ಮುಸ್ಲಿಮ್ ಸಮುದಾಯದ ಮಕ್ಕಳ ಕನ್ನಡ ಹೇಗಿದೆ? ಕನ್ನಡದಲ್ಲಿ ಅವರೆಷ್ಟು ಪ್ರಾವೀಣ್ಯತೆಯನ್ನು ಪಡೆದಿದ್ದಾರೆ? ಅವರಲ್ಲಿ ಕನ್ನಡದ ಬಗ್ಗೆ ಆಸಕ್ತಿ, ಆಕರ್ಷಣೆ ಎಷ್ಟರ ಮಟ್ಟಿಗಿದೆ? ಅವರಲ್ಲಿ ಕನ್ನಡವನ್ನು ಸಲೀಸಾಗಿ ಮಾತಾಡುವ, ಓದುವ ಮತ್ತು ಅರ್ಥೈಸುವ ಸಾಮರ್ಥ್ಯದಲ್ಲಿ ಹೆಚ್ಚಳ ಆಗುತ್ತಿದೆಯೇ ಅಥವಾ ಕುಸಿತವೇ? ಮುಸ್ಲಿಮ್ ಸಮುದಾಯದ ಆಧುನಿಕ ತಲೆಮಾರಿಗೂ ಕನ್ನಡಕ್ಕೂ ನಡುವೆ ಇರುವ ಸಂಬಂಧ ಯಾವ ಬಗೆಯದು? ಬಲಿಷ್ಠವೇ, ಸಮಾಧಾನಕರವೇ ಅಥವಾ ಆತಂಕಕಾರಕವೇ?
ಕಳೆದವಾರ ಬೇಸಿಗೆ ಶಿಬಿರವೊಂದರಲ್ಲಿ ಅತಿಥಿಯಾಗಿ ಭಾಗವಹಿಸಿದ ಬಳಿಕ ನನ್ನನ್ನು ಬೆಂಬಿಡದೇ ಕಾಡುತ್ತಿರುವ ಪ್ರಶ್ನೆ ಇದು. ಕನ್ನಡದಲ್ಲಿ ಮಾತಾಡಲು ಪ್ರಾರಂಭಿಸಿದ ನನ್ನನ್ನು ಮಕ್ಕಳು ಭಾಷೆ ಜೀರ್ಣವಾಗಲ್ಲ ಅಂದರು. ಒಂದೋ ತಾಯ್ನುಡಿ (ಬ್ಯಾರಿ) ಇಲ್ಲವೇ ಇಂಗ್ಲಿಷ್‍ನಲ್ಲಿ ಮಾತಾಡಿ ಎಂದು ವಿನಂತಿಸಿದರು. ಅಷ್ಟಕ್ಕೂ, ಈ ಬೆಳವಣಿಗೆ ಅಪಾಯಕಾರಿಯೇ? ಕರ್ನಾಟಕದಲ್ಲಿರುವ ಪ್ರತಿಯೊಬ್ಬರಿಗೂ ಕನ್ನಡವನ್ನು ಓದಲು, ಬರೆಯಲು ಮತ್ತು ಮಾತಾಡಲು ಬರಲೇಬೇಕೇ? ಬರದೇ ಇರುವುದು ಅಪರಾಧವೇ? ಸಂವಹನ ಮಾಧ್ಯಮವಾಗಿರುವ ಭಾಷೆಯೊಂದಕ್ಕೆ ಗಡಿಯ ಚೌಕಟ್ಟೊಂದನ್ನು ನಿರ್ಮಿಸಿ, ಭಾವನೆಗಳನ್ನು ತುಂಬಿ, ಆರಾಧನಾ ಭಾವದಿಂದ ಕಾಣಲಾಗುತ್ತಿದೆಯೇ? ಕನ್ನಡ ಭಾಷೆಯನ್ನು ಈ ಚೌಕಟ್ಟಿನಿಂದ ಹೊರತಂದು ಇಂಗ್ಲಿಷ್‍ನಂತೆ ಸಹಜವಾಗಿ ಬದುಕಲು ಬಿಡಬೇಕೇ? ಹಾಗಂತ, ಕರ್ನಾಟಕದಲ್ಲಿ ಕನ್ನಡ ಎಷ್ಟು ಮಕ್ಕಳ ತಾಯ್ನುಡಿ? 6 ಕೋಟಿ ಕನ್ನಡಿಗರಿದ್ದಾರೆಂದು ನಾವು ಲೆಕ್ಕ ಕೊಡುತ್ತಿದ್ದರೂ ಈ 6 ಕೋಟಿಯಲ್ಲಿ ಕನ್ನಡ ತಾಯ್ನುಡಿಯಾಗಿರುವವರು ಎಷ್ಟು ಮಂದಿ? ಕಲಿಕೆ ತಾಯ್ನುಡಿಯಲ್ಲಿರಲಿ ಎಂದು ವಾದಿಸುವಾಗಲೂ ಕನ್ನಡ ಎಷ್ಟು ಮಕ್ಕಳ ತಾಯ್ನುಡಿ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಕರಾವಳಿ ಕರ್ನಾಟಕದ ಮುಸ್ಲಿಮರ ತಾಯ್ನುಡಿ ಬ್ಯಾರಿ, ಉರ್ದು. ಹಿಂದೂಗಳ ತಾಯ್ನುಡಿ ತುಳು ಮತ್ತು ಕೊಂಕಣಿ. ರಾಜ್ಯದ ಇತರ ಪ್ರದೇಶಗಳಿಗೆ ಸಂಬಂಧಿಸಿ ಹೇಳುವಾಗಲೂ ತಾಯ್ನುಡಿಯಲ್ಲಿ ಈ ಬಗೆಯ ವ್ಯತ್ಯಾಸಗಳಿವೆ. ಲಂಬಾಣಿಯಂಥ ತಾಯ್ನುಡಿ ಭಾಷೆಗಳಿವೆ. ಹೀಗಿರುವಾಗ ತಾಯ್ನುಡಿಯಲ್ಲಿ ಶಿಕ್ಷಣ ಎಂಬ ವಾದವೇ ಚರ್ಚಾರ್ಹವಾಗುತ್ತದೆ. ಮನೆಯಲ್ಲಿ ಬ್ಯಾರಿ ಭಾಷೆ ಮಾತಾಡುತ್ತಾ ಬೆಳೆದ ಮಗುವಿಗೆ ಕನ್ನಡವೂ ಇಂಗ್ಲಿಷೂ ಎರಡೂ ಅನ್ಯ ಭಾಷೆಯೇ. ‘ಎರಡು ಬಾಳೆ ಹಣ್ಣಿಗೆ ಇನ್ನೆರಡು ಸೇರಿಸಿದರೆ ಎಷ್ಟು' ಎಂದು ಬ್ಯಾರಿ ಭಾಷೆಯನ್ನಾಡುವ LKGಯ ಮಗುವಿನಲ್ಲಿ ಕೇಳಿದರೂ ಅಥವಾ ‘ಎರಡು ಕ್ರಾಸ್ ಬೆರ್ರಿಗೆ ಇನ್ನೆರಡು ಸೇರಿಸಿದರೆ ಎಷ್ಟು' ಎಂದು ಕೇಳಿದರೂ ಅದರ ಮುಖಭಾವದಲ್ಲಿ ವ್ಯತ್ಯಾಸಗಳೇನೂ ಆಗಲ್ಲ. ಯಾಕೆಂದರೆ, ಅದರ ಪಾಲಿಗೆ ಬಾಳೆ ಹಣ್ಣೂ ಅಪರಿಚಿತ, ಕ್ರಾಸ್ ಬೆರ್ರಿಯೂ ಅಪರಿಚಿತ. ಆದ್ದರಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಯಾವ ಮಕ್ಕಳನ್ನೂ ಸಾರಾಸಗಟಾಗಿ ಅವು ತಮಗೆ ಗೊತ್ತಿಲ್ಲದ ನುಡಿಯಲ್ಲಿ ಕಲಿಯುತ್ತಿವೆ ಎಂದು ಷರಾ ಬರೆಯುವುದು ತಪ್ಪಾಗುತ್ತದೆ. ಕನ್ನಡ ತಾಯ್ನುಡಿಯಲ್ಲದ ಮಗುವಿನ ಪಾಲಿಗೆ ಕನ್ನಡವೂ ಇಂಗ್ಲಿಷ್‍ನಂತೆಯೇ ಗೊತ್ತಿಲ್ಲದ ಭಾಷೆಯೇ. ಅನೇಕ ಬಾರಿ ಕನ್ನಡ ಪರ ಹೋರಾಟಗಳು ಜನರನ್ನು ತಟ್ಟದೇ ಇರುವುದು ಈ ವಾಸ್ತವವನ್ನು ನಿರ್ಲಕ್ಷಿಸಿರುವುದರಿಂದಲೇ. ಕೇರಳದಲ್ಲಿ ಮಲಯಾಳಂ ಬಹುತೇಕ ಎಲ್ಲ ಕೇರಳಿಗರ ತಾಯ್ನುಡಿ. ಭಾಷೆಯ ಉಚ್ಛಾರದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ತುಸು ವ್ಯತ್ಯಾಸಗಳಿದ್ದರೂ ಎಲ್ಲರೂ ಮಾತಾಡುವ ಭಾಷೆ ಮಲಯಾಳಂ ಒಂದೇ. ಈ ರಾಜ್ಯಕ್ಕೆ ಸಂಬಂಧಿಸಿ ಯುನೆಸ್ಕೋ ವ್ಯಕ್ತಪಡಿಸಿರುವ ಆತಂಕವನ್ನು ಪರಿಗಣಿಸಬಹುದು. ‘ಗೊತ್ತಿಲ್ಲದ ಭಾಷೆಯನ್ನು ಮಗುವಿಗೆ ಕಲಿಸುವುದನ್ನು ಈಜು ಬರದ ಮಗುವನ್ನು ನೀರಿಗೆ ಹಾಕಿದಂತೆ’ ಎಂದು ಅದು ಹೇಳಿರುವುದನ್ನು ಸಮರ್ಥಿಸಿ ವಾದಿಸಬಹುದು. ಅಂದಹಾಗೆ, ಶಿಶು ಪ್ರಾಯದಿಂದ ತೊಡಗಿ LKGಗೆ ಸೇರ್ಪಡೆಗೊಳ್ಳುವವರೆಗೆ ಒಂದು ಮಗುವಿನ ಮೇಲೆ ತಾಯ್ನುಡಿಯೇ ಪ್ರಾಬಲ್ಯ ಸ್ಥಾಪಿಸಿರುತ್ತದೆ ಎಂಬುದು ನಿಸ್ಸಂಶಯ. ತಾಯಿ ಮತ್ತು ತಂದೆಯ ನುಡಿ ಇಂಗ್ಲಿಷ್ ಆಗಿದ್ದರೆ ಮಗು ಬಾಳೆ ಹಣ್ಣು, ತೆಂಗಿನ ಕಾಯಿ, ಮಾವಿನ ಕಾಯಿ, ಮೆಟ್ಟು, ನೀರುಳ್ಳಿ, ಕಣ್ಣೀರು, ಅಳು, ಸಂತೋಷ.. ಎಲ್ಲಕ್ಕೂ ಇಂಗ್ಲಿಷ್ ಪದಗಳನ್ನೇ ಬಳಸುತ್ತದೆ. ಅದರ ಪಾಲಿಗೆ ತಾಯ್ನುಡಿ ಇಂಗ್ಲಿಷ್. ಅಂಥ ಹೆತ್ತವರಿಗೆ ಇಂಗ್ಲಿಷ್ ಮಾಧ್ಯಮ ಮೊದಲ ಆದ್ಯತೆಯಾಗುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಇನ್ನು, ಬ್ಯಾರಿ, ತುಳು, ಕೊಂಕಣಿ, ಲಂಬಾಣಿ ಸಹಿತ ಲಿಪಿ ಇಲ್ಲದ ಭಾಷೆಯನ್ನಾಡುವ ಮಗುವಿಗೂ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮ ಎಂಬೆರಡು ಆಯ್ಕೆಗಳನ್ನು ಮುಕ್ತವಾಗಿಯೇ ಇಡಬೇಕಾಗುತ್ತದೆ. ಅವೆರಡೂ ಮಗುವಿನ ಪಾಲಿಗೆ ಗೊತ್ತಿಲ್ಲದ ಭಾಷೆಗಳೇ. ಇಸ್ರೇಲ್‍ನಲ್ಲಿ ಹಿಬ್ರೂ ಭಾಷೆಯಲ್ಲಿ ಕಲಿಸಲಾಗುತ್ತದೆ. ಈ ಭಾಷೆಯಲ್ಲಿ ಕಲಿತವರೇ ಮುಂದೆ ಆ ದೇಶದ ಮಹಾನ್ ವಿಜ್ಞಾನಿಗಳು, ಸಂಶೋಧಕರು, ಸಾಧಕರೂ ಆಗಿದ್ದಾರೆ, 70ರಷ್ಟು ನೋಬೆಲ್ ಪ್ರಶಸ್ತಿಗಳು ಆ ದೇಶಕ್ಕೆ ಲಭ್ಯವಾಗಿವೆ ಎಂದು ಹೇಳಲಾಗುತ್ತದೆ. ತಾಯ್ನುಡಿಯಲ್ಲಿ ಮೊದಲ ಹಂತದ ಕಲಿಕೆಯು ಮಗುವಿನ ಮಾನಸಿಕ ಬೆಳವಣಿಗೆಗೂ ಅದರ ಆಲೋಚನಾ ಶಕ್ತಿಯನ್ನು ಹಿಗ್ಗಿಸುವುದಕ್ಕೂ ಸಹಕಾರಿಯಾಗುತ್ತದೆಂದು ವಿಶ್ವಸಂಸ್ಥೆಯೂ ಹೇಳಿದೆ. ಜಗತ್ತಿನ ಮುಂದುವರಿದ ರಾಷ್ಟ್ರಗಳಲ್ಲೆಲ್ಲಾ ಮಗುವಿನ ಮೊದಲ ಹಂತದ ಶಿಕ್ಷಣ ತಾಯ್ನುಡಿ ಯಲ್ಲೇ ನಡೆಯುತ್ತಿದೆ. ಬ್ರಿಟಿಷರಿಂದ ಆಳ್ವಿಕೆಗೊಳಪಟ್ಟ ಭಾರತ ಮತ್ತು ಆಫ್ರಿಕಾ ಖಂಡವನ್ನು ಬಿಟ್ಟರೆ ಉಳಿದಂತೆ ಇಂಗ್ಲಿಷ್ ಮಾಧ್ಯಮವನ್ನು ಆರಾಧನಾ ಭಾವದಿಂದ ಕಾಣುವ ರಾಷ್ಟ್ರಗಳು