ಅಲ್‍ಝೈನ್ ತಾರಿಕ್ |
ಟಾಮ್ ಡಾಲಿ |
2013ರಲ್ಲಿ ಯೂಟ್ಯೂಬ್‍ನಲ್ಲಿ ಕಾಣಿಸಿಕೊಂಡ ಟಾಮ್ ಡಾಲಿಯ ವೀಡಿಯೋವು ಅಂದು ಬ್ರಿಟನ್‍ನಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿತ್ತು. ಅದಕ್ಕೆ ಕಾರಣವೂ ಇದೆ.
ಟಾಮ್ ಡಾಲಿ ಮೊಟ್ಟಮೊದಲು ಜಗತ್ತಿನ ಗಮನಸೆಳೆದದ್ದು 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ. ಆಗ ಟಾಮ್ ಡಾಲಿ 14ರ ಹುಡುಗ. ಬೀಜಿಂಗ್‍ನ ಈಜುಕೊಳವು ಆತನಿಂದಾಗಿ ಅಂದು ಜನಪ್ರಿಯವಾಗಿತ್ತು. ಭಾರೀ ಸಂಖ್ಯೆಯಲ್ಲಿ ವೀಕ್ಷಕರು ಈ ಮರಿ ವಿೂನನ್ನು ನೋಡುವುದಕ್ಕೆ ಕೊಳದ ಸುತ್ತ ಸೇರಿದ್ದರು. ಅದಕ್ಕೆ ತಕ್ಕಂತೆ ಆತ ಪ್ರದರ್ಶನವನ್ನೂ ನೀಡಿದ್ದ. ಡೈವಿಂಗ್ (ತಲೆ ಮೊದ ಲಾಗುವಂತೆ ಮೇಲಿನಿಂದ ಕೆಳಕ್ಕೆ ಧುಮುಕುವುದು) ವಿಭಾಗದಲ್ಲಿ ಆತನ ತಂಡ ಫೈನಲ್ ಹಂತಕ್ಕೆ ಪ್ರವೇಶಿಸಿತ್ತು. ಹಾಗೆ ಫೈನಲ್ ಪ್ರವೇಶಿಸಿದ ಬ್ರಿಟನ್ನಿನ ಅತ್ಯಂತ ಕಿರಿಯ ಸ್ಪರ್ಧಾಳು ಎಂಬ ಗೌರವಕ್ಕೆ ಆತ ಅಂದು ಪಾತ್ರನಾಗಿದ್ದ. ಫೈನಲ್‍ನಲ್ಲಿ ಈ ತಂಡ ಪದಕ ಪಡೆಯದಿದ್ದರೂ ಮತ್ತು ಪದಕ ಕೈ ತಪ್ಪುವುದಕ್ಕೆ ಟಾಮ್ ಡಾಲಿಯ ಕಳಪೆ ಪ್ರದರ್ಶನವೇ ಕಾರಣ ಎಂದು ಸಹ ಈಜುಗಾರ ಬ್ಲೇಕ್ ಆಲ್‍ಡ್ರಿಜ್ ಆರೋಪಿಸಿದರೂ ಜಗತ್ತು ಕಣ್ಣು ನೆಟ್ಟದ್ದು ಈ ಹುಡುಗನ ಮೇಲೆಯೇ. ಮಾಧ್ಯಮಗಳೂ ಈ ಎಳೆ ಹುಡುಗನ ಸುತ್ತ ನೆರೆದವು. ಆತನನ್ನು ಬ್ರಿಟನ್ನಿನ ಭವಿಷ್ಯದ ವಿೂನು ಎಂದು ಕರೆದುವು. ಹಾಗಂತ, 7 ವರ್ಷದ ಪೋರನಿರುವಾಗಲೇ ನೀರಿಗೆ ಡೈವ್ ಮಾಡುತ್ತಿದ್ದ ಮತ್ತು 8 ವರ್ಷ ಪ್ರಾಯದಲ್ಲೇ ಈಜು ಮತ್ತು ಡೈವಿಂಗ್ ತರಬೇತಿಯನ್ನು ಪಡೆಯಲು ಪ್ರಾರಂಭಿಸಿದ್ದ ಟಾಮ್ ಡಾಲಿಯಲ್ಲಿ ಅಸಾಮಾನ್ಯ ಪ್ರತಿಭೆಯಿತ್ತು. 