|
ಶಂಕರ್ ಗುಹಾ ನಿಯೋಗಿ |
ನರೇಂದ್ರ ಮೋದಿಯವರು ಪ್ರಧಾನಿಯಾದ ಕೆಲವೇ ವಾರಗಳಲ್ಲಿ, “ಭಾರತದ ಅಭಿವೃದ್ಧಿ ಯೋಜನೆಗಳನ್ನು ತಡೆಯಲು ವಿದೇಶಿ ದೇಣಿಗೆ ಪಡೆಯುವ ಎನ್‍ಜಿಓ(ಸರಕಾರೇತರ ಸಂಸ್ಥೆ)ಗಳ ಸಂಚು” (Concerted efforts by select foreign funded NGOs to take down Indian development projects) ಎಂಬ ಶೀರ್ಷಿಕೆಯಲ್ಲಿ ಭಾರತದ ಗುಪ್ತಚರ ಇಲಾಖೆಯು (IB) 21 ಪುಟಗಳ ವರದಿಯನ್ನು ಸರಕಾರಕ್ಕೆ ಸಲ್ಲಿಸಿತು. ಸುಮನ್ ಸಹಾಯ್, ವಂದನಾ ಶಿವ, ಕವಿತಾ ಕುರುಗಂತಿ, ಉದಯ ಕುಮಾರ್, ಅರುಣಾ ರಾಡ್ರಿಗಸ್, ಸ್ವಾಮಿ ಅಗ್ನಿವೇಶ್.. ಮುಂತಾದ ಸಾಮಾಜಿಕ ಕಾರ್ಯಕರ್ತರ ಮೇಲೆ ಈ ವರದಿ ಶಂಕೆ ವ್ಯಕ್ತ ಪಡಿಸಿತು. ಗ್ರೀನ್‍ಪೀಸ್, ಆ್ಯಕ್ಷನ್ ಏಡ್, ಆಶಾ.. ಮುಂತಾದ ಎನ್‍ಜಿಓಗಳೂ ಶಂಕೆಗೊಳಗಾದವು. ಅದರಲ್ಲೂ ಗ್ರೀನ್‍ಪೀಸ್‍ನ ಮೇಲೆ ಮೋದಿ ಸರಕಾರ ಎಷ್ಟರ ಮಟ್ಟಿಗೆ ದ್ವೇಷದಿಂದ ವರ್ತಿಸಿ ತೆಂದರೆ, ಅದರ ಪ್ರಮುಖ ಕಾರ್ಯಕರ್ತೆ ಪ್ರಿಯಾ ಪಿಳ್ಳೆಯನ್ನು ಲಂಡನ್‍ಗೆ ತೆರಳದಂತೆ ಭಾರತದ ವಿಮಾನ ನಿಲ್ದಾಣದಲ್ಲೇ ತಡೆಹಿಡಿಯಲಾಯಿತು. ಮಧ್ಯ ಪ್ರದೇಶದ ಮಹನ್ ಎಂಬಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಯೋಜನೆಯಿಂದ ನಿರ್ಗತಿಕರಾಗುವ ಆದಿವಾಸಿಗಳ ಕುರಿತಂತೆ ಬ್ರಿಟಿಷ್ ಪಾರ್ಲಿಮೆಂಟ್‍ನಲ್ಲಿ ವಿಷಯ ಮಂಡಿಸುವುದು ಪ್ರಿಯಾ ಪಿಳ್ಳೆಯ ಪ್ರಯಾಣದ ಉದ್ದೇಶವಾಗಿತ್ತು. 