Thursday, March 25, 2021

ಗಲ್ಫ್ ನಿಂದ ಊರಿಗೆ ಬಂದ ಅವರಿಗೆ ಪತ್ನಿ ಅರ್ಥವಾದಳುಸಣ್ಣ ಜಗಳ
ಪುಟ್ಟ ಭಿನ್ನಾಭಿಪ್ರಾಯ
ಅವಳು ಬೆಳಗ್ಗಿನ ಉಪಾಹಾರವನ್ನು ಪತಿಗೆ ಬಡಿಸಿಟ್ಟು ತಾನು ಸೇವಿಸದೆಯೇ ಕಚೇರಿಗೆ ತೆರಳಿದಳು. ಮೊಬೈಲನ್ನು ಮನೆಯಲ್ಲೇ   ಬಿಟ್ಟು ಬಂದಿರುವುದು ಕಚೇರಿಗೆ ತಲುಪಿದ ಬಳಿಕ ಗೊತ್ತಾಯಿತು. ಛೆ ಎಂದು ಸುಮ್ಮನಾದಳು.
ಒಂದರ್ಧ ಗಂಟೆ ಕಳೆಯಿತು.
ಅಟೆಂಡರ್‌ನ ಕರೆಯನ್ನು ಅನುಸರಿಸಿ ಅವಳು ಕಚೇರಿಯಿಂದ ಹೊರಬಂದಳು. ನೋಡಿದರೆ ಪತಿ. ಆತ ಟಿಫಿನ್ ಬಾಕ್ಸನ್ನೂ  ಮೊಬೈಲನ್ನೂ ಆಕೆಯ ಕೈಗಿತ್ತ. ಬಳಿಕ ಪುಟ್ಟ ನಗುವನ್ನು ಚೆಲ್ಲಿ ಹೊರಟು ಹೋದ. ನೀವು ಉಪಾಹಾರ ಸೇವಿಸಿದಿರಾ... ಎಂಬ ಪ್ರಶ್ನೆ  ಅವಳ ಗಂಟಲಲ್ಲೇ  ಉಳಿಯಿತು.
ಉಪಾಹಾರ ಸೇವಿಸಿದ ಬಳಿಕ ಅವಳು ಮೊಬೈಲನ್ನು ಕೈಗೆತ್ತಿ ಕೊಂಡಳು. ಅವರಿಗೆ ಸಾರಿ ಅನ್ನಬೇಕು. ವಾಟ್ಸಪ್ ತೆರೆದಳು.
ಪತಿಯ ಸಂದೇಶ ಸ್ವಾಗತಿಸಿತು.
‘ನೀನು ಬಡಿಸಿಟ್ಟ ಉಪಾಹಾರ ಸೇವಿಸಬೇಕೆಂದಿದ್ದೆ. ಆದರೆ ನಿನ್ನ ನೆನಪಾಯಿತು. ಹಾಗೆಯೇ ಮುಚ್ಚಿಟ್ಟು ಬಂದಿದ್ದೇನೆ.  ಸ್ಸಾರಿ...’
ಅವಳ ಕೆನ್ನೆ ಒದ್ದೆಯಾಯಿತು.
+ + +
ವರ್ಷಗಳ ಹಿಂದೆ ನಾನೇ ಬರೆದಿರುವ ಈ ಮೇಲಿನ ಕತೆಯನ್ನು ಇಲ್ಲಿ ಹಂಚಿಕೊಳ್ಳುವುದಕ್ಕೆ ಕಾರಣವೊಂದಿದೆ-
ಇತ್ತೀಚೆಗೆ ಮದುವೆ ಕಾರ್ಯಕ್ರಮಕ್ಕೆಂದು ಹೊರಟಿದ್ದೆ. ದಾರಿಯಲ್ಲಿ ಗೆಳೆಯನನ್ನು ಕಾಯುತ್ತಾ ಬಳಿಕ ಹತ್ತಿರದ ಅಂಗಡಿ ಯಲ್ಲಿ ಕುಳಿತೆ  ಮತ್ತು ಅಂಗಡಿಯ ವ್ಯಕ್ತಿಯನ್ನು ಮಾತಿಗೆಳೆದೆ. ಅದು ಒಂದು ದೊಡ್ಡ ಕತೆ.
