1971
1977
1989
2014
ಭಾರತೀಯ ಪ್ರಜಾತಂತ್ರ ಈವರೆಗೆ ಸಾಗಿ ಬಂದ ಹಾದಿಯನ್ನು ಹೀಗೆ ನಾಲ್ಕು ಘಟ್ಟಗಳಾಗಿ ವಿಂಗಡಿಸಬಹುದು. 1970ರ ವರೆಗೆ ‘ಜನಪ್ರಿಯ ರಾಜಕಾರಣ’ ಎಂಬುದು ಇರಲಿಲ್ಲ. ಜನಪ್ರಿಯ ರಾಜ ಕಾರಣವೆಂದರೆ- ಒಂದೇ ವಿಷಯದ ಮೇಲೆ ಜನರ ಗಮನವನ್ನು ಸೆಳೆಯುವುದು, ಆ ವಿಷಯವನ್ನು ಚರ್ಚೆಯಲ್ಲಿಡುವುದು ಮತ್ತು ಅದನ್ನು ಜನರ ಧ್ವನಿಯಾಗಿ ಪರಿವರ್ತಿಸುವುದು. ಉದಾಹರಣೆಗೆ, 2014ರ ಅಚ್ಛೇ ದಿನ್ ಘೋಷವಾಕ್ಯ.
ಗಾಂಧೀಜಿ ಮತ್ತು ನೆಹರೂ ಇಬ್ಬರೂ ಅತ್ಯಂತ ವರ್ಚಸ್ವೀ ವ್ಯಕ್ತಿಗಳಾಗಿದ್ದರೂ ‘ಜನಪ್ರಿಯ ಚಳವಳಿ’ ಮತ್ತು ‘ಜನಪ್ರಿಯ ರಾಜಕಾರಣ’ವನ್ನು ಆಶ್ರಯಿಸಿ ಬದುಕಲಿಲ್ಲ. ಅಸಹಕಾರ ಚಳವಳಿಯ ಭಾಗವಾಗಿ ಚೌರಿಚೌರಾದಲ್ಲಿ ಜನರು ಪೊಲೀಸ್ ಠಾಣೆಗೆ ಬೆಂಕಿ ಕೊಟ್ಟು 22 ಪೊಲೀಸರನ್ನು ಸಾಯಿಸಿದಾಗ ಗಾಂಧೀಜಿ ಎಷ್ಟು ವ್ಯಗ್ರಗೊಂಡರೆಂದರೆ ತಾನೇ ಕರೆಕೊಟ್ಟ ಅಸಹಕಾರ ಚಳವಳಿಯನ್ನೇ ರದ್ದುಗೊಳಿಸಿದರು. ಈ ನಿರ್ಧಾರವು ನೆಹರೂ ಮತ್ತು ಭಗತ್ ಸಿಂಗ್‍ರಂಥ ಅಂದಿನ ಪ್ರಮುಖ ನಾಯಕರಲ್ಲೇ ಅಸಮಾಧಾನವನ್ನು ತರಿಸಿತ್ತು. ನೆಹರೂ ಅಂತೂ ಈ ನಿರ್ಧಾರವನ್ನು ಹಿನ್ನಡೆ ಎಂದು ಕರೆದರು. ನಿಜವಾಗಿ, ಆ ಬೆಂಕಿ ಕೊಟ್ಟ ಘಟನೆ ಯನ್ನೇ ವೈಭವೀಕರಿಸಿ ಮತ್ತು ಆ ಸಂದರ್ಭದಲ್ಲಿ ಪೊಲೀಸರು ಹಾರಿಸಿದ ಗುಂಡಿಗೆ ಬಲಿಯಾದ ಮೂವರು ಚಳವಳಿಗಾರರನ್ನು ಹುತಾತ್ಮರೆಂದು ಬಣ್ಣಿಸಿ ಗಾಂಧೀಜಿಯವರಿಗೆ ದೇಶದಾದ್ಯಂತ ಪ್ರತಿ ಚಳವಳಿಯನ್ನು ಹುಟ್ಟು ಹಾಕಬಹುದಿತ್ತು. ತನ್ನ ಅಸಹಕಾರ ಚಳವಳಿಯನ್ನು ಇನ್ನಷ್ಟು ತೀಕ್ಷ್ಣ ಮತ್ತು ಕ್ರಿಯಾಶೀಲಗೊಳಿಸುವುದಕ್ಕೆ ಚೌರಿಚೌರಾ ಘಟನೆಯನ್ನು ಬಳಸಿಕೊಳ್ಳಬಹುದಿತ್ತು. 