Friday, June 25, 2021

ಹೆಚ್‌ಆರ್‌ಎಸ್, ವಿಖಾಯ, ಸಹಾಯ್, ಪಿಎಫ್‌ಐ: ಹಾಗಂತ, ಆಶಾವಾದ ತಪ್ಪಲ್ಲವಲ್ಲ..


ವಾರದ ಅಂಕಣ 


ಹೆಚ್.ಆರ್.ಎಸ್.

ವಿಖಾಯ
ಸಹಾಯ್
ಎಸ್.ಕೆ.ಎಸ್.ಎಂ.
ಪಿ.ಎಫ್.ಐ.
ಹಿದಾಯ ಫೌಂಡೇಶನ್
ಎ.ಐ.ಎಂ.ಡಿ.ಎಫ್.

ಮುಂತಾದ ರಾಜ್ಯವ್ಯಾಪಿ ಸಂಘಟನೆಗಳು ಮತ್ತು ವೆಲ್‌ನೆಸ್ ಹೆಲ್ಪ್ ಲೈನ್ , ಹೋಪ್ ಫೌಂಡೇಶನ್, ಟೀಮ್ ಬಿ ಹ್ಯೂಮನ್‌ನಂತಹ ಜಿಲ್ಲಾ  ಮತ್ತು ಇತರ ಸ್ಥಳೀಯ ಸೇವಾ ಸಂಸ್ಥೆಗಳು ಒಂದೇ ಪ್ಲಾಟ್ ಫಾರ್ಮ್ನಡಿ  ಸೇವಾ ಚಟುವಟಿಕೆಯನ್ನು ನಿರ್ವಹಿಸಲು ತೀರ್ಮಾನಿಸಿದರೆ  ಏನಾಗಬಹುದು? ಇಂಥ ತೀರ್ಮಾನಕ್ಕೆ ಇರುವ ಅಡೆತಡೆ ಗಳೇನು? ಯಾರಿಂದಾಗಿ ಮತ್ತು ಯಾವುದರಿಂದಾಗಿ ಇದು ಸಾಧ್ಯವಾಗುತ್ತಿಲ್ಲ?  ಕುರ್‌ಆನೇ, ಹದೀಸೇ? ಧಾರ್ಮಿಕ ಮುಖಂಡರೇ, ಮಸೀದಿ ಹೊಣೆಗಾರರೇ, ವ್ಯಕ್ತಿಗಳ ವೈಯಕ್ತಿಕ ಇಷ್ಟಾನಿಷ್ಟಗಳೇ? ಅಥವಾ ಆ  ಕುರಿತಾಗಿ ಆಲೋಚನೆಯನ್ನೇ ಮಾಡದಿರುವುದೇ? ಹಾಗಂತ,

ಮೇಲೆ ಉಲ್ಲೇಖಿಸಿರುವ ಸಂಘಟನೆಗಳು ಮಾತ್ರ ಸಮಾಜ ಸೇವೆಯಲ್ಲಿ ನಿರತವಾಗಿರುವುದಲ್ಲ. ಕೊರೋನಾ ಮೊದಲ ಮತ್ತು ದ್ವಿತೀಯ  ಅಲೆಯಲ್ಲಿ ಪರ್ಯಾಯ ಸರಕಾರವೆಂಬಂತೆ  ಯುದ್ಧೋಪಾದಿಯಲ್ಲಿ ರಾಜ್ಯಾದ್ಯಂತ ಇನ್ನಿತರ ಸಂಸ್ಥೆಗಳೂ ಸೇವಾ ನಿರತವಾಗಿವೆ ಮತ್ತು  ಸ್ಥಳೀಯವಾಗಿ ಮುಸ್ಲಿಮರ ನೂರಾರು ಸಂಘಟನೆಗಳು ಹಾಗೂ ಸೇವಾ ಸಂಸ್ಥೆಗಳು ಸದ್ದಿಲ್ಲದೇ ಸೇವೆ ಮಾಡುತ್ತಿವೆ. ಬಹುತೇಕ ಪ್ರತಿ  ಮಸೀದಿ ಕೇಂದ್ರಿತವಾಗಿ ಸೇವಾ ಚಟುವಟಿಕೆಗಳು ನಡೆಯುತ್ತಿವೆ. ಮಸೀದಿ ವ್ಯಾಪ್ತಿಗೆ ಒಳಪಡುವ ಮನೆಗಳ ಯೋಗಕ್ಷೇಮ ವಿಚಾರಿಸುವ  ಸಿದ್ಧತೆಗಳಾಗಿವೆ. ಆಹಾರದ ಕಿಟ್‌ಗಳನ್ನು ವಿತ ರಣೆ ಮಾಡಲಾಗುತ್ತಿದೆ. ಮಸೀದಿಗಳಿಗೆ ನಿರ್ವಹಿಸಲು ಸಾಧ್ಯ ವಾಗದ ಸಂದರ್ಭದಲ್ಲಿ  ಉಳಿದ ಸೇವಾ ಸಂಸ್ಥೆಗಳನ್ನು ವೈಯ ಕ್ತಿಕ ನೆಲೆಯಲ್ಲಿ ಸಂಪರ್ಕಿಸುವ ವಾತಾವರಣವಿದೆ. ರಾಜ್ಯಮಟ್ಟದಲ್ಲಿ ಇಂಥ ಸ್ಥಳೀಯ ಸೇವಾ  ಸಂಸ್ಥೆಗಳು ಅಸಂಖ್ಯ ಇರಬಹುದು.
ವರ್ಷವೊಂದಕ್ಕೆ ಅವುಗಳ ಬಜೆಟ್ಟು ಎಷ್ಟಿದೆಯೋ? ಕಾರ್ಯವ್ಯಾಪ್ತಿ ಏನೋ? ಸೇವಾ ನಿರತರ ಸಂಖ್ಯೆ ಎಷ್ಟೋ? ಅವರ ಅನುಭವ ಗಳು  ಏನೇನೋ? ಅಷ್ಟಕ್ಕೂ,

