1. ವಸೀಮ್ ರಿಝ್ವಿ
2. ಸಂಗೀತಾ ಶ್ರೀವಾಸ್ತವ
3. ಕರ್ನಾಟಕ ವಕ್ಫ್ ಬೋರ್ಡ್
4. ನ್ಯಾಯಾಲಯಗಳು
ಕಳೆದವಾರ ಇವು ನಾಲ್ಕೂ ಒಂದೇ ಕಾರಣಕ್ಕಾಗಿ ಬೇರೆ ಬೇರೆ ರೀತಿಯಲ್ಲಿ ಚರ್ಚೆಗೆ ಒಳಗಾದುವು. ಚರ್ಚೆಯ ಕೇಂದ್ರ ಬಿಂದು ಇಸ್ಲಾಮ್, ಮುಸ್ಲಿಮ್, ಆಝಾನ್, ಮಸೀದಿ, ಲೌಡ್ ಸ್ಪೀಕರ್ ಇತ್ಯಾದಿಗಳು. ಒಟ್ಟಿನಲ್ಲಿ ಮುಸ್ಲಿಮರು ಎಂದು ಸರಳೀಕರಿಸಿ ಹೇಳಬಹುದು. ಪವಿತ್ರ ಕುರ್‌ಆನಿನ ಒಟ್ಟು ಸೂಕ್ತಗಳಿಂದ 26 ಸೂಕ್ತಗಳನ್ನು ಕಿತ್ತು ಹಾಕಬೇಕೆಂಬುದು ವಸೀಮ್ ರಿಝ್ವಿಯ ಆಗ್ರಹ. ಹಾಗಂತ, ಅವರು ಮಾರ್ಚ್ 12, 2021ರಂದು ಸುಪ್ರೀಮ್ ಕೋರ್ಟಿಗೆ ಮನವಿ ಸಲ್ಲಿಸಿದ್ದರು. ಈ ಸೂಕ್ತಗಳು ಹಿಂಸೆಗೆ ಪ್ರಚೋದನೆ ನೀಡುತ್ತಿವೆ ಮತ್ತು ಇವು ಮೂಲ ಕುರ್‌ಆನ್‌ನ ಭಾಗವಲ್ಲ ಎಂಬುದು ಅವರ ವಾದ. ಇದನ್ನು ನಂತರದ ಖಲೀಫರು ತಮ್ಮ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಸೇ ರ್ಪಡೆಗೊಳಿಸಿದ್ದಾರೆ ಎಂದೂ ಅವರು ವಾದಿಸಿದ್ದಾರೆ.
ಉತ್ತರ ಪ್ರದೇಶದ ಶಿಯಾ ಕೇಂದ್ರ ವಕ್ಫ್ ಬೋರ್ಡ್ ನಲ್ಲಿ ದಶಕಗಳ ಕಾಲ ಅಧ್ಯಕ್ಷರಾಗಿದ್ದು, ಕಳೆದ ವರ್ಷವಷ್ಟೇ ಹೊರಬಿದ್ದವರು ಈ ರಿಝ್ವಿ. ಇವರ ರಾಜಕೀಯ ಜೀವನ ಆರಂಭವಾದದ್ದು ಸಮಾಜವಾದಿ ಪಕ್ಷದ ಮೂಲಕ. ಲಕ್ನೋ ಕಾರ್ಪೊರೇಟರ್ ಆಗಿ ಇವರು ಸಮಾಜವಾದಿ ಪಕ್ಷದಿಂದ 2000ದಲ್ಲಿ ಆಯ್ಕೆಯಾದರು. ಆ ಬಳಿಕ ಶಿಯಾ ನಾಯಕ ಕಲ್ಬೆ ಜವ್ವಾದ್‌ರ ಜೊತೆ ಭಿನ್ನಾಭಿ ಪ್ರಾಯ ಉಂಟಾಯಿತು. ರಿಝ್ವಿಯ ಮೇಲೆ ಭ್ರಷ್ಟಾಚಾರದ ಆರೋಪವೂ ಕೇಳಿಬಂತು. ಈ ಎಲ್ಲ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷವು 2012ರಲ್ಲಿ ಇವರನ್ನು ಪಕ್ಷದಿಂದ 6 ವರ್ಷಗಳ ಅವಧಿಗೆ ಉಚ್ಛಾಟನೆ ಮಾಡಿತು. ಆಗಿನಿಂದ ಅವರು ಬಿಜೆಪಿಗೆ ಹತ್ತಿರವಾದರು. ಬಿಜೆಪಿಯ ನಿಲುವುಗಳನ್ನು ಬಹಿರಂಗವಾಗಿ ಸಮರ್ಥಿಸತೊಡಗಿದರು. 