2014ರಲ್ಲಿ ನರೇಂದ್ರ ಮೋದಿಯವರು ಅಚ್ಛೇ ದಿನ್ ಅನ್ನುವ ಘೋಷವಾಕ್ಯವನ್ನು ಹೇಗೆ ಜನರ ಘೋಷವಾಕ್ಯವಾಗಿಸಿದರೋ ಹಾಗೆಯೇ ಚೌರಿಚೌರಾವನ್ನು ಜನರ ಆಡು ಮಾತಾಗಿಸಿ ಇಡೀ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ರೂಪವನ್ನು ಕೊಡಬಹುದಿತ್ತು. ಆದರೆ ಗಾಂಧೀಜಿ ಈ ಜನಪ್ರಿಯ ನೀತಿಯನ್ನು ಕೈಬಿಟ್ಟು ತಾನು ನಂಬಿರುವ ಅಹಿಂಸಾ ಸಿದ್ಧಾಂತಕ್ಕೆ ಮಹತ್ವ ನೀಡಿದರು. ನೆಹರೂ ಕೂಡ ಇದೇ ದಾರಿಯನ್ನು ಆಯ್ಕೆ ಮಾಡಿಕೊಂಡರು. ಅವರು ಜನಪ್ರಿಯ ರಾಜಕಾರಣವೆಂಬ ಥಿಯರಿಯನ್ನು ನೆಚ್ಚಿಕೊಳ್ಳಲಿಲ್ಲ. ‘ಮುಸ್ಲಿಮ್ ಪಾಕಿಸ್ತಾನ’ದಂತೆ ‘ಹಿಂದೂ ಭಾರತ’ದ ಬೇಡಿಕೆಯು ಆ ಕಾಲದಲ್ಲಿ ಬಲವಾಗಿ ಕೇಳಿ ಬಂದಾಗಲೂ ಅವರು ಸೆಕ್ಯುಲರ್ ಭಾರತಕ್ಕೆ ಒತ್ತು ಕೊಟ್ಟರು. ಒಂದುವೇಳೆ, ಭಾರತವನ್ನು ಹಿಂದೂ ಭಾರತವನ್ನಾಗಿಸುವುದರ ಪರ ಅವರು ನಿಲ್ಲುತ್ತಿದ್ದರೆ ಅದು ಅವರಿಗೆ ಈ ಸೆಕ್ಯುಲರ್‍ಗಿಂತ ಹೆಚ್ಚಿನ ಜನಪ್ರಿಯತೆ ಒದಗಿಸಿಕೊಡುವ ಎಲ್ಲ ಸಾಧ್ಯತೆಗಳೂ ಇದ್ದುವು. ಅಲ್ಲದೇ ಮುಸ್ಲಿಮ್ ಪಾಕಿಸ್ತಾನಕ್ಕೆ ಹಿಂದೂ ಭಾರತ ಎಂಬ ನುಡಿಗಟ್ಟನ್ನು ರಚಿಸಿ ದೇಶದಾದ್ಯಂತ ಮಾರುವುದಕ್ಕೆ ಮತ್ತು ತನ್ನ ವರ್ಚಸ್ಸನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವು ದಕ್ಕೆ ಅದು ದಾರಿ ತೆರೆದು ಕೊಡಬಹುದಿತ್ತು. ಮಾತ್ರವಲ್ಲ, ಇಂಥದ್ದೊಂದು ತೀರ್ಮಾನಕ್ಕೆ ಎದುರಾಗಬಹುದಾದ ವಿರೋಧವನ್ನು ಮುಸ್ಲಿಮ್ ಪಾಕಿಸ್ತಾನವನ್ನು ತೋರಿಸಿ ತಿರಸ್ಕರಿಸುವುದೂ ಅವರಿಗೆ ಕಷ್ಟವಾಗುತ್ತಿರಲಿಲ್ಲ. ಆದರೆ ನೆಹರೂ ಸೆಕ್ಯುಲರ್ ಭಾರತ ಮತ್ತು ವಿಜ್ಞಾನ ಭಾರತವನ್ನು ಆಯ್ದುಕೊಂಡರು. ಅಂಧಶ್ರದ್ಧೆ, ಮೂಢ ನಂಬಿಕೆ, ಕಟ್ಟುಕತೆಗಳೇ ಪ್ರಾಬಲ್ಯ ಸ್ಥಾಪಿಸಿದ್ದ ಕಾಲದಲ್ಲಿ ಮತ್ತು ಅವಕ್ಕೆಲ್ಲ ಧರ್ಮದ ಕವಚವನ್ನು ತೊಡಿಸಿ ಜನರನ್ನು ಶೋಷಿಸುತ್ತಿದ್ದ ದಿನಗಳಲ್ಲಿ ನೆಹರೂ ಅವರು ವೈಜ್ಞಾನಿಕ ಲಾಭಗಳನ್ನು ಜನರಿಗೆ ತಲುಪಿಸಬಯಸಿದರು. ಅಂಧಶ್ರದ್ಧೆಗೆ ಎದುರಾಗಿ ಆರೋಗ್ಯ ಕೇಂದ್ರಗಳನ್ನು ತೆರೆದರು. ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಸ್ಥಾಪನೆಗೆ ಮುನ್ನುಡಿ ಇಟ್ಟರು. ಜನರನ್ನು ಆಲೋಚನೆಗೆ ಹಚ್ಚುವುದು ಮತ್ತು ಅದರ ಆಧಾರದಲ್ಲಿ ಮೌಢ್ಯಗಳಿಂದ ಹೊರತರುವುದು ಅವರ ಉದ್ದೇಶವಾಗಿತ್ತು. ಒಂದು ರೀತಿಯಲ್ಲಿ ಇದು ಕಠಿಣ ಕೆಲಸ. ಜನರ ಭಾವನೆಗೆ ವಿರುದ್ಧವಾಗಿ ನಿಲ್ಲುವ ಭಂಡ ಧೈರ್ಯ. ಆದರೆ ಇವರ ಮಗಳು ಇಂದಿರಾ ಗಾಂಧಿ ಭಿನ್ನ ಹಾದಿಯನ್ನು ತುಳಿದರು.
1971ರಲ್ಲಿ ಗರೀಬಿ ಹಠಾವೋ ಅನ್ನುವ ಘೋಷವಾಕ್ಯವನ್ನು ಉರುಳಿಸಿ ಅದನ್ನು ಅವರು ಜನರ ಧ್ವನಿಯಾಗಿಸಿದರು. ತನ್ನ ವಿರೋಧಿಗಳನ್ನು ಕೇವಲ ಈ ಒಂದೇ ಘೋಷವಾಕ್ಯದಿಂದ ಮೆಟ್ಟಿನಿಂತರು. ಭಾರತದಲ್ಲಿ ಜನಪ್ರಿಯ ರಾಜಕಾರಣವು ಇಲ್ಲಿಂದ ಪ್ರಾರಂಭವಾಯಿತು ಎಂದು ಹೇಳಬಹುದು. ಜನರು ಆವರೆಗೆ ಗ್ರಹಿಸದೇ ಇದ್ದ ಘೋಷವಾಕ್ಯವೊಂದನ್ನು ಸೃಷ್ಟಿಸುವಲ್ಲಿ ಮತ್ತು ಬಹುಸಂಖ್ಯಾತ ಜನರ ಧ್ವನಿಯಾಗಿ ಅದನ್ನು ಮಾರ್ಪಡಿಸುವಲ್ಲಿ ಇಂದಿರಾ ಯಶಸ್ವಿಯಾದರು. ಇದರ ಜೊತೆಗೇ ಇಂದಿರಾ ಎಂದರೆ ಇಂಡಿಯಾ ಅನ್ನುವ ಘೋಷವಾಕ್ಯವೂ ಜನಪ್ರಿಯ ವಾಯಿತು. ಇದಾದ ಬಳಿಕ ಜಯಪ್ರಕಾಶ್ ನಾರಾಯಣ್ ಅವರು 1977ರಲ್ಲಿ ತುರ್ತು ಪರಿಸ್ಥಿತಿ ವಿರೋಧಿ ಐಕಾನ್ ಆಗಿ ಮೂಡಿಬಂದರು. ಗರೀಬಿ ಹಠಾವೋ ಎಂಬ ಘೋಷವಾಕ್ಯವನ್ನು ಉರುಳಿಸಿದ ಇಂದಿರಾ ಗಾಂಧಿಗೆ ಕೇವಲ 6 ವರ್ಷಗಳಲ್ಲಿ ಎದುರಾದ ಪ್ರಬಲ ಪ್ರತಿರೋಧ ಅಂದರೆ, ಜಯಪ್ರಕಾಶ್ ನಾರಾಯಣ್. ಅವರು ಪ್ರಜಾತಂತ್ರ ಮತ್ತು ಸಂವಿಧಾನದ ನಿಜ ರಕ್ಷಕನಂತೆ ಗೋಚರಿಸಿದರು. ಇಂದಿರಾ ಇವೆರಡರ ವಿರೋಧಿಯಾಗಿ ಬಿಂಬಿತವಾದರು. ಜಯಪ್ರಕಾಶ್‍ರ ಮೇಲೆ ಈ ದೇಶ ಭಾರೀ ಭರವಸೆಯನ್ನು ವ್ಯಕ್ತಪಡಿಸಿತು. ಅಂದಿನ ಬಹುಸಂಖ್ಯಾತ ಭಾರತೀಯರ ಧ್ವನಿಗೆ ಜಯಪ್ರಕಾಶ್ ವೇದಿಕೆಯಾದರು. ಅವರು ತಮ್ಮ ಧ್ವನಿಯನ್ನು ಜನರ ಧ್ವನಿಯಾಗಿ ಪರಿವರ್ತಿಸಿದರು.
1989ರಲ್ಲಿ ವಿ.ಪಿ. ಸಿಂಗ್ ಮೂಲಕ ಮೂರನೇ ಘಟ್ಟದ ‘ಜನಪ್ರಿಯ ರಾಜಕಾರಣ’ ಯಶಸ್ಸು ಪಡೆಯಿತು. ಅವರಂತೂ ಭ್ರಷ್ಟಾಚಾರ ವಿರೋಧಿ ಮಸೀಹನಂತೆ ಕಂಡುಬಂದರು. ಅಂದು ಅವರು ಭ್ರಷ್ಟಾಚಾರವನ್ನು ಜನರಿಗೆ ಅರ್ಥ ಮಾಡಿಸುವುದಕ್ಕಾಗಿ ಬೆಂಕಿ ಪೆಟ್ಟಿಗೆ, ಬ್ಲೇಡು ಸಹಿತ ಜನರ ದಿನನಿತ್ಯದ ಬಳಕೆಯ ವಸ್ತುಗಳನ್ನು ರೂಪಕವಾಗಿ ಎತ್ತಿಕೊಂಡರು. ಬೆಂಕಿಪೆಟ್ಟಿಗೆಗೆ ವ್ಯಯಿಸುವ ಹಣದ ಒಂದು ಪಾಲನ್ನು ರಾಜೀವ್ ಗಾಂಧಿ ಕಬಳಿಸಿದ್ದಾರೆ ಎಂಬರ್ಥದಲ್ಲಿ ಮಾತಾಡಿದರು. ‘ಗಲೀ ಗಲೀ ಮೆ ಶೋರ್ ಹೈ, ರಾಜೀವ್ ಗಾಂಧಿ ಚೋರ್ ಹೈ’ ಎಂಬ ನುಡಿಗಟ್ಟನ್ನು ರಚಿಸಿಕೊಂಡು ಬೋಫೋರ್ಸ್ ಹಗರಣವನ್ನು ಜನರಿಗೆ ಪರಿಚಯಿಸಿದರು. ಜನರಿಗೆ ಆ ನುಡಿಗಟ್ಟು ಇಷ್ಟ ವಾಯಿತು. ಬರಬರುತ್ತಾ ಅದು ಬಹುಜನರ ಆಡುಮಾತಾಗಿ ಪರಿವರ್ತಿತವಾಯಿತು. ಇದರ ಬಳಿಕ ಜನಪ್ರಿಯ ರಾಜಕಾರಣದಲ್ಲಿ ಬೆಳಗಿದವರು ನರೇಂದ್ರ ಮೋದಿ. 2014ರಲ್ಲಿ ಅವರ ಭಾಷಣ, ಆಂಗಿಕ ಅಭಿನಯಗಳು ಭಾರತೀಯರಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದುವು. ಅಚ್ಛೇದಿನ್ ಆಯೇಗಾ ಎಂಬ ಮಾತನ್ನು ಅವರು ಉದುರಿಸಿದರು. ಹಿಂದೂ ಹೃದಯ ಸಾಮ್ರಾಟ್ ಎಂಬುದಾಗಿ ಅವರನ್ನು ಬಿಂಬಿಸಲಾಯಿತು. ಗುಜರಾತ್ ಮಾದರಿಯನ್ನು ಅವರ ಬೆನ್ನಿಗೆ ಅಂಟಿಸಲಾಯಿತು. ಅಭಿವೃದ್ಧಿಯ ಹರಿಕಾರನಾಗಿ, ಬಡವರಿಗೆ ಚಾಯ್‍ವಾಲಾ ಆಗಿ, ನಗರ ಮತ್ತು ಗ್ರಾಮೀಣ ಪ್ರದೇಶದ ಜನರ ಭರವಸೆಯಾಗಿ ಅವರು ಮೂಡಿಬಂದರು. ಹಾಗಂತ, ಈ ಅಲೆಗೆ ಪ್ರತಿಯಾಗಿ ವಿರೋಧ ಪP್ಷÀವಾದ ಕಾಂಗ್ರೆಸ್‍ನಲ್ಲಿ ಯಾವ ಅಸ್ತ್ರವೂ ಇರಲಿಲ್ಲ. ಅಚ್ಛೇ ದಿನ್‍ಗೆ ಪರ್ಯಾಯವಾಗಿ ಒಂದು ಘೋಷವಾಕ್ಯವನ್ನು ರಚಿಸುವ ಉಮೇದೂ ಕಾಂಗ್ರೆಸ್‍ನಲ್ಲಿ ಕಾಣಿಸಲಿಲ್ಲ. ನರೇಂದ್ರ ಮೋದಿಯವರ ಭಾಷಣ ಚಾತುರ್ಯಕ್ಕೆ ಎದುರಾಗಿ ಕಾಂಗ್ರೆಸ್ ಓರ್ವ ಭಾಷಣ ಚತುರನನ್ನೂ ಪರಿಚಯಿಸಲಿಲ್ಲ. ಇಂತಹ ಸ್ಥಿತಿಯಲ್ಲಿ ಸಹಜವಾದುದೇ ಘಟಿಸಿತು. ನರೇಂದ್ರ ಮೋದಿಯವರ ಅಚ್ಛೇದಿನ್ ಆಯೇಗಾ ಘೋಷವಾಕ್ಯ ಜನರ ಘೋಷವಾಕ್ಯವಾಗಿ ಬದಲಾಯಿತು.
ಸದ್ಯದ ಸ್ಥಿತಿ ಏನೆಂದರೆ, ಬಿಜೆಪಿಯ ಬತ್ತಳಿಕೆಯಲ್ಲಿರುವ ಘೋಷವಾಕ್ಯಗಳೆಲ್ಲವೂ ಖಾಲಿಯಾಗಿವೆ. ಈ ಬಾರಿ ಎಲ್ಲೂ ಅಚ್ಛೇದಿನ್‍ನ ಪ್ರಸ್ತಾಪವಿಲ್ಲ. ಗುಜರಾತ್ ಮಾದರಿಯ ಉಲ್ಲೇಖ ಇಲ್ಲ. ಕಪ್ಪು ಹಣ ಸದ್ದು ಮಾಡುತ್ತಿಲ್ಲ. ರಾಮಮಂದಿರ ಇಲ್ಲ. ಅಂದಹಾಗೆ, 2014ರಲ್ಲಿದ್ದ ಮತ್ತು 2019ರಲ್ಲೂ ಚಾಲ್ತಿಯಲ್ಲಿ ರುವ ಏಕೈಕ ವಿಷಯವೆಂದರೆ, ಪಾಕಿಸ್ತಾನ ಮಾತ್ರ. ನಿಜವಾಗಿ, 2014ರಲ್ಲಿ ನರೇಂದ್ರ ಮೋದಿಯವರು ಒಂದು ಕನಸಷ್ಟೇ ಆಗಿದ್ದರು. ಅವರನ್ನು ಗುಜರಾತ್ ಬಿಟ್ಟರೆ ಉಳಿದಂತೆ ಭಾರತವು ಆಡಳಿತಗಾರನಾಗಿ ನೋಡಿರಲಿಲ್ಲ. ಮಾತ್ರವಲ್ಲ, ಅವರಾಡುವ ಮಾತುಗಳು, ಬಳಸುವ ಉಪಮೆಗಳು, ಪಟ್ಟುಗಳು ಇತ್ಯಾದಿ ಎಲ್ಲವೂ ಮನ್‍ಮೋಹನ್ ಸಿಂಗ್‍ಗೆ ಹೋಲಿಸಿದರೆ ಆಕರ್ಷಕ ವಾಗಿದ್ದುವು. ಜೊತೆಗೇ ಗುಜರಾತ್ ಮಾದರಿಯ ಬಗ್ಗೆ ಚಿತ್ರ-ವಿಚಿತ್ರ ವಾದಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದುವು. ಜನರು ಮೋದಿಯವರಲ್ಲಿ ವಿಶ್ವಾಸವನ್ನು ಹೊಂದುವುದಕ್ಕೆ ಅವು ಧಾರಾಳ ಸಾಕಾಗಿತ್ತು. ಆದರೆ, 2019 ಹಾಗಿಲ್ಲ. ಇವತ್ತು ನರೇಂದ್ರ ಮೋದಿ ಪರಿಚಿತ ವ್ಯಕ್ತಿ. ಅವರ ಮಾತನ್ನು ಮಾತ್ರವಲ್ಲ, 5 ವರ್ಷಗಳ ಆಡಳಿತವನ್ನೂ ಜನರು ಅನುಭವಿಸಿದ್ದಾರೆ. ಅವರ ಮಾತಿಗೂ ಆಡಳಿತಕ್ಕೂ ನಡುವೆ ಇರುವ ಸರಿ-ತಪ್ಪುಗಳನ್ನು ಜನರು ಇವತ್ತು ಲೆಕ್ಕ ಹಾಕಬಲ್ಲರು. ನಿರುದ್ಯೋಗ ಸಮಸ್ಯೆಯು ಕಳೆದ 40 ವರ್ಷಗಳಲ್ಲೇ ಅತ್ಯಧಿಕ ಮಟ್ಟದಲ್ಲಿದೆ ಎಂಬುದು ಬರೇ ಮಾಧ್ಯಮ ವರದಿಯಷ್ಟೇ ಅಲ್ಲ, ಪ್ರತಿ ಮನೆಗಳ ವಾಸ್ತವವೂ ಹೌದು. ಬೆಲೆ ಏರಿಕೆಯಲ್ಲಿ ಇಳಿತವಾಗಿಲ್ಲ. ಆಧಾರ್ ವ್ಯವಸ್ಥೆಯನ್ನು ಸರಳೀಕರಿಸಲಾಗಿಲ್ಲ. ಗ್ಯಾಸ್ ಸಬ್ಸಿಡಿಗಾಗಿ ಆಧಾರ್ ಕಾರ್ಡನ್ನು ಬ್ಯಾಂಕ್ ಖಾತೆಗೆ ಜೋಡಿಸುವ ನಿಯಮವನ್ನು ರದ್ದುಪಡಿಸಲಾಗಿಲ್ಲ. ತೈಲ ಬೆಲೆಯು 2014ಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ರೈತ ಆತ್ಮಹತ್ಯೆ, ಹಿಂಸಾಚಾರ, ಭಯೋತ್ಪಾದನೆ, ಭ್ರಷ್ಟಾಚಾರ ಇತ್ಯಾದಿ ವಿಷಯ ಗಳಲ್ಲಿ 2014ಕ್ಕೂ 2019ಕ್ಕೂ ಭಾರೀ ಅನ್ನಬಹುದಾದ ವ್ಯತ್ಯಾಸಗಳಿಲ್ಲ. ಒಂದುಕಡೆ ರಫೇಲ್ ಸದ್ದು ಮಾಡಿದರೆ, ಇ ನ್ನೊಂದು ಕಡೆ ಭಯೋತ್ಪಾದಕರು ಉರಿ, ಪಠಾಣ್‍ಕೋಟ್ ಮತ್ತು ಪುಲ್ವಾಮದಲ್ಲಿ ದಾಳಿ ನಡೆಸಿದರು. ಭಾರೀ ಭದ್ರತಾ ತಪಾಸಣೆಯಿರುವ ಪುಲ್ವಾಮ ಒಂದರಲ್ಲೇ ಭಯೋತ್ಪಾದಕರು 40ರಷ್ಟು ಯೋಧರನ್ನು ಸಾಯಿಸಿದರು. ನಕ್ಸಲ್ ಹಿಂಸಾಚಾರವಂತೂ ನೋಟ್‍ಬ್ಯಾನ್‍ನ ಬಳಿಕವೂ ಮುಂದುವರಿಯಿತು. ಕಾಶ್ಮೀರವು 1990ರ ಬಳಿಕ ಇದೇ ಮೊದಲ ಬಾರಿ ಹಿಂಸಾಚಾರದ ಚರಮ ಸೀಮಿಗೆ ತಲುಪಿತು. ತಿಂಗಳುಗಳ ಕಾಲ ಕಾಶ್ಮೀರಿ ನಾಗರಿಕರು ‘ಕಲ್ಲೆಸೆತ ಪ್ರತಿಭಟನೆ’ ನಡೆಸಿದರು. ಯೋಜನಾ ಆಯೋಗವ ನ್ನು ರದ್ದುಗೊಳಿಸಿ ಅದರ ಸ್ಥಾನದಲ್ಲಿ ಆಸ್ಥಾನ ವಿದೂಷಕನಂತಿರುವ ನೀತಿ ಆಯೋಗವನ್ನು ಜಾರಿಗೆ ತರಲಾಯಿತು. ಜಿಎಸ್‍ಟಿ ಮತ್ತು ನೋಟ್‍ಬ್ಯಾನ್‍ಗಳು ಸಣ್ಣ ಮತ್ತು ಮಧ್ಯಮ ಉದ್ಯಮವನ್ನೇ ನಾಶ ಮಾಡಿದುವು. ಆಡಳಿತ ವಿಭಾಗದಲ್ಲಿ ಒಂದೇ ವಿಚಾರಧಾರೆಯ ವ್ಯಕ್ತಿಗಳನ್ನು ಕೂರಿಸುವ ಮತ್ತು ಆರಿಸುವ ಶ್ರಮಗಳು ನಡೆದುವು. ಆಡಳಿತ ವಿರೋಧಿ ಧ್ವನಿಗಳನ್ನು ದೇಶವಿರೋಧಿ ಧ್ವನಿಗಳೆಂದು ಬಿಂಬಿಸಲಾಯಿತು. ಧಾರ್ಮಿಕ ಅಸಹಿಷ್ಣುತೆ ತೀವ್ರವಾಯಿತು. ಗೋವಿನ ಹೆಸರಲ್ಲಿ ಒಂದು ನಿರ್ದಿಷ್ಟ ಧರ್ಮದವರನ್ನು ಗುರಿಯಾಗಿಸಿ ಥಳಿತ ಮತ್ತು ಹತ್ಯೆಗಳು ನಡೆದುವು. ಹಿಂದಿ ಮತ್ತು ಸಂಸ್ಕøತವನ್ನು ಬಲವಂತದಿಂದ ಹೇರುವುದಕ್ಕೆ ಪ್ರಯತ್ನಿಸಲಾಯಿತು. ಮೋದಿ ಸಂಪುಟದ ಹಲವು ಸಚಿವರು ಅತ್ಯಂತ ಅಗೌರವಾರ್ಹ ಮಾತುಗಳಿಗಾಗಿ ಗುರುತಿಸಿ ಕೊಂಡರು. ಸಂವಿಧಾನವನ್ನೇ ಬದಲಾಯಿಸುವೆವು ಅನ್ನುವ ಮಟ್ಟಕ್ಕೆ ಅವರ ಮಾತುಗಳು ಹಳಿತಪ್ಪಿ ಹೋದುವು.
ಒಂದುರೀತಿಯಲ್ಲಿ, 2014ರ ಬಿಜೆಪಿ ಕಳೆದುಹೋಗಿದೆ. ಈಗಿರುವುದು ವಚನಭ್ರಷ್ಟ ಬಿಜೆಪಿ. ಈ ಬಿಜೆಪಿಗೆ 2014ರ ತನ್ನದೇ ಆಶ್ವಾಸನೆಗಳಲ್ಲಿ ಒಂದೂ ನೆನಪಿಲ್ಲ. ಒಂದುವೇಳೆ, ಮತದಾರರಿಗೂ ಇದೇ ರೀತಿಯ ಮರೆವು ಬಾಧಿಸಿದರೆ ಮಾತ್ರ ಈ ಬಾರಿ ಬಿಜೆಪಿ ಮರಳಿ ಗೆಲ್ಲಬಹುದು. ಈ ವಾರದ ಸನ್ಮಾರ್ಗದಲ್ಲಿ
No comments:
Post a Comment