ಪ್ರಧಾನಿ ಮೋದಿಯವರು ತನ್ನ ಸಾಧನೆಗಳ ಬದಲು ಹಿಂದೂಸ್ತಾನ್-ಪಾಕಿಸ್ತಾನ್‍ಗಳನ್ನು ಹೇಳಿಕೊಂಡು ಯಾಕೆ ಮತ ಯಾಚಿಸುತ್ತಾರೆ ಅನ್ನುವ ಪ್ರಶ್ನೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರಲ್ಲಿ ಉತ್ತರ ಇದೆ.
ಎಪ್ರಿಲ್ 9ರಂದು ಇಸ್ರೇಲ್‍ನ ಪಾರ್ಲಿಮೆಂಟ್‍ಗೆ ನಡೆದ ಚುನಾವಣೆಯಲ್ಲಿ ನೇತನ್ಯಾಹು ಅವರ ಲಿಕುಡ್ ಪಕ್ಷ ಸತತ ನಾಲ್ಕನೇ ಬಾರಿ ಜಯ ಗಳಿಸಿತು. ಈ ಬಾರಿ ಸೋಲು ಖಚಿತ ಎಂಬಂತಿದ್ದ ನೇತನ್ಯಾಹುರಿಗೆ ಜನರು ಮತ್ತೆ ಮತ ಚಲಾಯಿಸಿದರು. ನರೇಂದ್ರ ಮೋದಿಯವರನ್ನು ರಫೇಲ್ ಹಗರಣ ಹೇಗೆ ಸುತ್ತಿ ಕೊಂಡಿದೆಯೋ ಅದಕ್ಕಿಂತಲೂ ಬಿಗಿಯಾಗಿ ನೇತನ್ಯಾಹುರನ್ನು ಭ್ರಷ್ಟಾಚಾರದ ಬಳ್ಳಿ ಸುತ್ತಿಕೊಂಡಿದೆ. ಖುದ್ದು ಅವರ ಅಟಾರ್ನಿ ಜನರಲ್ ಅವರೇ ಲಂಚ ಮತ್ತು ವಂಚನೆಯ ಆರೋಪ ಹೊರಿಸಿದ್ದಾರೆ. ಇನ್ನಿತರ ಪ್ರಕರಣಗಳೂ ಅವರ ಮೇಲಿವೆ. ಮೋದಿಯವರ ಪಕ್ಕ ಪಾಕಿಸ್ತಾನ ಇದ್ದರೆ ನೇತನ್ಯಾಹುರ ಪಕ್ಕ ಫೆಲೆಸ್ತೀನ್ ಇದೆ. ಚುನಾವಣೆಯ ಸಮಯದಲ್ಲಿ ನೇತನ್ಯಾಹು ಮಾತಾಡಿದ್ದು ಫೆಲೆಸ್ತೀನ್‍ನ ಬಗ್ಗೆ. 2018 ಜುಲೈಯಲ್ಲಿ ಅತ್ಯಂತ ವಿವಾದಾತ್ಮಕ ಕಾನೂನೊಂದನ್ನು ನೇತನ್ಯಾಹು ಪಾಸು ಮಾಡಿ ಕೊಂಡರು. ಅದರ ಪ್ರಕಾರ, ‘ಇಸ್ರೇಲ್ ಯಹೂದಿಯರ ರಾಷ್ಟ್ರ. ಜೆರೂಸಲೇಮ್ ಅದರ ರಾಜಧಾನಿ. ಹಿಬ್ರೂ ಅದರ ರಾಷ್ಟ್ರ ಭಾಷೆ. ಇಸ್ರೇಲನ್ನು ಆಳುವ ಹಕ್ಕು ಯಹೂದಿಯರಿಗೆ ಮಾತ್ರ ಇದೆ..’ ಹೀಗೆ ಸಾಗುತ್ತದೆ ಆ ಕಾಯ್ದೆ. ಒಂದು ರೀತಿಯಲ್ಲಿ, ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿರುವ ಪೌರತ್ವ ಕಾಯ್ದೆಯ ಹಾಗೆ ಇದು. ಅಧಿಕಾರಕ್ಕೆ ಬಂದರೆ ದೇಶದಾದ್ಯಂತ ಎನ್.