ಏಳೆಂಟು ವರ್ಷಗಳೊಳಗೆ ಪ್ರಸಿದ್ಧಿ ಮತ್ತು ಕುಪ್ರಸಿದ್ಧಿ ಎರಡನ್ನೂ ತನ್ನದಾಗಿಸಿಕೊಂಡ ಪತ್ರಕರ್ತನೆಂದರೆ, ಜರ್ಮನಿಯ ಕ್ಲಾಸ್ ರಿಲೋಷಿಯಸ್.
ಸ್ವಿಝರ್ಲಾ೦ಡಿನ ನ ರಿಪೋರ್ಟೆಗೆನ್ ಮ್ಯಾಗಸಿನ್‍ಗೆ ಬರೆದ ವಿಶಿಷ್ಟ ಲೇಖನಕ್ಕಾಗಿ 2014ರಲ್ಲಿ ಈತ ಜರ್ಮನ್ ಭಾಷೆಯ ‘ವರ್ಷದ CNN ಪತ್ರಕರ್ತ’ ಎಂಬ ಪ್ರಶಸ್ತಿಗೆ ಭಾಜನನಾದ. 2017ರಲ್ಲಿ ಯುರೋಪಿಯನ್ ಪ್ರೆಸ್ ಪ್ರೈಝನ್ನು ಗಿಟ್ಟಿಸಿಕೊಂಡ. ಐಸಿಸ್ ಭಯೋತ್ಪಾದಕ ಪಡೆಯು ಇರಾಕಿ ಮಗುವನ್ನು ಅಪಹರಿಸಿ ಕೊಂಡೊಯ್ದ ಘಟನೆಯ ಮೇಲೆ ಬರೆದ ಲೇಖನ; ಕ್ಯೂಬಾದ ಗ್ವಾಂಟನಾಮೊ ಬೇ ಜೈಲಿನಲ್ಲಿರುವ ಯಮನ್‍ನ ಕೈದಿಯ ಮೇಲೆ ಬರೆದ ಲೇಖನ, ಟರ್ಕಿಯಲ್ಲಿ ಗುಲಾಮರಾಗಿ ಜೀವನ ನಡೆಸುತ್ತಿರುವ ಸಿರಿಯದ ಅಲೆಪ್ಪೊ ನಗರದ ಅನಾಥರ ಕುರಿತಾದ ಬರಹ, NFL ಫುಟ್ಬಾಲ್ ಸ್ಟಾರ್ ಕಾಲಿನ್ ಕೆಪೇಮಿಕ್‍ರ ಹೆತ್ತವರೊಂದಿಗೆ ನಡೆಸಲಾದ ಸಂದರ್ಶನ ಮತ್ತು ಅಮೇರಿಕದ ಚುನಾವಣೆಯ ಸಮಯದಲ್ಲಿ ಮಿನ್ನೆಸೋಟದ ಫರ್ಗುಸ್ ಫಾಲ್ಸ್ ನಲ್ಲಿ ಡೊನಾಲ್ಡ್ ಟ್ರಂಪ್‍ಗಿರುವ ಭಾರೀ ಜನಬೆಂಬಲದ ಹಿನ್ನೆಲೆಯನ್ನು ಕೆದಕಿ ಬರೆದ ಲೇಖನ ಇತ್ಯಾದಿಗಳು ಕ್ಲಾಸ್ ರಿಲೋಷಿಯಸ್‍ಗೆ ಭಾರೀ ಜನಪ್ರೀತಿಯನ್ನು ಗಳಿಸಿಕೊಟ್ಟವು. ಜರ್ಮನಿಯ ಪ್ರತಿಷ್ಠಿತ Dextscher Reporterpreis ಬಹುಮಾನವು ನಾಲ್ಕು ಬಾರಿ ಈತನನ್ನು ಹುಡುಕಿಕೊಂಡು ಬಂದವು. ಇವರ ಲೇಖನದಲ್ಲಿರುವ ಕಾವ್ಯಾತ್ಮಕ ಗುಣ, ಪ್ರಸ್ತುತತೆ ಮತ್ತು ಒಳನೋಟವು ಅದ್ಭುತ ವಾದುದೆಂದು ಪ್ರತಿ ಪ್ರಶಸ್ತಿಗಳೂ ಭುಜ ತಟ್ಟಿದುವು. ಆದರೆ,
2018ರ ಕೊನೆಯಲ್ಲಿ ಜರ್ಮನಿಯ ಪ್ರಸಿದ್ಧ ಮ್ಯಾಗಸಿನ್ ಡೇರ್ ಸ್ಪಿಂಜಲ್ ಆತನನ್ನು ಕೆಲಸದಿಂದ ಕಿತ್ತು ಹಾಕಿತು. ಮಾತ್ರ ವಲ್ಲ, ಪ್ರತಿವಾರ 7,25,600 ಕ್ಕಿಂತ ಅಧಿಕ ಪ್ರತಿಗಳು ಮಾರಾಟ ವಾಗುವ ಮತ್ತು 6.5 ಮಿಲಿಯನ್ ಆನ್‍ಲೈನ್ ಓದುಗರಿರುವ ಈ ಪತ್ರಿಕೆಯು ಈತನ ವಿರುದ್ಧ ಕ್ರಿಮಿನಲ್ ಖಟ್ಲೆ ಹೂಡಿತು.
ವಿಷಯ ಇಷ್ಟೇ.
ಆತ ತನ್ನ ಲೇಖನದ ನಡುನಡುವೆ ಕಲ್ಪಿತ ಕಥೆಗಳನ್ನು ಪೋಣಿಸಿದ್ದ. ಇಲ್ಲದ್ದನ್ನು ಸೇರಿಸಿದ್ದ. 2018 ಡಿಸೆಂಬರ್ 9ರಂದು ಡೇರ್ ಸ್ಪಿಂಜಲ್ ಅತೀವ ಅವಮಾನದೊಂದಿಗೆ ತನ್ನ ವರದಿಗಾರನ ತಪ್ಪನ್ನು ಒಪ್ಪಿಕೊಂಡಿತು. ಆದರೆ ಡೇರ್ ಸ್ಪಿಂಜಲ್‍ಗೆ ಹಾಗೆ ತ ಪ್ಪೊಪ್ಪಿಕೊಳ್ಳುವುದು ಮತ್ತು ತನ್ನ ಪತ್ರಿಕೆಯಲ್ಲಿ ಸತ್ಯದ ಮುಖ ವಾಡದಲ್ಲಿ ಸುಳ್ಳು ಕತೆಗಳು ಪ್ರಕಟವಾಗಿದ್ದುವು ಎಂದು ಒಪ್ಪಿಕೊಳ್ಳುವುದು ಸುಲಭವಾಗಿರಲಿಲ್ಲ. ಅದಾಗಲೇ ಕ್ಲಾಸ್ ರಿಲೋಷಿಯಸ್ ಡೇರ್ ಸ್ಪಿಂಜಲ್ ಅನ್ನೂ ಮೀರಿ ಬೆಳೆದಿದ್ದ. ತನಿಖಾ ಬರಹ ಮತ್ತು ಕುತೂಹಲಕಾರಿ ವರದಿಗಾರಿಕೆಗಾಗಿ ಜರ್ಮನಿಯಾದ್ಯಂತ ಪ್ರಸಿದ್ಧನಾಗಿದ್ದ. 1985ರಲ್ಲಿ ಹುಟ್ಟಿ 2011ರಲ್ಲಿ ಫ್ರಿಲ್ಯಾನ್ಸ್ ಪತ್ರಕರ್ತನಾಗಿ ಪರಿವರ್ತಿತನಾದ ಆತನ ಬರಹವನ್ನು ಜರ್ಮನಿಯಲ್ಲಿ ಪ್ರಕಟಿಸದ ಪತ್ರಿಕೆಗಳೇ ಇಲ್ಲ. 2017ರಲ್ಲಿ ಡೇರ್ ಸ್ಪಿಂಜಲ್ ಪತ್ರಿಕೆಯಲ್ಲಿ ಖಾಯಂ ಕೆಲಸ ಗಿಟ್ಟಿಸಿಕೊಳ್ಳುವ ಮೊದಲು ಫ್ರಾಂಕ್ ಫಾರ್ಟವರ್, ಫಿನಾನ್ಶಿಯಲ್ ಟೈಮ್ಸ್, ಡೈ ವೆಲ್ಟ್, ಝೈಲ್ ಆನ್‍ಲೈನ್, ಡೇರ್ ಸ್ಪಿಂಜಲ್, ರಿಪೋರ್ಟೆಗೆನ್ ಸಹಿತ ಅನೇಕಾರು