ಏ.ಕೆ. ಕುಕ್ಕಿಲ
ಸೂಕ್ತ ಚಿಕಿತ್ಸೆಯನ್ನೂ ಕೊಡಿಸದೆಯೇ, ಕುಟುಂಬ ಸದಸ್ಯರ ಭೇಟಿಗೆ ಅವಕಾಶವನ್ನೂ ನೀಡದೆಯೇ ಮತ್ತು ಆರೋಪದ ಬಗ್ಗೆ ಪ್ರತಿಕ್ರಿಯಿಸುವುದಕ್ಕೆ ಸಾಂವಿಧಾನಿಕ ಏರ್ಪಾಟು ಮಾಡದೆಯೇ, ಅತಿಕ್ರೂರ ಕ್ರಿಮಿನಲ್‍ಗಳನ್ನು ಕೂಡಿಡುವ ಏಕಾಂತ ಕೋಣೆಯಲ್ಲಿ ಇರಿಸಿ, ಪ್ರತಿದಿನವೂ ಸಾಯುವಂತೆ ಮಾಡಬೇಕಾದ ಯಾವ ಅಪರಾಧವನ್ನು ಮುಹಮ್ಮದ್ ಮುರ್ಸಿ ಮಾಡಿದ್ದರು?
ಮುರ್ಸಿ ವಿರೋಧಿಗಳಲ್ಲೂ ಈ ಬಗೆಯ ಪ್ರಶ್ನೆಯಿದೆ. ಮುರ್ಸಿಯವರನ್ನು ಅಧ್ಯಕ್ಷೀಯ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು 2013 ಜುಲೈ 3 ರಂದು ಆಗಿನ ರಕ್ಷಣಾ ಸಚಿವ ಅಬ್ದುಲ್ ಫತ್ತಾಹ್ ಅಲ್ ಸೀಸಿ ಘೋಷಿಸಿದಾಗ ಅದನ್ನು ಬೆಂಬಲಿಸಿದ್ದ ವಿಶ್ವ ವಿಖ್ಯಾತ ಅಲ್ ಅಝ್ಹರ್ ವಿಶ್ವವಿದ್ಯಾಲಯದ ಶೈಖುಲ್ ಅಝ್ಹರ್ ಅಹ್ಮದ್ ಅಲ್ ತಯ್ಯಬ್, ಕಾಪ್ಟಿಕ್ ಚರ್ಚ್‍ನ ಪೋಪ್ ಎರಡನೇ ತವಾಬ್ರೋಸ್ ಮತ್ತು ಮುಖ್ಯ ವಿರೋಧ ಪಕ್ಷವಾದ ನ್ಯಾಶನಲ್ ಸಾಲ್ವೇಶನ್ ಫ್ರಂಟ್ ಹಾಗೂ ಅಲ್ ನೂರ್ ಪಕ್ಷಗಳಲ್ಲೂ ಈ ಪ್ರಶ್ನೆಯಿರಬಹುದು. ಮುರ್ಸಿಯವರ ಆಡಳಿತವನ್ನು ವಿಫಲ ಎಂದು ಘೋಷಿಸುವುದು ಬೇರೆ, ಅವರನ್ನು ಅಪರಾಧಿ ಎಂದು ಘೋಷಿಸುವುದು ಬೇರೆ. ಈಜಿಪ್ಟ್ ನಲ್ಲಿ 2011ರಲ್ಲಿ ಕಾಣಿಸಿಕೊಂಡ ಕ್ರಾಂತಿಯ ಮೂಲ ಬೇಡಿಕೆಗಳಾದ ಆಹಾರ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸುವಲ್ಲಿ ಮುರ್ಸಿ ವಿಫಲರಾದರು ಎಂದು ಈಜಿಪ್ಟಿಯನ್ನರಿಗೆ ಅನಿಸಿದ್ದರೆ ಅದನ್ನು ಅಪರಾಧ ಅನ್ನುವಂತಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮುರ್ಸಿ ಸಹಿತ ಪ್ರತಿಯೊಬ್ಬರೂ ಟೀಕೆಗೆ ಅರ್ಹರು. ಮುರ್ಸಿ ಅಧಿಕಾರದಿಂದ ಕೆಳಗಿಳಿಯಬೇಕು