40 ರಾಷ್ಟ್ರಗಳಲ್ಲಿ ಚಟುವಟಿಕೆಯಲ್ಲಿರುವ ಗ್ರೀನ್‍ಪೀಸ್, ಜಗತ್ತಿನಲ್ಲಿಯೇ ಅತಿ ದೊಡ್ಡ ಸರಕಾರೇತರ ಸಂಸ್ಥೆ. ಕಲ್ಲಿದ್ದಲು ಮತ್ತು ಪರಮಾಣು ಆಧಾರಿತ ವಿದ್ಯುತ್ ಯೋಜನೆಗಳೇ ಅದರ ಮುಖ್ಯ ಗುರಿ. ಇಂಥ ಬೃಹತ್ ಯೋಜನೆಗಳಿಂದ ಆಗಬಹುದಾದ ಪರಿಸರ ನಾಶ, ನಿರ್ವಸಿತರು, ಕೃಷಿ ಭೂಮಿ.. ಸಹಿತ ಒಟ್ಟು ಹಾನಿಗಳ ಬಗ್ಗೆ ಅದು ಜನಜಾಗೃತಿ ಮೂಡಿಸುವುದನ್ನು ಈವರೆಗೂ ಮಾಡುತ್ತಾ ಬಂದಿದೆ. ನಿಜವಾಗಿ, ಮೋದಿಯವರ ಕಾಕದೃಷ್ಟಿ ಗ್ರೀನ್‍ಪೀಸ್‍ನ ಮೇಲೆ ಬೀಳುವುದಕ್ಕೆ ಇನ್ನೊಂದು ಕಾರಣವೂ ಇದೆ- ಅದುವೇ ಅದಾನಿ. ‘Research breaking: Adani's record of environmental destruction and non compliance with regulations’ (ಅದಾನಿ ಕಂಪೆನಿ ನಡೆಸಿರುವ ಪರಿಸರ ನಾಶ ಮತ್ತು ಕಾನೂನು ಉಲ್ಲಂಘನೆಯ ಅಧ್ಯಯನಾತ್ಮಕ ವರದಿ) ಎಂಬ ಹೆಸರಲ್ಲಿ 2014 ಮಾರ್ಚ್‍ನಲ್ಲಿ ಗ್ರೀನ್‍ಪೀಸ್ ಸಂಸ್ಥೆಯು ವಿಸ್ತೃತ ವರದಿಯನ್ನು ಬಿಡುಗಡೆಗೊಳಿಸಿತ್ತು. ಮೋದಿಯವರ ಪರಮಾಪ್ತರಾದ ಅದಾನಿಯವರ ‘ಕೋಲ್ ಇಂಡಿಯಾ ಕಂಪೆನಿ’ಗೆ ಪರಿಸರ ನಾಶದಲ್ಲಿ ದೀರ್ಘ ಇತಿಹಾಸವಿರುವುದನ್ನು ಆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಅನಧಿಕೃತ ನಿರ್ಮಾಣ, ತೆರಿಗೆ ವಂಚನೆ ಮತ್ತು ಅಧಿಕಾರಿಗಳಿಗೆ ಲಂಚ ನೀಡಿದ್ದೂ ಸೇರಿದಂತೆ ಅದಾನಿ ಕಂಪೆನಿಯ ನಡೆಯನ್ನು ಅದರಲ್ಲಿ ಉಲ್ಲೇಖಿಸಿ ಪ್ರಶ್ನಿಸಲಾಗಿತ್ತು. ಅದಾನಿಯವರ ಕೋಲ್ ಇಂಡಿಯಾ ಕಂಪೆನಿಯು ಜಗತ್ತಿನಲ್ಲಿಯೇ ಪ್ರಮುಖ ಕಲ್ಲಿದ್ದಲು ಸಂಸ್ಥೆ. ಆಸ್ಟ್ರೇಲಿಯಾದಲ್ಲಿ ಅದು 16.5 ಬಿಲಿಯನ್ ಡಾಲರ್ ಮೊತ್ತದ ಕಲ್ಲಿದ್ದಲು ಗುತ್ತಿಗೆಯನ್ನು ಪಡಕೊಂಡದ್ದು ಮತ್ತು ಅಲ್ಲಿನ ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ಆ ಮೊದಲೇ ಪಾರ್ಟಿ ಫಂಡ್ ನೀಡಿದ್ದು ಈ ಹಿಂದೆ ಸುದ್ದಿಯಾಗಿತ್ತು. ನಿಜವಾಗಿ, ಗ್ರೀನ್‍ಪೀಸ್‍ನ ಮೇಲೆ ಕ್ರಮ ಕೈಗೊಂಡರೆ ಅದು ಜಾಗತಿಕವಾಗಿ ಸಂಚಲನ ಸೃಷ್ಟಿಸಲಾರದೆಂಬುದು ಮೋದಿಯವರಿಗೆ ಖಚಿತವಾಗಿ ಗೊತ್ತಿತ್ತು. ಯಾಕೆಂದರೆ, ಅದು ಬೃಹತ್ ಅಭಿವೃದ್ಧಿ ಯೋಜನೆಗಳನ್ನು ವಿಶ್ವದಾದ್ಯಂತ ಪ್ರಶ್ನಿಸುತ್ತಿದೆ. ಅಂಥವುಗಳನ್ನು ಖಂಡಿಸಿ ಪ್ರತಿಭಟಿಸುತ್ತಿದೆ. ಫೋಸ್ಕೋ, ವೇದಾಂತ, ಪರಮಾಣು ವಿದ್ಯುತ್ ಸ್ಥಾವರಗಳು, ನರ್ಮದಾ ಯೋಜನೆ.. ಸಹಿತ ಎಲ್ಲವೂ ಅದರ ವಿರೋಧಕ್ಕೆ ಗುರಿಯಾಗಿದೆ. ಇವುಗಳಿಂದಾಗಿ ನಿರ್ವಸಿತರಾಗುವ ಜನರಿಗೆ ಅದು ಧ್ವನಿಯನ್ನು ಕೊಡುತ್ತಿದೆ. ಈ ಹಿಂದೆ ಫ್ರಾನ್ಸ್ ಸರಕಾರವು ಮೊರುರಾದಲ್ಲಿ ಅಣು ಪರೀಕ್ಷೆ ನಡೆಸಿದ್ದನ್ನು ಗ್ರೀನ್‍ಪೀಸ್ ಪ್ರತಿಭಟಿಸಿದಾಗ ಫ್ರಾನ್ಸ್ ಅದರ ಕತ್ತು ಹಿಸುಕಿತ್ತು. ಹಾಗಂತ, ಈ ವಿಷಯದಲ್ಲಿ ಮೋದಿ ಒಂಟಿಯಲ್ಲ. ಪುರುಷೋತ್ತಮ್ ದಾಸ್ ಕುದಾಲ್‍ರ ನೇತೃತ್ವದಲ್ಲಿ 1982ರಲ್ಲಿ ಇಂದಿರಾ ಗಾಂಧಿಯವರು ಎನ್‍ಜಿಓಗಳ ತನಿಖೆಗಾಗಿ ಸಮಿತಿಯನ್ನು ರಚಿಸಿದ್ದರು. 1975ರಲ್ಲಿ ತುರ್ತು ಪರಿಸ್ಥತಿಯನ್ನು ಹೇರಿ ಆ ಬಳಿಕ ಜನತಾ ಸರಕಾರ ಅಧಿಕಾರಕ್ಕೆ ಬಂದು ಮುಂದಿನ ಚುನಾವಣೆಯಲ್ಲಿ ಮತ್ತೆ ಇಂದಿರಾ ಗಾಂಧಿಯವರೇ ಅಧಿಕಾರಕ್ಕೇರಿದ ಸಂದರ್ಭವಾಗಿತ್ತದು. ಜನತಾ ಸರಕಾರದ ಗೆಲುವಿನಲ್ಲಿ ಎನ್‍ಜಿಓಗಳ ಪಾತ್ರವಿದೆ ಎಂಬುದು ಅವರ ಅನುಮಾನವಾಗಿತ್ತು. 'ಎನ್‍ಜಿಓಗಳಿಗೆ ಅಮೇರಿಕದ ಗುಪ್ತಚರ ಸಂಸ್ಥೆ ಸಿಐಎ ದೇಣಿಗೆ ನೀಡಿದೆ ಮತ್ತು ಇದರಲ್ಲಿ ಸಂಘಪರಿವಾರದ ನಾಯಕರೂ ಭಾಗಿಯಾಗಿದ್ದಾರೆ'... ಎಂದೂ ವರದಿಯಲ್ಲಿ ಹೇಳಲಾಗಿತ್ತು. ನಿಜವಾಗಿ, ಸರ್ವಾಧಿಕಾರಿ ಮನಸ್ಥಿತಿಯ ಮಂದಿಯೇ ಹೀಗೆ. ಅದು ಇಂದಿರಾ ಆಗಿರಬಹುದು ಅಥವಾ ಮೋದಿ ಆಗಿರಬಹುದು - ಅವರು ಸದಾ ಭೀತಿಯಲ್ಲೇ ಬದುಕುತ್ತಿರುತ್ತಾರೆ. ವಿರೋಧಿ ಧ್ವನಿಗಳನ್ನು ಮಟ್ಟ ಹಾಕುತ್ತಾರೆ. ತನಿಖೆಯ ಹೆಸರಲ್ಲಿ ಹಿಂಸೆ ಕೊಡುತ್ತಾರೆ. ಒಮ್ಮೆ ಅಧಿಕಾರಕ್ಕೇರಿದ ಬಳಿಕ ಮತ್ತೆಂದೂ ಅಧಿಕಾರ ಬಿಟ್ಟು ಕೊಡಲು ಒಪ್ಪದ ಅಸಮರ್ಪಕ ರಾಜಕೀಯ ಮನಸ್ಥಿತಿ ಭಾರತದ್ದು. ಪ್ರಿಯಾ ಪಿಳ್ಳೆಯನ್ನು ದೇಶವಿರೋಧಿಯಂತೆ ನಡೆಸಿಕೊಂಡ
|
ರೋಮ್ ಮಾರ್ಚ್ |
ಮೋದಿಯವರಂತೆಯೇ 1977ರಲ್ಲಿ ಅಂದಿನ ಜನತಾ ಸರಕಾರವು ಶಂಕರ್ ಗುಹಾ ನಿಯೋಗಿಯನ್ನೂ ನಡೆಸಿ ಕೊಂಡಿತ್ತು. ಛತ್ತೀಸ್‍ಗಢದ ರಾಜಹೋರಾ ಕಲ್ಲಿದ್ದಲು ಗಣಿಯಲ್ಲಿ ಗುಲಾಮರಂತೆ ಜೀವಿಸುತ್ತಿದ್ದ ಆದಿವಾಸಿಗಳ ಪರ ಪ್ರತಿಭಟನೆ ಹಮ್ಮಿಕೊಂಡದ್ದಕ್ಕಾಗಿ ಅಂದಿನ ಮಧ್ಯಪ್ರದೇಶ ಸರಕಾರ ಅವರನ್ನು 1977 ಜೂನ್ 2ರಂದು ಬಂಧಿಸಿತ್ತು. ‘ರಷ್ಯಾದ ಸಹಾಯದಿಂದ ನಡೆಸಲಾಗುವ ಈ ಗಣಿಗಾರಿಕೆಯ ವಿರುದ್ಧ ಅಮೇರಿಕದ ಸಿಐಎ ಯು ನಿಯೋಗಿಯ ಮೂಲಕ ಸಂಚು ನಡೆಸಿದೆ..’ ಎಂದು ಸರಕಾರ ವಾದಿಸಿತ್ತು. ಒಂದು ರೀತಿಯಲ್ಲಿ, 1975ರಲ್ಲಿ ಈ ದೇಶದ ಮೇಲೆ ಮೊದಲ ಬಾರಿಗೆ ತುರ್ತು ಸ್ಥಿತಿಯನ್ನು ಹೇರಲಾಯಿತಾದರೂ ಅದು ಎರಡು ವರ್ಷಗಳಲ್ಲೇ ಅಧಿಕೃತವಾಗಿ ಕೊನೆಗೊಂಡಿದೆ. ಆದರೆ 1991ರ ಬಳಿಕ ಈ ದೇಶದಲ್ಲಿ ಅನಧಿಕೃತ ಮತ್ತು ಅಘೋಷಿತ ತುರ್ತು ಸ್ಥಿತಿಯೊಂದು ಹೆಚ್ಚೂ-ಕಡಿಮೆ ಜಾರಿಯಲ್ಲಿದೆ. 1922 ಅಕ್ಟೋಬರ್ 22ರಿಂದ 29ರ ವರೆಗೆ ಇಟಲಿಯ ಸರ್ವಾಧಿಕಾರಿ ಬೆನಿಟೋ ಮುಸಲೋನಿಯು ‘ರೋಮ್ ಮಾರ್ಚ್' ಎಂಬ ರಾಲಿಯನ್ನು ಹಮ್ಮಿಕೊಂಡಿದ್ದರು. ‘ನಮಗೆ ಅಧಿಕಾರ ಕೊಡಿ’ ಎಂಬ ಘೋಷಣೆಯೊಂದಿಗೆ ಸುಮಾರು 60 ಸಾವಿರ ಕಪ್ಪು ಶರ್ಟ್ ಧರಿಸಿದ ಅವರ ಬೆಂಬಲಿಗರು ಇಟಲಿಯಾದ್ಯಂತ ರಾಲಿಯಲ್ಲಿ ತೆರಳಿದ್ದರು. 