Tuesday, December 1, 2015

ಎಲ್‍ಕೆಜಿ ಬಸ್‍ನಿಂದ ಕಂಪೆನಿ ಬಸ್‍ನವರೆಗೆ..

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್
ಇನ್ಫೋಸಿಸ್
ವಿಪ್ರೊ
ಹೆಚ್‍ಸಿಎಲ್ ಟೆಕ್ನಾಲಜೀಸ್
ಟೆಕ್ ಮಹೀಂದ್ರಾ
ಎಸ್ಸಾರ್ ಗ್ರೂಪ್
        ಮುಂತಾದ ಪ್ರಮುಖ ಕಂಪೆನಿಗಳಲ್ಲಿರುವ ಉದ್ಯೋಗಾವಕಾಶಗಳು, ವರ್ಷಂಪ್ರತಿ ಇವು ಪಡೆಯುತ್ತಿರುವ ನಿವ್ವಳ ಲಾಭ ಮತ್ತು ತಮ್ಮಲ್ಲಿನ ಉದ್ಯೋಗಿಗಳಿಗೆ ಈ ಕಂಪೆನಿಗಳು ಕೊಡುತ್ತಿರುವ ವೇತನ.. ಮುಂತಾದುವುಗಳನ್ನು ಲೆಕ್ಕ ಹಾಕಿಕೊಂಡು, ಆ ಉದ್ಯೋಗಿಗಳಲ್ಲಿ ಓರ್ವನಾ/ಳಾಗುವ ಕನಸಿನೊಂದಿಗೆ ಕಲಿಯುತ್ತಿರುವ ಮಗುವಿಗೂ ಈ ಸಮಾಜಕ್ಕೂ ಯಾವ ಬಗೆಯ ಸಂಬಂಧ ಇರಬಹುದು ಅಥವಾ ಬರೇ ಅದಾನಿ, ಬಜಾಜ್, ಆದಿತ್ಯ ಬಿರ್ಲಾ, ಅಂಬಾನಿ, ಎಬಿಸಿ ಗ್ರೂಪ್.. ಇತ್ಯಾದಿಗಳಲ್ಲಿ ಉದ್ಯೋಗಿ ಯಾಗುವುದನ್ನೇ ಗುರಿಯಾಗಿಟ್ಟುಕೊಂಡ ವಿದ್ಯಾರ್ಜನೆಯಿಂದ ಸಮಾಜ ಏನನ್ನು ನಿರೀಕ್ಷಿಸಬಹುದು? ಶಿಕ್ಷಣದ ಗುರಿ ಉದ್ಯೋಗವಷ್ಟೇ ಅಲ್ಲ, ಆಗಬಾರದು ಕೂಡ. ಸಮಾಜದ ಭಾವನೆಗಳಿಗೆ ಸ್ಪಂದಿಸುವ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡುವ ವಿಶಾಲ ಗುಣವನ್ನೂ ಅದು ಹೊಂದಿರಬೇಕು. ಒಂದೆಡೆ, ಅಸಹಿಷ್ಣುತೆಯ ವಾತಾವರಣ ಬಲ ಪಡೆಯುತ್ತಿದೆ. ಇಲ್ಲಿ ಇರಬೇಕಾದವರನ್ನು ಮತ್ತು ದೇಶ ಬಿಟ್ಟು ಹೋಗಬೇಕಾದವರನ್ನು ಪಟ್ಟಿ ಮಾಡಲಾಗುತ್ತಿದೆ. ಇನ್ನೊಂದೆಡೆ, ಈ ಬೆಳವಣಿಗೆಯ ಯಾವ ಹಂಗೂ ಇಲ್ಲದೇ ಭ್ರಷ್ಟಾಚಾರ, ಅತ್ಯಾಚಾರ, ದರೋಡೆಗಳು ಸರಾಗವಾಗಿ ನೆರವೇರುತ್ತಿವೆ. ಬಡತನ, ವೃದ್ಧಾಶ್ರಮ, ರೋಗ-ರುಜಿನಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿವೆ. ಹಾಗಂತ, ಒಂದು ಶಾಲೆಗೆ ಅಥವಾ ಕಾಲೇಜಿಗೆ ನೇರವಾಗಿ ಇವುಗಳೊಂದಿಗೆ ಸಂಬಂಧ ಇಲ್ಲದೇ ಇರಬಹುದು. ಸರಕಾರ ನಿಗದಿಪಡಿಸಿದ ಪಠ್ಯಗಳನ್ನು ತಾವು ಕಲಿಸುತ್ತಿದ್ದೇವೆ ಎಂದು ಅವು ಸಮರ್ಥಿಸಿಕೊಳ್ಳಬಹುದು. ವಿದ್ಯಾರ್ಥಿಯೋರ್ವ ಅತೀ ಹೆಚ್ಚು ಅಂಕ ಪಡೆದು ತೇರ್ಗಡೆಯಾಗುವುದನ್ನೇ ಹೆತ್ತವರು ಬಯಸುತ್ತಾರೆ ಎಂದೂ ಹೇಳಬಹುದು. ಇವೆಲ್ಲ ನಿಜವೇ. ಆದರೆ, ಇದು ಕಲಿಕೆಯ ಸರಿಯಾದ ವಿಧಾನವೇ? ಪಠ್ಯ ಮತ್ತು ರಾಂಕ್ ಗಳಾಚೆಗೆ ಒಂದು ಮಗುವನ್ನು ಎಳೆದು ತರಬೇಕಾದ ಅಗತ್ಯ ಇಲ್ಲವೇ? ಪಠ್ಯಗಳ ಹೊರಗೊಂದು ವಿಶಾಲ ಜಗತ್ತಿದೆ. ಆ ಜಗತ್ತಿನಲ್ಲಿ ಪಠ್ಯಗಳು ಹೇಳದ ಹಸಿವು ಇದೆ, ಕಣ್ಣೀರು ಇದೆ, ಮೋಜು ಇದೆ. ಸಹಿಷ್ಣುತೆಯೂ ಅಸಹಿಷ್ಣುತೆಯೂ ಇದೆ. ನೈತಿಕವೂ ಅನೈತಿಕವೂ ಆದ ಬೆರಗಿನ ಲೋಕವಿದೆ. ಸಾಹಿತ್ಯ ಕೃತಿಗಳಿವೆ. ಬದುಕನ್ನೇ ಅಲುಗಾಡಿಸುವ ಕತೆ-ಕಾದಂಬರಿಗಳಿವೆ.. ಇವುಗಳನ್ನೆಲ್ಲಾ ಗಮನಿಸುವ ಮತ್ತು ಸೂಕ್ಷ್ಮವಾಗಿ ಅವಲೋಕಿಸುವ ಸಂದರ್ಭವನ್ನು ನಮ್ಮ ಕ್ಲಾಸ್ ರೂಂಗಳು ಎಷ್ಟರ ಮಟ್ಟಿಗೆ ಒದಗಿಸುತ್ತಿವೆ? ಈ ಕುರಿತಂತೆ ಏನೆಲ್ಲ ಕಾರ್ಯಕ್ರಮಗಳನ್ನು ನಮ್ಮ ಶಾಲಾ-ಕಾಲೇಜುಗಳು ಇವತ್ತು ಹಮ್ಮಿಕೊಳ್ಳುತ್ತಿವೆ? ಸಮಾಜದ ಅಭಿವೃದ್ಧಿಯ ಬಗ್ಗೆ ಒಂದು ಮಗು ಮಾತಾಡಬೇಕಾದರೆ ಸಾಮಾಜಿಕ ಬದುಕನ್ನು ಅದು ಕಂಡಿರಬೇಕು ಅಥವಾ ಅನುಭವಿಸಿರಬೇಕು. ಹಾಗಂತ, ಹಸಿವನ್ನೇ ಕಾಣದ ವ್ಯಕ್ತಿ ಹಸಿವಿನ ಅಂತರಾತ್ಮದ ಬಗ್ಗೆ ಮಾತಾಡಲಾರ ಎಂದೇನಿಲ್ಲ. ಒಂದೊಮ್ಮೆ, ಹಸಿವನ್ನೇ ಉಂಡು ಬೆಳೆದವನಿಗಿಂತಲೂ ಚೆನ್ನಾಗಿ ಮತ್ತು ಆದ್ರ್ರವಾಗಿ ಮಾತಾಡಲೂ ಆ ವ್ಯಕ್ತಿಯಿಂದ ಸಾಧ್ಯವಾಗ ಬಹುದು. ಅದು ಹೇಗೆಂದರೆ, ಪಠ್ಯಗಳಾಚೆಗೆ ಬಂದು ಸಮಾಜವನ್ನು ನೋಡುವುದರಿಂದ ಮತ್ತು