|
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ವಿಷಾದ ಪ್ರಕಟಣೆ |
“ಭೂಕಂಪಕ್ಕೆ ಜೀನ್ಸ್ ಧರಿಸುವ ಮಹಿಳೆಯರೇ ಕಾರಣ ಎಂದ ಮೌಲಾನಾ ಫಝ್ಲುರ್ರಹ್ಮಾನ್..” (Women wearing jeans are reason behind earthquekes- Jui-F chief maulana fazlur rehman
) ಎಂಬ ಶೀರ್ಷಿಕೆಯಲ್ಲಿ ಕಳೆದ ಮೇ 30ರಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯು ಸುದ್ದಿಯೊಂದನ್ನು ಪ್ರಕಟಿಸಿತು. ಮರುದಿನ ಮೇ 31ರಂದು (ಆದಿತ್ಯವಾರ) ವಿಜಯ ಕರ್ನಾಟಕ ಪತ್ರಿಕೆಯು, “ಭೂಕಂಪಕ್ಕೆ ಹೆಣ್ಣು ಮಕ್ಕಳ ಜೀನ್ಸ್ ಕಾರಣ” ಎಂಬ ಶೀರ್ಷಿಕೆಯಲ್ಲಿ ಅದೇ ಸುದ್ದಿಯನ್ನು ಪ್ರಕಟಿಸಿತು. “ಬೆಲೆ ಏರಿಕೆ, ಭಯೋತ್ಪಾದನೆ ಮತ್ತು ಭೂಕಂಪಗಳಿಗೆ ಜೀನ್ಸ್ ಧರಿಸುವ ಮಹಿಳೆಯರೇ ಕಾರಣ ಎಂದ ಪಾಕಿಸ್ತಾನದ ಧರ್ಮ ಗುರು” (Pakistan Cleric says women who wears jeans are behind earthquekes, terrorism and rising inflation) ಎಂಬ ಮೈಲುದ್ದದ ಶೀರ್ಷಿಕೆಯೊಂದಿಗೆ ಲಂಡನ್ನಿನ ಡೈಲಿ ಮೇಲ್ ಪತ್ರಿಕೆಯಲ್ಲಿ ಜೂನ್ 2ರಂದು ಅದೇ ಸುದ್ದಿ ಪ್ರಕಟವಾಯಿತು. ಟೈಮ್ಸ್ ಆಫ್ ಇಂಡಿಯಾ, ಡಿ.ಎನ್.ಎ., ಕನ್ನಡಪ್ರಭ ಸೇರಿದಂತೆ ಹೆಚ್ಚಿನೆಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳು ಈ ಸುದ್ದಿಯನ್ನು ಅತೀವ ಆಸಕ್ತಿಯಿಂದ ಪ್ರಕಟಿಸಿದವು. ಮೇ 30ರಿಂದ ಜೂನ್ 2ರ ನಡುವೆ ಪ್ರಕಟವಾದ ಈ ಸುದ್ದಿಗಳಿಗೆ ಓದುಗರ ಪ್ರತಿಕ್ರಿಯೆ ಎಷ್ಟು ಆವೇಶ ಭರಿತವಾಗಿತ್ತೆಂದರೆ ನಿಂದನೆ, ಭರ್ತ್ಸ್ಯನೆ, ವ್ಯಂಗ್ಯಗಳ ಮಹಾಪೂರವೇ ಹರಿಯಿತು. ಫಝ್ಲುರ್ರಹ್ಮಾನ್‍ರನ್ನು ಜೋಕರ್‍ನಂತೆ ಬಿಂಬಿಸಲಾಯಿತು. ‘ಕೂಪ ಮಂಡೂಕ ಮೌಲಾನಾ’ ಎಂದು ಕರೆಯಲಾಯಿತು. ಅಂದಹಾಗೆ, ಫಝ್ಲುರ್ರಹ್ಮಾನ್‍ರು ಪಾಕ್ ಪಾರ್ಲಿಮೆಂಟ್‍ನ ಸದಸ್ಯ. ಅವರ ಜವಿೂಯತೆ ಉಲೆಮಾ ಪಕ್ಷವು ಪ್ರಧಾನಿ ನವಾಝ್ ಶರೀಫ್‍ರ ಆಡಳಿತ ಮೈತ್ರಿಕೂಟದ ಭಾಗವಾಗಿದೆ. ಅಷ್ಟಕ್ಕೂ, ಫಝ್ಲುರ್ರಹ್ಮಾನ್‍ರು ನಿಜಕ್ಕೂ ಇಂಥದ್ದೊಂದು ಹೇಳಿಕೆಯನ್ನು ಕೊಟ್ಟಿರುತ್ತಿದ್ದರೆ ಟೀಕೆಗಳನ್ನು ಒಂದು ಹಂತದವರೆಗೆ ಸಮರ್ಥಿಸಿಕೊಳ್ಳಬಹುದಿತ್ತು. ಹಾಗಂತ, ಅವರು ಮಾದರಿ ಮೌಲಾನಾ ಎಂದು ಹೇಳುತ್ತಿಲ್ಲ. ಅವರು ಈ ಹಿಂದೆ ನೀಡಿರಬಹುದಾದ ವಿವಾದಾಸ್ಪದ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುತ್ತಲೂ ಇಲ್ಲ. ಆದರೆ, ಸುದ್ದಿಯನ್ನು ಪ್ರಕಟಿಸುವುದಕ್ಕಿಂತ ಮೊದಲು ಅದರ ಮೂಲವನ್ನು ಮಾಧ್ಯಮಗಳು ಪರಿಶೀಲಿಸಬೇಡವೇ? ಅದು ಫಝ್ಲುರ್ರಹ್ಮಾನ್‍ರ ಹೇಳಿಕೆ ಎಂಬುದಕ್ಕೆ ಅಧಿಕೃತ ದಾಖಲೆಗಳನ್ನೋ ಮಾಹಿತಿಯನ್ನೋ ಇಟ್ಟುಕೊಂಡಿರಬೇಡವೇ? ನಿಜವಾಗಿ, ಈ ಸುದ್ದಿ ಪಾಕಿಸ್ತಾನದ ಖಬರಿಸ್ತಾನ್ ಟೈಮ್ಸ್ ಡಾಟ್ ಕಾಮ್ ಎಂಬ ಇಂಟರ್‍ನೆಟ್ ಪತ್ರಿಕೆಯಲ್ಲಿ (Online) ಮೇ 22ರಂದು ಪ್ರಕಟವಾಗಿತ್ತು. ಅದೊಂದು ವಿಡಂಬನಾತ್ಮಕ (Satirical) ಪತ್ರಿಕೆ. ತಮಾಷೆ, ವ್ಯಂಗ್ಯ, ಪ್ರಹಸನಗಳೇ ಈ ಖಬರಿಸ್ತಾನದ ಬಂಡವಾಳ. ಅದು ಉತ್ಪ್ರೇಕ್ಷಿತ ಸುದ್ದಿಯನ್ನು ಕೊಡುತ್ತಿರುತ್ತದೆ. ನಿಜದಂತೆ ಕಾಣುವ ಆದರೆ ನಿಜವಲ್ಲದ ಅಪಹಾಸ್ಯದ ಸುದ್ದಿಗಳನ್ನು ಸೃಷ್ಟಿಸುತ್ತಿರುತ್ತದೆ. ಈ ಖಬರಿಸ್ತಾನ ಪ್ರಕಟಿಸಿದ ಇದೇ ಸುದ್ದಿಯು ಮೇ 26ರ ಬಳಿಕ ಇನ್ನಿತರ ಇಂಟರ್‍ನೆಟ್ ಪತ್ರಿಕೆಗಳಲ್ಲೂ ಕಾಣಿಸಿಕೊಂಡವು. ಕ್ಯಾಂಪಸ್ ಬಸ್ ಮ್ಯಾಗ್ ಎಂಬ ಇಂಟರ್‍ನೆಟ್ ಪತ್ರಿಕೆಯೂ ಇದರಲ್ಲೊಂದು. ಆದರೆ ಆ ಪತ್ರಿಕೆಗೆ ಅದು ವಿಡಂಬನಾತ್ಮಕ ಸುದ್ದಿಯೆಂದು ಗೊತ್ತಿತ್ತು. ಹಾಗೆಯೇ ಅದು ಬರೆದಿತ್ತು ಕೂಡ. ತಾನು ಈ ಸುದ್ದಿಯನ್ನು ಪಾಕಿಸ್ತಾನ್ ಟುಡೇಯಿಂದ ಆರಿಸಿಕೊಂಡಿರುವುದಾಗಿಯೂ ಅದು ಹೇಳಿಕೊಂಡಿತ್ತು. ವಿಶೇಷ ಏನೆಂದರೆ, ಪಾಕಿಸ್ತಾನ್ ಟುಡೆಯಲ್ಲಿ ಈ ಸುದ್ದಿ ಒಂದು ವರ್ಷದ ಹಿಂದೆ 2014, ಫೆಬ್ರವರಿ 1 ರಂದೇ ಪ್ರಕಟವಾಗಿತ್ತು. ಇದೂ ಅದರ ಸ್ವಂತ ಸುದ್ದಿಯಲ್ಲ. ಖಬರಿಸ್ತಾನದಿಂದಲೇ ಪಡಕೊಂಡ ಸುದ್ದಿಯಾಗಿತ್ತದು. ಹೀಗೆ ತನ್ನದೇ ಹಳೆ ಸುದ್ದಿಯನ್ನು ಖಬರಿಸ್ತಾನವು ಮೇ 22 ರಂದು ಮತ್ತೆ ಹೊಸ ಸುದ್ದಿಯಂತೆ ಮರು ಪ್ರಕಟಿಸಿತು. ಖಬರಿಸ್ತಾನದ ಪ್ರಕಾರ, ಶುಕ್ರವಾರದ ನಮಾಝ್‍ನ ಬಳಿಕ ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಫಝ್ಲುರ್ರಹ್ಮಾನ್‍ರು ಈ ಹೇಳಿಕೆಯನ್ನು ಹೊರಡಿಸಿದ್ದಾರೆ. ಕ್ಯಾಂಪಸ್ ಬಸ್ ಮ್ಯಾಗ್‍ನ ಪ್ರಕಾರ, ಈ ಹೇಳಿಕೆ ಹೊರಡಿಸಿದ್ದು ಮಂಗಳವಾರ. ವಿಜಯ ಕರ್ನಾಟಕದ ಮಟ್ಟಿಗೆ ಈ ಪತ್ರಿಕಾಗೋಷ್ಠಿ ಏರ್ಪಟಾದದ್ದು ಶನಿವಾರ. ಒಂದು ಸುದ್ದಿಯನ್ನು ಸುಳ್ಳು ಎಂದು ತೀರ್ಮಾನಿಸುವುದಕ್ಕೆ ಇದಕ್ಕಿಂತ ಹೆಚ್ಚಿನ ಪುರಾವೆಗಳು ಇನ್ನೇನು ಬೇಕು? ನಿಜವಾಗಿ, ಸುದ್ದಿಯನ್ನು ಪರಿಶೀಲಿಸದೆಯೇ ಪ್ರಕಟಿಸುವುದರಿಂದ ಆಗುವ ಅನಾಹುತಗಳಿಗೆ ಉದಾಹರಣೆ ಇದು. ಇಲ್ಲಿ ಖಬರಿಸ್ತಾನವನ್ನು ದೂರಿ ಪ್ರಯೋಜನವಿಲ್ಲ. ಯಾಕೆಂದರೆ, ವಿಡಂಬನಾತ್ಮಕ ಪತ್ರಿಕೆಯಾಗಿಯೇ ಅದು ಗುರುತಿಸಿಕೊಂಡಿದೆ. ಆದ್ದರಿಂದಲೇ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯು ಈ ಸುದ್ದಿ ಪ್ರಕಟಿಸಿದುದಕ್ಕಾಗಿ ಬಳಿಕ ವಿಷಾದ ಸೂಚಿಸಿತು. ಲಂಡನ್ನಿನ ಡೈಲಿ ಮೇಲ್ ಪತ್ರಿಕೆಯು ತನ್ನ ಅನ್‍ಲೈನ್ ಆವೃತ್ತಿಯಿಂದ ಈ ಸುದ್ದಿಯನ್ನು ಕಿತ್ತಾಹಾಕಿತು. ಹಾಗಿದ್ದರೂ, ಕೆಲವು ಪ್ರಶ್ನೆಗಳಂತೂ ಕಾಡಿಯೇ ಕಾಡುತ್ತದೆ. ಮಾಧ್ಯಮದ ಜವಾಬ್ದಾರಿಗಳು ಏನೆಲ್ಲ? ಸುದ್ದಿಯನ್ನು ಪರಿಶೀಲನೆಗೆ ಒಳಪಡಿಸದೆಯೇ ಪ್ರಕಟಿಸುವುದು ಬರೇ ವಿಷಾದ ಸೂಚಿಸಿ ಮುಗಿಸುವಷ್ಟು ಸಣ್ಣ ವಿಚಾರವೇ? ವಿಷಾದ ಸೂಚಿಸುವುದಕ್ಕಿಂತ ಮೊದಲು ಆ ಸುದ್ದಿಯು ಲಕ್ಷಾಂತರ ಮಂದಿಯನ್ನು ತಲುಪಿರುತ್ತದೆ. ಓದುಗರು ಅದನ್ನು ಇತರರಲ್ಲಿ ಹಂಚಿಕೊಂಡಿರುತ್ತಾರೆ. ಅದನ್ನು ತಮ್ಮ ವಾದಕ್ಕೆ ಪುರಾವೆಯಾಗಿ ಮಂಡಿಸಿರುತ್ತಾರೆ. ಓರ್ವನನ್ನು ಭಯೋತ್ಪಾದಕನೆಂದೋ ದೇಶದ್ರೋಹಿಯೆಂದೋ ಸಾಬೀತುಪಡಿಸುವುದಕ್ಕೆ ಆ ಸುದ್ದಿಯು ಬಳಕೆಯಾಗಿರುತ್ತದೆ. ಇವೆಲ್ಲವೂ ಕಳೆದ ಮೇಲೆ ಪತ್ರಿಕೆಯ ಯಾವುದೋ ಒಂದು ಮೂಲೆಯಲ್ಲಿ ಅಥವಾ ಇಂಟರ್‍ನೆಟ್ ಆವೃತ್ತಿಯಲ್ಲಿ ವಿಷಾದ ಸೂಚಿಸುವುದರಿಂದ ಅದಾಗಲೇ ಆಗಿರುವ ಹಾನಿಯನ್ನು ತುಂಬಬಹುದೆ? ಅಷ್ಟಕ್ಕೂ, ಅವು ಪ್ರಕಟಿಸುವ ವಿಷಾದ ಎಷ್ಟು ಚಿಕ್ಕದಾಗಿರುತ್ತದೆಂದರೆ, ಹೆಚ್ಚಿನ ಬಾರಿ ವಿಷಾದಕ್ಕೆ ಕಾರಣಗಳೇನು ಎಂಬುದೇ ಓದುಗರಿಗೆ ಗೊತ್ತಾಗುವುದಿಲ್ಲ. ಮುಖಪುಟದಲ್ಲಿ ಪ್ರಕಟವಾದ ಒಂದು ತಪ್ಪು ಸುದ್ದಿಯ ಬಗ್ಗೆ ಸೂಚಿಸುವ ವಿಷಾದ ಹೇಳಿಕೆಯು ಒಳಪುಟದಲ್ಲಿ ಒಂದು ಗೆರೆಯಷ್ಟೂ ಇರುವುದಿಲ್ಲ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಕೂಡ, “ಈ ಸುದ್ದಿಯು ತಪ್ಪಾಗಿದ್ದು’ ಅದನ್ನು ಪಾಕಿಸ್ತಾನದ ವಿಡಂಬನಾತ್ಮಕ ವೆಬ್‍ಸೈಟ್‍ನ ವರದಿಯ ಆಧಾರದಲ್ಲಿ ಹೆಣೆಯಲಾಗಿತ್ತು. ತಪ್ಪಿಗಾಗಿ ವಿಷಾದಿಸುತ್ತೇವೆ” (This story is erroneous. It was based on reports over a satirical peace appeared on a Pakistani website we regret the mistake) ಎಂದು ಬರೆಯಿತೇ ಹೊರತು ಆ ಸುದ್ದಿಯ ಹಿನ್ನೆಲೆ, ಸುದ್ದಿ ಹುಟ್ಟಿಕೊಂಡ ಬಗೆ ಮತ್ತು ವಾಸ್ತವಗಳ ಕುರಿತಂತೆ ಯಾವ ಮಾಹಿತಿಯನ್ನೂ ನೀಡಲಿಲ್ಲ. ಒಂದು ತಪ್ಪಾದ ಸುದ್ದಿಯನ್ನು ಓದಿದ ಓದುಗನಿಗೆ ಅದರ ಸರಿಯಾದ ಭಾಗವನ್ನು ಓದುವ ಹಕ್ಕು ಇದೆಯಲ್ಲವೇ? ಅದನ್ನು ಒದಗಿಸಬೇಕಾದದ್ದು ಯಾರು? ತಪ್ಪು ಸುದ್ದಿಯನ್ನು ಕೊಟ್ಟ ಪತ್ರಿಕೆಗಳು ಅದರ ಹೊಣೆಯನ್ನು ವಹಿಸಿಕೊಳ್ಳುವುದಿಲ್ಲವಾದರೆ ಅದನ್ನು ಏನೆಂದು ಪರಿಗಣಿಸಬೇಕು? ಬೇಜವಾಬ್ದಾರಿ, ನಿರ್ಲಕ್ಷ್ಯ, ನುಣುಚಿಕೊಳ್ಳುವಿಕೆ, ಪಲಾಯನ...