ಆರ್.ಸಿ. ಯನ್ನು ಜಾರಿಗೆ ತರುವುದಾಗಿ ಬಿಜೆಪಿ ಹೇಳಿಕೊಂಡಿದೆ. ನೇತನ್ಯಾಹು ಅವರು ಚುನಾವಣಾ ಪ್ರಚಾರದ ಉದ್ದಕ್ಕೂ ತೀವ್ರ ರಾಷ್ಟ್ರವಾದವನ್ನು ಪ್ರತಿಪಾದಿಸಿದರು. ತಾನು ಎಂದೂ ಫೆಲೆಸ್ತೀನ್ ರಾಷ್ಟ್ರವನ್ನು ಅನುಮತಿಸುವುದಿಲ್ಲ ಎಂದು ಘೋಷಿಸಿದರು. ಇವರಿಗೆ ಬೆಂಬಲವಾಗಿ ನಿಂತದ್ದೂ ಯಾರು ಗೊತ್ತೇ? ಅಮೇರಿಕದ ಟ್ರಂಪ್, ರಷ್ಯಾದ ವ್ಲಾದಿಮಿರ್ ಪುಟಿನ್ ಮತ್ತು ಬ್ರೆಝಿಲ್‍ನ ಅಧ್ಯಕ್ಷ ಜೈರೋ ಬೋಲ್ಸನಾರೋ. ಇವರಲ್ಲಿ ಬೋಲ್ಸನಾರೋ ಅಂತು ತಾನು ಸೆಕ್ಯುಲರಿಸಂ ವಿರೋಧಿ ಎಂದು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಾರೆ. ಎಡವಿರೋಧಿ ಮತ್ತು ವಲಸೆ ವಿರೋಧಿಯಾಗಿ ಗುರುತಿಸಿಕೊಂಡಿರುವ ಅವರನ್ನು ಬ್ರೆಝಿಲ್‍ನ ಪ್ರಮುಖ ಪತ್ರಕರ್ತ ಗ್ಲೇನ್ ಗ್ರೀಸ್‍ವಲ್ಡ್, ಸಂಶೋಧಕರಾದ ಫೆಡ್ರಿಕೋ ಫಿನ್‍ಚೆಲ್‍ಸ್ಟೈನ್ ಮತ್ತು ಆಗಸ್ಟೋ ಪಿನೋಚೆಟ್ ಮುಂತಾದವರು ಫ್ಯಾಸಿಸ್ಟ್ ಎಂದು ಕರೆದಿದ್ದಾರೆ. 1964ರಿಂದ 1985ರ ವರೆಗೆ ಬ್ರೆಝಿಲ್‍ನಲ್ಲಿ ಮಿಲಿಟರಿ ಆಡಳಿತವಿತ್ತು. ಜೈರೋ ಬೊಲ್ಸನಾರೋ ಆ ಸರ್ವಾಧಿ ಕಾರವನ್ನು ಸಮರ್ಥಿಸುತ್ತಾರೆ. ಬ್ರಿಟನ್ನಿನ The Economic ಪತ್ರಿಕೆಯು ರಾಡಿಕಲ್-ರಿಲೀಜಿಯಸ್-ನ್ಯಾಶನಲಿಸ್ಟ್ ಎಂದು ಜೈರೋರನ್ನು ಉಲ್ಲೇಖಿಸಿದೆ. ಸದ್ಯ ಇದೊಂದು ಬಗೆಯ ಟ್ರೆಂಡ್. ಹಂಗರಿಯ ಪ್ರಧಾನಿ ವಿಕ್ಟರ್ ಓರ್ಬಾನ್ ಕೂಡ ಇವರಲ್ಲಿ ಒಬ್ಬರು. ಪ್ರಧಾನಿ ಮೋದಿಯಾಗಲಿ, ಟ್ರಂಪ್ ಆಗಲಿ, ನೇತನ್ಯಾಹು ಅವರಾಗಲಿ ಯಾರೂ ತಮ್ಮ ಸಾಧನೆಗಳನ್ನು ಹೇಳಿಕೊಳ್ಳುವುದಿಲ್ಲ. ರಾಷ್ಟ್ರೀಯವಾದಿ ರಾಜಕಾರಣದಲ್ಲಿ ಸಾಧನೆಗಳು