2018ರಲ್ಲಿ ರಾಮ್ ಕಿ ಜನ್ಮಭೂಮಿ ಎಂಬ ಸಿನಿಮಾವನ್ನು ನಿರ್ಮಿಸಿದರು ಮತ್ತು ಸ್ವತಃ ಚಿತ್ರಕಥೆ ಬರೆದರು. ಬಾಬರಿ ಮಸೀದಿ ಇದ್ದ ಜಾಗದಲ್ಲೇ ಬೃಹತ್ ರಾಮಮಂದಿರ ನಿರ್ಮಾಣಕ್ಕೆ ಶಿಯಾ ವಕ್ಫ್ ಬೋರ್ಡ್ ನ ಬೆಂಬಲ ಸಾರಿದರು. ಉತ್ತರ ಪ್ರದೇಶ ಸರಕಾರ ನಿರ್ಮಿಸಲು ಹೊರಟಿರುವ ಶ್ರೀರಾಮನ ಬೃಹತ್ ಪುತ್ಥಳಿಗೆ ಬೆಳ್ಳಿಯ 10 ಬಾಣಗಳನ್ನು ನೀಡುವುದಾಗಿ ಘೋಷಿಸಿದರು. ಆರಾಧನಾ ಸ್ಥಳಗಳಿಗೆ ಸಂಬಂಧಿಸಿ 1991ರ ಕಾಯ್ದೆಯನ್ನು ತಿದ್ದು ಪಡಿಗೊಳಿಸಬೇಕು ಮತ್ತು ಮಂದಿರ ಕೆಡವಿ ಕಟ್ಟಲಾದ ಮಸೀದಿ ಗಳನ್ನು ಸರಕಾರ ವಶಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಮಾತ್ರವಲ್ಲ, ಮಂದಿರ ಕೆಡವಿ ಯಾವೆಲ್ಲ ಮಸೀದಿ ಕಟ್ಟಲಾಗಿದೆ ಎಂಬ ಪಟ್ಟಿಯನ್ನೂ ನೀಡಿದರು. ತ್ರಿವಳಿ ತಲಾಕ್ ನೀಡಿದವರಿಗೆ ಈಗಿನ 3 ವರ್ಷಗಳ ಬದಲು 10 ವರ್ಷ ಜೈಲು ಶಿಕ್ಷೆ ವಿಧಿಸಬೇಕು, ಮದ್ರಸಗಳನ್ನು ಐಎಸ್‌ಐ ನಿಯಂತ್ರಿಸುತ್ತಿದ್ದು, ಅವು ಗಳನ್ನು ಮುಚ್ಚಬೇಕು ಎಂದೂ ಆಗ್ರಹಿಸಿದರು.
ಒಂದುರೀತಿಯಲ್ಲಿ ಕಳೆದ ಒಂದು ದಶಕದಲ್ಲಿ ಅವರಾಡಿರುವ ಮಾತು ಮತ್ತು ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಬರೆದಿರುವ ಪತ್ರಗಳು ಮತ್ತು ಅವರ ಆಗ್ರಹಗಳು ಎಲ್ಲವನ್ನೂ ಪರಿಶೀಲಿಸಿದರೆ, ಸುಪ್ರೀಮ್‌ಗೆ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಅಚ್ಚರಿ ಪಡುವಂಥದ್ದೇನೂ ಇಲ್ಲ. ಆದರೆ ಆ ಬಳಿಕದ ಬೆಳವಣಿಗೆಗಳನ್ನು ಪರಿಗಣಿಸುವಾಗ ಅಚ್ಚರಿ ಪಡಲೇಬೇಕಾದ ಅರ್ಜಿ ಇದು ಎಂದು ಅ ನಿಸುತ್ತಿದೆ.
ಸುಪ್ರೀಮ್‌ಗೆ ರಿಝ್ವಿ ಸಲ್ಲಿಸಿದ ಅರ್ಜಿಯ ಒಂದು ವಾರದ ಬಳಿಕ ಇನ್ನೆರಡು ಬೆಳವಣಿಗೆಗಳೂ ನಡೆದುವು.
1. ಅಲಹಾಬಾದ್‌ನ ಕೇಂದ್ರ ವಿವಿಯ ಉಪಕುಲಪತಿ ಸಂಗೀತಾ ಶ್ರೀವಾಸ್ತವ ಎಂಬವರು ಅಲ್ಲಿನ ಜಿಲ್ಲಾಧಿಕಾರಿಗೆ ಬರೆದಿರುವ ಪತ್ರ.
