Wednesday, April 24, 2019

ಬದಲಾದ ಮುಸ್ಲಿಮ್ ಸಮುದಾಯದ ಎರಡು ಚಿತ್ರಗಳು



ಘಟನೆ-1
ಮಸೀದಿಯಿಂದ ಹೊರಗೆ ಬಂದೆ. ಓರ್ವ ಯುವಕ ಚಿಂತಾಕ್ರಾಂತನಾಗಿ ನಿಂತಿದ್ದ. ಏನು ಎಂದು ಪ್ರಶ್ನಿಸಿದೆ. ತಾನು ಬೆಂಬಲಿಸುವ ಪಕ್ಷದ ವಿರುದ್ಧ ವಾಟ್ಸಾಪ್‍ನಲ್ಲಿ ಏನೇನೋ ಬರೆಯಲಾಗಿದೆ. ಅದಕ್ಕೆ ಉತ್ತರ ಕೊಡಬೇಕಲ್ಲ ಎಂದ.
ಘಟನೆ-2
ಶುಕ್ರವಾರ ಮಸೀದಿಯಿಂದ ಹೊರಬಂದೆ. ರಕ್ತದಾನ ಶಿಬಿರ ಏರ್ಪಡಿಸಿರುವ ನೋಟೀಸನ್ನು ಹೊರಗಡೆ ವಿತರಿಸಲಾಗುತ್ತಿತ್ತು. ಇಂತಿಂಥ ಸಂಘಟನೆಯು ತನ್ನ ಇಷ್ಟನೇ ವರ್ಷದ ನೆನಪಲ್ಲಿ ಇಷ್ಟನೇ ರಕ್ತದಾನ ಶಿಬಿರವನ್ನು ಆಯೋಜಿಸುತ್ತಿದೆ ಎಂದೂ  ಅದರಲ್ಲಿ ಬರೆದಿತ್ತು.

ಈ ಎರಡೂ ಘಟನೆಗಳಲ್ಲಿ ಮುಸ್ಲಿಮ್ ಸಮುದಾಯ ಸಾಗಿಬಂದ ಹೆಜ್ಜೆಗುರುತುಗಳಿವೆ. ಎರಡ್ಮೂರು ದಶಕಗಳ ಹಿಂದೆ ಮುಸ್ಲಿಮ್ ಸಮುದಾಯದ ಮಸೀದಿಗಳು ಹೇಗಿದ್ದುವು ಮತ್ತು ಮುಸ್ಲಿಮರು ಹೇಗಿದ್ದರು ಎಂಬುದನ್ನು ಅವಲೋಕಿಸುವಾಗ ಈ  ಎರಡೂ ಘಟನೆಗಳು ಅಭೂತಪೂರ್ವವಾಗಿ ಕಾಣಬಹುದು. 3 ದಶಕಗಳ ಹಿಂದೆ ಮಸೀದಿಗಳು ಕೇವಲ ಆರಾಧನೆಗೆ ಮಾತ್ರ ಸೀಮಿತವಾಗಿದ್ದುವು. ಧಾರ್ಮಿಕ ಮತ ಪ್ರವಚನಗಳು ನಡೆಯುತ್ತಿದ್ದುವು. ಮಲಯಾಳಂ ಮತ್ತು ಉರ್ದು ಭಾಷೆಗಳ ಹೊರತು  ಉಳಿದ ಭಾಷೆಗಳು ಮಸೀದಿಗಳಿಗೆ ಅನ್ಯವಾಗಿದ್ದುವು. ಮತದಾನದ ಬಗ್ಗೆ ಮಸೀದಿಗಳಲ್ಲಿ ಘೋಷಣೆ ನಡೆಯುತ್ತಿರಲಿಲ್ಲ. ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಕರೆ ನೀಡುತ್ತಿರಲಿಲ್ಲ. ಪಡಿತರ ಚೀಟಿ ಮಾಡಿಕೊಳ್ಳುವ ಬಗ್ಗೆ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಬಗ್ಗೆ, ಕುಡಿಯುವ ನೀರಿನ ಜಾಗೃತಿಯ ಬಗ್ಗೆ.. ಹೀಗೆ ಯಾವುದರ ಬಗ್ಗೆಯೂ ಮಸೀದಿಗಳು ಮಾತಾಡುತ್ತಿರಲಿಲ್ಲ. ನಮಾಝï, ದುಆ, ಪ್ರವಚನ ಇತ್ಯಾದಿಗಳ ಹೊರತಾಗಿ ಮಸೀದಿಗಳು ದೀರ್ಘ ಮೌನಕ್ಕೆ ಜಾರಿದ್ದುವು. ಆದರೆ,  ಈ ಕಳೆದ ದಶಕದಲ್ಲಿ ಆಗಿರುವ ಬದಲಾವಣೆ ಖಂಡಿತ ಮಹತ್ವ ಪೂರ್ಣವಾದುದು. ಇವತ್ತು ಮಸೀದಿ ಬರೇ ನಮಾಝï ಇತ್ಯಾದಿ ಆರಾಧನಾ ಕರ್ಮಗಳ ಕೇಂದ್ರವಾಗಿಯಷ್ಟೇ ಉಳಿದಿಲ್ಲ. ರಾಜಕೀಯ ಬೆಳವಣಿಗೆಗಳ ಬಗ್ಗೆ ಚಿಂತಾಕ್ರಾಂತನಾದ ವ್ಯಕ್ತಿ  ಮಸೀದಿಯಲ್ಲಿ ಸಿಗಬಲ್ಲ ಎಂದಷ್ಟೇ ಅಲ್ಲ, ಮಸೀದಿಯಲ್ಲಿ ನಿಂತುಕೊಂಡೇ ಅದನ್ನು ಇತರರೊಂದಿಗೆ ಹಂಚಿಕೊಳ್ಳಬಲ್ಲ. ಮಸೀದಿಯ ಹೊರಗಡೆ ಮಸೀದಿಗೆ ಯಾವ ರೀತಿಯಲ್ಲೂ ಸಂಬಂಧಿಸಿಲ್ಲದ ರಕ್ತದಾನ ಶಿಬಿರದ ಬಗ್ಗೆ ನಾಗರಿಕರಲ್ಲಿ ಜಾಗೃತಿ  ಮೂಡಿಸುವ ನೋಟೀಸು ಹಂಚಬಲ್ಲ.
ಇವತ್ತು ಮಸೀದಿಗಳಲ್ಲಿ ನಡೆಯುವ ಪ್ರವಚನಗಳ ವಿಷಯ ಮತ್ತು ಅದನ್ನು ಮಂಡಿಸುವ ರೀತಿಯನ್ನೊಮ್ಮೆ ಪರಿಶೀಲಿಸಿ ನೋಡಿ. ಮಸೀದಿಯಲ್ಲಿ ಶುಕ್ರವಾರದ ಖುತುಬಾವನ್ನು ಅರಬಿ ಭಾಷೆಯಲ್ಲೇ  ನಿರ್ವಹಿಸಬೇಕೆಂಬ ವಾದದಲ್ಲಿ ಭಾರೀ ಸಡಿಲಿಕೆ  ಉಂಟಾಗಿಲ್ಲವಾದರೂ ಅರಬೇತರ ಭಾಷೆಯ ಮಹತ್ವವನ್ನು ಅರಿತ ಅಸಂಖ್ಯಾತ ಮಸೀದಿ ಮತ್ತು ಮೌಲಾನಾಗಳು ಇವತ್ತಿದ್ದಾರೆ. ಅರಬಿಯಲ್ಲೇ  ಖುತುಬಾ ನೀಡಿದರೂ ಆಬಳಿಕ ಅದೇ ಖುತುಬಾವನ್ನು ವಿವರಿಸುವ ನೆಪದಲ್ಲಿ ಜನಪರವಾದ ಮತ್ತು  ಸಾಮಾಜಿಕ ಕಾಳಜಿಯುಳ್ಳ ಪ್ರವಚನವನ್ನು ಅನೇಕ ಮೌಲಾನಾಗಳು ನೀಡುತ್ತಿದ್ದಾರೆ. ದಶಕಗಳ ಹಿಂದೆ ಈ ಸಾಧ್ಯತೆಯೇ ನಾಸ್ತಿಯಾಗಿತ್ತು. ಅಲ್ಲದೇ ಇಂಥ ನಾಸ್ತಿಯಾದ ಸಾಧ್ಯತೆಗಳು ಇನ್ನೂ ಅನೇಕ ಇದ್ದುವು. ಹೆಣ್ಣು ಮಕ್ಕಳ ಶಿಕ್ಷಣ, ವರದಕ್ಷಿಣೆ,  ತಲಾಕ್, ಬಹುಪತ್ನಿತ್ವ ಇತ್ಯಾದಿಗಳ ವಿಷಯದಲ್ಲಿ ಇವತ್ತಿನ ಹೊಸ ಪೀಳಿಗೆಯಲ್ಲಿ ಅಪಾರ ವಾದ ತಿಳುವಳಿಕೆಗಳು ಇವೆ. ಹೆಣ್ಣು ಮಕ್ಕಳಂತೂ ಶಿಕ್ಷಣ ಕ್ಷೇತ್ರದಲ್ಲಿ ಏರಿರುವ ಎತ್ತರ ಬಹಳ ಮೇಲಿನದು. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸರಣಿ ಯೋಜನೆಗಳು  ಮುಸ್ಲಿಮ್ ಸಮುದಾಯದ ಒಳಗಡೆಯೇ ಭಾರೀ ಪೈಪೋಟಿಯಿಂದ ನಡೆಯುತ್ತಿದೆ. ದಶಕಗಳ ಹಿಂದೆ ಹೆಣ್ಣು ಮಕ್ಕಳ ಉನ್ನತ ಶಿಕ್ಷಣದ ಬಗ್ಗೆ ಉದಾಸೀನಭಾವದಿಂದ ಉತ್ತರಿಸುತ್ತಿದ್ದ ಇದೇ ಸಮುದಾಯ ಇವತ್ತು ಸೂಕ್ತ ಶಿಕ್ಷಣ ಸಂಸ್ಥೆ ಯಾವುದು  ಎಂಬ ತಲಾಶೆಯಲ್ಲಿದೆ. ಇದು ಸಣ್ಣ ಬದಲಾವಣೆಯಲ್ಲ. ಹೆಣ್ಣಿಗೆ ವಿವಾಹ ಮಾಡಿಕೊಡುವುದೇ ಹೆತ್ತವರ ಬಹುಮುಖ್ಯ ಕರ್ತವ್ಯ ಎಂಬ ಭಾವವು ಶಿಕ್ಷಣ ಒದಗಿಸಿ ಕೊಡುವುದೇ ಬಹುಮುಖ್ಯ ಕರ್ತವ್ಯ ಎಂಬಂತೆ ಇವತ್ತು ಬದಲಾಗಿ ಬಿಟ್ಟಿದೆ. ಮುಸ್ಲಿಮ್  ಹೆಣ್ಣು ಮಕ್ಕಳು ಶಿಕ್ಷಣ ಮತ್ತು ಇತರ ಕ್ಷೇತ್ರಗಳಲ್ಲಿ ಉದ್ಯೋಗಿಗಳಾಗಿ ಮಿಂಚುತ್ತಿದ್ದಾರೆ. ಮುಸ್ಲಿಮ್ ಹೆಣ್ಣು ಮಗಳು ಪಿಹೆಚ್‍ಡಿ, ಮುಸ್ಲಿಮ್ ಹೆಣ್ಣು ಮಗಳು ಪಿಯುಸಿಯಲ್ಲಿ ಟಾಪರ್, ಐಎಎಸ್‍ನಲ್ಲಿ ಇಷ್ಟನೇ ರಾಂಕ್ ನಲ್ಲಿ ಉತ್ತೀರ್ಣ, ಇಂತಿಂಥ  ವಿಷಯಗಳಲ್ಲಿ ಅಮೇರಿಕ, ಬ್ರಿಟನ್, ಫ್ರಾನ್ಸ್ ಇತ್ಯಾದಿ ರಾಷ್ಟ್ರಗಳಲ್ಲಿ ಮಹಾಪ್ರಬಂಧ ಮಂಡನೆ, ವೈಜ್ಞಾನಿಕ ಸಂಶೋಧನೆಯಲ್ಲಿ ಇಂತಿಂಥ ಮುಸ್ಲಿಮ್ ಹೆಣ್ಣು ಮಗಳು ಭಾಗಿ, ಮುಸ್ಲಿಮ್ ಹೆಣ್ಣು ಮಗಳ ಕಾದಂಬರಿ, ಕತೆ, ಕವನ ಸಂಕಲನಗಳ ಬಿಡುಗಡೆ  ಹೀಗೆ ಪ್ರತಿದಿನ ಸುದ್ದಿಗಳು ಬರುವಷ್ಟು ಬದಲಾವಣೆಗಳು ನಡೆದಿವೆ. 3 ದಶಕಗಳ ಹಿಂದೆ ಮುಸ್ಲಿಮ್ ಗಂಡು ಮಕ್ಕಳ ಮುಂದೆ ವಿದ್ಯಾಭ್ಯಾಸದ ಕೇಂದ್ರಗಳಾಗಿ ಕಾಣಿಸುತ್ತಿದ್ದುದು ಕೇರಳದಲ್ಲಿ ಸ್ಥಾಪಿತವಾಗಿರುವ ಧಾರ್ಮಿಕ ಶಿಕ್ಷಣ ಕೇಂದ್ರಗಳು ಮಾತ್ರ. ಗಂಡು  ಮಕ್ಕಳು ಊರಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿತು ಮತ್ತು ಅಲ್ಲಿಗೇ ಶಿಕ್ಷಣವನ್ನು ಕೊನೆಗೊಳಿಸಿ ಮುಂದಿನ ಶಿಕ್ಷಣಕ್ಕಾಗಿ ಕೇರಳ ಮತ್ತಿತರ ಕಡೆ ಇರುವ ಧಾರ್ಮಿಕ ಶಿಕ್ಷಣ ಸಂಸ್ಥೆಗಳಿಗೆ ಸೇರ್ಪಡೆ ಗೊಳ್ಳುತ್ತಿದ್ದರು. ಅಲ್ಲಿ ಕೌಶಲ್ಯ ಅಭಿವೃದ್ಧಿಗೆ ಬೇಕಾದ  ಪರಿಕರ ಗಳು ಇದ್ದುದು ಕಡಿಮೆ. ಅಲ್ಲಿ ಕಲಿತು ಬಲಿತು ಬಂದ ಬಳಿಕ ಸರಕಾರಿ ಉದ್ಯೋಗಗಳಿಗೆ ಸೇರ್ಪಡೆಗೊಳ್ಳುವ ಹಾಗಿರಲಿಲ್ಲ. ಯಾಕೆಂದರೆ, ಅಲ್ಲಿ ಲಭ್ಯವಾಗುವ ಸರ್ಟಿಫಿಕೇಟ್‍ಗಳು ಮಸೀದಿ-ಮದ್ರಸಾಗಳಲ್ಲಿ ಉದ್ಯೋಗಿಯಾಗುವುದಕ್ಕೆ ಪೂರಕವೇ  ಹೊರತು ಸರಕಾರಿ ಉದ್ಯೋಗಿ ಯಾಗುವುದಕ್ಕೆ ಅಲ್ಲ. ಹೆಣ್ಣು ಮಕ್ಕಳಂತೂ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಪೂರ್ತಿಗೊಳಿಸಿದರೆ ಅದುವೇ ದೊಡ್ಡದು. ಹೀಗೆ ಮುಸ್ಲಿಮ್ ಸಮುದಾಯದ ಗಂಡು ಮತ್ತು ಹೆಣ್ಣು ಮಕ್ಕಳು ಕೌಶಲ್ಯ ಅಭಿವೃದ್ಧಿ ಮತ್ತು  ಸರಕಾರಿ ಉದ್ಯೋಗ ಗಳಲ್ಲಿ ಭಾಗಿಯಾಗದೇ ಉಳಿಯಬಹುದಾದಂಥ ವಾತಾವರಣ ವೊಂದು ನಿರ್ಮಾಣವಾಗಿತ್ತು. ಹಾಗಂತ,
ಇದಕ್ಕೆ ಅಪವಾದಗಳು ಇರಲಿಲ್ಲ ಎಂದಲ್ಲ. ಎಲ್ಲ ಮನೆಯ ಎಲ್ಲ ಗಂಡು ಮಕ್ಕಳೂ ಧಾರ್ಮಿಕ ಶಿಕ್ಷಣಕ್ಕಾಗಿ ಊರು ಬಿಟ್ಟು ಹೋದರು ಎಂದೂ ಅಲ್ಲ. ಇಂಥ ವಾತಾವರಣದಲ್ಲೂ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷವಾದುದನ್ನು ಸಾಧಿಸಿದವರಿದ್ದಾರೆ. ಉನ್ನತ  ಶಿಕ್ಷಣವನ್ನು ಪಡೆದು ಸರಕಾರದ ಆಯಕಟ್ಟಿನ ಜಾಗದಲ್ಲಿ ಸೇರಿಕೊಂಡವರಿದ್ದಾರೆ. ಸರಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಿಕೊಂಡವರಿದ್ದಾರೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಈ ಸಂಖ್ಯೆ ಕಡಿಮೆಯಾದರೂ ಶೂನ್ಯವೇನೂ  ಆಗಿರಲಿಲ್ಲ. ಅವರೂ ಪದವಿ ಮತ್ತು ಉನ್ನತ ಶಿಕ್ಷಣ ಪಡೆದದ್ದಿದೆ. ಶೈಕ್ಷಣಿಕ ಕ್ಷೇತ್ರದ ಮೇಲೆ ಅಜ್ಞಾನದಿಂದ ಕಟ್ಟಲಾಗಿದ್ದ ಬೇಲಿಯನ್ನು ದಾಟಿ ಉನ್ನತ ಶಿಕ್ಷಣ ಕೇಂದ್ರಗಳಲ್ಲಿ ಕಲಿತದ್ದಿದೆ. ಆದರೂ ಈ ಸಂಖ್ಯೆ ತೀರಾ ಸಣ್ಣದು. ಜೋರಾಗಿ ಉಸಿರಾಡಿದರೆ  ಚೆಲ್ಲಾಪಿಲ್ಲಿ ಯಾಗುವಷ್ಟು ಅಲ್ಪಸಂಖ್ಯಾತ ವಾದದ್ದು. ಅಂದಿನ ಆ ವಾತಾವರಣಕ್ಕೆ ಇಂದಿನ ದಿನಗಳನ್ನು ಮುಖಾಮುಖಿಗೊಳಿಸಿದರೆ, ಅಚ್ಚರಿ ಮತ್ತು ಅನೂಹ್ಯ ಭಾವವೊಂದು ನಿರ್ಮಾಣವಾಗುತ್ತದೆ. ಸಾಮಾಜಿಕ ಚಿಂತನಾ ಗತಿಯಲ್ಲಿ ಎಷ್ಟು ಬೇಗ  