2014ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮತ್ತು ಆ ಬಳಿಕದಿಂದ ಮೊನ್ನೆ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳ ವರೆಗೆ ಬಿಜೆಪಿಯ ಪ್ರಮುಖ ನಾಯಕರು ಮಾಡಿರುವ ಭಾಷಣಗಳನ್ನೊಮ್ಮೆ ಪರಿಶೀಲಿಸಿ ನೋಡಿ. ಏನನಿಸುತ್ತದೆ? ಮುಖ್ಯಮಂತ್ರಿ ನರೇಂದ್ರ ಮೋದಿ ಆಡುತ್ತಿದ್ದ ಚುನಾವಣಾ ಸಭೆಯ ಮಾತುಗಳಿಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಡುತ್ತಿರುವ ಚುನಾವಣಾ ಭಾಷಣಗಳಿಗೂ ಏನು ವ್ಯತ್ಯಾಸ ಇದೆ? ಘೋರಕ್‍ಪುರದ ಸಂಸದನಾಗಿ ಯೋಗಿ ಆದಿತ್ಯನಾಥ್ ಆಡುತ್ತಿದ್ದ ಮಾತುಗಳು ಹೇಗಿದ್ದುವು? ಮುಖ್ಯಮಂತ್ರಿ ಆದಿತ್ಯನಾಥ್ ಮಾಡುತ್ತಿರುವ ಭಾಷಣಗಳು ಹೇಗಿವೆ? ಗುಜರಾತ್‍ನ ಗೃಹಮಂತ್ರಿಯಾಗಿ ಅಮಿತ್ ಷಾ ಆಡುತ್ತಿದ್ದ ಮಾತುಗಳಲ್ಲಿ ಏನೇನು ಇದ್ದುವು? ಬಿಜೆಪಿಯ ಅಧ್ಯಕ್ಷನಾಗಿ ಅಮಿತ್ ಶಾರ ಭಾಷಣಗಳು ಹೇಗಿವೆ? ಅಂದಹಾಗೆ, ಬಿಜೆಪಿಯ ಬಗ್ಗೆ ಷರಾ ಬರೆಯುವುದಕ್ಕೆ ಈ ಬಗೆಯ ಲೆಕ್ಕಾಚಾರವೇ ಧಾರಾಳ ಸಾಕು. ಮಧ್ಯಪ್ರದೇಶದ ಚುನಾವಣಾ ಪ್ರಚಾರದ ವೇಳೆ ಯೋಗಿ ಆದಿತ್ಯನಾಥ್‍ರ ಭಾಷಣ ಹೀಗಿತ್ತು:
`ಕಾಂಗ್ರೆಸ್‍ನ ಜೊತೆ ಅಲಿ ಇದ್ದರೆ ಬಿಜೆಪಿಯ ಜೊತೆ ಬಜರಂಗಬಲಿ ಇದ್ದಾನೆ.'
ತೆಲಂಗಾಣದಲ್ಲಿ ಅವರು ಹೇಳಿದ್ದು ಹೀಗೆ:
ಅಧಿಕಾರಕ್ಕೆ ಬಂದರೆ ಒವೈಸಿ ಸೋದರನ್ನು ನಾವು ಪಾಕಿಸ್ತಾನಕ್ಕೆ ಅಟ್ಟುತ್ತೇವೆ.’
ಗುಜರಾತ್ ಚುನಾವಣೆಯ ವೇಳೆ ಪ್ರಧಾನಿ ನೇಂದ್ರ ಮೋದಿಯವರು ಇದೇ ಧಾಟಿಯಲ್ಲಿ ಮಾತಾಡಿದ್ದರು. ‘ನೀವು ಕಾಂಗ್ರೆಸ್‍ಗೆ ಮತ ಹಾಕಿದರೆ, ಅವರು ಮುಸ್ಲಿಮನನ್ನು ನಿಮಗೆ ಮುಖ್ಯಮಂತ್ರಿಯಾಗಿ ಕೊಡುತ್ತಾರೆ.' ಅಲ್ಲದೇ, 'ಮನ್‍ಮೋಹನ್ ಸಿಂಗ್ ಅವರು ಪಾಕಿಸ್ತಾನದೊಂದಿಗೆ ಕೈಜೋಡಿಸಿದ್ದಾರೆ’ ಎಂದಿದ್ದರು. ಅಮಿತ್ ಷಾರ ಭಾಷಣ ಎಷ್ಟು ಕೆಟ್ಟದ್ದಾಗಿತ್ತೆಂದರೆ, ಚುನಾವಣಾ ಆಯೋಗ ಒಮ್ಮೆ ಅವರ ಮೇಲೆ ನಿಷೇಧವನ್ನು ಹೇರಿತ್ತು. 2014 ಮತ್ತು ಆ ಬಳಿಕ ನಡೆದ ವಿಧಾನಸಭಾ ಚುನಾವಣೆಗಳು ಹಾಗೂ ಉಪಚುನಾವಣೆಗಳಲ್ಲಿ ಬಿಜೆಪಿ ನಾಯಕರು ಮಾಡಿದ ಭಾಷಣಗಳನ್ನು ಹರವಿ ಹಾಕಿ ಪರಿಶೀಲಿಸತೊಡಗಿದರೆ, ಎಲ್ಲದರಲ್ಲೂ ಏಕರೂಪತೆ ಕಾಣಬಹುದು. ಅದರಲ್ಲಿ ಒಂದು: ಮುಸ್ಲಿಮ್ ವಿರೋಧ 2. ಕಾಂಗ್ರೆಸ್ ವಿರೋಧ. 3. ಪಾಕಿಸ್ತಾನ.
ಅಷ್ಟಕ್ಕೂ,
ಕಳೆದ ನಾಲ್ಕೂವರೆ ವರ್ಷಗಳಲ್ಲಿ ಈ ದೇಶಕ್ಕೆ ಎದುರಾದ ಸವಾಲುಗಳೇ ಇವು? ಬಿಜೆಪಿ ಯಾಕೆ ಮತ್ತೆ ಮತ್ತೆ ಇವೇ ವಿಷಯಗಳ ಸುತ್ತ ಗಿರಕಿ ಹೊಡೆಯುತ್ತಿದೆ? 2014ರಲ್ಲಿ ಮೋದಿ ನೇತೃತ್ವದ ಬಿಜೆಪಿಯನ್ನು ಈ ದೇಶದ ಮತದಾರರು ಬೆಂಬಲಿಸಿರುವುದಕ್ಕೆ ಅವರ ಮಾತಿನ ಶೈಲಿ, ನೀಡಿದ ಭರವಸೆಗಳು ಮತ್ತು ಮನ್‍ಮೋಹನ್ ಸಿಂಗ್ ಸರಕಾರದ ಮೇಲೆ ಕೇಳಿ ಬಂದಿದ್ದ ಭ್ರಷ್ಟಾಚಾರದ ಆರೋಪಗಳು ಪ್ರಮುಖ ಕಾರಣವಾಗಿದ್ದುವು. ಆಗ, ಅವರೆಂದೂ ನೋಟು ನಿಷೇಧ ಮಾಡುವ ಭರವಸೆ ನೀಡಿರಲಿಲ್ಲ. ಆದರೆ, ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ನೀಡಿದ್ದರು. ಭ್ರಷ್ಟಾಚಾರದ ನಿರ್ಮೂಲನೆಗಾಗಿ ಲೋಕಪಾಲವನ್ನು ಜಾರಿಗೊಳಿಸುವುದಾಗಿ ಹೇಳಿದ್ದರು. ರೈತರ ಬೆಳೆಯನ್ನು ಕಾಪಾಡುವ ಉದ್ದೇಶದಿ೦ದ ಏಕ ಮಾರುಕಟ್ಟೆಯನ್ನು