ಮತ್ತು ಹೊಸ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿ 22 ಮಿಲಿಯನ್ ಸಹಿ ಸಂಗ್ರಹದ ಗುರಿಯೊಂದಿಗೆ 2013 ಎಪ್ರಿಲ್‍ನಲ್ಲಿ ಈಜಿಪ್ಟ್ ನಲ್ಲಿ ತಮರೋದ್ (ಬಂಡಾಯ) ಎಂಬ ಹೆಸರಲ್ಲಿ ಪ್ರಾರಂಭವಾದ ಚಳವಳಿಯೂ ಅಪರಾಧವಲ್ಲ. ಆದರೆ, ಈ ಚಳವಳಿಯ ಹಿಂದೆ ಸೇನೆ ಮತ್ತು ಹುಸ್ನಿ ಮುಬಾರಕ್‍ರ ಬೆಂಬಲಿಗರಿದ್ದರು ಎಂಬುದನ್ನು ಮಾತ್ರ ಇದೇ ಸ್ಫೂರ್ತಿಯಿಂದ ಸ್ವೀಕರಿಸಲು ಸಾಧ್ಯವಿಲ್ಲ. ಈ ಚಳವಳಿಯನ್ನು ಯಶಸ್ವಿಗೊಳಿಸುವುದಕ್ಕಾಗಿ ರಕ್ಷಣಾ ಸಚಿವಾಲಯ ನಿರ್ವಹಿಸುತ್ತಿದ್ದ ಬ್ಯಾಂಕ್ ಖಾತೆಯಿಂದ ಭಾರೀ ಪ್ರಮಾಣದಲ್ಲಿ ಹಣವನ್ನು ಡ್ರಾ ಮಾಡಲಾಗಿದೆ ಎಂಬ ಸುದ್ದಿಯನ್ನೂ ಸಹಜವಾಗಿ ಸ್ವೀಕರಿಸಲು ಸಾಧ್ಯವಿಲ್ಲ. ಸೋರಿಕೆಯಾದ ಮಿಲಿಟರಿ ಅಧಿಕಾರಿಗಳ ನಡುವಿನ ಮಾತುಕತೆಯೇ ಇದನ್ನು ಸ್ಪಷ್ಟಪಡಿಸಿತ್ತು. 2012 ಜೂನ್ 30ರಂದು ಈಜಿಪ್ಟ್ ನ ಅಧ್ಯಕ್ಷರಾಗಿ ಆಯ್ಕೆಯಾಗಿ ಜುಲೈ 3, 2013ರಲ್ಲಿ ಪದಚ್ಯುತಗೊಳ್ಳುವ ಈ 366 ದಿನಗಳ ನಡುವೆ ಮುರ್ಸಿಯವರ ವಿರುದ್ಧ ಚಳವಳಿ, ಪ್ರತಿಭಟನೆ, ಹೋರಾಟಗಳೆಲ್ಲ ನಡೆದುದು ಮತ್ತು ಅವರನ್ನು ಕತ್ತಲ ಕೋಣೆಗೆ ತಳ್ಳಿದುದೆಲ್ಲ ಸಹಜವೇ? 1952ರ ಜಮಾಲ್ ಅಬ್ದುಲ್ ನಾಸರ್ ರಿಂದ ತೊಡಗಿ ಹುಸ್ನಿ ಮುಬಾರಕ್‍ರ ವರೆಗೆ ಈ ದೀರ್ಘ 60 ವರ್ಷಗಳ ಸರ್ವಾಧಿಕಾರವನ್ನು ಸಹಿಸಿಕೊಂಡ ಜನರಿಗೆ ಮತ್ತು ಅವರಾರನ್ನೂ ಕತ್ತಲ ಕೋಣೆಗೆ ತಳ್ಳದ ವ್ಯವಸ್ಥೆಗೆ ಮುರ್ಸಿಯನ್ನು ಬರೇ 365 ದಿನಗಳಷ್ಟು ದಿನ ಒಪ್ಪಿಕೊಳ್ಳಲೂ ಸಾಧ್ಯವಾಗದೇ ಹೋದುದುಕ್ಕೆ ಅವರು ಕಾರಣರೋ ಅಥವಾ ಈ ಹಿಂದಿನ 60 ವರ್ಷಗಳ ವರೆಗೆ ಅಧಿಕಾರದ ರುಚಿಯನ್ನು ಅನುಭವಿಸಿದ ಅಧಿಕಾರಿಗಳು ಮತ್ತು ಸೇನೆಯ ಸಂಚು ಕಾರಣವೋ?
