Monday, October 15, 2012

ಮಲಾಲಳ ಬ್ಲಾಗ್ ಓದುತ್ತಾ ಮನಸ್ಸು ಆರ್ದ್ರವಾಯಿತು..

ಮಲಾಲ
    2009 ಜನವರಿ 15, ಗುರುವಾರ
     ನಾನು ಮಲಗಿದ್ದೆ. ರಾತ್ರಿ ಹೊತ್ತು. ತೋಪುಗಳ ಸದ್ದು ಕೇಳಿಸುತ್ತಿತ್ತು. ರಾತ್ರಿ ಮೂರು ಬಾರಿ ನನಗೆ ಎಚ್ಚರವಾಯಿತು. ಅಲ್ಲಿಗೇ ಮಲಗಿದೆ. ಯಾಕೆಂದರೆ ಸ್ಕೂಲು ಇಲ್ಲವಲ್ಲ. ಬೆಳಿಗ್ಗೆ 10 ಗಂಟೆಗೆ ಎದ್ದೆ. ಆ ಬಳಿಕ ನನ್ನ ಗೆಳತಿ ಮನೆಗೆ ಬಂದಳು. ನಾವಿಬ್ಬರೂ ಹೋಮ್‍ವರ್ಕ್ ಬಗ್ಗೆ ಚರ್ಚಿಸಿದೆವು. ಇವತ್ತು ಜನವರಿ 15 ತಾನೇ. ಶಾಲೆಗಳನ್ನು ಮುಚ್ಚುವುದಕ್ಕೆ ತಾಲಿಬಾನ್ ನಿಗದಿಪಡಿಸಿದ ಅಂತಿಮ ದಿನಾಂಕ. ಹಾಗಂತ ಒಂದು ವೇಳೆ ತಾಲಿಬಾನ್‍ನ ಆದೇಶ ಜಾರಿಯಾಗದಿದ್ದರೆ ಮತ್ತೆ ಸ್ಕೂಲಿಗೆ ಹೋಗುವುದಕ್ಕೆ ಇದೆಯಲ್ಲ.. ಎಂದೆಲ್ಲಾ ನಾವು ಚರ್ಚಿಸಿದೆವು.
BBC ಗೆ ನಾನು ಬರೆಯುತ್ತಿರುವುದು ಗುಲ್ ಮಕಾಯಿ ಎಂಬ ಹೆಸರಲ್ಲಿ. ನನ್ನ ತಾಯಿಗೆ ಈ ಹೆಸರು ಎಷ್ಟು ಇಷ್ಟ ಆಯ್ತು ಗೊತ್ತಾ? ತಂದೆ ಹೇಳಿದ್ರು, ನಿನ್ನ ಹೆಸರನ್ನು ಗುಲ್ ಮಕಾಯಿ ಎಂದು ಬದಲಿಸಿದರೆ ಹೇಗೆ ಮಗಳೇ?
ಕೆಲವು ದಿನಗಳ ಹಿಂದೆ ಯಾರೋ ಕೆಲವರು ನನ್ನ ಬರಹಗಳನ್ನು ಪ್ರಿಂಟ್ ಔಟ್ ತೆಗೆದು ನನ್ನ ತಂದೆಯವರಿಗೆ ತೋರಿಸಿದರಂತೆ. ಎಷ್ಟು ಚೆನ್ನಾಗಿದೆ ಎಂದರಂತೆ. ಅಪ್ಪ ನಕ್ಕರಂತೆ. ಆದರೆ ಇದನ್ನು ಬರೆದದ್ದು ನನ್ನ ಮಗಳು ಮಲಾಲ ಅಂತ ಅವರು ಹೇಳಲಿಲ್ಲವಂತೆ..