ನಗಣ್ಯ ಅನ್ನುವಷ್ಟು ಕಡಿಮೆ. ತಾಯ್ನುಡಿಯಲ್ಲಿ ಕಲಿತ ಮಕ್ಕಳು ಗಣಿತದಲ್ಲಿ ಮುಂದಿರುತ್ತಾರೆ ಎಂದು ಆಂಧ್ರಪ್ರದೇಶ ಮತ್ತು ತೆಲಂಗಾಣದ 233 ಶಾಲೆಗಳ 900ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಿದ ಯುನಿಸೆಫ್‍ನ ಸಲಹಾಕಾರರಾಗಿರುವ ಶ್ರೀಕುಮಾರ್ ನಾಯರ್ ಅವರು ತಮ್ಮ Does medium of instruction affect learning outcomes? ಎಂಬ ಸಂಶೋಧನಾ ವರದಿಯಲ್ಲಿ ವಾದಿಸಿದ್ದಾರೆ. ಅಲ್ಲದೇ, ಎಳವೆಯಲ್ಲಿ ಮಗುವಿನ ಕೈ ಹಿಡಿದು ನಡೆಯಲು ಕಲಿಸುವ ರೀತಿಯನ್ನು ಕೆಲವರು ತಾಯ್ನುಡಿ ಕಲಿಕೆಗೆ ಆಧಾರವಾಗಿ ಮುಂದಿಡುತ್ತಾರೆ. ಮಕ್ಕಳು ನಡೆಯುವುದನ್ನು ಕಲಿಯುವುದಕ್ಕೆ ಮೊದಲು ಕೆಲವು ತಿಂಗಳು ಹೆತ್ತವರು ಕೈ ಹಿಡಿದು ನಡೆಸಬೇಕಾಗುತ್ತದೆ. ನಂತರ ಮಗು ತಾನೇ ನಡೆಯುತ್ತದೆ. ಹೀಗೆಯೇ ಕಲಿಕೆಯ ವಿಷಯಗಳನ್ನು ಗ್ರಹಿಸಲು ಮಗುವಿಗೆ ಆರಂಭದಲ್ಲಿ ತಾಯ್ನುಡಿಯ ಅಗತ್ಯವಿರುತ್ತದೆ. ತಾಯ್ನುಡಿಯು ಮೊದಲ ಹಂತದ ಕಲಿಕೆಯಲ್ಲಿ ಮಗುವನ್ನು ಕೈ ಹಿಡಿದು ನಡೆಸುತ್ತದೆ. ಬಳಿಕ ಈ ಕಲಿಕೆಯ ಆಧಾರದಲ್ಲಿ ಮಗು ಇತರ ಭಾಷೆಯನ್ನು ಮತ್ತು ಅದರ ಸೌಂದರ್ಯವನ್ನು ಅನುಭವಿಸಲು ಶಕ್ತವಾಗುತ್ತದೆ. ಇನ್ಫೋಸಿಸ್‍ನ ನಾರಾಯಣ ಮೂರ್ತಿ, ವಿಜ್ಞಾನಿಗಳಾದ ಯು.ಆರ್. ರಾವ್, ಸಿ.ಎನ್.ಆರ್. ರಾವ್ ಮುಂತಾದವರೆಲ್ಲ ತಾಯ್ನುಡಿಯಲ್ಲೇ ಕಲಿತು ಸಾಧನೆ ಮಾಡಿರುವುದಾಗಿ ಸಮರ್ಥಿಸಲಾಗುತ್ತದೆ..
ಇರಬಹುದು. ಆದರೆ, ಈ ವಾದಗಳ ಸಮಸ್ಯೆ ಏನೆಂದರೆ, ಕನ್ನಡವು ಇಲ್ಲಿನ 6 ಕೋಟಿ ಕನ್ನಡಿಗರ ತಾಯ್ನುಡಿ ಎಂದು ಸಾರ್ವತ್ರೀಕರಿಸುವುದು ಅಥವಾ ಆ ಧಾಟಿಯಲ್ಲಿ ವಾದಿಸುವುದು. ನಿಜವಾಗಿ, ಈ ತಪ್ಪನ್ನು ಒಪ್ಪಿಕೊಂಡೇ ಮತ್ತು ತಿದ್ದಿಕೊಳ್ಳುವ ವಿಶಾಲ ಮನಸ್ಸಿನಿಂದಲೇ ಈ ಚರ್ಚೆಯನ್ನು ಮುಂದುವರಿಸಬೇಕಾಗಿದೆ. ಹಾಗಂತ,
ನಮ್ಮ ತಾಯ್ನುಡಿ ಬ್ಯಾರಿ, ಲಂಬಾಣಿ, ಉರ್ದು ಅಥವಾ ತುಳು ಭಾಷೆ.. ಎಂಬ ಮಾತ್ರಕ್ಕೇ ಕನ್ನಡವನ್ನು ನಿರ್ಲಕ್ಷಿಸಬೇಕಾಗಿಲ್ಲ. ಕನ್ನಡವೆಂಬುದು ಈ ಮಣ್ಣಿಗೆ ಇಂಗ್ಲಿಷ್‍ನಂತೆ ಅನ್ಯಭಾಷೆಯಲ್ಲ. ಸಂವಹನ ಮಾಧ್ಯಮವಾಗಿ ಇಂಗ್ಲಿಷ್ ಜಾಗತಿಕ ಮನ್ನಣೆ ಪಡೆದಿರಬಹುದು. ಆದರೆ ಅದಕ್ಕೆ ಸ್ಥಳೀಯತೆ ಇಲ್ಲ. ಆದ್ದರಿಂದಲೇ ಬೇಂದ್ರೆಯವರ ಪ್ರೇಮ ಪದ್ಯಗಳನ್ನು ಅದೇ ಭಾವ ಮತ್ತು ತಾದಾತ್ಮ್ಯದಲ್ಲಿ ಇಂಗ್ಲಿಷ್‍ಗೆ ಅನುವಾದಿಸಲು ಸಾಧ್ಯವಾಗದಿರುವುದು. ಇದು ಬೇಂದ್ರೆಯವರ ಸಾಹಿತ್ಯಕ್ಕೆ ಮಾತ್ರ ಸೀಮಿತವಲ್ಲ. ಕನ್ನಡಕ್ಕೆ ಮತ್ತು ಅದರ ಸಾಹಿತ್ಯಿಕ ಸೌಂದರ್ಯಕ್ಕೆ ಅದರದೇ ಆದ ಪ್ರತ್ಯೇಕತೆಯಿದೆ. ಕನ್ನಡದಲ್ಲಿ ಲಲಿತ ಪ್ರಬಂಧ ಎಂಬ ಸಾಹಿತ್ಯಿಕ ಪ್ರಕಾರವಿದೆ. ಅದು ಅತ್ತ ಹಾಸ್ಯ ಬರಹವೂ ಅಲ್ಲ, ಇತ್ತ ನಗೆಬುಗ್ಗೆಯೂ ಅಲ್ಲ. ಅದು ಹಾಸ್ಯ, ಕೌತುಕ, ಚರ್ಚೆ, ಕಚಗುಳಿಗಳ ಮಿಶ್ರಣ. ಆದರೆ ಈ ಪ್ರಕಾರವನ್ನು ಅಷ್ಟೇ ಸೊಗಸಾಗಿ ಕಟ್ಟಿ ಕೊಡುವ ಇಂಗ್ಲಿಷ್ ಪದವೇ ಇಲ್ಲ. ಇಂಗ್ಲಿಷ್‍ನಲ್ಲಿ ಇದನ್ನು Essay ಅಥವಾ Lighter Essay ಎಂದಷ್ಟೇ ಕರೆಯಲಾಗುತ್ತದೆ. ಲಲಿತ ಪ್ರಬಂಧ ಮತ್ತು Lighter Essayಯನ್ನು