Tuesday, June 4, 2019

ಪ್ರತ್ಯೇಕಿಸುವ ತಲಾಕ್‍ನ ಬಗ್ಗೆ ಗೊತ್ತಿರುವ ಎಷ್ಟು ಮಂದಿಗೆ ಜೋಡಿಸುವ ಝಕಾತ್‍ನ ಬಗ್ಗೆ ಗೊತ್ತಿದೆ?



     ಪವಿತ್ರ ಕುರ್‍ಆನಿನ 2ನೇ ಅಧ್ಯಾಯವಾದ ಅಲ್ ಬಕರದ 43, 110 ಮತ್ತು 277ನೇ ಸೂಕ್ತಗಳು; 19ನೇ ಅಧ್ಯಾಯವಾದ ಮರ್ಯಮ್‍ನ 31 ಮತ್ತು 55ನೇ ಸೂಕ್ತಗಳು; 21ನೇ ಅಧ್ಯಾಯವಾದ ಅಲ್ ಅಂಬಿಯಾದ 73ನೇ ಸೂಕ್ತ; 23ನೇ  ಅಧ್ಯಾಯವಾದ ಅಲ್ ಮೂಮಿನೂನ್‍ನ 4ನೇ ಸೂಕ್ತ; 27ನೇ ಅಧ್ಯಾಯವಾದ ಅನ್ನಮ್ಲ್‍ನ 3ನೇ ಸೂಕ್ತ; 31ನೇ ಅಧ್ಯಾಯವಾದ ಲುಕ್ಮಾನ್‍ನ 7ನೇ ಸೂಕ್ತಗಳೆಲ್ಲ ನಮಾಝï ಮತ್ತು ಝಕಾತನ್ನು ಜೊತೆಜೊತೆ ಯಾಗಿಯೇ ಉಲ್ಲೇಖಿಸಿವೆ. ‘ನಮಾಝನ್ನು  ಸಂಸ್ಥಾಪಿಸಿರಿ ಮತ್ತು ಝಕಾತ್ ಕೊಡಿರಿ’ ಎಂಬ ಆದೇಶವನ್ನು ಪವಿತ್ರ ಕುರ್‍ಆನಿನ 26 ಕಡೆಗಳಲ್ಲಿ ನೀಡಲಾಗಿದೆ. ಪವಿತ್ರ ಕುರ್‍ಆನಿನ 32 ಕಡೆಗಳಲ್ಲಿ ಕೇವಲ ಝಕಾತನ್ನು ಉಲ್ಲೇಖಿಸಲಾಗಿದೆ. ಇಷ್ಟಿದ್ದೂ, ಮುಸ್ಲಿಮ್ ಸಮುದಾಯಕ್ಕೆ ನಮಾಝïನ ಬಗ್ಗೆ  ಗೊತ್ತಿರುವಷ್ಟು ಝಕಾತ್‍ನ ಬಗ್ಗೆ ಗೊತ್ತಿಲ್ಲ. ಭಾರತೀಯ ಮುಸ್ಲಿಮೇತರ ಸಮುದಾಯಕ್ಕಂತೂ ಝಕಾತ್‍ನ ಬಗ್ಗೆ ಮಾಹಿತಿ ಇರುವ ಸಾಧ್ಯತೆ ಶೂನ್ಯ ಅನ್ನುವಷ್ಟು ಕಡಿಮೆ. ತಲಾಕ್ ಎಂದರೇನೆಂದು ಪ್ರಶ್ನಿಸಿದರೆ ಭಾರತೀಯ ಸಮಾಜ ಇವತ್ತು ಥಟ್ಟನೆ  ಉತ್ತರಿಸಬಹುದು. ಆದರೆ ಝಕಾತ್ ಹಾಗಲ್ಲ. ನಿಜವಾಗಿ, ತಲಾಕ್ ಮತ್ತು ಝಕಾತ್ ಎರಡೂ ಕೂಡ ಮನುಷ್ಯರಿಗೆ ಸಂಬಂಧಿಸಿದ್ದು. ತಲಾಕ್- ಪತಿ ಮತ್ತು ಪತ್ನಿಯ ನಡುವಿನ ವ್ಯವಹಾರವಾದರೆ ಝಕಾತ್- ಮನುಷ್ಯ ಮತ್ತು ಮನುಷ್ಯರ ನಡುವಿನ  ವ್ಯವಹಾರ. ತಲಾಕ್ ಎಂಬುದು ಬೇರ್ಪಡಿಸುವುದರ ಹೆಸರಾದರೆ, ಝಕಾತ್ ಎಂಬುದು ಜೋಡಿಸುವುದರ ಹೆಸರು. ವಿಷಾದ ಏನೆಂದರೆ, ಭಾರತೀಯ ಸಮಾಜಕ್ಕೆ ಈ ಜೋಡಿಸುವುದರ ಪರಿಚಯ ಬಹಳ ಕಡಿಮೆ ಇದೆ. ಆದರೆ ಈ ಬೇರ್ಪಡಿಸುವುದರ ಪರಿಚಯವಂತೂ ಬಹಳ ಚೆನ್ನಾಗಿಯೇ ಇದೆ. ಇದೊಂದು ಆಘಾತಕಾರಿ ಬೆಳವಣಿಗೆ. ನಿಜವಾಗಿ, ಮುಸ್ಲಿಮರೆಂದರೆ ನಮಾಝï. ಮುಸ್ಲಿಮರೆಂದರೆ ಝಕಾತ್. ಮುಸ್ಲಿಮರೆಂದರೆ ಹಜ್ಜ್. ಮುಸ್ಲಿಮರೆಂದರೆ ದೇವವಿಶ್ವಾಸ. ಆದರೆ,  ಸಾಮಾಜಿಕವಾಗಿ ಇವತ್ತು ಇವುಗಳ ಮೇಲೆ ಚರ್ಚೆಯೇ ಆಗುತ್ತಿಲ್ಲ. ಅದರ ಬದಲು ಬುರ್ಖಾ, ನಕಾಬ್, ಗಡ್ಡ, ಕುರ್ತಾ ಇತ್ಯಾದಿ ಇತ್ಯಾದಿ ಸಂಕೇತಗಳ ಮೇಲೆ ಟನ್ನುಗಟ್ಟಲೆ ದಾಖಲೆಗಳನ್ನು ಮಂಡಿಸಲಾಗುತ್ತಿದೆ. ಗಂಭೀರ ಚರ್ಚೆಗಳನ್ನು ಏರ್ಪಡಿಸಲಾಗುತ್ತಿದೆ. ಒಂದುವೇಳೆ, ಮಾಧ್ಯಮಗಳು ಝಕಾತ್‍ನ ಬಗ್ಗೆ ಅಧ್ಯಯನಾತ್ಮಕ ವರದಿಯನ್ನು ತಯಾರಿಸಿದರೆ ಮತ್ತು ಸಂವಾದವನ್ನು ಏರ್ಪಡಿಸಿದರೆ, ಭಾರತೀಯರು ಇಸ್ಲಾಮನ್ನು ಅಚ್ಚರಿಯಿಂದ ನೋಡಬಹುದು. ತಮ್ಮೆಲ್ಲ ಆರ್ಥಿಕ ಸಮಸ್ಯೆಗೆ  ಝಕಾತ್‍ನಲ್ಲಿ ಪರಿಹಾರವನ್ನು ಕಾಣಬಹುದು.
ಝಕಾತ್‍ಗೆ ಕನ್ನಡದಲ್ಲಿ ಕಡ್ಡಾಯ ದಾನ ಎಂದು ಅರ್ಥ ಕೊಡಬಹುದು. ಇಸ್ಲಾಮಿನಲ್ಲಿ ದಾನ ಮತ್ತು ಕಡ್ಡಾಯ ದಾನ ಎರಡೂ ಇದೆ. ದಾನವನ್ನು ಸರ್ವರೂ ನೀಡಬೇಕು. ಇದಕ್ಕೆ ಬಡವರು, ಶ್ರೀಮಂತರು ಎಂಬ ಭೇದವಿಲ್ಲ. ಆದರೆ ಕಡ್ಡಾಯ ದಾನದ  ಪಟ್ಟಿಯಲ್ಲಿ ಬಡವರು ಸೇರುವುದಿಲ್ಲ. ಶ್ರೀಮಂತರು ತಮ್ಮ ಸಂಪತ್ತಿನಿಂದ ನಿರ್ದಿಷ್ಟ ಮೊತ್ತವನ್ನು ಕಡ್ಡಾಯವಾಗಿ ಬಡವರಿಗೆ ನೀಡುವುದರ ಹೆಸರೇ ಝಕಾತ್. ನಮಾಝï ಎಂಬುದು ದೇವ ಮತ್ತು ಮನುಷ್ಯನನ್ನು ಜೋಡಿಸುವುದರ ಹೆಸರಾದರೆ,  ಝಕಾತ್- ಮನುಷ್ಯ ಮತ್ತು ಮನುಷ್ಯರನ್ನು ಜೋಡಿಸುವುದರ ಹೆಸರು. ಆದ್ದರಿಂದಲೇ, ನಮಾಝï ಮಾಡಿರಿ ಎಂದು ಹೇಳುವುದರ ಜೊತೆಜೊತೆಗೇ ಝಕಾತ್ ನೀಡಿರಿ ಎಂದೂ ಪವಿತ್ರ ಕುರ್‍ಆನ್ ಹೇಳಿದೆ. ಇಲ್ಲಿಯ ಭಾಷೆ ಮತ್ತು ಧ್ವನಿಯಲ್ಲಿ  ಏಕರೂಪತೆಯಿದೆ. ಯಾರಾದರೊಬ್ಬರು ತಾನು ನಮಾಝï ಮಾಡುತ್ತೇನೆ, ಆದರೆ ನನ್ನ ಸಂಪತ್ತಿನಿಂದ ಕಡ್ಡಾಯವಾದ ದಾನ ಕೊಡಲಾರೆ ಎಂದು ಘೋಷಿಸಿದರೆ ಅವರು ಅಪರಾಧಿಯಾಗುತ್ತಾರೆ. ಅಂಥವರ ವಿರುದ್ಧ ಪ್ರಥಮ ಖಲೀಫ ಅಬೂಬಕರ್ (ರ)ರು ಯುದ್ಧ ಘೋಷಣೆಯ ಮಾತು ಆಡಿದ್ದರು. ಅದರರ್ಥ- ಸಂಕಟದಲ್ಲಿರುವವರ ನೋವುಗಳಿಗೆ ಸ್ಪಂದಿಸದ ಶ್ರೀಮಂತನ ನಮಾಝನ್ನು ದೇವನು ಬಯಸುವುದಿಲ್ಲ ಎಂದೇ.