    ಜನವರಿ 14, ಬುಧವಾರ
    ನಾನಿವತ್ತು ಶಾಲೆಗೆ ಹೋಗುವಾಗ ತುಂಬಾ ದುಃಖದಲ್ಲಿದ್ದೆ. ಯಾಕೆ ಗೊತ್ತಾ, ನಾಳೆಯಿಂದ ಶಾಲೆಗೆ ಚಳಿಗಾಲದ ರಜೆ ಶುರುವಾಗುತ್ತೆ. ಹಾಗೆ, ಪ್ರಾಂಶುಪಾಲರು ಸಂಜೆ ರಜೆಯನ್ನು ಘೋಷಿಸಿಯೂ ಬಿಟ್ಟರು. ಆದರೆ ಯಾವಾಗ ಶಾಲೆ ಪ್ರಾರಂಭ ಅಂತನೂ ಹೇಳಬೇಕಲ್ಲವೇ? ಹೇಳಲಿಲ್ಲ. ನಿಜ ಹೇಳ್ತೇನೆ, ಹೀಗೆ ಆಗುವುದು ಇದು ಮೊದಲ ಬಾರಿ. ಜನವರಿ 15ರ ಬಳಿಕ ಹೆಣ್ಣು ಮಕ್ಕಳ ಶಾಲೆ ತೆರೆಯಕೂಡದು ಎಂದು ತಾಲಿಬಾನ್ ಆದೇಶಿಸಿದೆಯಲ್ಲವೇ? ಬಹುಶಃ ಪ್ರಾಂಶುಪಾಲರು ಮೌನವಾಗಿರುವುದಕ್ಕೆ ಇದೇ ಕಾರಣ ಆಗಿರಬಹುದು ಎಂದು ನನ್ನ ಅಂದಾಜು. ಒಂದು ವಿಷಯ ಹೇಳುತ್ತೇನೆ, ನಾವ್ಯಾರೂ ಇವತ್ತು ಖುಷಿಯಾಗಿ ಬೀಳ್ಕೊಳ್ಳಲೇ ಇಲ್ಲ. ಒಂದು ವೇಳೆ ತಾಲಿಬಾನ್ ಆದೇಶ ಜಾರಿಯಾದರೆ ಮತ್ತೆ ನಾವೆಲ್ಲಾ ಶಾಲೆಗೆ ಹೀಗೆಯೇ ಬರುತ್ತೇವೆ, ಒಂದುಗೂಡುತ್ತೇವೆ ಎಂಬ ನಿರೀಕ್ಷೆ ಇಲ್ಲವಲ್ಲ. ಕೆಲವು ಗೆಳತಿಯರ ಪ್ರಕಾರ, ಶಾಲೆ ಫೆಬ್ರವರಿಯಲ್ಲಿ ಆರಂಭವಾಗುತ್ತದಂತೆ. ಇನ್ನೂ ಕೆಲವರು ಸ್ವಾತನ್ನೇ (ಊರನ್ನೇ) ಬಿಟ್ಟು ಹೋಗ್ತಾರಂತೆ. ಶಿಕ್ಷಣ ಪಡೆಯುವುದಕ್ಕೂ ನಿಷೇಧ ಇರುವ ಊರಲ್ಲಿ ಯಾಕೆ ಇರಬೇಕು ಎಂಬುದು ಅವರ ಹೆತ್ತವರ ಪ್ರಶ್ನೆಯಂತೆ.