ಮುಖ್ಯವೇ ಅಲ್ಲ. ರಾಷ್ಟ್ರವೇ ಮುಖ್ಯ. ತನ್ನ ಎಲ್ಲ ಕ್ರೌರ್ಯ, ಭ್ರಷ್ಟಾಚಾರ, ತಪ್ಪು ಗಳನ್ನು ರಾಷ್ಟ್ರದ ಹೆಸರಲ್ಲಿ ಮರೆಸಿ ಬಿಡುವುದು ಅದರ ಶೈಲಿ. ಟ್ರಂಪ್ ಅವರು ಪದೇ ಪದೇ ಮೆಕ್ಸಿಕೋದಿಂದ ಅಮೇರಿಕಕ್ಕೆ ಬರುವ ವಲಸಿಗರನ್ನು ತೋರಿಸುತ್ತಾರೆ. ಆಗಾಗ ಉತ್ತರ ಕೊರಿಯ, ಇರಾನ್, ಚೀನಾಗಳನ್ನು ಕಟುವಾಗಿ ಟೀಕಿಸುತ್ತಾರೆ. ನರೇಂದ್ರ ಮೋದಿಯವರು ಇದಕ್ಕಿಂತ ಭಿನ್ನವಲ್ಲ. ಅವರು ಪಾಕಿಸ್ತಾನವನ್ನು ತೋರಿಸುತ್ತಾರೆ. ನೇತನ್ಯಾಹು ಫೆಲೆಸ್ತೀನನ್ನು ತೋರಿಸುತ್ತಾರೆ. ತಮಾಷೆ ಏನೆಂದರೆ,
ಈ ಮೂವರು ತೋರಿಸುವ ರಾಷ್ಟ್ರಗಳೂ ದುರ್ಬಲವಾದವು. ಇಸ್ರೇಲ್ ಎದುರು ಫೆಲೆಸ್ತೀನ್ ಏನೂ ಅಲ್ಲ. ಭಾರತದೆದುರು ಪಾಕಿಸ್ತಾನವೂ ಅಷ್ಟೇ. ಅಮೇರಿಕಕ್ಕಂತೂ ಮೆಕ್ಸಿಕೋ ಆಗಲಿ ಉತ್ತರ ಕೊರಿಯಾ, ಇರಾನ್ ಆಗಲಿ ಯಾವುದೂ ಪ್ರತಿ ಸ್ಪರ್ಧಿಗಳೇ ಅಲ್ಲ. ಆದರೆ ರಾಷ್ಟ್ರದ ಭದ್ರತೆಗೆ ಈ ಅಕ್ಕ-ಪಕ್ಕದ ರಾಷ್ಟ್ರಗಳು ಅಪಾಯಕಾರಿ ಎಂದು ನಂಬಿಸುವುದು ಮತ್ತು ಜನರ ಗಮನವನ್ನು ಅದರ ಸುತ್ತಲೇ ಗಿರಕಿ ಹೊಡೆಸುವುದು ರಾಷ್ಟೀಯವಾದಿ ರಾಜಕಾರಣದ ಹೆಚ್ಚುಗಾರಿಕೆ. ನಿಜವಾಗಿ, ಪುಲ್ವಾಮ ಘಟನೆ- ಸರಕಾರದ ಬಹುದೊಡ್ಡ ವೈಫಲ್ಯ. ಉರಿ ಭಯೋತ್ಪಾದನಾ ದಾಳಿಯೂ ಇಂಥದ್ದೊಂದು ವೈಫಲ್ಯದ ಭಾಗ. ಅಚ್ಚರಿ ಏನೆಂದರೆ, ಮುಂಬೈಯ ಮೇಲೆ ನಡೆದ ಭಯೋತ್ಪಾದನಾ ದಾಳಿಗೆ ಮನ್‍ಮೋಹನ್ ಸಿಂಗ್ ಸರಕಾರವನ್ನು ನೇರವಾಗಿ ಹೊಣೆ ಮಾಡಿದ್ದ ಮತ್ತು ಗುಪ್ತಚರ ವೈಫಲ್ಯಕ್ಕಾಗಿ ಟೀಕಿಸಿದ್ದ ಇದೇ ಬಿಜೆಪಿ ಇವತ್ತು ಪುಲ್ವಾಮದ ಹೆಸರಲ್ಲಿಯೇ ಮತ ಯಾಚಿಸುತ್ತಿದೆ. ಹಾಗಂತ, ಮುಂಬೈ ದಾಳಿಗೆ ಮನ್‍ಮೋಹನ್ ಸಿಂಗ್ ಹೊಣೆ ಎಂದಾದರೆ ಪುಲ್ವಾಮದಲ್ಲಿ ಯೋಧರ ಮೇಲಾದ ದಾಳಿಗೆ ಮೋದಿ ಹೊಣೆಯಲ್ಲವೇ ಎಂದು ಪ್ರಶ್ನಿಸಬಹುದು. ಉರಿಯಲ್ಲಿ ನಡೆದ ಭಯೋತ್ಪಾದನಾ ದಾಳಿಯನ್ನು ಯಾಕೆ ಮೋದಿಯವರ ವೈಫಲ್ಯ ಎಂದು ಹೇಳಬಾರದು ಎಂದೂ ಪ್ರಶ್ನಿಸ ಬಹುದು. ಮುಂಬೈ ದಾಳಿಗೆ ಗುಪ್ತಚರ ವಿಭಾಗವನ್ನು ಹೊಣೆ ಮಾಡುವುದಾದರೆ ಪುಲ್ವಾಮ ಮತ್ತು ಉರಿ ದಾಳಿಗೂ ಗುಪ್ತಚರ ವಿಭಾಗವನ್ನು ಹೊಣೆ ಮಾಡಬಹುದು ಎಂದೂ ವಾದಿಸಬಹುದು. ಆದರೆ ಈ ವಾದವನ್ನು ಮೀರಿ ಬೆಳೆಯುವುದು ಮತ್ತು ಆ ಬಗೆಯ ವಾದವನ್ನೇ ದೇಶದ್ರೋಹಿಯಾಗಿ ಬಿಂಬಿಸುವುದು ರಾಷ್ಟ್ರವಾದಿ ರಾಜಕಾರಣದ ವೈಶಿಷ್ಟ್ಯ. ಹಿಟ್ಲರ್ ಇದೇ ತಂತ್ರವನ್ನು ಪ್ರಯೋಗಿಸಿದ್ದ. ಸುಳ್ಳು ಮತ್ತು ಭ್ರಮೆ ಇವೆರಡೂ ಈ ರಾಜ ಕಾರಣದ ಪ್ರಬಲ ಆಯುಧಗಳು. ಇನ್ನೊಂದು- ಬೆದರಿಕೆ.
1922 ಫೆಬ್ರವರಿ 5ರಂದು ಈಗಿನ ಉತ್ತರ ಪ್ರದೇಶದ
ಘೋರಕ್‍ಪುರದಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಗುಂಪುಗೂಡಿದ್ದರು. ಗಾಂಧೀಜಿಯವರು
ಕರೆಕೊಟ್ಟ ಅಸಹಕಾರ ಚಳುವಳಿಯ ಭಾಗವಾಗಿ ಅವರೆಲ್ಲ ಅಲ್ಲಿ ಸೇರಿದ್ದರು. ಜನರ ಸಂಖ್ಯೆ
ಹೆಚ್ಚಾದಂತೆಯೇ ಆಯೋಜಕರ ನಿಯಂತ್ರಣವೇ ತಪ್ಪಿ ಹೋಯಿತು. ಪೊಲೀಸರು ಮತ್ತು ಜನರ ನಡುವೆ
ಘರ್ಷಣೆ ಉಂಟಾಯಿತು. ಪೊಲೀಸರು ಬಂದೂಕು ಸಿಡಿಸಿದರು. ಸಿಟ್ಟಿಗೆದ್ದ ಜನರು ಪೊಲೀಸ್
ಠಾಣೆಗೇ ಬೆಂಕಿಕೊಟ್ಟರು. ಇದರಿಂದಾಗಿ 22 ಪೊಲೀಸರು ಮತ್ತು ಮೂವರು ನಾಗರಿಕರು
ಸಾವಿಗೀಡಾದರು. ಓರ್ವ ನಾಯಕನ ಮಟ್ಟಿಗೆ ಆತನಲ್ಲಿರುವ ಮುತ್ಸದ್ದಿತನ ಮತ್ತು ಅವಕಾಶವಾದಿತನ
ಎರಡಕ್ಕೂ ಸಮಾನ ಅವಕಾಶ ಇರುವ ಸಂದರ್ಭ ಅದು. ಗಾಂಧೀಜಿಯವರ ಮುಂದೆ ಎರಡು