90ರ ದಶಕದಲ್ಲಿ ಅಡ್ವಾಣಿಯವರ ನೇತೃತ್ವದಲ್ಲಿ ನಡೆದ ರಥಯಾತ್ರೆ ಅದನ್ನೇ ಹೋಲುತ್ತದೆ. ಆ ಬಳಿಕ ಈ ದೇಶದಲ್ಲಿ ಭೀತಿಯ ರಾಜಕೀಯವೊಂದು ನಡೆಯುತ್ತಿದೆ. ರಥ ತೆರಳಿದಲ್ಲೆಲ್ಲಾ ಕೋಮು ವಿಭಜನೆ, ರಕ್ತಪಾತ ನಡೆಯಿತು. ಮಂಡಲ್ ವಿರೋಧಿ ಚಳವಳಿ, ರಾಜೀವ್ ಗಾಂಧಿ ಹತ್ಯೆ, ನವ ಉದಾರೀಕರಣದ ಪ್ರವೇಶ.. ಎಲ್ಲವೂ 90ರ ಬಳಿಕದ ಘಟನೆಗಳಾಗಿವೆ. ತುರ್ತು ಸ್ಥಿತಿಯಲ್ಲಿ ಕಾಣಿಸಿಕೊಳ್ಳುವ ಭೀತಿಯು 90ರ ಬಳಿಕ ರಾಜಕಾರಣದಲ್ಲಿ ಧಾರಾಳವಾಗಿ ಕಾಣಸಿಗುತ್ತದೆ. ಪ್ರತಿ ಚುನಾವಣೆಯ ಸಂದರ್ಭದಲ್ಲೂ ಜಾತ್ಯತೀತತೆ, ಜಾತೀಯತೆ, ಕೋಮುವಾದ, ಬಾಯಿಮುಚ್ಚಿ, ಪಾಕ್‍ಗೆ ಹೋಗಿ, ಸಮುದ್ರಕ್ಕೆ ಹಾರಿ.. ಎಂಬಂತಹ ಭೀತಿಕಾರಕ ಹೇಳಿಕೆಗಳು ಮಾಮೂಲಾಗುತ್ತಿವೆ. ತುರ್ತುಸ್ಥಿತಿ ಎಂಬ ಪದವನ್ನು ಪ್ರಯೋಗಿಸದೆಯೇ ಅದನ್ನು ಅನಧಿಕೃತವಾಗಿ ಜಾರಿಯಲ್ಲಿಡುವುದಕ್ಕೆ ಪ್ರಯತ್ನಗಳು ನಡೆಯುತ್ತಿವೆ. 1971ರಲ್ಲಿ ಕಾಂಗ್ರೆಸ್ ವಿಭಜನೆಗೊಂಡ ನಂತರ ಗರೀಬಿ ಹಠಾವೊ ಮತ್ತು ಬ್ಯಾಂಕ್ ರಾಷ್ಟ್ರೀಕರಣದಂಥ ಇಶ್ಯೂಗಳನ್ನು ಮುಂದಿಟ್ಟುಕೊಂಡು ಇಂದಿರಾಗಾಂಧಿಯವರು ಚುನಾವಣೆಯನ್ನು ಎದುರಿಸಿದರು. ಮಾತ್ರವಲ್ಲ, 352 ಸ್ಥಾನಗಳನ್ನು ಗಳಿಸಿದರು. ಅದೇ ವರ್ಷದ ಕೊನೆಯಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧ ಸಾರಿ ಬಾಂಗ್ಲಾವನ್ನು ವಿಮೋಚನೆಗೊಳಿಸಿದರು. ಅದಕ್ಕಾಗಿ ವಾಜಪೇಯಿಯವರಿಂದ ‘ದುರ್ಗೆ' ಎಂಬ ಬಿರುದನ್ನೂ ಗಿಟ್ಟಿಸಿಕೊಂಡರು. ಆದರೆ, ಇದಾಗಿ ಕೇವಲ 3 ವರ್ಷಗಳೊಳಗೆ ಇಂದಿರಾ ಎಂತಹ ಪಾತಾಳಕ್ಕೆ ಕುಸಿದರೆಂದರೆ, ಅವರು ತುರ್ತುಸ್ಥಿತಿಯ ಮೊರೆ ಹೋದರು. 