ನಿರ್ಮಿಸುವುದಾಗಿ ಹೇಳಿಕೊಂಡಿದ್ದರು. ವರ್ಷದಲ್ಲಿ ಎರಡು ಕೋಟಿ ಉದ್ಯೋಗ ಸೃಷ್ಟಿಯೂ ಅವರ ಭರವಸೆಗಳಲ್ಲಿ ಒಂದು. ತೈಲ ಬೆಲೆ ಇಳಿಕೆಯೂ ಅದರಲ್ಲಿ ಒಂದು. ವಿಷಾದ ಏನೆಂದರೆ, ಮಧ್ಯಪ್ರದೇಶದಲ್ಲಿ 2004 ರಿಂದ 2016ರ ನಡುವೆ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 16,932. ಅಂದರೆ ದಿನವೊಂದಕ್ಕೆ 3 ಕ್ಕಿಂತಲೂ ಅಧಿಕ. ಇದೇ ಅವಧಿಯಲ್ಲಿ ಛತ್ತೀಸ್‍ಗಢದಲ್ಲಿ 12,979 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ ದಿನಕ್ಕೆ ಮೂವರು ರೈತರು. ರಾಜಸ್ತಾನದಲ್ಲಿ ಈ ಆತ್ಮಹತ್ಯೆಯ ಸಂಖ್ಯೆ- 5582. ಇವತ್ತಿಗೂ ರೈತರ ಉತ್ಪನ್ನಗಳನ್ನು ದಾಸ್ತಾನು ಇರಿಸಲು ಸರಿಯಾದ ಗೋದಾಮುಗಳಿಲ್ಲ. ಬೆಂಬಲ ಬೆಲೆಯಲ್ಲಿ ಸ್ಪಷ್ಟತೆಯಿಲ್ಲ. ಕಾರ್ಪೋರೇಟ್ ಸಂಸ್ಥೆಗಳ 3.5 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡುವುದಕ್ಕೆ ಯಾವ ಹಿಂಜರಿಕೆಯನ್ನೂ ತೋರದ ಕೇಂದ್ರ ಸರಕಾರ ರೈತರ ಸಾಲವನ್ನು ಮನ್ನಾ ಮಾಡಲು ಅಸಾಧ್ಯ ಎಂದೇ ಹೇಳುತ್ತಿದೆ. 2014ರಲ್ಲಿ ಈ ದೇಶದ ಮಂದಿ ಮತದಾನ ಮಾಡುವಾಗ ಬಿಜೆಪಿ ಹೀಗಿರಲಿಲ್ಲ.
ಆದರೆ,
ಆ ಬಳಿಕ ಒಂದು ರಾತ್ರಿ ದಿಢೀರ್ ಆಗಿ ನೋಟು ನಿಷೇಧ ಗೊಳಿಸಿತು. ಶ್ರೀಮಂತರಿಂದ ಹಣ ಪಡೆದು ಬಡವರಿಗೆ ಕೊಡುವ ಕ್ರಮ ಎಂದು ಪ್ರಧಾನಿಯವರು ಅದನ್ನು ಸಮರ್ಥಿಸಿಕೊಂಡರೂ ಬಡವರಿಗೆ ಯಾವ ರೀತಿಯಲ್ಲೂ ಅದು ಉಪಯೋಗಕ್ಕೆ ಬರಲಿಲ್ಲ. ನಿಜವಾಗಿ, ಚಲಾವಣೆಯಲ್ಲಿರುವ 86% ನೋಟುಗಳನ್ನು ನಿಷೇಧ ಮಾಡುವುದೆಂದರೆ, ಅದು ಮಕ್ಕಳಾಟಿಕೆಯಲ್ಲ. ಆ ನೋಟುಗಳು ಈ ದೇಶದ ಕೋಟ್ಯಾಂತರ ಜನರ ಬದುಕನ್ನು ಕಟ್ಟಿದ್ದುವು. ದಿಢೀರ್ ಆಗಿ ಆ ನೋಟುಗಳು ಅಮಾನ್ಯಗೊಳ್ಳುವುದೆಂದರೆ, ಮಾರುಕಟ್ಟೆ ಸ್ತಬ್ಧಗೊಂಡಂತೆ. ಆದ್ದರಿಂದಲೇ 100 ಕ್ಕಿಂತಲೂ ಅಧಿಕ ಮಂದಿ ಬೇರೆ ದಾರಿ ಕಾಣದೇ ಆತ್ಮಹತ್ಯೆ ಮಾಡಿಕೊಂಡರು. 