ಆಯ್ಕೆಗಳಿದ್ದುವು. 1. ಬೆಂಕಿಯನ್ನು ಸಮರ್ಥಿಸು ವುದು. ಬ್ರಿಟಿಷ್ ಸರಕಾರದ ದೌರ್ಜನ್ಯಗಳೇ
ಜನರು ಕೆರಳಲು ಕಾರಣ ಎಂದು ಹೇಳುವುದು. ಪೊಲೀಸು ಠಾಣೆಗೆ ಬೆಂಕಿ ಕೊಟ್ಟ ತನ್ನ
ಅನುಯಾಯಿಗಳನ್ನು ದೇಶಪ್ರೇಮಿಗಳು ಎಂದು ಕೊಂಡಾಡು ವುದು. 2. ಆ ಕೃತ್ಯವನ್ನು ಮಾನವತೆಯ
ವಿರುದ್ಧವಾಗಿ ಕಾಣುವುದು. ಹಿಂಸೆ ಮತ್ತು ಅಹಿಂಸೆಗಳ ನಡುವಿನ ಮುಖಾಮುಖಿಯಲ್ಲಿ ತಾನು
ಎಂದೂ ಅಹಿಂಸೆಯ ಜೊತೆಯೇ ಇರುತ್ತೇನೆ ಎಂದು ಸಾರುವುದು. ತಪ್ಪುಗಾರರು ತನ್ನ
ಅನುಯಾಯಿಗಳೆಂಬ ಕಾರಣಕ್ಕೆ ಅವರನ್ನು ಸಮರ್ಥಿಸಲಾರೆ ಎಂದು ಹೇಳಿಬಿಡುವುದು. ಗಾಂಧೀಜಿ
ಯವರಿಗೆ ಆ ಘಟನೆಯನ್ನು ಸಮರ್ಥಿಸಿಕೊಳ್ಳುವುದರಿಂದ ಲಾಭ ಇತ್ತು. ಅಲ್ಲಿ ಸೇರಿದ್ದ
ಅನುಯಾಯಿಗಳೆಲ್ಲ ಅವರನ್ನು ಇನ್ನಷ್ಟು ಪ್ರೀತಿಸುತ್ತಿದ್ದರು. ಕೆಚ್ಚೆದೆಯ ನಾಯಕನಾಗಿ
ಗುರುತಿಸಿಕೊಳ್ಳುವುದಕ್ಕೆ ಅದು ಅವಕಾಶ ಮಾಡಿಕೊಡುತ್ತಿತ್ತು. ಆದರೆ ಗಾಂಧೀಜಿ ಈ ಜನಪ್ರಿಯ
ದಾರಿಯನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ತಾನೇ ಕರೆ ಕೊಟ್ಟ ಚಳವಳಿಯಾದರೂ ಮತ್ತು ತನ್ನ ಆ
ಕರೆಯನ್ನು ಆಲಿಸಿಯೇ ಅಲ್ಲಿ ಜನರು ಸೇರಿಕೊಂಡಿದ್ದರೂ ಹಿಂಸೆಗೆ ತನ್ನ ಬೆಂಬಲವಿಲ್ಲ
ಎಂದರು. ಈ ವಿಷಯದಲ್ಲಿ ಅವರು ಎಷ್ಟು ನಿಷ್ಠುರರಾಗಿದ್ದರೆಂದರೆ 1922 ಫೆ. 12ರಂದು
ಅಸಹಕಾರ ಚಳ ವಳಿಯನ್ನೇ ಹಿಂತೆಗೆದುಕೊಂಡರು. 5 ದಿನ ಉಪವಾಸ ಸತ್ಯಾಗ್ರಹ ನಡೆಸಿದರು. ತನ್ನ
ಅ ನುಯಾಯಿಗಳನ್ನು ಅಹಿಂಸೆಯ ವಿಷಯದಲ್ಲಿ ಇನ್ನಷ್ಟು ತರಬೇತುಗೊಳಿಸಬೇಕಾಗಿದೆ ಎಂದು
ಸಾರಿದರು. ತಾನು ನಂಬಿದ ಅಹಿಂಸೆಯ ಸಿದ್ಧಾಂತಕ್ಕೆ ಗಾಂಧೀಜಿ ತೋರಿದ ಬದ್ಧತೆ ಇದು.