ಪರಸ್ಪರ ಘರ್ಷಣೆಯಲ್ಲಿ ತೊಡಗಿದ್ದ ಇಸ್ರೇಲ್ ಮತ್ತು ಗಾಝಾದ ಹಮಾಸ್‍ನ ನಡುವೆ 2012 ನವೆಂಬರ್ 20ರಂದು ಶಾಂತಿ ಸಂಧಾನವನ್ನು ಏರ್ಪಡಿಸಿ ಘರ್ಷಣೆ ಕೊನೆಗೊಳಿಸಲು ಯಶಸ್ವಿಯಾದ ಮರುದಿನವೇ ಮುರ್ಸಿಯವರು ಅತ್ಯಂತ ಸವಾಲಿನ ನಿರ್ಧಾರವನ್ನು ಕೈಗೊಂಡರು. ನಿಜವಾಗಿ, 2012 ಜೂನ್ 30ರಂದು ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೂ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಅವರಿಂದ ಸಾಧ್ಯವಾಗುತ್ತಿರಲಿಲ್ಲ. ಅದಕ್ಕೆ ಬಹುಮುಖ್ಯ ಕಾರಣ- ಮುಬಾರಕ್ ಕಾಲದ ಆಡಳಿತ ವ್ಯವಸ್ಥೆ, ಅವೇ ಅಧಿಕಾರಿಗಳು, ಅದೇ ನ್ಯಾಯಾಂಗ ವ್ಯವಸ್ಥೆ ಮತ್ತು ಅದೇ ಮಿಲಿಟರಿ ಮನೋಭಾವ. ಇನ್ನೊಂದು ಸಮಸ್ಯೆ ಏನೆಂದರೆ, ಸಂವಿಧಾನ. ಹಾಲಿ ಸಂವಿಧಾನವನ್ನು ಮಿಲಿಟರಿಯು 2011ರಲ್ಲೇ ಅನೂರ್ಜಿತಗೊಳಿಸಿತ್ತು. ಆದ್ದರಿಂದ ಕ್ರಾಂತಿಯ ಬೇಡಿಕೆಯನ್ನು ಪೂರೈಸಬೇಕಾದರೆ ಮತ್ತು ತನ್ನ ಕನಸಿನ ಈಜಿಪ್ಟನ್ನು ಸಾಕಾರಗೊಳಿಸಬೇಕಾದರೆ ಒಂದೆರಡು ಧೈರ್ಯದ ನಿರ್ಧಾರವನ್ನು ಮುರ್ಸಿ ಕೈಗೊಳ್ಳಲೇ ಬೇಕಾಗಿತ್ತು. ಅಲ್ಲದೆ, 2012 ಜೂನ್‍ನಲ್ಲಿ ಹಳೆ ಪಾರ್ಲಿಮೆಂಟೂ ವಿಸರ್ಜ ನೆಗೊಂಡಿತ್ತು. ಹೊಸ ಪಾರ್ಲಿಮೆಂಟ್‍ಗೆ ಚುನಾವಣೆ ನಡೆಯಬೇಕಾದರೆ 1971ರಲ್ಲಿ ಅನ್ವರ್ ಸಾದಾತ್ ಪರಿಚಯಿಸಿದ್ದ ಮತ್ತು ಒಂದಷ್ಟು ತಿದ್ದುಪಡಿ ಗಳೊಂದಿಗೆ 2011ರ ವರೆಗೂ ಅಸ್ತಿತ್ವ ಉಳಿಸಿಕೊಂಡಿದ್ದ ಸಂವಿಧಾನಕ್ಕೆ ಸಮಗ್ರ ತಿದ್ದುಪಡಿಗಳನ್ನು ಮಾಡಬೇಕಿತ್ತು. ಆದ್ದರಿಂದ, ಮುಬಾರಕ್ ಕಾಲದ ವ್ಯವಸ್ಥೆಯನ್ನು ಸರಿಪಡಿಸುವುದಕ್ಕಾಗಿ ಅವರು ಅಧ್ಯಕ್ಷೀಯ ಶಾಸನವನ್ನು (ಸುಗ್ರೀವಾಜ್ಞೆ) ಘೋಷಿಸಿದರು. ಅದೇವೇಳೆ, ಸಂವಿಧಾನದ ತಿದ್ದುಪಡಿಗೆ ತಂಡವನ್ನೂ ರಚಿಸಿದ್ದರು. ಆದರೆ, ಅವರು ಹೊರಡಿಸಿದ ಸುಗ್ರೀವಾಜ್ಞೆಯು ಮರುದಿನದಿಂದಲೇ ಚರ್ಚೆಗೆ ಒಳಗಾಯಿತು. ವಿವಾದಿತ ಅನಿಸಿಕೊಂಡಿತು. ನ್ಯಾಯಾಂಗ ಪ್ರಕ್ರಿಯೆ ಮತ್ತು ಇನ್ನಿತರ ಕಾನೂನುಗಳ ವ್ಯಾಪ್ತಿಯಿಂದ ಅಧ್ಯಕ್ಷರನ್ನು ಹೊರಗಿಡುವ ಮತ್ತು ಅಧ್ಯಕ್ಷರಿಗೆ ಪರಮಾಧಿಕಾರವನ್ನು ಒದಗಿಸುವ ಈ ಸುಗ್ರೀವಾಜ್ಞೆಯನ್ನು ಸದ್ಯದ ಪರಿಸ್ಥಿತಿಯ ಅಗತ್ಯ ಎಂದು ಮುರ್ಸಿ ಸಮರ್ಥಿಸಿಕೊಂಡರಾದರೂ ವಿರೋಧಿಗಳು ಒಪ್ಪಿಕೊಳ್ಳಲಿಲ್ಲ. ಮುರ್ಸಿಯನ್ನು ‘ಆಧುನಿಕ ಫರೋವ’ ಎಂದು ನೋಬೆಲ್ ವಿಜೇತ ಅಲ್ ಬರಾದಿ ಟೀಕಿಸಿದರು. ಇದು ವಿರೋಧದ ಬೆಂಕಿಗೆ ತುಪ್ಪ ಸುರಿದಂತಾಯಿತು. ಸಂದರ್ಭಕ್ಕಾಗಿ ಕಾದು ಕುಳಿತಿದ್ದ ಮಿಲಿಟರಿ ವ್ಯವಸ್ಥೆ ಚುರುಕಾಯಿತು. ಮುರ್ಸಿಯವರು ಅಧಿಕಾರ ವಹಿಸಿ ಕೊಂಡಾಗ ರಕ್ಷಣಾ ಸಚಿವರಾಗಿದ್ದುದು ಫೀಲ್ಡ್ ಮಾರ್ಶಲ್ ಮುರಾದ್ ಹಸನ್ ತಂತಾವಿ. ಈಜಿಪ್ಟ್ ನಲ್ಲಿ ಮಿಲಿಟರಿ ಮುಖ್ಯಸ್ಥನೇ ರಕ್ಷಣಾ ಸಚಿವರಾಗಿಯೂ ಕಾರ್ಯನಿರ್ವಹಿಸುತ್ತಾರೆ. ಮುರ್ಸಿಯವರು ತಂತಾವಿಯ ಬದಲು ಅಬ್ದುಲ್ ಫತ್ತಾಹ್ ಅಲ್ ಸೀಸಿ ಅವರನ್ನು ಹೊಸ ರಕ್ಷಣಾ ಸಚಿವರಾಗಿ ನೇಮಿಸಿದರು. ಅಚ್ಚರಿ ಏನೆಂದರೆ, ಈ ಸುಗ್ರೀವಾಜ್ಞೆಯ ಬಳಿಕ ಹುಟ್ಟಿಕೊಂಡ ತಮರೋದ್ ಚಳವಳಿ, ಮುರ್ಸಿಯನ್ನು ಪದಚ್ಯುತಗೊಳಿಸಬೇಕೆಂದು ಆಗ್ರಹಿಸಿ ತಹ್ರೀರ್ ಚೌಕದಲ್ಲಿ ನಡೆಸಲಾದ ಬೃಹತ್ ಪ್ರತಿಭಟನೆ, ಅಧ್ಯಕ್ಷರ ಅರಮನೆಯ ಮುಂದೆ ನಡೆದ ಪ್ರತಿಭಟನೆ ಮತ್ತು ಮುಸ್ಲಿಮ್ ಬ್ರದರ್ ಹುಡ್‍ನ ಮುಖ್ಯ ಕಚೇರಿಯ ಮೇಲೆ ನಡೆದ ದಾಳಿ ಮತ್ತು ಅಂತಿಮವಾಗಿ ಮುರ್ಸಿ ಪದಚ್ಯುತಿ.. ಈ ಎಲ್ಲದರ ಹಿಂದೆಯೂ ಕೆಲಸ ಮಾಡಿದ್ದು ಇದೇ ಅಬ್ದುಲ್ ಫತ್ತಾಹ್ ಅಲ್ ಸೀಸಿ.
