ಘಟನೆ 1
ಹೆಣ್ಣು, ಗಂಡು ಮತ್ತು ಮಕ್ಕಳೂ ಸೇರಿರುವ ಉದ್ದದ ಸಾಲು. ಕೈಯಲ್ಲಿ ಪಾತ್ರೆಯನ್ನು ಹಿಡಿದು ಕೊಂಡಿರುವ ಆ ಸಾಲಿಗೆ ಧರ್ಮವಿಲ್ಲ. ಹಸಿವೇ ಧರ್ಮ. ಮತ್ತೂ ಹುಡುಕಿದರೆ ಹಿಂದೂ, ಮುಸ್ಲಿಮ್, ಕ್ರೈಸ್ತ ಎಲ್ಲರೂ ಈ ಸಾಲಿನಲ್ಲಿ ಸಿಗುತ್ತಾರೆ. ಸಂಜೆ 6 ಗಂಟೆಗೆ ಈ ಸಾಲು ಸೇರುತ್ತದೆ. ಸಮಯಕ್ಕೆ ಸರಿಯಾಗಿ ವಾಹನವೊಂದು ಬಂದು ನಿಲ್ಲುವುದೂ ಅದರಿಂದ ಇಡ್ಲಿ ಮತ್ತು ಬೇಳೆಸಾರುಗಳುಳ್ಳ ದೊಡ್ಡ ಪಾತ್ರೆಗಳನ್ನು ಇಳಿಸುವುದೂ ನಡೆಯುತ್ತದೆ. ಬಳಿಕ ನಡೆಯುವುದು ಹೃದಯವನ್ನು ಮೀಟುವ ಕ್ರಿಯೆ. ಸಾಲಿ ನಲ್ಲಿ ನಿಂತ ಸುಮಾರು 400-450 ಮಂದಿಗೆ ಇದನ್ನು ಹಂಚುವ ಪ್ರಕ್ರಿಯೆ. ಒಬ್ಬೊಬ್ಬರಿಗೆ ಮೂರು ಇಡ್ಲಿ ಮತ್ತು ಸಾಂಬಾರು ಅಥವಾ ಮೂರು ಚಪಾತಿ ಮತ್ತು ಪದಾರ್ಥವನ್ನು ಹಂಚಲಾಗುತ್ತದೆ. ಈ ಸಾಲಿನಿಂದ ವ್ಯಕ್ತವಾಗುವ ಮಂದಹಾಸ ಮತ್ತು ಧನ್ಯತಾಭಾವವೇ ಈ ದಾನ ಎಷ್ಟು ಅಮೂಲ್ಯ ಅನ್ನುವುದನ್ನು ಸ್ಪಷ್ಟಪಡಿಸುತ್ತದೆ.
ಘಟನೆ 2
ಆರು ಮಕ್ಕಳು ಮತ್ತು ತಾಯಿಯಿರುವ ಕುಟುಂಬ. ಮಕ್ಕಳ ಅಪ್ಪ ಈ ಮೊದಲೇ ತೀರಿ ಹೋಗಿದ್ದಾರೆ. ನಾಲ್ಕು ಪುಟ್ಟ ಮಕ್ಕಳು ಶಾಲೆಗೆ ಹೋಗುತ್ತಿವೆ. ಓರ್ವ ಹೆಣ್ಣು ಮಗಳು ಮದುವೆ ಪ್ರಾಯಕ್ಕೆ ತಲುಪಿದ್ದಾಳೆ. ಇನ್ನೋರ್ವ ಎಳೆ ಪ್ರಾಯದ ಮಗನ ಮೇಲೆ ಮನೆ ನಡೆಸುವ ಆನೆಭಾರ ಬಿದ್ದಿದೆ. ಟರ್ಪಾಲು ಹಾಸಿದ ಮನೆಯಲ್ಲಿ ಈ ಕುಟುಂಬದ ವಾಸ. ನಗರ ಪ್ರದೇಶದ ಬಹುಮಹಡಿ ಕಟ್ಟಡ ಗಳಲ್ಲಿ ವಾಸಿಸುವ ಮಂದಿ ಅದನ್ನು ಮನೆ ಎಂದು ಒಪ್ಪುವುದು ಬಿಡಿ ಮನುಷ್ಯರು