ಮುಸ್ಲಿಮ್ ಸಮುದಾಯದಲ್ಲಿ ಸಕ್ರಿಯವಾಗಿರುವ ರಾಜ್ಯ ಮತ್ತು ಸ್ಥಳೀಯ ಮಟ್ಟದ ಸೇವಾಸಂಸ್ಥೆಗಳು ಕೊರೋನಾ ಕಾಲದಲ್ಲಿ ಮಾತ್ರ  ಹುಟ್ಟಿಕೊಂಡ ಅಣಬೆಗಳಲ್ಲ. ಕೊರೋನಾ ದಾಳಿ ಯಿಡುವುದಕ್ಕಿಂತ ಮೊದಲೇ ಅವು ಇಲ್ಲಿ ಸಕ್ರಿಯವಾಗಿವೆ. ಬಹುಶಃ ಇಸ್ಲಾಮ್ ಭಾರತಕ್ಕೆ  ಆಗಮಿಸಿದ ತರುವಾಯದ ಬೆಳವಣಿಗೆಗಳಿವು. ಆಗ ಸಂಘಟಿತ ಸೇವಾ ಚಟುವಟಿಕೆ ನಡೆದಿಲ್ಲದೇ ಇರಬಹುದು. ವೈಯಕ್ತಿಕ ನೆಲೆಯ  ಸೇವಾ ಚಟುವಟಿಕೆಯೇ ಅಂದು ಈ ದೇಶದ ಜನರ ಮನ ಗೆದ್ದಿರಬಹುದು. ಮುಟ್ಟಿಸಿಕೊಳ್ಳಬಾರದ ಮನುಷ್ಯ ರೆಂದೋ ಮೇಲು ಜಾತಿ  ಸಿದ್ಧಪಡಿಸಿರುವ ನಾಗರಿಕ ಮೀಮಾಂಸೆಯ ಚೌಕಟ್ಟಿನೊಳಗೆ ಸೇರಿಕೊಳ್ಳಲು ಅನರ್ಹರಾದವರೆಂದೋ, ಭಾಷೆ, ಸಂಸ್ಕೃತಿ, ಉದ್ಯೋಗ,  ಮೈಬಣ್ಣ, ಜೀವನ ಕ್ರಮ, ಆಹಾರ ಪದ್ಧತಿ, ಆರಾಧನಾ ರೀತಿ.. ಇತ್ಯಾದಿ ಇತ್ಯಾದಿಗಳ ಕಾರಣಕ್ಕಾಗಿ ಉಳ್ಳವರಿಂದ ತಿರಸ್ಕೃತರಾಗಿ  ಬದುಕುವವರೆಂದೋ ಗುರುತಿಸಿಕೊಂಡವರನ್ನು ಈ ಅಲ್ಪಸಂಖ್ಯೆಯ ಮುಸ್ಲಿಮರು ಸಂತೈಸಿರಬಹುದು, ಮುಟ್ಟಿರಬಹುದು. ಅವರ ಜೊತೆ  ಸಂವಾದ ನಡೆಸಿರಬಹುದು. ನಿಜವಾಗಿ,

