Tuesday, July 28, 2015

ಮರಣದಂಡನೆ ಎತ್ತಿರುವ ಪ್ರಶ್ನೆಗಳು..

ಯಾಕೂಬ್ ಮೇಮನ್
ರಾಮ್ ಜೇಠ್ಮಲಾನಿ
ಕೆ.ಟಿ.ಎಸ್. ತುಳಸಿ
ಗೋಪಾಲ್ ಸುಬ್ರಹ್ಮಣ್ಯಂ
ಹರೀಶ್ ಸಾಳ್ವೆ
ಮುಕುಲ್ ರೋಹ್ಟಗಿ..
ಮುಂತಾದವರ ಜೊತೆ ಎಂ.ಎಲ್. ಶರ್ಮಾ ಮತ್ತು ಎ.ಪಿ. ಸಿಂಗ್ ಎಂಬಿಬ್ಬರು ನ್ಯಾಯವಾದಿಗಳನ್ನು ಇಟ್ಟು ನೋಡಿ. ದೆಹಲಿಯ ನಿರ್ಭಯ ಪ್ರಕರಣದ ಆರೋಪಿಗಳಾದ ಅಕ್ಷಯ್ ಥಾಕುರ್, ವಿನಯ್ ಶರ್ಮಾ, ಪವನ್ ಗುಪ್ತಾ ಮತ್ತು ಮುಖೇಶ್ ಸಿಂಗ್‍ನ ಪರ ನ್ಯಾಯಾಲಯದಲ್ಲಿ ವಾದಿಸಿದ ನ್ಯಾಯವಾದಿಗಳು ಇವರು. ಇವರಿಬ್ಬರ ಹೇಳಿಕೆಗಳು ಲೆಸ್ಲಿ ವುಡ್‍ವಿನ್‍ರ ‘ಇಂಡಿಯಾಸ್ ಡಾಟರ್' ಎಂಬ ಸಾಕ್ಷ್ಯಚಿತ್ರದಲ್ಲಿ ದಾಖಲಾಗಿವೆ. “ಬೀದಿಯಲ್ಲಿ ಸ್ವೀಟ್ ಇಟ್ಟರೆ ನಾಯಿಗಳು ಬಂದು ತಿನ್ನುತ್ತವೆ. ಅಪರಾತ್ರಿಯಲ್ಲಿ ಯಾರೋ ಒಬ್ಬನ ಜೊತೆ ತನ್ನ ಮಗಳನ್ನು ನಿರ್ಭಯಳ ಹೆತ್ತವರು ಕಳುಹಿಸಿಕೊಟ್ಟದ್ದು ಯಾಕೆ..” ಎಂದು ಶರ್ಮಾ ಪ್ರಶ್ನಿಸಿದರೆ, “ನನ್ನ ಮಗಳು ಅಥವಾ ಸಹೋದರಿ ವಿವಾಹಪೂರ್ವ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಮನೆಗೊಯ್ದು ಪೆಟ್ರೋಲ್ ಸುರಿದು ಕುಟುಂಬದೆದುರೇ ಬೆಂಕಿ ಹಚ್ಚುವೆ..” ಎಂದು ಸಿಂಗ್ ಹೇಳುತ್ತಾರೆ. ದೇಶವನ್ನೇ ಬೆಚ್ಚಿ ಬೀಳಿಸಿದ ಪ್ರಕರಣದ ಆರೋಪಿಗಳ ಪರ ಇಂತಹ ವಕೀಲರು ವಾದಿಸಿದರೆ ಅದರ ಫಲಿತಾಂಶ ಏನಿದ್ದೀತು? ನ್ಯಾಯಾಧೀಶರು ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನಲ್ಲದೇ ಇನ್ನೇನನ್ನು ನೀಡಿಯಾರು? ಅಷ್ಟಕ್ಕೂ, ತೀರಾ ಸಾಮಾನ್ಯರಂತೆ ಮತ್ತು ಮಹಿಳಾ ಹಕ್ಕುಗಳ ಕುರಿತು ಅರಿವೇ ಇಲ್ಲದವರಂತೆ ಮಾತಾಡುವ ಇವರನ್ನು ನಿರ್ಭಯ ಆರೋಪಿಗಳು ತಮ್ಮ ವಕೀಲರನ್ನಾಗಿ ಆಯ್ಕೆ ಮಾಡಿಕೊಂಡದ್ದೇಕೆ? ಜೇಠ್ಮಲಾನಿ, ತುಳಸಿ, ಅಶೋಕ್ ದೇಸಾಯಿ, ಪರಾಸರನ್, ಪಿ.ಪಿ. ರಾವ್‍ರಂತಹ ಪ್ರಸಿದ್ಧ ನ್ಯಾಯವಾದಿಗಳು ಇದ್ದಾಗ್ಯೂ ನಿರ್ಭಯ ಆರೋಪಿಗಳು ಈ ಅಪರಿಚಿತರನ್ನೇ ಯಾಕೆ ನೇಮಿಸಿಕೊಂಡರು? ಇದು ಅವರ ಬಯಕೆಯೋ ಅಥವಾ ಅನಿವಾರ್ಯತೆಯೋ? 2009 ಅಕ್ಟೋಬರ್ 31ರಂದು ‘ದ ಎಕನಾಮಿಕ್ಸ್ ಟೈಂಸ್' ಪತ್ರಿಕೆಯು, ‘5 ನಿಮಿಷದ ಕೆಲಸಕ್ಕೆ 5 ಲಕ್ಷ ಪಡೆಯುವ ಪ್ರಮುಖ ವಕೀಲರು' ಎಂಬ ಶೀರ್ಷಿಕೆಯಲ್ಲಿ ಲೇಖನವೊಂದನ್ನು ಪ್ರಕಟಿಸಿತ್ತು. 5 ನಿಮಿಷದ ಕೋರ್ಟ್ ಹಾಜರಿಗೆ 3ರಿಂದ 5 ಲಕ್ಷ ರೂಪಾಯಿ ಪಡೆಯುವ ವಕೀಲರನ್ನು ಅದರಲ್ಲಿ ಹೆಸರಿಸಲಾಗಿತ್ತು. ಹರೀಶ್ ಸಾಳ್ವೆ, ಮುಕುಲ್ ರೋಹ್ಟಗಿ, ಅಶೋಕ್ ದೇಸಾಯಿ, ಕೆ.ಕೆ. ವೇಣುಗೋಪಾಲ್, ಅಭಿಷೇಕ್ ಸಿಂಘ್ವಿ.. ಮುಂತಾದವರ ಹೆಸರು ಆ ಪಟ್ಟಿಯಲ್ಲಿದ್ದುವು. ನಿಜವಾಗಿ, ಜೇಠ್ಮಲಾನಿಯವರು ಒಂದು ಪ್ರಕರಣಕ್ಕೆ 40 ಲಕ್ಷ ರೂಪಾಯಿಯನ್ನು ಪಡಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ನ್ಯಾಯವಾದಿಗಳ ವೃಂದದಲ್ಲಿಯೇ ಅವರಿಗೆ ಅಪಾರ ಅನುಭವ ಇದೆ. 2002ರ ಗುಜರಾತ್ ಹತ್ಯಾಕಾಂಡ ಪ್ರಕರಣದಲ್ಲಿ ಅವರು ಗುಜರಾತ್ ಸರಕಾರದ ಪರ ವಾದಿಸಿದ್ದಾರೆ, ಇಂದಿರಾ ಮತ್ತು ರಾಜೀವ್ ಗಾಂಧಿಯವರನ್ನು ಹತ್ಯೆಗೈದ ಆರೋಪಿಗಳ ಪರವೂ ವಾದಿಸಿದ್ದಾರೆ. ಅವರೊಂದು ಪ್ರಕರಣವನ್ನು ಎತ್ತಿಕೊಂಡರೆಂದರೆ, ಅದಕ್ಕೆ ಅಪಾರ ಮನ್ನಣೆ ಸಿಗುತ್ತದೆ. ಅವರ ವಾಕ್ಚಾತುರ್ಯ, ಅಧ್ಯಯನಶೀಲತೆ ಮತ್ತು ಅನುಭವಗಳು ಪ್ರಕರಣಕ್ಕೆ ವಿಶೇಷ ತಿರುವನ್ನು ಕೊಡುವಷ್ಟು ಆಳವಾಗಿದೆ. ಹರೀಶ್ ಸಾಳ್ವೆಯವರು ಇತ್ತೀಚೆಗಷ್ಟೇ ವೋಡಾಪೋನ್ ಪ್ರಕರಣದಲ್ಲಿ ಸರಕಾರದ ವಿರುದ್ಧ ತೀರ್ಪು ಬರುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವೋಡಾಪೋನ್ 11 ಸಾವಿರ ಕೋಟಿ ರೂಪಾಯಿ ತೆರಿಗೆ ಕಟ್ಟಬೇಕೆಂಬ ಸರಕಾರದ ಆದೇಶವನ್ನು ಕೋರ್ಟು ವಜಾ ಗೊಳಿಸಿದೆ. ಹಾಗಂತ, ಇವರಲ್ಲಿ ಯಾರಾದರೊಬ್ಬರು ನಿರ್ಭಯ ಪ್ರಕರಣದ ಆರೋಪಿಗಳ ಪರ ವಾದಿಸುವುದನ್ನೊಮ್ಮೆ ಊಹಿಸಿಕೊಳ್ಳಿ. ಇವರಿಗೆ ಫೀಸು ಕೊಟ್ಟು ತಮ್ಮ ವಕೀಲರನ್ನಾಗಿ ನೇಮಿಸಿಕೊಳ್ಳುವ ಸಾಮರ್ಥ್ಯ ಕೊಳಚೆಗೇರಿ ನಿವಾಸಿಗಳಾದ ಆ ಆರೋಪಿಗಳಿಗಿದೆಯೇ? ಅಂದಮೇಲೆ ಸಮಾನ ನ್ಯಾಯ ಎಂಬ ಪರಿಕಲ್ಪನೆಗೆ ಏನರ್ಥವಿದೆ? ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಾನೂನು ಆಯೋಗದ ನೆರವಿನೊಂದಿಗೆ ನಡೆಸಿದ ಅಧ್ಯಯನದ ಪ್ರಕಾರ, ಮರಣ ದಂಡನೆಗೆ ಗುರಿಯಾದ ಶೇ. 75ರಷ್ಟು ಮಂದಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು ಹಾಗೂ ಆರ್ಥಿಕವಾಗಿ ತೀರಾ ದುರ್ಬಲರಾದವರು. “ನೂರರಲ್ಲಿ ಓರ್ವರಿಗಷ್ಟೇ ಸರಿಯಾದ ವಕೀಲರನ್ನು ನೇಮಿಸಿಕೊಳ್ಳುವ ಸಾಮರ್ಥ್ಯ ಇದೆ..” ಎಂದು ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಹೇಳುತ್ತಾರೆ. ಭಾರತದ ಕಾನೂನು ಆಯೋಗದ ಮುಖ್ಯಸ್ಥ ಮತ್ತು ದೆಹಲಿ ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶ ಎ.ಪಿ. ಶಾರ ಪ್ರಕಾರ, “ಭಾರತದಲ್ಲಿ ಬಡವರು ಮತ್ತು ತುಳಿತಕ್ಕೊಳಗಾದವರೇ ಗಲ್ಲಿಗೇರುತ್ತಿದ್ದಾರೆ..” ಇವೆಲ್ಲ ಏನು? ಒಂದು ಕಡೆ ಕಣ್ಣಿಗೆ ಬಟ್ಟೆ ಕಟ್ಟಿರುವ ನ್ಯಾಯದೇವತೆ ಇನ್ನೊಂದು ಕಡೆ, ದುರ್ಬಲ ಆರೋಪಿಗಳ ಕೈ-ಕಾಲುಗಳನ್ನು ಕಟ್ಟಿ ಹಾಕುವ ರೀತಿಯ ನ್ಯಾಯ ಪ್ರಕ್ರಿಯೆ - ಇದನ್ನು ಹೇಗೆ ವಿಶ್ಲೇಷಿಸಬಹುದು?