     ಇವತ್ತು ನಮ್ಮ ಶಾಲೆಯ ಅಂತಿಮ ದಿನ ತಾನೆ. ನಾಳೆಯಿಂದ ನಾವೆಲ್ಲ ಬಯಲಲ್ಲಿ ಹೆಚ್ಚು ಹೊತ್ತು ಆಡಲು ತೀರ್ಮಾನಿಸಿದ್ದೇವೆ. ಈ ಶಾಲೆ ಒಂದು ದಿನ ಮತ್ತೆ ತೆರೆಯುತ್ತೆ ಎಂದೇ ನನ್ನ ನಂಬುಗೆ. ಆದರೆ ತೆರೆಯದಿದ್ರೆ ಎಂಬ ನೋವು ಮನಸ್ಸಿನ ಒಳಗೆಲ್ಲಾ ಚುಚ್ಚುತ್ತಲೇ ಇದೆ. ಆದ್ದರಿಂದಲೇ ಶಾಲೆಯಿಂದ ಮರಳುವಾಗ ನಾನು, ಪ್ರತಿದಿನ ಸಾಗುತ್ತಿದ್ದ ದಾರಿಯನ್ನು, ಕಟ್ಟಡಗಳನ್ನೆಲ್ಲಾ ನೋಡುತ್ತಾ, ಖುಷಿಪಡುತ್ತಾ ಬಂದೆ. ಒಂದು ವೇಳೆ ಮತ್ತೆ ತೆರೆಯದಿದ್ದರೆ ಇನ್ನೊಮ್ಮೆ ಇವನ್ನೆಲ್ಲಾ ನೋಡುತ್ತೇನೋ ಇಲ್ಲವೋ ಹೇಳಲು ಸಾಧ್ಯವಿಲ್ಲವಲ್ಲ..
    ಜನವರಿ 9,ಶುಕ್ರವಾರ
    ಇವತ್ತು ನನ್ನ ಶಾಲೆಯ ಗೆಳತಿಯರಲ್ಲಿ ನಾನು ಬುನೈರ್‍ಗೆ ಪ್ರವಾಸ ಹೋಗಿರುವುದಾಗಿ ಹೇಳಿದೆ. ಅವರೆಲ್ಲ ಮುಖ ಊದಿಸಿದರು. ಬುನೈರ್‍ನ ಹೆಸರು ಕೇಳುವಾಗ ಅವರಿಗೆ ಸುಸ್ತು ಆಗ್ತದಂತೆ.
ಮೌಲಾನಾ ಶಾ ದೌರಾನ್‍ರ ಸಾವಿನ ಬಗ್ಗೆ ಇರುವ ವದಂತಿಯ ಕುರಿತು ನಾವೆಲ್ಲ ಚರ್ಚಿಸಿದೆವು. ಅವರು ಎಫ್.ಎಂ. ರೇಡಿಯೋದಲ್ಲಿ ಭಾಷಣ ಮಾಡ್ತಿದ್ರು. ಸ್ವಾತ್‍ನಲ್ಲಿ ಹೆಣ್ಣು ಮಕ್ಕಳಿಗೆ ಶಾಲಾ ಪ್ರವೇಶವನ್ನು ನಿಷೇಧಿಸಲಾಗಿದೆ ಅಂತ ಘೋಷಿಸಿದವರಲ್ಲಿ ಅವರೂ ಒಬ್ಬರು. ಕೆಲವರು, ಅವರು ಸತ್ತಿದ್ದಾರೆ ಅಂದರು. ಇನ್ನೂ ಕೆಲವರು, ಇಲ್ಲ ಅಂದರು. ಈ ವದಂತಿ ಯಾಕೆ ಹುಟ್ಟಿಕೊಂಡಿದೆ ಎಂದರೆ, ನಿನ್ನೆ ರಾತ್ರಿ ಅವರು ಎಫ್.ಎಂ. ರೇಡಿಯೋದಲ್ಲಿ ಭಾಷಣ ಮಾಡಿಲ್ಲ. ಒಬ್ಬಳ ಪ್ರಕಾರ, ಅವರು ರಜೆಯಲ್ಲಿ ಹೋಗಿದ್ದಾರಂತೆ..
ಶುಕ್ರವಾರದಿಂದ ಟ್ಯೂಷನ್ ಕ್ಲಾಸ್ ಇರಲಿಲ್ಲವಲ್ಲ. ನಾನು ಸಾಕಷ್ಟು ಆಟವಾಡಿದೆ. ಸಂಜೆ ಟಿ.ವಿ. ಆನ್ ಮಾಡಿದೆ. ಲಾಹೋರ್‍ನಲ್ಲಿ ಬಾಂಬ್ ಸ್ಫೋಟ ಆಗಿದೆ ಎಂಬ ಸುದ್ದಿ ಬಂತು. ನಾನು ನನ್ನಷ್ಟಕ್ಕೇ ಹೇಳಿಕೊಂಡೆ, ಯಾಕೆ ನನ್ನ ದೇಶದಲ್ಲಿ ಬಾಂಬ್ ಸ್ಫೋಟ ಆಗ್ತಿದೆ..
    ಜನವರಿ 7, ಬುಧವಾರ
    ನಾನು ಮುಹರ್ರಮ್‍ನ ರಜೆ ಕಳೆಯಲು ಬುನೈರ್‍ಗೆ ಬಂದಿರುವೆ. ನಾನು ಬುನೈರನ್ನು ತುಂಬ ಇಷ್ಟ ಪಡುತ್ತೇನೆ. ಯಾಕೆ ಅಂದರೆ, ಇಲ್ಲಿ ಚಂದದ ಪರ್ವತ ಇದೆ. ಮತ್ತೆ ಹುಲುಸಾಗಿ ಬೆಳೆದಿರುವ ಹಸಿರು ಇದೆ. ನನ್ನ ಸ್ವಾತ್ ಕೂಡ ತುಂಬಾ ಇಷ್ಟ ನಂಗೆ. ಆದರೆ ಅಲ್ಲಿ ಶಾಂತಿ ಇಲ್ವಲ್ಲ. ಆದರೆ ಬುನೈರ್‍ನಲ್ಲಿ ಶಾಂತಿ ಇದೆ. ಇಲ್ಲಿ ಯಾವುದೇ ಬಂದೂಕಿನ ಶಬ್ದ ಇಲ್ಲ. ಭಯ ಇಲ್ಲ. ನಾವೆಲ್ಲ ಇಲ್ಲಿ ತುಂಬಾ ಸಂತೋಷದಿಂದಿದ್ದೇವೆ. ಇವತ್ತು ನಾವು ಪೀರ್ ಬಾಬಾ ಮ್ಯೂಸಿಯಂಗೆ ಹೋದೆವು. ಅಲ್ಲಿ ತುಂಬಾ ಜನರಿದ್ದರು. ಜನರೆಲ್ಲ ಇಲ್ಲಿಗೆ ಬರುವುದು ಪ್ರಾರ್ಥಿಸಲಿಕ್ಕೆ. ಆದರೆ ನಾವು ವಿಹಾರಕ್ಕಾಗಿ ಬಂದವರು ತಾನೆ. ಇಲ್ಲಿ ಬಳೆ, ಕಿವಿಯ
ರಿಂಗು ಮತ್ತಿತರ ಕೃತಕ ಆಭರಣಗಳ ಅಂಗಡಿ ಇದೆ. ಖರೀದಿಸಬೇಕು ಅಂತ ಅತ್ತಿತ್ತ ನೋಡಿದೆ. ಯಾವುದೂ ಇಷ್ಟ ಆಗಲಿಲ್ಲ. ಆದರೆ ನನ್ನ ತಾಯಿ ಬಳೆ ಮತ್ತು ಕಿವಿಯ ರಿಂಗನ್ನು ಖರೀದಿಸಿದರು..
    ಜನವರಿ 5, ಸೋಮವಾರ
    ನಾನು ನನ್ನ ಯುನಿಫಾರ್ಮ್ ಧರಿಸಿ ಶಾಲೆಗೆ ರೆಡಿಯಾಗುತ್ತಿದ್ದೆ. ಆದರೆ ತಕ್ಷಣ, ನಾಳೆಯಿಂದ ಎಲ್ಲರೂ ಸಾಮಾನ್ಯ ಉಡುಪುಗಳನ್ನು ಧರಿಸಿ ಶಾಲೆಗೆ ಬರಬೇಕು, ಯುನಿಫಾರ್ಮು ಧರಿಸುವಂತಿಲ್ಲ ಎಂದು ಪ್ರಾಂಶುಪಾಲರು ಹೇಳಿದ್ದು ನೆನಪಾಯ್ತು. ಆದ್ದರಿಂದ ನಾನು ನನ್ನ ಇಷ್ಟದ ಪಿಂಕ್ ಡ್ರೆಸ್ ಧರಿಸಿದೆ. ಉಳಿದ ವಿದ್ಯಾರ್ಥಿನಿಯರೂ ತಮ್ಮಿಷ್ಟದ ಬಣ್ಣದ ಉಡುಪುಗಳನ್ನು ಧರಿಸಿದ್ದರು. ಒಂದು ರೀತಿಯಲ್ಲಿ ನಂಗೆ ಖುಷಿಯೇ ಆಯ್ತು. ಶಾಲೆಯಲ್ಲೂ ಮನೆಯಂಥ ವಾತಾವರಣ ಯಾರಿಗೆ ಇಷ್ಟ ಆಗಲ್ಲ ಹೇಳಿ?
     ನನ್ನ ಗೆಳತಿ ನನ್ನ ಹತ್ತಿರ ಬಂದು, ಕಿವಿಯಲ್ಲಿ ಮೆತ್ತಗೆ ಪ್ರಶ್ನಿಸಿದ್ಳು: ಅಲ್ಲಾಹನಾಣೆ, ನಿಜ ಹೇಳು, ನಮ್ಮ ಈ ಸ್ಕೂಲು ತಾಲಿಬಾನಿಗಳ ದಾಳಿಗೆ ಗುರಿಯಾಗಲಿದೆಯಂತೆ ಹೌದೇ? ಬಣ್ಣದ ಡ್ರೆಸ್ಸು ಧರಿಸುವುದು ತಾಲಿಬಾನ್‍ಗೆ ಇಷ್ಟವಾಗಲಿಕ್ಕಿಲ್ಲ ಅಂತ ನನ್ನ ಮನೆಯಲ್ಲಿ ಬೆಳಿಗ್ಗೆ ಹೇಳಿದ್ರು ಅಂತನೂ ಅವಳು ಹೇಳಿದ್ಳು.
    ನಾನು ಶಾಲೆಯಿಂದ ಮರಳಿ ಬಂದೆ ಮತ್ತು ಲಂಚ್‍ನ ಬಳಿಕ ಟ್ಯೂಷನ್ ಪಡೆದೆ. ಸಂಜೆ ಟಿ.ವಿ. ಆನ್ ಮಾಡಿದೆ. ಆಗ ಪ್ರಕಟವಾದ ಸುದ್ದಿ ಏನೆಂದರೆ, ಶಕಾದ್ರಾದಲ್ಲಿ 15 ದಿನಗಳಿಂದ ವಿಧಿಸಲಾಗಿದ್ದ ಕರ್ಫ್ಯೂವನ್ನು ಹಿಂತೆಗೆಯಲಾಗಿದೆ ಎಂದು. ನನಗೆ ತುಂಬಾ ಖುಷಿ ಆಯ್ತು. ಯಾಕೆ ಅಂದರೆ, ನನ್ನ ಇಂಗ್ಲಿಷ್ ಮೇಮ್ ವಾಸಿಸುತ್ತಿರುವುದೇ ಅಲ್ಲಿ. ಕರ್ಫ್ಯೂ ಹಿಂತೆಗೆಯುವುದರಿಂದ ಅವರು ಮತ್ತೆ ಶಾಲೆಗೆ ಬಂದು ಟೀಚ್ ಮಾಡಬಹುದಲ್ವೇ?
