Thursday, June 27, 2019

ಆ ನ್ಯಾಯಾಧೀಶ ಸೇದುವ ಸಿಗರೇಟು ಅದು ಎಷ್ಟನೆಯದ್ದೋ?



Censorship through Noice
Censorship through Silence

    ಮಾಧ್ಯಮ ಜಗತ್ತನ್ನು ವ್ಯಾಖ್ಯಾನಿಸುವುದಕ್ಕೆ ಖ್ಯಾತ ತತ್ವಜ್ಞಾನಿ ಮತ್ತು ಕಾದಂಬರಿಕಾರ ಅಂಬಟೊಕ್ ಇಕೋ ಬಳಸಿದ ಎರಡು ಪದಪುಂಜಗಳು ಇವು. ಗದ್ದಲದ ಮೂಲಕ (Censorship through Noice) ಮತ್ತು ಮೌನದ ಮೂಲಕ  (Censorship through Silence) ಮಾಧ್ಯಮಗಳು ಹೇಗೆ ಸುದ್ದಿ ಸೆನ್ಸಾರ್ ನಡೆಸುತ್ತವೆ ಅನ್ನುವುದನ್ನು ದಶಕದ ಹಿಂದೆ ಅವರು ವಿವರಿಸಿದ್ದರು. ಇದನ್ನು ಎರಡು ಉದಾಹರಣೆಗಳ ಮೂಲಕ ನಾವಿಲ್ಲಿ ಅರ್ಥ ಮಾಡಿಕೊಳ್ಳಬಹುದು.
1. ಲಂಚ ಪ್ರಕರಣಕ್ಕೆ ಸಂಬಂಧಿಸಿ 2009ರಲ್ಲಿ ಇಟಲಿಯ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ಅವರ ವಿರುದ್ಧ ರೈಮಂಡೋ ಮೆಸಿಯಾನೋ ಅನ್ನುವ ನ್ಯಾಯಾಧೀಶ ತೀರ್ಪು ನೀಡುತ್ತಾರೆ. ಪ್ರಧಾನಿ ಬೆರ್ಲುಸ್ಕೋನಿಯವರು ಲಂಚ ಪ್ರಕರಣದಲ್ಲಿ ತಪ್ಪಿತಸ್ಥ  ಅನ್ನುವುದು ಸಣ್ಣ ಸುದ್ದಿಯಲ್ಲ. ಇಡೀ ಇಟಲಿಯನ್ನೇ ದಂಗು ಬಡಿಸಬಹುದಾದ ಮತ್ತು ಬೆರ್ಲುಸ್ಕೋನಿಯ ಪ್ರಧಾನಮಂತ್ರಿ ಸ್ಥಾನಕ್ಕೆ ಕುತ್ತು ತರಬಹುದಾದ ಎಲ್ಲ ಸಾಮರ್ಥ್ಯವೂ ಆ ತೀರ್ಪಿಗಿತ್ತು. ನ್ಯಾಯಾಧೀಶ ರೈಮಂಡೋ ಮೆಸಿಯಾನೋ ಅವರ  ಧೈರ್ಯ, ಪ್ರಾಮಾಣಿಕತೆ ಮತ್ತು ನಿಷ್ಠುರ ಧೋರಣೆಗಳು ಸಾರ್ವಜನಿಕ ಚರ್ಚೆಗೊಳಗಾಗುವ ಎಲ್ಲ ಸಾಧ್ಯತೆಗಳೂ ಕಂಡು ಬಂದುವು. ಹೀಗಾಗುವುದೆಂದರೆ, ಪರೋಕ್ಷವಾಗಿ ಬೆರ್ಲುಸ್ಕೋನಿ ಬೆತ್ತಲಾಗುವುದು ಎಂದೇ ಅರ್ಥ. ಈ ತೀರ್ಪನ್ನು ಎತ್ತಿಕೊಂಡು  ಪ್ರತಿಪಕ್ಷಗಳು ಮತ್ತು ಮಾಧ್ಯಮಗಳು ಬೆರ್ಲುಸ್ಕೋನಿಯನ್ನು ಹಣಿಯುವುದು ಶತಸಿದ್ಧವಾಗಿತ್ತು. ಇನ್ನೇನು ಬೆರ್ಲುಸ್ಕೋನಿ ಯುಗ ಮುಗಿಯಿತು ಅನ್ನುವಾಗ ಇಟಲಿಯ ಪ್ರಸಿದ್ಧ ‘Canale  5’ ಎಂಬ ಟಿ.ವಿ. ಚಾನೆಲ್‍ನಲ್ಲಿ ವೀಡಿಯೋವೊಂದು ಪ್ರಸಾರ  ವಾಯಿತು. ಇಟಲಿಯ ಮಟ್ಟಿಗೆ ಅತ್ಯಂತ ಹೆಚ್ಚು ವೀಕ್ಷಕರಿರುವ ಚಾನೆಲ್ ಇದು. ನ್ಯಾಯಾಧೀಶ ರೈಮಂಡೋ ಮೆಸಿಯಾನೋ ಅವರಿಗೆ ಸಂಬಂಧಿಸಿದ ವೀಡಿಯೋ. ಈ ನ್ಯಾಯಾಧೀಶರು ರಸ್ತೆಯಲ್ಲಿ ನಡೆಯುವುದು, ನಡೆಯುತ್ತಾ ಸಿಗರೇಟು  ಸೇದುವುದು, ಕ್ಷೌರದಂಗಡಿಗೆ ಹೋಗುವುದು ಮತ್ತು ಗಡ್ಡ ಬೋಳಿಸುವುದು ಇತ್ಯಾದಿ ಖಾಸಗಿ ವಿಷಯಗಳು ಆ ವೀಡಿಯೋದಲ್ಲಿದ್ದುವು. ಆ ವೀಡಿಯೋ ಪ್ರಸಾರದ ನಡುನಡುವೆ ಆ್ಯಂಕರ್ ಅದಕ್ಕೊಂದು ವ್ಯಾಖ್ಯಾನವನ್ನು ನೀಡುತ್ತಲೇ ಹೋದ:
‘ವೀಕ್ಷಕರೇ, ಈ ನ್ಯಾಯಾಧೀಶರಿಗೆ ಇನ್ನೊಂದು ಗುಪ್ತ ಮುಖವೂ ಇದೆ. ಇವರು ಸೇದುವ ಈ ಸಿಗರೇಟು ಎಷ್ಟನೆಯ ದಾಗಿರಬಹುದು? ಇವರು ಧರಿಸಿರುವ ಕಾಲು ಚೀಲವನ್ನೊಮ್ಮೆ ನೋಡಿ. ಎಂಥ ಸಾಕ್ಸು? ವಿಚಿತ್ರ ಅನಿಸಲ್ವೆ? ಇವರೊಬ್ಬ  ಶೋಕಿಮ್ಯಾನ್. ಇವರಿಗೆ ಶಾಂತಿ-ನೆಮ್ಮದಿ ಸಿಗುವುದು ಕ್ಷೌರದಂಗಡಿಯಲ್ಲಿ ಮಾತ್ರ...’ ಹೀಗೆ ಸಾಗಿತ್ತು ಆತನ ಒಕ್ಕಣೆ.
ಇಟಲಿಯ ನಾಗರಿಕರಲ್ಲಿ ಈ ವೀಡಿಯೋ ವಿಚಿತ್ರ ಕುತೂಹಲವನ್ನು ಹುಟ್ಟು ಹಾಕಿತು. ಅವರಿಗೆ ಆ ಬಗೆಯ ಸುದ್ದಿ ಹೊಸತು. ನ್ಯಾಯಾಧೀಶರ ಖಾಸಗಿ ವಿವರಣೆಗಳನ್ನು ಸೆರೆ ಹಿಡಿದು ಹಾಗೆ ರಸವತ್ತಾಗಿ ಪ್ರಸಾರ ಮಾಡಿದ ಮೊದಲ ಘಟನೆ ಎಂಬ  ನೆಲೆ ಯಲ್ಲಿ ಇಟಲಿಯನ್ನರನ್ನು ಅದು ಸೆಳೆಯಿತು. ಅವರ ಸಿಗರೇಟು ಚರ್ಚೆಗೊಳಗಾಯಿತು. ಸಾಕ್ಸು ಮಾತಿಗೆ ವಸ್ತುವಾಯಿತು. ಅವರ ಇನ್ನಿತರ ಖಾಸಗಿ ಪ್ರಸಂಗಗಳ ಬಗ್ಗೆ ಸಾಮಾನ್ಯ ಜನರಲ್ಲಿ ಕುತೂಹಲ ಹೆಚ್ಚಿತು. ಜನರು ನ್ಯಾಯಾಧೀಶರ ಬಗ್ಗೆ  ವಿಧವಿಧವಾಗಿ ಮಾತಾಡತೊಡಗಿದರು. ಎಲ್ಲಿಯವರೆಗೆಂದರೆ, ಪ್ರತಿಪಕ್ಷಗಳೇ ಅದರ ವಿರುದ್ಧ ಮಾತಾಡಬೇಕಾಯಿತು. ನ್ಯಾಯಾಧೀಶರು ಆ ವೀಡಿಯೋ ಪ್ರಸಾರವನ್ನು ಖಂಡಿಸಿದರು. ಪ್ರತಿಪಕ್ಷಗಳೂ ಖಂಡಿಸಿದುವು. ತಮಾಷೆ ಏನೆಂದರೆ, ಈ ಖಂಡನೆಯೇ  ಮತ್ತೊಂದು ಸುತ್ತಿನ ಚರ್ಚೆಗೆ ಕಾರಣವಾಯಿತು. ಗದ್ದಲದ ನಡುವೆ ಬೆರ್ಲುಸ್ಕೋನಿಯ ಲಂಚ ಪ್ರಕರಣ ಮರೆಗೆ ಸರಿಯಿತು.
2. ಕಳೆದ ಲೋಕಸಭಾ ಚುನಾವಣೆಯಲ್ಲಿ ಎನ್.ಡಿ.ಎ.ಯ ಭರ್ಜರಿ ಗೆಲುವಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಮಂತ್ರಿ ಮಂಡಲದ ಸದಸ್ಯರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ನೆರೆಕರೆ ದೇಶದ ಮುಖಂಡರು ಅದರಲ್ಲಿ ಭಾಗವಹಿಸಿದರು.  ಈ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭದಲ್ಲಿ ಗಮನ ಸೆಳೆದವರಲ್ಲಿ ಒಬ್ಬರು- ಒಡಿಸ್ಸಾದ 64 ವರ್ಷದ ಪ್ರತಾಪ್ ಚಂದ್ರ ಸಾರಂಗಿ. ಬಿಳಿ ಕುರ್ತಾ ಮತ್ತು ಬಾಚದ ಕೂದಲಿನೊಂದಿಗೆ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಅವರನ್ನು ಉಳಿದ ಸಂಸದರು ಮತ್ತು  ಅತಿಥಿಗಳು ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿದರು. ಟೈಮ್ಸ್ ನೌ ಚಾನೆಲ್‍ನ ವೆಬ್‍ಸೈಟ್‍ನಲ್ಲಿ ಅವರ ಬಗ್ಗೆ ಬರಹ ಪ್ರಕಟವಾಗಿತ್ತು. ಅವರು ಸಂಚಾರಕ್ಕೆ ಸೈಕಲನ್ನು ಉಪಯೋಗಿಸುವುದು, ಸಂಸ್ಕೃತ  ಭಾಷೆಯಲ್ಲಿ ಸಂವಹನ ನಡೆಸುವುದು ಹಾಗೂ  ವೇಷ ಭೂಷಣ ಮತ್ತು ಸಂಪತ್ತಿನಲ್ಲೂ ಸರಳವಾಗಿರುವುದನ್ನು ಆ ಬರಹದಲ್ಲಿ ವಿಶೇಷ ಒತ್ತು ಕೊಟ್ಟು ಹೇಳಲಾಗಿತ್ತು. ಅವರಲ್ಲಿ ಬರೇ 13 ಲಕ್ಷ  ರೂಪಾಯಿಯಷ್ಟೇ ಇದೆ ಅನ್ನುವುದನ್ನು ಗಮನ ಸೆಳೆಯುವ ರೀತಿಯಲ್ಲಿ ಉಲ್ಲೇಖಿಸಲಾಗಿತ್ತು. ಅವರು  ದೆಹಲಿಯಲ್ಲಿ ಸೈಕಲ್ ಮೂಲಕ ಸಂಚರಿಸುವುದನ್ನು ನೀವು ನೋಡಿದರೆ ಅಚ್ಚರಿಗೆ ಒಳಗಾಗುವಿರಿ ಎಂದೂ ಹೇಳಲಾಗಿತ್ತು.’