ಗಲ್ಫ್ ನಲ್ಲಿ   ಹಲವು ವರ್ಷಗಳ ಕಾಲ ದುಡಿದೂ ದುಡಿದೂ ಸುಸ್ತಾಗಿ ಊರಿಗೆ ಬಂದು ನೆಮ್ಮದಿಯಿಲ್ಲದೇ ಕಳೆದು ಹೋದ  ವೃತ್ತಾಂತವನ್ನು ಅಂಗಡಿಯ ವ್ಯಕ್ತಿ ಎದುರಿಟ್ಟರು. ಅಂಗಡಿ ಅವರದ್ದಲ್ಲ. ಮಾಲಿಕ ಬೇರೆ. ಅವರು ಸಂಬಳಕ್ಕಾಗಿ ದುಡಿಯುತ್ತಿದ್ದಾರೆ.  ಗಲ್ಫ್ ನಲ್ಲಿದ್ದ ಕಾಲ ಮತ್ತು ಆ ಕಾಲದ ಕಾರು-ಬಾರನ್ನು ಸ್ಮರಿಸುವಾಗ ಅವರು ಭಾವುಕರಾದರು.
ನಾಲ್ಕೈದು  ಅಣ್ಣ-ತಮ್ಮಂದಿರು ಇರುವ ತುಂಬು ಕುಟುಂಬ ಅವರದು. 50ರ ಆಸು-ಪಾಸಿನ ಪ್ರಾಯ. ಗಲ್ಫಲ್ಲಿದ್ದ ವೇಳೆ ಮನೆ  ನಿರ್ವಹಣೆಯೆಲ್ಲ ಅಣ್ಣ-ತಮ್ಮಂದಿರದ್ದೇ. ಊರಿನಲ್ಲಿ ಏನಾದರೂ ಮಾಡಿಡಬೇಕು, ಭವಿಷ್ಯಕ್ಕಾಗಿ ಏನಾದರೂ ಹೂಡಿಕೆ ಮಾಡಬೇಕು  ಎಂಬ ಯೋಚನೆಯಿಂದ ದುಡಿದದ್ದನ್ನು ಊರಿಗೆ ಕಳುಹಿಸುತ್ತಾ ಕನಸು ಕಂಡದ್ದೂ ಆಯಿತು. ಅಣ್ಣ-ತಮ್ಮಂದಿರು ಬೇರೆ ಬೇರೆ ಮನೆ  ಮಾಡಿಕೊಂಡು ಅಣು ಕುಟುಂಬವಾಗುವುದಕ್ಕಿಂತ ಒಂದೇ ಮನೆಯಲ್ಲಿದ್ದು ಅವಿಭಕ್ತ ಕುಟುಂಬವಾಗುವುದು ಅವರ ಆಸೆಯಾಗಿತ್ತು.  ಪತ್ನಿ ಏನಾದರೂ ಸಮಸ್ಯೆ, ಸಂಕಟ ಹೇಳಿಕೊಂಡರೂ ಕಿವಿಗೆ ಹಾಕಿಕೊಂಡದ್ದು ಕಡಿಮೆ. ಬೇರೆ ಮನೆ ಮಾಡುವುದರಿಂದ  ಸಂಬಂಧಗಳು ಹಾಳಾಗುತ್ತವೆ ಎಂಬ ಖಚಿತ ಅಭಿಪ್ರಾಯ ಅವರದ್ದಾದರೆ, ಪತ್ನಿಯ ಅಭಿಪ್ರಾಯ ಬೇರೆಯದೇ. ಅಣ್ಣ-ತಮ್ಮಂದಿರಿಗೆ  ಮದುವೆಯೂ ಆಯಿತು. ಒಂದೇ ಮನೆ. ಸೊಸೆಯಂದಿರ ಸಂಖ್ಯೆಯೂ ಹೆಚ್ಚಾಯಿತು. ಆದರೂ ಬೇರೆ ಮನೆ ಮಾಡುವ ಬಗ್ಗೆ  ಅವರು