|
ಇಂಡಿಯನ್ ಎಕ್ಸ್ ಪ್ರೆಸ್ |
|
ಸನ್ಮಾರ್ಗ |
ಫೆ. 19ರಂದು NDTVಯಲ್ಲಿ ರವೀಶ್ ಕುಮಾರ್ ನಡೆಸಿ ಕೊಟ್ಟ ಕಾರ್ಯಕ್ರಮವನ್ನು ವೀಕ್ಷಿಸುವಾಗ ಸನ್ಮಾರ್ಗ ಪತ್ರಿಕೆ ನೆನಪಾಯಿತು.
1988 ಎಪ್ರಿಲ್‍ನಲ್ಲಿ (ಸಂಪುಟ 11, ಸಂಚಿಕೆ 1-2) ಸನ್ಮಾರ್ಗವು ತನ್ನ ಸಂಪಾದಕೀಯ
ಪುಟದಲ್ಲಿ ಏನನ್ನೂ ಬರೆದಿರಲಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವನ್ನು ಖಂಡಿಸಿ ಅದು
ಸ್ತಬ್ಧ ಸಂಪಾದಕೀಯವನ್ನು ಪ್ರಕಟಿಸಿತ್ತು. ಸಂಪಾದಕರಾದ ಇಬ್ರಾಹೀಮ್ ಸಈದ್ ಅವರ ಬಂಧನದ
ಕುರಿತಂತೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಯನ್ನು ಮರುಮುದ್ರಿಸಿ ತನ್ನ
ಪ್ರತಿಭಟನೆಯನ್ನು ವ್ಯಕ್ತಪಡಿಸಿತ್ತು. ತುರ್ತು ಪರಿಸ್ಥಿತಿಯನ್ನು ಖಂಡಿಸಿ 1975ರಲ್ಲಿ
ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯು ಸಂಪಾದಕೀಯ ಪುಟವನ್ನು ಖಾಲಿ ಬಿಟ್ಟಿತ್ತು. ಮಾಧ್ಯಮ
ಸ್ವಾತಂತ್ರ್ಯವನ್ನು ಮೊಟಕುಗೊಳಿಸುವುದರ ವಿರುದ್ಧ ಇಂಡಿಯನ್ ಎಕ್ಸ್ ಪ್ರೆಸ್ ಮತ್ತು
ಸನ್ಮಾರ್ಗ ದಶಕಗಳ ಹಿಂದೆ ಈ ರೀತಿಯಾಗಿ ಪ್ರತಿಭಟಿಸಿದ್ದರೆ, ಮಾಧ್ಯಮ ಜಗತ್ತಿನ ಕರಾಳ
ಮುಖವನ್ನು ಖಂಡಿಸುವುದಕ್ಕಾಗಿ ರವೀಶ್ ಕುಮಾರ್ ಅವರು ಫೆ. 19ರ ಕಾರ್ಯಕ್ರಮದಲ್ಲಿ ವಿನೂತನ
ಶೈಲಿಯನ್ನು ಪರಿಚಯಿಸಿದರು. ಅವರ ಹಿಂದುಗಡೆಯ ಸ್ಕ್ರೀನ್ ಸಂಪೂರ್ಣ ಕಪ್ಪಾಗಿತ್ತು. ಅವರ
ಕಾರ್ಯಕ್ರಮದ ಉದ್ದಕ್ಕೂ ಸ್ಕ್ರೀನ್‍ನಲ್ಲಿ ಯಾವ ದೃಶ್ಯಗಳೂ ಮೂಡಿಬರಲಿಲ್ಲ. JNU
ವಿಷಯದಲ್ಲಿ ಕೆಲವು ಚಾನೆಲ್‍ಗಳು ಪ್ರಸಾರ ಮಾಡಿದ ಪಕ್ಷಪಾತಿ ಮತ್ತು ಅಪ್ಪಟ ಸುಳ್ಳುಗಳಿಂದ
ಕೂಡಿದ ಕಾರ್ಯಕ್ರಮಗಳನ್ನು ಖಂಡಿಸುವುದು ಆ ಕಪ್ಪು ಸ್ಕ್ರೀನ್‍ನ ಉದ್ದೇಶವಾಗಿತ್ತು.