ವಾಸಿಸುವುದಕ್ಕೆ ಯೋಗ್ಯವಾದ ಜೋಪಡಿ ಎಂದೂ ಒಪ್ಪಲಾರರು. ವರ್ಷಗಳ ಹಿಂದೆ ಈ ಜೋಪಡಿಗೆ ಸರಕಾರದ ವತಿಯಿಂದ ಹಕ್ಕು ಪತ್ರ ಸಿಕ್ಕರೂ ಅದನ್ನು ಪಡೆದುಕೊಳ್ಳುವುದಕ್ಕೆ ಅಸಮರ್ಥವಾದ ಕುಟುಂಬ ಇದು. ಹಕ್ಕು ಪತ್ರ ಪಡಕೊಳ್ಳಬೇಕಾದರೆ 10 ಸಾವಿರ ರೂಪಾಯಿಯನ್ನು ಸರಕಾರಕ್ಕೆ ಪಾವತಿಸಬೇಕು. ಅಷ್ಟೊಂದು ಹಣವಿದ್ದರೆ ಹಳೆ ಟರ್ಪಾಲನ್ನು ಕಳಚಿ ಹೊಸದನ್ನು ಹೊದೆಸಬಹುದಿತ್ತು ಎಂದು ಅಂದುಕೊಂಡ ಕುಟುಂಬ. ಈ ಪರಿಸ್ಥಿತಿಯಿಂದಾಗಿ ಹಕ್ಕು ಪತ್ರವೂ ದಕ್ಕದ ಸ್ಥಿತಿ. ಇದನ್ನು ಕಂಡು ಮರುಗಿದ ಸಂಘಟನೆಯೊಂದು ಈ ಕುಟುಂಬಕ್ಕೆ ಬದಲಿ ವ್ಯವಸ್ಥೆಯನ್ನು ಮಾಡಲು ಪಣ ತೊಟ್ಟಿತು. ದಾನಿಗಳನ್ನು ಸಂಪರ್ಕಿಸಿತು. ಪ್ರತಿ ತಿಂಗಳೂ ಅಗತ್ಯದ ಆಹಾರ ವಸ್ತುಗಳನ್ನು ಒದಗಿಸುವ ವ್ಯವಸ್ಥೆಯನ್ನು ಮಾಡಿತು. ಆದರೆ, ಹಸಿವು ತಣಿಯುವುದೊಂದೇ ಆ ಕುಟುಂಬದ ಮೂಲಭೂತ ಅಗತ್ಯ ಆಗಿರಲಿಲ್ಲ. ಬೆಳೆದ ಮಗಳು, ಮಗ ಮತ್ತು ಮಕ್ಕಳಿರುವ ಕುಟುಂಬಕ್ಕೆ ಖಾಸಗಿತನವನ್ನು ಕಾಪಾಡಿಕೊಳ್ಳಲು ಕನಿಷ್ಠ ಏರ್ಪಾಡನ್ನು ಮಾಡಬೇಕಿತ್ತು. ಆದ್ದರಿಂದ ಹತ್ತು ಸಾವಿರ ರೂಪಾಯಿಯನ್ನು ಪಾವತಿಸಿ ಹಕ್ಕು ಪತ್ರವನ್ನು ಪಡೆದುಕೊಳ್ಳಲಾಯಿತು. ಟರ್ಪಾಲು ಹಾಸಿದ ಗುಡಿಸಲಿನ ಬದಲು ಚಂದದ ಮನೆಯೊಂದನ್ನು ಕಟ್ಟಿ ಕೊಡಲು ನಿರ್ಧರಿಸಲಾಯಿತು. ಮೊನ್ನೆ ಮೊನ್ನೆ ಆ ಕುಟುಂಬ ಹೊಸ ಮನೆಯಲ್ಲಿ ಹೊಸ ಬದುಕನ್ನು ಆರಂಭಿಸಿದೆ. ಮನೆಗೆ ಬೇಕಾಗಿರುವ ಮಂಚ, ಕುರ್ಚಿ, ಹಾಸಿಗೆ ಇತ್ಯಾದಿ ಮೂಲಭೂತ ಸವಲತ್ತುಗಳನ್ನು ಒದಗಿಸಿಕೊಡಲಾಗಿದೆ.
ಮೊದಲ ಘಟನೆ ದ.ಕ. ಜಿಲ್ಲೆಯ ಮಂಗಳೂರಿನ ಹೃದಯ ಭಾಗದಲ್ಲಿರುವ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯದ್ದಾದರೆ ಎರಡನೇ ಘಟನೆ ಮಂಗಳೂರಿನ ಹೊರ ವಲಯದ ಅಡ್ಡೂರು-ಪುಂಚಮಿಯ ಕಿನ್ನಿಗುಡ್ಡೆಯದ್ದು. ಮೊದಲು ಘಟನೆಯ ನೇತೃತ್ವವನ್ನು ಎಂ. ಫ್ರೆಂಡ್ಸ್ ಎಂಬ ತಂಡವು ವಹಿಸಿಕೊಂಡಿದ್ದರೆ ಎರಡನೇ ಘಟನೆಯ ನೇತೃತ್ವವನ್ನು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಘಟಕವು ವಹಿಸಿಕೊಂಡಿದೆ. ಅಂದಹಾಗೆ, ಈ ಎರಡೂ ಘಟನೆಗಳ ನೇತೃತ್ವವನ್ನು ವಹಿಸಿಕೊಂಡವರು ಬೇರೆ ಬೇರೆ ಎಂಬುದನ್ನು ಬಿಟ್ಟರೆ ಉಳಿದಂತೆ ಸೇವೆ ಒಂದೇ.
ಜಗತ್ತಿನಲ್ಲಿ ಎರಡು ಬಗೆಯ ಬದುಕು ಇದೆ. ಒಂದು- ಬಯಸಿದ್ದೆಲ್ಲವನ್ನೂ ಅನುಭವಿಸುವ ಬದುಕಾದರೆ ಇನ್ನೊಂದು ಯಾವುದನ್ನೂ ಬಯಸದೆಯೇ ಇರುವ ಬದುಕು. ವಿಶೇಷ ಏನೆಂದರೆ, ಈ ಎರಡೂ ರೀತಿಯ ಬದುಕನ್ನು ಬದುಕುತ್ತಿರುವರು ಮನುಷ್ಯರೇ. ಹಾಗಂತ, ಇವರಿಬ್ಬರೂ ವೈರಿಗಳಲ್ಲ. ಸ್ಪರ್ಧಿಗಳೂ ಅಲ್ಲ. ಅಲ್ಲದೇ, ಇವರಿಬ್ಬರ ನಡುವೆ ಅನೇಕ ವೇಳೆ ಭೇಟಿಯೂ ಆಗಿರುವುದಿಲ್ಲ. ಇಬ್ಬರೂ ಒಂದೊಂದು ಮೂಲೆಯಲ್ಲಿ ತಮ್ಮದೇ ಕೋಟೆ ಮತ್ತು ಜೋಪಡಿಯನ್ನು ಕಟ್ಟಿಕೊಂಡು ಬದುಕುತ್ತಿದ್ದಾರೆ. ಇದೊಂದು ರೀತಿಯಲ್ಲಿ ಆರ್ಥಿಕ ಅಸಮತೋಲನ. ಉಳ್ಳವರು ಮತ್ತು ಇಲ್ಲದವರ ನಡುವೆ ಕೊಂಡಿಯೊಂದನ್ನು ಜೋಡಿಸದೇ ಇರುವುದರ ಫಲಿತಾಂಶ. ನಿಜವಾಗಿ, ಉಳ್ಳವರ ಬಗ್ಗೆ ಇಲ್ಲದವರಲ್ಲಿ ಅಭಿಮಾನ ಮತ್ತು ಗೌರವ ಮೂಡುವುದು ಯಾವಾಗ ಎಂದರೆ, ಉಳ್ಳವರು ತಮ್ಮ ಸಂಪತ್ತಿನಲ್ಲಿ ಒಂದಷ್ಟು ಪಾಲನ್ನು ಇಲ್ಲದವರಿಗೆ ನೀಡುವಾಗ. ಇದನ್ನು ಇಸ್ಲಾಮ್ ಝಕಾತ್ (ಕಡ್ಡಾಯ ದಾನ) ಎಂಬ ಪದಪ್ರಯೋಗದೊಂದಿಗೆ ಗುರುತಿಸಿದೆ. ನಿಜವಾಗಿ, ಇದೊಂದು ರೀತಿಯ ಕ್ರಾಂತಿಕಾರಿ ಪರಿಕಲ್ಪನೆ. ಉಳ್ಳವರನ್ನು ಮತ್ತು ಇಲ್ಲದವರನ್ನು ಒಂದೇ ಬಿಂದುವಿನಲ್ಲಿ ಸೇರಿಸುವ ಮತ್ತು ಪರಸ್ಪರ ಅವಲಂಬಿಗಳನ್ನಾಗಿಸುವ ಕ್ರಿಯೆ. ಓರ್ವರಲ್ಲಿ ಖರ್ಚು-ವೆಚ್ಚಗಳೆಲ್ಲ ಮುಗಿದು ವರ್ಷದ ಕೊನೆಯಲ್ಲಿ ಹತ್ತೂವರೆ ಪವನ್ ಬಂಗಾರ ಅಥವಾ ಅದಕ್ಕೆ ಸಮನಾದ ಮೊತ್ತಕ್ಕಿಂತ ಮಿಕ್ಕಿ ಉಳಿಕೆಯಾಗಿದ್ದರೆ ಅವರು ಅದರ ಮೇಲೆ ಎರಡೂವರೆ ಶೇಕಡಾ ಮೊತ್ತವನ್ನು ಕಡ್ಡಾಯವಾಗಿ ಇಲ್ಲದವರಲ್ಲಿ ಹಂಚಬೇಕು. ಇದು ಮುಸ್ಲಿಮರ ಮಟ್ಟಿಗೆ ನಮಾಝ, ಉಪವಾಸದಂತೆಯೇ ಕಡ್ಡಾಯ. ಇದನ್ನು ಒಂದಷ್ಟು ಸಾವಧಾನದೊಂದಿಗೆ ಅವಲೋಕಿಸಿ ನೋಡಿ. ಒಂದು ಗ್ರಾಮದಲ್ಲಿ ಹೀಗೆ ಕಡ್ಡಾಯ ದಾನ ಮಾಡಲು ಅರ್ಹರಾಗಿರುವ 20 ಮಂದಿ ಇದ್ದಾರೆ ಎಂದಿಟ್ಟುಕೊಳ್ಳಿ. ಮಾತ್ರವಲ್ಲ, ಅವರು ತಮ್ಮ ಕಡ್ಡಾಯ ದಾನವನ್ನು ನೀಡಲು ಸಿದ್ಧರೂ ಇದ್ದಾರೆ. ಈಗ ಆಗಬೇಕಾಗಿರುವ ತುರ್ತು ಕೆಲಸ ಏನೆಂದರೆ, ಅದನ್ನು ಸಂಗ್ರಹಿಸುವುದು ಮತ್ತು ಆ ಊರು ಮತ್ತು ಪರ ಊರಿನಲ್ಲಿ ಇರಬಹುದಾದ ಕಡು ಬಡವರನ್ನು ಗುರುತಿಸಿ ಅವರ ಸಮಗ್ರ ಸಬಲೀಕರಣಕ್ಕಾಗಿ ಅದನ್ನು ವಿನಿಯೋಗಿಸುವುದು. ಇದೊಂದು ರೀತಿಯ ಚಳವಳಿ. ಉಳ್ಳವರಿಂದ ಝಕಾತನ್ನು ಸಂಗ್ರಹಿಸುವುದು ಮತ್ತು ಸಾಧ್ಯವಾದರೆ ಅವರನ್ನು ಜೊತೆಯಿಟ್ಟು ಕೊಂಡೇ ಇಲ್ಲದವರ ಜೋಪಡಿಗೆ ತೆರಳಿ ಅವರನ್ನು ಆ ಸ್ಥಿತಿಯಿಂದ ಮೇಲೆತ್ತುವುದಕ್ಕೆ ಯೋಜನೆಗಳನ್ನು ರೂಪಿಸುವುದು. ಇದು ಚಳವಳಿಯ ರೂಪದಲ್ಲಿ ನಡೆದರೆ ಸಾಮಾಜಿಕ ಅಸಮಾನತೆಗೆ ಬಹುದೊಡ್ಡ ತಡೆಯನ್ನು ಒಡ್ಡಬಹುದು.
