Tuesday, October 23, 2018

ಎ ಜಿಹಾದ್ ಫಾರ್ ಲವ್ ಮತ್ತು ಲವ್ ಜಿಹಾದ್



    ‘ಲವ್ ಜಿಹಾದ್ ಅನ್ನುವ ಪರಿಕಲ್ಪನೆಯಿಲ್ಲ ಮತ್ತು ಅಂಥದ್ದೊಂದು  ಹೆಸರಲ್ಲಿ ಸಂಘಟಿತ ಚಟುವಟಿಕೆಗಳು ನಡೆಯುತ್ತಿಲ್ಲ’ ಎಂದು ಡಿಜಿಪಿ ಜಾಕೊಬ್ ಪೊನ್ನೊಸೆಯವರು ಕೇರಳ ಹೈಕೋರ್ಟ್‍ಗೆ 2009 ನವೆಂಬರ್ ನಲ್ಲಿ ವರದಿ ಸಲ್ಲಿಸುವುದಕ್ಕಿಂತ ಎರಡು ವರ್ಷಗಳ ಮೊದಲು- 2007ರ ಸೆಪ್ಟೆಂಬರ್ ನಲ್ಲಿ- ಕೆನಡಾದ ಟೊರೆಂಟೋದಲ್ಲಿ ನಡೆದ ‘ಟೊರೆಂಟೋ ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಸಿನಿಮಾವೊಂದು ಪ್ರದರ್ಶನಗೊಂಡಿತ್ತು. ಹೆಸರು,

ಎ ಜಿಹಾದ್ ಫಾರ್ ಲವ್    
     ಭಾರತದಲ್ಲಿ ಬಿಜೆಪಿ ಮತ್ತು ಅದರ ಬೆಂಬಲಿಗ ಪರಿವಾರ, ಮಾಧ್ಯಮಗಳು ಮತ್ತು ಬರಹಗಾರರೂ ‘ಲವ್ ಜಿಹಾದ್’ ಎಂಬ ಪದಪುಂಜವನ್ನು ದೊಡ್ಡ ಮಟ್ಟದಲ್ಲಿ ಬಳಕೆಗೆ ತಂದದ್ದು  ಎ ಜಿಹಾದ್ ಫಾರ್ ಲವ್ ಸಿನಿಮಾ ಪ್ರದರ್ಶನದ ನಂತರ. ಹಾಗಂತ, ಎ ಜಿಹಾದ್ ಫಾರ್ ಲವ್‍ಗೂ ಲವ್ ಜಿಹಾದ್‍ಗೂ ಧ್ಯನ್ಯಾರ್ಥದ ಹೊರತಾಗಿ ಯಾವ ಸಂಬಂಧವೂ ಇಲ್ಲ. ಎ ಜಿಹಾದ್ ಫಾರ್ ಲವ್ ಸಂಪೂರ್ಣವಾಗಿ ಲವ್ ಜಿಹಾದ್‍ಗಿಂತ ಭಿನ್ನ. ಅದು ಹೆಣ್ಣು ಗಂಡಿನ ಪ್ರೇಮ ಪ್ರಕರಣದ ಸುತ್ತ ಹೆಣೆದಿರುವ ಸಿನಿಮಾವೂ ಅಲ್ಲ. ಹಿಂದೂ ಯುವತಿ ಮತ್ತು ಮುಸ್ಲಿಮ್ ಯುವಕನ ನಡುವೆ ಅರಳುವ ಪ್ರೇಮವನ್ನು ಮುಂದಿಟ್ಟುಕೊಂಡು ರಚಿಸಲಾದ ಚಿತ್ರ ಕತೆಯೂ ಅದಕ್ಕಿಲ್ಲ. ಅದು ಸಲಿಂಗರತಿಯ ಸುತ್ತ ಹೆಣೆಯಲ್ಪಟ್ಟ ಚಿತ್ರ. ಮಾತ್ರವಲ್ಲ, ಸಿಂಗಾಪುರವೂ ಸೇರಿದಂತೆ ಹೆಚ್ಚಿನೆಲ್ಲ ಮುಸ್ಲಿಮ್ ರಾಷ್ಟ್ರಗಳು ನಿಷೇಧ ಹೇರಿದ ಸಿನಿಮಾವೂ ಹೌದು. ತಮಾಷೆ ಏನೆಂದರೆ,