ಇತ್ತೀಚೆಗೆ ಬಿ.ಬಿ.ಸಿ.ಯು ಒಂದು ಸುದ್ದಿಯನ್ನು ಸ್ಫೋಟಿಸಿತು. ನೈಜೀರಿಯಾದ ಅನಂಬ್ರದಲ್ಲಿರುವ ಒಂದು ಹೊಟೇಲ್‍ನಲ್ಲಿ ನರಮಾಂಸವನ್ನು ಬೇಯಿಸಿ ಗ್ರಾಹಕರಿಗೆ ನೀಡಲಾಗುತ್ತದೆ ಎಂಬುದೇ ಆ ಸುದ್ದಿ. ಈ ವಿಷಯ ಬಹಿರಂಗವಾದ ಬಳಿಕ ಆ ಹೊಟೇಲ್ ಅನ್ನು ಮುಚ್ಚಲಾಗಿದೆ ಎಂದೂ ಅದು ಪ್ರಕಟಿಸಿತು. ಈ ಸುದ್ದಿ ಪ್ರಕಟವಾದದ್ದು ಬಿಬಿಸಿಯ ಸ್ವಾಹಿಲಿ ಎಂಬ ಹೆಸರಿನ ಇಂಟರ್‍ನೆಟ್ ಪತ್ರಿಕೆಯಲ್ಲಿ. ಸ್ವಾಹಿಲಿ ಎಂಬುದು ಒಂದು ಭಾಷೆ. ತಾಂಝಾನಿಯಾ, ಬುರುಂಡಿ, ಕಾಂಗೋ, ನೈಜೀರಿಯಾ, ಅಮೇರಿಕ, ರುವಾಂಡ... ಮುಂತಾದ ರಾಷ್ಟ್ರಗಳಲ್ಲಿ ಈ ಭಾಷೆಯನ್ನಾಡುವ 5 ಮಿಲಿಯನ್ ಮಂದಿಯಿದ್ದಾರೆ ಎಂದು ಹೇಳಲಾಗುತ್ತದೆ. ಬಿ.ಬಿ.ಸಿ. ಪ್ರಕಟಿಸಿದ ಸುದ್ದಿ ಎಷ್ಟು ರೋಚಕವಾಗಿತ್ತೆಂದರೆ, ಅದರಲ್ಲಿ ಹಸಿಹಸಿ ವಿವರಣೆಗಳಿದ್ದುವು. “ಜನರು ಅನುಮಾನ ಬಂದು ಪೊಲೀಸರಿಗೆ ದೂರು ಕೊಟ್ಟರೆಂದೂ, ಪೊಲೀಸರು ಬಂದು ಪರಿಶೀಲಿಸಿದಾಗ ಆಗಷ್ಟೇ ಕೊಯ್ದ, ರಕ್ತ ತೊಟ್ಟಿಕ್ಕುತ್ತಿರುವ ಮಾನವ ತಲೆಗಳು ಕಂಡುಬಂದುವು ಎಂದೂ’ ಬರೆಯಲಾಗಿತ್ತು. ರಕ್ತವನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಲಾಗುತ್ತಿತ್ತಂತೆ. ಪೊಲೀಸರು ಹೆಚ್ಚಿನ ಪರಿಶೀಲನೆಗೆ ಒಳಪಡಿಸಿದಾಗ ಬಂದೂಕುಗಳು ಮತ್ತು ಗ್ರೆನೇಡ್‍ಗಳು ಸಿಕ್ಕವು..” ಎಂದೂ ಬಿ.ಬಿ.