Tuesday, May 15, 2012

ಗಂಗಮ್ಮ, ನೀಲಮ್ಮ, ಪಣಿಯಮ್ಮ ಮತ್ತು ಪಾನಮತ್ತ ಚಾಲಕ

             ಮೇ 12ರಂದು ಮೈಸೂರಲ್ಲಿ ನಡೆದ ಅಪಘಾತದ ವಿವರ ಹೀಗಿದೆ.
   ‘ಹೆಚ್.ಡಿ. ಕೋಟೆಯ ಹೈಲಿಗೆ ಗ್ರಾಮದಲ್ಲಿ ಆಲ್ಟೋ ಕಾರೊಂದಕ್ಕೆ ಐವರು ಯುವತಿಯರು ಬಲಿಯಾಗಿದ್ದಾರೆ. ಗಾರ್ಮೆಂಟ್ಸ್ ನಲ್ಲಿ ಕಾರ್ಮಿಕರಾಗಿರುವ ಈ ಯುವತಿಯರು ಮುಂಜಾನೆ ಫೂಟ್ ಪಾತಲ್ಲಿ  ವಾಹನಕ್ಕಾಗಿ ಕಾಯುತ್ತಿದ್ದಾಗ, ಆಲ್ಟೋ ಅವರ ಮೇಲೆ ಚಲಿಸಿದೆ. ಚಾಲಕ ಪಾನಮತ್ತನಾಗಿದ್ದು ಪರಾರಿಯಾಗಿದ್ದಾನೆ. ಕಾರಿನಲ್ಲಿ ಮದ್ಯದ ಬಾಟಲುಗಳು, ಪ್ಲಾಸ್ಟಿಕ್ ಲೋಟಗಳು ಪತ್ತೆಯಾಗಿವೆ..’
     ಸಾವು ಅನ್ನುವ ಎರಡಕ್ಷರಕ್ಕೆ ಸಿಗುವ ತಕ್ಷಣದ ಪ್ರತಿಕ್ರಿಯೆಗಳು ಕಣ್ಣೀರು, ಆಕ್ರಂದನ ಮತ್ತು ಮೌನ ಮಾತ್ರ. ಒಂದು ವೇಳೆ ಸಾವಿಗೀಡಾದವರು ಕೂಲಿ ಕಾರ್ಮಿಕರಾಗಿದ್ದರೆ, ರೇಶನ್ ಅಂಗಡಿಯ ಮುಂದೆ ಚಿಮಿಣಿ ಎಣ್ಣೆಗೋ, ಮೂರು ಕೆ.ಜಿ. ರಿಯಾಯಿತಿ ಅಕ್ಕಿಗೋ ಸಾಲುಗಟ್ಟಿ ನಿಲ್ಲುವವರಾಗಿದ್ದರೆ ಇಲ್ಲವೇ ಪೇಟೆಯ ಮಂದಿಯಂತೆ ನೀಟಾಗಿ ಬಟ್ಟೆ ತೊಡಲು, ಮಾತಾಡಲು ಬಾರದವರಾಗಿದ್ದರೆ ಅವರು ಮಾಧ್ಯಮಗಳಲ್ಲಿ ಒಂದು ದಿನಕ್ಕಿಂತ ಹೆಚ್ಚು ಸುದ್ದಿಯೇ ಆಗುವುದಿಲ್ಲ. ಅಪಘಾತಕ್ಕೆ ಕಾರಣ ಮದ್ಯ ಸೇವನೆ ಆಗಿದ್ದರೂ ಮಾಧ್ಯಮಗಳಲ್ಲಿ ಮದ್ಯ ಚರ್ಚೆಗೆ ಒಳಗಾಗುವುದಿಲ್ಲ. ಬೆಲೆ ಏರಿಕೆಯನ್ನು ಖಂಡಿಸಿ ಬಡಪಾಯಿಗಳು ಒಂದು ದಿನ ಮುಷ್ಕರ ನಡೆಸಿದರೆ ದೇಶಕ್ಕೆ ಎಷ್ಟು ನಷ್ಟ ಆಗುತ್ತದೆಂದು ಗುಣಾಕಾರ-ಭಾಗಾಕಾರ ಮಾಡುವವರಿಗೆ, ವರ್ಷದಲ್ಲಿ ಮದ್ಯಪಾನದಿಂದ ಎಷ್ಟು ಅಪಘಾತಗಳು ಸಂಭವಿಸುತ್ತವೆ ಅನ್ನುವುದನ್ನು ಅಷ್ಟೇ ಉತ್ಸಾಹದಿಂದ ಬರೆಯಲೂ ಬರುವುದಿಲ್ಲ. ಇನ್ನು, ಗಂಗಮ್ಮ, ನೀಲಮ್ಮ, ಪಣಿಯಮ್ಮ.. ಮುಂತಾದ ಹೆಸರುಗಳು ಸುಷ್ಮಾ, ಸೋನಿಯಾ, ವಸುಂದರಾ.. ಎಂಬಷ್ಟು ಚಂದದವುಗಳೂ ಅಲ್ಲವಲ್ಲ. ಅಂಥ ‘ಪುರಾತನ’ ಶೈಲಿಯ ಹೆಸರನ್ನು ಬರೆದು ಬಾಯಿ, ಪೆನ್ನು, ಕಾಗದವನ್ನು ಯಾಕೆ ಅವರು `ಗಲೀಜು’ ಮಾಡಿಕೊಳ್ಳಬೇಕು?
    ನಮ್ಮಲ್ಲಿ ಕೆಲವು ವಿಚಿತ್ರಗಳಿವೆ. ವಿಮಾನವೊಂದು ಅಪಘಾತಕ್ಕೀಡಾದರೆ ಅದರ ಕಾರಣಗಳನ್ನು ಪತ್ತೆ ಹಚ್ಚುವುದಕ್ಕೆ ಆಯೋಗದ ರಚನೆಯಾಗುತ್ತದೆ. ತಪ್ಪುಗಳನ್ನು ಕಂಡು ಹುಡುಕಿ ಮುಂದೆ ಅಂಥ ಪ್ರಮಾದ ಆಗದಂತೆ ಜಾಗ್ರತೆ ವಹಿಸಲಾಗುತ್ತದೆ. ಮಳೆಗಾಲ ಬಂತೆಂದರೆ ಸರಕಾರ ಚಿಕೂನ್ ಗುನ್ಯಾ, ಮಲೇರಿಯಾ, ಡೆಂಗ್ಯುನ ಬಗ್ಗೆ ಎಚ್ಚರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಮನೆ ಮನೆಗಳಿಗೆ ರಾಸಾಯನಿಕಗಳನ್ನು ಸಿಂಪಡಿಸುವ ವ್ಯವಸ್ಥೆ ಮಾಡುತ್ತದೆ. ಗೆರಟೆ, ಟೈರು, ಸಿಯಾಳ ಸಿಪ್ಪೆಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲು ಸಾರ್ವಜನಿಕರಿಗೆ ಕರೆ ಕೊಡುತ್ತದೆ. ಅಂದರೆ ಮಲೇರಿಯಾಕ್ಕೋ ಚಿಕೂನ್ ಗುನ್ಯಾಕ್ಕೋ ತುತ್ತಾಗಿ ಸಾವಿಗೀಡಾದವರಿಗೆ ಶೋಕ ವ್ಯಕ್ತಪಡಿಸುವುದನ್ನಷ್ಟೇ ಸರಕಾರ ಮಾಡುವುದಲ್ಲ. ರೋಗಕ್ಕೆ ಕಾರಣವಾಗುವ ಸೊಳ್ಳೆಗಳಿಗೆ ಮತ್ತು ಅದು ಉತ್ಪಾದನೆಯಾಗುವಂಥ ಸ್ಥಳ ಗಳಿಗೆ ರಾಸಾಯನಿಕಗಳನ್ನು ಸಿಂಪಡಿಸಿ ಮೂಲ ರೋಗಾಣುವನ್ನೇ ನಿರ್ಮೂಲನಗೊಳಿಸುವ ಪ್ರಯತ್ನಕ್ಕಿಳಿಯುತ್ತದೆ. ದುರಂತ ಏನೆಂದರೆ, ಮದ್ಯಕ್ಕೆ ಸಂಬಂಧಿಸಿ ಸರಕಾರದ ಕ್ರಮ ಈ ಮಟ್ಟದಲ್ಲಿರುವುದಿಲ್ಲ. ಪಾನ ಮತ್ತ ಚಾಲಕನೊಬ್ಬ ತನ್ನ ವಾಹನವನ್ನು ಪಾದಚಾರಿಗಳ ಮೇಲೆ ಚಲಾಯಿಸಿದರೆ ಸರಕಾರ ಸಾವಿಗೀಡಾದವರಿಗೆ ಪರಿಹಾರ ನೀಡುತ್ತದೆಯೇ ಹೊರತು ಅಪಘಾತಕ್ಕೆ ಮೂಲ ಕಾರಣವಾದ ಮದ್ಯದ ನಿರ್ಮೂಲನಕ್ಕೆ ಮುಂದಾಗುವುದೇ ಇಲ್ಲ. ಒಂದು ವೇಳೆ ನಮ್ಮ ವ್ಯವಸ್ಥೆಗೆ ಮದ್ಯ ದುರಂತದ ಬಗ್ಗೆ ಪ್ರಾಮಾಣಿಕ ಕಾಳಜಿ ಇರುತ್ತಿದ್ದರೆ ಚಾಲಕನಿಗಲ್ಲ, ಮದ್ಯಕ್ಕೆ ಶಿಕ್ಷೆ ಕೊಡಬೇಕಿತ್ತು. ಎಲ್ಲಾ ಬಗೆಯ ಮದ್ಯಕ್ಕೂ ನಿಷೇಧ ವಿಧಿಸುವ ಮೂಲಕ ಕ್ರಾಂತಿಕಾರಿ ಕ್ರಮವನ್ನು ಕೈಗೊಳ್ಳಬೇಕಿತ್ತು..