ಅನುಭವಿಸುವುದರಿಂದ. ಆದರೆ, ಇವತ್ತು ರಾಂಕ್ ಮತ್ತು ಉದ್ಯೋಗ ಆಧಾರಿತ ಶಿಕ್ಷಣ ಕ್ರಮಗಳಿಂದಾಗಿ ಬಹುತೇಕ ಎರಡು ಪ್ರಪಂಚಗಳೇ ನಿರ್ಮಾಣವಾದಂತೆ ಕಾಣುತ್ತಿದೆ. ಒಂದು ಗುಂಪು ಸಮಾಜದ ಆಗು-ಹೋಗುಗಳಿಂದ ಸಂಪೂರ್ಣ ದೂರವಿದ್ದುಕೊಂಡು ಬದುಕುತ್ತಿರುವಾಗ ಇನ್ನೊಂದು ಗುಂಪು ಸಮಾಜದ ನೆಮ್ಮದಿಯನ್ನು ಕೆಡಿಸುವಲ್ಲಿ ತೊಡಗಿಸಿಕೊಂಡಿದೆ. ಒಂದು ಗುಂಪಿನ ಎಲ್‍ಕೆಜಿ ಆರಂಭವಾಗುವುದೇ ಶಾಲಾ ಬಸ್‍ನ ಮೂಲಕ. ಕಲಿಕೆಯು ಕೊನೆಗೊಂಡ ಬಳಿಕ ಬದುಕು ಇನ್ನೊಂದು ಬಸ್‍ಗೆ ಬದಲಾಗುತ್ತದೆ. ಅದು ಕಂಪೆನಿಯ ಬಸ್. ದುಬಾರಿ ಫೀಸು, ಹೈಫೈ ಎನ್ನಬಹುದಾದ ಕ್ಯಾಂಪಸ್ಸು, ಕಾಲೇಜು, ಕಲಿಕಾ ಸೌಲಭ್ಯಗಳು.. ಇತ್ಯಾದಿಗಳನ್ನು ಹೊಂದಿರುವ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿಯೋರ್ವ ಹೊರಬರುವಾಗ ದುಡ್ಡಿನ ದೊಡ್ಡದೊಂದು ಮೂಟೆಯನ್ನೇ ಅಲ್ಲಿಗೆ ಕೊಟ್ಟಿರುತ್ತಾನೆ/ಳೆ. ಆತ ಅಲ್ಲಿಂದ ಹೊರ ಬರುವುದೇ ಆ ಮೂಟೆಯನ್ನು ಮರಳಿ ಸಮಾಜದಿಂದ ಪಡೆಯಲಿಕ್ಕಾಗಿ. ಆತ ಸಾಲ ಮಾಡಿರಬಹುದು. ಮನೆ ಅಡವು ಇಟ್ಟಿರಬಹುದು ಅಥವಾ ಕಾಲೇಜಿನ ಬೇಡಿಕೆಯನ್ನು ಪೂರೈಸಲು ಇನ್ನೇನೋ ಮಾಡಿರಬಹುದು. ಅದನ್ನು ಸರಿದೂಗಿಸಬೇಕಾದರೆ ಸಮಾಜದಿಂದ ಕಿತ್ತುಕೊಳ್ಳಲೇಬೇಕು. ತ್ಯಾಗ, ಸೇವೆ ಮುಂತಾದ ಮಾನವೀಯ ಪದಗಳು ಸಂಘರ್ಷಕ್ಕೆ ಒಳಗಾಗುವುದೇ ಇಲ್ಲಿ. ಶಿಕ್ಷಣವನ್ನು ಈ ಸಂಘರ್ಷದಿಂದ ಹೊರ ತಂದು ಸುಲಭಗೊಳಿಸಲು ಏನೇನು ಮಾಡಬಹುದು? ಹಾಗಂತ, ಇಲ್ಲಿನ ಸಮಸ್ಯೆಯನ್ನು ಇಷ್ಟಕ್ಕೇ ಸೀಮಿತಗೊಳಿಸಿ ಅಥವಾ ಈ ಮಟ್ಟಕ್ಕೆ ಸರಳಗೊಳಿಸಿ ವ್ಯಾಖ್ಯಾನಿಸುವುದೂ ತಪ್ಪು. ಸಾಮಾಜಿಕ ಕಳಕಳಿ ಎಂಬುದಕ್ಕೆ ಭಿನ್ನ ಮುಖ ಇದೆ. ವೈದ್ಯನಾದವನಲ್ಲಿ ತ್ಯಾಗ ಮತ್ತು ಜನಸೇವೆಯ ಗುಣ ಇರಬೇಕು ಎಂದು ಒಂದು ಕಡೆ ವಾದಿಸುವಾಗ ಇನ್ನೊಂದು ಕಡೆ, ಆ ತ್ಯಾಗ ಮತ್ತು ಸೇವಾ ಮನೋಭಾವವನ್ನು ಆತ/ಕೆಯಲ್ಲಿ ಬೆಳೆಸಲು ಕಲಿಕಾ ಹಂತದಲ್ಲಿ ಏನೇನು ಪ್ರಯತ್ನಗಳಾಗಿವೆ ಎಂಬುದನ್ನೂ ನೋಡಬೇಕಾಗುತ್ತದೆ. ಇವತ್ತಿನ ಕಲಿಕಾ ನೀತಿ ಎಷ್ಟು ಸ್ವರಕ್ಷಣಾ ರೀತಿಯಲ್ಲಿದೆಯೆಂದರೆ, ಪರೀಕ್ಷೆಯಲ್ಲಿ ಗೆಲ್ಲುವುದನ್ನೇ ಪ್ರಮುಖ ಗುರಿಯಾಗಿಸಲಾಗಿದೆ. ಪಠ್ಯೇತರ ಚಟುವಟಿಕೆಗಳೆಂಬುದು ತೀರಾ ತೀರಾ ನಗಣ್ಯವಾಗುತ್ತಾ ಬರುತ್ತಿದೆ. ಮಕ್ಕಳಲ್ಲಿ ಸೇವಾ ಮನೋಭಾವ ಬೆಳೆಯಬೇಕೆಂದರೆ NSSನಂತಹ ಪ್ರಾಯೋಗಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ಪಾಲುಗೊಳಿಸಬೇಕು. ಸಮಾಜದ ಬದುಕನ್ನು ಹತ್ತಿರದಿಂದ ಕಂಡು, ಅನುಭವಿಸಿ ಸಮಾಜದೊಂದಿಗೆ ಸೇರಿ ಬದುಕುವಂತಹ ವಾತಾವರಣ ನಿರ್ಮಾಣವಾಗಬೇಕು. ರೋಗಿಗಳೊಂದಿಗೆ ಸಂವಾದ ನಡೆಸುವಂತಹ ವಾತಾವರಣ ಬೆಳೆಯಬೇಕು. ವೃದ್ಧಾಶ್ರಮಕ್ಕೆ ಭೇಟಿ, ಆಸ್ಪತ್ರೆ ಭೇಟಿ, ಕೊಳೆಗೇರಿ ಪ್ರಯಾಣ.. ಸಹಿತ ಪಠ್ಯೇತರ ಜಗತ್ತನ್ನು ದರ್ಶಿಸುವ ಸಂದರ್ಭಗಳನ್ನು ಮಕ್ಕಳಿಗೆ ನಿರ್ಮಿಸಿಕೊಡಬೇಕು. ಸರಳ ಜೀವನ ಕ್ರಮವನ್ನು ಪರಿಚಯಿಸಬೇಕು. ದುರಂತ ಏನೆಂದರೆ, ಪಠ್ಯಕ್ಕಿಂತ ಹೊರತಾದ ವಿಷಯಗಳಲ್ಲಿ ಮಕ್ಕಳನ್ನು ತೊಡಗಿಸಲು ಸಮಯವೇ ಸಿಗದಷ್ಟು ಪಠ್ಯಗಳು ಭಾರವಾಗಿ ಬಿಟ್ಟಿವೆ. ವರ್ಷ ಮುಗಿಯುವಾಗ ಪಠ್ಯಗಳನ್ನೇ ಮುಗಿಸಲು ಸಾಧ್ಯವಾಗುತ್ತಿಲ್ಲ ಎಂಬ ದೂರು ಬರುತ್ತಿದೆ. ಅಲ್ಲದೇ ಒಮ್ಮೆ ಸಿಲೆಬಸ್ ಅನ್ನು ಪಾಠ ಮಾಡಿ ಮುಗಿಸಿದರೂ ಮರು ಅವಲೋಕನಕ್ಕೆ ಸಮಯ ವಿೂಸಲಿಡಲೇಬೇಕಾದ ಮತ್ತು ಹೆಚ್ಚು ಅಂಕ ಪಡೆಯುವುದಕ್ಕೆ ಶ್ರಮಿಸಲೇ ಬೇಕಾದ ಒತ್ತಡ ಆಡಳಿತ ಮಂಡಳಿ ಹಾಗೂ ಹೆತ್ತವರ ಕಡೆಯಿಂದ ಸದಾ ಬರುತ್ತದೆ. ಇದರ ಅಡ್ಡ ಪರಿಣಾಮಕ್ಕೆ ಗುರಿಯಾಗುವುದು ನೇರವಾಗಿ ಮಕ್ಕಳು. ಅವು ಪ್ರಾಯೋಗಿಕ ಅನುಭವ ರಹಿತ ಕಲಿಕೆಯೊಂದಿಗೆ ಸಮಾಜಕ್ಕೆ ಹಿಂತಿರುಗುತ್ತವೆ. ಹಾಗೆ ಹಿಂತಿರುಗಿದ ಮಗುವಿನಲ್ಲಿ ನಾವು ತ್ಯಾಗ, ಸೇವಾಗುಣ, ಸಾಮಾಜಿಕ ಕಳಕಳಿ.. ಮುಂತಾದ ಭಾರವನ್ನು ಹೊರಿಸಿದರೆ ಅದನ್ನು ಆ ಮಗು ತಾಳಿಕೊಳ್ಳುವುದು ಹೇಗೆ? ‘ನನ್ನ ಮಗುವಿಗೆ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳೂ ಮುಖ್ಯ, ಆದ್ದರಿಂದ ನನ್ನ ಮಗುವನ್ನು ಸಮಾಜದ ಮಗುವಿಗೆ ಬೆಳೆಸಬೇಕು’ ಎಂದು ಶಾಲಾ ಶಿಕ್ಷಕರೊಂದಿಗೆ ಹೇಳುವ ಪ್ರಯತ್ನವನ್ನು ಎಷ್ಟು ಹೆತ್ತವರು ಇವತ್ತು ಮಾಡಬಲ್ಲರು? ಗ್ರಾವಿೂಣ ಸೇವೆ ಮಾಡಲು ವೈದ್ಯರು ಒಪ್ಪುತ್ತಿಲ್ಲ ಎಂದು ಸರಕಾರ ಒಂದು ಕಡೆ ಆರೋಪಿಸುತ್ತಿದೆ. ಸರಕಾರ ಹೇಳಿದ ದಂಡ ಪಾವತಿಸಿ ವೈದ್ಯರು ಸರಕಾರದ ಹಂಗಿನಿಂದ ಹೊರಬರಲು ಮುಂದಾಗುತ್ತಿದ್ದಾರೆ ಎಂಬ ಆರೋಪವೂ ಸರಕಾರದ್ದೇ. ನಿಜವಾಗಿ, ಇದರಲ್ಲಿ ವೈದ್ಯರಷ್ಟೇ ಆರೋಪಿಗಳಲ್ಲ. ನಮ್ಮ ಕಲಿಕೆಯೂ ಒಂದು ಆರೋಪಿ. ನಾವು ಕಲಿಸಿದ್ದೇ ವೇತನದ ಆಧಾರದಲ್ಲಿ. ಸಮಾಜದ ಅಭಿವೃದ್ಧಿ, ಸಾಮಾಜಿಕ ಕಳಕಳಿ, ಜನಸೇವೆ ಮುಂತಾದ ಪದಗಳನ್ನೇ ಕಲಿಕಾ ಹಂತದಲ್ಲಿ ಕಳಚಿಟ್ಟು, ಬರೇ ಉದ್ಯೋಗಾಧಾರಿತ ಶಿಕ್ಷಣಕ್ಕೆ ಒತ್ತುಕೊಟ್ಟರೆ ಆ ವಿದ್ಯಾರ್ಥಿ ಯಾಕೆ ಗ್ರಾವಿೂಣ ಸೇವೆ ಮಾಡುತ್ತಾನೆ? ಸೇವೆ ಎಂಬ ಪದಕ್ಕೆ ಮಹತ್ವ ಬರುವುದು ಸೇವೆಯ ನಿಜ ರುಚಿಯನ್ನು ಅನುಭವಿಸಿದಾಗ ಅಥವಾ ಅಂಥವುಗಳಿಂದ ಪ್ರೇರಣೆ ಪಡೆದಾಗ. ಕಲಿಕಾ ಹಂತದಲ್ಲಿ ಇಂಥ ಪ್ರಾಯೋಗಿಕ ಕ್ರಮಗಳನ್ನು ಕೈಗೊಳ್ಳಲು ಶಿಕ್ಷಣ ಸಂಸ್ಥೆಗಳಿಗೆ ಸಾಧ್ಯವಾದಾಗ ಮಾತ್ರ ಇಂಥ ಆರೋಪಗಳು ಗಂಭೀರ ಅನ್ನಿಸಿಕೊಳ್ಳುತ್ತವೆ.