9 ವರ್ಷದವನಾಗಿದ್ದಾಗ ಜೂಡೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದ. ಯುರೋಪಿಯನ್ ಚಾಂಪಿಯನ್‍ಶಿಪ್ ಅನ್ನು ಗೆಲ್ಲುವಾಗ ಆತನಿಗೆ ಬರೇ 13 ವರ್ಷ. ಚಿನ್ನದ ಪದಕ ಪಡೆದ ಅತೀ ಕಿರಿಯ ಈಜುಪಟು ಎಂಬ ಗೌರವಕ್ಕೂ ಆತ ಪಾತ್ರನಾಗಿದ್ದ. 15ರ ಹರೆಯದಲ್ಲಿ ಆತ ಬ್ರಿಟನ್ನಿನ ಅತೀ ಕಿರಿಯ ವಿಶ್ವ ಚಾಂಪಿಯನ್ ಆಗಿ ಗುರುತಿಸಿಕೊಂಡ. ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಎರಡು ಚಿನ್ನದ ಪದಕ ಪಡೆಯುವಾಗ ಆತನ ಪ್ರಾಯ ಬರೇ 16 ವರ್ಷ. BBCಯು ಪ್ರತಿ ವರ್ಷ ನೀಡುವ ‘ಯುವ ಕ್ರೀಡಾಳು' ಪ್ರಶಸ್ತಿಯನ್ನು 3 ಬಾರಿ ಪಡಕೊಂಡವನೂ ಈತನೇ. ಇದರ ಬಳಿಕ 2012ರಲ್ಲಿ ನಡೆದ ಲಂಡನ್ ಒಲಿಂಪಿಕ್ಸ್ ನಲ್ಲಿ ಆತ ಕಂಚಿನ ಪದಕ ಪಡೆದ. ಆಗ ಆತನ ವಯಸ್ಸು 18. ಆದರೆ ಈ ಪದಕಗಳ ಹಾದಿ ಆತನ ಪಾಲಿಗೆ ತೀರಾ ಸಲೀಸಾಗಿರಲಿಲ್ಲ. ಎಲೆಕ್ಟ್ರಿಶಿಯನ್ ಆಗಿದ್ದ ಅಪ್ಪ ರಾಬ್‍ರು ಮಗನ ಪ್ರತಿಭೆಯನ್ನು ಕಂಡು ಕೆಲಸವನ್ನು ತ್ಯಜಿಸಿ ಮಗನಿಗೆ ಜೊತೆ ನೀಡಿದ್ದರು. ಆದರೆ ಬ್ರೈನ್ ಕ್ಯಾನ್ಸರ್‍ಗೆ ತುತ್ತಾಗಿ 2011ರಲ್ಲಿ ಅವರು ಸಾವಿಗೀಡಾದಾಗ ಟಾಮ್ ಡಾಲಿ 12ರ ಹುಡುಗ. ಒಂದು ಕಡೆ ಜೊತೆಗಿಲ್ಲದ ಅಪ್ಪ, ಇನ್ನೊಂದು ಕಡೆ ತರಬೇತಿ ಮತ್ತು ಪಂದ್ಯಾಟದ ಹೆಸರಲ್ಲಿ ತಿಂಗಳುಗಟ್ಟಲೆ ಮನೆಯಿಂದ ಹೊರಗಿರಬೇಕಾದ ಅನಿವಾರ್ಯತೆ- ಇವುಗಳಿಂದಾಗಿ ಹುಡುಗ ಟಾಮ್ ಡಾಲಿ ಕುಸಿದು ಹೋಗಿದ್ದ. ಕಿಟಕಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತರಬೇತುದಾರ ಆ್ಯಂಡಿ ಬ್ಯಾಂಕ್ಸ್ ಗೆ ಬೆದರಿಕೆ ಹಾಕುತ್ತಿದ್ದ. ಹೀಗೆ ಬೆಳೆದ ಟಾಮ್ ಡಾಲಿ 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಪಡೆದ ಬಳಿಕ ಈಜುಕೊಳದಿಂದ ನಾಪತ್ತೆಯಾದ. ಅಪ್ಪಟ ಪ್ರತಿಭೆಯೊಂದು ದಿಢೀರ್ ಜನಪ್ರಿಯತೆ ಮತ್ತು ಹರೆಯದ ಆಕರ್ಷಣೆಯಿಂದಾಗಿ ಕಳೆದು ಹೋಗುತ್ತಿರುವ ಬಗ್ಗೆ ಅಲ್ಲಲ್ಲಿ ವಿಷಾದ ವ್ಯಕ್ತವಾಗುತ್ತಿತ್ತು. ಈಜುಕೊಳಕ್ಕಿಂತ ಟಿ.ವಿ. ಸ್ಟುಡಿಯೋಗಳು ಮತ್ತು ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವುದನ್ನೇ ಹೆಚ್ಚು ಇಷ್ಟಪಡುತ್ತಿದ್ದ ಹುಡುಗನ ಹುಡುಗಾಟಿಕೆಗೆ ವ್ಯಾಪಕ ಬೇಸರ ವ್ಯಕ್ತವಾಗಿತ್ತು. ಆ ಬಳಿಕ ಕೆಲವು ಸಮಯ ಮಾಧ್ಯಮ ಗಮನದಿಂದ ಹೊರಬಿದ್ದ ಆತ 2013ರಲ್ಲಿ ಯೂಟ್ಯೂಬ್ ನಲ್ಲಿ ಕಾಣಿಸಿಕೊಂಡ. ತಾನು ಪ್ರೇಮಪಾಶದಲ್ಲಿ ಬಿದ್ದಿದ್ದು; ಥಾಯಿಲೆಂಡ್, ಜಪಾನ್, ನ್ಯೂಝಿಲ್ಯಾಂಡ್, ಆಸ್ಟ್ರೇಲಿಯಾ, ಸ್ಪೈನ್, ಫ್ರಾನ್ಸ್, ಸ್ವಿಝರ್ಲ್ಯಾಂಡ್, ಮೊರಾಕ್ಕೊ, ಕ್ಯಾಲಿಫೋರ್ನಿಯಾ, ಟೆಕ್ಸಾಸ್, ಹೈಟಿ, ಜಮೈಕಾ, ಫ್ಲೋರಿಡಾ, ಮೆಕ್ಸಿಕೋ.. ಸಹಿತ ವಿವಿಧ ರಾಷ್ಟ್ರಗಳಿಗೆ ವಿಶ್ವ ಪರ್ಯಟನೆ ಮಾಡಿದ್ದು.. ಎಲ್ಲವನ್ನೂ ಹೇಳಿಕೊಂಡ. ಮಾಧ್ಯಮಗಳು ಮತ್ತೆ ಆತನ ಬಗ್ಗೆ ಸುದ್ದಿ ಬರೆಯತೊಡಗಿದುವು. ಇದೀಗ ಆತ ಮತ್ತೆ ಈಜು ಕೊಳದತ್ತ ಮರಳಿದ್ದಾನೆ. ತಾನು ಹಿಂದಿಗಿಂತ ಪ್ರೌಢನಾಗಿದ್ದೇನೆ ಅನ್ನುತ್ತಿದ್ದಾನೆ. 2016ರ ರಿಯೋ ಒಲಿಂಪಿಕ್ಸ್ ಒಂದೇ ನನ್ನ ಮುಂದಿರುವ ಏಕೈಕ ಗುರಿ ಎಂದೂ ಹೇಳುತ್ತಿದ್ದಾನೆ. ಹಾಗಂತ, ಈ ಗುರಿಯನ್ನು ತಲುಪುವುದಕ್ಕಾಗಿ ಆತ ಪಡುತ್ತಿರುವ ಪರಿಶ್ರಮ ಅಚ್ಚರಿಯನ್ನು ಮೂಡಿಸುತ್ತದೆ.