      ಈ ಸಿನಿಮಾವನ್ನು ತಯಾರಿಸಿದ್ದು ಹಲಾಲ್ ಫಿಲ್ಮ್ಸ್ ಎಂಬ ಸಂಸ್ಥೆ. ಅಲ್ಲದೇ, ಸುಡಾನಿನ ದಿ ಡಾಕ್ಯುಮೆಂಟರಿ ಫಂಡ್, ಬ್ರಿಟನ್ನಿನ ಚಾನೆಲ್ 4 ಟೆಲಿವಿಷನ್, ಜರ್ಮನಿಯ ZDF, ಫ್ರಾನ್ಸ್ ನ Arte, ಅಮೇರಿಕದ Logo, ಆಸ್ಟ್ರೇಲಿಯಾದ SBS ಸಂಸ್ಥೆಗಳೂ ಈ ಸಿನಿಮಾದ ತಯಾರಿಯಲ್ಲಿ ಬೆನ್ನೆಲುಬಾಗಿ ನಿಂತವು. 6 ವರ್ಷಗಳ ಸತತ ಶ್ರಮ ಮತ್ತು ಇರಾಕ್, ಇರಾನ್, ಸೌದಿ, ಪಾಕ್, ಈಜಿಪ್ಟ್, ಬಂಗ್ಲಾ, ಟರ್ಕಿ, ಭಾರತ, ಫ್ರಾನ್ಸ್, ಅಮೇರಿಕ, ಬ್ರಿಟನ್, ದಕ್ಷಿಣ ಆಫ್ರಿಕಾವೂ ಸೇರಿದಂತೆ 12 ರಾಷ್ಟ್ರಗಳಲ್ಲಿ ನಡೆಸಿದ ಚಿತ್ರೀಕರಣದ ಒಟ್ಟು ಫಲಿತಾಂಶವೇ ಎ ಜಿಹಾದ್ ಫಾರ್ ಲವ್. ಅರಬ್ ರಾಷ್ಟ್ರಗಳಲ್ಲಿ ಚಿತ್ರೀಕರಣಕ್ಕಾಗಿ ಅನುಮತಿಯನ್ನೇ ಪಡೆದಿರಲಿಲ್ಲ. ಅನುಮತಿ ಸಿಗಲ್ಲ ಅನ್ನುವುದು ಚಿತ್ರ ತಂಡಕ್ಕೆ ಖಚಿತವಿತ್ತು. ಆದ್ದರಿಂದ ಕದ್ದು ಮುಚ್ಚಿ, ಅನುಮಾನ ಬರದ ರೀತಿಯಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಸಿನಿಮಾ ನಿರ್ದೇಶಕನ ಹೆಸರೂ ಚೆನ್ನಾಗಿದೆ - ಪರ್ವೇಝ ಶರ್ಮಾ ಮತ್ತು ಸ್ಯಾಂಡಿ ಡುಬುವೋಸ್ಕಿ. ಅಂದಹಾಗೆ,

    ಸಿನಿಮಾಕ್ಕೆ ಬಿಸ್ಮಿಲ್ಲಾ  ಎಂದು ಹೆಸರಿಡಬೇಕೆಂದು ಆರಂಭದಲ್ಲಿ ಪರ್ವೇಝ ಶರ್ಮಾ ನಿರ್ಧರಿಸಿದ್ದರಂತೆ. ಆದರೆ, ವಿವಾದಾತ್ಮಕವಾದೀತು ಅನ್ನುವ ಭಯವು ಎ ಜಿಹಾದ್ ಫಾರ್ ಲವ್ ಎಂದು ನಾಮಕರಣ ಮಾಡುವುದಕ್ಕೆ ಕಾರಣವಾಯಿತು ಎಂದವರು ಹೇಳಿದ್ದಾರೆ. ಅಷ್ಟಕ್ಕೂ,

