಿಷಯದ ಮೇಲಿನ ತೀರ್ಪಿನಲ್ಲಿ ಇಂದೂ ಮಲ್ಹೋತ್ರ ಇತರೆಲ್ಲ ನ್ಯಾಯಾಧೀಶರಿಗಿಂತ ಭಿನ್ನ ನಿಲುವನ್ನು ತಾಳಿದರು. ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್, ಡಿ.ವೈ. ಚಂದ್ರಚೂಡ್, ಎ.ಎಂ. ಖಾನ್ವಿಲ್ಕರ್ ಅವರು ಏಕ ಅಭಿಪ್ರಾಯವನ್ನು ವ್ಯಕ್ತಪಡಿಸಿದರೆ, ನ್ಯಾಯಮೂರ್ತಿ ಇಂದೂ ಮಲ್ಹೋತ್ರ ಅವರು ಪರಂಪರೆಯನ್ನು ಕಾಯ್ದುಕೊಳ್ಳಬೇಕು ಎಂದು ವಾದಿಸಿದರು. ಹೆಣ್ಣಿನ ಮೇಲೆ ಶಬರಿಮಲೆಯಲ್ಲಿ ಯಾವ ನಿರ್ಬಂಧವನ್ನು ಹೇರಲಾಗಿದೆಯೋ ಅದನ್ನು ಗೌರವಿಸಬೇಕು ಮತ್ತು ಧಾರ್ಮಿಕ ವಿಷಯದಲ್ಲಿ ಕೋರ್ಟು ಮಧ್ಯ ಪ್ರವೇಶಿಸುವುದು ಉಚಿತವಲ್ಲ ಎಂಬ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು. ಆಧಾರ್ ಕಾರ್ಡ್‍ನ ವಿಷಯದಲ್ಲಿ ದೀಪಕ್ ಮಿಶ್ರಾ ನೇತೃತ್ವದ ಪಂಚಪೀಠದ ಸದಸ್ಯರಲ್ಲಿ ಒಬ್ಬರಾಗಿದ್ದ ಡಿ.ವೈ. ಚಂದ್ರಚೂಡ್ ಅವರು ಭಿನ್ನ ಧ್ವನಿ ಎತ್ತಿದ್ದರು. ಉಳಿದ ನಾಲ್ಕು ಮಂದಿ ಆಧಾರ್‍ ನ  ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದರೆ, ಚಂದ್ರಚೂಡ್ ಆಕ್ಷೇಪಿಸಿದರು. ಈ ಹಿಂದೆ ತ್ರಿವಳಿ ತಲಾಕ್‍ನ ಸಾಂವಿಧಾನಿಕ ಸಿಂಧುತ್ವದ ಪ್ರಶ್ನೆ ಎದುರಾದಾಗಲೂ ಇಂಥದ್ದೊಂದು  ಸನ್ನಿವೇಶ ಎದುರಾಗಿತ್ತು. ಐವರು ನ್ಯಾಯಾಧೀಶರ ಪೀಠದಲ್ಲಿದ್ದ ದೀಪಕ್ ಮಿಶ್ರ ಮತ್ತು ನಝೀರ್ ಅಹ್ಮದ್ ಅವರು ತ್ರಿವಳಿ ತಲಾಕನ್ನು ಅಸಾಂವಿಧಾನಿಕ ಎಂದು ಕರೆಯಲು ನಿರಾಕರಿಸಿದರು. ಆದರೆ ಉಳಿದ ಮೂವರ ಅಭಿಪ್ರಾಯಗಳು ಇದಕ್ಕೆ ವಿರುದ್ಧವಾಗಿದ್ದುದರಿಂದ ತ್ರಿವಳಿ ತಲಾಕನ್ನು ಅಸಾಂವಿಧಾನಿಕವೆಂದು ಘೋಷಿಸಲಾಯಿತು. ಇಂಥದ್ದು ಈ ಹಿಂದೆಯೂ ನಡೆದಿದೆ. ಇದರರ್ಥ,

ಬಹುಮತದ ತೀರ್ಪುಗಳಲ್ಲೂ ಭಿನ್ನಮತಗಳಿವೆ. ತ್ರಿವಳಿ ತಲಾಕ್‍ನ ಸಿಂಧುತ್ವದ ವಿಷಯದಲ್ಲಿ, ಶಬರಿಮಲೆಗೆ ಮಹಿಳಾ ಪ್ರವೇಶ ನಿರ್ಬಂಧದ ವಿಷಯದಲ್ಲಿ, ಪರಸಂಗದ ವಿಷಯದಲ್ಲಿ, ಬೊಕ್ಕಸದ ಕೋಟ್ಯಂತರ ರೂಪಾಯಿಯನ್ನು ಬರಿದು ಮಾಡಿದ ಆಧಾರ್ ಕಾರ್ಡ್‍ನಂಥ ವಿಷಯದಲ್ಲೂ ಉನ್ನತ ನ್ಯಾಯಾಧೀಶರ ನಡುವೆಯೇ ಭಿನ್ನಮತಗಳಿವೆ. ಅಂದರೆ,