ಹೊಟ್ಟೆ ತುಂಬುವುದು ಎಷ್ಟು ಅಗತ್ಯವೋ ಹೊಟ್ಟೆ ತುಂಬಿದ ಮೇಲೆ ಅರಿಷಡ್ವರ್ಗಗಳು ಎಚ್ಚರಗೊಳ್ಳುವುದೂ ಅಷ್ಟೇ ನಿಜ. ಹೊಟ್ಟೆಯ  ಹಸಿವು ಮನುಷ್ಯನನ್ನು ಬೇಡುವಂತೆಯೂ ಮಾಡಬಲ್ಲದು. ತುಚ್ಚ ಮಾತುಗಳನ್ನೂ ಸಹಿಸಿಕೊಳ್ಳುವಂತೆಯೂ ಒತ್ತಾಯಿಸಬಹುದು. ಸಕಲ  ಅವಮಾನಗಳನ್ನೂ ಸಹಿಸಿಕೊಳ್ಳುವುದಕ್ಕೆ ಹಸಿವಿಗೆ ಸಾಧ್ಯವಿದೆ. ಈ ದೇಶದಲ್ಲಿ ಬಹುದೊಡ್ಡ ವರ್ಗವೊಂದು ಮುಟ್ಟಿಸಿಕೊಳ್ಳಬಾರದ  ನಿಯಮಕ್ಕೆ ಶರಣಾಗಿ ಬದುಕಿದ್ದರೆ ಅದರ ಹಿಂದೆ ಆರ್ಥಿಕ ಕಾರಣ ಇದೆ. ನಿತ್ಯ ದುಡಿದುಣ್ಣುವ ಮನುಷ್ಯರಿಗೆ ಹೊಟ್ಟೆಯ ಹಸಿವು  ಮುಟ್ಟಿಸಿಕೊಳ್ಳುವ ಹಕ್ಕಿಗಿಂತ ದೊಡ್ಡದು. ಮುಟ್ಟಿಸಿಕೊಳ್ಳದೇ ಇರುವ ನಿಯಮಕ್ಕೆ ಶರಣಾಗಿ ಬದುಕುವುದರಿಂದ ಹೊಟ್ಟೆಯ ಹಸಿವು ತಣಿ  ಯುತ್ತದೆ ಎಂದಾದರೆ ಸಾಮಾನ್ಯರ ಆದ್ಯತಾ ಪಟ್ಟಿಯಲ್ಲಿ ಹೊಟ್ಟೆಯ ಹಸಿವಿಗೆ ಮೊದಲ ಸ್ಥಾನ ಸಿಗುವುದು ಸಹಜ. ಇಸ್ಲಾಮ್‌ನಲ್ಲಿ ಈ  ಬಗೆಯ ವರ್ಗೀಕರಣ ಇಲ್ಲದೇ ಇರುವುದರಿಂದ ಮುಸ್ಲಿಮ ರೆಡೆಗಿನ ಅವರ ಆಕರ್ಷಣೆಯಲ್ಲಿ ವಿಶೇಷ ಏನಿಲ್ಲ. ಅಲ್ಲದೇ,