ನಮ್ಮ ನಡುವೆ ಇರುವ ಎಲ್ಲ ಸಿದ್ಧಾಂತಗಳೂ ಬಡವನ ಮನೆಯ ಬಳಿ ಬಂದು ನಿಂತಾಗ ಮೌನವಾಗುತ್ತವೆ. ಕಮ್ಯುನಿಸಂ ಆಗಲಿ, ಬಂಡವಾಳಶಾಹಿಯಾಗಲಿ ಎರಡೂ ಬಡತನ ನಿರ್ಮೂಲನೆಗೆ ಮಂಡಿಸುವ ವಿಚಾರಗಳಲ್ಲಿ ಅಪೂರ್ಣತೆ ಇದೆ. ಅನಾದಿ ಕಾಲದಲ್ಲಿ ಬಡತನವನ್ನು ಶಾಪದ ಫಲವೆಂಬಂತೆ ಕಾಣಲಾಗುತ್ತಿದ್ದರೆ ಆಧುನಿಕ ಕಾಲದಲ್ಲಿ ಅವಮಾನವಾಗಿ ಕಾಣಲಾಗುತ್ತದೆ. ಆದ್ದರಿಂದಲೇ, ಸರಕಾರಗಳು ಬಡವರ ಸಂಖ್ಯೆಯನ್ನು ಕಡಿಮೆಗೊಳಿಸಿ ತೋರಿಸಲು ಪ್ರಯತ್ನಿಸುತ್ತಿವೆ. ನಿಜವಾಗಿ, ಇದಕ್ಕೆ ಪರಿಹಾರ ಝಕಾತ್ ಎಂಬ ಪರಿಕಲ್ಪನೆ. ಒಂದುವೇಳೆ, ಇಸ್ಲಾಮ್‍ನ ಬದಲು ಬಂಡವಾಳಶಾಹಿತ್ವ ಅಥವಾ ಕಮ್ಯುನಿಸಂ ಸಿದ್ಧಾಂತವು ಝಕಾತನ್ನು ಪರಿಚಯಿಸಿರುತ್ತಿದ್ದರೆ ಅದಕ್ಕೆ ಇವತ್ತು ಸಾಕಷ್ಟು ಸಾಮಾಜಿಕ ಮನ್ನಣೆ ಸಿಗುತ್ತಿತ್ತೇನೋ? ಆರ್ಥಿಕ ಅಸಮತೋಲನ ಮತ್ತು ಸಾಮಾಜಿಕ ಅಸಮಾನತೆಯನ್ನು ತೊಲಗಿಸಲು ಸಮರ್ಪಕ ಆಯುಧವಾಗಿ ಬಿಂಬಿತಗೊಳ್ಳುತ್ತಿತ್ತೇನೋ? ಅಂದಹಾಗೆ,
ದೇವ ಮತ್ತು ಮಾನವನ ನಡುವಿನ ಸಂಭಾಷಣೆಯ ಎಳೆಯೊಂದನ್ನು ಪ್ರವಾದಿ ಮುಹಮ್ಮದ್(ಸ) ಹೀಗೆ ಹಂಚಿ ಕೊಂಡಿದ್ದಾರೆ;
ಸತ್ತು ಮತ್ತೆ ಎಬ್ಬಿಸಲ್ಪಟ್ಟು ವಿಚಾರಣೆಗೆ ತಯಾರಾದ ಮಾನವನೊಂದಿಗೆ ದೇವನು ಕೇಳುತ್ತಾನೆ,
ನಾನು ರೋಗಿಯಾಗಿದ್ದೆ, ಆದರೆ ನೀನು ನನ್ನನ್ನು ವಿಚಾರಿಸಲು ಬರಲಿಲ್ಲ.