ಝಕಾತ್ ಎಂಬುದು ಈ ಜಗತ್ತಿನ ಪಾಲಿಗೆ ಹೊಚ್ಚ ಹೊಸತಾದ  ಆರ್ಥಿಕ ಫಿಲಾಸಫಿ. ಜಗತ್ತಿನ ಯಾವ ತತ್ವ ಸಿದ್ಧಾಂತವೂ ಕೂಡ ಈ ಬಗೆಯ ಆರ್ಥಿಕ ಲೆಕ್ಕಾಚಾರವನ್ನು ಮಂಡಿಸಿಲ್ಲ. ಶ್ರೀಮಂತರು ಶ್ರೀಮಂತರಾಗುತ್ತಾ ಹೋಗುವುದು ಮತ್ತು ಬಡವರು ಬಡವರಾಗಿಯೇ ಉಳಿಯುವುದಕ್ಕೆ ಪರಿಹಾರವನ್ನು  ಕಂಡುಕೊಳ್ಳಲಾಗಿಲ್ಲ. ಕಾರ್ಲ್‍ಮಾರ್ಕ್ಸ್  ಸಿದ್ಧಾಂತವನ್ನು ಜಗತ್ತು ಒಂದು ಹಂತದ ವರೆಗೆ ಪ್ರಯೋಗಿಸಿ ನೋಡಿತು. ಶ್ರೀಮಂತರ ವಿರುದ್ಧ ಕಾರ್ಮಿಕರನ್ನು ಎತ್ತಿಕಟ್ಟುವ ಮತ್ತು ಕಾರ್ಮಿಕರ ಬವಣೆಗಳಿಗೆ ಶ್ರೀಮಂತರನ್ನೇ ಹೊಣೆ ಮಾಡುವುದರ ಆಚೆಗೆ  ಶ್ರೀಮಂತ ಮತ್ತು ಬಡವ ಎಂಬ ಕಂದಕವನ್ನು ಮುಚ್ಚಿ ಸೇತುವೆಯೊಂದನ್ನು ನಿರ್ಮಿಸಬಹುದಾದ ಸಾಧ್ಯತೆಯನ್ನು ಕಂಡುಕೊಳ್ಳಲು ಅದಕ್ಕೂ ಸಾಧ್ಯವಾಗಲಿಲ್ಲ. ಆದರೂ ಕಾರ್ಮಿಕರನ್ನು ಗೌರವಯುತವಾಗಿ ನಡೆಸಿಕೊಳ್ಳುವಂತೆ ಪ್ರೇರೇಪಿಸಲು ಈ  ಸಿದ್ಧಾಂತ ಯಶಸ್ವಿಯಾಗಿದೆ ಅನ್ನುವುದನ್ನು ಒಪ್ಪಿಕೊಳ್ಳಬೇಕು. ಆ ಬಳಿಕ ಉದಾರೀಕರಣ, ಜಾಗತೀಕರಣಗಳು ಜಗತ್ತಿನ ಮೇಲೆ ದಾಳಿ ಮಾಡಿದುವು. ಈ ದಾಳಿಗೂ ಅಪ್ಪಚ್ಚಿಯಾದುದು ಮತ್ತು ಆಗುತ್ತಿರುವುದು ಬಡವರು ಮತ್ತು ಕಾರ್ಮಿಕರೇ. ಈ  ಮೂರೂ ಆರ್ಥಿಕ ಸಿದ್ಧಾಂತಗಳ ಬಹುದೊಡ್ಡ ವೈಫಲ್ಯ ಏನೆಂದರೆ, ಬಡವರ ಮೇಲೆ ಶ್ರೀಮಂತರಿಗೆ ಯಾವ ಹೊಣೆಗಾರಿಕೆಯನ್ನೂ ಇವು ವಹಿಸುವುದಿಲ್ಲ. ಶ್ರೀಮಂತ ತನ್ನ ಸ್ವಸಾಮರ್ಥ್ಯದಿಂದ ಶ್ರೀಮಂತನಾಗಿದ್ದಾನೆ ಮತ್ತು ಬಡವ ತನ್ನ ಕೌಶಲ್ಯರಹಿತ  ಸ್ಥಿತಿಯಿಂದಾಗಿ ಬಡವನಾಜಿದ್ದಾನೆ ಅನ್ನುವ ಪರೋಕ್ಷ ಸಂದೇಶವನ್ನಷ್ಟೇ ಇವು ಕೊಡುತ್ತಿವೆ. ಝಕಾತ್ ಇದಕ್ಕೆ ತದ್ವಿರುದ್ಧ. ಶ್ರೀಮಂತನ ಶ್ರೀಮಂತಿಕೆಗೆ ಆತನ ಸ್ವಸಾಮರ್ಥ್ಯವೊಂದೇ ಕಾರಣ ಎಂಬುದನ್ನು ಅದು ಒಪ್ಪುವುದಿಲ್ಲ. ಬಡವನ ಬಡತನಕ್ಕೂ  ಆತನ ಕೌಶಲ್ಯರಹಿತ ಸ್ಥಿತಿಯೇ ಕಾರಣ ಎಂದೂ ಅದು ಷರಾ ಬರೆಯುವುದಿಲ್ಲ. ವ್ಯಕ್ತಿಯೋರ್ವನ ಶ್ರೀಮಂತಿಕೆಯ ಹಿಂದೆ ದೇವಾನುಗ್ರಹವಿದೆ ಎಂದು ಅದು ಹೇಳುತ್ತದೆ ಮತ್ತು ಈ ದೇವಾನುಗ್ರಹವನ್ನು ಬಡವರೊಂದಿಗೆ ಹಂಚಿಕೊಳ್ಳುವ ಮೂಲಕ  ತೀರಿಸಿಕೊಳ್ಳಬೇಕು ಎಂದು ಆದೇಶಿಸುತ್ತದೆ. ಹೀಗೆ ಹೇಳುವುದರಿಂದ ಎರಡು ಲಾಭ ಇದೆ.
1. ಬಡವನು ಶ್ರೀಮಂತನನ್ನು ವೈರಿಯಂತೆ ನೋಡುವುದಿಲ್ಲ.
2. ಬಡವ ಸದಾಕಾಲ ಬಡವನಾಗಿಯೇ ಉಳಿಯುವುದೂ ಇಲ್ಲ.
 ಶ್ರೀಮಂತನ ಶ್ರೀಮಂತಿಕೆಯಲ್ಲಿ  ಬಡವ ತನ್ನ ಏಳಿಗೆಯನ್ನು ಕಾಣುತ್ತಾನೆ. ಶ್ರೀಮಂತನ ಸಂಪತ್ತಿನಲ್ಲಿ ತನ್ನ ಪಾಲೂ ಇದೆ ಎಂಬ ಭಾವವು ಈರ್ಷ್ಯೆಯ ಬದಲು ಸಮಾಧಾನವನ್ನು ತರಿಸುತ್ತದೆ. ಬಡವನನ್ನು ಆ ಸ್ಥಿತಿಯಿಂದ ಮೇಲೆತ್ತುವ ಹೊಣೆಗಾರಿಕೆಯು ತನ್ನ ಮೇಲಿದೆ ಎಂಬ  ಪ್ರಜ್ಞೆಯು ಶ್ರೀಮಂತನಲ್ಲೂ ಜಾಗೃತವಾಗಿರುತ್ತದೆ. ತನ್ನ ಸಂಪತ್ತಿನಿಂದ ನಿರ್ದಿಷ್ಟ ಮೊತ್ತವನ್ನು ಬಡವನಿಗೆ ಕೊಡುವ ಮೂಲಕ ಆತನನ್ನು ಆರ್ಥಿಕವಾಗಿ ಚೇತರಿಸುವಂತೆ ಮಾಡುವುದು ಮತ್ತು ಸಬಲರ ಸಾಲಲ್ಲಿ ಸೇರುವುದಕ್ಕೆ ನೆರವು ನೀಡುವುದೂ  ನಡೆಯುತ್ತದೆ. ಇದೊಂದು ರೀತಿಯಲ್ಲಿ ಸೇತುವೆಯ ಹಾಗೆ. ಈ ಸೇತುವೆಗೆ ಗೇಟುಗಳಿಲ್ಲ. ಬಡವನೂ ಶ್ರೀಮಂತನೂ ಸರಾಗವಾಗಿ ಅತ್ತಿತ್ತ ನಡೆಯಬಲ್ಲ ಸೌಹಾರ್ದದ ಸೇತುವೆ ಇದು. ಇಲ್ಲಿ ಕಾರ್ಮಿಕ ಶ್ರೀಮಂತನನ್ನು ಗೌರವಿಸುತ್ತಾನೆ. ಶ್ರೀಮಂತನು  ಕಾರ್ಮಿಕನನ್ನು ತನ್ನ ಸಂಪತ್ತಿನ ಪಾಲುದಾರನಾಗಿ ಪರಿಗಣಿಸುತ್ತಾನೆ. ಹಾಗಂತ,