ತನ್ನ ಮನೆಯ ಪಕ್ಕದ ಮಸೀದಿಯಿಂದ ಕೇಳಿ ಬರುವ ಮುಂಜಾನೆಯ ಆಝಾನ್ ತನ್ನ ನಿದ್ದೆಗೆ ಭಂಗ ತರುತ್ತಿದೆ, ಆ ಆಝಾನ್‌ನ ಬಳಿಕ ತನಗೆ ನಿದ್ದೆ ಬರುತ್ತಿಲ್ಲ. ಇದು ತನ್ನ ಕೆಲಸದ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದವರು ದೂರಿಕೊಂಡರು ಮತ್ತು ಆ ಆಝಾನನ್ನು ಲೌಡ್‌ಸ್ಪೀಕರ್‌ನಲ್ಲಿ ಕೊಡದಂತೆ ತಡೆಯಬೇಕೆಂದು ಆಗ್ರಹಿಸಿದರು.
2. ಇದರ ಜೊತೆಜೊತೆಗೇ ರಾಜ್ಯ ವಕ್ಫ್ ಬೋರ್ಡ್ ಕೂಡ ಮಸೀದಿಗಳಲ್ಲಿ ಬಳಸಲಾಗುವ ಲೌಡ್ ಸ್ಪೀಕರನ್ನು ಗುರಿಯಾಗಿಸಿ ಸುತ್ತೋಲೆಯನ್ನು ಹೊರಡಿಸಿತು. ಆ ಸುತ್ತೋಲೆಯ ಒಟ್ಟು ಸಾರಾಂಶ ಏನೆಂದರೆ, ಮಸೀದಿಯ ಲೌಡ್ ಸ್ಪೀಕರ್‌ನ ಬಳಕೆಯನ್ನು ತಗ್ಗಿಸುವುದು. ಅಂದಹಾಗೆ,
ಈ ಎಲ್ಲ ಬೆಳವಣಿಗೆಗಳೂ ಬಾಹ್ಯನೋಟಕ್ಕೆ ಬಿಡಿ ಬಿಡಿ ಘಟನೆಗಳಾಗಿ ಕಂಡರೂ ಭವಿಷ್ಯದಲ್ಲಿ ಇವೆಲ್ಲವೂ ಒಂದೇ ದಾರದಲ್ಲಿ ಪೋಣಿಸಿದ ಮಣಿಗಳಾಗಿ ಮಾರ್ಪಡುವ ಸಾಧ್ಯತೆ ಖಂಡಿತ ಇದೆ. ರಿಝ್ವಿಯ ಅರ್ಜಿಯ ಬಗ್ಗೆ ಶಿಯಾಗಳಾಗಲಿ, ಸುನ್ನಿಗಳಾಗಲಿ ಅಥವಾ ಬಿಜೆಪಿಯಾಗಲಿ ಸದ್ಯ ಯಾವ ಆಸಕ್ತಿಯನ್ನೂ ತಾಳಿಲ್ಲ. ಶಿಯಾಗಳೂ, ಸುನ್ನಿಗಳೂ ಒಟ್ಟಾಗಿ ರಿಝ್ವಿಯನ್ನು ವಿರೋಧಿಸಿವೆ. ಬಿಜೆಪಿ ಕೂಡಾ ರಿಝ್ವಿಗೆ ತನ್ನ ಬೆಂಬಲ ಇಲ್ಲ ಎಂದು ಸಾರಿದೆ. ಆದರೆ, ಬಿಜೆಪಿಯ ಈ ನಿಲುವನ್ನೇ ನಂಬಿಕೊಂಡು ರಿಝ್ವಿ ಒಂಟಿಯಾದ ಎಂದು ಹೇಳಲಾಗದು. ಒಂದುವೇಳೆ,
ಸುಪ್ರೀಮ್ ಕೋರ್ಟು ರಿಝ್ವಿಯ ಅರ್ಜಿಯನ್ನು ತಳ್ಳಿ ಹಾಕಿದರೂ ಅದನ್ನು ಸಾರ್ವಜನಿಕವಾಗಿ ಜೀವಂತ ಇಟ್ಟುಕೊಳ್ಳುವ ಕಲೆ ಬಿಜೆಪಿಗೆ ಚೆನ್ನಾಗಿಯೇ ಸಿದ್ದಿಸಿದೆ. ರಾಮಮಂದಿರ, ತಲಾಕ್, 370ನೇ ವಿಧಿ ಇತ್ಯಾದಿ ಅಕ್ರಮಣಕಾರಿ ಇಶ್ಶೂಗಳು ಇದೀಗ ಮುಗಿದಿರುವುದರಿಂದ ಬಿಜೆಪಿಗೆ ಭಾವನಾತ್ಮಕ ಇಶ್ಶೂನ ಅಗತ್ಯವಂತೂ ಇದ್ದೇ ಇದೆ. ಕೊರೋನಾ ಭಯ ಸಂಪೂರ್ಣ ತೊಲಗಿದ ಬಳಿಕ ಇನ್ನೊಮ್ಮೆ ಸಿಎಎ, ಎ ನ್‌ಆರ್‌ಸಿ ಮತ್ತು ಎನ್‌ಪಿಆರ್ ಚರ್ಚೆಯನ್ನು ಸಾರ್ವಜನಿಕವಾಗಿ ಜೀವಂತವಿಡುವ ಪ್ರಯತ್ನ ನಡೆಯಬಹುದು. ಮುಂದಿನ ಚುನವಾಣೆಯ ವರೆಗೆ ಅದನ್ನು ಎಳೆಯುವುದರಿಂದ ಪ್ರಯೋಜನವಿದೆಯೆಂದು ಗೊತ್ತಾದರೆ, ಹಾಗೆಯೂ ಮಾಡಬಹುದು. ಅಲ್ಲದೇ, ಆರ್ಥಿಕ ಸ್ಥಿತಿ ಸಂ ಪೂರ್ಣ ತಳ ಹಿಡಿದಿರುವುದರಿಂದ ಸಿಎಎ, ಎನ್‌ಆರ್‌ಸಿಯನ್ನೋ ಅಥವಾ ಸಮಾನ ನಾಗರಿಕ ಸಂಹಿತೆ, ಬಹುಪತ್ನಿತ್ವ ಮತ್ತು ಬುರ್ಖಾಗಳಂತಹ ವಿಷಯಗಳನ್ನೋ ಚರ್ಚೆಯ ಮುನ್ನೆಲೆಗೆ ತರಲೇಬೇಕಾದ ಒತ್ತಡವೂ ಕೇಂದ್ರದ
ಮೇಲಿದೆ. ಈ ತಂತ್ರ ಫಲ ನೀಡುವವರೆಗೆ ಅಥವಾ ಇದು ಇತ್ಯರ್ಥವಾಗುವ ವರೆಗೆ ಮುಸ್ಲಿಮರಿಗೆ ಸಂಬಂಧಿಸಿ ಬೇರೆ ವಿಷಯ ಗಳನ್ನು ಚರ್ಚಾರ್ಹಗೊಳಿಸುವ ಅಗತ್ಯ ಬರಲಾರದು. ಆದರೆ,
ಮೇಲಿನ ಇಶ್ಶೂಗಳು ಜನರ ಮೇಲೆ ಪ್ರಭಾವ ಬೀರದೇ ಹೋದರೆ ರಿಝ್ವಿ ಎತ್ತಿರುವ ಪ್ರಶ್ನೆಯನ್ನು ಸಾರ್ವಜನಿಕ ಚರ್ಚೆಗೆ ತರುವ ಸಾಧ್ಯತೆಯಂತೂ ಖಂಡಿತ ಇದೆ. ಭಯೋತ್ಪಾದನೆ ಮತ್ತು ಹಿಂಸೆಯನ್ನು ಚರ್ಚೆಗೆ ತಂದು ಆ ಮೂಲಕ ರಿಝ್ವಿ ಎತ್ತಿರುವ ಪ್ರಶ್ನೆಗೆ ಜೀವ ತುಂಬುವ ಪ್ರಯತ್ನ ನಡೆಯಬಹುದು. ಇದರಲ್ಲಿ ಇನ್ನೊಂದು ಲಾಭವೂ ಇದೆ. ಕುರ್‌ಆನಿನ 26 ಸೂಕ್ತಗಳನ್ನು ರದ್ದುಪಡಿಸುವುದಕ್ಕೆ ನ್ಯಾಯಾಲಯಗಳು ಮುಂದಾಗುವುದಕ್ಕೆ ಸಾಧ್ಯ ವಿಲ್ಲ. ಯಾಕೆಂದರೆ, ಧಾರ್ಮಿಕ ಗ್ರಂಥಗಳ ಯಾವುದೇ ಭಾಗ ವನ್ನು ಕಿತ್ತು ಹಾಕುವ ಅಥವಾ ಉಳಿಸಿಕೊಳ್ಳುವ ಹೊಣೆಗಾರಿಕೆಯನ್ನು