    ಜನವರಿ 4, ಆದಿತ್ಯವಾರ
    ಇವತ್ತು ರಜಾದಿನ. ಉದಾಸೀನ, ತಡವಾಗಿ 10 ಗಂಟೆಗೆ ಎದ್ದೆ. ಗ್ರೀನ್ ಚೌಕ್‍ನಲ್ಲಿ ಮೂವರ ಶವಗಳು ಬಿದ್ದಿರುವುದಾಗಿ ನನ್ನ ತಂದೆ ಹೇಳುತ್ತಿರುವುದನ್ನು ನಾನು ಕೇಳಿಸಿಕೊಂಡೆ. ಸುದ್ದಿ ಕೇಳಿ ತುಂಬಾ ಬೇಸರವಾಯ್ತು. ಮಿಲಿಟರಿ ಕಾರ್ಯಾಚರಣೆಗಿಂತ ಮೊದಲು ನಾವು ಮಾರ್ಘಾಝಾರ್, ಫಿಝಾ ಘಾಟ್, ಕನ್‍ಜುಗೆಲ್ಲಾ ರಜಾದಿನದಂದು ಪಿಕ್‍ನಿಕ್ ಹೋಗುತ್ತಿದ್ದೆವು. ಈಗಿನ ಪರಿಸ್ಥಿತಿ ಹೇಗಿದೆಯೆಂದರೆ, ಪಿಕ್‍ನಿಕ್‍ಗೆ ಹೋಗದೆ ಒಂದೂವರೆ ವರ್ಷಗಳಾದುವು. ಈ ಮೊದಲು ರಾತ್ರಿಯೂಟ ಆದ ಮೇಲೆ ನಾವು ನಡೆಯುತ್ತಿದ್ದೆವು. ಆದರೆ ಈಗ ಸೂರ್ಯ ಮುಳುಗಿದ ಕೂಡಲೇ ಮನೆಯೊಳಗೆ ಕೂರುತ್ತೇವೆ. ಇವತ್ತು ನಾನು ಸ್ವಲ್ಪ ಅಡುಗೆ ಕೆಲಸ ಮಾಡಿದೆ. ನನ್ನ ಹೋಮ್ ವರ್ಕನ್ನೂ ಮಾಡಿದೆ. ತಮ್ಮನ ಜೊತೆ ಆಡಿದೆ. ಆದರೆ ಮನಸ್ಸು ಮಾತ್ರ ಬೇಗನೇ ಬೆಳಗು ಆಗಲಿ, ಶಾಲೆಗೆ ಹೋಗಬೇಕು ಅನ್ನುತ್ತಲೇ ಇದೆ..
    ಜನವರಿ 3, ಶನಿವಾರ
    ನಿನ್ನೆ ನನಗೆ ಭಯಾನಕ ಕನಸು ಬಿತ್ತು. ತಾಲಿಬಾನ್ ಮತ್ತು ಮಿಲಿಟರಿ ಹೆಲಿಕಾಫ್ಟರುಗಳ ನಡುವೆ ಹೋರಾಟ. ಸ್ವಾತ್‍ನಲ್ಲಿ ಮಿಲಿಟರಿ ಕಾರ್ಯಾಚರಣೆ ಪ್ರಾರಂಭವಾದಂದಿನಿಂದ ನನಗೆ ಇಂಥ ಕನಸುಗಳು ಬೀಳುತ್ತಲೇ ಇವೆ. ತಾಯಿ ನನಗೆ ಉಪಹಾರ ಬಡಿಸಿದರು. ನಾನು ಸ್ಕೂಲಿಗೆ ಹೋದೆ. ನನಗೆ ಭಯಾನೂ ಆಯ್ತು. ಯಾಕೆಂದರೆ, ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ನಿಷೇಧಿಸಿ ತಾಲಿಬಾನ್ ಆದೇಶ ಹೊರಡಿಸಿದೆಯಲ್ಲ. ಆದ್ದರಿಂದಲೋ ಏನೋ, ಒಟ್ಟು 27 ವಿದ್ಯಾರ್ಥಿನಿಯರಲ್ಲಿ 11 ಮಂದಿ ಮಾತ್ರ ಶಾಲೆಗೆ ಬಂದಿದ್ದರು. ನನ್ನ ಮೂವರು ಗೆಳತಿಯರು ಪೇಶಾವರ್, ಲಾಹೋರ್ ಮತ್ತು ರಾವಲ್ಪಿಂಡಿಗಳಿಗೆ ವಾಸ ಬದಲಿಸಿದರು.