ಮರ್ದಿತರಿಗೂ ದೇವನಿಗೂ ನಡುವೆ ಪರದೆಯೇ ಇರುವುದಿಲ್ಲ, ದೇವನು ಮರ್ದಿತರಿಗೆ ಅಷ್ಟು ಹತ್ತಿರವಾಗಿರುತ್ತಾನೆ.. ಎಂಬ 
ಸೈದ್ಧಾಂತಿಕ  ಖಚಿತತೆಯೂ ಮುಸ್ಲಿಮರ ಜೊತೆ ಇದೆ. ಈ ದೇಶದಲ್ಲಿ ಇಸ್ಲಾಮ್ ಜನಪ್ರಿಯಗೊಳ್ಳುವುದರಲ್ಲಿ ಮುಸ್ಲಿಮರ ಈ ಸೇವಾಗಣಕ್ಕೆ ಬಹುದೊಡ್ಡ  ಪಾತ್ರವಿದೆ. ಇಸ್ಲಾಮನ್ನು ಖಡ್ಗಕ್ಕೆ ಸಿಲುಕಿಸಿ ಮೆರವಣಿಗೆ ನಡೆಸುತ್ತಿರುವವರು ಈ ಸತ್ಯವನ್ನು ಉದ್ದೇಶಪೂರ್ವಕವಾಗಿ ಮರೆಮಾಚುತ್ತಾರೆ.  ಇಸ್ಲಾಮ್ ಈ ದೇಶಕ್ಕೆ ಆಗಮಿಸಿದ ಆರಂಭ ಕಾಲದಿಂದ ನಾಲ್ಕೈದು  ಶತಮಾನಗಳ ಐತಿಹಾಸಿಕ ಬೆಳವಣಿಗೆಯನ್ನು ಪೂರ್ವಗ್ರಹ  ರಹಿತರಾಗಿ ಅಧ್ಯಯನ ನಡೆಸುವ ಯಾರಿಗೇ ಆಗಲಿ, ಕೆಲವು ಸತ್ಯಗಳು ಮನವರಿಕೆಯಾಗುತ್ತವೆ. ಇಸ್ಲಾಮ್ ಈ ದೇಶಕ್ಕೆ ಆಗಮಿಸುವ  ಮೊದಲೇ ಈ ದೇಶದಲ್ಲಿ ಅಸ್ಪೃಶ್ಯತೆ ಇತ್ತು, ಆರಾಧನಾ ವೈವಿಧ್ಯತೆಗಳಿದ್ದುವು. ಬುಡಕಟ್ಟಿನ ವಿಶಿಷ್ಟ ಆಹಾರ, ಆರಾಧನಾ ಶೈಲಿಯಿದ್ದುವು.  ಬಡತನ ಇತ್ತು. ಇಸ್ಲಾಮ್ ಪಸರಿಸಿರುವುದೇ ಈ ಅಸ್ಪೃಶ್ಯರು, ಬಡವರು ಮತ್ತು ತಳಸಮುದಾಯದವರ ಮಧ್ಯೆ. ಜಮೀನ್ದಾರರಿಗೆ ಮತ್ತು  ಮೇಲ್ವರ್ಗಕ್ಕೆ ಹಸಿವು ಸಮಸ್ಯೆಯೇ ಅಲ್ಲದಿರುವುದರಿಂದ ಮತ್ತು ಅಸ್ಪೃಶ್ಯತೆ, ಬಡತನಗಳೇ ಅವರ ಯಶಸ್ಸಿನ ಮೂಲವಾಗಿರುವುದರಿಂದ  ಅವು ಉಳಿಯಬೇಕಾದುದು ಮತ್ತು ಅವನ್ನು ಉಳಿಸಬೇಕಾದುದು ಅವರ ಅನಿವಾರ್ಯತೆಯಾಗಿತ್ತು. ಖಡ್ಗದ ಕತೆಗಳು ಹುಟ್ಟಿಕೊಂಡದ್ದು ಆ  ಬಳಿಕ. ಸಮಾನತೆಯ ಪರಿಕಲ್ಪನೆಗೆ ಬಲ ಬಂದದ್ದು ಮತ್ತು ಅಸ್ಪೃಶ್ಯತೆಯನ್ನು ಪ್ರಶ್ನಿಸುವ ಛಲ ಹುಟ್ಟಿಕೊಂಡದ್ದರ ಹಿಂದೆಯೂ ಇಸ್ಲಾಮ್  ಇದೆ. ಹಾಗಂತ,