ಬದಲಾವಣೆಗಳಾಗಿ ಬಿಟ್ಟವು ಎಂದು ಅಚ್ಚರಿಯಾಗುತ್ತದೆ. ಈ ಬದಲಾವಣೆಯಲ್ಲಿ ದೊಡ್ಡ ಪಾತ್ರ ನಿರ್ವಹಿಸಿರುವುದು ಕಳೆದ ಒಂದೂವರೆ ದಶಕಗಳು. ಈ ದಶಕ ಮುಸ್ಲಿಮ್ ಸಮುದಾಯದ ಪಾಲಿಗೆ ಅತ್ಯಂತ ಸ್ಮರಣೀಯ. ಮಸೀದಿಯ ಹೊರಗಡೆ  ಚಿಂತಾಕ್ರಾಂತನಾಗಿ ನಿಂತ ಆ ಯುವಕ ಮತ್ತು ಮಸೀದಿಯ ಹೊರಗಡೆ ಹಂಚಲಾಗುತ್ತಿದ್ದ ರಕ್ತದಾನ ಶಿಬಿರದ ಆ ನೋಟೀಸು ಈ ದಶಕಗಳ ಕೊಡುಗೆ. ರಾಜಕೀಯದ ಕಾರಣಕ್ಕಾಗಿ ಮಸೀದಿ ಜಗಲಿಯಲ್ಲಿ ಚಿಂತಾಕ್ರಾಂತನಾಗಿ ನಿಂತ ಯುವಕನನ್ನು 3  ದಶಕಗಳ ಹಿಂದೆ ಗ್ರಹಿಸುವುದಕ್ಕೆ ಸಾಧ್ಯವೇ ಇರಲಿಲ್ಲ. ರಕ್ತದಾನ ಶಿಬಿರದ ನೋಟೀಸು ಬಿಡಿ, ಮುಸ್ಲಿಮ್ ಸಮುದಾಯ ರಕ್ತದಾನ ಶಿಬಿರವನ್ನು ಏರ್ಪಡಿಸುವುದೇ ಒಂದು ಅಚ್ಚರಿಯ ಸಂಗತಿಯಾಗಿರುತ್ತಿತ್ತು. ಆದರೆ ಇವತ್ತು ಆಮೂಲಾಗ್ರ  ಸುಧಾರಣೆಯಾಗಿದೆ. ಇದರ ಹಿಂದೆ ಸಂಪರ್ಕ ಮಾಧ್ಯಮದಲ್ಲಾದ ಅಮೋಘವಾದ ಕ್ರಾಂತಿಗೆ ದೊಡ್ಡ ಪಾತ್ರ ಇದೆ ಎಂದು ಅನಿಸುತ್ತದೆ.
ಹಿಂದೆ ಆಗಿದ್ದರೆ ಶಿಕ್ಷಣ ಸುಲಭವಾಗಿರಲಿಲ್ಲ. ಅದರಲ್ಲೂ ಪ್ರಾಥಮಿಕ ಶಿಕ್ಷಣವನ್ನು ದಾಟಿ ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಪಡೆಯಬೇಕೆಂದರೆ, ಹತ್ತಾರು ಕಿಲೋ ಮೀಟರ್ ದೂರ ಹೋಗಬೇಕಿತ್ತು. ಅಲ್ಲದೇ, ಈಗಿನಂತೆ ರಸ್ತೆಯಾಗಲಿ ವಾಹನ  ಸೌಲಭ್ಯಗಳಾಗಲಿ ಇರಲಿಲ್ಲ. ಈಗಿನಂತೆ ಸ್ಕಾಲರ್‍ಶಿಪ್‍ಗಳು, ಕಲಿಕೆಗಾಗಿ ನೆರವು ನೀಡುವ ಸಂಘಟನೆಗಳೂ ಇರಲಿಲ್ಲ. ಊರಲ್ಲಿ ಸರಕಾರಿ ಉನ್ನತ ಶಿಕ್ಷಣ ಸಂಸ್ಥೆಗಳು ಇಲ್ಲದೇ ಇರುವುದು