Saturday, March 11, 2017

ಭಿತ್ತಿಚಿತ್ರದಿಂದ ಬೆತ್ತಲಾದವರು..

      ಕೇರಳದ ನಟಿಯ ಮೇಲೆ ನಡೆದ ಲೈಂಗಿಕ ಹಲ್ಲೆ ಮತ್ತು ದೆಹಲಿಯ ಲೇಡಿ ಶ್ರೀರಾಮ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿನಿಯಾಗಿರುವ ಗುರ್‍ಮೆಹರ್ ಕೌರ್‍ರಿಗೆ ಒಡ್ಡಲಾದ ಅತ್ಯಾಚಾರ ಮತ್ತು ಹಲ್ಲೆಯ ಬೆದರಿಕೆಯು ಕೆಲವು ಬಹುಮುಖ್ಯ ಪ್ರಶ್ನೆಗಳನ್ನು ಹುಟ್ಟು ಹಾಕಿವೆ.
    ಹೆಣ್ಣನ್ನು ನಿಯಂತ್ರಿಸುವುದಕ್ಕೆ ಅತ್ಯಾಚಾರ ಮತ್ತು ದೈಹಿಕ ಹಲ್ಲೆಯು ಅತ್ಯಂತ ಪರಿಣಾಮಕಾರಿ ಆಯುಧ ಎಂಬ ಪುರಾತನ ನಂಬಿಕೆಯು ಭಾರತದಲ್ಲಿ ಜನಪ್ರಿಯಗೊಳ್ಳುತ್ತಿದೆಯೇ? ದೇಶಪ್ರೇಮ ಮತ್ತು ಭಾರತೀಯ ಸಂಸ್ಕೃತಿಯ ರಕ್ಪಕರಾಗಿ ಗುರುತಿಸಿಕೊಳ್ಳಲು ಉತ್ಸುಕರಾಗಿರುವ ವರ್ಗವೊಂದರಲ್ಲಿ ಈ ನಂಬಿಕೆಯು ವಿಪರೀತವಾಗಿ ಪ್ರಭಾವ ಬೀರುತ್ತಿದೆಯೇ? ಹೆಣ್ಣಿನ ಧ್ವನಿಯನ್ನು ಈ ಗುಂಪು ದ್ವಿತೀಯ ದರ್ಜೆಯವು ಎಂದು ಪರಿಗಣಿಸುತ್ತಿದೆಯೇ? ಆಕೆಯ ಧ್ವನಿಗೆ ತಾರ್ಕಿಕ ಉತ್ತರ ನೀಡುವ ಬದಲು ಅಪಹಾಸ್ಯ, ಮರುಕ, ನಿಂದನೆ, ಅತಿ ಕೆಟ್ಟ ಹೋಲಿಕೆಗಳನ್ನು ಈ ವರ್ಗ ಬಳಸುತ್ತಿರುವುದರ ಉದ್ದೇಶ ಏನು? ಅದು ರವಾನಿಸುವ ಸಂದೇಶ ಏನು? ‘ಬೌದ್ಧಿಕ ವಾಗಿ ನೀನಿನ್ನೂ ಪುರುಷರಿಗೆ ಸರಿಸಮಾನವಾಗಿಲ್ಲ’ ಎಂಬುದನ್ನೇ? ‘ಗುರ್‍ಮೆಹರ್ ಕೌರ್‍ಳ ದಾರಿಗೆಡಿಸಿದವರು ಯಾರು’ ಎಂದು ಕೇಂದ್ರ ಸಚಿವ ಕಿರುಣ್ ರಿಜಿಜು ಕೇಳಿರುವುದು ಏನನ್ನು ಸೂಚಿಸುತ್ತದೆ? ‘ಯಾರೋ ಹೇಳುವಂತೆ ಕೇಳುವವಳು, ಸ್ವತಃ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯ ಇಲ್ಲದವಳು..’ ಎಂಬುದನ್ನೇ ಅಲ್ಲವೇ? ಕೌರ್‍ಳಿಗೆ ಅತ್ಯಾಚಾರ ಬೆದರಿಕೆಯನ್ನು ಹಾಕಿದವರು ದಾರಿಹೋಕರಲ್ಲ ಅಥವಾ ಅಶಿಕ್ಷಿತರಲ್ಲ. ‘ಪಾಕ್ ನರಕವಲ್ಲ’ ಎಂದು ಹೇಳಿದ ಮಾಜಿ ಸಂಸದೆ ರಮ್ಯರನ್ನು ಅತ್ಯಂತ ಅಶ್ಲೀಲ ಭಾಷೆಯಲ್ಲಿ ನಿಂದಿಸಿದವರೂ ನಾಗರಿಕ ಭಾಷೆಯನ್ನು ತಿಳಿಯದವರಲ್ಲ. ಸಾಮಾಜಿಕ ಹೋರಾಟಗಾರ್ತಿ ಪ್ರಭಾ ಬೆಳವಂಗಲ ಅವರು ಫೇಸ್‍ಬುಕ್‍ನಲ್ಲಿ ಹಂಚಿಕೊಂಡ ಬರಹವೊಂದನ್ನು ಆಕ್ಷೇಪಿಸಿ ‘ಅವರ ಜುಟ್ಟು ಹಿಡಿದು ಅತ್ಯಾಚಾರ ನಡೆಸಬೇಕು’ ಎಂದು ಪ್ರತಿಕ್ರಿಯಿಸಿದ ವಿ.ಆರ್. ಭಟ್ ಎಂಬವನೂ ತಿಳುವಳಿಕೆ ಇಲ್ಲದವನಲ್ಲ. ಹೋರಾಟಗಾರ್ತಿ ವಿದ್ಯಾ ದಿನಕರ್ ಅವರ ವಿರುದ್ಧ ಇಂಥದ್ದೇ ಕೀಳು ದರ್ಜೆಯ ಮಾತುಗಳನ್ನಾಡಿದವರೂ ಇದೇ ಸಾಲಿನಲ್ಲಿ ಸೇರಿದವರು. ಹಾಗಂತ, ತನ್ನ ಭಿತ್ತಿಚಿತ್ರದಲ್ಲಿ ಗುರ್‍ಮೆಹರ್ ಕೌರ್ ಅಶ್ಲೀಲ ಭಾಷೆಯನ್ನೇನೂ ಪ್ರಯೋಗಿಸಿಲ್ಲ. ದೆಹಲಿಯ ರಾಮಜಸ್ ಕಾಲೇಜಿನಲ್ಲಿ ನಡೆದ ಬೆಳವಣಿಗೆಗಳು ಆಕೆಯನ್ನು ಆತಂಕಕ್ಕೆ ತಳ್ಳಿದುವು. ದೆಹಲಿ ವಿಶ್ವವಿದ್ಯಾಲಯದ ವ್ಯಾಪ್ತಿಗೊಳಪಟ್ಟ ಕಾಲೇಜು ಎಂಬ ನೆಲೆಯಲ್ಲಿ ಅಥವಾ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಷಯ ಎಂಬ ನೆಲೆಯಲ್ಲಿ ಆಕೆ ಅಭಿಪ್ರಾಯವೊಂದನ್ನು ಹೊಂದುವುದು ಮತ್ತು ಅದನ್ನು ವ್ಯಕ್ತಪಡಿಸುವುದು ಅಪರಾಧವೂ ಅಲ್ಲ. ಫೆಬ್ರವರಿ 21-22ರಂದು ‘ಪ್ರತಿಭಟನೆಯ ಸಂಸ್ಕೃತಿಗಳು’ ಎಂಬ ವಿಷಯದ ಮೇಲೆ ರಾಮಜಸ್ ಕಾಲೇಜು ವಿಚಾರ ಸಂಕಿರಣವೊಂದನ್ನು ಏರ್ಪಡಿಸಿತ್ತು. ಇದರಲ್ಲಿ ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕರಾದ ಶೆಹ್ಲಾ ರಶೀದ್ ಮತ್ತು ಉಮರ್ ಖಾಲಿದ್‍ರು ಮಾತಾಡಬೇಕಿತ್ತು. ‘ಕನ್ಹಯ್ಯ’ ವಿವಾದದ ಸಂದರ್ಭದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡವರು ಈ ಇಬ್ಬರು ವಿದ್ಯಾರ್ಥಿಗಳು. ಬಿಜೆಪಿಯ ವಿದ್ಯಾರ್ಥಿ ಘಟಕವಾದ ಎಬಿವಿಪಿಯು ಇವರಿಬ್ಬರು ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ವಿರೋಧಿಸಿತು. ಪರ-ವಿರೋಧ ಮಾತುಗಳಾದುವು. ಕಾರ್ಯಕ್ರಮ ರದ್ದಾಯಿತು. ಹಲ್ಲೆಗಳು ನಡೆದುವು. ವಿದ್ಯಾರ್ಥಿಗಳು ಮತ್ತು ಶಿಕ್ಷಕರೂ ಗಾಯಗೊಂಡರು. ಗುರ್‍ಮೆಹರ್ ಕೌರ್‍ಳ ಧ್ವನಿಯನ್ನು ತರ್ಕಕ್ಕೆ ಒಡ್ಡುವಾಗ ಈ ಎಲ್ಲ ಬೆಳವಣಿಗೆಗಳನ್ನು ನಾವು ಎದುರಿಟ್ಟುಕೊಳ್ಳಬೇಕು. ರಾಮಜಸ್ ಕಾಲೇಜು ಮತ್ತು ದೆಹಲಿಯ ಇತರ ವಿಶ್ವವಿದ್ಯಾಲಯಗಳಲ್ಲಿ ಎಬಿವಿಪಿಯ ವರ್ತನೆಯು ಗುರ್‍ಮೆಹರ್ ಕೌರ್‍ಳಲ್ಲಿ ಒಂದು ಅಭಿಪ್ರಾಯವನ್ನು ರೂಪಿಸಿತು. ಅದು ಆಕೆಯ ಸ್ವಾತಂತ್ರ್ಯ. ಅಂಥ ಸ್ವಾತಂತ್ರ್ಯ ಎಲ್ಲರಿಗೂ ಮುಕ್ತವಾಗಿದೆ. ‘ನಾನು ಎಬಿವಿಪಿಗೆ ಹೆದರಲ್ಲ’ ಎಂದಾಕೆ ತನ್ನ ಫೇಸ್‍ಬುಕ್ ಪುಟದಲ್ಲಿ ಭಿತ್ತಿ ಚಿತ್ರ (ಪ್ಲಕಾರ್ಡ್) ಹಿಡಿದು ಘೋಷಿಸಿಕೊಂಡರು. ಅದು ಬಹು ಜನಪ್ರಿಯವಾಯಿತು. ಅದು ವಿದ್ಯಾರ್ಥಿ ಚಳುವಳಿಯಾಗಿ ರೂಪುಗೊಂಡಿತು. ಒಂದು ವೇಳೆ, ಎಬಿವಿಪಿಗೆ ಅಥವಾ ಅದನ್ನು ಪೊರೆದಿರುವ ವರ್ಗಕ್ಕೆ ಈ ಅಭಿಪ್ರಾಯದ ಬಗ್ಗೆ ಆಕ್ಷೇಪಣೆ ಇದ್ದರೆ ಅದನ್ನು ಮಂಡಿಸಬೇಕಾದ ರೀತಿ ಯಾವುದಾಗಿತ್ತು? ‘ಎಬಿವಿಪಿಗೆ ಹೆದರಲ್ಲ’ ಎಂಬ ಹೇಳಿಕೆಯಲ್ಲಿ, ‘ಅದು ಹೆದರಿಸುತ್ತೆ’ ಎಂಬ ಭಾವವಿದೆ. ಆದ್ದರಿಂದ, ಎಬಿವಿಪಿ ಅಂದರೆ ಹಾಗೆಯೋ ಅಥವಾ ಅಲ್ಲವೋ ಎಂಬುದನ್ನು