ನ್ಯಾಯಾಲಯಗಳು ವಹಿಸಿಕೊಳ್ಳಲಾರವು. ಅಲ್ಲದೇ, ಬಹುಧರ್ಮೀಯ ದೇಶದಲ್ಲಿ ಧಾರ್ಮಿಕ ಗ್ರಂಥಗಳು ಹಲವಾರು ಇವೆ. ಅವುಗಳ ಮೇಲೆಯೂ ಇಂಥದ್ದೇ ಆರೋಪ ಹೊರಿಸಿ ಕೋರ್ಟ್ ಗೆ ಹೋಗುವ ಪ್ರಕ್ರಿಯೆ ಪ್ರಾರಂಭವಾದರೆ, ಇದು ಇನ್ನಷ್ಟು ಜಟಿಲ ಸಮಸ್ಯೆಗೂ ಕಾರಣವಾಗಬಹುದು. ಇದು ಅರ್ಜಿದಾರ ರಿಝ್ವಿಗೂ ಗೊತ್ತು ಮತ್ತು ತನ್ನ ಆಗ್ರಹವು ಸುಪ್ರೀಮ್ ಕೋರ್ಟಲ್ಲಿ ನಿಲ್ಲಲಾರದು ಎಂದು ಗೊತ್ತಿದ್ದೇ ಅವರು ಅರ್ಜಿ ಸಲ್ಲಿಸಿರುವ ಸಾಧ್ಯತೆಯೂ ಇದೆ. ಆದ್ದರಿಂದಲೇ,
ಆ ಅರ್ಜಿಯ ಉದ್ದೇಶ ಶುದ್ಧಿಯ ಬಗ್ಗೆ ತೀವ್ರ ಸಂದೇಹ ಮೂಡುತ್ತದೆ. ನಿರ್ದಿಷ್ಟ ಪಕ್ಷದ ಭವಿಷ್ಯದ ರಾಜಕೀಯಕ್ಕೆ ನೆರವಾಗುವ ಉದ್ದೇಶದಿಂದಲೇ ಅವರು ಇಂಥದ್ದೊಂದು ಅರ್ಜಿಯನ್ನು ಸಲ್ಲಿಸಿದರೇ? ಅವರ ಅರ್ಜಿಯ ಹಿಂದೆ ಸಂಚು ಅಡಗಿದೆಯೇ? ಆ ಸಂಚು ಹೆಣೆದವರು ಯಾರು? ಅವರಿಗೆ ಯಾರೊಂದಿಗೆಲ್ಲ ಸಂಬಂಧ ಇದೆ? ಇವೆಲ್ಲ ಅಪ್ರಸ್ತುತ ಪ್ರಶ್ನೆಗಳಲ್ಲ. ಹಾಗಂತ,
ಆಝಾನ್‌ನ ಬಗ್ಗೆ ಸಂಗೀತಾ ಶ್ರೀವಾಸ್ತವ ಅವರ ದೂರು ಮತ್ತು ರಾಜ್ಯ ವಕ್ಫ್ ಬೋರ್ಡ್ ಹೊರಡಿಸಿರುವ ಸುತ್ತೋಲೆಗಳು ಒಂದೇ ಸಮಯದಲ್ಲೇ ಆಗಿರುವುದಕ್ಕೆ ಬೇರೆ ಅರ್ಥಗಳಿಲ್ಲದೇ ಇರಬಹುದು. ಅವು ಕಾಕತಾಳೀಯವೇ ಆಗಿರಬಹುದು. ಆದರೂ ಆಝಾನನ್ನು ಮುಂದೊಂದು ದಿನ ಮುಸ್ಲಿಮ್ ಹಿಂಸೆಯ ಪಟ್ಟಿಗೆ ಸೇರಿಸಿ, ಮಸೀದಿಗಳನ್ನು ಸಾರ್ವಜನಿಕ ತೊಂದರೆ ಪ್ರದೇಶಗಳೆಂದು ಪ್ರಚಾರ ಮಾಡುವುದಕ್ಕೆ ಪೂರಕವಾಗಿ ಬಳಸಿಕೊಳ್ಳಬಹುದು. ಅಲ್ಲದೇ, ವಿವಿಧ ಸಂದರ್ಭಗಳಲ್ಲಿ ವಿವಿಧ ನ್ಯಾಯಾಲಯಗಳು ನೀಡಿರುವ ತೀ ರ್ಪುಗಳನ್ನು ಉಲ್ಲೇಖಿಸಿ ಮುಸ್ಲಿಮರನ್ನು ತಿವಿಯುವುದಕ್ಕೂ ಬಳಸಿಕೊಳ್ಳಬಹುದು.