     ನಾನು ಶಾಲೆಯಿಂದ ಮನೆಗೆ ಮರಳುವ ಹಾದಿಯಲ್ಲಿ ಓರ್ವ ವ್ಯಕ್ತಿ, 'ನಾನು ನಿನ್ನನ್ನು ಕೊಲ್ಲುತ್ತೇನೆ' ಅನ್ನುವುದು ಕೇಳಿಸಿತು. ನಾನು ಭಯದಿಂದ ಮುಖ ಮುಚ್ಚಿಕೊಂಡೆ. ಸ್ವಲ್ಪ ನಂತರ ಆತ ಬರುತ್ತಿದ್ದಾನಾ ಅಂತ ತಿರುಗಿ ನೋಡಿದೆ. ಇಲ್ಲ, ನನಗೆ ಸಮಾ ಧಾನ ಆಯ್ತು. ನಿಜ ಏನೆಂದರೆ, ಆತ ಮೊಬೈಲ್‍ನಲ್ಲಿ ಯಾರಿಗೋ ಬೆದರಿಕೆ ಹಾಕ್ತಿದ್ದ..’
     ಕಳೆದ ಅಕ್ಟೋಬರ್ 9ರಂದು ತಾಲಿಬಾನ್‍ಗಳಿಂದ ಗುಂಡೇಟು ತಿಂದು ಚಿಂತಾಜನಕ ಸ್ಥಿತಿಯಲ್ಲಿರುವ ಪಾಕಿಸ್ತಾನದ 14ರ ಹುಡುಗಿ ಮಲಾಲ ಯೂಸುಫ್‍ಝಾಯಿಯ ಬರಹಗಳಿವು. 2009 ಜನವರಿ 3ರಂದು ತನ್ನ 11ರ ಪ್ರಾಯದಲ್ಲೇ ಬಿಬಿಸಿ ಉರ್ದುವಿಗಾಗಿ (ಆನ್‍ಲೈನ್) ಈಕೆ ಬರೆಯತೊಡಗುತ್ತಾಳೆ. ಉರ್ದುವಿನಲ್ಲಿ ಬ್ಲಾಗ್ ಪ್ರಾರಂಭಿಸುತ್ತಾಳೆ. ತಾಲಿಬಾನ್‍ಗಳ ಬಿಗಿ ಹಿಡಿತವಿದ್ದ ಸ್ವಾತ್ ಕಣಿವೆಯ ಬಗ್ಗೆ, ತನ್ನ ಸ್ಕೂಲು ದಿನಚರಿಯ ಬಗ್ಗೆ ಜಗತ್ತಿಗೆ ತಿಳಿಸತೊಡಗುತ್ತಾಳೆ. ಈ ಮಧ್ಯೆ ಪಾಕ್ ಸರಕಾರ ಕೈಗೊಂಡ ತಾಲಿಬಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಿಂದ ಮಲಾಲಳ ಕುಟುಂಬ ಸ್ವಾತ್ ಬಿಡಬೇಕಾಗಿ ಬರುತ್ತದೆ. ಅಪ್ಪ ಝೈದುದ್ದೀನ್ ಯೂಸುಫ್‍ಝಾಯಿ ಪೇಶಾವರಕ್ಕೆ ಬರುತ್ತಾರೆ. ಮಲಾಲ ಸಂಬಂಧಿಕರ ಮನೆಯಲ್ಲಿ ಬದುಕ ತೊಡಗುತ್ತಾಳೆ. ಆಕೆಯ ಕುರಿತಂತೆ ಡಾಕ್ಯುಮೆಂಟರಿ ತಯಾರಾಗುತ್ತದೆ. ಯೂಟ್ಯೂಬ್‍ನಲ್ಲಿ ಆಕೆಯ ಸಂದರ್ಶನ ಪ್ರಕಟವಾಗುತ್ತದೆ. ನನಗೆ ಕಲೀಬೇಕು, ಡಾಕ್ಟರ್ ಆಗಬೇಕು, ಕುರ್‍ಆನಿನಲ್ಲಿ  ಹೆಣ್ಣು ಮಕ್ಕಳು ಕಲೀಬಾರದು ಅಂತ ಎಲ್ಲೂ  ಇಲ್ಲವೇ ಇಲ್ಲ.. ಎಂದೆಲ್ಲಾ ಹೇಳುವ ಮಲಾಲನ್ನು ತಾಲಿಬಾನ್ ವಿರೋಧಿಯಂತೆ ಬಿಂಬಿಸಲಾಗುತ್ತದೆ. 