ಆಲೋಚಿಸಲಿಲ್ಲ. ಅಂಥ ಆಲೋಚನೆಯೇ ಕೆಟ್ಟದು ಎಂಬ ಭಾವ ಅವರದ್ದು. ಮನೆಯಲ್ಲಿ ಅಭಿಪ್ರಾಯ ಬೇಧಗಳು  ಉಂಟಾಗುವುದು, ಮಕ್ಕಳ ವಿಷಯದಲ್ಲಿ ಆಗುವ ನೋವು-ಸಂಕಟಗಳನ್ನು ಪತ್ನಿ ಹೇಳಿಕೊಳ್ಳುತ್ತಿದ್ದರೂ ಅವೆಲ್ಲವನ್ನೂ ನಿರ್ಲಕ್ಷಿಸಿದ್ದೇ   ಹೆಚ್ಚು. ದೊಡ್ಡ ಕುಟುಂಬ ಅಂದಮೇಲೆ ಇಂಥದ್ದೆಲ್ಲ ಸಾಮಾನ್ಯ ಎಂಬ ಭಾವ.
ಕೊನೆಗೂ ಊರಿಗೆ ಮರಳಲೇಬೇಕಾದ ಅನಿವಾರ್ಯತೆ ಎದುರಾಯಿತು.
ಪತ್ನಿಯ ಮಾತನ್ನೂ ಆಲಿಸಬೇಕಿತ್ತು ಎಂದು ಅವರಿಗೆ ಅನಿ ಸಿದ್ದು ಊರಿಗೆ ಬಂದ ಬಳಿಕ. ಅಣ್ಣ-ತಮ್ಮಂದಿರೇನೋ ಉದ್ಯೋಗ,  ಬದುಕು-ಭಾವ ಅಂತ ಅವರವರ ಪ್ರಪಂಚದಲ್ಲಿ ಇದ್ದರು. ನಮ್ಮದೇ ಆದ ಮನೆಯೊಂದಿರಲಿ ಎಂಬ ಪತ್ನಿಯ ಆಸೆಗೆ  ತಣ್ಣೀರೆರಚಿಕೊಂಡೇ ಬಂದ ಅವರಿಗೆ ಮೊದಲ ಬಾರಿ ಆ ಬಗ್ಗೆ ಪಶ್ಚಾತ್ತಾಪವಾಯಿತು. ಊರಲ್ಲಿ ತನ್ನದು ಅನ್ನುವ ಏನೂ ಇಲ್ಲ...
ಅಷ್ಟಕ್ಕೂ,
ಅವರಲ್ಲಿ ಹೇಳಿಕೊಳ್ಳುವುದಕ್ಕೆ ಇನ್ನಷ್ಟು ಸಂಗತಿಗಳಿದ್ದುವು. ನಿಜವಾಗಿ,
ಪತಿ ಮತ್ತು ಪತ್ನಿಯ ನಡುವೆ ವಿರಸ ಮೂಡುವುದಕ್ಕೆ ನಿರ್ದಿಷ್ಟ ಕಾರಣಗಳೇ ಬೇಕಾಗಿಲ್ಲ. ಬಾಹ್ಯನೋಟಕ್ಕೆ ತೃಣಸಮಾನ ಎಂದು  ಕಾಣುವ ಸಂಗತಿಯೇ ಪತ್ನಿಗೋ ಅಥವಾ ಪತಿಗೋ ಪರ್ವತದಂಥ ಕಾರಣ ಆಗಿ ಪರಿವರ್ತಿತವಾಗಬಹುದು. ಸಂಜೆ ಕಚೇರಿಯಿಂದ  ಮನೆಗೆ ಬಂದಾಗ ಪತ್ನಿ ಸ್ವಾಗತಿಸಲಿಲ್ಲವೆಂದೋ ಉಪಚಾರ ಮಾಡಿಲ್ಲವೆಂದೋ ಮುನಿಸಿಕೊಳ್ಳುವ ಪತಿಯಂದಿರಿದ್ದಾರೆ. ಪತ್ನಿಯೇ ಏಕೆ  ಉಪಚರಿಸಬೇಕು, ಪತ್ನಿ ಕಚೇರಿಯಿಂದ ಸಂಜೆ ಮನೆಗೆ ಬಂದಾಗ ಪತಿ ಉಪಚರಿಸುತ್ತಾರಾ, ಸ್ವಾಗತಿಸುತ್ತಾರಾ ಎಂಬ ಪ್ರಶ್ನೆ  ಆಕೆಯಲ್ಲೂ ಇರಬಹುದು. ಇವು ಎರಡರಲ್ಲಿ ಒಂದು ಗಂಭೀರ ಮತ್ತು ಇನ್ನೊಂದು ಗೌಣ ಎಂಬಂತಾಗಬೇಕಿಲ್ಲ. ಎರಡು ಪ್ರಶ್ನೆಗಳಿಗೂ ಮಹತ್ವವಿದೆ ಮತ್ತು ಎರಡನ್ನೂ ಅತ್ಯಂತ ನಾಜೂಕಿನಿಂದ ನಿಭಾಯಿಸುವ ಕಲೆ ಪತಿ ಮತ್ತು ಪತ್ನಿ ಇಬ್ಬರಿಗೂ  ಗೊತ್ತಿರಬೇಕು. ತಾನು ಹೊರಗಿನಿಂದ ಮನೆಗೆ ಬಂದಾಗ ತನ್ನನ್ನು ಸ್ವಾಗತಿಸುವುದು, ಉಪಚರಿಸುವುದು, ನೀರೋ ಇನ್ನೇನನ್ನೋ  ತಂದು ಕೊಡುವುದು ಪತ್ನಿಯ ಕಡ್ಡಾಯ ಕರ್ತವ್ಯ ಎಂದು ನಂಬಿರುವ ಪತಿಯಂದಿರಿದ್ದಾರೆ. ಮಾತ್ರವಲ್ಲ, ಅದನ್ನು ತಮ್ಮ ಕಡ್ಡಾಯ  ಕರ್ತವ್ಯ ಎಂದು ನಂಬಿರುವ ಪತ್ನಿಯಂದಿರೂ  ಇದ್ದಾರೆ. ಅದೇವೇಳೆ, ಪತ್ನಿಯನ್ನು ಹಾಗೆ ಸ್ವಾಗತಿಸುವುದು, ಉಪಚರಿಸುವುದು  ಪತಿಯ ವ್ಯಕ್ತಿತ್ವಕ್ಕೆ ಕುಂದು ಎಂದು ಭಾವಿಸುವ ಪುರುಷರಿದ್ದಾರೆ. ಸೇವೆ ಮಾಡಿಸಿಕೊಳ್ಳಬೇಕಾದವರು ಪುರುಷರು ಮತ್ತು  ಮಾಡಬೇಕಾದವರು ಮಹಿಳೆಯರು ಎಂಬ ಅಲಿಖಿತ ನಿಯಮ ಸಾಮಾಜಿಕವಾಗಿ ಇದೆ. ಇಲ್ಲಿ ಇನ್ನೂ ಒಂದು ನಾಜೂಕಿನ ನಡೆಯೂ  ಇದೆ. ದುಡಿದು ಸಂಜೆ ಮನೆಗೆ ಬರುವ ಪತಿಗೆ ನೀರು ತಂದು ಕೊಡುವುದು, ಬಾಗಿಲಲ್ಲಿ ನಿಂತು ಸ್ವಾಗತಿಸುವುದೆಲ್ಲ ಪರಸ್ಪರ ಪ್ರೀತಿ,  ಒಲುಮೆಯನ್ನು ವಿನಿಮಯ ಮಾಡಿಕೊಳ್ಳುವ ಸಂದರ್ಭವಾಗಿ ಪರಿಗಣಿಸುವ ಹೆಣ್ಣು ಮತ್ತು ಗಂಡು ಇಬ್ಬರೂ ಇದ್ದಾರೆ. ಅದು ಹೆಣ್ಣಿನ  ಕರ್ತವ್ಯ ಎಂದು ಬಗೆಯದ ಗಂಡೂ ಮತ್ತು ಹಾಗೆ ಮಾಡುವುದರಿಂದ ಪರಸ್ಪರರ ನಡುವಿನ ಸಂಬಂಧಕ್ಕೆ ಬಲ ಬರುತ್ತದೆ ಎಂದು  ನಂಬುವ ಹೆಣ್ಣೂ ಇದ್ದಾರೆ. ಅಷ್ಟಕ್ಕೂ,