ಹಾಗಂತ, ಈ ವಿವರಣೆಗಳೆಲ್ಲ ಸುಳ್ಳು ಎಂದಲ್ಲ, ನಿಜವೇ. ಮಾತ್ರವಲ್ಲ, ಅವರ ಸರಳತನ, ಕನಿಷ್ಠ ಆದಾಯ, ಸೈಕಲ್ ಸವಾರಿ, ಬಿಳಿ ಕುರ್ತಾ-ಪೈಜಾಮ, ಸಂಸ್ಕೃತ ಭಾಷೆಯಲ್ಲಿ ಸಂವಹನ ಇತ್ಯಾದಿ ಇತ್ಯಾದಿಗಳ ಬಗ್ಗೆ ಸುದ್ದಿ ತಯಾರಿಸುವುದು ಅಪರಾಧವೂ ಅಲ್ಲ. ಆದರೆ, ಈ ಸುದ್ದಿ ತಯಾರಿಸುವ ಭರಾಟೆಯಲ್ಲಿ ಸುದ್ದಿಯಾಗಲೇಬೇಕಾದ ಪ್ರಮುಖ ವಿಷಯಗಳನ್ನು ಅಡಗಿಸಬಾರದಲ್ಲ. ಸಾರಂಗಿಯ ವಿಷಯದಲ್ಲಿ ಟೈಮ್ಸ್ ನೌ ಎಂದಲ್ಲ, ಹಲವು ರಾಷ್ಟ್ರಮಟ್ಟದ ಪತ್ರಿಕೆಗಳು ಮತ್ತು ಚಾನೆಲ್‍ಗಳು  ದಂಗುಬಡಿಸುವ ಸತ್ಯವನ್ನು ಮುಚ್ಚಿಟ್ಟವು ಅಥವಾ ಮರೆತಂತೆ ನಟಿಸಿದುವು. 1999ರಲ್ಲಿ ಕ್ರೈಸ್ತ ಮಿಷನರಿ ಗ್ರಹಾಂ ಸ್ಟೈನ್ ಮತ್ತು ಅವರ ಇಬ್ಬರು ಮಕ್ಕಳನ್ನು ಸುಟ್ಟು ಕೊಂದ ಪ್ರಕರಣ ಒಡಿಸ್ಸಾದಲ್ಲಿ ನಡೆದಿತ್ತು. ಜೀಪಿನಲ್ಲಿ ಮಲಗಿದ್ದ ಈ ಮೂವರನ್ನೂ ಬೆಂಕಿ  ಹಚ್ಚಿ ಸಾಯಿಸಲಾಗಿತ್ತು. ಈ ಕೃತ್ಯದ ಹೊಣೆಯನ್ನು ಬಜರಂಗ ದಳದ ಮೇಲೆ ಹೊರಿಸಲಾಗಿತ್ತು. ದಾರಾಸಿಂಗ್ ಅನ್ನುವ ವ್ಯಕ್ತಿಯನ್ನು ಕೃತ್ಯದ ರೂವಾರಿಯೆಂದು ನ್ಯಾಯಾಲಯ ಘೋಷಿಸಿದ್ದು ಮತ್ತು ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದೂ ನಡೆಯಿತು.  ಈ ಕೃತ್ಯದ ಸಮಯದಲ್ಲಿ ಬಜರಂಗದಳದ ಸ್ಥಾನೀಯ ಸಂಚಾಲಕರಾಗಿದ್ದುದು ಇದೇ ಸಾರಂಗಿ. 2007ರಲ್ಲಿ ಒಡಿಸ್ಸಾ ವಿಧಾನಸಭೆಯ ಮೇಲೆ ದಾಳಿ ನಡೆಸಿದ ಗುಂಪಿಗೆ ನೇತೃತ್ವ ನೀಡಿದ ಆರೋಪವೂ ಸಾರಂಗಿಯ ಮೇಲಿದೆ. ಸದ್ಯ ಅವರ ಮೇಲೆ 7  ಕ್ರಿಮಿನಲ್ ಕೇಸುಗಳಿವೆ. ಧರ್ಮಗಳ ನಡುವೆ ದ್ವೇಷ ಹರಡಿದ್ದು, ಶಾಂತಿ ಸುವ್ಯವಸ್ಥೆಯನ್ನು ಕೆಡಿಸಿದ್ದು ಇತ್ಯಾದಿ ಆರೋಪಗಳೂ ಇದರಲ್ಲಿ ಸೇರಿವೆ. ಅಂದಹಾಗೆ, ಸಾರಂಗಿಯವರು ಈ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ ನಿಜ.  ಆದರೆ, ಅವರನ್ನು ಕೇಂದ್ರೀಕರಿಸಿ ಸುದ್ದಿ ತಯಾರಿಸುವಾಗ ಅವರ ಸುತ್ತ ಹರಡಿಕೊಂಡಿರುವ ಈ ಕತ್ತಲ ಸ್ಥಿತಿಯನ್ನೂ ಪರಿಗಣಿಸಬೇಕಲ್ಲ. ಸುದ್ದಿಯು ಸುದ್ದಿ ತಯಾರಕನ ಮನಸ್ಥಿತಿಯಂತೆ ಅಥವಾ ಸುದ್ದಿ  ಸಂಸ್ಥೆಯ ಬಯಕೆಯಂತೆ ರಚಿತವಾಗಬಾರದಲ್ಲ. ಈ ಬಗ್ಗೆ ಎಚ್ಚರಿಕೆ ವಹಿಸದೇ ತಯಾರಿಸುವ ಸುದ್ದಿಯನ್ನು ರದ್ದಿ ಎಂದಲ್ಲದೇ ಇನ್ನೇನೆಂದೂ ಕರೆಯಬೇಕು? ಅಂದಹಾಗೆ,
ಗಂಭೀರ ವಿಷಯವೊಂದು ಚರ್ಚೆಗೆ ಒಳಗಾಗುತ್ತದೆ ಎಂಬ ಸನ್ನಿವೇಶ ನಿರ್ಮಾಣಗೊಂಡಾಗ ಅಗಂಭೀರ ವಿಷಯವನ್ನು ಮುನ್ನೆಲೆಗೆ ತಂದು, ಅದರ ಸುತ್ತ ಗದ್ದಲವನ್ನು ಎಬ್ಬಿಸಿ, ಗಂಭೀರ ವಿಷಯವನ್ನು ಮರೆಗೆ ಸರಿಸುವ ಮಾಧ್ಯಮ ನೀತಿಗೆ  (Censorship through Noice) ಇಟಲಿಯ ಬೆರ್ಲುಸ್ಕೋನಿ ಪ್ರಕರಣ ಒಂದು ಉದಾಹರಣೆ ಅಷ್ಟೇ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮಲ್ಲೂ ಈ ಬಗೆಯ ಗದ್ದಲದ ಪತ್ರಿಕೋದ್ಯಮ ಹೆಜ್ಜೆ ಹೆಜ್ಜೆಗೂ ಕಾಣಸಿಕ್ಕಿತು. ಝೀ ನ್ಯೂಸ್,  ಟೈಮ್ಸ್ ನೌ, ಎ.ಬಿ.ಪಿ. ನ್ಯೂಸ್, ನ್ಯೂಸ್ ನೇಷನ್ ಇತ್ಯಾದಿ ಟಿ.ವಿ. ಚಾನೆಲ್‍ಗಳು ಲೋಕಸಭಾ ಚುನಾವಣೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಂದರ್ಶನ ಪ್ರಸಾರ ಮಾಡಿದುವು. ವಿಶೇಷ ಏನೆಂದರೆ, ಈ ಸಂದರ್ಶನವು ಬಹುತೇಕ  ರಾಜಕೀಯ ರಹಿತ ವಿಷಯಗಳ ಮೇಲೆ ನಡೆದಿತ್ತು. ಪ್ರಧಾನಿಯವರ ಆಹಾರ ಕ್ರಮಗಳ ಕುರಿತು, ಅವರ ವಸ್ತ್ರ ವಿನ್ಯಾಸದ ಕುರಿತು, ಬಾಲ್ಯದ ಕುರಿತು, ಆ ಬಾಲ್ಯದಲ್ಲಿ ತಿಂದ ಹಣ್ಣುಗಳ ಕುರಿತು... ಹೀಗೆ ಸಾಗಿತ್ತು ಸಂದರ್ಶನ. ನಿಜವಾಗಿ, ಚುನಾವಣೆ  ನಡೆಯುವುದು ಮತ್ತು ನಡೆಯಬೇಕಾಗಿರುವುದು ಜನರು ಎದುರಿಸುತ್ತಿರುವ ಸಮಸ್ಯೆಗಳ ಮೇಲೆ. ಚುನಾವಣೆಯೆಂಬುದೇ ಪಕ್ಕಾ ರಾಜಕೀಯ. ರಾಜಕೀಯ ರಹಿತ ಚುನಾವಣೆ ಎಂಬುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಾಧ್ಯವೂ ಇಲ್ಲ. ಇಂಥ ಸ್ಥಿತಿಯಲ್ಲಿ  ಮುಖ್ಯ ವಾಹಿನಿಯ ಟಿ.ವಿ. ಚಾನೆಲ್‍ಗಳು ರಾಜಕೀಯ ರಹಿತ ಸಂದರ್ಶನ ನಡೆಸುವುದೆಂದರೆ, ಅದರಿಂದ ನಾಗರಿಕರಿಗಾಗುವ ಪ್ರಯೋಜನಗಳೇನು? ಪ್ರಧಾನಿಯವರ ಉಡುಪು ವಿನ್ಯಾಸ ಮತ್ತು ಆಹಾರ ಕ್ರಮಗಳನ್ನು ಅರಿತುಕೊಳ್ಳುವುದು ಚುನಾವಣೆಯ  ಸಮಯದಲ್ಲಿ ಯಾಕೆ ಮುಖ್ಯವಾಗಬೇಕು? ಅವರ ಬಾಲ್ಯ, ಯೌವನ, ಸಾಹಿತ್ಯಾಭಿರುಚಿ, ಹವ್ಯಾಸಗಳು ಮುಂತಾದ ಖಾಸಗಿ ವಿಚಾರಗಳು- ಯಾರಿಗೆ ಓಟು ಹಾಕಬೇಕು ಎಂದು ಮತದಾರ ತೀರ್ಮಾನಿಸುವುದಕ್ಕೆ ಮಾನದಂಡಗಳೇ? ಜನರ ಮತವನ್ನು  ಇಂಥವು ನಿರ್ಧರಿಸಬೇಕೇ? ರಫೇಲ್ ವ್ಯವಹಾರದಲ್ಲಾಗಿರಬಹುದಾದ ಭ್ರಷ್ಟಾಚಾರದ ಬಗ್ಗೆ ನಾಗರಿಕರಲ್ಲಿ ಕುತೂಹಲ ಸೃಷ್ಟಿಯಾಗುವ ಸಮಯದಲ್ಲೇ  ನಕ್ಸಲ್ ಬೆದರಿಕೆಯ ಕುರಿತೋ ಕ್ಯಾಂಪಸ್ ರಾಜಕೀಯದ ಕುರಿತೋ ಅಥವಾ ಕಾಶ್ಮೀರ ಮತ್ತು  ಪಾಕಿಸ್ತಾನದ ಕುರಿತೋ ಗದ್ದಲ ಎಬ್ಬಿಸುವುದು ಯಾವ ಬಗೆಯ ಮಾಧ್ಯಮ ನೀತಿ? ಬಹು ಮಹತ್ವಪೂರ್ಣವಾದ ವಿಷಯವೊಂದು ಗಂಭೀರ ಸಂವಾದವನ್ನು ಬಯಸುತ್ತಿರುವ ಸಮಯದಲ್ಲೇ  ಆ ಬಗ್ಗೆ ಮೌನ ವಹಿಸುವುದು ಮತ್ತು ಮಹತ್ವ  ಪೂರ್ಣವಲ್ಲದ ವಿಷಯವನ್ನು ಮುನ್ನೆಲೆಗೆ ತಂದು ಚರ್ಚೆ ಹುಟ್ಟು ಹಾಕುವುದು (Censorship through Silence) ಯಾಕಾಗಿ? ಕನ್ನಡದ ಪ್ರಮುಖ ಟಿ.ವಿ. ಚಾನೆಲ್‍ಗಳೂ ಈ ಆರೋಪದಿಂದ ಹೊರಗಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ  ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ವಿಶೇಷ ಒಲವು ವ್ಯಕ್ತಪಡಿಸಿದ್ದ ಇವು, ರಾಜ್ಯದ ಮೈತ್ರಿ ಸರಕಾರದ ಬಗ್ಗೆ ಉತ್ಪ್ರೇಕ್ಷಿತ ಮತ್ತು ಅತಿ ವೈಭವೀಕರಣದ ಸುದ್ದಿಗಳನ್ನು ಪ್ರಸಾರ ಮಾಡಿದುವು.  ಕಳೆದ ವಿಧಾನಸಭಾ ಚುನಾವಣೆಯಲ್ಲಂತೂ  ಸಿದ್ದರಾಮಯ್ಯನವರ ಊಟದ ಮೆನುವನ್ನೂ ಭೂಕಂಪದ ರೀತಿಯಲ್ಲಿ ಉತ್ಪ್ರೇಕ್ಷಿತ ವ್ಯಾಖ್ಯಾನಕ್ಕೆ ಒಳಪಡಿಸಿದ್ದುವು.
ಭಾರತದಲ್ಲಿ ಸದ್ಯ 1.2 ಲಕ್ಷ ಮುದ್ರಣ ಪ್ರಕಾಶನಾಲಯಗಳಿವೆ. 550 ಎಫ್.ಎಂ. ರೇಡಿಯೋ ಸ್ಟೇಷನ್‍ಗಳು ಮತ್ತು 880ರಷ್ಟು ಸೆಟ್‍ಲೈಟ್ ಟಿ.ವಿ. ಚಾನೆಲ್‍ಗಳಿವೆ. ಇವುಗಳಲ್ಲಿ ನ್ಯೂಸ್ ಚಾನೆಲ್ ಗಳ ಸಂಖ್ಯೆಯೇ 380. ವಿಷಾದ ಏನೆಂದರೆ, ಇಲ್ಲಿ  ತಯಾರಾಗುವ ಸುದ್ದಿಗಳೆಲ್ಲ ಬಹಳ ವಸ್ತುನಿಷ್ಠ, ಪ್ರಾಮಾಣಿಕ, ಬಹುತ್ವಪರ ಮತ್ತು ನ್ಯಾಯಪರ ಎಂದು ಸಮರ್ಥಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂದು ರಿಪೋರ್ಟರ್ಸ್ ವಿದೌಟ್ ಬೋರ್ಡರ್ಸ್ ಎಂಬ ಅಂತಾರಾಷ್ಟ್ರೀಯ ಸಂಸ್ಥೆ ಮತ್ತು ದೆಹಲಿಯ  ಡಿಜಿಟಲ್ ಇಂಡಿಯಾ ಕಂಪೆನಿಯಾದ DataLEADS  ತನ್ನ ಸಮೀಕ್ಷೆ ಮತ್ತು ಸಂಶೋಧನೆಗಳ ಮೂಲಕ ಹೇಳುತ್ತಿದೆ. ರೇಡಿಯೋ ಸುದ್ದಿಗಳಲ್ಲಿ ಸರಕಾರದ ಪ್ರಭಾವ ದಟ್ಟವಾಗಿದ್ದರೆ, ಟಿ.ವಿ. ಚಾನೆಲ್‍ಗಳ ಮೇಲೆ ರಾಜಕೀಯ ಮಹತ್ವಾಕಾಂಕ್ಷೆ ಇರುವ  ವ್ಯಕ್ತಿಗಳ ಪ್ರಭಾವ ತೀವ್ರವಾಗಿಯೇ ಇದೆ. ಹೆಚ್ಚಿನ ಚಾನೆಲ್‍ಗಳು ಇಂಥ ವ್ಯಕ್ತಿಗಳ ನಿಯಂತ್ರಣದಲ್ಲಿವೆ ಅಥವಾ ಅವರೇ ಅದರ ಮಾಲಿಕರಾಗಿರುತ್ತಾರೆ. ಅನೇಕ ಬಾರಿ ಅವರ ಮೂಗಿನ ನೇರಕ್ಕೇ ಸುದ್ದಿ ತಯಾರಾಗಬೇಕಾಗುತ್ತದೆ. ಏಕ ವ್ಯಕ್ತಿ ಕೇಂದ್ರಿತ ಚಾ ನೆಲ್‍ಗಳೂ ಇವೆ. ಅವರ ಇಚ್ಛೆಯಂತೆ ಸುದ್ದಿ ತಯಾರಿ ನಡೆಯುತ್ತಿರುತ್ತದೆ. ಯಾವ ವಿಷಯದ ಬಗ್ಗೆ ಮೌನವಾಗಬೇಕು ಮತ್ತು ಯಾವ ವಿಷಯವನ್ನು ಚರ್ಚೆಗೆತ್ತಿಕೊಳ್ಳಬೇಕು ಎಂಬುದನ್ನೆಲ್ಲ ಅವರೇ ನಿರ್ಧರಿಸುತ್ತಾರೆ. ಅವರ ಹಿತಾಸಕ್ತಿಯೇನು ಅದುವೇ  ಆಯ್ಕೆಯ ಮಾನದಂಡ. ಲಂಚ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಘೋಷಿಸಲಾದ ಬೆರ್ಲುಸ್ಕೋನಿಯ ಬದಲು ಆ ತೀರ್ಪನ್ನು ಪ್ರಕಟಿಸಿದ ರೈಮಂಡೋ ಮೆಸಿಯಾನೋ ಬಗ್ಗೆ ಇಟಲಿಯ ‘Canale  5’ ಚಾನೆಲ್ ಸುದ್ದಿ ಪ್ರಸಾರ ಮಾಡಿರುವುದಕ್ಕೆ  ಮಾಧ್ಯಮ ಜಗತ್ತಿನಲ್ಲಿರುವ ಈ ಸ್ಥಿತಿಯೇ ಕಾರಣ. ‘Canale  5’ ಎಂಬ ಟಿ.ವಿ. ಚಾನೆಲ್‍ನ ಮಾಲಿಕ ಸ್ವತಃ ಬೆರ್ಲುಸ್ಕೋನಿ. ಬ್ರಿಟನ್ನಿನ ಮಾಧ್ಯಮ ಜಗತ್ತಿನಲ್ಲಿ ರೂಪಕ್ ಮರ್ಡೋಕ್ ಹೇಗೆಯೋ, ಜರ್ಮನಿಯಲ್ಲಿ ಬೆರ್ಟಲ್ಸ್ ಮನ್ ಮತ್ತು ಕಿರ್ಚ್  ಹೇಗೆಯೋ, ಫ್ರಾನ್ಸ್ ನಲ್ಲಿ ವಿವೆಂಡಿ ಹೇಗೆಯೋ ಹಾಗೆಯೇ ಇಟಲಿಯಲ್ಲಿ ಬೆರ್ಲುಸ್ಕೋನಿ. ‘Canale 5’ ಅಲ್ಲದೇ Italia 1 ಮತ್ತು Rate 4 ಎಂಬ ಇನ್ನೆರಡು ರಾಷ್ಟ್ರೀಯ ಟಿ.ವಿ. ಚಾನೆಲ್‍ಗಳ ಮಾಲಿಕರೂ ಬೆರ್ಲುಸ್ಕೋನಿಯೆ. ಇಟಲಿಯ  ಅತಿದೊಡ್ಡ ಮೊಂಡಡೋರಿ ಎಂಬ ಪ್ರಕಾಶನಾಲಯದ ಮಾಲಿಕರೂ ಬೆರ್ಲುಸ್ಕೋನಿಯೇ. ಅಂದಹಾಗೆ,
ಬೆರ್ಲುಸ್ಕೋನಿಯಂಥ ಮಾಲಿಕರು ಮತ್ತು ‘Canale  5’ನಂಥ ಚಾನೆಲ್‍ಗಳು ನಮ್ಮಲ್ಲೂ ಧಾರಾಳ ಇವೆ. ಆದ್ದರಿಂದಲೇ ಆತಂಕ.

No comments:

Post a Comment