2012ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮುರ್ಸಿಯವರು ಜಯ ಗಳಿಸಿದ್ದುದು ಸಣ್ಣ ಅಂತರದಿಂದಾಗಿತ್ತು. ಅವರ ವಿರುದ್ಧ ಸ್ಪರ್ಧಿಸಿದ್ದು- ಹುಸ್ನಿ ಮುಬಾರಕ್‍ರ ಆಪ್ತರೆಂದು ಗುರುತಿಸಿಕೊಂಡಿದ್ದ ಅಹ್ಮದ್ ಶಫೀಕ್. ಹುಸ್ನಿ ಮುಬಾರಕ್‍ರ ಸರ್ವಾಧಿಕಾರ ಕೊನೆಗೊಳ್ಳಬೇಕೆಂದು ತಹ್ರೀರ್ ಚೌಕದಲ್ಲಿ ಆಹೋರಾತ್ರಿ ಪ್ರತಿಭಟಿಸಿದ್ದ ಅದೇ ಮಂದಿ ಅಹ್ಮದ್ ಶಫೀಕ್‍ರಿಗೆ 49.3% ಮತ ಚಲಾಯಿಸಿದ್ದರು. ಮುರ್ಸಿಗೆ 51.7%.. ಈ ಸಣ್ಣ ಅಂತರವೇ ಈಜಿಪ್ಟಿಯನ್ನರ ಮಾನಸಿಕ ಸ್ಥಿತಿಯನ್ನು ಹೇಳುತ್ತದೆ. ಮುರ್ಸಿಯವರ ವಿರುದ್ಧ 49.3% ಮಂದಿ ಮತ ಹಾಕಿರುವುದರಿಂದ ಅಧ್ಯಕ್ಷೀಯ ಸುಗ್ರೀವಾಜ್ಞೆಯನ್ನು ಎತ್ತಿಕೊಂಡು ಮುರ್ಸಿ ವಿರೋಧಿ ಚಳವಳಿಯೊಂದನ್ನು ತೀವ್ರಗೊಳಿಸುವುದು ಮಿಲಿಟರಿ ವ್ಯವಸ್ಥೆಗೆ ಸವಾಲಿನದ್ದೇನೂ ಆಗಿರಲಿಲ್ಲ. 2013 ಜೂನ್ 30ರೊಳಗೆ ಮುರ್ಸಿ ವಿರುದ್ಧ 22 ಮಿಲಿಯನ್ ಸಹಿ ಸಂಗ್ರಹ ಮತ್ತು ಜೂನ್ 30ರಂದು ಬೃಹತ್ ಪ್ರತಿಭಟನೆ ಹಮ್ಮಿ ಕೊಳ್ಳುವ ತಮರೋದ್ ಚಳವಳಿಯು ಇದೇ ಮಿಲಿಟರಿಯ ಕೂಸು. ಹಾಗಂತ, ಅಧ್ಯಕ್ಷರಿಗೆ ಪರಮಾಧಿಕಾರವನ್ನು ಒದಗಿಸುವ ಸುಗ್ರೀವಾಜ್ಞೆಯನ್ನು ಹೊರಡಿಸುವ ಬದಲು ಒಂದಷ್ಟು ಕಾಯಬಹುದಾಗಿತ್ತು ಎಂಬ ವಾದವಿದ್ದರೂ ಸುಗ್ರೀವಾಜ್ಞೆಯು ಅವರ ಅನಿ ವಾರ್ಯತೆಗಳಲ್ಲಿ ಒಂದಾಗಿತ್ತು ಎಂಬ ವಾದಕ್ಕೂ ಮಹತ್ವ ಇದೆ. ಸರ್ವೋಚ್ಚ ನ್ಯಾಯಾಲಯಕ್ಕೆ ಮುಬಾರಕ್ ಆಡಳಿತವು ನೇಮಕ ಗೊಳಿಸಿದ್ದ ಪ್ರಾಸಿಕ್ಯೂಟರನ್ನು ವಜಾಗೊಳಿಸಿ 2012, ನವೆಂಬರ್ ನಲ್ಲಿ ತಲತ್ ಇಬ್ರಾಹೀಮ್ ಅಬ್ದುಲ್ಲರನ್ನು ಇದೇ ಸುಗ್ರೀವಾಜ್ಞೆಯನ್ನು ಬಳಸಿ ಮುರ್ಸಿ ನೇಮಕಗೊಳಿಸಿದರು. ಇದನ್ನು ನ್ಯಾಯಾಂಗ ಸ್ವಾತಂತ್ರ್ಯಕ್ಕಾದ ಧಕ್ಕೆ ಎಂದು ಕರೆಯಲಾಯಿತಲ್ಲದೆ ಇದರ ವಿರುದ್ಧ ಜನರನ್ನು ಪ್ರಚೋದಿಸಲಾಯಿತು. ಇತರ ನ್ಯಾಯಾಲಯಗಳ ಪ್ರಾಸಿಕ್ಯೂಟರ್ ಗಳಿಂದಲೂ ವಿರೋಧ ವ್ಯಕ್ತವಾಯಿತು. ಮುಬಾರಕ್ ರನ್ನು ಬೆಂಬಲಿಸುವವರ ಹಿಡಿತ ವ್ಯವಸ್ಥೆಯ ಮೇಲೆ ಎಷ್ಟು ಬಲವಾಗಿತ್ತೆಂದರೆ, ತಲತ್ ಅಬ್ದುಲ್ಲ ಡಿಸೆಂಬರ್ ನಲ್ಲಿ ರಾಜೀನಾಮೆ ಕೊಟ್ಟರು. ಮುಬಾರಕ್ ವಿರುದ್ಧದ ಪ್ರತಿಭಟನೆಯನ್ನು ಮಿಲಿಟರಿ ಬಲ ಪ್ರಯೋಗಿಸಿ ದಮನಿಸಿದ್ದನ್ನು, ಸುಮಾರು 800 ಮಂದಿಯ ಹತ್ಯೆ ನಡೆಸಿದ್ದನ್ನು, ಮುಬಾರಕ್‍ರ ಭ್ರಷ್ಟಾಚಾರ, ಅವರ ಅಧಿಕಾರಿಗಳ ಅವ್ಯವಹಾರ.. ಮುಂತಾದುವುಗಳನ್ನು ತನಿಖಿಸುವುದಕ್ಕಾಗಿಯೂ ಮುರ್ಸಿಗೆ ಈ ಸುಗ್ರೀವಾಜ್ಞೆ ಅಗತ್ಯವಾಗಿತ್ತು. ಅವರು ತನಿಖೆಗೂ ಆದೇಶಿಸಿದರು. ಆದರೆ ವ್ಯವಸ್ಥೆಯ ಒಳಗೆ ಮತ್ತು ಹೊರಗಿನ ಒತ್ತಡವನ್ನು ತಾಳಲಾರದೆ ಅವರು ಎರಡೇ ತಿಂಗಳೊಳಗೆ ಈ ಸುಗ್ರೀವಾಜ್ಞೆಯನ್ನು ಹಿಂಪಡೆದರು. ಹಾಗಂತ, ಈ ಬೆಳವಣಿಗೆಯ ಬಳಿಕವೂ ತಮರೋದ್ ಚಳವಳಿ ಮತ್ತು ಸಾರ್ವಜನಿಕ ಪ್ರತಿಭಟನೆ ನಿಲ್ಲಲಿಲ್ಲ. ಅಧ್ಯಕ್ಷ ಹುದ್ದೆಗೆ ಮರು ಚುನಾವಣೆ ನಡೆಯಬೇಕೆಂಬ ಪ್ರಮುಖ ಬೇಡಿಕೆಗೆ ಇನ್ನಷ್ಟು ಬೇಡಿಕೆಗಳನ್ನು ಸೇರಿಸಿ ತಮರೋದ್ ಚಳವಳಿ ಮುಂದುವರಿಯಿತು.
ಅಮೇರಿಕದ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ 1982ರಲ್ಲಿ ಪಿಹೆಚ್‍ಡಿ ಪದವಿ ಪಡೆದ ಮತ್ತು ಅಮೇರಿಕದ ನಾರ್ಥರಿಡ್ಜ್ ನ ಕಾಲ್‍ಸ್ಟೇಟ್ ವಿವಿಯಲ್ಲಿ 3 ವರ್ಷಗಳ ವರೆಗೆ ಸಹಾಯಕ ಪ್ರೊಫೆಸರ್ ಆಗಿ ದುಡಿದ ಮುಹಮ್ಮದ್ ಮುರ್ಸಿ ಯವರಲ್ಲಿ ರಾಜಕೀಯ ಅನುಭವ ಕಡಿಮೆಯಾಗಿದ್ದರೂ ಅವರಲ್ಲಿರುವ ಪ್ರಜಾಸತ್ತಾತ್ಮಕ ಗುಣವು ಈಜಿಪ್ಟ್ ನಲ್ಲಿ ಈ ಮೊದಲೇ ಪ್ರಶಂಸೆಗೆ ಒಳಗಾಗಿತ್ತು. ಉನ್ನತ ಶಿಕ್ಷಣ ಪಡೆದಿರುವ ಮತ್ತು ಅಮೇರಿಕದಂತಹ ರಾಷ್ಟ್ರವೊಂದರಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವಾತಾವರಣವನ್ನು ಸ್ವತಃ ಕಂಡುಂಡ ವ್ಯಕ್ತಿ ಎಂಬ ನೆಲೆಯಲ್ಲಿ ಅವರಿಗೆ ವಿಶೇಷ ಗೌರವವೂ ಲಭ್ಯವಾಗಿತ್ತು. ಅವರೆಷ್ಟು ಪ್ರಾಮಾಣಿಕ ಮತ್ತು ಸರ್ವಾಧಿಕಾರ ವಿರೋಧಿ ಎಂಬುದಕ್ಕೆ ಅವರ ಅವಧಿಯಲ್ಲಿ ರಚಿಸಲಾದ ಸಂವಿಧಾನವೇ ಪರಮ ಪುರಾವೆ. ಈಜಿಪ್ಟನ್ನು ಆಳಿದ ಅಬ್ದುನ್ನಾಸಿರ್, ಅನ್ವರ್ ಸಾದಾತ್ ಮತ್ತು ಹುಸ್ನಿ ಮುಬಾರಕ್‍ರ ಸರ್ವಾಧಿಕಾರದ ಕಾಲದಲ್ಲಿ ಅಧ್ಯಕ್ಷೀಯ ಹುದ್ದೆಯ ಅವಧಿ 6 ವರ್ಷಗಳಾಗಿತ್ತು. ಅಲ್ಲದೇ, ಓರ್ವ ಅಧ್ಯಕ್ಷ ಎಷ್ಟು ಬಾರಿ ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದಿತ್ತು. ಅಲ್ಲದೇ, 2005ರ ವರೆಗೂ ಏಕವ್ಯಕ್ತಿ ಚುನಾವಣೆ ಎಂಬ ಪ್ರಹಸನ ಈಜಿಪ್ಟ್ ನಲ್ಲಿ ಜಾರಿಯಲ್ಲಿತ್ತು. ತನ್ನ 6 ವರ್ಷಗಳ ಅವಧಿ ಮುಗಿದ ಕೂಡಲೇ ಹುಸ್ನಿ ಮುಬಾರಕ್ ಪುನಃ ಚುನಾವಣೆಗೆ ನಿಲ್ಲುತ್ತಿದ್ದರು ಮತ್ತು ಅವರ ವಿರುದ್ಧ ಇನ್ನಾರೂ ಸ್ಪರ್ಧಿಸುವಂತಿರಲಿಲ್ಲ. ಅಮೇರಿಕ ಸಹಿತ ಯುರೋಪಿಯನ್ ರಾಷ್ಟ್ರಗಳ ಒತ್ತಡದ ಮೇರೆಗೆ 2005ರಲ್ಲಿ ಬಹು ಅಭ್ಯರ್ಥಿಗಳ ಸ್ಪರ್ಧೆಗೆ ಮುಬಾರಕ್ ಒಪ್ಪಿಕೊಂಡರು. 2005ರಲ್ಲಿ ಮತದಾನವಾದದ್ದು ಬರೇ 23%. ಅದರಲ್ಲಿ ಮುಬಾರಕ್ ಗೆ ಲಭ್ಯವಾದದ್ದು 88.5%. ಆದರೆ ಮುಹಮ್ಮದ್ ಮುರ್ಸಿಯವರು ಈ ಸಂವಿಧಾನಕ್ಕೆ ಆಮೂಲಾಗ್ರ ಬದಲಾವಣೆಯನ್ನು ತಂದರು. ಅಧ್ಯಕ್ಷರ ಅಧಿಕಾರಾವಧಿಯನ್ನು 6 ವರ್ಷಗಳಿಂದ 4 ವರ್ಷಗಳಿಗೆ ಕಡಿತಗೊಳಿಸಿದರು. ಎರಡು ಅವಧಿಗೆ ಮಾತ್ರ ಓರ್ವರು ಅಧ್ಯಕ್ಷ ರಾಗಿ ಅಧಿಕಾರ ಚಲಾಯಿಸಬಹುದು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ನಿಯಮವನ್ನು ಸೇರ್ಪಡೆಗೊಳಿಸಿದರು. ಮುರ್ಸಿಯವರಲ್ಲಿ ಸರ್ವಾಧಿಕಾರದ ಗುಣವಿರುತ್ತಿದ್ದರೆ ಈ ಬದಲಾವಣೆ ಸಾಧ್ಯವೇ ಇರಲಿಲ್ಲ. ಅಷ್ಟಕ್ಕೂ,
ಅಧಿಕಾರ ವಹಿಸಿಕೊಂಡ ಕೂಡಲೇ ಅಮೇರಿಕ ಅಥವಾ ಯುರೋಪ್ ರಾಷ್ಟ್ರಗಳಿಗೆ ಭೇಟಿ ನೀಡುವ ಬದಲು ಅವರು ಅರಬ್ ರಾಷ್ಟ್ರಗಳ ಜೊತೆಗಿನ ಸಂಬಂಧವನ್ನು ಗಟ್ಟಿಗೊಳಿಸಲು ಯತ್ನಿಸಿದರು. ಸೌದಿ ಅರೇಬಿಯಾ, ಚೀನಾ, ಇರಾನ್‍ಗೆ ಭೇಟಿ ನೀಡಿದರು. ಕತರ್ ನ ಅಮೀರ್ ಈಜಿಪ್ಟ್ ಗೆ ಭೇಟಿಕೊಟ್ಟರು. 1979ರ ಬಳಿಕ ಇರಾನ್‍ನೊಂದಿಗೆ ಕಡಿದುಕೊಂಡಿದ್ದ ರಾಜತಾಂತ್ರಿಕ ಸಂಬಂಧವನ್ನು ಮುರ್ಸಿ ಪುನರ್ ಸ್ಥಾಪಿಸಿದರು. ಇತಿಯೋಪಿಯಾದಲ್ಲಿ ನಡೆದ ಆಫ್ರಿಕನ್ ಯೂನಿಯನ್ ಸಭೆಯಲ್ಲಿ ಭಾಗವಹಿಸಿದರು. 