ದಾಂಪತ್ಯ ಬದುಕು ತರ್ಕದ ಮೇಲೆ ನಿಂತಿಲ್ಲ. ಅದು ಪರಸ್ಪರರ ನಡುವಿನ ತಿಳುವಳಿಕೆಯ ಮೇಲೆ ನಿಂತಿದೆ. ತಾನು ಮನೆ  ಪ್ರವೇಶಿಸುವಾಗ ಸ್ವಾಗತಿಸಿದ್ದೀಯಾ, ನೀರು ತಂದು ಕೊಟ್ಟು ಪ್ರೀತಿಸಿದ್ದೀಯಾ ಎಂಬ ಪತಿಯ ಪ್ರಶ್ನೆಗೆ ಎದುರಾಗಿ, ನೀನು ಹಾಗೆ  ಎಂದಾದರೂ ಮಾಡಿದ್ದೀಯಾ ಎಂದು ಪ್ರತಿ ಪ್ರಶ್ನೆ ಮಾಡುವ ಹಕ್ಕು ಪತ್ನಿಗೆ ಇದೆ ಮತ್ತು ಪತಿ-ಪತ್ನಿ ಇಬ್ಬರೂ ಜೋಡಿಗಳು ಎಂಬ  ವ್ಯಾಖ್ಯಾನಕ್ಕೆ ಇಂಥ ಪ್ರಶ್ನೆಗಳು ತಕ್ಕುದಾಗಿಯೂ ಇವೆ. ಜೋಡಿಗಳಲ್ಲಿ ಜವಾಬ್ದಾರಿ ಇಬ್ಬರಿಗೂ ಇದೆ. ಆದರೆ, ಇಂಥ ಸಂಗತಿಗಳೆಲ್ಲ  ತರ್ಕವನ್ನೇ ಅವಲಂಬಿಸಿಕೊಂಡಿಲ್ಲ. ಇವು ತರ್ಕಗಳಾಚೆಗಿನ ಸಂಗತಿಗಳು. ಹೃದಯ ಬೆಸೆಯುವ ಸಂದರ್ಭಗಳು. ಅವನ್ನು  ತರ್ಕಗಳಾಚೆಗೆ ಕೊಂಡೊಯ್ಯಬೇಕು. ಪತಿ ಬಂದಾಗ ಪತ್ನಿ ಎದುರುಗೊಳ್ಳುವುದು ಅಥವಾ ಪತ್ನಿಯನ್ನು ಮನೆಗೆ ಸ್ವಾಗತಿಸುವುದು  ಇತ್ಯಾದಿಗಳೆಲ್ಲ ಬಾಹ್ಯನೋಟಕ್ಕೆ ಸಣ್ಣ ಸಂಗತಿಗಳಾದರೂ ಆಂತರಿಕವಾಗಿ ಪ್ರೀತಿ ಉಕ್ಕಿಸುವ ಬಹುದೊಡ್ಡ ಸನ್ನಿವೇಶಗಳು. ಇವು  ತರ್ಕಗಳಾಚೆಗೆ ನಡೆಯುತ್ತಿರಬೇಕಾದ ಸಂಗತಿಗಳು. ವಿಷಾದ ಏನೆಂದರೆ,
ದಾಂಪತ್ಯ ಸಂಬಂಧವನ್ನು ಗಟ್ಟಿಗೊಳಿಸುವುದಕ್ಕೆ ಮತ್ತು ಊರ್ಜಿತದಲ್ಲಿಡುವುದಕ್ಕೆ ಹೆಣ್ಣು ಬಹಳವೇ ಪಾಡು ಪಡುತ್ತಾಳೆ. ಹೆಣ್ಣಿಗೆ  ಹೋಲಿಸಿದರೆ, ಗಂಡಿನ ಪಾಡು ಕಡಿಮೆ. ಆರಂಭದಲ್ಲಿ ಉಲ್ಲೇಖಿಸಲಾದ ವ್ಯಕ್ತಿಗೆ ಸಂಬಂಧಿಸಿಯೂ ಇದು ಅನ್ವಯ. ಅವಿಭಕ್ತ  ಕುಟುಂಬದ ಸಂಕಟಗಳನ್ನು ಅವರು ಗಲ್ಫಲ್ಲಿದ್ದಾಗ ಪತ್ನಿ ಹೇಳುತ್ತಿರಲಿಲ್ಲ ಎಂದಲ್ಲ. ಆದರೆ, ಆ ಮಾತುಗಳನ್ನು ಪತ್ನಿಯೋರ್ವಳ  ಮಹತ್ವಾಕಾಂಕ್ಷೆಯ ರೂಪದಲ್ಲಿ ಅವರು ಕಂಡಿದ್ದರೇ ಹೊರತು ಅದನ್ನೊಂದು ಗಂಭೀರ ಸಂಗತಿಯಾಗಿ ಎತ್ತಿಕೊಂಡಿರಲೇ ಇಲ್ಲ.  ಅಣ್ಣ-ತಮ್ಮಂದಿರಲ್ಲೇ  ಸಹಮತಕ್ಕೆ ಬರಲು ಸಾಧ್ಯವಾಗದ ಅಸಂಖ್ಯ ವಿಷಯಗಳಿರುವಾಗ ರಕ್ತ ಸಂಬಂಧಿಗಳಲ್ಲದ ಸೊಸೆಯಂದಿರ  ನಡುವೆ ಭಿನ್ನಾಭಿಪ್ರಾಯ ಬರುವುದನ್ನು ನಿರಾಕರಿಸಲಾಗದು ಅಥವಾ ನಿರ್ಲಕ್ಷಿಸಬಾರದು ಎಂಬ ರೀತಿಯಲ್ಲಿ ಅವರು  ಆಲೋಚಿಸಿಯೂ ಇರಲಿಲ್ಲ. ಸಾಮಾನ್ಯವಾಗಿ,
ಪುರುಷರು ಬೆಳಿಗ್ಗೆ ಮನೆಯಿಂದ ಹೊರ ಹೋದರೆ ಮತ್ತೆ ಮನೆ ಮುಟ್ಟುವುದು ಸಂಜೆಯೋ ರಾತ್ರಿಯೋ ಆದಾಗ. ಆದರೆ  ಮಹಿಳೆಯರು 24 ಗಂಟೆಯೂ ಮನೆಯೊಳಗೆಯೇ ಇರುತ್ತಾರೆ. ಆದ್ದರಿಂದ, ಮನಸ್ತಾಪದ ಸಂಗತಿಗಳು ಮಹಿಳೆಯರ ನಡುವೆ  ಹೆಚ್ಚಿರುವುದಕ್ಕೆ ಅವಕಾಶ ಇದೆ. ಪುರುಷರು ಇದನ್ನು ನಿರ್ಲಕ್ಷಿಸಿದಾಗ ಕ್ರಮೇಣ ಅದು ಅವರ ನೆಮ್ಮದಿಯನ್ನೂ ಕೆಡಿಸುತ್ತದೆ. ಪತ್ನಿ  ತೀರಾ ಸಣ್ಣ ಸಂಗತಿಗೂ ಪತಿಯೊಂದಿಗೆ ಕೋಪಿಸಿಕೊಳ್ಳುತ್ತಾಳೆ. ಜಗಳ ಕಾಯುತ್ತಾಳೆ. ಮಕ್ಕಳ ಮೇಲೆ ರೇಗಾಡತೊಡಗುತ್ತಾಳೆ. ಹೆಚ್ಚಿನ  ಸಮಯ ಮನೆಯಿಂದ ಹೊರಗಿರುವ ಅಥವಾ ವಿದೇಶ ದಲ್ಲಿರುವ ಪುರುಷರಿಗೆ ಅದರ ತೀವ್ರತೆ ಅರ್ಥವಾಗುವುದಿಲ್ಲ. ಅಲ್ಲದೇ,  ಅವಿಭಕ್ತ ಕುಟುಂಬದ ಪರಂಪರೆಯನ್ನು ಕಾಯ್ದುಕೊಳ್ಳು ವುದು ತನ್ನ ಜವಾಬ್ದಾರಿ ಎಂಬ ಭಾವವೂ ಅಲ್ಲಿ ಕೆಲಸ ಮಾಡುತ್ತಿರುತ್ತದೆ.  ಎಲ್ಲಿ ತನ್ನನ್ನು ಕುಟುಂಬಿಕರು ಆಡಿಕೊಳ್ಳುತ್ತಾರೋ ಎಂಬ ಭಯವೂ ಇಂಥ ಸಂದರ್ಭವನ್ನು ಬಿಗಡಾಯಿಸುವಂತೆ ಮಾಡುತ್ತದೆ.  ಆದರೆ,
ಇದರಿಂದಾಗಿ ಆಗುವ ಹಾನಿ ಅಪಾರವಾದುದು. ದಾಂಪತ್ಯ ಸಂಬAಧವು ಸದಾ ಮುಚ್ಚಿದ ಕೆಂಡದAತೆ ನಿಗಿ ನಿಗಿ ಅನ್ನುತ್ತಿರು ತ್ತದೆ.  ಪತಿಯ ತೀರಾ ಪ್ರೇಮದ ಮಾತೂ ಇರಿಯುವ ಮಾತಾಗಿ ಪತ್ನಿಗೆ ಕೇಳಿಸಬಹುದು. ಸದಾ ನೆಮ್ಮದಿ ಕಳೆದುಕೊಂಡು ಬದು ಕುತ್ತಾ  ತನ್ನ ಆರೋಗ್ಯವನ್ನೇ ಆಕೆ ಕೆಡಿಸುತ್ತಿರಬಹುದು. ಮನೆ ಯಲ್ಲಿ ನೆಮ್ಮದಿಯೇ ಹೊರಟು ಹೋಗಿರಬಹುದು. ಬಳಿಕ ವೈದ್ಯರಿಗೆ ಹಣ  ಕೊಡುವ ಪ್ರಕ್ರಿಯೆಗೆ ಅದು ದಾರಿ ತೆರೆಯಬಹುದು. ಹಾಗಂತ,
ಅಣು ಕುಟುಂಬದಲ್ಲೂ ಪತಿ-ಪತ್ನಿ ನಡುವೆ ಸಂಬಂಧ ಬಿಗಡಾಯಿಸುವುದಿಲ್ಲವೇ ಎಂಬ ಪ್ರಶ್ನೆ ಇರಬಹುದು. ಬಿಗಡಾಯಿಸುತ್ತದೆ.  ಆದರೆ, ಅದು ಆರಂಭದಲ್ಲಿ ಉಲ್ಲೇಖಿಸಲಾದ ಗಲ್ಫ್ ವ್ಯಕ್ತಿಗೆ ಸಂಬಂಧಿಸಿದ ರೂಪದಲ್ಲಿರುವುದಿಲ್ಲ. ಇಲ್ಲಿನ ಮುನಿಸು, ಕೋಪ-ತಾ ಪಗಳು ಜಾಣ್ಮೆಯ ಒಂದು ಸ್ಸಾರಿಯಿಂದ, ಒಂದು ಚುಂಬನದಿಂದ ಅಥವಾ ಅಪ್ಪುಗೆಯಿಂದ ಕಳೆದು ಹೋಗುವಂಥದ್ದು.
ಆರಂಭದ ಕತೆ ಅದನ್ನೇ ಹೇಳುತ್ತದೆ.

No comments:

Post a Comment