     ಎ ಜಿಹಾದ್ ಫಾರ್ ಲವ್ ಎಂಬುದರ ಬದಲು ಬಿಸ್ಮಿಲ್ಲಾ ಎಂದು ನಾಮಕರಣ ಮಾಡಿರುತ್ತಿದ್ದರೆ ಏನಾಗುತ್ತಿತ್ತು? ಲವ್ ಜಿಹಾದ್ ಅನ್ನುವ ಪದಪುಂಜ ಅಸ್ತಿತ್ವಕ್ಕೆ ಬರುತ್ತಿತ್ತೇ? ಲವ್ ಜಿಹಾದ್ ಎಂಬುದು ಎ ಜಿಹಾದ್ ಫಾರ್ ಲವ್‍ನಿಂದ ಉತ್ಪತ್ತಿ ಯಾಗಿರಬಹುದೇ? ಹೇಳಲಾಗದು. ಯಾಕೆಂದರೆ,

     ಹೆಚ್ಚಿನ ಚಳವಳಿಗಳನ್ನು ಯಶಸ್ಸಿನೆಡೆಗೆ ಕೊಂಡೊಯ್ಯುವುದೇ ನುಡಿಗಟ್ಟುಗಳು. ಸೆಕ್ಯುಲರಿಸಮ್‍ಗೆ ಅಡ್ವಾಣಿಯವರು ಸ್ಯೂಡೋ ಅನ್ನುವ ಪದವನ್ನು ಸೇರಿಸಿದರು. ಅವರು ಸೇರಿಸಿದ ಈ ಹೆಚ್ಚುವರಿ ಪದವು ನಿಧಾನವಾಗಿ ಸೆಕ್ಯುಲರಿಸಂನ ಗುಣಮಟ್ಟವನ್ನೇ ಕೆಡಿಸುವಲ್ಲಿ ಯಶಸ್ವಿಯಾಯಿತು. ಜಾತ್ಯತೀತತೆ ಅನ್ನುವುದೇ ತಮಾಷೆಗೆ ಒಳಗಾಯಿತು. ಜಾತ್ಯತೀತರೆಂದರೆ, ಸೋಗಲಾಡಿಗಳು, ಅಲ್ಲೊಂದು -ಇಲ್ಲೊಂದು  ನುಡಿಯುವವರು, ಖಚಿತತೆ ಇಲ್ಲದವರು, ಧರ್ಮ ವಿರೋಧಿಗಳು ಇತ್ಯಾದಿ ಇತ್ಯಾದಿ ಐಬುಗಳುಳ್ಳವರು ಎಂಬುದಾಗಿ ಜನಸಾಮಾನ್ಯರನ್ನು ನಂಬಿಸುವುದಕ್ಕೆ ಸ್ಯೂಡೋ ಯಶಸ್ವಿಯಾಯಿತು. ದಶಕಗಳ ಹಿಂದೆ ಸೆಕ್ಯುಲರಿಸಂ ಎಂಬ ಪದವು ಎಷ್ಟು ಶೇಕಡಾ ಬಳಕೆಯಾಗುತ್ತಿತ್ತೋ ಅದರ ಅರ್ಧ ಶೇಕಡಾವೂ ಇವತ್ತು ಬಳಕೆಯಾಗುತ್ತಿಲ್ಲ. ಅದರ ಜಾಗದಲ್ಲಿ, ‘ನಾನು ಇಂತಿಂಥ ಜಾತಿಯವ, ಇಂತಿಂಥ ಧರ್ಮದವ, ನಾನು ಪೂಜಿಸುವ ದೇವ ಇಂಥವನು’ ಎಂಬುದೆಲ್ಲ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಪ್ರಧಾನಿಯವರು ಏಕಾದಶಿ ಉಪವಾಸ ಆಚರಿಸಿದರೋ ಇಲ್ಲವೋ, ಮಂದಿರ ಪ್ರವೇಶದ ಮೊದಲು ಮುಖ್ಯಮಂತ್ರಿಗಳ ಮೆನು ಏನಾಗಿತ್ತು, ಮಾಂಸಾಹಾರ ಸೇವಿಸುವ ವ್ಯಕ್ತಿ ಮಂದಿರ ಪ್ರವೇಶಿಸಬಹುದೇ, ಮಂದಿರ ಆವರಣದಲ್ಲಿ ನಮಾಝ ಮಾಡಬಹುದೇ ಇತ್ಯಾದಿಗಳು ಚರ್ಚೆಯ ಮುನ್ನೆಲೆಗೆ ಬರುವುದರ ಹಿಂದೆ ಅಡ್ವಾಣಿಯವರ ಸ್ಯೂಡೋ ಪದಪುಂಜಕ್ಕೆ ಪಾತ್ರವಿದೆ. ಅದು ಜಾತ್ಯತೀತತೆಯ ಮೂಲ ಗುಣವನ್ನೇ ಪ್ರಶ್ನಿಸುವ ಆಯುಧವಾಗಿ ಮಾರ್ಪಾಟಾಯಿತು. ಬಲಪಂಥೀಯ ಕಾರ್ಯಕರ್ತರು ಆ ಪದವನ್ನು ಸೆಕ್ಯುಲರಿಸಂಗೆ ಹೊಡೆಯುವ ಮೊನೆಯಾಗಿ ಬಳಸಿಕೊಂಡರು. ನೆಹರೂ, ಗಾಂಧೀಜಿಯನ್ನೂ ಆ ಮೊನೆ ಬಿಡಲಿಲ್ಲ. ಸೆಕ್ಯುಲರಿಸಂ ಅನ್ನು ಪ್ರತಿಪಾದಿಸುವ ಪ್ರತಿಯೊಬ್ಬರ ಹುಳುಕುಗಳಿಗೂ ದುರ್ಬೀನು ಹಿಡಿಯುವುದು ಮತ್ತು ಅವರಿಂದ ಆಗಿರಬಹುದಾದ ಮಾನವ ಸಹಜ ಪ್ರಮಾದಗಳನ್ನು ಎತ್ತಿ ಹಿಡಿದು ಈತ ಸ್ಯೂಡೋ ಎಂದು ಫತ್ವ ಹೊರಡಿಸುವುದು ಇವರ ಕಾಯಕವಾಗತೊಡಗಿತು. ಬರಬರುತ್ತಾ ಈ ಪ್ರತಿಪಾದನೆಗೆ ಮಾನ್ಯತೆಯೂ ಲಭ್ಯವಾಗತೊಡಗಿತು. ಕೋಮು ಸೌಹಾರ್ದ ಅನ್ನುವ ಪದಪುಂಜ ಕೂಡ ಇವತ್ತು ವಿರಳವಾಗಿ ಬಳಕೆಗೀಡಾಗುತ್ತಿದೆ. ಒಂದು ಕಾಲದ ಬಹುಪಯೋಗಿ ಪದ ಇದು. ಆದ್ದರಿಂದ,