ಎದುರು ಬದುರಾಗಿ ಇಟ್ಟು ನೋಡಿ. ಲಲಿತ ಪ್ರಬಂಧ ಅನ್ನುವ ಪದದಲ್ಲಿರುವ ಲಾಲಿತ್ಯ Lighter Essayಯಲ್ಲಿ ವ್ಯಕ್ತವಾಗುವುದೇ ಇಲ್ಲ. ಕನ್ನಡ ಭಾಷೆಯಲ್ಲಿ ಅನಂತ ಮೂರ್ತಿ, ತೇಜಸ್ವಿ, ಶಿವರಾಮ ಕಾರಂತ, ಕುವೆಂಪು, ಭೈರಪ್ಪ, ಕಾರ್ನಾಡ್.... ಮುಂತಾದ ಶ್ರೇಷ್ಠ ಸಾಹಿತಿಗಳಿದ್ದಾರೆ. ಅಸಂಖ್ಯ ಸಾಹಿತ್ಯ ಕೃತಿಗಳಿವೆ. ಪತ್ರಿಕೆಗಳು, ಪಾಕ್ಷಿಕಗಳು, ಕಾವ್ಯಗಳಿವೆ. ಇಲ್ಲಿಯ ಮಣ್ಣಿನಲ್ಲೇ ಹುಟ್ಟಿದ ಪದಗಳು ಮತ್ತು ನುಡಿಗಟ್ಟುಗಳಿವೆ. ಪಾಡ್ದನಗಳಿವೆ. ಸ್ಥಳೀಯವಾದ ಅನೇಕಾರು ಆಚರಣೆಗಳಿವೆ. ಈ ರಾಜ್ಯದಲ್ಲಿ ಮಾತ್ರವೇ ಲಭ್ಯವಾಗುವ ತರಕಾರಿಗಳಿವೆ. ವಿಶೇಷ ರೀತಿಯ ಮರಗಳಿವೆ. ಬಳ್ಳಿಗಳಿವೆ. ಹಣ್ಣುಗಳಿವೆ. ಇಂಗ್ಲಿಷ್ ಪದಗಳಿಗೆ ಸಿಕ್ಕದ ತಿನಿಸುಗಳಿವೆ. ಇಲ್ಲಿಯ ಸಾಂಸ್ಕ್ರತಿಕ ವೈವಿಧ್ಯತೆಯನ್ನು ಬಿಂಬಿಸುವ ಕಟ್ಟಡಗಳಿವೆ. ನಂಬಿಕೆಗಳು ಮತ್ತು ಆಚರಣೆಗಳಿವೆ. ಔಷಧೀಯ ಗುಣಗಳುಳ್ಳ ಸಸ್ಯಗಳು ಅನೇಕ ಇವೆ ಮತ್ತು ಅದಕ್ಕೆ ಇಂಗ್ಲಿಷ್‍ನಲ್ಲಿ ಸ್ಪಷ್ಟ ಪದಗಳು ಈವರೆಗೂ ಹುಟ್ಟಿಕೊಂಡಿಲ್ಲ. ಇಂಗ್ಲಿಷ್‍ನಲ್ಲಿ ಸ್ಪಷ್ಟವಾಗಿ ಬರೆಯಲಾಗದ ಮತ್ತು ಉಚ್ಛರಿಸಲಾಗದ ಮಾನವ ಹೆಸರುಗಳೂ ಇಲ್ಲಿವೆ. ಹಾಗಂತ, ಇದನ್ನು ಕನ್ನಡ ಭಾಷೆಯ ಹೆಚ್ಚುಗಾರಿಕೆಯಾಗಿಯೋ ಅಥವಾ ಇಂಗ್ಲಿಷ್ ಭಾಷೆಯ ದೌರ್ಬಲ್ಯವಾಗಿಯೋ ಕಾಣಬೇಕಿಲ್ಲ. ಪ್ರತಿ ಭಾಷೆಗೂ ಸ್ಥಳೀಯತೆ ಇದೆ. ಭಾಷೆಯೊಂದು ಎಲ್ಲಿ ಜನ್ಮ ತಳೆದಿದೆಯೋ ಅಲ್ಲಿಯ ಮಟ್ಟಿಗೆ ಅದು ಅತ್ಯಂತ ಶ್ರೀಮಂತ ಭಾಷೆ. ಕನ್ನಡವನ್ನು ನಾವು ಕಲಿಯಬೇಕಾದದ್ದು ಮತ್ತು ಇದರಲ್ಲಿ ಪ್ರಾವೀಣ್ಯತೆಯನ್ನು ಪಡೆಯಲು ಶ್ರಮಿಸಬೇಕಾದದ್ದು ಈ ಕಾರಣಕ್ಕಾಗಿ. ಕನ್ನಡವನ್ನು ಕಲಿಯದೇ ಇರುವುದರಿಂದ ನಾವು ಭಾಷೆಯೊಂದನ್ನಷ್ಟೇ ಮಿಸ್ ಮಾಡಿಕೊಳ್ಳುವುದಲ್ಲ, ಆ ಭಾಷೆ ಒಳಗೊಂಡಿರುವ ಸರ್ವದರಿಂದಲೂ ವಂಚಿತರಾಗುತ್ತೇವೆ. ಜನಪದೀಯ ಹಾಡುಗಳು, ಅಜ್ಜಿ ಕತೆಗಳು, ನರಿ, ಕೋಳಿ, ಸಿಂಹ, ಆನೆ.. ಮುಂತಾದುವುಗಳ ಸುತ್ತ ಹುಟ್ಟಿಕೊಂಡಿರುವ ಕೌತುಕಮಯ ಸಂಗತಿಗಳು, ಧರಣಿ ಮಂಡಲ ಹಾಡು.. ಎಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತೇವೆ. ಸಂವಹನದ ದೃಷ್ಟಿಯಿಂದ ಇಂಗ್ಲಿಷ್ ಅನಿವಾರ್ಯವಾಗಿರಬಹುದು. ಅದರರ್ಥ ಅದೊಂದೇ ಭಾಷೆ ಸಾಕು ಮತ್ತು ಅದುವೇ ಪರಮ ಪವಿತ್ರ ಎಂದಲ್ಲ. ಅಲ್ಲದೇ ಭಾಷೆ ಸಂಸ್ಕಾರವನ್ನು ಕಲಿಸುತ್ತದೆ. ಸಾಂಸ್ಕ್ರತಿಕವಾಗಿ ಜನಮನವನ್ನು ಜೋಡಿಸುತ್ತದೆ. ತಾಯ್ನುಡಿಯು ಬ್ಯಾರಿ, ತುಳು, ಉರ್ದು ಅಥವಾ ಇನ್ನೇನೇ ಆಗಿರಬಹುದು. ಆದರೆ ಈ ಎಲ್ಲ ಭಾಷೆಗಳು ಕನ್ನಡದೊಂದಿಗೆ ಒಂದು ರೀತಿಯಲ್ಲಿ ಸಂಬಂಧವನ್ನು ಹೊಂದಿದೆ ಅಥವಾ ಸಂಬಂಧ ಹೊಂದಿರಬೇಕಾದ ಭೌಗೋಳಿಕ ಪರಿಸ್ಥಿತಿಯಿದೆ. ಆದ್ದರಿಂದ ಕನ್ನಡವನ್ನು ಒಂದು ಭಾಷೆ ಎಂದು ಕೇವಲವಾಗಿ ನೋಡಬೇಕಿಲ್ಲ. ಈ ಭಾಷೆ ನಮ್ಮನ್ನು ಸುತ್ತುವರಿದಿದೆ ಮತ್ತು ಕ್ಷಣಕ್ಷಣಕ್ಕೂ ನಮ್ಮೊಂದಿಗೆ ಮಾತಾಡಬಯಸುತ್ತದೆ. ಈ ಮಾತನ್ನು ಕೇಳಿಸಿಕೊಳ್ಳದೇ ಹೋಗುವುದರಿಂದ ಭಾಷೆಗೆ ನಷ್ಟವಿದೆಯೋ ಇಲ್ಲವೋ ಕೇಳುಗರಿಗಂತೂ ನಷ್ಟವಿದೆ..
ಮುಸ್ಲಿಮ್ ಸಮುದಾಯದಲ್ಲಿ ಈ ಬಗ್ಗೆ ಗಂಭೀರ ಅವಲೋಕನ ನಡೆಯಬೇಕಾಗಿದೆ.

No comments:
Post a Comment