ಪತ್ರಿಕೆಗಳಿಗೆ ಫ್ರಿಲ್ಯಾನ್ಸ್ ಆಗಿ ಬರೆಯುತ್ತಿದ್ದ. 2011ರಿಂದ 2018ರ ನಡುವೆ ಕೇವಲ ಡೇರ್ ಸ್ಪಿಂಜಲ್ ಪತ್ರಿಕೆಯೊಂದಕ್ಕೆ 60ರಷ್ಟು ಅಪರೂಪದ ವರದಿಗಳನ್ನು ಮಾಡಿದ್ದ. ಅತ್ಯಂತ ಸಂಕೀರ್ಣವಾದ ಮತ್ತು ಸಾರ್ವಜನಿಕ ಗಮನ ಸೆಳೆಯಬಲ್ಲ ಸುದ್ದಿಗಳ ಹಿಂದೆ ಹುಡುಕಾಡಲು ಡೇರ್ ಸ್ಪಿಂಜಲ್ ಸಹಿತ ವಿವಿಧ ಪತ್ರಿಕೆಗಳಿಗೆ ನೆನಪಿಗೆ ಬರುತ್ತಿ ದ್ದುದೇ ಕ್ಲಾಸ್ ರಿಲೋಷಿಯಸ್. ಆತ ಆ ಕೆಲಸವನ್ನು ಒಪ್ಪಿಕೊಂಡನೆಂದರೆ, ಅದೊಂದು ಭಾರೀ ಗಮನ ಸೆಳೆಯಬಲ್ಲ ಬರಹವಾಗುತ್ತದೆಂಬ ನಂಬಿಕೆ ಜರ್ಮನಿಯ ಪತ್ರಿಕಾ ಜಗತ್ತಿನಲ್ಲಿತ್ತು. ಅಂಥದ್ದೊಂದು ಬರಹ ಕಲೆ ಮತ್ತು ವರದಿಗಾರಿಕೆಯ ಕೌಶಲ್ಯ ಆತನಲ್ಲಿದೆಯೆಂದು ಪತ್ರಿಕೆಗಳು ನಂಬಿದ್ದುವು. ಬಹುಶಃ ಈ ನಂಬಿಕೆಯ ಭಾರವು ಆತನೊಳಗೆ ಒತ್ತಡವೊಂದನ್ನು ಹುಟ್ಟುಹಾಕಿತ್ತೋ ಏನೋ? ಅಸಾಮಾನ್ಯವಾದ ಏನಾದರೊಂದನ್ನು ತನ್ನ ಬರಹದಲ್ಲಿ ಉಲ್ಲೇಖಿಸದೇ ಹೋದರೆ ತನಗಿರುವ ಮಾರ್ಕೆಟ್ ಬಿದ್ದು ಹೋಗಬಹುದು ಎಂದು ಆತ ಭಾವಿಸಿದ್ದನೋ ಏನೋ? ಅಂತೂ ಆತ ತನ್ನ ವರದಿಯಲ್ಲಿ ಕಲ್ಪಿತ ಕತೆಗಳನ್ನು ಸೃಷ್ಟಿಸತೊಡಗಿದ. ಇದು ಬಹಿರಂಗವಾದದ್ದು ಟ್ರಂಪ್ ಕುರಿತಾದ 2017ರ ವರದಿಯ ಬಳಿಕ. ಅರಿಝೋನಾದ ಅಮೇರಿಕ-ಮೆಕ್ಸಿಕೋ ಗಡಿಯಲ್ಲಿ ಟ್ರಂಪ್ ಬೆಂಬಲಿಗ ಗುಂಪು ಕಾವಲು ಕಾಯುತ್ತಿದೆ ಎಂದು ಆತ ವರದಿಯಲ್ಲಿ ಬರೆದನಲ್ಲದೇ Keep Mexico Out ಎಂಬ ಪ್ಲಕಾರ್ಡನ್ನು ಅದಕ್ಕೆ ಪುರಾವೆಯಾಗಿ ಮಂಡಿಸಿದ್ದ. ವಿಶೇಷ ಏನೆಂದರೆ, ಈ ಬಗ್ಗೆ ಮೊದಲು ಅನುಮಾನ ವ್ಯಕ್ತಪಡಿಸಿದ್ದು ಅಮೇರಿಕದಲ್ಲಿ ಆತನಿಗೆ ವರದಿಗಾರಿಕೆಗೆ ನೆರವಾದ ಜುವಾನ್ ಮೊರೆನೊ ಎಂಬವ. ರಿಲೋಷಿಯಸ್ ತನ್ನ ವರದಿಯಲ್ಲಿ ಉಲ್ಲೇಖಿಸಿದ್ದ ಇಬ್ಬರು ವ್ಯಕ್ತಿಗಳನ್ನು ಜುವಾನ್ ಮೊರೆನೊ ಸಂಪರ್ಕಿಸಿದ. ಆದರೆ ಅವರು ತಮ್ಮನ್ನು ರಿಲೋಷಿಯಸ್ ಸಂಪರ್ಕಿಸಿಯೇ ಇಲ್ಲ ಎಂದು ಹೇಳಿದರು. ರಿಲೋಷಿಯಸ್‍ನ ವರದಿಗಾರಿಕೆಯ ವಿಶ್ವಾಸಾರ್ಹತೆಗೆ ಬಿದ್ದ ಮೊದಲ ಹೊಡೆತ ಇದು. ಅಷ್ಟಕ್ಕೇ ಡೇರ್ ಸ್ಪಿಂಜಲ್ ಪತ್ರಿಕೆ ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಅದು ತನಿಖೆಗೆ ಸಮಿತಿಯನ್ನು ರಚಿಸಿತು. ಆಗ ಒಂದೊಂದೇ ಸುಳ್ಳುಗಳು ಹೊರಬಿದ್ದುವು. ಆತನಿಗೆ ಪ್ರಶಸ್ತಿಯನ್ನು ತಂದುಕೊಟ್ಟ ವರದಿಗಳು ಸಂಪೂರ್ಣ ಸತ್ಯವಲ್ಲ ಎಂಬುದು ಪತ್ತೆಯಾಯಿತು. ಅಮೇರಿಕದ ಫುಟ್ಬಾಲ್ ಸ್ಟಾರ್ ಆಟಗಾರ ಕಾಲಿನ್‍ರ ಹೆತ್ತವರನ್ನು ಈತ ಸಂದರ್ಶಿಸಿಯೇ ಇರಲಿಲ್ಲ. ಬರೇ ಕಲ್ಪಿಸಿಕೊಂಡು ಬರೆದಿದ್ದ. ಒಟ್ಟು 60 ವರದಿ ಗಳಲ್ಲಿ 14 ವರದಿಗಳು ಅಸತ್ಯದಿಂದ ಕೂಡಿವೆ ಎಂದು ತನಿಖಾ ಸಮಿತಿಯು ಹೇಳಿಕೊಂಡಿತು. ಅದರಲ್ಲಿ ಗ್ವಾಂಟನಾಮೋ ಬೇಯಲ್ಲಿದ್ದ ಯಮನ್ ವ್ಯಕ್ತಿಯ ಬಗೆಗಿನ ವರದಿ, ಇರಾಕಿನ ಮಗುವನ್ನು ಐಸಿಸ್‍ನ ಗುಂಪು ಅಪಹರಿಸಿದ ವರದಿ, ಸಿರಿಯಾದ ಅಲೆಪ್ಪೊದ ಅನಾಥ ಮಕ್ಕಳು ಟರ್ಕಿಯಲ್ಲಿ ಗುಲಾಮರಾಗಿ ಬದುಕುತ್ತಿರುವ ವರದಿ ಇತ್ಯಾದಿ ಬಹುಮಾನ ವಿಜೇತ ಬರಹಗಳೂ ಸೇರಿದ್ದುವು. ವರದಿಯ ನಡುನಡುವೆ ತನ್ನದೇ ಕಲ್ಪಿತ ಕತೆಗಳನ್ನು ಸೇರಿಸುವ ಮೂಲಕ ರಿಲೋಷಿಯಸ್ ಪತ್ರಿಕೋದ್ಯಮಕ್ಕೆ ಕಳಂಕ ತಂದಿದ್ದಾನೆ ಎಂದು ಡೇರ್ ಸ್ಪಿಂಜಲ್ ದೂಷಿಸಿತು.