    2012 ನವೆಂಬರ್ 21ರಂದು ಅಜ್ಮಲ್ ಕಸಬ್‍ನನ್ನು ಗಲ್ಲಿ ಗೇರಿಸುವಾಗ ಆತನ ಮುಂದೆ ವಿವಿಧ ನ್ಯಾಯಾಲಯಗಳಿಂದ ಮರಣದಂಡನೆ ಶಿಕ್ಷೆಗೆ ಗುರಿಯಾದ ಸುಮಾರು 300ರಷ್ಟು ಮಂದಿ ಇದ್ದರು. ಅವರಲ್ಲಿ ಅಫ್ಝಲ್‍ಗುರು ಇದ್ದ. ಪಂಜಾಬ್ ಮುಖ್ಯಮಂತ್ರಿ ಬಿಯಂತ್ ಸಿಂಗ್‍ರನ್ನು ಹತ್ಯೆಗೈದ ಬಲ್ವಂತ್ ಸಿಂಗ್ ರಾಜೋನಾ, ಖಾಲಿಸ್ತಾನ್ ಲಿಬರೇಶನ್ ಫೋರ್ಸ್‍ನ ಭಯೋತ್ಪಾದಕ ದೇವಿಂದರ್ ಸಿಂಗ್ ಭುಲ್ಲರ್, ರಾಜೀವ್ ಗಾಂಧಿಯನ್ನು ಹತ್ಯೆಗೈದ ಮೂವರು ಆರೋಪಿಗಳು, ವೀರಪ್ಪನ್‍ನ 4 ಮಂದಿ ಸಹಚರರು.. ಎಲ್ಲರೂ ಆತನ ಮುಂದೆ ಇದ್ದರು. ಅನುಕ್ರಮವಾಗಿ ಗಲ್ಲಿಗೇರಿಸುವುದಾದರೆ ಕಸಬ್ ನ ಸರದಿ 25 ಮಂದಿಯ ಬಳಿಕ ಬರಬೇಕಿತ್ತು. ಆದರೆ ಆತನನ್ನು ಹಿಂದಿನಿಂದ ಎತ್ತಿ ಮುಂದಕ್ಕೆ ತಂದು ಗಲ್ಲಿಗೇರಿಸಲಾಯಿತು. ಇದಕ್ಕೆ ಕಾರಣ ಏನೆಂದರೆ, ಆತ ಪಾಕಿಸ್ತಾನಿ. ಆತನನ್ನು ಜೀವಂತ ಇರಿಸಿಕೊಳ್ಳಬೇಕಾದ ಯಾವ ರಾಜಕೀಯ ಒತ್ತಡವೂ ಇಲ್ಲಿಲ್ಲ. ಆದರೆ, ದೇವಿಂದರ್ ಸಿಂಗ್ ಭುಲ್ಲರ್‍ನ ಹಿಂದೆ ರಾಜಕೀಯ ಒತ್ತಡ ಇದೆ. ಆತನನ್ನು ಗಲ್ಲಿಗೇರಿಸುವುದರ ವಿರುದ್ಧ ಭಾವನಾತ್ಮಕ ಒತ್ತಡವನ್ನು ಹೇರಲಾಗುತ್ತಿದೆ. ನಿಜವಾಗಿ, ಯಾರನ್ನು ಗಲ್ಲಿಗೇರಿಸಬೇಕು, ಯಾರನ್ನು ಬಾರದು, ಯಾರ ಗಲ್ಲನ್ನು ಮುಂದೂಡಬೇಕು.. ಎಂಬುದೆಲ್ಲ ಇಲ್ಲಿ ಬರೇ ಕೋರ್ಟು, ಕಚೇರಿ, ರಾಷ್ಟ್ರಪತಿಗಳಿಂದ ಮಾತ್ರ ನಿರ್ಧರಿತವಾಗುವುದಲ್ಲ. ಅದನ್ನೂ ರಾಜಕೀಯವೇ ನಿರ್ಧರಿಸುತ್ತದೆ. ‘ಕಸಬ್‍ನನ್ನು ಬಿರಿಯಾನಿ ಕೊಟ್ಟು ಸಾಕಲಾಗುತ್ತಿದೆ..' ಎಂಬುದಾಗಿ ಬಿಜೆಪಿ ಈ ದೇಶದಲ್ಲಿ ಪ್ರಚಾರ ಮಾಡಿತ್ತು. ಮಾಧ್ಯಮದ ಒಂದು ವರ್ಗವೂ ಅದಕ್ಕೆ ಬೆಂಬಲ ನೀಡಿತ್ತು. ಅಷ್ಟಕ್ಕೂ, ಕಸಬ್‍ನಿಂದ ಕಾಂಗ್ರೆಸ್‍ಗಾಗಲೀ ಬಿಜೆಪಿಗಾಗಲೀ ಯಾವ ಲಾಭವೂ ಇಲ್ಲ. ಈ ದೇಶದವನೇ ಅಲ್ಲದ ಆತನನ್ನು ಗಲ್ಲಿಗೇರಿಸುವುದರಿಂದ ರಾಜಕೀಯವಾಗಿ ಕಳಕೊಳ್ಳುವುದಕ್ಕೇನೂ ಇಲ್ಲ. ಇದನ್ನರಿತೇ ತುರ್ತಾಗಿ ಆತನನ್ನು ಗಲ್ಲಿಗೆ ಕೊಡಲಾಯಿತು. ಆದರೆ ಇಂಥ ರಾಜಕೀಯ ಪ್ರೇರಿತ ಕ್ರಮಗಳು ಸಹಜವಾಗಿ ಕೆಲವಾರು ಆತಂಕಕಾರಿ ಅನುಮಾನಗಳನ್ನೂ ಮುಂದಿಡುತ್ತದೆ. ಮರಣ ದಂಡನೆಗೆ ಗುರಿಯಾಗುವ ದುರ್ಬಲ ವರ್ಗದವರಿಗೆ ರಾಜಕೀಯವಾಗಿ ಹೇಳಿಕೊಳ್ಳಬಹುದಾದ ಪ್ರಭಾವವಿರುವುದಿಲ್ಲವಲ್ಲ. ಅವರ ವಿರುದ್ಧ ಸಾಕ್ಷ್ಯಗಳನ್ನು ಒದಗಿಸುವ ಪೊಲೀಸ್ ವ್ಯವಸ್ಥೆಯಾದರೋ ಪರಮ ಭ್ರಷ್ಟಾಚಾರಿ. ಈ ದುರ್ಬಲರಿಂದ ನಕಲಿ ತಪ್ಪೊಪ್ಪಿಗೆಯನ್ನು ಪಡಕೊಳ್ಳುವುದಕ್ಕೆ ಪೊಲೀಸರಿಗೆ ಕಷ್ಟವೂ ಇಲ್ಲ. ಹಾಗಂತ, ಇವೆಲ್ಲವನ್ನೂ ಸಮರ್ಪಕವಾಗಿ ನ್ಯಾಯಾಧೀಶರ ಮುಂದೆ ನಿವೇದಿಸುವುದಕ್ಕೆ ಜೇಠ್ಮಲಾನಿ, ಹರೀಶ್ ಸಾಳ್ವೆ, ತುಳಸಿ..ಗಳೂ ಅವರಿಗೆ ಸಿಗುತ್ತಿಲ್ಲ. ಶ್ರೀಮಂತ ಮತ್ತು ಬಡವ ಮಾಡಿದ ಅಪರಾಧ ಒಂದೇ ಆಗಿದ್ದರೂ ತೀರ್ಪುಗಳು ಭಿನ್ನವಾಗಿ ಬರುವುದಕ್ಕೆ ಈ ಅಸಮಾನತೆ ಖಂಡಿತ ಅವಕಾಶ ಮಾಡಿಕೊಡುತ್ತದೆ. ಇಂಥ ಸ್ಥಿತಿಯಲ್ಲಿ, ‘ಗಲ್ಲು' ಶಿಕ್ಷೆ ಬೇಕೋ ಬೇಡವೋ ಎಂಬುದು