ಮಾನವನಿಗೆ ಆಶ್ಚರ್ಯವಾಗುತ್ತದೆ. ಎಲ್ಲಿಯ ಮಾನವ. ಎಲ್ಲಿಯ ದೇವ. ನಿನಗೆ ರೋಗವಾ? ನೀನು ದೇವನಲ್ಲವೇ ಎಂದು ಪ್ರಶ್ನಿಸುತ್ತಾನೆ. ಆಗ ದೇವನು, ನನ್ನ ಇಂತಿಂಥ ದಾಸ ರೋಗಿಯಾಗಿದ್ದ. ನೀನು ಅವನನ್ನು ಸಂದರ್ಶಿಸಿರುತ್ತಿದ್ದರೆ ನನ್ನನ್ನು ಸಂದರ್ಶಿಸಿದಂತಾಗುತ್ತಿತ್ತು ಎನ್ನುತ್ತಾನೆ. ಆ ಬಳಿಕ ದೇವನು ಹೇಳುತ್ತಾನೆ, ನಾನು ಊಟ ಕೇಳಿದೆ. ಆದರೆ ನೀನು ಉಣಿಸಲಿಲ್ಲ. ಮಾನವನಿಗೆ ಮತ್ತದೇ ಆಶ್ಚರ್ಯ. ನಿನಗೆ ಹಸಿವೇ? ದೇವನೂ ಹಸಿಯುತ್ತಾನಾ? ದೇವನ ಉತ್ತರ ಏನೆಂದರೆ, ಇಂತಿಂಥ ಮನುಷ್ಯ ನಿನ್ನಲ್ಲಿ ಊಟ ಕೇಳಿದ್ದ. ನೀನು ಆತನಿಗೆ ಊಟ ನೀಡಿರುತ್ತಿದ್ದರೆ ನನಗೆ ನೀಡಿದಂತಾಗುತ್ತಿತ್ತು. ಮೂರನೆಯದಾಗಿ ದೇವನು ಹೇಳುತ್ತಾನೆ, ಇಂತಿಂಥ ವ್ಯಕ್ತಿ ನಿನ್ನಲ್ಲಿ ದಾಹ ತಣಿಸುವಂತೆ ಕೇಳಿಕೊಂಡಿದ್ದ. ಆದರೆ ನೀನು ಆತನಿಗೆ ನೀರನ್ನು ಕೊಡಲಿಲ್ಲ. ಕೊಟ್ಟಿರುತ್ತಿದ್ದರೆ ಅದು ನನಗೆ ಕೊಟ್ಟಂತಾಗುತ್ತಿತ್ತು.
ಇದೊಂದು ಮಾರ್ಮಿಕ ಮಾತುಕತೆ. ದೇವನು ಮನುಷ್ಯರೊಂದಿಗೆ ಮನುಷ್ಯ ಭಾವದಲ್ಲಿ ಮಾತಾಡುತ್ತಾನೆ. ದೇವನಿಗೆ ಕೊಡುವುದು ಎಂದರೆ ಮನುಷ್ಯನಿಗೆ ಕೊಡುವುದು ಎಂದರ್ಥ ಎಂಬ ರೀತಿಯಲ್ಲಿ ವಿವರಿಸುತ್ತಾನೆ. ಇದೊಂದೇ ಅಲ್ಲ, ಪಾಪ ಗಳಿಗೆ ಪ್ರಾಯಶ್ಚಿತ್ತವಾಗಿ ಪವಿತ್ರ ಕುರ್‍ಆನ್ ಪ್ರಸ್ತಾಪಿಸುವ ವಿವರಗಳೂ ಅಚ್ಚರಿಯದ್ದು. ದೇವನೊಂದಿಗಿನ ಕರ್ತವ್ಯದಲ್ಲಿ ಚ್ಯುತಿ ಉಂಟಾಗುವುದನ್ನು ದೇವನು ಹೇಗೆ ನೋಡುತ್ತಾನೆಂದರೆ, ಅದು ಮನುಷ್ಯರಿಗೆ ಮಾಡಲಾದ ದ್ರೋಹ ಎಂಬಂತೆ. ರಮಝಾನ್ ತಿಂಗಳ ಉಪವಾಸ ಆಚರಿಸಲು ಅಶಕ್ತರಾದವರು ಬಡವನಿಗೆ ಎರಡು ಹೊತ್ತಿನ ಊಟವನ್ನು ನೀಡಬೇಕು (2:185) ಎಂದು