15 ಕೋಟಿ ಜನರ ಪಾರಂಪರಿಕ ಉದ್ಯೋಗಗಳಿಗೆ ಅದು ಎರವಾಯಿತು. ಅತ್ತ ನೋಟು ನಿಷೇಧದಿಂದ ಕಪ್ಪು ಹಣವನ್ನು ನಿಯಂತ್ರಿಸುವುದಕ್ಕೂ ಸಾಧ್ಯವಾಗಲಿಲ್ಲ ಮತ್ತು ಇತ್ತ ಚಲನೆರಹಿತಗೊಂಡ ಮಾರುಕಟ್ಟೆಯನ್ನು ಸುಸ್ಥಿತಿಯಲ್ಲಿ ಇರಿಸುವುದಕ್ಕೂ ಸಾಧ್ಯವಾಗಲಿಲ್ಲ. ಇದು ನೋಟು ನಿಷೇಧದ ಬಹುದೊಡ್ಡ ವೈಫಲ್ಯ. ಯುವ ಸಮೂಹದಲ್ಲಿ ಮಾತ್ರವಲ್ಲ, ಸಣ್ಣ ಸಣ್ಣ ಉದ್ದಿಮೆದಾರರಲ್ಲೂ ಬಿಜೆಪಿಯ ಬಗ್ಗೆ ತೀವ್ರ ಅಸಂತೋಷ ವ್ಯಕ್ತವಾಗತೊಡಗಿತು. ಒಂದುವೇಳೆ, ವರ್ಷದಲ್ಲಿ ಎರಡು ಕೋಟಿ ಉದ್ಯೋಗವನ್ನು ಸೃಷ್ಟಿಸುವಲ್ಲಿ ಮೋದಿಯವರು ಯಶಸ್ವಿಯಾಗಿರುತ್ತಿದ್ದರೆ, ನೋಟು ನಿಷೇಧದ ಸಂಕಷ್ಟವನ್ನು ಜನರು ಮರೆಯುತ್ತಿದ್ದರೇನೋ. ಆದರೆ,
ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 15 ರಿಂದ 24 ವರ್ಷ ಗಳೊಳಗಿನ ಪ್ರಾಯದವರ 72 ಲಕ್ಷ ಉದ್ಯೋಗ ಅವಕಾಶಗಳನ್ನು ನೋಟು ನಿಷೇಧ ಕಸಿದುಕೊಂಡಿತು. ಇದರ ಜೊತೆ ಜೊತೆಗೇ ತೈಲ ಬೆಲೆಯಲ್ಲಿ ವಿಪರೀತ ಏರಿಕೆ ಉಂಟಾಯಿತು. ಬಿಜೆಪಿ ನಾಯಕರು ಏನೇ ಸಮರ್ಥಿಸಿಕೊಳ್ಳಲಿ, 2004 ರಿಂದ 2014ರ ವರೆಗಿನ ಮನ್‍ಮೋಹನ್ ಸಿಂಗ್ ಸರಕಾರದ ಅವಧಿಗೆ ಹೋಲಿಸಿದರೆ, ಬಿಜೆಪಿ ಎಲ್ಲಿ ಎಡವಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಅವಧಿಯಲ್ಲಿ ಮನ್ ಮೋಹನ್ ಸಿಂಗ್ ಸರಕಾರವು 14 ಕೋಟಿ ಜನರನ್ನು ಬಡತನ ರೇಖೆಯಿಂದ ಹೊರತಂದಿದೆ ಎಂಬುದು ಅಧಿಕೃತ ಅಂಕಿಅಂಶ. ರಾಜೀವ್ ಗಾಂಧಿ ಗ್ರಾಮೀಣ ರೊಜ್‍ಗಾರ್ ಯೋಜನೆ ಈ ಸಾಲಿನಲ್ಲಿ ಅಭೂತಪೂರ್ವ ಸಾಧನೆಯನ್ನು ಮಾಡಿತ್ತು. ಗ್ರಾಮೀಣ ಜನರಿಗೆ ತಿಂಗಳಲ್ಲಿ ಇಂತಿಷ್ಟು ಕೆಲಸವನ್ನು ಒದಗಿಸುವ ಅದ್ಭುತ ಯೋಜನೆ ಇದು. ಈ ಯೋಜನೆಯ ಮೇಲೆ ಮ್‍ಮೋಹನ್ ಸಿಂಗ್ ತೀವ್ರ ಗಮನವನ್ನು ಹರಿಸಿದ್ದರು. ಆದರೆ ಮೋದಿ ಆಡಳಿತದಲ್ಲಿ ಈ ಯೋಜನೆ ಬಹುತೇಕ ನಿಷ್ಕ್ರೀಯಗೊಂಡಿತು. ಮನ್‍ಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ಕೃಷಿ ಉತ್ಪನ್ನಗಳ ರಫ್ತು 5 ಪಟ್ಟು ಹೆಚ್ಚಳಗೊಂಡಿತ್ತು. ಈಗ ಅದು 21% ಕುಸಿದಿದೆ. ಇದೇವೇಳೆ, ಕೃಷಿ ಉತ್ಪನ್ನಗಳ ಆಮದು ಪ್ರಮಾಣ ಇವತ್ತು 60%ಕ್ಕೆ ಹೆಚ್ಚಿದೆ. 70% ರೈತರಿರುವ ದೇಶವೊಂದರಲ್ಲಿ ಕೃಷಿ ಉತ್ಪನ್ನಗಳ ಆಮದು ಪ್ರಮಾಣ ಹೆಚ್ಚಳಗೊಳ್ಳುವುದೂ ಮತ್ತು ರಫ್ತು ಪ್ರಮಾಣದಲ್ಲಿ ಇಳಿಕೆಯಾಗುವುದೂ ಎಂದರೆ, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ ಎಂದೇ ಅರ್ಥ. ಇದರ ಜೊತೆಗೆ ಪ್ರತಿಯೊಂದನ್ನೂ ಡಿಜಿಟಲ್ ಮಾಡುವ ಹುಚ್ಚುತನವನ್ನೂ ಕೇಂದ್ರ ಸರಕಾರ ಪ್ರದರ್ಶಿಸಿತು. ಪ್ರತಿಯೊಬ್ಬ ಭಾರತೀಯನೂ ಬ್ಯಾಂಕ್ ಖಾತೆ ತೆರೆಯಬೇಕೆಂದು ಒತ್ತಾಯಿಸಲಾಯಿತಲ್ಲದೇ ಜನ್‍ಧನ್ ಎಂದು ನಂಬಿಸಲಾಯಿತು. ನಿಜವಾಗಿ, ಬ್ಯಾಂಕುಗಳೇ ಇಲ್ಲದ ಗ್ರಾಮೀಣ ಭಾರತದಲ್ಲಿ ಕ್ಯಾಶ್‍ಲೆಸ್ ಅತ್ಯಂತ ಬೇಜವಾಬ್ದಾರಿ ಕ್ರಮ. ಜನರನ್ನು ಮತ್ತೆ ಬ್ಯಾಂಕಿನ ಮುಂದೆ ನಿಲ್ಲಿಸಿ ಅವರಿಂದ ಕನಿಷ್ಠ ಮೊತ್ತದಲ್ಲಿ ಬ್ಯಾಂಕ್ ಖಾತೆಯನ್ನು ಪ್ರಾರಂಭಿಸುವ ಅಭಿಯಾನ ನಡೆಯಿತು. ತಮಾಶೆ ಏನೆಂದರೆ, ಈ ಪ್ರಕ್ರಿಯೆಗಾಗಿ ಜನರು ತಮ್ಮ ನಿತ್ಯದ ಕೆಲಸವನ್ನು ಕೈಬಿಟ್ಟು ತೊಡಗಿಸಿಕೊಳ್ಳುತ್ತಿರುವಾಗಲೇ ಮಿನಿಮಮ್ ಬ್ಯಾಲೆನ್ಸ್ ನ ಹೆಸರಲ್ಲಿ ಬ್ಯಾಂಕುಗಳು ಅದೇ ಖಾತೆಯಿಂದ ದಂಡ ವಸೂಲು ಮಾಡತೊಡಗಿದುವು.
ನಿಜವಾಗಿ, ಪಂಚರಾಜ್ಯಗಳಲ್ಲಿ ಬಿಜೆಪಿಗಾದ ಸೋಲನ್ನು ಆಘಾತಕಾರಿಯಾಗಿ ನೋಡಬೇಕಿಲ್ಲ. ಮಾಧ್ಯಮಗಳು ಸೆಮಿಫೈನಲ್ ಎಂದು ಬಿಂಬಿಸಿದ ಕಾರಣಕ್ಕಾಗಿ ಈ ಸೋಲಿಗೆ ಮಹತ್ವ ಲಭ್ಯವಾಗಿದೆಯೇ ಹೊರತು ಬಿಜೆಪಿಯ ಜನಪ್ರಿಯತೆ ಕುಸಿಯು ತ್ತಿರುವುದನ್ನು ಈ ಮೊದಲಿನ ಚುನಾವಣೆಗಳೇ ಕೂಗಿ ಹೇಳಿದ್ದುವು. ಇದಕ್ಕೆ ಪ್ರಥಮ ಉದಾಹರಣೆ- ಗುಜರಾತ್ ವಿಧಾನ ಸಭಾ ಚನಾವಣೆ. ಆ ಬಳಿಕ ಕರ್ನಾಟಕ. ಇದರ ಜೊತೆಗೇ ವಿವಿಧ ರಾಜ್ಯಗಳಲ್ಲಿ ವಿವಿಧ ಸಂದರ್ಭಗಳಲ್ಲಿ ನಡೆದ ಉಪ ಚುನಾವಣೆಗಳು. ಇವೆಲ್ಲವೂ ಬಿಜೆಪಿಯ ನಿರಾಶಾಜನಕ ಭವಿಷ್ಯವನ್ನೇ ಹೇಳಿದ್ದುವು. ಆದರೆ, ಮಾಧ್ಯಮಗಳಿಗೆ ಈ ಸೂಚನೆ ಅರ್ಥವಾಗಲಿಲ್ಲ ಅಥವಾ ಅರ್ಥವಾಗದಂತೆ ನಟಿಸಿದುವು. ಅಂದಹಾಗೆ, ಸೆಮಿಫೈನಲ್ ಎಂದರೇನು? ಚುನಾವಣೆಯಲ್ಲಿ ಸೆಮಿಫೈನಲ್, ಫೈನಲ್, ಕ್ವಾರ್ಟರ್ ಫೈನಲ್, ಪ್ಲೆ ಆಫ್ ಎಂದೆಲ್ಲಾ ಇದೆಯೇ? ಅದನ್ನು ನಿರ್ಧರಿಸುವುದು ಹೇಗೆ? ಬಿಜೆಪಿಗೆ ಅನು ಕೂಲವಾಗಲೆಂದೇ ಯಾರೋ ಈ ಬಾರಿ ಸೆಮಿಫೈನಲ್ ಕಾನ್ಸೆಪ್ಟನ್ನು ಹುಟ್ಟು ಹಾಕಿರುವರೇನೋ ಎಂದು ಅನಿಸುತ್ತದೆ. ಬಿಜೆಪಿ ಸೋತರೂ ಬಿಜೆಪಿಯನ್ನೇ ಕೇಂದ್ರೀಯ ಸ್ಥಾನಲ್ಲಿ ಕೂರಿಸಿ ಚರ್ಚಿಸುವುದಕ್ಕೆ, ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ಮತ್ತೆ ಮತ್ತೆ ಪ್ರಸಾರ ಮಾಡಿ ಸೋಲಿನಲ್ಲೂ ಅವರ ಇಮೇಜನ್ನು ಎತ್ತಿಹಿಡಿಯುವುದಕ್ಕೆ ಹುಡುಕಿಕೊಂಡ ತಂತ್ರ ಇದು ಎಂದೇ ಹೇಳಬೇಕಾಗುತ್ತದೆ. ಅಲ್ಲ ಎಂದಾದರೆ, ಬಿಜೆಪಿ ಸೋತ ಬಳಿಕವೂ ಚರ್ಚೆಯಲ್ಲಿ ಬಿಜೆಪಿಯೇ ಕೇಂದ್ರ ಸ್ಥಾನವನ್ನು ಪಡೆದುಕೊಳ್ಳಲು ಕಾರಣವೇನು?