ಮುಸ್ಲಿಮ್ ದೊರೆಗಳು ಖಡ್ಗವನ್ನು ಬಳಸಿಯೇ ಇಲ್ಲ ಎಂದಲ್ಲ. ಈ ದೇಶದ ಇತರೆಲ್ಲ ರಾಜಂದಿರು ತಂತಮ್ಮ ರಾಜಕೀಯ ಉದ್ದೇಶಕ್ಕೆ  ಹೇಗೆ ಖಡ್ಗ ಬಳಸಿದ್ದರೋ ಹಾಗೆಯೇ ಇವರೂ ಬಳಸಿದ್ದಾರೆ. ಆ ಸಂದರ್ಭದಲ್ಲಿ ಅನ್ಯಾಯಗಳಾಗಿರಬಹುದು. ಯುದ್ಧನೀತಿಯನ್ನೂ  ಉಲ್ಲಂಘಿಸಿರಬಹುದು. ಅವು ರಾಜಂದಿರ ರಾಜಕೀಯವೇ ಹೊರತು ಧರ್ಮದ ವಿಸ್ತಾರಕ್ಕೆ ಅವುಗಳ ಕೊಡುಗೆ ಶೂನ್ಯ ಅನ್ನುವಷ್ಟು  ಕಡಿಮೆ. ಯಾವುದೇ ಮುಸ್ಲಿಮ್ ರಾಜನ ಹಿಸ್ಟರಿಯನ್ನು ಅಧ್ಯಯನ ನಡೆಸಿ. ಆ ರಾಜನ ಮಂತ್ರಿಗಳಲ್ಲಿ, ಸೇನಾ ಪಡೆಯಲ್ಲಿ, ಪರಿಚಾರಕರಲ್ಲಿ,  ಗವರ್ನರ್‌ಗಳಲ್ಲಿ, ಆಡಳಿತ ವರ್ಗದಲ್ಲಿ.. ಹೀಗೆ ಎಲ್ಲದರಲ್ಲೂ ಮುಸ್ಲಿಮೇತರ ಸಂಖ್ಯೆಯೇ ಹೆಚ್ಚು. ಹೆಚ್ಚು ಅನ್ನುವುದಕ್ಕಿಂತ ಅತ್ಯಧಿಕ ಎಂದೇ  ಹೇಳಬಹುದು. ಯಾವುದೇ ರಾಜ ಸ್ಥಳೀಯರನ್ನು ಮತ್ತು ಅವರ ಜನಸಂಖ್ಯೆಯನ್ನು ಖಂಡಿತ ಪರಿಗಣಿಸುತ್ತಾನೆ. ಅವರ ಮೇಲೆ ದಬ್ಬಾಳಿಕೆ  ನಡೆಸಬೇಕಾದರೆ, ತನ್ನ ಸಮುದಾಯದವರ ಸಂಖ್ಯೆ ಅಧಿಕ ಇರಬೇಕಾಗುತ್ತದೆ. ಇಲ್ಲದಿದ್ದರೆ ಬೆಂಕಿಯೊಂದಿಗೆ ಆಟ ಆಡಲು ಮುಂದಾದಂತೆ.  ಈ ರಿಸ್ಕ್ ಗೆ   ಅಧಿಕಾರ ಹಪಾಹಪಿಯ ರಾಜಂದಿರು ಮುಂದಾಗುವುದು ಸಾಧ್ಯವೇ ಇಲ್ಲ ಅನ್ನುವಷ್ಟು ಕಡಿಮೆ. ಈ ದೇಶದಲ್ಲಿ ಎಲ್ಲೂ  ಅಂಥದ್ದೊಂದು ಪರಿಸ್ಥಿತಿ ಇರಲೇ ಇಲ್ಲ. ಕೇವಲ ಇಸ್ಲಾಮನ್ನು ವಿಸ್ತರಿಸುವುದೇ ಮುಸ್ಲಿಮ್ ದೊರೆಗಳ ಗುರಿ ಆಗಿರುತ್ತಿದ್ದರೆ ಮತ್ತು ಅವರ  ಖಡ್ಗಗಳೇ ಇಸ್ಲಾಮನ್ನು ಇಲ್ಲಿ ಪಸರಿಸಿರುವುದಾಗಿದ್ದರೆ ಮುಸ್ಲಿಮರ ಈಗಿನ ಅನುಪಾತ ಈ ಮಟ್ಟದಲ್ಲಿರುವುದಕ್ಕೆ ಸಾಧ್ಯವೂ ಇರಲಿಲ್ಲ.  ಅಂದಹಾಗೆ,

ಸರ್ವರನ್ನೂ ಸಮಾನವಾಗಿ ಕಾಣುವ ಮತ್ತು ಇತರ ಹಲವು ಮಾನವೀಯ ನಿಯಮಗಳು ಇಸ್ಲಾಮನ್ನು ಈ ದೇಶದ ತಳಸಮುದಾಯದ  ನಡುವೆ ಜನಪ್ರಿಯಗೊಳಿಸಿತು. ಇಸ್ಲಾಮ್‌ನ ಸೇವಾ ಚಟುವಟಿಕೆಗೆ ಇದರಲ್ಲಿ ಬಹುಮುಖ್ಯ ಪಾತ್ರ ಇದೆ. ಇವತ್ತಿನ ದಿನಗಳಲ್ಲಂತೂ ಈ  ಸೇವಾ ಚಟು ವಟಿಕೆ ಎಷ್ಟು ಬೃಹತ್ ಪ್ರಮಾಣದಲ್ಲಿ ನಡೆಯುತ್ತಿದೆಯೆಂದರೆ, ಈ ಸಂಸ್ಥೆಗಳ ಒಟ್ಟು ಬಜೆಟ್ ರಾಜ್ಯ ಸರಕಾರದ ಬಜೆಟ್‌ನ  10-20% ದಷ್ಟಿರುವ ಸಾಧ್ಯತೆ ಇದೆ. ಅಷ್ಟಕ್ಕೂ,