     ನಿಜವಾಗಿ ಗಂಗಮ್ಮ, ನೀಲಮ್ಮ, ಗೀತಮ್ಮ..ರಂಥವರ ಅಮೂಲ್ಯ ಓಟನ್ನು ಪಡಕೊಂಡು ವಿಧಾನ ಸೌಧಕ್ಕೋ ಸಂಸತ್ತಿಗೋ ಪ್ರವೇಶಿಸುವ ಮಂದಿ, ಬಳಿಕ ಓಡಾಡುವುದು ವಿಮಾನಗಳಲ್ಲಿ. ಒಂದು ವೇಳೆ ಅವರು ರಸ್ತೆಗಿಳಿದರೂ ಹಿಂದೆ ಮತ್ತು ಮುಂದೆ ಕಾವಲು ವಾಹನಗಳಿರುತ್ತವೆ. ಅವರ ವಾಹನದ ಸನಿಹಕ್ಕೂ ಇತರ ವಾಹನಗಳನ್ನು ಸುಳಿಯದಂತೆ ತಡೆಯಲಾಗುತ್ತದೆ. ಹೀಗಿರುವಾಗ ಪಾನಮತ್ತ ಚಾಲಕನೊಬ್ಬ ಅವರಿಗೆ ಢಿಕ್ಕಿಯಾಗುವ ಸಾಧ್ಯತೆಯೇ ಇರುವುದಿಲ್ಲ. ಒಂದು ವೇಳೆ ಇವೆಲ್ಲ ಇದ್ದೂ ಈ ದೇಶದ ರಾಷ್ಟ್ರಪತಿಯ ವಾಹನಕ್ಕೋ ಪ್ರಧಾನಿ ಅಥವಾ ಮುಖ್ಯಮಂತ್ರಿಯ ವಾಹನಕ್ಕೋ ಪಾನ ಮತ್ತ ಚಾಲಕರಿಂದ ಆಗಾಗ ಢಿಕ್ಕಿಯಾದ ಮತ್ತು ಅವರು ಅಪಾಯದಲ್ಲಿ ಸಿಲುಕಿಕೊಂಡ ಪ್ರಕರಣಗಳು ನಡೆದುವು ಎಂದಿಟ್ಟುಕೊಳ್ಳಿ. ಸರಕಾರದ ಪ್ರತಿಕ್ರಿಯೆ ಹೇಗಿದ್ದೀತು? ಕೇವಲ ಪಾನಮತ್ತ ಚಾಲಕನನ್ನಷ್ಟೇ ದಂಡಿಸಿ, ಪ್ರಕರಣವನ್ನು ಅದು ಮುಚ್ಚಿಬಿಡುತ್ತಿತ್ತೇ? ಮದ್ಯಪಾನದ ಬಗ್ಗೆ, ಅದರಿಂದುಂಟಾಗುವ ದುಷ್ಪರಿಣಾಮಗಳ ಬಗ್ಗೆ ದೇಶದಾದ್ಯಂತ ಗಂಭೀರ ಚರ್ಚೆಗೆ ಸರಕಾರ ಕರೆ ಕೊಡುತ್ತಿರಲಿಲ್ಲವೇ? ‘ನಮ್ಮ ನಾಯಕರನ್ನು ಉಳಿಸಿಕೊಳ್ಳುವುದಕ್ಕಾಗಿ ಮದ್ಯವನ್ನು ನಿಷೇಧಿಸುವುದಕ್ಕೂ ಸಿದ್ಧ’ ಅನ್ನುವ ಹೇಳಿಕೆಗಳನ್ನು ರಾಜಕಾರಣಿಗಳು ಕೊಡುವ ಸಾಧ್ಯತೆ ಇರಲಿಲ್ಲವೇ?