ಲವ್ ಜಿಹಾದ್‍ಗೂ ದೀರ್ಘಾಯುಷ್ಯವಿದೆ ಎಂದು ಹೇಳಲಾಗದು.

     ಈಗಾಗಲೇ ರಾಷ್ಟ್ರೀಯ ತನಿಖಾ ಆಯೋಗವು (NIA) ಈ ಬಗ್ಗೆ ಷರಾ ಬರೆದಿದೆ. ಅಂತರ್ ಧರ್ಮೀಯ ವಿವಾಹಗಳಲ್ಲಿ ಲವ್ ಮಾತ್ರ ಇದೆ, ಜಿಹಾದ್ ಇಲ್ಲ ಎಂದು ಅದು ಹೇಳಿರುವುದು ಇದನ್ನೇ ಸೂಚಿಸುತ್ತದೆ. ಮಾತ್ರವಲ್ಲ, ಲವ್ ಜಿಹಾದ್ ಅನ್ನು ರಾಜಕೀಯವಾಗಿ ಬಳಸಿಕೊಂಡ ಪಕ್ಷವೇ ಅಧಿಕಾರದಲ್ಲಿರುವಾಗ ಮತ್ತು ಅದರ ಅಧೀನದಲ್ಲೆ  ಈ NIA  ಇರುವಾಗಲೂ ಇಂಥದ್ದೊಂದು ತನಿಖಾ ವರದಿ ತಯಾರಾಗಿದೆ ಅನ್ನುವುದು ಅತ್ಯಂತ ಮಹತ್ವಪೂರ್ಣ. ಇದರಲ್ಲಿ ಎರಡು ಅಂಶಗಳು ಸ್ಪಷ್ಟವಾಗುತ್ತದೆ.

     1. ಲವ್ ಜಿಹಾದ್ ಇದೆ ಎಂಬುದನ್ನು ಸಾಬೀತುಪಡಿಸುವುದು ಬಿಜೆಪಿಯ ಆದ್ಯತಾ ಪಟ್ಟಿಯಲ್ಲಿ ಸೇರಿಲ್ಲ.
     2. ಲವ್ ಜಿಹಾದ್‍ನಿಂದ ಅದು ಏನನ್ನು ಬಯಸಿತ್ತೋ ಅದು ಈಡೇರಿದೆ. ಈಗ ಈ ವಿಷಯ ಅದಕ್ಕೆ ಮುಖ್ಯವಲ್ಲ.

    ಬಹುಶಃ, ಇವೆರಡೂ ಸರಿ ಅನ್ನಿಸುತ್ತದೆ. 2008ರ ಬಳಿಕ ದಿಂದ 2018ರ ನಡುವಿನ ಅವಧಿಯಲ್ಲಾದ ಬೆಳವಣಿಗೆ, ಚರ್ಚೆ, ಥಳಿತ, ರಾಜಕೀಯ ಭಾಷಣಗಳನ್ನು ಅವಲೋಕಿಸಿದರೆ, ಲವ್ ಜಿಹಾದ್ ಬಿಜೆಪಿಗೆ ಏನನ್ನು ಕೊಟ್ಟಿದೆ ಅನ್ನುವುದು ಗೊತ್ತಾಗುತ್ತದೆ. ಈಗ ಅದರ ಕಾವು ಕಡಿಮೆಯಾಗಿದೆ. ಒಂದು ಕಾಲದಲ್ಲಿ ಮುಸ್ಲಿಮ್ ಭಯೋತ್ಪಾದನೆ ಈ ದೇಶದಲ್ಲಿ ಬಹುದೊಡ್ಡ ಚರ್ಚಾ ವಿಷಯವಾಗಿತ್ತು. ಇಂಡಿಯನ್ ಮುಜಾಹಿದೀನ್, ಲಷ್ಕರೆ ತ್ವಯ್ಯಿಬಾ, ಹಿಝ್ಬುಲ್ ಮುಜಾಹಿದೀನ್ ಇತ್ಯಾದಿ ಹೆಸರುಗಳು ಪತ್ರಿಕೆಗಳಲ್ಲಿ ಉಲ್ಲೇಖವಾಗದ ದಿನಗಳೇ ಇದ್ದಿರಲಿಲ್ಲ. ಬಿಜೆಪಿ ಮತ್ತು ಅದರ ಬೆಂಬಲಿಗ ಪರಿವಾರವು ಭಯೋತ್ಪಾದನೆಯನ್ನು ಮುಸ್ಲಿಮರ ಜೊತೆಗಿಟ್ಟು ನೋಡುವುದನ್ನು ಕಾಯಕವನ್ನಾಗಿ ಮಾಡಿಕೊಂಡಿತ್ತು. ‘ಮುಸ್ಲಿಮರೆಲ್ಲ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರೆಲ್ಲ ಮುಸ್ಲಿಮರೇ’ ಎಂದು ಅಡ್ವಾಣಿಯವರು ಹೇಳಿದ್ದೂ ಇವೇ ದಿನಗಳಲ್ಲಿ. ಹಾಗಂತ,