ನೇತನ್ಯಾಹು, ನರೇಂದ್ರ ಮೋದಿ, ಟ್ರಂಪ್‍ಗಳೆಲ್ಲ ಬೆತ್ತಲಾಗು ವುದು ಇಲ್ಲೇ. ಗುಜರಾತ್
ಹತ್ಯಾಕಾಂಡದ ವೇಳೆ ನರೇಂದ್ರ ಮೋದಿಯವರು ತನ್ನವರ ತಪ್ಪುಗಳನ್ನೆಲ್ಲ ಪರೋಕ್ಷವಾಗಿ
ಸಮರ್ಥಿಸಿಕೊಂಡರು. ಹತ್ಯಾಕಾಂಡಕ್ಕೆ ಸಹಕರಿಸಿದ ಆರೋಪದಲ್ಲಿ ಬಂಧಿತರಾದ ಪೊಲೀಸ್
ಅಧಿಕಾರಿಗಳ ರಕ್ಷಣೆಗೆ ನಿಂತರು. ಗುಜರಾತ್ ಹತ್ಯಾ ಕಾಂಡಕ್ಕೆ ಸಂಬಂಧಿಸಿ ಮಾಡಲಾದ
ಮಾಧ್ಯಮ ಸಂದರ್ಶನ ಮತ್ತು ಕೇಳಲಾದ ಪ್ರಶ್ನೆಗಳಿಗೆಲ್ಲ ಅವರು ಕೊಟ್ಟಿರುವ ಉತ್ತರಗಳು
ಎಷ್ಟು ನಿರ್ಲಿಪ್ತಭಾವದಿಂದ ಕೂಡಿವೆಯೆಂದರೆ, ಅವು ಗಾಂಧೀಜಿಯ ಸಮೀಪಕ್ಕೂ
ಸುಳಿಯುವುದಿಲ್ಲ. ಜಮ್ಮುವಿನ ಕಥುವಾದಲ್ಲಿ ಬಾಲೆಯೊಬ್ಬಳ ಮೇಲೆ ನಡೆದ ಅತ್ಯಾಚಾರ ಮತ್ತು
ಅದನ್ನು ಬೆಂಬಲಿಸಿ ತನ್ನ ಪಕ್ಷದ ಮುಖಂಡರೇ ನಡೆಸಿದ ರ್ಯಾಲಿಯ ಬಗೆಗೂ ಮೋದಿ
ವ್ಯಕ್ತಪಡಿಸಿದ್ದು ದಿವ್ಯ ಮೌನವನ್ನೇ. ಆ ಬಾಲೆಯ ಪರ ಸಹಾನುಭೂತಿ ವ್ಯಕ್ತಪಡಿಸಲಿಲ್ಲ.
2014ರಲ್ಲಿ
ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಆರಿಸುವಲ್ಲಿ ಎರಡು ಪ್ರಮುಖ ಗುಂಪುಗಳು ಮುಖ್ಯ
ಪಾತ್ರ ವಹಿಸಿದ್ದುವು. ಒಂದು- ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗ ವಾದರೆ, ಇನ್ನೊಂದು-
ಕಾರ್ಪೋರೇಟ್ ಮತ್ತು ಉನ್ನತ ವರ್ಗ. ಮ ನ್‍ಮೋಹನ್ ಸಿಂಗ್ ಸರಕಾರದ ಮೇಲೆ ಕಾರ್ಪೋರೇಟ್
ಮತ್ತು ಶ್ರೀಮಂತ ಗುಂಪಿಗೆ ಅಸಮಾಧಾನಗಳಿದ್ದುವು. ಅದಕ್ಕೆ ಮುಖ್ಯ ಕಾರಣ- ಮನ್‍ಮೋಹನ್
ಸಿಂಗ್ ಸರಕಾರ ತಂದ ಕೆಲವು ಕ್ರಾಂತಿಕಾರಿ ನಿರ್ಧಾರಗಳಾಗಿದ್ದವು. ಇವುಗಳಲ್ಲಿ ಮಹಾತ್ಮಾ
ಗಾಂಧಿ ಗ್ರಾಮೀಣ ಉದ್ಯೋಗ ಯೋಜನೆ (MNREGA ), ಮಾಹಿತಿ ಹಕ್ಕು ಕಾಯ್ದೆ (RTI), ಶಿಕ್ಷಣ
ಹಕ್ಕು ಕಾಯ್ದೆ (RTE) ಮತ್ತು ಭೂಸ್ವಾಧೀನ ಕಾಯ್ದೆ 2013 ಮುಖ್ಯವಾದವು. ಇನ್ನು,
ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗವು ಹಗರಣಗಳನ್ನು ವಿಪರೀತವಾಗಿ ತಲೆಗೆ ಹಚ್ಚಿಕೊಂಡವು.