ಟಿ.ವಿ.ಯಲ್ಲಿ ಪ್ರಸಾರವಾಗುವ ಚರ್ಚೆ ಮತ್ತು ಸಂವಾದಗಳು ಕತ್ತಲಿನೆಡೆಗೆ
ಕೊಂಡೊಯ್ಯುತ್ತಿವೆ ಎಂಬುದನ್ನು ಅವರು ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿಸಿದರು.
ಅಷ್ಟಕ್ಕೂ, ಮಾಧ್ಯಮ ನೈತಿಕತೆ ಪ್ರಶ್ನಾರ್ಹವೆನಿಸಿದ್ದು JNU ಪ್ರಕರಣದಲ್ಲಷ್ಟೇ ಅಲ್ಲ.
ಗುಜರಾತ್ ಹತ್ಯಾಕಾಂಡದಲ್ಲೂ ಅದು ತೀವ್ರ ಚರ್ಚೆಗೆ ಒಳಗಾಗಿತ್ತು. ಗುಜರಾತ್ ಸಮಾಚಾರ್
ಮತ್ತು ಸಂದೇಶ್ ಪತ್ರಿಕೆಗಳ ನೈತಿಕ ಮಟ್ಟವನ್ನು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾವೇ
ಪ್ರಶ್ನಿಸಿತ್ತು. ಸಮುದಾಯಗಳ ನಡುವೆ ದ್ವೇಷ, ಅನುಮಾನ, ಹಗೆತನವನ್ನು ಹುಟ್ಟುಹಾಕುವಲ್ಲಿ
ಮತ್ತು ವದಂತಿಗಳಿಗೆ ಸುದ್ದಿಯ ರೂಪವನ್ನು ಕೊಟ್ಟು ಬೆಂಕಿ ಕೊಡಿಸುವಲ್ಲಿ ಇವುಗಳು
ನಿರ್ವಹಿಸಿದ ಪಾತ್ರ ತೀವ್ರ ಟೀಕೆಗೆ ಗುರಿಯಾಗಿತ್ತು. ಬಹುಶಃ ಆ ನಂತರದಲ್ಲಿ ಮಾಧ್ಯಮಗಳು
ಕಟಕಟೆಯಲ್ಲಿ ನಿಂತ ಎಣಿಕೆಯ ಪ್ರಕರಣಗಳಲ್ಲಿ JNU ಕೂಡ ಒಂದು. ಕನ್ಹಯ್ಯ ಕುಮಾರ್ ಎಲ್ಲ
ಟಿ.ವಿ. ಚಾನೆಲ್‍ಗಳ ನೈತಿಕ ಗುಣಮಟ್ಟವನ್ನು ಅಳೆಯುವ ವಸ್ತುವಾಗಿಬಿಟ್ಟ. ಆತನಿಂದಾಗಿ
ಮುಖ್ಯಧಾರೆಯ ಟಿ.ವಿ. ಚಾನೆಲ್‍ಗಳ ಮುಖವಾಡಗಳು ದೊಪ್ಪನೆ ಕಳಚಿ ಬಿದ್ದುವು. ಬಹುಶಃ,
ಗುಜರಾತ್ ಸಮಾಚಾರ್, ಸಂದೇಶ್ ಪತ್ರಿಕೆಗಳ ಪಾತ್ರವನ್ನು ಟೈಮ್ಸ್ ನೌ, ಝೀ ನ್ಯೂಸ್,