ನಿಜವಾಗಿ, ನೀರಿಗೆ ಡೈವ್ ಮಾಡುವುದೆಂದರೆ ಅದೊಂದು ಅಪಾಯಕಾರಿ ಸಾಹಸ. ಗಂಟೆಗೆ ಸುಮಾರು 35 ಮೈಲು ವೇಗದಲ್ಲಿ ಆತ ಈ ಹಿಂದೆ ನೀರಿಗೆ ಧುಮುಕುತ್ತಿದ್ದ. ಪ್ರತಿ ಬಾರಿ ಹಾಗೆ ನೀರಿಗೆ ಧುಮುಕುವಾಗಲೂ ಕಾರು ಢಿಕ್ಕಿ ಹೊಡೆದಂಥ ಅನುಭವವಾಗುತ್ತಿತ್ತಂತೆ. ಡೈವ್ ನೂರು ಶೇಕಡಾ ಯಶಸ್ವಿ ಮತ್ತು ಪರಿಪೂರ್ಣವೇ ಆಗಿರುತ್ತಿದ್ದರೂ ಪ್ರತಿ ಬಾರಿಯೂ ನೋವಾಗುತ್ತಿತ್ತಂತೆ. ಅಭ್ಯಾಸದ ನಿಮಿತ್ತ ಪ್ರತಿ ಬಾರಿ ಡೈವ್ ಮಾಡುವ ಬೋರ್ಡ್‍ಗೆ ಹತ್ತುವಾಗಲೂ ಭಯವಾಗುತ್ತಿತ್ತಂತೆ. ತಾನು ಕೆಲ ಸಮಯ ಈಜು ಕೊಳದಿಂದ ದೂರವಾಗಲು ಈ ಭಯವೂ ಕಾರಣವಾಗಿರಬಹುದು ಎಂಬುದು ಆತನ ನಂಬಿಕೆ. ಇವತ್ತು ಆತ ಅತ್ಯಂತ ಪ್ರೌಢ. ಯಾವ ಭಯವೂ ಇಲ್ಲ. ಬಿಡುವು ರಹಿತ ತರಬೇತಿಯಲ್ಲಿ ಟಾಮ್ ಡಾಲಿ ಮಗ್ನನಾಗಿದ್ದಾನೆ. ಒಂದು ವಾರದಲ್ಲಿ 11 ಅವಧಿಯ (ಸೆಶನ್ಸ್) ಅಭ್ಯಾಸ ಕ್ರಮ. ಪ್ರತಿ ಅವಧಿಯೂ 3ರಿಂದ 4 ಗಂಟೆಯಷ್ಟು ದೀರ್ಘವಿರುತ್ತದೆ. ಮತ್ತೆ ಕಠಿಣವಾದ ಪಥ್ಯಾಹಾರ (Diet). ಮೊಟ್ಟೆಯ ಬಿಳಿ ಭಾಗ, ಪಾಲಕ್ ಸೊಪ್ಪು ಮತ್ತು ಪಾತ್ರೆ ತುಂಬ ಗಂಜಿ ನೀರು - ಇದು ಬೆಳಗ್ಗಿನ ಆಹಾರ. ಕೋಳಿ ಮತ್ತು ದ್ವಿದಳ ಧಾನ್ಯಗಳು ಮಧ್ಯಾಹ್ನದ ಊಟಕ್ಕೆ. ಸಲ್‍ಮೋನ್ ಎಂಬ ವಿೂನು ಅಥವಾ ಚಿಕನ್ ಮತ್ತು ತರಕಾರಿಗಳನ್ನು ರಾತ್ರಿಯ ಊಟವಾಗಿ ಬಡಿಸಲಾಗುತ್ತದೆ. ಪ್ರತಿದಿನವೂ ಇದರದ್ದೇ ಕಾರುಬಾರು. ಅದೇ ಆಹಾರ. ಅದೇ ರುಚಿ. ಅದೇ ಅಭ್ಯಾಸ, ಅದೇ 10 ಗಂಟೆಗಳ ನಿದ್ದೆ. ಇದರ ನಡುವೆ ಭಾರ ಹೆಚ್ಚಾಗದಂತೆ, ಬೊಜ್ಜು ಬಾರದಂತೆ ಜಾಗರೂಕತೆ ಪಾಲಿಸಬೇಕು. ಮದುವೆ, ಮುಂಜಿ, ಸ್ನೇಹ ಕೂಟ ಮುಂತಾದವುಗಳನ್ನೆಲ್ಲ ತ್ಯಾಗ ಮಾಡಿಕೊಂಡು ಬರೇ ಈಜು, ಈಜು, ಈಜು ಎಂದು