    ಇಂಥದ್ದೊಂದು ಚರ್ಚೆ ಮತ್ತು ಭಯ ಹುಟ್ಟಿಕೊಂಡದ್ದು ಶೂನ್ಯದಿಂದಲ್ಲ. ವಿದೇಶಗಳಲ್ಲಿ ಅದಾಗಲೇ ಭಯೋತ್ಪಾದನೆಯು ಬಹುಮುಖ್ಯ ಚರ್ಚಾ ವಿಷಯವಾಗಿತ್ತು. ಇಸ್ಲಾಮ್, ಮುಸ್ಲಿಮ್, ಜಿಹಾದ್, ಟೆರರಿಸಂಗಳು ಅಲ್ಲಿನ ಮಾಧ್ಯಮಗಳ ಇಷ್ಟದ ಪದಪುಂಜಗಳಾಗಿದ್ದುವು. ಗಡ್ಡ, ಮುಂಡಾಸು, ಪೈಜಾಮ ಧರಿಸಿದ ತಾಲಿಬಾನ್‍ಗಳನ್ನು ಮಾಧ್ಯಮಗಳು ಪ್ರತಿದಿನ ಅಚ್ಚು ಹಾಕುತ್ತಿದ್ದುವು. ಅಫಘಾನಿಸ್ತಾನ ಮಹಿಳೆಯರು ಧರಿಸುವ ಶಟಲ್ ಕಾಕ್ ಬುರ್ಖಾವನ್ನು ತಮಾಷೆಯ ವಸ್ತುವಾಗಿ ಬಿಂಬಿಸಲಾಗುತ್ತಿತ್ತು. ಆ ಬುರ್ಖಾವೇ ಮೂಲಭೂತವಾದಿಯಾಯಿತು. ಆಗ ಭಯೋತ್ಪಾದನೆಯನ್ನೇ ಮುಂದಿಟ್ಟು ಬಿಜೆಪಿ ರಾಜಕೀಯ ತಂತ್ರವನ್ನು ಹೆಣೆಯಿತು. ಮುಸ್ಲಿಮರನ್ನು ಪ್ರಶ್ನೆಯ ಮೊನೆಯನ್ನು ನಿಲ್ಲಿಸುವುದು ಮತ್ತು ಅವರ ದೇಶನಿಷ್ಠೆಯನ್ನು ಪ್ರಶ್ನಾರ್ಹಗೊಳಿಸುವುದನ್ನು ವ್ರತದಂತೆ ನಡೆಸಿಕೊಂಡು ಬಂದಿತು. ಒಂದು ರೀತಿಯಲ್ಲಿ, ಜಾಗತಿಕ ಬೆಳವಣಿಗೆಗಳಿಂದ ಪ್ರೇರಿತಗೊಂಡು ಬಿಜೆಪಿ ಭಾರತದಲ್ಲಿ ಅಳವಡಿಸಿಕೊಂಡ ರಾಜಕೀಯ ತಂತ್ರಗಾರಿಕೆ ಇದು. ಆದ್ದರಿಂದಲೇ, ಲವ್‍ಜಿಹಾದ್ ಎಂಬ ಪದಗುಚ್ಛದ ಹುಟ್ಟಿನ ಬಗ್ಗೆ ಅನುಮಾನ ಮೂಡುವುದು.