ಮತ್ತು ಶೈಕ್ಷಣಿಕ ನೆರವು ನೀಡಬಲ್ಲ ಸಂಘಸಂಸ್ಥೆಗಳು ಬಹುತೇಕ  ಶೂನ್ಯವಾಗಿದ್ದುದು ಮುಸ್ಲಿಮ್ ಸಮುದಾಯದ ಗಂಡು ಮತ್ತು ಹೆಣ್ಣು ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿಯಲು ಕಾರಣವಾಯಿತು. ಜೊತೆಗೇ ಧಾರ್ಮಿಕ ಶಿಕ್ಷಣವು ಬಹುತೇಕ ಉಚಿತವಾಗಿ ನಡೆಯುವ ಪ್ರಕ್ರಿಯೆಯಾದ್ದರಿಂದ ಅದರೆಡೆಗೆ ಸೆಳೆತವೂ  ಉಂಟಾಯಿತು. ಆದರೆ ಯಾವಾಗ ಮಾಧ್ಯಮ ಮತ್ತು ರಸ್ತೆ ಸಂಪರ್ಕ ಕ್ಷೇತ್ರದಲ್ಲಿ ಬದಲಾವಣೆಗಳಾದುವೋ ಸಮುದಾಯದಲ್ಲಿ ಅದರ ಗರಿಷ್ಠ ಪ್ರತಿಫಲನ ಕಾಣಿಸಿಕೊಂಡಿತು. ಹಳ್ಳಿ ಕೇರಿಗಳಿಗೂ ನಗರ ಗಳಿಗೂ ರಸ್ತೆ ಸಂಪರ್ಕ ಮತ್ತು ವಾಹನ  ಸೌಲಭ್ಯಗಳು ಏರ್ಪಟ್ಟ ಮೇಲೆ ಸಮುದಾಯದ ಶೈಕ್ಷಣಿಕ ನಿಲುವಿನಲ್ಲಿ ಅಪೂರ್ವ ಪಲ್ಲಟ ಗಳು ನಡೆದುಹೋದವು. ಇದರ ಜೊತೆಗೇ ಇಂಟರ್ ನೆಟ್ ಸೌಲಭ್ಯ ಮತ್ತು ಮೊಬೈಲ್ ಕ್ರಾಂತಿಯು ಸಮುದಾಯದ ಆಲೋಚನಾ ಗತಿಯನ್ನೇ ತಿರುಗಿಸಿದುವು.  ಜ್ಞಾನದ ಹೊಸ ಕವಾಟಗಳು ಈ ಮೂಲಕ ತೆರೆದುಕೊಂಡವು. ಈ ಹಿಂದೆ ಜ್ಞಾನದ ಒರತೆಯಾಗಿ ಮೌಲಾನಾಗಳು ಮಾತ್ರವೇ ಇದ್ದರೆ ಈಗ ಆ ಒರತೆ ಎಲ್ಲೆಲ್ಲೂ ಕಾಣಿಸಿಕೊಳ್ಳತೊಡಗಿದುವು. ಧಾರ್ಮಿಕ, ಶೈಕ್ಷಣಿಕ, ರಾಜಕೀಯ, ಸಾಮಾಜಿಕ, ಆರ್ಥಿಕ  ಹೀಗೆ ಪ್ರತಿ ವಿಷಯಗಳ ಮೇಲೂ ಧಾರ್ಮಿಕ ಜ್ಞಾನವನ್ನು ಗೂಗಲ್ ನೀಡತೊಡಗಿತು. ಸಮುದಾಯದ ಯುವಪೀಳಿಗೆಯು ಧರ್ಮ ಜ್ಞಾನಕ್ಕೆ ಗೂಗಲ್ ಅನ್ನು ಮೌಲಾನಾರಿಗೆ ಪರ್ಯಾಯವಾಗಿ ಬಳಸಿಕೊಳ್ಳತೊಡಗಿದುವು. ಇದರಿಂದಾಗಿ ಧಾರ್ಮಿಕ  ಜ್ಞಾನಕ್ಕಾಗಿ ಮೌಲಾನಾಗಳ ಅವಲಂಬನೆ ಕಡಿಮೆಯಾಗ ತೊಡಗಿತು. ಯಾವುದೇ ವಿಷಯದ ಬಗ್ಗೆ ಧರ್ಮದ ಅಭಿಪ್ರಾಯವೇನು ಎಂಬುದನ್ನು ಮೌಲಾನಾಗಳಲ್ಲಿ ವಿಚಾರಿಸುವ ಮೊದಲು ಆ ಬಗ್ಗೆ ಗೂಗಲ್‍ನಲ್ಲಿ ಜಾಲಾಡಿ ಪೂರ್ವಜ್ಞಾನ ಪಡೆದುಕೊಂಡು  ಹೋಗುವ ವಾತಾವರಣ ನಿರ್ಮಾಣವಾಗತೊಡಗಿತು. ಸಂವಹನ ಕ್ಷೇತ್ರದಲ್ಲಿ ಆಗುತ್ತಿರುವ ಈ ಬದಲಾವಣೆಗಳಿಗೆ ನಿಧಾನವಾಗಿ ಮಸೀದಿಗಳು ಮತ್ತು ಅಲ್ಲಿನ ಮೌಲಾನಾಗಳು ಸ್ಪಂದಿಸದೇ ಬೇರೆ ದಾರಿಯಿರಲಿಲ್ಲ. ಒಂದುವೇಳೆ, ಇಂಟರ್ ನೆಟ್ ಕ್ರಾಂತಿಯು  ತಂದ ಬದಲಾವಣೆಗೆ ಒಗ್ಗಿಕೊಳ್ಳದಿದ್ದರೆ ಮತ್ತು ತಮ್ಮ ಪರಂಪರಾಗತ ನಿಲುವಿನಲ್ಲಿ ತಿದ್ದುಪಡಿ ಮಾಡಿಕೊಳ್ಳದೇ ಹೋದರೆ ತಾವು ಹಿಂದುಳಿಯಬೇಕಾದೀತು ಎಂಬ ಭಾವ ಅವರಲ್ಲಿ ಮೂಡ ತೊಡಗಿತು. ಅದರ ಪರಿಣಾಮವೇ ಮಸೀದಿಗಳಲ್ಲಿ ಶುಕ್ರವಾರದಂದು ಜನಪರ ಮತ್ತು ಸಾಮಾಜಿಕ  ಕಾಳಜಿಯುಳ್ಳ ಪ್ರವಚನಗಳು ನಡೆಯತೊಡಗಿರುವುದು. ಶೈಕ್ಷಣಿಕ, ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ಮೇಲೆ ಜನಜಾಗೃತಿ ಮೂಡಿಸುವ ಹೊಣೆಯನ್ನು ಹೊತ್ತಂತೆ ಮಸೀದಿಗಳು ವರ್ತಿಸುತ್ತಿರುವುದು. ಅಂದಹಾಗೆ, ವಾಟ್ಸಾಪಿ ನಲ್ಲಿ ಬಂದಿರುವ  ರಾಜಕೀಯ ಚರ್ಚೆಯ ಬಗ್ಗೆ ಚಿಂತಾಕ್ರಾಂತನಾಗಿ ನಿಂತಿರುವ ಯುವಕ ಕೂಡ ಇದೇ ಸಂಪರ್ಕ ಕ್ರಾಂತಿಯ ಸೃಷ್ಟಿ.
ಮಸೀದಿ ಹೊರಗಡೆ ಎದುರಾದ ರಕ್ತದಾನ ಶಿಬಿರದ ನೋಟೀಸು ಮತ್ತು ಆ ಯುವಕ- ಬದಲಾದ ಮುಸ್ಲಿಮ್ ಸಮುದಾಯದ ಚಿತ್ರಗಳಂತೆ ನನಗೆ ಕಂಡರು.

No comments:

Post a Comment