 ಜಗತ್ತಿನ ಮುಸ್ಲಿಮರೆಲ್ಲ ನಮಾಝïನಷ್ಟೇ ಝಕಾತ್‍ಗೆ ಪ್ರಾಮುಖ್ಯತೆ ಕೊಟ್ಟಿದ್ದಾರೆ ಎಂದಲ್ಲ. ಒಂದುವೇಳೆ ಹಾಗೆ ಕೊಟ್ಟಿರುತ್ತಿದ್ದರೆ ಇವತ್ತು ಹಿಂದುಳಿದ ಮುಸ್ಲಿಮ್ ಗಲ್ಲಿಗಳು ಕಾಣಸಿಗಲು ಸಾಧ್ಯವೇ ಇರುತ್ತಿರಲಿಲ್ಲ. 2011ರ ಜನಗಣತಿಯಂತೆ ಪ್ರತಿ ನಾಲ್ಕರಲ್ಲಿ  ಓರ್ವ ಭಿಕ್ಷುಕ ಮುಸ್ಲಿಮ್. ಇದರಲ್ಲೂ ಪುರುಷರಿಗಿಂತ ಮಹಿಳೆಯರೇ ಹೆಚ್ಚು. ನ್ಯಾಷನಲ್ ಕೌನ್ಸಿಲ್ ಫಾರ್ ಅಪ್ಲೈಡ್ ಇಕನಾಮಿಕ್ಸ್ ರಿಸರ್ಚ್‍ನ ಪ್ರಕಾರ, ಭಾರತದ ಪಟ್ಟಣ ಪ್ರದೇಶಗಳಲ್ಲಿ ಬದುಕುತ್ತಿರುವ ಮುಸ್ಲಿಮರ ಪೈಕಿ ಪ್ರತಿ 10ರಲ್ಲಿ 3 ಮಂದಿ  ಬಡತನ ರೇಖೆಗಿಂತ ಕೆಳಗಿದ್ದಾರೆ. ಸಾಚಾರ್ ಸಮಿತಿಯ ವರದಿಯ ಅಧ್ಯಾಯ 12, ಪುಟ 237ರಲ್ಲಿ ಉಲ್ಲೇಖಿಸಿರುವಂತೆ, ಭಾರತದ ಎಲ್ಲ ರಾಜ್ಯಗಳಲ್ಲೂ ಮುಸ್ಲಿಮರು ಹಿಂದುಳಿದವರಾಗಿದ್ದಾರೆ. ಇತ್ತೀಚೆಗೆ ಭಾರತದ ನೀತಿ ಆಯೋಗವು ಪ್ರಕಟಿಸಿದ  ವರದಿಯು ಈ ಎಲ್ಲ ಮಾಹಿತಿಗಳನ್ನೂ ಪುಷ್ಟೀಕರಿಸುವಂತೆ ಇದೆ. ದೇಶದಲ್ಲಿಯೇ ಅತ್ಯಂತ ಕಡಿಮೆ ಅಭಿವೃದ್ಧಿಗೊಂಡಿರುವ 101 ಜಿಲ್ಲೆಗಳ ಪೈಕಿ ದೆಹಲಿಗೆ ಹತ್ತಿರವಿರುವ ಮೇವಾತ್ ಮೊದಲ ಸ್ಥಾನದಲ್ಲಿದೆ. ಇಲ್ಲಿ ಮುಸ್ಲಿಮರ ಸಂಖ್ಯೆ ಅತ್ಯಧಿಕವಿದೆ. ಇದರ  ಹತ್ತಿರವೇ ಇರುವ ಗುರುಗ್ರಾಮ್ ಜಿಲ್ಲೆಯಲ್ಲಿ ಮಲ್ಟಿನ್ಯಾಷನಲ್ ಕಂಪೆನಿಗಳು ಬಿಡಾರ ಹೂಡಿವೆ. ದೇಶದ ಅತ್ಯಂತ ಮುಂದುವರಿದ ಜಿಲ್ಲೆಗಳಲ್ಲಿ ಇದೂ ಒಂದು. ದೇಶದ ಅತ್ಯಂತ ಹೆಚ್ಚು ಹಿಂದುಳಿದಿರುವ 20 ಜಿಲ್ಲೆಗಳ ಪೈಕಿ 11 ಜಿಲ್ಲೆಗಳೂ ಮುಸ್ಲಿಮ್  ಬಾಹುಳ್ಯವಿರುವ ಜಿಲ್ಲೆಗಳಾಗಿವೆ. ಇಲ್ಲೂ ಎರಡು ವಿಷಯಗಳು ಸ್ಪಷ್ಟವಾಗಿ ಎದ್ದು ಕಾಣುತ್ತದೆ.
1. ಮುಸ್ಲಿಮರ ಬಗ್ಗೆ ವ್ಯವಸ್ಥೆಯ ನಿರ್ಲಕ್ಷ್ಯ.
2. ಝಕಾತ್ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಮುಸ್ಲಿಮ್ ಸಮುದಾಯ ವಿಫಲವಾಗಿರುವುದು.
ಒಂದುವೇಳೆ, ವ್ಯವಸ್ಥೆ ಮುಸ್ಲಿಮರ ಮೇಲೆ ಕಾಕದೃಷ್ಟಿ ಬೀರಿದರೂ ಝಕಾತ್ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮುಸ್ಲಿಮರಿಗೆ ಸಾಧ್ಯವಾಗಿದ್ದರೆ, ಅಂಕಿ-ಅಂಶಗಳು ಇಷ್ಟು ನೀರಸವಾಗಿ ಇರುತ್ತಿರಲಿಲ್ಲ. ಒಂದುಕಡೆ, ಸರಕಾರದ ಅವಕೃಪೆ  ಮತ್ತು ಇನ್ನೊಂದು ಕಡೆ ಮುಸ್ಲಿಮ್ ಸಮುದಾಯದ ಶ್ರೀಮಂತರ ಹೊಣೆರಹಿತ ವರ್ತನೆ- ಇವೆರಡೂ ಜೊತೆಯಾದಾಗ ಏನಾಗಬಹುದೋ ಅದುವೇ ಆಗಿದೆ. ಅಷ್ಟಕ್ಕೂ,
ಇದು ಭಾರತೀಯ ಮುಸ್ಲಿಮ್ ಶ್ರೀಮಂತರ ಸಮಸ್ಯೆಯಷ್ಟೇ ಅಲ್ಲ, ಜಾಗತಿಕವಾಗಿ ಮುಸ್ಲಿಮ್ ರಾಷ್ಟ್ರಗಳಲ್ಲಿರುವ ಸಮಸ್ಯೆಯೂ ಇದುವೇ. ಮುಸ್ಲಿಮರು ಬಹುಸಂಖ್ಯಾತರಿರುವ ಸುಮಾರು 47 ರಾಷ್ಟ್ರಗಳಲ್ಲಿ ಝಕಾತ್ ಕಡ್ಡಾಯವಾಗಿ  ಸಂಗ್ರಹವಾಗುತ್ತಿರುವುದು- ಲಿಬಿಯ, ಮಲೇಶ್ಯಾ, ಪಾಕಿಸ್ತಾನ, ಸೌದಿ ಅರೇಬಿಯ, ಸುಡಾನ್ ಮತ್ತು ಯಮನ್‍ಗಳಲ್ಲಿ ಮಾತ್ರ. ಇಲ್ಲಿ ಸರಕಾರವೇ ಮುಂದೆ ನಿಂತು ಝಕಾತನ್ನು ಸಂಗ್ರಹಿಸುತ್ತದೆ. ಈಜಿಪ್ಟ್, ಜೋರ್ಡಾನ್, ಬಹರೈನ್, ಕುವೈತ್, ಲೆಬನಾನ್,  ಬಾಂಗ್ಲಾದೇಶ, ಇರಾನ್, ಜೋರ್ಡಾನ್, ಯುಎಇ, ಇಂಡೋನೇಶ್ಯಾ ಮುಂತಾದ ರಾಷ್ಟ್ರಗಳಲ್ಲಿ ಝಕಾತ್ ಸಂಗ್ರಹಕ್ಕೆ ಸರಕಾರದ ವತಿಯಿಂದ ವ್ಯವಸ್ಥೆ ಮಾಡಲಾಗಿದೆಯಾದರೂ ಝಕಾತನ್ನು ನೀಡುವ ಅಥವಾ ಬಿಡುವ ಅವಕಾಶವನ್ನು ಶ್ರೀಮಂತರಿಗೇ  ಬಿಟ್ಟುಕೊಡಲಾಗಿದೆ. ಉಳಿದಂತೆ ಟರ್ಕಿ, ಉಝ್ಬೆಕಿಸ್ತಾನ್, ಟುನೀಶ್ಯಾ, ತಜಕಿಸ್ತಾನ್, ಸೊಮಾಲಿಯ, ಸೆನೆಗಲ್, ಕತಾರ್, ಸಿರಿಯಾ, ಒಮಾನ್, ಕಝಕಿಸ್ತಾನ್, ಇರಾಕ್, ಅಲ್ಜೀರಿಯಾ, ಅಫಘಾನಿಸ್ತಾನ್ ಇತ್ಯಾದಿ ರಾಷ್ಟ್ರಗಳಲ್ಲೆಲ್ಲ ಝಕಾತ್ ಸಂಗ್ರಹಕ್ಕೆ  ಸರಕಾರಿ ವ್ಯವಸ್ಥೆಯೇ ಇಲ್ಲ. ಮುಸ್ಲಿಮ್ ರಾಷ್ಟ್ರಗಳೇ ಝಕಾತ್ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲವೆಂದ ಮೇಲೆ ಮತ್ತು ಸಂಗ್ರಹಿಸಿದ ಮೊತ್ತವನ್ನೂ ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾಗುತ್ತಿದೆಯೆಂದ ಮೇಲೆ ಭಾರತೀಯ  ಮುಸ್ಲಿಮರ ವೈಫಲ್ಯವನ್ನು ನಾವು ವಿಶ್ವದ ಎಂಟನೇ ಅದ್ಭುತವಾಗಿ ನೋಡಬೇಕಿಲ್ಲ. ಆದರೂ ವೈಫಲ್ಯವನ್ನು ವೈಫಲ್ಯವೆಂದು ಒಪ್ಪಿಕೊಳ್ಳದೇ ಹೋದರೆ ತಿದ್ದಿಕೊಳ್ಳುವುದಕ್ಕೆ ಅವಕಾಶವೇ ಇರುವುದಿಲ್ಲವಲ್ಲ. ಆ ಕಾರಣಕ್ಕಾಗಿ ಯಾದರೂ ಭಾರತೀಯ  ಮುಸ್ಲಿಮರು ಹೊಸತೊಂದು ಸ್ಟ್ರಾಟಜಿಯನ್ನು ತಯಾರಿಸಬೇಕು. ಹಾಗಂತ, ಈ ಸ್ಟ್ರಾಟಜಿ ಮುಸ್ಲಿಮರಿಗೆ ಮಾತ್ರ ಸೀಮಿತವಾಗಬೇಕಿಲ್ಲ. ಮುಸ್ಲಿಮೇತರರನ್ನೂ ಆಕರ್ಷಿಸಬಲ್ಲಂಥ ಪ್ರಾಯೋಗಿಕ ಸ್ಟ್ರಾಟಜಿಯನ್ನು ರೂಪಿಸಬೇಕು. ಮುಖ್ಯವಾಗಿ,
ಪ್ರತಿ ಮಸೀದಿಗಳೂ ಝಕಾತ್ ಕಮಿಟಿಯನ್ನು ರಚಿಸಬೇಕು. ಈ ಕಮಿಟಿಯಲ್ಲಿ ಮಸೀದಿಯ ಅಧ್ಯಕ್ಷರು, ಧರ್ಮಗುರುಗಳು, ಶ್ರೀಮಂತರೂ ಇರುವಂತೆ ನೋಡಿಕೊಳ್ಳಬೇಕು. ಈ ದೇಶದ ಪ್ರತಿ ಮಸೀದಿಯಲ್ಲೂ ಆ ಮಸೀದಿಯ ವ್ಯಾಪ್ತಿಗೆ ಒಳಪಟ್ಟವರ  ಹೆಸರು ಮತ್ತು ವಿಳಾಸಗಳು ಇರುತ್ತವೆ ಮತ್ತು ಪ್ರತಿ ಮುಸ್ಲಿಮರೂ ಯಾವುದಾದರೊಂದು ಮಸೀದಿಗೆ ಒಳಪಟ್ಟಿರುತ್ತಾರೆ. ಈ ಝಕಾತ್ ಕಮಿಟಿ ಏನು ಮಾಡಬೇಕೆಂದರೆ, ಪ್ರತಿ ಮನೆಯ ವಿವರಗಳನ್ನೂ ಸಮಗ್ರವಾಗಿ ಸಂಗ್ರಹಿಸುವ ತಂಡಗಳನ್ನು  ರಚಿಸಬೇಕು. ಆ ವಿವರಗಳಲ್ಲಿ ಮನೆಯ ಸದಸ್ಯರ ಸಂಖ್ಯೆ, ಹೆಣ್ಣು-ಗಂಡು, ವಿದ್ಯಾರ್ಥಿಗಳು, ದುಡಿಯುವವರು, ರೋಗಿಗಳು, ವಿಧವೆಯರು, ಮದುವೆ ಪ್ರಾಯದ ಯುವತಿಯರು, ವೃದ್ಧರು, ಕುಟುಂಬದ ವರಮಾನ, ಬಿಪಿಎಲ್, ಎಪಿಎಲ್ ಸೌಲಭ್ಯವನ್ನು ಹೊಂದಿರುವವರು, ಮಾಸಾಶನವೂ ಸೇರಿದಂತೆ ಸರಕಾರಿ ಸೌಲಭ್ಯಗಳನ್ನು ಪಡೆಯುತ್ತಿರುವವರು ಇತ್ಯಾದಿ ಇತ್ಯಾದಿ ಸಂಪೂರ್ಣ ವಿವರಗಳುಳ್ಳ ಡಾಟಾವನ್ನು ಮಸೀದಿಯ ಕಂಪ್ಯೂಟರ್‍ನಲ್ಲಿ ದಾಖಲಿಸಿ ಇಡಬೇಕು. ಇಷ್ಟು ವಿವರಗಳನ್ನು ಕಲೆ ಹಾಕಿದರೆ 90% ಕೆಲಸ  ಮುಗಿದಂತೆ. ಈ ವಿವರಗಳನ್ನು ನೋಡಿದ ಆ ಮಸೀದಿ ವ್ಯಾಪ್ತಿಯ ಯಾವುದೇ ಶ್ರೀಮಂತ ಝಕಾತನ್ನು ನೀಡದೇ ಇರಲಾರ. ದಾನಿಗಳೂ ಸಹಾಯ ಮಾಡಲು ಮುಂದೆ ಬಂದಾರು. ಪ್ರತಿ ಮಸೀದಿಯ ವ್ಯಾಪ್ತಿಯಲ್ಲಿರುವ ಬಡವರನ್ನು ಸಬಲರನ್ನಾಗಿ  ಮಾಡುವುದು ಝಕಾತ್ ಕಮಿಟಿಯ ಗುರಿಯಾಗಿರಬೇಕು. ಟೀ ಶಾಪ್, ರಿಕ್ಷಾ, ತಳ್ಳುಗಾಡಿ, ದಿನಸಿ ಅಂಗಡಿ, ಮೊಬೈಲ್ ರಿಪೇರಿ-ಟಿ.