1973ರಲ್ಲಿ ನಡೆದ ಅರಬ್-ಇಸ್ರೇಲ್ ಯುದ್ಧವು ಭಾರತೀಯ ಅರ್ಥವ್ಯವಸ್ಥೆಯನ್ನು ತೀವ್ರವಾಗಿ ಬಾಧಿಸಿತ್ತು. ಬೆಲೆ ಏರಿಕೆಯಿಂದಾಗಿ ಜನರು ಕಂಗಾಲಾಗಿದ್ದರು. ಗುಜರಾತ್‍ನ ಎಲ್.ಡಿ. ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕ್ಯಾಂಟೀನ್ ಆಹಾರಕ್ಕೆ 20% ಬೆಲೆ ಏರಿಸಿದ್ದನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿದ್ದರು. ಈ ಪ್ರತಿಭಟನೆ ಆ ಬಳಿಕ ಇತರ ರಾಜ್ಯಗಳಿಗೂ ಹಮ್ಮಿಕೊಂಡು ಚಳವಳಿಯ ರೂಪ ಪಡೆಯಿತು. 1974 ಜನವರಿಯಲ್ಲಿ ಗುಜರಾತ್‍ನಲ್ಲಿ ನಡೆದ ಪ್ರತಿಭಟನೆಯ ವಿರುದ್ಧ ಸರಕಾರ ಕೈಗೊಂಡ ಕಾರ್ಯಾಚರಣೆಯಲ್ಲಿ 100ರಷ್ಟು ಮಂದಿ ಸಾವಿಗೀಡಾದರು. ಸರಕಾರಿ ಉದ್ಯೋಗಿಗಳೂ, ಕಾರ್ಮಿಕರೂ ಪ್ರತಿಭಟನೆಯಲ್ಲಿ ಭಾಗವಹಿಸತೊಡಗಿದರು. ಇಂದಿರಾ ತುರ್ತು ಸ್ಥಿತಿಯನ್ನು ಹೇರಿದರು. 1984ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, “ಯಾವ ಕಾರಣಕ್ಕಾಗಿ ನೀವು ಕೆಲವರ ವಾಹನಗಳಲ್ಲಿ ಪ್ರಯಾಣಿಸುವಾಗ ಭಯ ಪಡುತ್ತೀರಿ..” ಎಂಬ ಜಾಹೀರಾತನ್ನು ಕಾಂಗ್ರೆಸ್ ಪ್ರಕಟಿಸಿತ್ತು. ಆ ಜಾಹೀರಾತಿನಲ್ಲಿ ‘ಸಿಕ್ಖ್ ಡ್ರೈವರ್’ನಂತೆ ಕಾಣುವ ವ್ಯಕ್ತಿಯ ರೇಖಾಚಿತ್ರವೂ ಇತ್ತು. ಇಂದಿರಾ ಗಾಂಧಿಯವರ ಹತ್ಯೆಯ ಬಳಿಕ ನಡೆದ ಆ ಚುನಾವಣೆಯ ಈ ಜಾಹೀರಾತನ್ನು ಮುಖ್ಯವಾಹಿನಿಯ ಪತ್ರಿಕೆಗಳೆಲ್ಲವೂ ಮುದ್ರಿಸಿದ್ದುವು. ಬಹುಶಃ, ಇವತ್ತು ಈ ಜಾಹೀರಾತನ್ನು ನಗಣ್ಯವಾಗಿಸುವಂತೆ ಹೇಳಿಕೆಗಳು ಕೇಳಿ ಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರ ಪಕ್ಷೀಯರು ಮತ್ತು ಬೆಂಬಲಿಗರೇ ಇಂಥ ಹೇಳಿಕೆಗಳನ್ನು ಹೊರಡಿಸುತ್ತಿದ್ದರೂ ಅವರು ಮಾತಾಡುತ್ತಿಲ್ಲ. ನಿಜವಾಗಿ, ಇಂದಿರಾ ಗಾಂಧಿಯವರು ತುರ್ತು