ಇವೆಲ್ಲವನ್ನೂ ಇಲ್ಲಿ ಸ್ಮರಿಸಿಕೊಳ್ಳುವುದಕ್ಕೆ ಕಾರಣ ಇದೆ.
ಕಳೆದ ಎರಡು ತಿಂಗಳುಗಳಲ್ಲಿ ರಾಜ್ಯವು ಪತ್ರಿಕೋದ್ಯಮಕ್ಕೆ ಸಂಬಂಧಿಸಿ ಅತ್ಯಂತ ಕೆಟ್ಟದಾಗಿ ಗುರುತಿಸಿಕೊಂಡಿತು. ಇತ್ತೀಚಿನ ಘಟನೆ ಏನೆಂದರೆ, ನಟಿ ರಮ್ಯಾರ ಕುರಿತು ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡದ್ದಕ್ಕಾಗಿ ವಿಶ್ವವಾಣಿಯ ಮಾಜಿ ಪತ್ರಕರ್ತನೋರ್ವನ ಮೇಲೆ ಎಫ್‍ಐಆರ್ ದಾಖಲಾಯಿತು. ಇದರ ಜೊತೆಜೊತೆಗೇ, ಕಾಶ್ಮೀರದ ಲೇಹ್‍ನ ಪತ್ರಕರ್ತರು ಬಿಜೆಪಿಯಿಂದ ಹಣ ಸ್ವೀಕರಿಸಿದ್ದಾರೆ ಅನ್ನುವ ಆರೋಪಕ್ಕೆ ತುತ್ತಾದರು. ಪತ್ರಕರ್ತರ ಕೈಗೆ ಬಿಜೆಪಿ ನಾಯಕರು ಕವರ್ ನೀಡುತ್ತಿರುವ ವೀಡಿಯೋ ಬಿಡುಗಡೆಗೊಂಡಿತು. ಈ ಬಗ್ಗೆ ಓರ್ವ ಪತ್ರಕರ್ತೆ ಸಾಕ್ಷ್ಯವನ್ನೂ ನುಡಿದರು. ಇದಕ್ಕಿಂತ ತಿಂಗಳ ಹಿಂದೆ ನಮ್ಮ ರಾಜ್ಯದಲ್ಲಿ ಹಲವು ಪತ್ರಕರ್ತರು ಪತ್ರಿಕಾ ವೃತ್ತಿಗೆ ದ್ರೋಹ ಬಗೆದುದಕ್ಕಾಗಿ ಸುದ್ದಿಗೀಡಾದರು. ಇದರಲ್ಲಿ ಫೋಕಸ್ ಟಿ.ವಿ.ಗಾಗಿ ಕೆಲಸ ಮಾಡುತ್ತಿದ್ದ ಪತ್ರಕರ್ತರೂ ಒಬ್ಬರು. ಅವರು ತಿರುಚಿದ ವೀಡಿಯೋ ದೃಶ್ಯಾವಳಿಯನ್ನು ಇಟ್ಟುಕೊಂಡು ಬಿಜೆಪಿ ಶಾಸಕರನ್ನು ಬ್ಲ್ಯಾಕ್‍ಮೇಲ್ ಮಾಡಿದರು ಎಂಬ ಆರೋಪವನ್ನು ಹೊತ್ತುಕೊಂಡು ಬಂಧನಕ್ಕೆ ಒಳಗಾಗಿದ್ದಾರೆ. ಸಚಿವ ಎಂ.ಬಿ. ಪಾಟೀಲರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಬರೆದಿರುವರೆಂದು ಹೇಳಲಾದ ಪತ್ರವೊಂದನ್ನು ಲೋಕಸಭಾ ಚುನಾವಣೆಯ ಆರಂಭ ಹಂತದಲ್ಲಿ ವಿಜಯವಾಣಿ ಪತ್ರಿಕೆಯು ಪ್ರಕಟಿಸಿತ್ತು. ಅದು ನಕಲಿಯೆಂದು ಪತ್ತೆಯಾದ ಬಳಿಕ ಅದರ ಆರೋಪದಲ್ಲಿ ಉದಯ್ ಇಂಡಿಯಾದ ವಿಶೇಷ ವರದಿಗಾರರನ್ನು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಂಧಿಸಲಾಯಿತು. ಈ ವ್ಯಕ್ತಿಯ ಜೊತೆಗೇ ಇದೇ ಪ್ರಕರಣಕ್ಕೆ ಸಂಬಂಧಿಸಿ ಪೋಸ್ಟ್ ಕಾರ್ಡ್ ಎಂಬ ವೆಬ್‍ಸೈಟ್‍ನ ಸಂಪಾದಕ ವಿಕ್ರಂ ಹೆಗ್ಡೆಯನ್ನು ಬಂಧಿಸಲಾಯಿತು. ಪಬ್ಲಿಕ್ ಟಿ.ವಿ.ಯ ವರದಿಗಾರನೋರ್ವ ಸಮಯ ನ್ಯೂಸ್ ವರದಿಗಾರನ ಜೊತೆ ಸೇರಿಕೊಂಡು ವೈದ್ಯರೊಬ್ಬರನ್ನು ಬ್ಲ್ಯಾಕ್‍ಮೇಲ್ ಮಾಡಿ 50 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟ ಘಟನೆ ನಡೆಯಿತು. ಆತನ ಬಂಧನವೂ ಆಯಿತು. ವಿಜಯಪುರದಲ್ಲೂ ಇಂಥದ್ದೇ ಘಟನೆಯೊಂದು ನಡೆಯಿತು. ಇಲ್ಲೂ ಬ್ಲ್ಯಾಕ್‍ಮೇಲ್‍ಗೆ ಒಳಗಾದದ್ದು ಓರ್ವ ವೈದ್ಯ. ಬೆದರಿಸಿದ್ದು ಟಿ.ವಿ. ಚಾನೆಲ್‍ನ ಕ್ಯಾಮರಾಮೆನ್. ಆತನನ್ನೂ ಬಂಧಿಸಲಾಯಿತು. ಇವು ಬೆಳಕಿಗೆ ಬಂದ ಇತ್ತೀಚಿನ ಘಟನೆಗಳು. ಹಾಗಂತ, ಬೆಳಕಿಗೆ ಬಾರದವುಗಳು ಇನ್ನೂ ಇರಬಹುದು. ಪ್ರಶ್ನೆಯಿರುವುದು ಎಷ್ಟು ಪ್ರಕರಣಗಳು ದಾಖಲಾದುವು ಎಂದಲ್ಲ. ಯಾಕೆ ಹೀಗಾಗುತ್ತಿದೆ ಮತ್ತು ಇದರಿಂದ ಮಾಧ್ಯಮ ವಿಶ್ವಾಸಾರ್ಹತೆಯ ಮೇಲೆ ಆಗುವ ಪರಿಣಾಮಗಳು ಏನೇನು ಎಂಬುದರಲ್ಲಿ. ಸಾಮಾಜಿಕ ಜಾಲತಾಣಗಳು ಇವತ್ತು ಪರ್ಯಾಯ ಮಾಧ್ಯಮವಾಗಿ ಗಟ್ಟಿಯಾಗಿ ತಳವೂರುತ್ತಿವೆ. ಇವುಗಳ ಅನುಪಸ್ಥಿತಿಯ ಕಾಲದಲ್ಲಿ ಮಾಧ್ಯಮಗಳು ನಡೆದದ್ದೇ ದಾರಿ, ಆಡಿದ್ದೇ ಮಾತು ಎಂಬ ವಾತಾವರಣ ಇತ್ತು. ಇವತ್ತು ಹಾಗಿಲ್ಲ. ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಪ್ರತಿ ಸಣ್ಣ ತಪ್ಪನ್ನೂ ದುರ್ಬೀನು ಹಿಡಿದು ನೋಡುವ ಮತ್ತು ಧೈರ್ಯದಿಂದ ಹೇಳುವ ಸನ್ನಿವೇಶ ನಿರ್ಮಾಣ ವಾಗಿದೆ. ನಿಜವಾಗಿ, ಮುದ್ರಣ ಮತ್ತು ದೃಶ್ಯ ಮಾಧ್ಯಮ ಕ್ಷೇತ್ರಕ್ಕೆ ಸವಾಲು ಎದುರಾದದ್ದೇ ಸಾಮಾಜಿಕ ಜಾಲತಾಣದಿಂದ. ಜನರು ಸುದ್ದಿಗಳಿಗಾಗಿ ನಿರ್ದಿಷ್ಟ ಪತ್ರಿಕೆ ಮತ್ತು ನಿರ್ದಿಷ್ಟ ಟಿ.ವಿ. ಚಾನೆಲ್ ಗಳನ್ನು ಅವಲಂಬಿಸಬೇಕಾದ ಸ್ಥಿತಿಯನ್ನು ಸಾಮಾಜಿಕ ಜಾಲತಾಣಗಳು ಬದಲಿಸಿದವು. ಬೆರಳ ತುದಿಯಲ್ಲಿ ಕ್ಷಣಮಾತ್ರದಲ್ಲಿ ಹತ್ತಾರು ಸುದ್ದಿಗಳನ್ನು ಓದುವ ಮತ್ತು ಹಂಚಿಕೊಳ್ಳುವ ಸುಲಭ ಅವಕಾಶವನ್ನು ಇಂಟರ್‍ನೆಟ್ ಮಾಧ್ಯಮ ಸೃಷ್ಟಿ ಮಾಡಿತು. ಬಹುಶಃ, ಆವರೆಗೆ ಸುದ್ದಿಗಳಿಗಾಗಿ ಮುದ್ರಣ ಮತ್ತು ದೃಶ್ಯ ಮಾಧ್ಯಮವನ್ನೇ ಅವ ಲಂಬಿಸಿಕೊಂಡಿದ್ದ ಜನರು ಹೀಗೆ ಇನ್ನಿತರ ಮೂಲಗಳ ಮೂಲಕ ಅವನ್ನು ಪಡೆಯಲು ಪ್ರಾರಂಭಿಸಿದಾಗ ಈ ಮಾಧ್ಯಮಗಳಿಗೆ ಅಸ್ತಿತ್ವದ ಪ್ರಶ್ನೆ ಉದ್ಭವವಾಗುವುದು ಸಹಜ. ಸದ್ಯ ಅಂಥದ್ದೊಂದು ಬಿಕ್ಕಟ್ಟು ಸೃಷ್ಟಿಯಾದಂತಿದೆ. ಪತ್ರಕರ್ತರು ಯಾವಾಗ ಬೇಕಾದರೂ ಕೆಲಸ ಕಳೆದುಕೊಳ್ಳಬಹುದಾದ ಇಕ್ಕಟ್ಟಿನ ಸ್ಥಿತಿಯಲ್ಲಿದ್ದಾರೆ. ವೇತನವೂ ಈ ಹಿಂದಿನಂತೆ ನಿರೀಕ್ಷಿಸಿದಷ್ಟು ಲಭ್ಯವಾಗುತ್ತಿಲ್ಲ. ಒಂದು ಪ್ರದೇಶದ ವರದಿಗಾಗಿ ಇವತ್ತು ಆ ಪ್ರದೇಶದ ವರದಿಗಾರನನ್ನೇ ಕಾಯುತ್ತಾ ಕೂರುವ ಸಂದರ್ಭ ಕಡಿಮೆಯಾಗಿದೆ. ವಾಟ್ಯಾಪ್‍ಗಳು ಕ್ಷಣಮಾತ್ರದಲ್ಲಿ ಸುದ್ದಿಗಳನ್ನು ರವಾನಿಸುತ್ತಿವೆ. ಪತ್ರಕರ್ತನೋರ್ವನ ಕೆಲಸವನ್ನು ಇನ್ನಾವುದೋ ವ್ಯಕ್ತಿ ತನ್ನ ಮೊಬೈಲ್‍ನ ಮೂಲಕ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂಟರ್‍ನೆಟ್ ಮಾಧ್ಯಮವು ಸುದ್ದಿ ತಯಾರಿ ಕ್ಷೇತ್ರದಲ್ಲಿ ತೆರೆದಿರುವ ವಿಫುಲ ಅವಕಾಶಗಳು ಪತ್ರಕರ್ತರ ಅವಕಾಶವನ್ನು ಕಬಳಿಸಿ ಬಿಟ್ಟಿದೆ. ಬಹುಶಃ, ಇಂಥ ವಾತಾವರಣವು ಪತ್ರಕರ್ತರನ್ನು ತಪ್ಪು ದಾರಿಯಲ್ಲಿ ಕೊಂಡೊಯ್ಯುವುದಕ್ಕೆ ಸಾಧ್ಯವೂ ಇದೆ.
ಅಂತೂ, ಕಳೆದ ಒಂದೂವರೆ-ಎರಡು ತಿಂಗಳು ಕನ್ನಡ ಪತ್ರಿಕೋದ್ಯಮದ ಮಟ್ಟಿಗೆ ಅತ್ಯಂತ ಸವಾಲಿನ ತಿಂಗಳುಗಳು. ಪತ್ರಿಕೋದ್ಯಮ ನಿಂತಿರುವುದು ವಿಶ್ವಾಸಾರ್ಹತೆಯ ಮೇಲೆ. ಆ ವಿಶ್ವಾಸಾರ್ಹತೆಗೆ ಭಂಗ ಬರುವುದೆಂದರೆ, ಈ ಕ್ಷೇತ್ರದ ಅವಸಾನಕ್ಕೆ ಮೊಳೆ ಹೊಡೆದಂತೆ. ಪತ್ರಿಕೋದ್ಯಮದ ಮೇಲೆ ಜನರು ವಿಶ್ವಾಸ ಕಳಕೊಂಡ ದಿನ ಆ ಕ್ಷೇತ್ರ ಖಂಡಿತ ಸಾವಿನಂಚಿಗೆ ತಲುಪುತ್ತದೆ. ಪರ್ಯಾಯ ಮಾಧ್ಯಮವಾಗಿ ಇಂಟರ್‍ನೆಟ್ ಮಾಧ್ಯಮವು ಜನಪ್ರಿಯವಾಗುತ್ತಿರುವ ಇಂದಿನ ದಿನಗಳಲ್ಲಂತೂ ದೃಶ್ಯ ಮತ್ತು ಮುದ್ರಣ ಮಾಧ್ಯಮವು ಒಂದು ಗೇಣು ಹೆಚ್ಚೇ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಓದುಗ ಮತ್ತು ವೀಕ್ಷಕ ವೃಂದವನ್ನು ಕ್ಲಾಸ್ ರಿಲೋಷಿಯಸ್‍ನಂತೆ ಕಡೆಗಣಿಸಿದರೆ ಅಂತಿಮವಾಗಿ ಇಡೀ ಪತ್ರಿಕೋದ್ಯಮವೇ ಅದಕ್ಕೆ ಬೆಲೆ ತೆರಬೇಕಾದೀತು.
No comments:
Post a Comment