ನ್ಯೂಸ್ ಎಕ್ಸ್ ಮುಂತಾದ ಚಾನೆಲ್‍ಗಳು ಸ್ವಯಂ ವಹಿಸಿಕೊಂಡಿರುವಂತೆ ವರ್ತಿಸಿದುವು. JNU
ವಿದ್ಯಾರ್ಥಿ ನಾಯಕರು ದೇಶವಿರೋಧಿ ಘೋಷಣೆ ಕೂಗಿರುವರೆಂಬ ವದಂತಿಯನ್ನು ಯಾವ
ಸತ್ಯಶೋಧನೆಯನ್ನೂ ನಡೆಸದೆಯೇ ಅವು ಮತ್ತೆ ಮತ್ತೆ ಪ್ರಸಾರ ಮಾಡಿದುವು. ಕನ್ಹಯ್ಯ ಕುಮಾರ್
ಭಾರತ್ ವಿರೋಧಿ ಭಾಷಣ ಮಾಡಿರುವನೆಂದು ಅವು ಹೇಳಿಕೊಂಡವು. ನ್ಯೂಸ್ ಎಕ್ಸ್ ಚಾನೆಲ್ ಅಂತೂ
ಉಮರ್ ಖಾಲಿದ್‍ನನ್ನು ಜೈಶೆ ಮುಹಮ್ಮದ್‍ನ ಸದಸ್ಯ ಎಂದು ಹೇಳಿತು. ನಿರಂತರ ಮೂರು ದಿನಗಳ
ಕಾಲ ಈ ಸುದ್ದಿಯನ್ನು ಅದು ಪ್ರಸಾರ ಮಾಡಿತು. ಮಾತ್ರವಲ್ಲ, ತನ್ನ ಈ ಸುದ್ದಿಗೆ ಗುಪ್ತಚರ
ಇಲಾಖೆಯ ವರದಿಯೇ ಆಧಾರ ಎಂದೂ ಸಮರ್ಥಿಸಿಕೊಂಡಿತು. ಆದರೆ ಫೆ. 17ರಂದು ದಿ ಹಿಂದೂ
ಪತ್ರಿಕೆ ಪ್ರಕಟಿಸಿದ ಸುದ್ದಿಯು ನ್ಯೂಸ್ ಎಕ್ಸ್ ನ ವಾದವು ಸಂಪೂರ್ಣ ಸುಳ್ಳೆಂಬುದನ್ನು
ಸಾಬೀತುಪಡಿಸಿತು. ಆ ಸುದ್ದಿಯ ಪ್ರಕಾರ, ಗುಪ್ತಚರ ಇಲಾಖೆಯು ಅಂಥದ್ದೊಂದು ಸುದ್ದಿಯನ್ನು
ಬಿಡುಗಡೆಗೊಳಿಸಿಯೇ ಇರಲಿಲ್ಲ. ಉಮರ್ ಖಾಲಿದ್‍ನನ್ನು ಝೀ ನ್ಯೂಸ್ ಚಾನೆಲ್ ಭಯೋತ್ಪಾದಕ
ಎಂದಿತು. ‘ಟೆರರಿಸ್ಟ್ ಉಮರ್ ಖಾಲಿದ್’ ಎಂಬ ಶೀರ್ಷಿಕೆಯನ್ನೇ ಅದು ಹುಟ್ಟು ಹಾಕಿತು.
ತಮಾಷೆ ಏನೆಂದರೆ, ಈ ಭಯೋತ್ಪಾದಕನನ್ನು ಕೂರಿಸಿಕೊಂಡೇ ಝೀ ಮತ್ತು ಟೈಮ್ಸ್ ನೌಗಳು ಸ್ವತಃ
ಚರ್ಚಾ ಕಾರ್ಯಕ್ರಮವನ್ನು ಏರ್ಪಡಿಸಿದ್ದುವು!
ಫೆ. 15ರಂದು ಪಟಿಯಾಲ ಹೌಸ್ ಕೋರ್ಟ್‍ನಲ್ಲಿ ಪತ್ರಕರ್ತರು ಮತ್ತು ವಿದ್ಯಾರ್ಥಿಗಳ ಮೇಲೆ ವಕೀಲ ವೇಷಧಾರಿಗಳಿಂದ ಹಲ್ಲೆ ನಡೆದುವು. ಈ ಹಲ್ಲೆಯು ಪ್ರಮುಖ ಟಿ.ವಿ. ಚಾನೆಲ್‍ಗಳಲ್ಲಿ ಪ್ರಸಾರವನ್ನೂ ಕಂಡಿತು. ಆದರೆ ಟೈಮ್ಸ್ ನೌ ಈ ಬಗ್ಗೆ ಮೌನ ತಾಳಿತು. ಮರುದಿನ ಎನ್‍ಡಿ ಟಿ.ವಿ.ಯ ಬರ್ಖಾ ದತ್, ಇಂಡಿಯಾ ಟುಡೇ ಟಿ.ವಿ.ಯ ರಾಜ್‍ದೀಪ್ ಸರ್ದೇಸಾಯಿ ಮತ್ತು ಎನ್‍ಡಿ ಟಿ.ವಿ.ಯ ರವೀಶ್ ಕುಮಾರ್ ಮುಂತಾದ ಖ್ಯಾತ ಪತ್ರಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಪಟಿಯಾಲ ಹೌಸ್ ಕೋರ್ಟ್‍ನಲ್ಲಿ ನಡೆದ ಘಟನೆಯನ್ನು ಮತ್ತು ಪತ್ರಕರ್ತರ ಮೇಲಿನ ಹಲ್ಲೆಯನ್ನು ಅವರು ಖಂಡಿಸಿದರು. ಅಂಬಾನಿ ಒಡೆತನದ CNN-IBN ಚಾನೆಲ್ ಈ ಪ್ರತಿಭಟನೆಗೆ ವಿಶೇಷ ಕವರೇಜ್ ನೀಡಿದರೂ ಟೈಮ್ಸ್ ನೌ ಈ ಪ್ರತಿಭಟನೆಯನ್ನು ಗಮನಿಸದಂತೆ ನಟಿಸಿತು. ಮಾತ್ರವಲ್ಲ, ಈ ಪ್ರತಿಭಟನಾ ರಾಲಿಯಿಂದ ಸ್ವತಃ ಅರ್ನಾಬ್ ಗೋಸ್ವಾಮಿ ತಪ್ಪಿಸಿಕೊಂಡರು. ತಂದೆಯ ಅನಾರೋಗ್ಯದ ನಿಮಿತ್ತ ಬರಲಾಗುತ್ತಿಲ್ಲ ಎಂಬ ಸ್ಪಷ್ಟನೆ ನೀಡಿದರು. ಆದರೆ ಟೈಮ್ಸ್ ನೌನಲ್ಲಿ ರಾತ್ರಿ ಪ್ರಸಾರವಾದ ನ್ಯೂಸ್ ಅವರ್ ಕಾರ್ಯಕ್ರಮವನ್ನು ಅವರೇ ನಡೆಸಿ ಕೊಟ್ಟರು! ಖುಷಿಯ ಸಂಗತಿಯೇನೆಂದರೆ, ಈ ಬಾರಿ ಅರ್ನಾಬ್ ಬಹುತೇಕ ಒಂಟಿಯಾದರು. ಅವರ ವಾದ ಮತ್ತು ಭಾವಾವೇಶ ಸಾರ್ವಜನಿಕವಾಗಿ ಲೇವಡಿಗೆ ಗುರಿಯಾದುವು. ಆದರೆ, ಬರ್ಖಾ-ಸರ್ದೇಸಾಯಿಯಂತಹ ಪತ್ರಕರ್ತರು ಆರಂಭದಿಂದ ಕೊನೆಯ ವರೆಗೆ ಅತ್ಯಂತ ಅಧಿಕಾರಯುತವಾಗಿ ಮಾತಾಡಿದರು. ಇವರಿಗೆ ಹೋಲಿಸಿದರೆ ಅರ್ನಾಬ್ ಪಲಾಯನವಾದಿಯಂತೆ ಕಂಡರು. ಝೀ ನ್ಯೂಸ್ ಅಂತೂ ಅದರ ಪ್ರಮುಖ ಪತ್ರಕರ್ತ ವಿಶ್ವದೀಪ್‍ರ ರಾಜೀನಾಮೆಯಿಂದಾಗಿ ತೀವ್ರ ಮುಖಭಂಗ ಅನುಭವಿಸಿತು.