      ಎ ಜಿಹಾದ್ ಫಾರ್ ಲವ್ ಎಂಬುದು ಸಂಪೂರ್ಣವಾಗಿ LGBT ಸಮುದಾಯವನ್ನೇ ಕೇಂದ್ರೀಕರಿಸಿ ನಿರ್ಮಿಸಲಾದ ಸಿನಿಮಾ. 2008 ಮೇಯಲ್ಲಿ ನಡೆದ ಟೋಕಿಯೋ ಇಂಟರ್ ನ್ಯಾಶನಲ್ ಲೆಸ್ಬಿಯನ್ ಆ್ಯಂಡ್ ಗೇ ಫಿಲ್ಮ್ ಫೆಸ್ಟಿವಲ್‍ನಲ್ಲಿ ಅದು ಪ್ರದರ್ಶನಗೊಂಡಿರುವುದಕ್ಕೂ ಇದುವೇ ಕಾರಣ. ಬರೇ ಇಷ್ಟೇ ಆಗಿದ್ದರೆ ಎ ಜಿಹಾದ್ ಫಾರ್ ಲವ್ ಹೆಸರಿನ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿರಲಿಲ್ಲ. 2007ರ ಕೊನೆಯಿಂದ 2008ರ  ಕೊನೆಯ ನಡುವೆ ಈ ಸಿನಿಮಾವು ಸುಮಾರು ನೂರರಷ್ಟು  ಫಿಲ್ಮ್ ಫೆಸ್ಟಿವಲ್‍ಗಳಲ್ಲಿ ಪ್ರದರ್ಶನವನ್ನು ಕಂಡಿತು. ಬ್ರಿಟನ್‍ನ ದಿ ಗಾರ್ಡಿಯನ್, ಜರ್ಮನಿಯ ಡೇರ್ ಸ್ಪೈಜಲ್, ಅಮೇರಿಕದ ದಿ ನೇಶನ್, ನ್ಯೂಯಾರ್ಕ್ ಟೈಮ್ಸ್, ಸಿನಿಮಾ ಪೊಲಿಟಿಕಾ, ನ್ಯೂಯಾರ್ಕ್ ಮ್ಯಾಗಸಿನ್, ವಾಲ್‍ಸ್ಟ್ರೀಟ್ ಜರ್ನಲ್, ನ್ಯಾಶನಲ್ ಪಬ್ಲಿಕ್ ರೇಡಿಯೋ, ಬೋಸ್ಟನ್ ಸ್ಲಾಬ್, ಸ್ಯಾನ್ ಫ್ರಾನ್ಸಿಸ್ಕೋ ಕ್ರೋನಿಕಲ್, ಡೈಲಿ ನ್ಯೂಸ್ ಈಜಿಪ್ಟ್, ಫಿಲ್ಮ್ ಜರ್ನಲ್ ಇಂಟರ್ ನ್ಯಾಶನಲ್, ದಿ ಸಂಡೇ ಟೈಮ್ಸ್, ವಾಷಿಂಗ್ಟನ್ ಪೋಸ್ಟ್ ಸೇರಿದಂತೆ ಯುರೋಪಿನ ಬಹುತೇಕ ರಾಷ್ಟ್ರಗಳ ದೈನಿಕಗಳು ಈ ಸಿನಿಮಾದ ಬಗ್ಗೆ ವಿಮರ್ಶೆಗಳನ್ನು ಬರೆದುವು. ಭಾರತದಲ್ಲಿ ಎನ್‍ಡಿಟಿವಿ ಈ ಸಿನಿಮಾವನ್ನು ಪ್ರಸಾರ ಮಾಡುವ ಧೈರ್ಯವನ್ನು ಪ್ರದರ್ಶಿಸಿತು. ಬಹುಶಃ,

     ಒಂದೇ ವರ್ಷದೊಳಗೆ ಎ ಜಿಹಾದ್ ಫಾರ್ ಲವ್ ಸಿನಿಮಾಕ್ಕೆ ದಕ್ಕಿರುವ ಈ ಮಟ್ಟದ ಪ್ರಚಾರವು ‘ಲವ್ ಜಿಹಾದ್’ ಪದದ ಹುಟ್ಟಿಗೆ ಕಾರಣವಾಗಿರಬೇಕೆಂದು ಅನಿಸುತ್ತದೆ. ಪರ್ವೇಝ ಶರ್ಮಾರ ಸಿನಿಮಾದ ಶೀರ್ಷಿಕೆಯಿಂದ ತಮಗೆ ಬೇಕಾದಷ್ಟನ್ನು ಮಾತ್ರ ಪಡೆದುಕೊಂಡ ಇಲ್ಲಿನ ಬಲಪಂಥೀಯ ಚಿಂತಕರು ಅದನ್ನು ರಾಜಕೀಯವಾಗಿ ಬಳಸಿಕೊಳ್ಳಲು ತಂತ್ರ ಹೂಡಿದರು. ಪದೇ ಪದೇ ಲವ್ ಜಿಹಾದ್ ಎಂದು ಹೇಳತೊಡಗಿದರು. ಇದರ ಪ್ರಭಾವ ಎಷ್ಟಾಯಿತೆಂದರೆ, ಕೇರಳದ ಡಿಜಿಪಿ ಪೊನ್ನೊಸೆಯವರ ವರದಿಯನ್ನು ನ್ಯಾಯಾಧೀಶರಾದ ಕೆ.ಟಿ. ಶಂಕರನ್ ಅವರು ತಿರಸ್ಕರಿಸಿದರು. ಕರ್ನಾಟಕದಲ್ಲೂ ಲವ್ ಜಿಹಾದ್ ಭಯ ಆವರಿಸಿಕೊಂಡಿತು. ಹಿಂದೂ ಹೆಣ್ಮಕ್ಕಳು ಮತಾಂತರವಾಗುತ್ತಿರುವುದು ನಿಜ ಎಂದು 2010ರಲ್ಲಿ ಕರ್ನಾಟಕ ಸರಕಾರವೇ ಆತಂಕ ತೋಡಿಕೊಂಡಿತು. 2012ರಲ್ಲಿ ಕೇರಳ ಪೊಲೀಸರು ಲವ್ ಜಿಹಾದ್ ಎಂಬ ಹೆಸರಲ್ಲಿ ಸಂಘಟಿತ ಮತಾಂತರ ಷಡ್ಯಂತ್ರವಿರುವುದನ್ನು ಪುನಃ ನಿರಾಕರಿಸಿದರು. 2014ರಲ್ಲಿ ಉತ್ತರ ಪ್ರದೇಶದ ಪೊಲೀಸರೂ ಇದನ್ನೇ ಹೇಳಿದರು. ತನಿಖೆಗೆಂದು ಅವರು ಎತ್ತಿಕೊಂಡ 4 ಲವ್ ಜಿಹಾದ್ ಪ್ರಕರಣಗಳಲ್ಲಿ ಯಾವುದೂ ಜಿಹಾದ್ ವ್ಯಾಪ್ತಿಯಲ್ಲಿಲ್ಲ ಎಂದರು. 2017ರಲ್ಲಿ ಹಾದಿಯಾ-ಶಫಿನ್ ಜಹಾನ್ ಮದುವೆಯನ್ನು ಅಮಾನ್ಯಗೊಳಿಸುವ ಮೂಲಕ ಕೇರಳ ಹೈಕೋರ್ಟು ಲವ್ ಜಿಹಾದನ್ನು ಮತ್ತೊಮ್ಮೆ ಚರ್ಚಾರ್ಹಗೊಳಿಸಿತು. ಇದೀಗ NIA  ಈ ಎಲ್ಲ ಚರ್ಚೆಯನ್ನೂ ಬೋಗಸ್ ಎಂದು ತಳ್ಳಿ ಹಾಕಿದೆ. ಅಂದಹಾಗೆ, ಈ ಚರ್ಚೆಯನ್ನು ಹುಟ್ಟು ಹಾಕಿದವರ ಅಧೀನದಲ್ಲೇ  ಈ ತನಿಖಾ ಸಂಸ್ಥೆ ಇದೆ ಅನ್ನುವುದು ಇಲ್ಲಿನ ಬಹು ದೊಡ್ಡ ತಮಾಷೆ. ನಿಜವಾಗಿ,