ನ್ಯಾಯಾಂಗದ ಯಾವುದೇ ತೀರ್ಪು ಪರಮ ಪವಿತ್ರ ಅಲ್ಲ. ಭಿನ್ನಮತ ವ್ಯಕ್ತಪಡಿಸಬಹುದಾದ ಅಥವಾ ಮಾನವ ಸಹಜ ದೌರ್ಬಲ್ಯಗಳು ನುಸುಳಿರಬಹುದಾದ ಒಂದು ಅದು; ಅಷ್ಟೇ. ಭಾರತೀಯ ದಂಡ ಸಂಹಿತೆಯ 497ನೇ ವಿಧಿಯ ಸಿಂಧುತ್ವವನ್ನು 1985ರಲ್ಲಿ ಸುಪ್ರೀಮ್ ಕೋರ್ಟಿನ ನ್ಯಾಯಾಧೀಶರಾದ ವೈ.ವಿ. ಚಂದ್ರಚೂಡ್ ಎತ್ತಿ ಹಿಡಿದಿದ್ದರಲ್ಲದೇ, ಪರಸಂಗವನ್ನು ಅಪರಾಧ ಎಂದು ಘೋಷಿಸಿದ್ದರು. ಅದಾದ 33 ವರ್ಷಗಳ ಬಳಿಕ ಅದೇ ಸುಪ್ರೀಮ್ ಕೋರ್ಟ್‍ನಲ್ಲಿ ಅವರದೇ ಮಗ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಪರಸಂಗ ಅಪರಾಧವಲ್ಲ ಎಂದು ತೀರ್ಪಿತ್ತರು. ಆ ಮೂಲಕ ಸೆಕ್ಷನ್ 497ನ್ನು ಅನೂರ್ಜಿತಗೊಳಿಸಿದರು. ಖಾಸಗಿತನದ ಹಕ್ಕಿನ ಕುರಿತೂ ಈ ಅಪ್ಪ ಮತ್ತು ಮಗ ತದ್ವಿರುದ್ಧ ನಿಲುವನ್ನು ತಾಳಿದರು. ಈ ವಿಷಯದಲ್ಲಿ ಅಪ್ಪ ಈ ಹಿಂದೆ ಕೊಟ್ಟಿದ್ದ ತೀರ್ಪಿನ ವಿರುದ್ಧ ಮಗ ಇತ್ತೀಚೆಗೆ ತೀರ್ಪು ಕೊಟ್ಟರು. ನಮಾಝ ಮಾಡುವುದಕ್ಕೆ ಮಸೀದಿಯೇ ಬೇಕೆಂದಿಲ್ಲ ಎಂಬ ತೀರ್ಪನ್ನು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು 1994ರಲ್ಲಿ ನೀಡಿತ್ತು. ಅದಾಗಿ 24 ವರ್ಷಗಳ ಬಳಿಕ ಕಳೆದವಾರ ಈ ಬಗ್ಗೆ ಸುಪ್ರೀಮ್ ಕೋರ್ಟ್‍ನಲ್ಲಿ ಅದರ ಮರು ಅವಲೋಕನ ನಡೆಯಿತು. ಒಂದು ರೀತಿಯಲ್ಲಿ,

ಯಾವ ತೀರ್ಪೂ ಶಾಶ್ವತ ಅಲ್ಲ. ಅಂತಿಮವೂ ಅಲ್ಲ. ಅಲ್ಪಾಯುಷಿ ತೀರ್ಪುಗಳ ಮೇಲೆ ಸಂಭ್ರಮ ಪಡುವ ಅಥವಾ ದುಃಖಿಸುವ ಅಗತ್ಯವೂ ಇಲ್ಲ. ಸಂವಿಧಾನವನ್ನು ರಚಿಸಿದವರೂ ಮನುಷ್ಯರೇ. ಅದನ್ನು ಆಧಾರವಾಗಿಸಿಕೊಂಡು ತೀರ್ಪು ನೀಡುವ ನ್ಯಾಯಾಧೀಶರೂ ಮನುಷ್ಯರೇ. ಹಳೆಯ ತೀರ್ಪನ್ನು ತಪ್ಪು ಎಂದು ಹೇಳಿ ಹೊಸತನ್ನು ಅದರ ಮೇಲೆ ಹೇರುವವರೂ ಮನುಷ್ಯರೇ. ಆದ್ದರಿಂದ, ಇಂಥ ತೀರ್ಪುಗಳ ಮೇಲೆ ವ್ಯಕ್ತವಾಗುವ ಪರ ಮತ್ತು ವಿರುದ್ಧ ಅಭಿಪ್ರಾಯಗಳನ್ನು ಹೀಯಾಳಿಸಬೇಕಿಲ್ಲ. ಉನ್ನತ ನ್ಯಾಯಾಧೀಶರ ನಡುವೆಯೇ ಭಿನ್ನಮತ ಇರುವಾಗ, ಜನಸಾಮಾನ್ಯರಲ್ಲಿ ಪರ-ವಿರುದ್ಧ ಅಭಿಪ್ರಾಯ ಇರುವುದು ಅಸಹಜವೂ ಅಲ್ಲ, ಅಸೂಕ್ಷ್ಮ ವೂ ಅಲ್ಲ. ಪರಸಂಗವನ್ನು ಅಪರಾಧ ಮುಕ್ತಗೊಳಿಸಿದ ಬಗ್ಗೆ ವ್ಯಕ್ತವಾಗುತ್ತಿರುವ ವಿರೋಧವನ್ನು ನಾವು ಈ ನೆಲೆಯಲ್ಲೇ  ಪರಿಗಣಿಸಬೇಕು. ಪ್ರಜಾತಂತ್ರವೆಂದರೆ ಇದುವೇ.



No comments:

Post a Comment