ಇಂಥ ಸನ್ನಿವೇಶದಲ್ಲಿ ಈ ಗುಂಪು ತಮ್ಮ ಪಾಲಿನ ಮಸೀಹನಾಗಿ ಮೋದಿಯನ್ನು ಆಯ್ಕೆ
ಮಾಡಿಕೊಂಡಿತು. ಅವರ ಭಾಷಣಗಳಲ್ಲಿ ಭರವಸೆ ಇಟ್ಟಿತು. ಭ್ರಷ್ಟಾಚಾರ ರಹಿತ ಮತ್ತು
ಕಾರ್ಪೋರೇಟ್ ಪ್ರೇಮಿ ಮಾತುಗಳನ್ನು ಮೋದಿಯವರು ಎಗ್ಗಿಲ್ಲದೇ ಹರಿಯಬಿಟ್ಟರು. ಸಬ್ಕಾ
ವಿಕಾಸ್ ಎಂಬ ಘೋಷಣೆಯು ಜನಸಾಮಾನ್ಯರಲ್ಲಿ ಹೊಸ ಭರವಸೆಯನ್ನು ಮೂಡಿಸಿತು. ಈಗ ಆ 2014
ಕಳೆದು ಈ 2019ರಲ್ಲಿ ನಾವಿದ್ದೇವೆ. ಮೋದಿ ಮಾಡಿರುವ ಬಹುದೊಡ್ಡ ಸಾಧನೆ ಏನೆಂದರೆ,
ದೇಶದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಅಭಿವೃದ್ಧಿಯನ್ನು ಅಳೆಯುವ
ವಿಧಾನವನ್ನೇ ಬದಲಿಸಿರುವುದು. ಮನ್‍ಮೋಹನ್ ಸಿಂಗ್ ಅವಧಿಯಲ್ಲಿ ಜಿಡಿಪಿ ಲೆಕ್ಕಾಚಾರಕ್ಕೆ
ಯಾವ ಮೆಥಡೋಲಜಿ ಯನ್ನು ಬಳಸಲಾಗುತ್ತಿತ್ತೋ ಅದನ್ನೇ ತಾರುಮಾರುಗೊಳಿಸಿರುವುದು. ಮೋದಿ
ಸರಕಾರವು ಇವತ್ತು ತನಗೆ ತೋಚಿದಂತೆ ಅಭಿವೃದ್ಧಿ ದರಗಳನ್ನು ಹೇಳುತ್ತಾ ತಿರುಗುತ್ತಿದೆ.
ಒಬ್ಬರು 10 ಕೋಟಿ ಉದ್ಯೋಗ ಸೃಷ್ಟಿಸಿದ್ದೇವೆಂದು ಹೇಳುವಾಗ ಇನ್ನೊಬ್ಬರು 5 ಕೋಟಿ
ಅನ್ನುತ್ತಾರೆ. ದತ್ತಾಂಶ ಅಳೆಯುವ ಮೂಲ ರೀತಿಯನ್ನೇ ಧ್ವಂಸ ಮಾಡಿರುವುದರ ಪರಿಣಾಮ ಇದು.
ಅಭಿವೃದ್ಧಿಯ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಮೋದಿಯು ಅಂತಿಮವಾಗಿ ಅಭಿವೃದ್ಧಿಯನ್ನು
ಅಳೆಯುವ ವಿಧಾನವನ್ನೇ ಅಸ್ತವ್ಯಸ್ತಗೊಳಿಸಿದ ಕತೆ ಇದು. ಇದರಾಚೆಗೆ ಹೇಳಿಕೊಳ್ಳುವುದಕ್ಕೆ
ಅವರಲ್ಲೇನೂ ಇಲ್ಲ. ಈ ವಾರದ ಅಂಕಣ
No comments:
Post a Comment