ಈಜುಕೊಳದತ್ತಲೇ ಸುಳಿದಾಡುತ್ತಿರಬೇಕಾಗುತ್ತದೆ. ಒಂದು ಬಗೆಯ ಜೈಲಿನ ಅನುಭವದೊಂದಿಗೆ ಅಭ್ಯಾಸನಿರತವಾಗಬೇಕಾಗುತ್ತದೆ. ಹಾಗಂತ, ಡೈವಿಂಗ್ ಎಂಬುದು ತೀರಾ ಅಪಾಯರಹಿತವೇನಲ್ಲ. ಟಾಮ್ ಡಾಲಿಯ ತಲೆ ಮುಂಭಾಗದಲ್ಲಿ ಇರುವ ಗಾಯಗಳೇ ಅದು ಎಷ್ಟು ಅಪಾಯಕಾರಿ ಎಂಬುದನ್ನು ಹೇಳುತ್ತದೆ. ಅಷ್ಟಕ್ಕೂ, ಕ್ರಿಕೆಟ್, ಫುಟ್ಬಾಲ್, ಟೆನ್ನಿಸ್‍ಗಳೇ ಹೆಚ್ಚಾಗಿ ಸದ್ದು ಮಾಡುವ ಇಂದಿನ ದಿನಗಳಲ್ಲಿ ಕ್ರೀಡಾಕೂಟಗಳು ಮತ್ತು ಅದರ ಅಭ್ಯಾಸ ಕ್ರಮಗಳು ಚರ್ಚೆಗೊಳಗಾಗುವುದು ತೀರಾ ಕಡಿಮೆ. ಒಲಿಂಪಿಕ್ಸ್ ನಡೆಯುವುದೇ 4 ವರ್ಷಗಳಿಗೊಮ್ಮೆ. ಆಗ ಕ್ರೀಡಾಪಟುಗಳ ವಿವಿಧ ಕಸರತ್ತುಗಳನ್ನು ನೋಡಿ ನಾವು ಬೆರಗಾಗುತ್ತೇವೆಯೇ ಹೊರತು ಆ ಕಸರತ್ತುಗಳ ಹಿಂದಿರುವ ದೀರ್ಘ ಶ್ರಮವನ್ನು ಅವಲೋಕಿಸುವುದಕ್ಕೆ ಅವಕಾಶಗಳು ಸಿಗುವುದಿಲ್ಲ. ಟೆನ್ನಿಸೋ ಕ್ರಿಕೆಟ್ಟೋ ನಮ್ಮ ಮುಂದೆ ಸದಾ ಇರುತ್ತದೆ. ಟಿ.ವಿ. ಚಾನೆಲ್ ತಿರುಗಿಸಿದರೆ ಒಂದಲ್ಲ ಒಂದು ಚಾನೆಲ್‍ನಲ್ಲಿ ಅವು ಇದ್ದೇ ಇರುತ್ತದೆ. ಆದರೆ ಲಾಂಗ್ ಜಂಪ್, ಓಟ, ಈಜು, ಮ್ಯಾರಥಾನ್ ಸಹಿತ ಒಂದು ದೊಡ್ಡ ಕ್ರೀಡಾ ಜಗತ್ತು ಬಹುತೇಕ ನಮ್ಮಿಂದ ಸದಾ ಮರೆಯಾಗಿರುತ್ತದೆ. ಅವನ್ನು ಚಾನೆಲ್‍ಗಳು ತೋರಿಸಬೇಕಾದರೆ ಒಲಿಂಪಿಕ್ಸೋ, ಕಾಮನ್‍ವೆಲ್ತೋ ಯುರೋಪಿಯನ್ ಪಂದ್ಯಾವಳಿಗಳೋ ಜರಗಬೇಕು. ಅಲ್ಲದೇ ಆ ಪಂದ್ಯಾವಳಿ ಮುಗಿದ ತಕ್ಷಣ ಟಿ.ವಿ.ಗಳಿಂದ ಅವು ನಾಪತ್ತೆಯಾಗಿ ಮತ್ತೆ ಆ ಜಾಗದಲ್ಲಿ ಅದೇ ಕ್ರಿಕೆಟ್ಟು.. ತುಂಬಿಕೊಳ್ಳುತ್ತದೆ. ಅಂದಹಾಗೆ, ಕ್ರೀಡಾಕೂಟಗಳು ನಾಲ್ಕು ವರ್ಷಕ್ಕೊಮ್ಮೆಯೋ ಎರಡು ವರ್ಷಕ್ಕೊಮ್ಮೆಯೋ ಜರುಗುವುದಾದರೂ ಸ್ಪರ್ಧಾಳುಗಳು ನೇರವಾಗಿ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲವಲ್ಲ. ಅವರ ಅಭ್ಯಾಸ ಪ್ರತಿದಿನವೂ ನಡೆಯುತ್ತಲೇ ಇರುತ್ತದೆ. ಬೆಳಿಗ್ಗೆ, ಸಂಜೆ.. ಎಂದು ಪ್ರತಿದಿನ ಬೆವರು ಹರಿಸುತ್ತಲೇ ಇರುತ್ತಾರೆ. ಅಂಥದ್ದೊಂದು ಕಠಿಣ ಅಭ್ಯಾಸದ ಬಳಿಕ ಒಲಿಂಪಿಕ್ಸ್ ನಲ್ಲಿ ಐದೋ ಹತ್ತೋ ನಿಮಿಷ ಈಜಿ ಬಳಿಕ ಮರೆಯಾಗುತ್ತಾರೆ. ಕೇವಲ 10 ನಿಮಿಷದ ಸ್ಪರ್ಧೆಗಾಗಿ ಎರಡು ವರ್ಷ ತರಬೇತಿ ನಿರತರಾಗುವ ಕ್ರೀಡಾಪಟುವನ್ನೊಮ್ಮೆ ಕಲ್ಪಿಸಿಕೊಳ್ಳಿ. ಅಲ್ಲಿ ಇರಬೇಕಾದ ಮಾನಸಿಕ ದೃಢತೆ, ಸಹನೆ, ಉತ್ಸಾಹ ಯಾವ ರೀತಿಯದ್ದಾಗಿರಬಹುದು? ಪದಕ ಕೈತಪ್ಪುವ ಕ್ರೀಡಾಪಟುವಿನ ಪರಿಸ್ಥಿತಿ ಹೇಗಿರಬಹುದು? ಆತ ಹೇಗೆ ತನ್ನನ್ನು ನಿಯಂತ್ರಿಸಿಕೊಳ್ಳಬಹುದು? ಅಷ್ಟಕ್ಕೂ, ಈ ಬಗೆಯ ಚಿಂತನೆಗೆ ಹಚ್ಚಬಹುದಾದ ಬರಹವೊಂದಕ್ಕೆ Tom Daley: I always knew I was attracted to guys ಎಂಬ ಶೀರ್ಷಿಕೆಯನ್ನು ಕೊಟ್ಟರೆ ಓದುಗರು ಪ್ರಶ್ನಿಸದಿರುತ್ತಾರೆಯೇ? ಇಡೀ ಬರಹದ ಎಲ್ಲೋ ಮಧ್ಯದಲ್ಲಿ ಒಂದು ಕಡೆ, ಮೂರ್ನಾಲ್ಕು ವಾಕ್ಯಗಳಲ್ಲಿ ಬಂದು ಮುಗಿದು ಹೋಗುವ ಅವರ ವೈಯಕ್ತಿಕ ವಿಷಯವನ್ನೇ ಶೀರ್ಷಿಕೆಯಾಗಿ ತಂದರೆ ಓದುಗರು ಕೆರಳದಿರುತ್ತಾರೆಯೇ? ಬರಹವೊಂದಕ್ಕೆ ಕೊಡುವ ಶೀರ್ಷಿಕೆಗೆ ಏನನ್ನು ಮಾನದಂಡವಾಗಿಸುತ್ತೀರಿ ಎಂದು ಪ್ರಶ್ನಿಸದಿರುತ್ತಾರೆಯೇ?
ರಷ್ಯಾದಲ್ಲಿ ಸದ್ಯ ನಡೆಯುತ್ತಿರುವ ವಿಶ್ವ ಈಜು ಚಾಂಪಿಯನ್ ಶಿಪ್‍ನಲ್ಲಿ ಬಹರೈನ್‍ನ ಅಲ್‍ಝೈನ್ ತಾರಿಕ್ ಎಂಬ 10ರ ಬಾಲೆ ಈಜಿ ಜಾಗತಿಕ ಸುದ್ದಿಯಾಗಿರುವುದನ್ನು ಓದುತ್ತಿರುವಾಗ ಟಾಮ್ ಡಾಲಿ ಮತ್ತು ದಿ ಗಾರ್ಡಿಯನ್ ಪತ್ರಿಕೆಯ ಶೀರ್ಷಿಕೆ ನೆನಪಾದುವು.
No comments:
Post a Comment