1995ರ ಬಳಿಕ ಆಫ್ರಿಕನ್ ಯೂನಿಯನ್ ಸಭೆಯಲ್ಲಿ ಈಜಿಪ್ಟ್ ನ ಅಧ್ಯಕ್ಷರು ಭಾಗವಹಿಸಿದ್ದು ಅದೇ ಮೊದಲು. ಅದೇವೇಳೆ, ಸಿರಿಯಾದಲ್ಲಿ ನಡೆಯುತ್ತಿದ್ದ ನರಹತ್ಯೆಗಾಗಿ ಬಶ್ಶಾರುಲ್ ಅಸದ್‍ರನ್ನು ಅವರು ಟೀಕಿಸಿದರು. 2013, ಜೂನ್‍ನಲ್ಲಿ ಸಿರಿಯಾದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡರು. ವಿಚಿತ್ರ ಏನೆಂದರೆ, ಇಷ್ಟೆಲ್ಲ ನಡೆದೂ ಈಜಿಪ್ಟಿಯನ್ನರು ಮುರ್ಸಿ ವಿರುದ್ಧ ಚಳವಳಿ ನಡೆಸಿದ್ದು. ಈ ಚಳವಳಿಯಿಂದಾಗಿ ಕೈರೋ, ಪೋರ್ಟ್ ಝೈದ್, ಸುಯೇಝï ಮತ್ತು ಇಸ್ಲಾಮಿಯಾದಲ್ಲಿ ಹಿಂಸೆ, ಸಾವು-ನೋವುಗಳಾದುವು. ಒಂದು ತಿಂಗಳು ರಾಷ್ಟ್ರೀಯ ತುರ್ತುಸ್ಥಿತಿಯನ್ನು ಘೋಷಿಸಬೇಕಾಯಿತು. ವಿರೋಧ ಪಕ್ಷವಾದ ನ್ಯಾಶನಲ್ ಸಾಲ್ವೇಶನ್ ಫ್ರಂಟ್, ಅಲ್ ನೂರ್ ಪಕ್ಷಗಳು ಪ್ರತಿಭಟನಾಕಾರರ ಧ್ವನಿಯಲ್ಲಿ ಮಾತಾಡಿದುವು. ನಿಜವಾಗಿ, ಯಾವಾಗ ಮುರ್ಸಿಯವರು ಸುಗ್ರೀವಾಜ್ಞೆಯನ್ನು ಹೊರಡಿಸಿದರೋ ಆವಾಗಲೇ ಸೀಸಿ ನೇತೃತ್ವದ ಮಿಲಿಟರಿ ಪಡೆಗೆ ಸರಕಾರದ ನೀತಿಯಲ್ಲಿ ಮಧ್ಯ ಪ್ರವೇಶಿಸುವುದಕ್ಕೆ ಸಂದರ್ಭ ಸೃಷ್ಟಿಯಾಗತೊಡಗಿತು. ಅದು ಈಜಿಪ್ಟಿಯನ್ನರ ಹಿತಚಿಂತಕನ ವೇಷ ಹಾಕಿಕೊಂಡಿತು. ಕೊನೆಗೆ ಜುಲೈ 1ರಂದು ಪ್ರತಿಭಟನಾಕಾರರ ಬೇಡಿಕೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು 48 ಗಂಟೆಗಳ ಸಮಯವನ್ನು ಸೇನಾ ಕಮಾಂಡರ್ ಎಂಬ ನೆಲೆಯಲ್ಲಿ ಸೀಸಿ ನಿಗದಿಪಡಿಸಿದರು. ಜುಲೈ 3, 2013ರಂದು ಮುರ್ಸಿಯವರನ್ನು ಅವರು ಪದಚ್ಯುತಗೊಳಿಸಿದರು. ಆದರೆ, ಇದನ್ನು ಖಂಡಿಸಿ ಈಜಿಪ್ಟ್ ನಾದ್ಯಂತ ಮುಸ್ಲಿಮ್ ಬ್ರದರ್ ಹುಡ್‍ನ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಬಲಪ್ರಯೋಗದ ಮೂಲಕ ಇವೆಲ್ಲವನ್ನೂ ದಮನಿಸಿದ ಸೀಸಿ, ಸಾವಿರಾರು ಮಂದಿಯ ಹತ್ಯೆ ನಡೆಸಿದರು. ಇದರಲ್ಲಿ ಒಂದೇ ಬಾರಿಗೆ ನಡೆಸಲಾದ 900ರಷ್ಟು ಮಂದಿಯ ಹತ್ಯೆಯೂ ಸೇರಿದೆ. ಆದ್ದರಿಂದಲೇ, ಮತ್ತೆ ಅದೇ ಪ್ರಶ್ನೆಯನ್ನು ಕೇಳಬೇಕಾಗಿದೆ,
ಕತ್ತಲ ಕೋಣೆಯಲ್ಲಿ ಕೂಡಿಟ್ಟು ಸಾಯಿಸಬೇಕಾದಂತಹ ಯಾವ ಅಪರಾಧವನ್ನು ಮುರ್ಸಿ ಎಸಗಿದ್ದರು?
No comments:
Post a Comment