2011 ಡಿಸೆಂಬರ್ 19ರಂದು ಪಾಕ್ ಸರಕಾರವು ಮಲಾಲಳಿಗೆ ಪ್ರಥಮ ರಾಷ್ಟ್ರೀಯ ಶಾಂತಿ ಪ್ರಶಸ್ತಿ ನೀಡುತ್ತದೆ. ಸ್ವಾತ್‍ನ ಮಿಶನ್ ರಸ್ತೆಯಲ್ಲಿರುವ ಸರಕಾರಿ ಗರ್ಲ್ಸ್  ಸೆಕೆಂಡರಿ ಸ್ಕೂಲ್‍ಗೆ ಮಲಾಲ ಯೂಸುಫ್‍ಝಾಯಿ ಗರ್ಲ್ಸ್  ಸ್ಕೂಲ್ ಎಂದು ಸರಕಾರ ನಾಮಕರಣ ಮಾಡುತ್ತದೆ. ಅಂತಾರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿಯ  ಪಟ್ಟಿಯಲ್ಲೂ ಆಕೆಯ ಹೆಸರು ಸೇರ್ಪಡೆಗೊಳ್ಳುತ್ತದೆ. ನಿಜವಾಗಿ, ಧರ್ಮದ ಹೆಸರಲ್ಲಿ ತಮ್ಮದೇ ರೂಢಿ, ಸಂಪ್ರದಾಯ, ಆಚರಣೆಗಳನ್ನು ಸಮಾಜದ ಮೇಲೆ ಹೇರುವ ಸಂಕುಚಿತವಾದಿಗಳನ್ನು ಪ್ರಶ್ನಿಸುವ ಸಂಕೇತವಾಗಿ ಮಲಾಲ ಇವತ್ತು ಜಗತ್ತಿನ ಮುಂದಿದ್ದಾಳೆ. ಪಾಕಿಸ್ತಾನದ ಉದ್ದಗಲಕ್ಕೂ ಇದೇ ಮೊದಲ ಬಾರಿಗೆ ಭಾರೀ ಪ್ರತಿಭಟನೆ ಎದ್ದಿದೆ. ಮಗುವಿನ ಎದೆಗೆ ಬಂದೂಕು ಇಡುವ ಮನಸ್ಥಿತಿಯ ವಿರುದ್ಧ ವ್ಯಾಪಕ ಚರ್ಚೆಗಳಾಗುತ್ತಿವೆ. ತಾಲಿಬಾನ್‍ನ ಬಗ್ಗೆ ಮೃದು ನೀತಿ ಹೊಂದಿದ್ದವರನ್ನು ಕೂಡಾ ಮಲಾಲ ಪ್ರಕರಣ ಬದಲಿಸಿ ಬಿಟ್ಟಿದೆ. ಅಂದಹಾಗೆ, ಧರ್ಮದ ವೈಶಾಲ್ಯತೆಯನ್ನು ಒಪ್ಪದ, ತಮ್ಮ ನಿಲುವೇ ಅಂತಿಮ ಎಂದು ಹಠ ಹಿಡಿಯುವ ಮತ್ತು ಭಿನ್ನಾಭಿಪ್ರಾಯಕ್ಕೆ ಬಂದೂಕಿನಿಂದಲೇ ಉತ್ತರಿಸುವ ಧರ್ಮದ್ರೋಹಿಗಳಿಗೆ 14 ರ  ಮಲಾಲ ಆದರೇನು, 80 ರ ವಿದ್ವಾಂಸ ಆದರೇನು, ಎಲ್ಲರೂ ಒಂದೇ..
ಛೇ

No comments:

Post a Comment