   ಕೋಬ್ರಾ ಪೋಸ್ಟ್ 2015ರಲ್ಲಿ ನಡೆಸಿದ ಸ್ಟಿಂಗ್ ಆಪರೇಶನ್ ನಲ್ಲಿ ಉತ್ತರ ಪ್ರದೇಶದ ಬಿಜೆಪಿ ನಾಯಕರಾದ ಸಂಜಯ್ ಅಗರ್‍ವಾಲ್ ಮತ್ತು ಓಂಕಾರ್ ಸಿಂಗ್‍ರು ಈ ಸತ್ಯವನ್ನು ಬಾಯಿ ಬಿಟ್ಟಿದ್ದರು. ಲವ್ ಜಿಹಾದ್ ಅನ್ನುವುದು ಬಿಜೆಪಿಯ ರಾಜಕೀಯ ತಂತ್ರ ಅನ್ನುವುದು ಆಗಲೇ ಗೊತ್ತಾಗಿತ್ತು. ಈಗ NIA ಯೂ ಅದನ್ನೇ ಹೇಳಿದೆ. ಅಂದಹಾಗೆ,

      ಒಂದು ದಶಕವನ್ನು ಮುಸ್ಲಿಮ್ ಭಯೋತ್ಪಾದನೆಯೊಂದಿಗೆ ಕಳೆದ ಬಿಜೆಪಿ, ಆ ಬಳಿಕದ ಒಂದು ದಶಕವನ್ನು ಲವ್ ಜಿಹಾದ್ ನೊಂದಿಗೆ ಮುಗಿಸಿದೆ. ಮಾತ್ರವಲ್ಲ, ಇವೆರಡರಿಂದ ಏನನ್ನು ಪಡೆಯಬೇಕೋ ಅವೆಲ್ಲವನ್ನೂ ಪಡೆದಿದೆ. ಅದರಾಚೆಗೆ ಏನೂ ಇಲ್ಲ.

No comments:

Post a Comment