|
ರವೀಶ್ ಕುಮಾರ್ |
ನಿಜವಾಗಿ, JNU ವಿಷಯದಲ್ಲಿ ಝೀ ನ್ಯೂಸ್, ನ್ಯೂಸ್ ಎಕ್ಸ್, ಟೈಮ್ಸ್ ನೌ ಮುಂತಾದ ಚಾನೆಲ್‍ಗಳ ಕಾರ್ಯಕ್ರಮ ಎಷ್ಟು ಏಕಪಕ್ಷೀಯವಾಗಿತ್ತೆಂದರೆ, ಅದರ ಆ್ಯಂಕರ್‍ಗಳ ಜಾಗದಲ್ಲಿ ಬಿಜೆಪಿ ವಕ್ತಾರರು ಬಂದು ಕುಳಿತರೆ ಅದಕ್ಕಿಂತ ಭಿನ್ನವಾಗಿ ಮಾತಾಡಲಾರರೇನೋ ಎಂದು ಅನಿಸುವಷ್ಟು. ದೇಶಪ್ರೇಮವನ್ನು ಬಿಜೆಪಿ ಯಾವ ಚೌಕಟ್ಟಿನೊಳಗಿಟ್ಟು ನೋಡುತ್ತದೋ ಆ ಚೌಕಟ್ಟಿನಿಂದ ಒಂದಿಷ್ಟೂ ಹೊರಬರದೇ ಅವೂ ಒದ್ದಾಡಿದುವು. ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಒಂದು ಭಾವಾವೇಶವಿದೆ. ಸ್ಮøತಿ ಇರಾನಿ, ಸಾಕ್ಷಿ ಮಹಾರಾಜ್, ಸಾಧ್ವಿ ಪ್ರಾಚಿ, ಓ.ಪಿ. ಶರ್ಮಾ, ಕಠಾರಿಯಾ ಇತ್ಯಾದಿ ಇತ್ಯಾದಿಗಳು ಆಗಾಗ ಅದರ ಪರಿಚಯ ಮಾಡುತ್ತಾ ಬಂದಿದ್ದಾರೆ. ಈ ಭಾವಾವೇಶವೆಲ್ಲ ಈ ದೇಶದ ಅಭಿವೃದ್ಧಿ, ಬಡತನ, ಮೂಲ ಸೌಲಭ್ಯ, ಅಸ್ಪೃಶ್ಯತೆಯ ಚರ್ಚೆಗಳ ಸಂದರ್ಭದಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ. ಸಾಧ್ವಿ ಪ್ರಾಚಿಯವರು ದಲಿತ ಕಲ್ಯಾಣದ ಬಗ್ಗೆ ಎಂದಾದರೂ ಮಾತಾಡಿದ್ದಿದೆಯೇ? ದಲಿತ ಎಂಬ ಕಾರಣಕ್ಕಾಗಿ ದೇವಾಲಯ ಪ್ರವೇಶ ನಿಷೇಧಿಸಲಾದ ಘಟನೆಗೆ ಪ್ರತಿಕ್ರಿಯಿಸಿದ್ದಿದೆಯೇ? ಒಂದೊಮ್ಮೆ ಪ್ರತಿಕ್ರಿಯಿಸಿದ್ದಿದ್ದರೂ ಆ ಸಂದರ್ಭದಲ್ಲಿ ಒಂದಿನಿತಾದರೂ ಭಾವಾವೇಶ ಪ್ರಕಟಗೊಂಡದ್ದಿದೆಯೇ? ರುಂಡ ಕತ್ತರಿಸುವ ಮಾತಾಡಿದ ಸ್ಮøತಿ ಇರಾನಿಯವರು ಸದಾ ಕತ್ತಿಯ ಅಲುಗಿನಲ್ಲಿ ನಡೆಯುತ್ತಿರುವ ದುರ್ಬಲ ವರ್ಗಗಳ ಬಗ್ಗೆ ಯಾವಾಗಲಾದರೂ ಈ ಮಟ್ಟದ ಭಾವಾವೇಶಕ್ಕೆ ಒಳಗಾಗಿದ್ದಾರೆಯೇ? ಕನ್ಹಯ್ಯನನ್ನು ಪಟಿಯಾಲ ಹೌಸ್ ಕೋರ್ಟ್‍ನಲ್ಲಿ ಥಳಿಸಿದ ದೆಹಲಿಯ ಬಿಜೆಪಿ ಶಾಸಕ ಶರ್ಮಾ ಆಗಲಿ, ಮುಸ್ಲಿಮರ ವಿರುದ್ಧ ಯುದ್ಧ ಸಾರಬೇಕೆಂದು ಕರೆಕೊಡುವ ಕಠಾರಿಯಾ ಆಗಲಿ ಬಡಜನರ ಬವಣೆಯ ಬಗ್ಗೆ ಈ ಮಟ್ಟದಲ್ಲಿ ಆವೇಶಕ್ಕೆ ಒಳಗಾದದ್ದು ಎಂದೂ ನಡೆದಿಲ್ಲ. ಯಾಕೆಂದರೆ, ಅವರು ಭಾವುಕರಾಗುವುದಕ್ಕೆ ಕೆಲವು ನಿರ್ದಿಷ್ಟ ಪರಿಧಿಗಳಿವೆ. ದಲಿತರು, ದುರ್ಬಲರು, ಬಡತನ, ಹಸಿವು.. ಇವೆಲ್ಲ ಇವರ ಭಾವುಕ ವಲಯದೊಳಗೆ ಸೇರ್ಪಡೆಗೊಳ್ಳುವುದಿಲ್ಲ. ಇವರು ಭಾವುಕರಾಗಬೇಕಾದರೆ ಮುಸ್ಲಿಮರು, ಗೋಮಾಂಸ, ಘರ್‍ವಾಪಸಿ, ಲವ್ ಜಿಹಾದ್.. ಮುಂತಾದುವುಗಳು ಚರ್ಚೆಗೆ ಬರಬೇಕು. ವೇಮುಲ ಮತ್ತು ಕನ್ಹಯ್ಯ ಬಿಜೆಪಿಯ ಕಣ್ಣಿನಲ್ಲಿ ದೇಶದ್ರೋಹಿಗಳಾಗಿರುವುದಕ್ಕೆ ಅವರು ಬಿಜೆಪಿಯ ಈ ಮನುಷ್ಯ ವಿರೋಧಿ ಸ್ವಭಾವವನ್ನು ಪ್ರಶ್ನಿಸಿರುವುದೇ ಕಾರಣ. ಬಿಜೆಪಿ ಒಂದು ಬಗೆಯ ಗುಲಾಮ ಮನಸ್ಥಿತಿಯನ್ನು ನಿರ್ಮಿಸುತ್ತಿದೆ. 2015 ನವೆಂಬರ್ 26ನ್ನು ಸಂವಿಧಾನ ದಿನವನ್ನಾಗಿ ಘೋಷಿಸಿದ ಅದೇ ಬಿಜೆಪಿ ಸಂವಿಧಾನದ ಮೂಲ ಆಶಯವನ್ನು ಜಾರಿಗೊಳಿಸುವಂತೆ ಒತ್ತಾಯಿಸುವುದನ್ನು ದೇಶದ್ರೋಹ ಎಂದು ಕರೆಯುತ್ತಿದೆ. ಅಂಬೇಡ್ಕರ್ ಸ್ಟೂಡೆಂಟ್ ಯೂನಿಯನ್‍ನ ಮೂಲಕ ವೇಮುಲನು ಜಾತಿ ವಿಷಯವನ್ನು ಸಂವಿಧಾನದ ವಿಷಯವನ್ನಾಗಿಸಿ ಗಮನ ಸೆಳೆಯಬಯಸಿದ. ಅಸಮಾನತೆಯನ್ನು ಪೋಷಿಸುವ ವ್ಯವಸ್ಥೆಯನ್ನು ಖಂಡಿಸಿದ. ಕನ್ಹಯ್ಯನು