ಆಝಾನ್‌ಗೆ ಲೌಡ್ ಸ್ಪೀಕರ್ ಬಳಸಬಾರದು ಎಂದು 2020 ಮೇ 15ರಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿತ್ತು. ಲೌಡ್ ಸ್ಪೀಕರ್ ಬಳಸಿ ಗಾಝಿ ಪುರದ ಮಸೀದಿಗಳಲ್ಲಿ ಕೊಡಲಾಗುವ ಆಝಾನ್‌ಗೆ ಜಿಲ್ಲಾಡಳಿತ ನಿಷೇಧ ಹೇರಿದೆ, ಇದನ್ನು ತೆರವುಗೊಳಿಸಬೇಕೆಂದು ಕೋರಿ ಗಾಝಿಪುರದ ಬಿಎಸ್‌ಪಿ ಸಂಸದ ಅಫ್ಝಲ್ ಅನ್ಸಾರಿ ನೀಡಿದ ಅರ್ಜಿಗೆ ಸಂಬಂಧಿಸಿ ನ್ಯಾಯಾಧೀಶರಾದ ಶಶಿಕಾಂತ್ ಗುಪ್ತಾ ಮತ್ತು ಅಜಿತ್ ಕುಮಾರ್ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿತ್ತು. ಕರ್ನಾಟಕ ಹೈಕೋರ್ಟ್ ಕೂಡ 2021 ಜನವರಿ 12ರಂದು ಇಂಥದ್ದೇ ಆದೇಶವನ್ನು ಹೊರಡಿಸಿತ್ತು. ಗಿರೀಶ್ ಭಾರದ್ವಾಜ್ ಎಂಬವರು ಸಲ್ಲಿಸಿದ ಸಾರ್ವಜನಿಕ ಹಿತಾ ಸಕ್ತಿ. ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿದ್ದ ಮುಖ್ಯ ನ್ಯಾಯಾಧೀಶ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಾಧೀಶ ಸಚಿನ್ ಶಂಕರ್ ಮಗದುಂ ಅವರಿದ್ದ ಪೀಠವು, ಮಸೀದಿ, ಮಂದಿರ, ಚರ್ಚ್, ಗುರುದ್ವಾರ ಮುಂತಾದ ಪ್ರದೇಶಗಳಿಂದಾಗುವ ಶಬ್ದ ಮಾಲಿನ್ಯದ ಬಗ್ಗೆ ಸುಪ್ರೀಮ್ ತೀರ್ಪು ಜಾರಿಗೊಳಿಸುವಂತೆ ಸರ್ಕಾರಕ್ಕೆ ಆದೇಶ ನೀಡಿತ್ತು. 2017 ಆಗಸ್ಟ್ 16ರಂದು ಮದ್ರಾಸ್ ಹೈಕೋರ್ಟ್ ಕೂಡ ಆಝಾನ್‌ನ ಬಗ್ಗೆ ವಿಶೇಷವಾಗಿ ಎತ್ತಿ ಹೇಳಿ ತೀರ್ಪು ನೀಡಿತ್ತು. ಕೋಯಂಬತ್ತೂರು ಪೊಲ್ಲಾಚಿಯ ಐಕ್ಯ ಜಮಾಅತ್‌ನ ಅಧ್ಯಕ್ಷ ಶಾನವಾಝï ಖಾನ್ ಅವರ ಅರ್ಜಿಯ ಮೇಲೆ ಮುಖ್ಯ ನ್ಯಾಯಾಧೀಶೆ ಇಂದಿರಾ ಬ್ಯಾನರ್ಜಿ ಮತ್ತು ಸುಂದರ್ ಅವರಿದ್ದ ಪೀಠ ವಿಚಾರಣೆ ನಡೆಸಿತ್ತಲ್ಲದೆ, ಮಸೀದಿಯ ಆಝಾನ್ ಶಬ್ದವು ಸುಪ್ರೀಮ್ ನಿಯಮಕ್ಕೆ ಅಧೀನವಾಗಬೇಕು ಎಂದು ಆದೇಶಿಸಿತ್ತು. ಪೊಲ್ಲಾಚಿಯ ಮಸೀದಿಗಳ ಲೌಡ್ ಸ್ಪೀಕರ್ ಬಳಕೆಯ ವಿರುದ್ಧ ಜಿಲ್ಲಾಡಳಿತ ಕೈಗೊಂಡ ಕ್ರಮವನ್ನು ಪ್ರಶ್ನಿಸಿ ಶಾನವಾಝï ಖಾನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಷ್ಟಕ್ಕೂ,
ಸದ್ಯ ತೀರ್ಪುಗಳಾಗಿ ಮಾತ್ರ ಉಳಿದುಕೊಂಡಿರುವ ಮತ್ತು ಪ್ರಾಯೋಗಿಕವಾಗಿ ಇನ್ನೂ ಜಾರಿಯಾಗದ ಇವುಗಳು ಮುಂದೆಯೂ ಹೀಗೆಯೇ ಇರಲಿವೆ ಎಂದು ಹೇಳುವಂತಿಲ್ಲ. ಸಂಗೀತಾರ ಮನವಿ ಮತ್ತು ವಕ್ಫ್ ಬೋರ್ಡ್ನ ಸುತ್ತೋಲೆಯು ಮಸೀದಿ ಲೌಡ್ ಸ್ಪೀಕರ್‌ಗೆ ಭವಿಷ್ಯದಲ್ಲಿ ಕಾದಿರುವ ಅಪಾಯದ ಮುನ್ಸೂಚನೆಯನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಸಮಾಜದ ಅತಿದೊಡ್ಡ ಚರ್ಚಾ ವಿಷಯ ವಾಗಿ ಮಸೀದಿ ಲೌಡ್ ಸ್ಪೀಕರ್‌ಗಳು ಮಾರ್ಪಡುವುದಕ್ಕೂ ಅವಕಾಶ ಇದೆ. ನಿದ್ದೆಗೆಟ್ಟವರು ಮತ್ತು ಕೆಡದವರೆಲ್ಲ ಜೊತೆ ಸೇರಿಕೊಂಡು ಮಸೀದಿಯನ್ನೇ ಆ ಬಳಿಕ ಗುರಿ ಮಾಡಬಹುದು. ಲೌಡ್ ಸ್ಪೀಕರ್‌ಗಳನ್ನು ಕಿತ್ತು ಹಾಕುವ ಪ್ರಯತ್ನ ನಡೆಯಬಹುದು ಮತ್ತು ಅದರ ಕಾರಣದಿಂದ ಕೋಮು ಘರ್ಷಣೆ ಗಳೂ ಉಂಟಾಗಬಹುದು. ಒಂದು ಚುನಾವಣೆಯನ್ನು ಗೆಲ್ಲುವುದಕ್ಕೆ ಇಂಥವು ಧಾರಾಳ ಸಾಕು. ಆದ್ದರಿಂದ,
ಈಗಲೇ ಮಸೀದಿ ಆಡಳಿತ ಸಮಿತಿಗಳು ಎಚ್ಚರಿಕೆ ವಹಿಸುವುದು ಒಳಿತು. ಆಝಾನ್‌ಗೆ ಹೊರತಾದ ಇತರೆಲ್ಲ ಕಾರ್ಯಕ್ರಮಗಳನ್ನು ಮಸೀದಿಯ ಒಳಗಡೆಗೆ ಸೀಮಿತಗೊಳಿಸುವ ಹಾಗೂ ಕೇವಲ ಆಝಾನನ್ನು ಮತ್ತು ಇತರ ಅನಿವಾರ್ಯ ಬೆಳವಣಿಗೆಯನ್ನು ಮಾತ್ರ ಲೌಡ್ ಸ್ಪೀಕರ್‌ನಲ್ಲಿ ಕೇಳಿಸುವ ಬಗ್ಗೆ ಈಗಿಂದೀಗಲೇ ನಿರ್ಧಾರ ತೆಗೆದುಕೊಳ್ಳಬೇಕು. ಮಸೀದಿಗಳನ್ನು ನಾಗರಿಕ ಸ್ನೇಹಿಯಾಗಿಸುವುದು ಮುಸ್ಲಿಮರ ಹೊಣೆಗಾರಿಕೆ. ಅಂದಹಾಗೆ,
ಮುಂಜಾನೆ 3 ನಿಮಿಷಗಳ ವರೆಗೆ ಲೌಡ್‌ಸ್ಪೀಕರ್‌ನಿಂದ ಕೇಳಿಬರುವ ಆಝಾನ್- ನಾಗರಿಕರ ನಿದ್ದೆಯನ್ನು ಕೆಡಿಸಬಲ್ಲಷ್ಟು ಅಪಾಯಕಾರಿ ಎಂದು ಬಹುಧರ್ಮೀಯ ಭಾರತದಲ್ಲಿ ದೂರುವವರ ಸಂಖ್ಯೆ ಅತ್ಯಲ್ಪದಲ್ಲಿ ಅತ್ಯಲ್ಪವಷ್ಟೇ ಇರಬಹುದು. ಯಾಕೆಂದರೆ, ಈ ದೇಶದುದ್ದಕ್ಕೂ ನಡೆಯುವ ಜಾತ್ರೆ, ನೇಮ, ಯಕ್ಷಗಾನ, ಉತ್ಸವ, ಅಯ್ಯಪ್ಪ ಸ್ಮರಣೆ ಇತ್ಯಾದಿಗಳು ಲೌಡ್ ಸ್ಪೀಕರನ್ನೇ ಆಶ್ರಯಿಸಿಕೊಂಡಿವೆ ಮತ್ತು ಅವು ಮಧ್ಯರಾತ್ರಿಯ ನಿದ್ದೆಯನ್ನೂ ಮುಂಜಾನೆಯ ನಿದ್ದೆಯನ್ನೂ ಕೆಲವೊಮ್ಮೆ ಇಡೀ ದಿನ ನಿದ್ದೆಯನ್ನೂ ಕಸಿದುಕೊಳ್ಳುತ್ತಿವೆ. ಹಾಗಂತ, ಈ ಬಗ್ಗೆ ಯಾರೂ ದೂರುವುದಿಲ್ಲ. ಒಂದು ನಾಗರಿಕ ಸಮಾಜದಲ್ಲಿ ಇವೆಲ್ಲ ಸಹಜ ಮತ್ತು ಸಹನೀಯ. ಆದರೆ,
ಈಗಲೇ ಮಸೀದಿ ಆಡಳಿತ ಸಮಿತಿಗಳು ಎಚ್ಚರಿಕೆ ವಹಿಸುವುದು ಒಳಿತು. ಆಝಾನ್‌ಗೆ ಹೊರತಾದ ಇತರೆಲ್ಲ ಕಾರ್ಯಕ್ರಮಗಳನ್ನು ಮಸೀದಿಯ ಒಳಗಡೆಗೆ ಸೀಮಿತಗೊಳಿಸುವ ಹಾಗೂ ಕೇವಲ ಆಝಾನನ್ನು ಮತ್ತು ಇತರ ಅನಿವಾರ್ಯ ಬೆಳವಣಿಗೆಯನ್ನು ಮಾತ್ರ ಲೌಡ್ ಸ್ಪೀಕರ್‌ನಲ್ಲಿ ಕೇಳಿಸುವ ಬಗ್ಗೆ ಈಗಿಂದೀಗಲೇ ನಿರ್ಧಾರ ತೆಗೆದುಕೊಳ್ಳಬೇಕು. ಮಸೀದಿಗಳನ್ನು ನಾಗರಿಕ ಸ್ನೇಹಿಯಾಗಿಸುವುದು ಮುಸ್ಲಿಮರ ಹೊಣೆಗಾರಿಕೆ. ಅಂದಹಾಗೆ,
ಮುಂಜಾನೆ 3 ನಿಮಿಷಗಳ ವರೆಗೆ ಲೌಡ್‌ಸ್ಪೀಕರ್‌ನಿಂದ ಕೇಳಿಬರುವ ಆಝಾನ್- ನಾಗರಿಕರ ನಿದ್ದೆಯನ್ನು ಕೆಡಿಸಬಲ್ಲಷ್ಟು ಅಪಾಯಕಾರಿ ಎಂದು ಬಹುಧರ್ಮೀಯ ಭಾರತದಲ್ಲಿ ದೂರುವವರ ಸಂಖ್ಯೆ ಅತ್ಯಲ್ಪದಲ್ಲಿ ಅತ್ಯಲ್ಪವಷ್ಟೇ ಇರಬಹುದು. ಯಾಕೆಂದರೆ, ಈ ದೇಶದುದ್ದಕ್ಕೂ ನಡೆಯುವ ಜಾತ್ರೆ, ನೇಮ, ಯಕ್ಷಗಾನ, ಉತ್ಸವ, ಅಯ್ಯಪ್ಪ ಸ್ಮರಣೆ ಇತ್ಯಾದಿಗಳು ಲೌಡ್ ಸ್ಪೀಕರನ್ನೇ ಆಶ್ರಯಿಸಿಕೊಂಡಿವೆ ಮತ್ತು ಅವು ಮಧ್ಯರಾತ್ರಿಯ ನಿದ್ದೆಯನ್ನೂ ಮುಂಜಾನೆಯ ನಿದ್ದೆಯನ್ನೂ ಕೆಲವೊಮ್ಮೆ ಇಡೀ ದಿನ ನಿದ್ದೆಯನ್ನೂ ಕಸಿದುಕೊಳ್ಳುತ್ತಿವೆ. ಹಾಗಂತ, ಈ ಬಗ್ಗೆ ಯಾರೂ ದೂರುವುದಿಲ್ಲ. ಒಂದು ನಾಗರಿಕ ಸಮಾಜದಲ್ಲಿ ಇವೆಲ್ಲ ಸಹಜ ಮತ್ತು ಸಹನೀಯ. ಆದರೆ,
ರಾಜಕೀಯಕ್ಕೆ ಎಂಥ ಶಕ್ತಿಯಿದೆ ಯೆಂದರೆ, ಅದು ಸಹನೀಯವನ್ನೇ ಅಸಹನೀಯವನ್ನಾಗಿ ಮಾರ್ಪಡಿಸಬಲ್ಲುದು.
No comments:
Post a Comment