ಜೋಳಿ ಚಿರಯತ್ |
ನನ್ನ ಹೆಸರಿನಲ್ಲಿದ್ದ ಫೋಲ್ಡರ್ ಕಾಣಿಸಿತು. ಅವರ ಮುಖದಲ್ಲಿ ಒಂದು ಬಗೆಯ ಕುತೂಹಲ. ಕ್ಲಿಕ್ ಮಾಡಿದರು.Oppose the worship of the books (ಪುಸ್ತಕ ಪೂಜೆಗೆ ವಿರೋಧ) ಎಂಬ ಶೀರ್ಷಿಕೆಯಲ್ಲಿ ಮಾವೋ ಬರೆದಿರುವ ಲೇಖನ ಅವರ ಕಣ್ಣಿಗೆ ಬಿತ್ತು. ತೆರೆದರು. ನನ್ನತ್ತ ವ್ಯಂಗ್ಯಭರಿತವಾಗಿ ದೃಷ್ಟಿ ಹಾಯಿಸಿದರು. ಏನನ್ನೋ ಪತ್ತೆ ಹಚ್ಚಿದ ಉತ್ಸಾಹದೊಂದಿಗೆ ಅವರು ಪ್ರಶ್ನಿಸಿದರು -
‘ಮಾವೋವಾದಿಯಲ್ಲ ಎಂದಲ್ಲವೇ ನೀವು ಈ ವರೆಗೆ ನಮ್ಮೊಂದಿಗೆ ವಾದಿಸಿದ್ದು? ಹಾಗಾದರೆ ಇದೇನು?'
ನಾನು ಮರು ಪ್ರಶ್ನಿಸಿದೆ, ‘ಏನು?' ಅವರೂ ಬಿಡಲಿಲ್ಲ - ‘ನೀವೇ ಹೇಳಿ?’ ನಾನು ಹೇಳಿದೆ, ‘ಒಂದು ಲೇಖನ’. ಅವರು ಮುಂದುವರಿಸಿದರು, ‘ನೀವಿದನ್ನು ಯಾಕೆ ಓದುತ್ತೀರಿ?’ ನಾನಂದೆ, ‘ಯಾಕೆ, ಓದಬಾರದೇ? ಮಾವೋನ ಕೃತಿಗಳನ್ನು ದೇಶದಲ್ಲಿ ನಿಷೇಧಿಸಲಾಗಿದೆಯೇ? ಅಲ್ಲದೇ ಇಂಟರ್‍ನೆಟ್‍ನಲ್ಲಿ ಈ ಲೇಖನ ಎಲ್ಲರಿಗೂ ಲಭ್ಯವಿದೆ. ಇದು ಎಂದಲ್ಲ, ಮಾವೋನ ಧಾರಾಳ ಪುಸ್ತಕಗಳನ್ನು ಇಂಟರ್‍ನೆಟ್‍ನಲ್ಲಿ ಓದಬಹುದು. ಹೀಗಿರುವಾಗ..!’ ನನ್ನ ಈ ಪ್ರಶ್ನೆಗೆ ಅವರು ನೇರ ಉತ್ತರವನ್ನು ನೀಡಲಿಲ್ಲ. ಅದರ ಬದಲು, ‘ನೀವೇಕೆ ಇವೆಲ್ಲವನ್ನೂ ಓದುತ್ತೀರಿ? ಅಲ್ಲದೇ ನೀವು ದಲಿತರ ಸಮಸ್ಯೆಗಳು ಮತ್ತು ಆದಿವಾಸಿಗಳ ಹೋರಾಟಗಳನ್ನು ಬೆಂಬಲಿಸುತ್ತಿದ್ದೀರಿ. ಅವರಿಗೆ ಬೆಂಬಲವಾಗಿ ಚಳವಳಿಯಲ್ಲಿ ಭಾಗವಹಿಸುತ್ತೀರಿ. ಮಾತಾಡುತ್ತೀರಿ. ಇವೆಲ್ಲ ಏನು..’ ಎಂದು ಪ್ರಶ್ನಿಸಿದರು. ಅವರ ಈ ಪ್ರಶ್ನೆಯಲ್ಲಿಯೇ ದಲಿತರು, ಆದಿವಾಸಿಗಳ ಹಕ್ಕುಗಳಿಗಾಗಿ ದನಿಯೆತ್ತುವುದು ಮಾವೋ ವಾದ ಎಂಬ ಸೂಚನೆ ಇತ್ತು. ನನಗದು ಹಿಡಿಸಲಿಲ್ಲ. ಆದಿವಾಸಿಗಳು ದಲಿತರು ಅಥವಾ ಮರ್ದಿತ ಜನಸಮೂಹದ ಹಕ್ಕುಗಳಿಗಾಗಿ ಹೋರಾಡುವುದು ಯಾಕೆ ಮಾವೋವಾದ ಆಗಬೇಕು? ಮನುಷ್ಯರ ಸಂಕಟಗಳನ್ನೂ ನಾವೇಕೆ ಎಡ-ಬಲ, ಆ ವಾದ- ಈ ವಾದ ಎಂದು ವಿಭಜಿಸಬೇಕು? ಈ ವಾದಗಳ ಹೊರತಾಗಿ ಚಳವಳಿಗಳನ್ನು ಕಟ್ಟಲಾಗದೇ, ನೋಡಬಾರದೇ.. ಎಂದೆಲ್ಲಾ ತೋಚಿತು. ನಾನು ಪ್ರತಿಭಟನಾ ದನಿಯಲ್ಲಿ ಹೇಳಿದೆ,
ಬೀದಿಗಿಳಿದು ಸದಾ ಹೋರಾಟ ನಿರತರಾಗಬೇಕೆಂದು ಮನುಷ್ಯರಾರೂ ಬಯಸುವುದಿಲ್ಲ. ಅದರಲ್ಲಿ ಒಂದು ಬಗೆಯ ರಿಸ್ಕ್ ಇದೆ. ಜೀವ ಭಯ, ಬಂಧನ ಭೀತಿಗಳಿರುತ್ತವೆ. ಆರಾಮ ಜೀವಿಯಾದ ಮನುಷ್ಯ ಇವೆಲ್ಲವನ್ನು ಬರಿದೇ ಬಯಸುತ್ತಾನೆಂದು ಹೇಳುವುದು ತಪ್ಪಾಗುತ್ತದೆ. ಆದ್ದರಿಂದ ಮನುಷ್ಯ ಬೀದಿಗಿಳಿಯುತ್ತಾನೆಂದಾದರೆ ಅದೇಕೆಂದು ನೀವೇಕೆ ಆಲೋಚಿಸುತ್ತಿಲ್ಲ? ಹೋರಾಟಗಾರರಲ್ಲಿ ಪ್ರಶ್ನಿಸುವುದಕ್ಕಿಂತ ಹೋರಾಟಗಳೇಕೆ ರೂಪ ತಾಳುತ್ತವೆ ಎಂದೂ ಆಲೋಚಿಸಬಹುದಲ್ಲವೇ? ಸಮಯವನ್ನು ಕೊಲ್ಲುವುದಕ್ಕಾಗಿ ನಾನು ಹೋರಾಟ ನಿರತಳಾಗಿರುವೆನೆಂಬುದು ನಿಮ್ಮ ಅಭಿಪ್ರಾಯವೇ? ನಾನು ಹೋರಾಡುತ್ತಿರುವುದು ಜನರ ಹಕ್ಕುಗಳಿಗಾಗಿ. ಅದರಲ್ಲಿ ಮಾವೋವಾದವನ್ನೋ ಇನ್ನೇನನ್ನೋ ಹುಡುಕುವುದು ನಿಮ್ಮ ಸಮಸ್ಯೆ. ನಾನು ಅವರ ಹಕ್ಕುಗಳ ಪರ ಯಾವತ್ತೂ ನಿಲ್ಲುವೆ. ನೀವು ನನ್ನನ್ನು ಹೇಗೆ ನೋಡಿದರೂ ಸರಿ. ನೀವು ದಲಿತರು - ಆದಿವಾಸಿಗಳು ಎಂದು ಹೇಳದಿರಲ್ಲ, ಅವರು ಎಲ್ಲ ಕಾಲಗಳಲ್ಲೂ ಅದೇ ಸ್ಥಿತಿಯಲ್ಲಿ ಯಾಕಿದ್ದಾರೆ ಎಂದು ಆಲೋಚಿಸಿದ್ದೀರಾ? ಸ್ವಾತಂತ್ರ್ಯ ಸಿಕ್ಕಿ 68 ವರ್ಷಗಳಾದರೂ ಅವರ ಸ್ಥಿತಿಯಲ್ಲಿ ಸುಧಾರಣೆಯಾಗದೇ ಇರುವುದು ಯಾತಕ್ಕಾಗಿ? ಹೀಗಿರುವಾಗ ಸಮಾಜಕ್ಕೆ ಹೊಣೆಗಾರಿಕೆಗಳಿಲ್ಲವೇ? ಆ ಹೊಣೆಗಾರಿಕೆಯ ಪ್ರಜ್ಞೆಯಿಂದ ಮಾತಾಡುವುದು ಮಾವೋವಾದವೇ... ?’
2015 ಜನವರಿ 29ರಂದು 6 ಮಂದಿ ಪೊಲೀಸರ ತಂಡ ತನ್ನ ಮನೆಯ ಮೇಲೆ ನಡೆಸಿದ ದಿಢೀರ್ ದಾಳಿ, ಪರಿಶೀಲನೆ, ಪ್ರಶ್ನಾವಳಿಗಳ ಅನುಭವಗಳನ್ನು ಮಾನವ ಹಕ್ಕು ಹೋರಾಟಗಾರ್ತಿ ಜೋಳಿ ಚಿರಯತ್ ಹೀಗೆ ಹೇಳುತ್ತಾ ಹೋಗುತ್ತಾರೆ..
ಜನವರಿ 29ರಂದು ಸಂಜೆ ಹೊರಗೆ ಹೋಗಿದ್ದ ನಾನು ಮರಳಿ ಬರುವಾಗ ಮನೆಯ ಎದುರು ಪೊಲೀಸರಿದ್ದರು. ಅವರಲ್ಲಿ ಓರ್ವರು ಮಹಿಳಾ ಪೇದೆ. ‘ಮನೆ ಪರಿಶೀಲನೆ ನಡೆಸಬೇಕಿದೆ’ ಎಂದರು. ನಾನು ಒಮ್ಮೆ ಅವಾಕ್ಕಾದೆ. ಪರಿಶೀಲನೆ ನಡೆಸುವಂಥದ್ದು ಮನೆಯೊಳಗೆ ಏನಿದೆ ಅಂದುಕೊಂಡೆ. ಆದರೂ ‘ಸರ್ಚ್ ವಾರಂಟ್ ಇದೆಯಾ’ ಎಂದು ಪ್ರಶ್ನಿಸಿದೆ. ‘ಓಹ್, ಇದು ಮೇಲಿನವರ ನಿರ್ದೇಶನ’ ಎಂದು ಹೇಳುತ್ತಾ ನನ್ನ ಹಿಂದೆಯೇ ಅವರು ಮನೆಯೊಳಗೆ ಸೇರಿಕೊಂಡರು. ಮನೆಯಂತೂ ಅಸ್ತವ್ಯಸ್ತವಾಗಿತ್ತು. ಒಂದಷ್ಟು ಮುಜುಗರವೂ ಆಯಿತು. ಕುಳಿತುಕೊಳ್ಳಿ ಎಂದು ನಾನು ಹೇಳುತ್ತಿರುವಂತೆಯೇ, ‘ಮ್ಯಾಡಂ ನಿಮ್ಮ ಮೊಬೈಲ್ ಒಮ್ಮೆ ಕೊಡಿ’ ಎಂದು ನನ್ನ ಕೈಯಲ್ಲಿದ್ದ ಮೊಬೈಲನ್ನು ಪಡೆದುಕೊಂಡರು. ನನ್ನೊಳಗಿನ ಗೊಂದಲದಿಂದಾಗಿ ಪ್ರತಿಭಟಿಸುವ ಪ್ರಜ್ಞೆಯೂ ಕ್ಷಣ ಸ್ಥಗಿತಗೊಂಡಿತ್ತು. ನಿಜವಾಗಿ, ಅದು ನನ್ನ ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ನಡೆಸಿದ ನೇರ ದಾಳಿ. ‘ಯಾಕೆ ಪೋನ್ ಪಡೆದುಕೊಂಡಿರಿ' ಎಂದು ಪ್ರಶ್ನಿಸಿದೆ. ‘ನೋಡಲು' ಎಂಬ ಸಾಮಾನ್ಯ ಉತ್ತರ. ‘ಅದು ನನ್ನ ವೈಯಕ್ತಿಕ ಪೋನ್. ನಿಮ್ಮ ಕ್ರಮ ಸಾಧುವೇ..’ ಎಂದು ಮರು ಪ್ರಶ್ನಿಸಿದೆ. ಉತ್ತರವಿಲ್ಲ. ಅದರ ಬದಲು ಮೊಬೈಲ್ ಪರಿಶೀಲನೆಯಲ್ಲಿ ಅವರು ಮಗ್ನರಾದರು. ಹೊರಹೋದ ಮತ್ತು ಒಳಬಂದ ಕರೆಗಳನ್ನು ಪರಿಶೀಲಿಸತೊಡಗಿದರು. ನನ್ನ ಕಾಂಟಾಕ್ಟ್ಸ್ ಗಳನ್ನು ತಪಾಸಿಸಿದರು. ಕೆಲವು ನಂಬರ್ ಮತ್ತು ಹೆಸರುಗಳನ್ನು ಬರೆದು ಕೊಂಡರು. ನನ್ನೊಳಗೆ ಸಂಘರ್ಷವೊಂದು ನಡೆಯುತ್ತಿತ್ತು. ನನ್ನ ಬಗ್ಗೆ ಇಂಟೆಲಿಜೆನ್ಸ್ ವಿಭಾಗವು ಏನೆಂದು ವರದಿ ಕೊಟ್ಟಿರಬಹುದು? ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿ ಎಂದಿರಬಹುದೇ? ಮಾವೋವಾದಿ, ಉಗ್ರವಾದಿ.. ಏನಿರಬಹುದು? ಆ ವರದಿಯ ಆಧಾರದಲ್ಲೇ ಈ ಪರಿಶೀಲನೆ ನಡೆಯುತ್ತಿರಬಹುದಲ್ಲವೇ?
ಓರ್ವ ನನ್ನನ್ನು ಎವೆಯಿಕ್ಕದೇ ನೋಡುತ್ತಿದ್ದ. ಬಹುಶಃ ಆ ತಂಡದ ಮನಃಶಾಸ್ತ್ರಜ್ಞನಿರಬೇಕು. ನನ್ನಲ್ಲಾಗುವ ಭಾವನೆಗಳ ಏರಿಳಿತಗಳನ್ನು ಓದುವ ಪ್ರಯತ್ನ ನಡೆಸುತ್ತಿರಬಹುದು. ನಾನೂ ಆತನನ್ನು ಅದೇ ರೀತಿಯಲ್ಲಿ ನೋಡಿದೆ. ಇದರ ಮಧ್ಯೆಯೇ ಅವರು, ‘ನಿಮಗೆ ಎಷ್ಟು ಮಾವೋವಾದಿಗಳ ಪರಿಚಯ ಇದೆ’ ಎಂದು ಪ್ರಶ್ನಿಸಿದರು. ನನಗೆ ನಗು ಬಂತು. ‘ಯಾರೂ ಕೂಡ ಈ ವರೆಗೆ ನಾನು ಮಾವೋವಾದಿ ಎಂದು ಹೇಳಿಕೊಂಡು ತಮ್ಮನ್ನು ಪರಿಚಯ ಮಾಡಿಕೊಂಡಿಲ್ಲ. ಹಾಗೆಯೇ, ಬಿಜೆಪಿಯೋ ಮಾವೋವಾದಿಯೋ ಕಾಂಗ್ರೆಸ್ಸೋ ಕಮ್ಯುನಿಸ್ಟೋ ಎಂದು ನೋಡಿ ಕೊಂಡು ನಾನು ಗೆಳೆತನವನ್ನೂ ಬೆಳೆಸಿಲ್ಲ. ನನ್ನ ಸಂಪರ್ಕಕ್ಕೆ ಸಿಕ್ಕವರೆಲ್ಲ ಮನುಷ್ಯರು..’ ಎಂದೆ. ಮಾವೋವಾದಿಗಳನ್ನು ಸಂಪರ್ಕಿಸುವುದಕ್ಕಾಗಿಯೇ ವಿೂಸಲಾಗಿರುವ ಮೊಬೈಲ್ ಇದೆಯಾ ಎಂದು ತುಸು ಕುಚೋದ್ಯದಿಂದಲೇ ಪ್ರಶ್ನಿಸಿದರು. ನನ್ನಲ್ಲಿ ಇನ್ನೊಂದು ಮೊಬೈಲ್ ಇತ್ತು. ಅದನ್ನೂ ಕೊಟ್ಟೆ. ಅದರಿಂದಲೂ ಕೆಲವು ನಂಬರ್‍ಗಳನ್ನು ಬರೆದಿಟ್ಟುಕೊಂಡರು. ‘ನಿಮಗೇಕೆ ವೈಫೈ, ಕಂಪ್ಯೂ ಟರ್, ಪ್ರಿಂಟರ್’ ಎಂದೆಲ್ಲಾ ಪ್ರಶ್ನಿಸಿದರು. ಅಸಂಬದ್ಧ ಪ್ರಶ್ನೆ. ಒಂದು ನಗರವೇ ವೈಫೈ ಆಗಲು ತೀರ್ಮಾನಿಸಿರುವಾಗ ನಿಮಗೇಕೆ ವೈಫೈ ಎಂದು ಪ್ರಶ್ನಿಸುವುದಕ್ಕೆ ಏನರ್ಥವಿದೆ? ಪ್ರಿಂಟರ್‍ನ ಬಗ್ಗೆಯೂ ಅನುಮಾನ. ಈ ಮಧ್ಯೆ ನನ್ನ ಫೇಸ್‍ಬುಕ್ ತೆರೆಯುವಂತೆ ಕೇಳಿಕೊಂಡರು. ನನ್ನ ಜಿ ಮೇಲ್ ಅನ್ನು ತೆರೆದರು. ನನ್ನ ಮೊಬೈಲ್, ಕಂಪ್ಯೂಟರ್, ಜಿ ಮೇಲ್, ಫೇಸ್‍ಬುಕ್ ಸಹಿತ ಎಲ್ಲವೂ ಒಂದೊಂದಾಗಿ ಅವರ ಪಾಲಾಗತೊಡಗಿದುವು. ನಾನು ನಿಂತುಕೊಂಡೇ ಇದ್ದುದನ್ನು ನೋಡಿ ಅವರಲ್ಲೊಬ್ಬ ‘ಕುಳಿತುಕೊಳ್ಳಿ' ಎಂದು ಕುರ್ಚಿಯನ್ನು ತೋರಿಸಿದ. ನನ್ನ ಮನೆಯೊಳಗೇ ನಾನು ಅತಿಥಿ. ನನ್ನ ಮನೆ, ನನ್ನ ಈಮೇಲ್, ನನ್ನ ಮೊಬೈಲು, ನನ್ನ, ನನ್ನ.. ಎಲ್ಲವೂ ಅನ್ಯರ ಪಾಲಾದ ಅನುಭವ. ವೈಯಕ್ತಿಕ ಸ್ವಾತಂತ್ರ್ಯ ಅಂದರೇನು? ಖಾಕಿದಾರಿಗಳು ಪ್ರಶ್ನಿಸಿದರೆ ಮುಗಿಯುವ ಈ ಸ್ವಾತಂತ್ರ್ಯಕ್ಕಾಗಿ ಯಾಕೆ ಹೆಮ್ಮೆ ಪಡಬೇಕು? ಟ್ಯೂಶನ್‍ಗೆ ತೆರಳುವಾಗ, ‘ನಾನು ತುಸು ತಡವಾಗಿ ಬರುವೆ' ಎಂದು ಮಗ ಹೇಳಿದ್ದ. ಅವನಾದರೂ ಬಂದು ಕಾಲಿಂಗ್ ಬೆಲ್ ಒತ್ತಬಾರದೇ ಎಂದು ಆಸೆಪಟ್ಟೆ. ಮನೆಯೊಳಗಿನ ವಾತಾವರಣವು ನನ್ನನ್ನು ಕಟ್ಟಿ ಹಾಕಿದಂತಿತ್ತು. ಈ ಮಧ್ಯೆ ಪುಸ್ತಕಗಳಿರುವ ಕಪಾಟನ್ನು ಪರಿಶೀಲಿಸಲು ಓರ್ವರು ಪ್ರಾರಂಭಿಸಿದರು. ಅವರಿಗೆ ಬೇಕಾದ ಪುಸ್ತಕಗಳು ಸಿಕ್ಕದ್ದರಿಂದಲೋ ಏನೋ ಬೇರೆಲ್ಲಾದರೂ ಪುಸ್ತಕಗಳು ಇವೆಯಾ ಎಂದು ಪ್ರಶ್ನಿಸಿದರು. ನನ್ನ ಬೆಡ್‍ರೂಮ್‍ನಲ್ಲಿರುವ ಪುಟ್ಟ ಕಪಾಟನ್ನು ತೋರಿಸಿದೆ. ಬೆಡ್‍ರೂಮ್ ಎಷ್ಟು ಅಸ್ತವ್ಯಸ್ತವಾಗಿತ್ತು ಎಂದರೆ, ನನಗೇ ಅದರೊಳಗೆ ಹೋಗಲು ಮುಜುಗರವಾಯಿತು. ಇದರ ನಡುವೆಯೇ ನನ್ನ ಮೊಬೈಲ್ ವಿವರಗಳನ್ನು ಪರಿಶೀಲಿಸುವ ಮತ್ತು ಪ್ರಶ್ನಿಸುವ ಪ್ರಕ್ರಿಯೆ ನಡೆಯುತ್ತಲೇ ಇತ್ತು. ಎಂದೋ ಬಂದ ಸಂದೇಶವನ್ನು ಎತ್ತಿಕೊಂಡು ನನ್ನಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಒಂದು ವಿೂಟಿಂಗ್ ನಡೆಯುವ ಬಗ್ಗೆ ಬಂದಿರುವ ಎಸ್.ಎಂ.ಎಸ್. ಅನ್ನು ತೋರಿಸಿ ಆ ಸಭೆಯ ಅಜೆಂಡ ಏನಾಗಿತ್ತು ಎಂದು ಪ್ರಶ್ನಿಸಿದರು. ನಿಜವಾಗಿ, ಆ ಸಭೆಗೆ ನಾನು ಹೋಗಿಯೇ ಇರಲಿಲ್ಲ. ಈ ಮಧ್ಯೆ ನನ್ನ ಬೆಡ್‍ರೂಮ್‍ನಿಂದ ನೋಟೀಸ್‍ಗಳು, ಕಾಗದಗಳು ಹೊರಗೆ ಬರುತ್ತಿದ್ದುವು. ಮಹಿಳಾ ಪೇದೆ ಅವನ್ನೆಲ್ಲಾ ತರುವುದು ಮತ್ತು ಅದನ್ನು ಪರಿಶೀಲಿಸಿ ವಿಭಜಿಸುವುದು ನಡೆಯುತ್ತಲೇ ಇತ್ತು. ನಿಜವಾಗಿ, ಆ ನೋಟೀಸುಗಳಲ್ಲಿ ಏನಿವೆ ಎಂಬುದು ನನಗೂ ಗೊತ್ತಿರಲಿಲ್ಲ. ನಾನು ಕಾರ್ಯಕ್ರಮಗಳಿಗೆ ಹೋದಾಗ ಸಿಕ್ಕ ನೋಟೀಸ್‍ಗಳು ಅವು. ಹೀಗಿರುವಾಗಲೇ ಮಾರ್ಕ್ಸಿಸ್ಟ್ ಸಿದ್ಧಾಂತದ ಪರಿಚಯ (Introduction of Marrkxist Philosophy) ಎಂಬ ಪುಸ್ತಕವನ್ನು ಕಪಾಟಿನಿಂದ ಹೊರತಂದು ನನ್ನ ಎದುರಿಗಿಟ್ಟರು. ‘ಹಾಗಾದರೆ ನೀವು ಇದನ್ನೆಲ್ಲ ಓದುತ್ತೀರಲ್ಲವೇ..' ಎಂದು ವ್ಯಂಗ್ಯಭರಿತವಾಗಿಯೇ ಕೇಳಿದರು. ನಾನು ನಕ್ಕೆ. ನನ್ನ ಕಪಾಟಿನಲ್ಲಿರುವ ಜಲಾಲುದ್ದೀನ್ ರೂಮಿಯವರ ಪುಸ್ತಕವನ್ನು ತೋರಿಸಿ, ‘ಸರ್, ನಾನು ಅದನ್ನೂ ಓದುವೆ' ಎಂದೆ.