ಸ್ಥಿತಿಯನ್ನು ಹೇರಲು ಮುಂದಾದದ್ದೇ ಸವಾಲುಗಳು ಎದುರಾದಾಗ ಮತ್ತು ಅದನ್ನು ಸಹಜ ಪ್ರಜಾತಾಂತ್ರಿಕ ರೀತಿಯಲ್ಲಿ ಎದುರಿಸಲು ಅಶಕ್ತರಾದಾಗ. ನರೇಂದ್ರ ಮೋದಿಯವರು ತನ್ನ ಬೇಕಾಬಿಟ್ಟಿ ಅಭಿವೃದ್ಧಿ ಯೋಜನೆಗೆ NGO ಗಳು ತಡೆ ಎಂಬುದನ್ನು ಪರಿಗಣಿಸಿಯೇ ಅವುಗಳನ್ನು ಶಂಕಿತ ಪಟ್ಟಿಯಲ್ಲಿರಿಸಿದರು. ಚುನಾವಣೆಯ ಸಂದರ್ಭದಲ್ಲಿ ಅವರು ಹುಟ್ಟಿಸಿದ ಭರವಸೆಯು ಒಂದೊಂದಾಗಿ ಕಳಚಿಕೊಳ್ಳುತ್ತಾ ಬರುತ್ತಿರುವಂತೆಯೇ ಸ್ವಚ್ಛ ಭಾರತ್ ಮತ್ತು ಯೋಗ ದಿನವನ್ನು ಆಚರಿಸಿದರು. ಇದೀಗ ಅಧಿಕಾರದ ಒಂದು ವರ್ಷ ಪೂರ್ತಿಯಾಗುತ್ತಿರುವ ಸಂದರ್ಭದಲ್ಲೇ ಆಂತರಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅಷ್ಟಕ್ಕೂ, ಅವರ ಆಡಳಿತಾತ್ಮಕ ರೀತಿಯೇ ಸರ್ವಾಧಿಕಾರಿ ಸ್ವರೂಪದ್ದು. ಸಚಿವ ಸಂಪುಟವನ್ನು ತೆರೆಮರೆಗೆ ಸರಿಸಿ ಎಲ್ಲದರಲ್ಲೂ ‘ತಾನೇ' ಕಾಣಿಸಿಕೊಳ್ಳುವ ತವಕ. ಪಾಕ್‍ನ ಮೇಲೆ ಇಂದಿರಾ ದಾಳಿ ಮಾಡಿದಂತೆಯೇ ಮ್ಯಾನ್ಮಾರ್‍ನ ಗಡಿಯೊಳಕ್ಕೆ ನುಗ್ಗಿರುವುದನ್ನು ಮಹಾನ್ ಸಾಧನೆಯಾಗಿ ಅವರ ಪಕ್ಷ ಬಿಂಬಿಸಿಕೊಳ್ಳುತ್ತಿದೆ. ಇಂದಿರಾರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವು ವ್ಯಕ್ತಿ ಕೇಂದ್ರಿತವಾಗಿತ್ತು. ಮೋದಿ ನಾಯಕತ್ವದಲ್ಲಿ ಬಿಜೆಪಿಯೂ ವ್ಯಕ್ತಿ ಕೇಂದ್ರಿತವಾಗುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇಂಥ ಬದಲಾವಣೆ ಯಾವತ್ತೂ ಅಪಾಯಕಾರಿಯೇ.
ಹಾಗಂತ, ಸುಮಾರು 8,875ರಷ್ಟು NGO ಗಳ ಪರವಾನಿಗೆಯನ್ನು ರದ್ದುಗೊಳಿಸಿರುವ ನರೇಂದ್ರ ಮೋದಿಯವರನ್ನು ಅನುಮಾನಿಸುವುದಕ್ಕೆ ಕಾರಣಗಳು ಇನ್ನೂ ಇವೆ.
No comments:
Post a Comment