ಸಿ. ಬರೆಯಿತು. ಈ ಸುದ್ದಿಯನ್ನು ಲಂಡನ್ನಿನ ಪ್ರಸಿದ್ಧ ಪತ್ರಿಕೆಗಳಾದ ಡೈಲಿ ಮೇಲ್, ಟೆಲಿಗ್ರಾಫ್‍ಗಳೂ ಎತ್ತಿಕೊಂಡವು. ನೈಜೀರಿಯಾದ ಕೆಲವು ಪತ್ರಿಕೆಗಳೂ ಇದನ್ನು ಮುದ್ರಿಸಿದುವು. ಇದನ್ನು ಓದಿದ ಅನಂಬ್ರದ ಜನರು ಬೀದಿಗಿಳಿದರು. ಬಿ.ಬಿ.ಸಿ. ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು. ನೈಜೀರಿಯದ ಸಂಸ್ಕ್ರಿತಿ ಮತ್ತು ಪ್ರವಾಸೋದ್ಯಮ ಸಚಿವೆ ಮೇರಿ ಇಮೆಲ್ಡಾರು ಸುದ್ದಿಯನ್ನು ಖಂಡಿಸಿ ಪತ್ರಿಕಾಗೋಷ್ಠಿ ನಡೆಸಿದರು. ಇಷ್ಟೆಲ್ಲ ಅನಾಹುತಗಳು ಆದ ಬಳಿಕ ಮೇ 19ರಂದು ಬಿ.ಬಿ.ಸಿ.ಯು ವಿಷಾದ ವ್ಯಕ್ತಪಡಿಸಿ ಇಂಟರ್‍ನೆಟ್ ಆವೃತ್ತಿಯಿಂದ ಆ ಸುದ್ದಿಯನ್ನು ಹಿಂತೆಗೆದುಕೊಂಡಿತು. ‘ಸುದ್ದಿ ಮೂಲವನ್ನು ತನಿಖೆಗೊಳಪಡಿಸದೇ ಪ್ರಕಟಿಸಿದುದರಿಂದ ಆದ ಪ್ರಮಾದವಿದು..’ ಎಂಬ ಸ್ಪಷ್ಟೀಕರಣವನ್ನೂ ನೀಡಿತು. ನಿಜವಾಗಿ, `ಪ್ರಮಾದ' ಎಂಬ ಮೂರಕ್ಷರಕ್ಕೆ ಸೀಮಿತಗೊಳಿಸಿ ನೋಡಬಹುದಾದ ಪ್ರಕರಣ ಇದಲ್ಲ. ಯಾಕೆಂದರೆ, ಇಂಥ ಪ್ರಮಾದಗಳು ಏಶ್ಯನ್- ಆಫ್ರಿಕನ್ ರಾಷ್ಟ್ರಗಳ ಬಗ್ಗೆ ಮತ್ತು ಅಲ್ಲಿನ ಜನರ ಬಗ್ಗೆ ಪಾಶ್ಚಾತ್ಯ ಮಾಧ್ಯಮಗಳಿಂದ ನಿರಂತರ ನಡೆಯುತ್ತಲೇ ಬಂದಿದೆ. ಬಿ.ಬಿ.ಸಿ.ಯಿಂದ ಹಿಡಿದು `ದ ಲಾಸ್ಟ್ ಕಿಂಗ್ ಆಫ್ ಸ್ಕಾಟ್‍ಲ್ಯಾಂಡ್' ಎಂಬ ಸಿನಿಮಾದ ವರೆಗೆ ಎಲ್ಲವೂ ಆಫ್ರಿಕನ್ ನಾಗರಿಕರನ್ನು ಅನಾಗರಿಕರಂತೆ ಬಿಂಬಿಸುತ್ತಲೇ ಬಂದಿವೆ. ಉಗಾಂಡದ ಮಾಜಿ ಅಧ್ಯಕ್ಷ ಇದಿ ಅಮೀನ್‍ರನ್ನು ನರಮಾಂಸ ಭಕ್ಷಕ ಎಂದು ಅವು ಹೇಳಿದ್ದುವು. ಲಿಬಿಯದ ಗದ್ದಾಫಿ, ಇರಾಕ್‍ನ ಸದ್ದಾಮ್, ಇರಾನ್‍ನ ಖೊಮೇನಿ... ಸಹಿತ ಆಫ್ರಿಕನ್-ಅರಬ್ ರಾಷ್ಟ್ರಗಳ ನಾಯಕರ ದೊಡ್ಡದೊಂದು ಪಟ್ಟಿಯೇ ಇವರ ಪ್ರಮಾದಕ್ಕೆ ಸಾಕ್ಷಿಯಾಗಿದೆ. ಆದ್ದರಿಂದಲೇ ಮಾಧ್ಯಮ ಪ್ರಾಮಾಣಿಕತೆ ಮತ್ತೆ ಮತ್ತೆ ಸಂದೇಹಕ್ಕೆ ಒಳಗಾಗುತ್ತಿರುವುದು. ವಿಷಾದ ಎಂಬುದು ನಿರ್ಲಕ್ಷ್ಯವನ್ನೋ ದುರುದ್ದೇಶವನ್ನೋ ಮುಚ್ಚಿಡುವುದಕ್ಕಾಗಿ ಬಳಸಬೇಕಾದ ಪದವಲ್ಲವಲ್ಲ. ಆ ಪದಕ್ಕೆ ಗೌರವವಿದೆ.We regret the mistake
.
|
ತಪ್ಪೊಪ್ಪಿಕೊಂಡ BBC |
ಎಂದು ಒಪ್ಪುವಾಗ, ಮತ್ತೆಂದೂ ಇಂಥದ್ದೊಂದು ಪ್ರಮಾದಕ್ಕೆ ಅವಕಾಶ ನೀಡುವುದಿಲ್ಲ ಎಂಬೊಂದು ಬದ್ಧತೆಯನ್ನೂ ಮಾಧ್ಯಮ ರಂಗ ಪ್ರದರ್ಶಿಸಬೇಕಾಗುತ್ತದೆ. ಈ ಬದ್ಧತೆಯನ್ನು ಮಾಧ್ಯಮ ರಂಗವು ಇವತ್ತು ಎಷ್ಟರ ಮಟ್ಟಿಗೆ ಕಾಪಾಡಿಕೊಂಡಿದೆ? ಈ ರಂಗ ಇವತ್ತು ನಮಗೆ ಒದಗಿಸುತ್ತಿರುವುದು ಸಂಪೂರ್ಣ ಪರಿಶೀಲನೆಗೊಳಪಡಿಸಿದ ಸುದ್ದಿಯನ್ನೋ? ಅವು ಪಕ್ಷಪಾತರಹಿತವೇ? ಧರ್ಮ, ಜಾತಿ, ಜನಾಂಗ, ಭಾಷೆಯನ್ನು ಮೀರಿದ ಆದರ್ಶವೊಂದು ‘ಸುದ್ದಿ ಮನೆ’(ಪತ್ರಿಕಾ ಕಚೇರಿ)ಗಳಲ್ಲಿವೆಯೇ? ಇದೆಯೆಂದಾದರೆ ಅದು ನಿಜಕ್ಕೂ ಸಕ್ರಿಯವಾಗಿದೆಯೇ? ಅಷ್ಟಕ್ಕೂ,
ಫಝ್ಲುರ್ರಹ್ಮಾನ್‍ರ ಬಗ್ಗೆ ರೋಚಕ ಸುದ್ದಿಯನ್ನು ಕಟ್ಟಿಕೊಟ್ಟ ಕನ್ನಡ ಸಹಿತ
ಹೆಚ್ಚಿನೆಲ್ಲ ಪತ್ರಿಕೆಗಳು ಕನಿಷ್ಠ ಆ ಬಗ್ಗೆ ಸ್ಪಷ್ಟೀಕರಣವನ್ನೋ ವಿಷಾದವನ್ನೋ ಈ ವರೆಗೂ
ಸೂಚಿಸಿಲ್ಲ ಎಂಬುದೇ ಮಾಧ್ಯಮರಂಗದ ಆದರ್ಶ ಬದ್ಧತೆಯ ಮಿತಿಯನ್ನು ಸ್ಪಷ್ಟಪಡಿಸುತ್ತದೆ.
No comments:
Post a Comment