ಕೊರೋನಾದ ಈ ಕಾಲದಲ್ಲಿ ಮಾತ್ರ ಅಲ್ಲ, ಕೊರೋನಾ ರಹಿತ ದಿನಗಳಲ್ಲೂ ರಾಜ್ಯಮಟ್ಟದ ವಿವಿಧ ಸಂಘ ಸಂಸ್ಥೆಗಳು ಮತ್ತು ಸ್ಥಳೀಯ  ಸೇವಾ ತಂಡಗಳು ಆರೋಗ್ಯ, ಶಿಕ್ಷಣ, ಆರ್ಥಿಕ ಕ್ಷೇತ್ರಗಳಲ್ಲಿ ಸೇವಾ ನಿರತವಾಗಿವೆ. ಸೇವೆಗೆಂದೇ ಇವು ತಂತಮ್ಮ ಸಾಮರ್ಥ್ಯಾನುಸಾರ  ವಾರ್ಷಿಕ ಬಜೆಟ್ ತಯಾರಿಸುತ್ತವೆ. ಅದಕ್ಕಾಗಿ ವಿವಿಧ ವ್ಯಕ್ತಿಗಳನ್ನು ಸಂಪರ್ಕಿಸುತ್ತವೆ. ಇವುಗಳಲ್ಲಿ ಡಯಾಲಿಸಿಸನ್ನೇ ಗುರಿಯಾಗಿಸಿಕೊಂಡು  ಕೆಲಸ ಮಾಡುವ ತಂಡಗಳಿವೆ. ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಮಾಸಿಕ ನೆರವು ನೀಡುವ ಸಂಸ್ಥೆಗಳಿವೆ. ಆರೋಗ್ಯ  ಸಂಬಂಧಿ  ಸಮಸ್ಯೆಗಳಿಂದ ಬಳಲುವವರಿಗೆ ಔಷಧಿಗಳನ್ನು ವಿತರಿಸುವವರಿದ್ದಾರೆ. ಮನೆ ನಿರ್ಮಿಸಿಕೊಡುವ ಸಂಸ್ಥೆಗಳಿವೆ. ಶಿಕ್ಷಣಕ್ಕಾಗಿ  ನೆರವಾಗುವ ಗುಂಪುಗಳಿವೆ. ಬಡ ಹೆಣ್ಣು ಮಕ್ಕಳ ಮದುವೆಗಾಗಿ ನೆರವಾಗುವ, ಸಾಮೂಹಿಕ ಮದುವೆಯನ್ನು ಏರ್ಪಡಿಸುವ, ಸ್ವ  ಉದ್ಯೋಗಕ್ಕಾಗಿ ಹಣಕಾಸಿನ ಸಹಾಯ ಮಾಡುವ.. ಇಂಥ ವೈವಿಧ್ಯಮಯ ಚಟುವಟಿಕೆಯಲ್ಲಿ ಇವೆಲ್ಲ ತೊಡಗಿಸಿಕೊಂಡಿವೆ. ಝಕಾತ್‌ನ  ಹಣವನ್ನು ಸಮಾಜ ಕಲ್ಯಾಣ ಕೆಲಸಗಳಿಗಾಗಿ ಬಳಸುವ ಸಂಸ್ಥೆಗಳಿವೆ. ಈ ಕೊರೋನಾ ಕಾಲದಲ್ಲೂ ನೀವಿದನ್ನು ನೋಡಿರಬಹುದು.  ಅತ್ಯಧಿಕ ಸೇವಾನಿರತ ವಾಗಿರುವುದು ಮುಸ್ಲಿಮ್ ಸೇವಾ ಸಂಸ್ಥೆಗಳೇ. ಕೇವಲ ತುಮಕೂರು ಜಿಲ್ಲೆಯೊಂದರಲ್ಲೇ  ಮೊದಲ ಮತ್ತು ಈ  ಎರಡನೇ ಕೊರೋನಾ ಅಲೆಯಲ್ಲಿ ಈವರೆಗೆ 1000ಕ್ಕಿಂತಲೂ ಅಧಿಕ ಮೃತದೇಹಗಳನ್ನು ತಾಜುದ್ದೀನ್ ಶರೀಫ್ ಎಂಬವರ ನೇತೃತ್ವದಲ್ಲಿ  ದಫನ ಮಾಡಿರುವುದು ಇದಕ್ಕೊಂದು ಪುರಾವೆ. ಈ ಸೇವೆಯಲ್ಲಿ ಹಿಂದೂ ಮುಸ್ಲಿಮ್ ಎಂಬ ವಿಭಜನೆಯೂ ನಡೆದಿಲ್ಲ. ಕೊರೋನಾ  ಮೊದಲ ಅಲೆಯಲ್ಲಂತೂ ಕಾರ್ಮಿಕರ, ಬಡವರ, ದುರ್ಬಲರ ಮತ್ತು ಮಧ್ಯಮ ವರ್ಗದವರ ಹಸಿವನ್ನು ತಣಿಸಿದ್ದೇ  ಮುಸ್ಲಿಮ್ ಸೇವಾ  ಸಂಸ್ಥೆಗಳು. ಅವು ಮನೆಮನೆಗೆ ಕಿಟ್‌ಗಳನ್ನು ತಲುಪಿಸಿದುವು. ಸೇವೆಯಲ್ಲಿ ಪರಸ್ಪರ ಸ್ಪರ್ಧಿಸುವಂತೆ ನಿರತವಾದುವು. ಈ ಎರಡನೇ  ಅಲೆಯಲ್ಲೂ ಅವು ಮೊದಲ ಅಲೆಯಷ್ಟೇ  ಸ್ಫೂರ್ತಿಯಿಂದ ಸೇವೆಯಲ್ಲಿ ತೊಡಗಿಸಿ ಕೊಂಡಿವೆ.

ಆದ್ದರಿಂದಲೇ, ಒಂದು ನಿರುಪದ್ರವಿ ಪ್ರಶ್ನೆಯನ್ನೂ ಕೇಳಬೇಕೆನಿಸುತ್ತದೆ-

ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಸೇವಾ ನಿರತ ವಾಗಿರುವ ಎಲ್ಲ ಮುಸ್ಲಿಮ್ ಸೇವಾ ಸಂಸ್ಥೆಗಳು ಒಂದೇ ವೇದಿಕೆಯನ್ನು  ನಿರ್ಮಿಸಿಕೊಂಡರೆ ಏನಾದೀತು? ಅದರಿಂದ ಯಾವ ಬದಲಾವಣೆ ಉಂಟಾದೀತು? ಚದುರಿದಂತೆ ಸೇವೆಯಲ್ಲಿ ತೊಡಗಿಸಿಕೊಂಡವರು  ಒಂದೇ ವೇದಿಕೆಯಲ್ಲಿ ಸೇರಿ ಕೊಂಡು ತಂತಮ್ಮ ಅನುಭವ ಹಂಚಿಕೊಂಡಾಗ ಸಿಗುವ ಫಲಿತಾಂಶ ಏನಿದ್ದೀತು? ಒಂದು ಗ್ರಾಮವನ್ನೋ  ಅಥವಾ ಒಂದು ಹಳ್ಳಿಯನ್ನೋ ದತ್ತು ಪಡೆದುಕೊಂಡು ಮಾದರಿ ಗ್ರಾಮವಾಗಿ ಬದಲಿಸುವ ಪ್ರಯತ್ನ ನಡೆದರೆ ಹೇಗೆ? ವಿವಿಧ ಸಂಘ- ಸಂಸ್ಥೆಗಳ ಹೊಣೆಗಾರರ ಸಮಿತಿಯನ್ನು ರಚಿಸಿ, ಅದಕ್ಕೆ ಆ ಗ್ರಾಮದ ಮೇಲ್ನೋಟ ವಹಿಸಿ ಕೊಟ್ಟರೆ ಹೇಗೆ? ಅವುಗಳ ಸರ್ವಾಂಗೀಣ  ಅಭಿವೃದ್ಧಿಯ ಪಾಲನ್ನು ಎಲ್ಲ ಸಂಘಟನೆಗಳೂ ಹಂಚಿಕೊಳ್ಳುವAತಹ ಸೌಹಾರ್ದ ವಾತಾವರಣ ನಿರ್ಮಿಸಿದರೆ ಹೇಗೆ? ಎಲ್ಲ ಸಂಘಟ ನೆಗಳೂ ತಂತಮ್ಮ ಐಡೆಂಟಿಟಿಯನ್ನು ಉಳಿಸಿಕೊಂಡೇ ಒಂದೇ ವೇದಿಕೆಯನ್ನು ರಚಿಸಿಕೊಳ್ಳುವುದು ಮತ್ತು ಸೇವಾ ಚಟುವಟಿಕೆ ಯನ್ನು  ವರ್ಗೀಕರಿಸಿಕೊಳ್ಳುವುದು- ಈಗಿನ ಚದುರಿದ ರೀತಿಯ ಸೇವಾ ಚಟುವಟಿಕೆಗಿಂತ ಉತ್ತಮವಲ್ಲವೇ ಅಥವಾ ಈ ಚಟುವಟಿಕೆ ಯನ್ನು ಇನ್ನಷ್ಟು ಪರಿಣಾಮ ಕಾರಿಯಾಗಿಸಲು ಇದು ಶಕ್ತವಲ್ಲವೇ?

ಇತರರಿಗಾಗಿ ಮರುಗುವ ಬಹುದೊಡ್ಡ ಮನಸ್ಸು ಮುಸ್ಲಿಮರದ್ದು. ಅದನ್ನು ಅವರೊಳಗೆ ಇಳಿಸಿರುವುದು ಇಸ್ಲಾಮ್. ಈ ಇಸ್ಲಾಮನ್ನು ಈ  ದೇಶದ ಜನರಿಗೆ ಚೆನ್ನಾಗಿ ಮತ್ತು ಪರಿಣಾಮಕಾರಿಯಾಗಿ ತಲುಪಿಸಲು ಮತ್ತು ಈ ದೇಶದಲ್ಲಿರುವ ಸುಳ್ಳುಗಳಿಗೆ ಏಟು ಕೊಡಲು ಈ  ಮರು ಗುವ ಮನಸ್ಸಿನಿಂದ ಖಂಡಿತ ಸಾಧ್ಯವಿದೆ. ಮುಸ್ಲಿಮ್ ಸಮುದಾಯದ ಕೊರೋನಾ ಕಾಲದ ಕಾರ್ಯ ಚಟುವಟಿಕೆ ಗಳೇ ಇದಕ್ಕೆ  ಅತ್ಯುತ್ತಮ ಸಾಕ್ಷಿ. ತಬ್ಲೀಗಿ ವೈರಸನ್ನು ಸೃಷ್ಟಿ ಮಾಡಿಯೂ ಸುಳ್ಳುಗಾರರು ಯಶಸ್ವಿಯಾಗಲಿಲ್ಲ. ಈ ಎರಡನೇ ಅಲೆಯಲ್ಲಂತೂ ಮುಸ್ಲಿಮ್  ದ್ವೇಷಿ ಮನಸ್ಸುಗಳು ತಬ್ಲೀಗಿ ವೈರಸ್‌ನಂಥಹದ್ದನ್ನು ಸೃಷ್ಟಿ ಮಾಡುವುದಕ್ಕೇ ಭಯಪಟ್ಟವು. ತೇಜಸ್ವಿ ಸೂರ್ಯ ಅದಕ್ಕಾಗಿ ಪ್ರಯತ್ನಿಸಿದರೂ  ಅಂತಿಮವಾಗಿ ಅವರು ಹೇಗೆ ಒಂಟಿಯಾದರು ಮತ್ತು ಸಮಾಜ ಹೇಗೆ ಮುಸ್ಲಿಮರ ಬೆಂಬಲಕ್ಕೆ ನಿಂತಿತು ಎಂಬುದು ಗಮನಾರ್ಹ.  ನಿಜವಾಗಿ,

ಇಸ್ಲಾಮನ್ನು ಖಡ್ಗದ ಮೊನೆಗೆ ಸಿಲುಕಿಸಿರುವುದರ ಹಿಂದೆಯೂ ತಬ್ಲೀಗಿ ವೈರಸ್‌ನಂಥ ಮನಸ್ಥಿತಿಯೇ ಕೆಲಸ ಮಾಡಿದೆ. ವೈರಸನ್ನು  ತಬ್ಲೀಗಿನೊಂದಿಗೆ ಸೇರಿಸಿದಂತೆಯೇ ಅವರು ಇಸ್ಲಾಮನ್ನು ಖಡ್ಗದೊಂದಿಗೆ ಜೋಡಿಸಿದರು. ಆದರೆ ತಬ್ಲೀಗಿ ವೈರಸನ್ನು ಮುಸ್ಲಿಮರು  ಸಕಾರಾತ್ಮಕ ಪ್ರತಿಕ್ರಿ ಯೆಯ ಮೂಲಕ ವಿಫಲಗೊಳಿಸಿದರು. ಎಷ್ಟರ ವರೆಗೆಂದರೆ, ಎರಡನೇ ಅಲೆಯಲ್ಲಿ ಅಂಥದ್ದೊಂದು  ಪ್ರಚಾರಕ್ಕೇ  ಅವರು ಭಯಪಡುವಷ್ಟು. ಸುಳ್ಳಿಗೆ ಮತ್ತು ದ್ವೇಷಕ್ಕೆ ಪ್ರತಿಯಾಗಿ ಸತ್ಯ ಹಾಗೂ ಪ್ರೇಮದ ಭಾಷೆಯಲ್ಲಿ ಪ್ರತಿಕ್ರಿಯಿಸಿದರೆ ಸಿಗುವ ಫಲಿತಾಂಶ  ಇದು. ಖಡ್ಗದ ವಿಷಯವೂ ಇಷ್ಟೇ. ಅದೂ ಸೋಲುತ್ತದೆ. ಒಂದುವೇಳೆ, ಮುಸ್ಲಿಮ್ ಸಮುದಾಯದ ಸೇವಾ ಚಟುವಟಿಕೆಗಳು ಒಂದೇ  ವೇದಿಕೆಯಡಿ ಬಂದರೆ ಮತ್ತು ಸಂಘಟಿತ ರೂಪದಲ್ಲಿ ವ್ಯವಸ್ಥಿತವಾಗಿ, ಹೊಣೆಗಾರಿಕೆಗಳ ವರ್ಗೀಕರಣದೊಂದಿಗೆ ಅವು ಕಾರ್ಯ ಪ್ರವೃತ್ತರಾದರೆ ಕ್ರಾಂತಿ ಕಾರಿ ಬದಲಾವಣೆ ಸಾಧ್ಯವಾಗಬಹುದೇನೋ? ಹಾಗಂತ,

ಆಶಾವಾದ ತಪ್ಪಲ್ಲವಲ್ಲ.

No comments:

Post a Comment