ಮುಖ್ಯವಾಗುತ್ತದೆ. ಅಷ್ಟಕ್ಕೂ, ಗಲ್ಲು ಶಿಕ್ಷೆಯನ್ನು ಜಾರಿಗೊಳಿಸದಿರುವ ಕುರಿತಂತೆ  2007ರಲ್ಲಿ ವಿಶ್ವಸಂಸ್ಥೆಯಲ್ಲಿ ಮಂಡಿಸಲಾದ ಮಸೂದೆಗೆ ಭಾರತವು ವಿರೋಧ ವ್ಯಕ್ತಪಡಿಸಿರಬಹುದು. 2012 ನವೆಂಬರ್‍ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಂಡಿಸಿದ ‘ಗಲ್ಲುಶಿಕ್ಷೆ ನಿಷೇಧ' ಮಸೂದೆಯನ್ನು ಭಾರತ ತಿರಸ್ಕರಿಸಿರಬಹುದು. ಅಲ್ಲದೇ, ‘ಅಪರೂಪದಲ್ಲಿ ಅಪರೂಪದ’ ಪ್ರಕರಣಗಳಿಗೆ ಮಾತ್ರ ಮರಣದಂಡನೆ ವಿಧಿಸಬೇಕೆಂಬ 1983ರ ಸುಪ್ರೀಮ್ ಕೋರ್ಟ್‍ನ ನಿಲುವು ಪ್ರಶಂಸಾರ್ಹವಾದುದು ಎಂದೂ ಹೇಳಬಹುದು. ಆದರೆ, ನ್ಯಾಯವು ದುಡ್ಡಿದ್ದವರ ಪರ ಎಂಬ ವಾತಾರವಣ ನಿರ್ಮಾಣವಾಗಿರುವ ಕಡೆ ನೇಣು ಯಾವ ಪರಿಣಾಮವನ್ನು ಬೀರಬಲ್ಲುದು? 2001ರಲ್ಲಿ 83 ಮಂದಿ, 2002ರಲ್ಲಿ 23 ಮಂದಿ, 2005ರಲ್ಲಿ 77 ಮಂದಿ, 2006ರಲ್ಲಿ 40 ಮಂದಿ ಮತ್ತು 2007ರಲ್ಲಿ 100 ಮಂದಿಗೆ ದೇಶದ ವಿವಿಧ ನ್ಯಾಯಾಲಯಗಳು ನೇಣು ಶಿಕ್ಷೆಯನ್ನು ವಿಧಿಸಿದೆ (ಜಾರಿಗೊಳಿಸಿಲ್ಲ) ಎಂದು ಆಮ್ನೆಸ್ಟಿ ಇಂಟರ್‍ನ್ಯಾಶನಲ್‍ನ ಅಂಕಿ-ಅಂಶಗಳು ಹೇಳುವಾಗ, ಅದರಲ್ಲಿ ಹರೀಶ್ ಸಾಳ್ವೆ ವಾದಿಸಿದ ಪ್ರಕರಣಗಳು ಇದ್ದೀತೇ? ಜೇಠ್ಮಲಾನಿ ಪ್ರತಿನಿಧಿಸಿದ ಪ್ರಕರಣ ಎಷ್ಟಿರಬಹುದು? ಬಹುಶಃ, ಇಂಥದ್ದೊಂದು ಆತಂಕವೇ ಮರಣ ದಂಡನೆಯ ಬಗ್ಗೆ ಮತ್ತೆ ಮತ್ತೆ ಚರ್ಚೆಯ ಅಗತ್ಯವನ್ನು ಒತ್ತಿ ಹೇಳುತ್ತದೆ. ಸಮರ್ಥ ವಕೀಲರನ್ನು ನೇಮಿಸಿಕೊಳ್ಳುವ ಸಾಮರ್ಥ್ಯವಿಲ್ಲದ ಬಡ ಆರೋಪಿಗಳಿರುವ ದೇಶವೊಂದರಲ್ಲಿ ಮರಣದಂಡನೆ ಎಷ್ಟು ಸಮಂಜಸವಾದೀತು? ಅಫ್ಝಲ್ ಗುರುವಿಗೆ ಮರಣದಂಡನೆಯನ್ನು ವಿಧಿಸುವಾಗ, ‘ಇದರಲ್ಲಿ ಸಮಾಜದ ಭಾವನೆಯನ್ನು ಪರಿಗಣಿಸಲಾಗಿದೆ...’ ಎಂದು ಸುಪ್ರೀಮ್ ಕೋರ್ಟ್ ಹೇಳಿತ್ತು. ಅರುಂಧತಿ ರಾಯ್ ಸಹಿತ ಅನೇಕರು ಕೋರ್ಟ್‍ನ ಈ ವ್ಯಾಖ್ಯಾನವನ್ನು ಪ್ರಶ್ನಿಸಿದ್ದರು. ತೀರ್ಪುಗಳು ಭಾವನೆಯಿಂದ ಮುಕ್ತವಾಗಿರಬೇಕೆಂಬ ಅಭಿಪ್ರಾಯ ಹಲವರದ್ದಾಗಿತ್ತು. ನಿರ್ಭಯ ಪ್ರಕರಣಕ್ಕಿಂತ ಮೊದಲು ಅತ್ಯಾಚಾರವು ಈ ದೇಶದಲ್ಲಿ ಇವತ್ತಿನಷ್ಟು ಭಾವಾನಾತ್ಮಕವಾಗಿರಲಿಲ್ಲ. ಅಮೇರಿಕದ ಅವಳಿ ಕಟ್ಟಡಗಳ ಮೇಲೆ ದಾಳಿಯಾಗುವ ವರೆಗೆ ಬಾಂಬ್ ಭಯೋತ್ಪಾದನೆಯೂ ಇವತ್ತಿನ ರೀತಿಯಲ್ಲಿ ಸಾರ್ವಜನಿಕ ಗಮನವನ್ನು ಸೆಳೆದಿರಲಿಲ್ಲ. ಆದರೆ, ಇವತ್ತು ಅತ್ಯಾಚಾರ ಮತ್ತು ಭಯೋತ್ಪಾದನೆ ಈ ದೇಶದಲ್ಲಿ ಭಾವನಾತ್ಮಕ ವಾತಾವರಣವೊಂದನ್ನು ಹುಟ್ಟುಹಾಕಿದೆ. ಮಾಧ್ಯಮ ಕ್ರಾಂತಿಯಿಂದಾಗಿ ಸಾರ್ವಜನಿಕ ಅಭಿಪ್ರಾಯಗಳು ಕ್ಷಿಪ್ರವಾಗಿ ರೂಪುಗೊಳ್ಳುತ್ತಿವೆ. ಆದ್ದರಿಂದ ಇಂಥ ಪ್ರತಿ ಪ್ರಕರಣವೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವುದಕ್ಕೆ ಸಾಧ್ಯವಿದೆ. ಹೀಗಿರುವಾಗ, ರಾಮ್ ಜೇಠ್ಮಲಾನಿ ಪ್ರತಿನಿಧಿಸುವ ಪ್ರಕರಣಕ್ಕೂ ಎಂ.