ಪವಿತ್ರ ಕುರ್‍ಆನ್‍ನಲ್ಲಿ ಹೇಳಲಾಗಿದೆ. ದೇವನಿಗಾಗಿ ಕಡ್ಡಾಯ ಉಪವಾಸ ಆಚರಿಸುವ ವೇಳೆ ಉಂಟಾಗಿರಬಹುದಾದ ಲೋಪ-ದೋಷಗಳಿಗೆ ಪರಿಹಾರ ಏನೆಂದರೆ, ಬಡವರಿಗೆ ಫಿತ್ರ್ ಝಕಾತ್ ನೀಡುವುದು. ಈ ಹಿಂದೆ ಪ್ರವಾದಿಯವರ ಕಾಲದಲ್ಲಿ ಪತ್ನಿಯನ್ನು ತಾಯಿಯಂತೆ ಎಂದು ಪತಿ ಹೇಳುವ ಕ್ರಮ (ಝಿಹಾರ್) ಇತ್ತು. ಪತ್ನಿಯ ಜೊತೆ ಜಗಳವಾಡಿದ ಪತಿ, ನೀನು ಇನ್ನು ಮುಂದಕ್ಕೆ ನನಗೆ ತಾಯಿಗೆ ಸಮಾನ ಎಂದು ಹೇಳುತ್ತಿದ್ದ. ಆ ಬಳಿಕ ಆಕೆ ಆತನಿಗೆ ನಿಷಿದ್ಧವಾಗುತ್ತಿದ್ದಳು. ಅತ್ತ ವಿಚ್ಛೇದನವೂ ಇಲ್ಲ, ಇತ್ತ ಪತ್ನಿಯಾಗಿಯೂ ಇಲ್ಲದ ತ್ರಿಶಂಕು ಸ್ಥಿತಿ. ಗಂಡಿನ ಈ ತಪ್ಪಿಗೆ ಅಲ್ಲಾಹನು ಪ್ರಾಯಶ್ಚಿತ್ತವಾಗಿ ನಿಗದಿಪಡಿಸಿರುವು ದೇನೆಂದರೆ, 60 ಮಂದಿ ದರಿದ್ರರಿಗೆ ಊಟ ಹಾಕುವುದು (ಪವಿತ್ರ ಕುರ್‍ಆನ್ 58:3). ಶಪಥವನ್ನು ಉಲ್ಲಂಘಿಸುವವರಿಗೆ ಪ್ರಾಯಶ್ಚಿತ್ತವಾಗಿ 10 ಮಂದಿ ದರಿದ್ರರಿಗೆ ಊಟ ಕೊಡಬೇಕೆಂದು (5:59) ಪವಿತ್ರ ಕುರ್‍ಆನ್ ಒಂದು ಕಡೆ ಹೇಳುವಾಗ, ಇನ್ನೊಂದು ಕಡೆ ಬಡವರಿಗೆ ಉಣಿಸುವುದು ಸಜ್ಜನ ದಾಸರ ಗುಣಸ್ವಭಾವ (76: 9-10) ಎಂದೂ ಹೇಳುತ್ತದೆ. ನಿಜವಾಗಿ,
ಬದುಕನ್ನು ಪರೀಕ್ಷೆ ಎಂದು ನಂಬುವವರು ಇರುವಂತೆಯೇ ಹಾಗೆ ನಂಬದವರೂ ಈ ಜಗತ್ತಿನಲ್ಲಿದ್ದಾರೆ. ಹೀಗಿದ್ದರೂ, ಕೌತುಕ ಗಳು ಈ ಜಗತ್ತಿನಲ್ಲಿ ನಡೆಯುತ್ತಲೇ ಇರುತ್ತವೆ. ಅತ್ಯಂತ ಆರೋಗ್ಯವಂತ ಮತ್ತು ಕಟ್ಟುಮಸ್ತಾದ ವ್ಯಕ್ತಿ ಒಂದು ದಿನ ಇದ್ದಕ್ಕಿ ದ್ದಂತೆ ಅನಾರೋಗ್ಯಕ್ಕೀಡಾಗುತ್ತಾನೆ. ದೇಹ ನಿಶ್ಶಕ್ತಿಗೀಡಾಗುತ್ತದೆ. ಬಡವನೋರ್ವ ನೋಡನೋಡುತ್ತಲೇ ಶ್ರೀಮಂತನಾಗಿ ಬದಲಾಗುತ್ತಾನೆ. ಶ್ರೀಮಂತನ ಸಂಪತ್ತು ಕರಗುತ್ತಾ ಕರಗುತ್ತಾ ನಿಧಾನಕ್ಕೆ ನಿರ್ವಾತ ಉಂಟಾಗುತ್ತದೆ. 50 ವರ್ಷಕ್ಕೇ ಇಷ್ಟು ಸಾಕು ಎಂದು ನಿಟ್ಟುಸಿರು ಬಿಡುವವರೂ 90 ವರ್ಷವಾದರೂ ಅಪಾರ ಜೀವನ ಪ್ರೀತಿಯಿಂದ ಬದುಕುವವರೂ ಇಲ್ಲಿದ್ದಾರೆ. ಬಹುಶಃ ಇದೊಂದು ಜೀವನ ಚಕ್ರ. ಈ ಚಕ್ರ ತಿರುಗುತ್ತಲೇ ಇರುತ್ತದೆ. ಚಕ್ರದ ತಳಭಾಗ ದಲ್ಲಿ ಇರುವವರು ಶಾಶ್ವತವಾಗಿ ತಳಭಾಗದಲ್ಲೇ ಇರುವುದಿಲ್ಲ. ಒಂದು ಕಾಲದಲ್ಲಿ ಆತ ಮೇಲೇರಬೇಕಾಗುತ್ತದೆ. ಮೇಲ್ಭಾಗದಲ್ಲಿರುವವರು ಶಾಶ್ವತವಾಗಿ ಮೇಲ್ಭಾಗದಲ್ಲೇ ಇರುವುದೂ ಇಲ್ಲ. ಅವರು ತಳಭಾಗವನ್ನು ಸ್ಪರ್ಶಿಸಲಿದ್ದಾರೆ. ಹೀಗೆ ತಿರುಗುವ ಚಕ್ರದಲ್ಲಿ ಸಿಲುಕಿಕೊಂಡಿರುವ ಮಾನವರೆಲ್ಲರೂ ಪರಸ್ಪರರನ್ನು ಅವಲಂಬಿಸಿ ಮತ್ತು ಆಧರಿಸಿಕೊಂಡು ಬದುಕಬೇಕು ಅನ್ನುವುದು ಸೃಷ್ಟಿಕರ್ತನ ಬಯಕೆ. ಮೇಲ್ಭಾಗದಲ್ಲಿರುವವರು ತಳಭಾಗದಲ್ಲಿರುವವರನ್ನು ಆಧರಿಸಬೇಕು. ತನ್ನಲ್ಲಿರುವುದರಿಂದ ಸ್ವಲ್ಪಂಶವನ್ನು ಕೆಳಭಾಗದಲ್ಲಿರು ವವರಿಗೆ ನೀಡಿ ಅವರಲ್ಲಿ ಜೀವನ ಪ್ರೇಮವನ್ನು ಹುಟ್ಟಿಸಬೇಕು. ತಳಭಾಗದವ ಮೇಲ್ಭಾಗದವರನ್ನು ಗೌರವದಿಂದ ಕಾಣಬೇಕು. ಆದ್ದರಿಂದಲೇ ದೇವನ ಜೊತೆಗಿನ ಕರ್ತವ್ಯಚ್ಯುತಿಯನ್ನು ಮನುಷ್ಯರ ಜೊತೆಗಿನ ಕರ್ತವ್ಯ ಚ್ಯುತಿಯಾಗಿ ಮತ್ತು ಅವರಿಗೆ ಉಣಿಸುವ ಮೂಲಕ ಅದಕ್ಕಿರುವ ಪ್ರಾಯಶ್ಚಿತ್ತವಾಗಿ ದೇವನು ಪರಿಗಣಿಸಿರುವುದು. ಆಳವಾಗಿ ಯೋಚಿಸಿದರೆ ಇದೊಂದು ಅದ್ಭುತ ಪರಿಕಲ್ಪನೆ. ಶ್ರೀಮಂತರು ಮತ್ತು ಬಡವರನ್ನು ಜೋಡಿಸುವ ಮತ್ತು ಬಂಧುಗಳನ್ನಾಗಿಸುವ ಹೊಸ ಬಗೆಯ ಚಿಂತನೆ.
ಆರಂಭದಲ್ಲಿ ಹೇಳಲಾದ ಎರಡೂ ಘಟನೆಗಳು ಇದಕ್ಕೆ ಉದಾಹರಣೆ, ಅಷ್ಟೇ.
No comments:
Post a Comment