ಐಡಿಯಾಲಜಿಯ ಆಧಾರದಲ್ಲಿ ನಡೆಯಬೇಕಾಗಿದ್ದ ಚುನಾವಣೆಯನ್ನು ವಸ್ತು ರೂಪಕ್ಕಿಳಿಸಿದುದರಲ್ಲಿ ರಾಜಕೀಯ ಪಕ್ಷಗಳಿಗೆ ಪಾತ್ರ ಇರುವಂತೆಯೇ ಮಾಧ್ಯಮಗಳಿಗೂ ಪಾತ್ರ ಇದೆ. ಈಗ ಚುನಾವಣಾ ಪ್ರಣಾಳಿಕೆಯ ವಿಶ್ಲೇಷಣೆ ನಡೆಯುವುದು ಹೇಗೆಂದರೆ, ಮುಸ್ಲಿಮರಿಗೆ ಎಷ್ಟು, ಹಿಂದೂಗಳಿಗೆ ಎಷ್ಟು, ದಲಿತರಿಗೆ ಎಷ್ಟು, ರೈತರಿಗೆ ಎಷ್ಟು ಹೀಗೆ ವಸ್ತು ರೂಪದಲ್ಲಿ. ಚುನಾವಣೆ ಪ್ರಣಾಳಿಕೆಯಲ್ಲಿ ಪ್ರತಿಯೊಬ್ಬರೂ ತಂತಮ್ಮ ಪಾಲನ್ನು ಲೆಕ್ಕ ಹಾಕಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಒಂದು ಪಕ್ಷದ ಪ್ರಣಾಳಿಕೆ ಯಾವ ಐಡಿಯಾಲಜಿಯನ್ನು ಪ್ರತಿನಿಧಿಸುತ್ತದೆ, ಒಂದು ದೇಶವೆಂಬ ನೆಲೆಯಲ್ಲಿ ಅದು ಜನರನ್ನು ಹೇಗೆ ಪರಿಗಣಿಸುತ್ತದೆ, ದೇಶದ ಸಮಗ್ರ ಬೆಳವಣಿಗೆಯ ಬಗ್ಗೆ ಪ್ರಣಾಳಿಕೆಯ ನಿಲುವು ಏನು ಇತ್ಯಾದಿಗಳ ಸುತ್ತ ವಿಶ್ಲೇಷಣೆ ನಡೆಸುವ ಸೂಕ್ಷ್ಮತೆಯನ್ನು ಮಾಧ್ಯಮಗಳು ಇವತ್ತು ಬಹುತೇಕ ಕಳಕೊಂಡು ಬಿಟ್ಟಿವೆ. ಅಷ್ಟಕ್ಕೂ,
ಕಾಂಗ್ರೆಸನ್ನು ಪ್ರಬಲ ವಿರೋಧ ಪಕ್ಷವಾಗಿ ಎತ್ತಿ ನಿಲ್ಲಿಸಿದ ಚುನಾವಣೆ ಎಂಬ ನೆಲೆಯಲ್ಲಿ ಪಂಚರಾಜ್ಯ ಫಲಿತಾಂಶಕ್ಕೆ ಮಹತ್ವ ವಿದೆ. ಈ ಚುನಾವಣೆಗಿಂತ ಮೊದಲು ವಿರೋಧ ಪಕ್ಷಗಳ ನಾಯಕತ್ವ ಯಾರಲ್ಲಿರಬೇಕು ಎಂಬ ಬಗ್ಗೆ ಭಿನ್ನ ನಿಲುವುಗಳಿದ್ದುವು. ಕಾಂಗ್ರೆಸ್‍ನ ¸ ಸಾಮರ್ಥ್ಯದ ಬಗ್ಗೆ ಅನುಮಾನಗಳಿದ್ದುವು. ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ಸನ್ನು ಬೆದರಿಸುವ ಮತ್ತು ಸಾಮಾನ್ಯ ಪಕ್ಷವಾಗಿ ಕಾಣುವ ಹಂತಕ್ಕೆ ತಲುಪಿದ್ದುವು. ಇದೀಗ ಸ್ಥಿತಿ ಬದಲಾಗಿದೆ. ವಿರೋಧ ಪಕ್ಷಗಳ ನಾಯಕತ್ವ ಕಾಂಗ್ರೆಸ್‍ಗೆ ಮರಳಿದೆ. ಬಿಜೆಪಿ ನೇತೃತ್ವದಲ್ಲಿ ಎನ್‍ಡಿಎ ರಚನೆಗೊಂಡಂತೆ, ಕಾಂಗ್ರೆಸ್‍ನ ನೇತೃತ್ವದಲ್ಲೇ ವಿರೋಧ ಪಕ್ಷಗಳ ಒಕ್ಕೂಟ ಸಾಗಬೇಕಾದ ಅನಿವಾರ್ಯತೆ ಉಂಟಾಗಿದೆ. ನಿಜವಾಗಿ,
ಪಂಚ ರಾಜ್ಯ ಫಲಿತಾಂಶದ ಬಳಿಕದ ಸ್ಥಿತಿ ಇದು.
No comments:
Post a Comment