ಮದ್ಯಪಾನದಿಂದಾಗಿ ಆಗುವ ಸಾವುಗಳನ್ನು ಸಾಮಾನ್ಯ ಸಾವುಗಳ ಪಟ್ಟಿಗೆ ಸೇರಿಸಿ ಸುಮ್ಮನಾಗುವುದು ಸಾವಿಗೀಡಾದವರಿಗೆ ನಾವು ಬಗೆಯುವ ಬಹುದೊಡ್ಡ ದ್ರೋಹ. ನಿಜವಾಗಿ ಆ ಸಾವು ಹೃದಯಾಘಾತದಂಥಲ್ಲ. ವ್ಯವಸ್ಥೆ ಮನಸ್ಸು ಮಾಡಿದರೆ ಇಂಥ ಸಾವನ್ನು ತಪ್ಪಿಸಬಹುದು. ಗಂಗಮ್ಮ, ನೀಲಮ್ಮರಂಥವರಲ್ಲಿ ನಮ್ಮ ಅಬಕಾರಿ ಮಂತ್ರಿಗಳು, ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳೆಲ್ಲಾ ತಮ್ಮ ತಂಗಿ, ತಾಯಿ, ಅಕ್ಕರನ್ನು ಕಾಣುವಾಗ ಅದು ಸಾಧ್ಯವಾಗುತ್ತದೆ. ಸೋನಿಯಾ, ಸುಷ್ಮಾ, ಬೃಂದಾರನ್ನು ತಿಂಗಳುಗಟ್ಟಲೆ ಮುಖಪುಟದಲ್ಲಿಟ್ಟು ಹೊತ್ತೊಯ್ಯುವ ಪತ್ರಿಕೆಗಳು, ಅವರಂಥ ಖದರು ಮತ್ತು ಚೆಲುವು ಇಲ್ಲದ ಬಡಪಾಯಿ ‘ಅಮ್ಮ’ಂದಿರನ್ನು ಆ ಜಾಗದಲ್ಲಿಟ್ಟು ಚರ್ಚಿಸಿದಾಗಲೂ ಇದು ಸಾಧ್ಯವಾಗುತ್ತದೆ. ಯಡಿಯೂರಪ್ಪ ಬಾಯಿ ಆಕಳಿಸಿದ್ದನ್ನೂ ಬ್ರೇಕಿಂಗ್ ನ್ಯೂಸ್ ಮಾಡುವ ಚಾನೆಲ್ ಗಳಿಗೆ ‘ನೀಲಮ್ಮ’ರ ಸಾವು ಮತ್ತು ಅದಕ್ಕಿರುವ ಕಾರಣಗಳು ಮಹತ್ವದ್ದಾಗಿ ಬಿಟ್ಟಾಗಲೂ ಇದು ಸಾಧ್ಯವಾಗುತ್ತದೆ. ಆದ್ದರಿಂದ ವ್ಯವಸ್ಥೆಯ ಮೇಲೆ ಒತ್ತಡ ಹೇರುವ ಕೆಲಸವನ್ನು ಕನಿಷ್ಠ ಮಾಧ್ಯಮಗಳಾದರೂ ಮಾಡಲಿ. ಮದ್ಯ ಮುಕ್ತ ಭಾರತದ ನಿರ್ಮಾಣಕ್ಕೆ ಮಾಧ್ಯಮಗಳ ನೇತೃತ್ವದಲ್ಲಿ ಚಳವಳಿ ನಡೆಯಲಿ. ಹಾಗಾದರೆ ಮೈಸೂರಿನ ರಸ್ತೆಯಲ್ಲಿ ಬೋರಲಾಗಿ ಬಿದ್ದ ನೀಲಮ್ಮರಂಥವರ ಸಾವಿಗೆ ನಿಜವಾದ ಶೋಕ ಸಲ್ಲಿಸಿದಂತಾಗುತ್ತದೆ.

No comments:

Post a Comment