ಆಲ್ ಇಂಡಿಯಾ ಸ್ಟೂಡೆಂಟ್ ಯೂನಿಯನ್‍ನ ಮೂಲಕ ಜಾತಿ ಮತ್ತು ಬಡತನವನ್ನು ಸಂವಿಧಾನಬದ್ಧವಾಗಿ ಪ್ರಶ್ನಿಸಿದ. ತನಗೆ ಬಡತನ, ಭ್ರಷ್ಟಾಚಾರ, ಜಾತಿ, ಅಸಮಾನತೆಯಿಂದ ಆಝಾದಿ ಬೇಕು ಅಂದ. ಇವುಗಳಿಗೆ ಯಾವ ಉತ್ತರವನ್ನೂ ಕೊಡಲಾಗದ ಬಿಜೆಪಿಯು ಭಾವಾವೇಶಕ್ಕೆ ಒಳಗಾಯಿತು. ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಮಿಥ್‍ಗಳನ್ನು ನೀವು ಎತ್ತುವಿರಾದರೆ ನಿಮ್ಮನ್ನು ದೇಶದ್ರೋಹಿಗಳಾಗಿ ಕಾಣಬೇಕಾಗುತ್ತದೆ ಎಂದು ಅದು ಎಚ್ಚರಿಸಿತು. ಸಂವಿಧಾನವು ಕೊಟ್ಟಿರುವ ಸಮಾನತೆಗಾಗಿ ನೀವು ಒತ್ತಾಯಿಸುವಿರಾದರೆ ನಿಮ್ಮನ್ನು ಸರಕಾರಿ ವಿರೋಧಿಗಳೆಂದು ಕರೆಯಬೇಕಾಗುತ್ತದೆ ಎಂದು ಸಾರಿತು. ವೇಮುಲನ ಆತ್ಮಹತ್ಯೆಯ ಬಳಿಕವೂ ಬಿಜೆಪಿ ಕನ್ಹಯ್ಯನನ್ನು ಗುರಿ ಮಾಡಿರುವುದು ಈ ನಿಲುವನ್ನೇ ಸಮರ್ಥಿಸುತ್ತದೆ. ಸಾಮಾಜಿಕ ನ್ಯಾಯ, ಸಮಾನತೆ, ದುರ್ಬಲ-ದಲಿತ ಕಲ್ಯಾಣ ಮುಂತಾದುವುಗಳ ಬಗ್ಗೆ ಗಮನ ಸೆಳೆಯಬಲ್ಲ ರೀತಿಯಲ್ಲಿ ಒತ್ತಾಯಿಸುವುದನ್ನು ದೇಶದ್ರೋಹವಾಗಿ ಕಾಣುವ ವಾತಾವರಣವನ್ನು ಸೃಷ್ಟಿಸಲಾಯಿತು. ಮಾತ್ರವಲ್ಲ, ದೇಶಪ್ರೇಮ ಮತ್ತು ದೇಶದ್ರೋಹದ ಬಗ್ಗೆ ಇದಮಿಥ್ಥಂ ಎಂದು ಹೇಳಿ ಬಿಡಬಹುದಾದ ರೀತಿಯನ್ನು ಆವಿಷ್ಕರಿಸ ತೊಡಗಿತು. ಇಂಥ ಸಂದರ್ಭಗಳಲ್ಲೆಲ್ಲ ಬಿಜೆಪಿಯ ಪ್ರಮುಖ ನಾಯಕರು ಭಾವಾವೇಶಕ್ಕೆ ಒಳಗಾಗುವರು. ಪಾರ್ಲಿಮೆಂಟ್‍ನಲ್ಲಿ ಮತ್ತು ಹೊರಗೆ ಅದರ ವಿವಿಧ ನಾಯಕರು ದೇಶಪ್ರೇಮದ ವಿವಿಧ ಮಜಲುಗಳನ್ನು ಹೇಳಿಕೊಡುವರು. ಸರಕಾರದ ವಿರುದ್ಧ, ಅದರ ನಾಯಕರುಗಳ ವಿರುದ್ಧ ಮತ್ತು ಅದರ ಬೆಂಬಲಿಗರ ವಿರುದ್ಧ ಮಾತಾಡುವುದನ್ನೇ ದೇಶದ್ರೋಹ ಎಂದು ನಂಬುವಂತೆ ಏರುದನಿಯಲ್ಲಿ ಕೂಗುವರು. ಅಲ್ಲದಿದ್ದರೆ,