ವಿ. ರಿಪೇರಿ ಶಾಪ್, ಪೈಂಟಿಂಗ್, ಸಾರಣೆಗೆ ಬೇಕಾದ ಪರಿಕರಗಳು... ಹೀಗೆ ಜನರ ಕೌಶಲ್ಯವನ್ನು ಪರಿಗಣಿಸಿ  ಬೇಕಾದುದನ್ನು ಒದಗಿಸಬೇಕು. ಆ ಮೂಲಕ ಅವರು ಸ್ವಾವಲಂಬಿಗಳಾಗುವಂತೆ ಮಾಡಬೇಕು. ಮುಂದಿನ ವರ್ಷಗಳಲ್ಲಿ ಅವರೂ ಝಕಾತ್ ನೀಡುವಂತೆ ಮಾಡುವವರೆಗೆ ಝಕಾತ್ ಕಮಿಟಿ ಅವರ ಮೇಲೆ ಒಂದು ಕಣ್ಣಿಡಬೇಕು. ತನ್ನ ಆದಾಯದ  2.5% ಝಕಾತ್ ನೀಡುವಂತೆ ಆಯಾ ಮಸೀದಿ ವ್ಯಾಪ್ತಿಯ ಶ್ರೀಮಂತರಿಗೆ ಮನವರಿಕೆ ಮಾಡಿಸುವ ಹೊಣೆಗಾರಿಕೆಯನ್ನೂ ಝಕಾತ್ ಕಮಿಟಿ ಹೊತ್ತುಕೊಳ್ಳಬೇಕು. ಅಂದಹಾಗೆ, ಝಕಾತ್‍ನ ಶೇಕಡಾವಾರು ಮೊತ್ತ ಏಕರೂಪವಲ್ಲ. ನೀರಾವರಿ ಕೃಷಿಗೆ  5%, ಮಳೆನೀರು ಕೊಯ್ಲಿಗೆ 10%, ಬಂಗಾರ-ಬೆಳ್ಳಿ, ಹಣ, ವ್ಯಾಪಾರ, ವೇತನ ಇತ್ಯಾದಿಗಳಿಗೆ 2.5%, ಖನಿಜ ಮೂಲದಿಂದ ಪಡೆದ ಆದಾಯಕ್ಕೆ 20%... ಹೀಗೆ ಝಕಾತ್ ಕಮಿಟಿಯಲ್ಲಿ ಪಕ್ಕಾ ಲೆಕ್ಕಾಚಾರವಿರಬೇಕು. ಇದೇನೂ ಅಸಾಧ್ಯವಲ್ಲ. ಪ್ರತಿ  ಮಸೀದಿಗಳೂ ಮನಸ್ಸು ಮಾಡಿದರೆ ಮತ್ತು ಮಸೀದಿ ಧರ್ಮಗುರುಗಳು ಹಾಗೂ ಮಸೀದಿ ಕಮಿಟಿಗಳು ಮುತುವರ್ಜಿ ತೋರಿದರೆ ದೊಡ್ಡದೊಂದು ಬದಲಾವಣೆ ಸಾಧ್ಯವಾಗಬಹುದು. ಮಾತ್ರವಲ್ಲ, ಮುಸ್ಲಿಮೇತರ ಸಮುದಾಯಕ್ಕೂ ಇದು  ಮಾದರಿಯಾಗಬಹುದು. ಅಂದಹಾಗೆ,
ಅಂಬಾನಿ, ಅದಾನಿ, ಟಾಟಾ, ಬಿರ್ಲಾ, ಇನ್ಫೋಸಿಸ್ ಮತ್ತಿತರ ದಿಗ್ಗಜರು ತಮ್ಮ ಶ್ರೀಮಂತಿಕೆಯಲ್ಲಿ ಬಡವರದ್ದೂ ಪಾಲಿದೆ ಎಂದು ಅಂದುಕೊಳ್ಳುವುದನ್ನು ಮತ್ತು ಅದನ್ನು ತಮ್ಮ ಸಮುದಾಯದ ಬಡವರಿಗೆ ಪಾವತಿಸಲು ಮುಂದಾಗುವುದನ್ನೊಮ್ಮೆ  ಊಹಿಸಿ. ಅದು ಈ ದೇಶದಲ್ಲಿ ಮಾಡಬಹುದಾದ ಕ್ರಾಂತಿಯನ್ನೊಮ್ಮೆ ಲೆಕ್ಕ ಹಾಕಿ.

No comments:

Post a Comment