ಮಾರ್ಕ್ಸಿಸ್ಟ್ ಪುಸ್ತಕವನ್ನು ಕಾಲೇಜಿನಲ್ಲೂ ಓದಿಸಲಾಗುತ್ತದಲ್ಲವೇ? ಅದನ್ನು ನಿಷೇಧಿಸಿರುವಿರಾ ಎಂದು ಮತ್ತೂ ಕೇಳಿದೆ. ಅವರು ಉತ್ತರಿಸಲಿಲ್ಲ. ಅದರ ಬದಲು ಅವರು ಇನ್ನೊಂದು ಕಂಪ್ಯೂಟರ್‍ನತ್ತ ಗಮನ ಹರಿಸಿದರು. ಅದು ಮಗನದ್ದು. ಅದರ ಪಾಸ್‍ವರ್ಡ್ ಕೇಳಿದರು. ಗವರ್ನ್‍ಮೆಂಟ್ ಎಂಬ ಪಾಸ್‍ವರ್ಡ್ ಅನ್ನು ಕೇಳಿ ಅಚ್ಚರಿಪಟ್ಟರು. ‘ಮಗನೂ ಮಾವೋವಾದಿಯೇ’ ಎಂದು ಕೇಳಿದರು. ಜೊತೆಗೇ ಮನೆಯ ಬಾಗಿಲು, ಕಿಟಕಿ, ಅಡುಗೆ ಕೋಣೆ ಸಹಿತ ಎಲ್ಲದರ ಲೆಕ್ಕವನ್ನೂ ಬರೆದಿಟ್ಟುಕೊಂಡರು. ನಕ್ಷೆ ರಚಿಸಿದರು. ಕೊನೆಗೆ ಮನೆಯಿಂದ ಹೊರಡುವಾಗ ನನ್ನತ್ತ ತಿರುಗಿ, ‘ನೀವು ಮಾವೋವಾದಿ ಅಲ್ಲ ತಾನೇ..' ಎಂದು ಈ ಹಿಂದೆ ಕೇಳಿದ್ದನ್ನೇ ಮತ್ತೊಮ್ಮೆ ಕೇಳಿದರು. ನಾನು ನನ್ನ ಕಪಾಟಿನಲ್ಲಿರುವ ಪುಸ್ತಕಗಳ ಕಡೆಗೆ ತೋರಿಸಿ, ‘ಇದರಲ್ಲಿ ಕುರ್‍ಆನ್, ಬೈಬಲ್, ಗೀತೆ, ಗಾಂಧಿ, ಸೂಫಿಸಂ.. ಎಲ್ಲವೂ ಇದೆ. ಆದರೆ ಇದರಲ್ಲಿ ಏನಾದರೂ ಒಂದು ಆಗಿರುವೆಯಾ ಎಂದು ನೀವು ಪ್ರಶ್ನಿಸಿಲ್ಲವೇಕೆ? ಪ್ರಜಾತಂತ್ರದಲ್ಲಿ ಎಲ್ಲರಿಗೂ ಎಲ್ಲವನ್ನೂ ಓದುವ ಸ್ವಾತಂತ್ರ್ಯ ಇರಬೇಕಾಗಿದೆ. ಅದನ್ನೇಕೆ ನೀವು ಅಪರಾಧವಾಗಿ ಕಾಣುತ್ತೀರಿ..’ ಎಂದೆ. ನಕ್ಕರು. ಅವರನ್ನೇ ತುಸು ದೂರದ ವರೆಗೆ ಹಿಂಬಾಲಿಸಿದೆ. ‘ಇನ್ನೊಮ್ಮೆ ಬರುವಾಗ ಮೊದಲೇ ತಿಳಿಸಿ ಬನ್ನಿ’ ಅಂದೆ. ‘ಯಾಕೆ, ದಾಖಲೆ ಗಳನ್ನು ಬೇರೆಡೆಗೆ ಸಾಗಿಸಲಿಕ್ಕಾ’ ಎಂದು ಪ್ರಶ್ನಿಸಿದರು. ‘ಅಲ್ಲ, ಮನೆಯನ್ನು ಓರಣವಾಗಿಟ್ಟು ಸ್ವಾಗತಿಸುವುದಕ್ಕೆ..’ ಎಂದೆ..."
ಯೋಚಿನೆಗೀಡು ಮಾಡುವ ಲೇಖನ. ಧನ್ಯವಾದಗಳು.
ReplyDelete