ಕನ್ಹಯ್ಯನ ಕುರಿತಾಗಿ ಪ್ರಸಾರ ಮಾಡಲಾದ ಎರಡು ವೀಡಿಯೋಗಳೂ ನಕಲಿ ಎಂದು ಫಾರೆನ್ಸಿಕ್
ಪರೀಕ್ಷೆಯಲ್ಲಿ ಸ್ಪಷ್ಟವಾದ ಬಳಿಕವೂ ಮತ್ತು ಕನ್ಹಯ್ಯ ಜಾಮೀನಿನಲ್ಲಿ ಬಿಡುಗಡೆಗೊಂಡ
ಬಳಿಕವೂ ‘ಸತ್ಯಮೇವ ಜಯತೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡುವುದರ ಅರ್ಥವೇನು? ಅವರು
ಯಾವ ಸತ್ಯದ ಬಗ್ಗೆ ಮಾತಾಡುತ್ತಿದ್ದಾರೆ? ತಿರುಚಿದ ವೀಡಿಯೋದ ಆಧಾರದಲ್ಲಿ ಆ ಹುಡುಗನನ್ನು
ಬಂಧಿಸಿದುದನ್ನು ಪ್ರಶ್ನಿಸಿ ಒಂದೇ ಒಂದು ವಾಕ್ಯದ ಟ್ವೀಟನ್ನೂ ಅವರು ಮಾಡಿಲ್ಲವಲ್ಲ,
ವೇಮುಲನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಬಲವಂತಪಡಿಸಿದ ಸ್ಮೃತಿ ಇರಾನಿಯರ ಪತ್ರ
ಮತ್ತು ಕುಲಪತಿಯವರ ನಿರ್ಧಾರದ ಬಗ್ಗೆ ಏನನ್ನೂ ಹೇಳಿಲ್ಲವಲ್ಲ, ಮತ್ತೆ ಯಾವ ಸತ್ಯದ
ಜಯವನ್ನು ಅವರು ನಿರೀಕ್ಷಿಸುತ್ತಿದ್ದಾರೆ? ಹಾಗಿದ್ದರೂ,
ಬಿಜೆಪಿಯ ‘ಸಂವಿಧಾನ ದ್ರೋಹಿ’ ಮನಸ್ಥಿತಿಯನ್ನು ಮತ್ತು ಕೆಲವು ಚಾನೆಲ್‍ಗಳ ‘ಬಿಜೆಪಿ
ಶರಣು’ ನೀತಿಯನ್ನು ಬಹಿರಂಗಕ್ಕೆ ತಂದುದಕ್ಕಾಗಿ ಕನ್ಹಯ್ಯನನ್ನು ಅಭಿನಂದಿಸೋಣ. ಜೊತೆಗೆ
ದಶಕಗಳ ಹಿಂದಿನ ಸ್ತಬ್ದ ಸಂಪಾದಕೀಯಗಳನ್ನು ನೆನಪಿಸಿದುದಕ್ಕಾಗಿ ರವೀಶ್ ಕುಮಾರ್‍ರಿಗೆ
ಧನ್ಯವಾದವನ್ನು ತಿಳಿಸೋಣ.
No comments:
Post a Comment