ಎಲ್. ಶರ್ಮ ಪ್ರತಿನಿಧಿಸುವ ಪ್ರಕಣಕ್ಕೂ ಫಲಿತಾಂಶದಲ್ಲಿ ವ್ಯತ್ಯಾಸಗಳುಂಟಾಗುವ ಸಾಧ್ಯತೆಯಿದೆ. ಅಲ್ಲದೇ, ಹಲವಾರು ವರ್ಷ ಜೈಲಿನಲ್ಲಿದ್ದು ಬಳಿಕ ನಿರಾಪರಾಧಿಯೆಂದು ಬಿಡುಗಡೆಗೊಂಡ ಪ್ರಕರಣಗಳು ಈ ದೇಶದಲ್ಲಿ ಧಾರಾಳ ನಡೆದಿವೆ. ನೇಣು ಕುಣಿಕೆಯವರೆಗೆ ಸಾಗಿ ಬಳಿಕ ಬಿಡುಗಡೆಗೊಂಡ ಉಪನ್ಯಾಸಕ ಎಸ್.ಎ.ಆರ್. ಗೀಲಾನಿಯೇ ಇದಕ್ಕೆ ಅತ್ಯುತ್ತಮ ಸಾಕ್ಷಿ. “ನನ್ನ ಜೈಲಿನ ಅನುಭವಗಳು” ಎಂಬ ಅವರ ಕೃತಿಯನ್ನು ಓದಿದ ಯಾರೇ ಆಗಲಿ ದಿಗ್ಭ್ರಮೆಗೊಂಡಾರು. ಸಾಕ್ಷ್ಯಗಳನ್ನು ಸೃಷ್ಟಿಸುವ ನಮ್ಮ ವ್ಯವಸ್ಥೆಯ ಸಾಮರ್ಥ್ಯಕ್ಕೆ ಬೆಚ್ಚಿ ಬಿದ್ದಾರು. ಇಂಥ ಸ್ಥಿತಿಯಲ್ಲಿ, ಮರಣದಂಡನೆಯನ್ನು ಸಾರಾಸಾಗಟ ಬೆಂಬಲಿಸುವುದು ಎಷ್ಟರ ಮಟ್ಟಿಗೆ ಸರಿ? ಅದು ಅಗತ್ಯವೇ? ಅದರ ಹೊರತಾದ ಶಿಕ್ಷೆ ಅಪರಿಪೂರ್ಣವೇ? ಬಹುಶಃ,
   “ಸುಪ್ರೀಮ್ ಕೋರ್ಟ್ ಹೇಳಿರುವ ಅಪರೂಪದಲ್ಲಿ ಅಪ ರೂಪದ ಪ್ರಕರಣ ಎಂಬ ವಿಭಾಗದಲ್ಲಿ ಯಾಕೂಬ್ ಮೇಮನ್ ಪ್ರಕರಣ ಒಳಪಡುತ್ತದೆಯೇ ಎಂಬುದು ಖಂಡಿತಕ್ಕೂ ಚರ್ಚಾರ್ಹ” (It is certainly debatable whether Yakub memon's case would fall in the category of the rarest of the rare..) ಎಂದು ದಿ ಹಿಂದೂ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಹೇಳಿರುವುದನ್ನು ಇಲ್ಲಿ ಸ್ಮರಿಸಿಕೊಂಡರೆ ಇಲ್ಲಿನ ಪ್ರಶ್ನೆಗಳು ಇನ್ನಷ್ಟು ಅರ್ಥಪೂರ್ಣವೆನಿಸಬಹುದು. 

1 comment:

  1. ನಿಜವೆಂಾಗಿಯೂಿ ಇಂತಹ ಬೆಳವಣಿಗೆಯನ್ನು ಕಂಡಾಗ ಆತಂಕವಾಗುವುದು ಸಹಜ .....

    ReplyDelete