      ನಿಜವಾಗಿ, ಶಾಲಾ ಕೊಠಡಿಯೊಳಗೆ ಮಕ್ಕಳು ಕಲಿಯುತ್ತಿರುವಾಗ ಹೊರಗೆ ನೂರಾರು ಬಗೆಯ ಗೊಂದಲಗಳು ಸದ್ದು ಮಾಡುತ್ತಿರುತ್ತವೆ. ಅವು ಅಸಹಿಷ್ಣುತೆ ಇರಬಹುದು, ಹಸಿವು ಇರಬಹುದು, ಆಹಾರ ಕ್ರಮ ಇರಬಹುದು ಅಥವಾ ಇನ್ನಿತರ ಹತ್ತಾರು ಸಾಮಾಜಿಕ ವಿಷಯಗಳು ಇರಬಹುದು. ಪಠ್ಯಗಳ ಮಧ್ಯೆ ಇಂಥ ವಿಷಯಗಳನ್ನು ಎತ್ತಿಕೊಂಡು ಮಕ್ಕಳ ಮಧ್ಯೆ ಚರ್ಚೆಯನ್ನು ಹಮ್ಮಿಕೊಂಡರೆ ಮಕ್ಕಳಿಗೆ ಸಮಾಜದ ತುಡಿತಗಳು ಗೊತ್ತಾಗಬಹುದು. ಹೆಣ್ಣು ಶಿಶು ಹತ್ಯೆಯು ಸಾಮಾಜಿಕ ವಿಷಯ ಆಗಿರುವ ಹೊತ್ತಿನಲ್ಲಿ ಅದನ್ನು ಮಕ್ಕಳ ಇಶ್ಶೂ ಆಗಿಸುವ ಶಾಲಾ ಕೊಠಡಿಗಳು ತಯಾರಾಗಬೇಕು. ಅತ್ಯಾಚಾರ ಸಹಜವೆಂಬಂತಹ ವಾತಾವರಣ ಉಂಟಾಗುವಾಗ, ಧರ್ಮದ ಕಾರಣಕ್ಕಾಗಿ ಹಿಂಸೆ ಭುಗಿಲೇಳುವಾಗ, ವೃದ್ಧರನ್ನು ಅನಾಥಾಲಯಕ್ಕೆ ಅಟ್ಟುವಾಗ, ಹಸಿವಿನಿಂದಾಗಿ ಸಾವು ಸಂಭವಿಸುವಾಗ.. ಹೀಗೆ ಸಮಾಜದ ಸಮಸ್ಯೆ ಮತ್ತು ಸಂಕಷ್ಟಗಳು ಶಾಲಾ ಕೊಠಡಿಯೊಳಗಿನ ಸಮಸ್ಯೆಗಳೂ ಆದಾಗ ಮಕ್ಕಳೊಳಗೆ ಒಂದು ಬಗೆಯ ಪ್ರಜ್ಞಾವಂತಿಕೆ ಬೆಳೆಯಬಹುದು. ತನಗೂ ಅವುಗಳಿಗೂ ಸಂಬಂಧ ಇದೆ ಎಂಬ ಮನೋಭಾವ ಉಂಟಾಗಬಹುದು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ದೊಡ್ಡ ಮಟ್ಟದಲ್ಲಿ ಯುವ ಸಮೂಹ ಬೀದಿಗಿಳಿದಿತ್ತು. ಹಲವಾರು ಕ್ರಾಂತಿಗಳ ಹಿಂದೆ ಯುವ ಸಮೂಹದ ಪಾತ್ರ ಅನನ್ಯವಾಗಿರುವುದೂ ಎಲ್ಲರಿಗೂ ಗೊತ್ತಿದೆ. ಶಾಲೆ ಎಂದರೆ ಕಲಿಕೆಯಷ್ಟೇ ಅಲ್ಲ, ಅದು ನಾಯಕತ್ವವನ್ನೂ ಬೆಳೆಸಬೇಕು. ಸಾಮಾಜಿಕ ಕಳಕಳಿಯನ್ನೂ ಉಂಟು ಮಾಡಬೇಕು. ತ್ಯಾಗ, ಸಹಿಷ್ಣುತೆಯನ್ನೂ ವಿದ್ಯಾರ್ಥಿಗಳಲ್ಲಿ ಹುಟ್ಟಿಸಬೇಕು. ಕ್ಯಾಂಪಸ್‍ನಿಂದ ಹೊರಬರುವ ವಿದ್ಯಾರ್ಥಿಯಿಂದ ಸರ್ಟಿಫಿಕೇಟನ್ನಷ್ಟೇ ಸಮಾಜ ನಿರೀಕ್ಷಿಸುವುದಲ್ಲ. ಓರ್ವ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯನ್ನೂ ನಿರೀಕ್ಷಿಸುತ್ತದೆ. ಇವತ್ತಿನ ದಿನಗಳಲ್ಲಂತೂ ಇಂಥ ನಿರೀಕ್ಷೆಗೆ ಸಾಕಷ್ಟು ಮಹತ್ವವಿದೆ. ಒಂದು ಕಡೆ ನೈತಿಕ ಪತನ ಮತ್ತು ಮತ್ತೊಂದು ಕಡೆ ಅಸಹಿಷ್ಣುತೆಯ ವಾತಾವರಣದ ಮಧ್ಯೆ ಸರ್ಟಿಫಿಕೇಟ್ ಹಿಡಿದ ಮಕ್ಕಳು ಕ್ಯಾಂಪಸ್‍ನಿಂದ ಸಮಾಜಕ್ಕೆ ಇಳಿದು ಬರುತ್ತಿದ್ದಾರೆ. ಅವರು ಈ ಎಲ್ಲವುಗಳ ವಿರುದ್ಧ ಹೋರಾಟಕ್ಕೆ ನಾಯಕತ್ವವನ್ನು ನೀಡಬೇಕೆಂದು ಸಮಾಜ ಖಂಡಿತ ಬಯಸುತ್ತದೆ. ಇದು ಸಾಧ್ಯವಾಗಬೇಕಾದರೆ ಕಲಿಕೆಯನ್ನು ಸಮಾಜಮುಖಿ ಗೊಳಿಸಬೇಕು. ಅಂಬಾನಿ, ಅದಾನಿ, ಇನ್ಫೋಸಿಸ್, ವಿಪ್ರೊ ಗಳಾಚೆಗೆ ಇರುವ ಸಾಮಾನ್ಯ ಜನರೊಂದಿಗೆ ಸಂಬಂಧ ಇಟ್ಟುಕೊಳ್ಳುವ ಮತ್ತು ಆ ಜನರಿಗೆ ಸ್ಪಂದಿಸುವ ಮನೋಭಾವವನ್ನು ಕಲಿಕೆಯೊಂದಿಗೆ ಜೋಡಿಸಬೇಕು. ಸರ್ಟಿಫಿಕೇಟ್ ಪಡೆದ ಮಗು ಎಸ್ಸಾರ್‍ಗೆ ಹೋದರೂ ಆ್ಯಪಲ್‍ಗೆ ಸೇರಿದರೂ ಸಮಾಜಮುಖಿಯಾಗುವಂತೆ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಪಾಲುದಾರನಾಗುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ,
      ಎಲ್‍ಕೆಜಿಯ ಬಸ್‍ನಿಂದ ಕಂಪೆನಿ ಬಸ್‍ಗೆ ಸ್ಥಾನಾಂತರವಾದನು/ಳು ಎಂಬಲ್ಲಿಗೆ ಒಂದು ಮಗುವಿನ ಬದುಕು ಕೊನೆಗೊಳ್ಳಬಹುದು.


No comments:

Post a Comment