ಅದು ಸ್ಪಷ್ಟಪಡಿಸಬಹುದಾಗಿತ್ತು. ಕೌರ್‍ಳ ಹೇಳಿಕೆ ಯಾಕೆ ತಪ್ಪು ಎಂಬುದನ್ನು ದೇಶಕ್ಕೆ ಮನವರಿಕೆ ಮಾಡಬಹುದಾದ ಮತ್ತು ಮಾಡಬೇಕಾದ ಸಂದರ್ಭ ಇದು. ಈ ವಿಧಾನದಲ್ಲಿ ಸವಾಲೂ ಇದೆ. ಬೌದ್ಧಿಕ ಚರ್ಚೆಗೆ ಅವಕಾಶವೂ ಇದೆ. ಆದರೆ, ಎಬಿವಿಪಿ ಈ ಸಹಜ ದಾರಿಯನ್ನು ಕೈಬಿಟ್ಟು ಒಂದು ವರ್ಷದ ಹಿಂದೆ ಚಿತ್ರೀಕರಿಸಿದ್ದ ಕೌರ್‍ಳ ‘ರಾಮನ ದನಿ’ ಎಂಬ ವಿಡಿಯೋದ ಭಿತ್ತಿ ಚಿತ್ರವನ್ನು ಎತ್ತಿಕೊಂಡಿತು. ಆ ಇಡೀ ವೀಡಿಯೋದಲ್ಲಿ ತಾನೇನು ಎಂಬುದನ್ನು ಆಕೆ ಹೇಳಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ತಂದೆ ಕ್ಯಾಪ್ಟನ್ ಮನ್‍ದೀಪ್ ಸಿಂಗ್ ಹುತಾತ್ಮರಾದ ಬಳಿಕ ತಾನೆದುರಿಸಿದ ಪ್ರಶ್ನೆ ಮತ್ತು ಕಂಡುಕೊಂಡ ಉತ್ತರಗಳನ್ನು ಮಾತೇ ಆಡದೆ ಬರೇ ಭಿತ್ತಿಚಿತ್ರದಲ್ಲಿ ನಮೂದಿಸುವ ಮೂಲಕ ವ್ಯಕ್ತಪಡಿಸಿದ್ದಾರೆ. ಅಂತಹ ಹಲವು ಪ್ಲಕಾರ್ಡ್‍ಗಳಲ್ಲಿ ಒಂದು - ‘ನನ್ನ ತಂದೆಯನ್ನು ಪಾಕಿಸ್ತಾನ ಕೊಂದಿಲ್ಲ ಯುದ್ಧ ಕೊಂದಿದೆ..’ ಎಂಬುದು. ನಿಜವಾಗಿ, ಈ ವೀಡಿಯೋದಲ್ಲಿ ಆಕೆ ಎತ್ತಿ ಹಿಡಿದಿರುವ ಪ್ರತಿ ಭಿತ್ತಿ ಚಿತ್ರಗಳಿಗೂ ಒಂದಕ್ಕೊಂದು ಸಂಬಂಧ ಇದೆ. ಆದರೆ ಈ ವೀಡಿಯೋದ ಹಲವು ಭಿತ್ತಿ ಚಿತ್ರಗಳಲ್ಲಿ ಎಬಿವಿಪಿ ಒಂದನ್ನು ಮಾತ್ರ ಹೆಕ್ಕಿಕೊಂಡಿತು ಮತ್ತು ಅದರ ಹಿಂದು-ಮುಂದಿನ ಭಿತ್ತಿ ಚಿತ್ರಗಳಲ್ಲಿರುವ ಯಾವ ಬರಹವನ್ನೂ ಉಲ್ಲೇಖಿಸದೆಯೇ ಮತ್ತು ಈ ಒಂದು ಭಿತ್ತಿ ಚಿತ್ರದ ಮೇಲೆಯೇ ಜನರ ಗಮನ ಕೇಂದ್ರೀಕೃತವಾಗುವಂತೆ ಮಾಡಲು ಪ್ರಯತ್ನಿಸಿತು. ‘ಎಬಿವಿಪಿಗೆ ಹೆದರಲ್ಲ’ ಎಂಬ ಘೋಷಣೆಯ ಬಳಿಕ ಆಕೆ ಎತ್ತಿ ಹಿಡಿದ ಭಿತ್ತಿಚಿತ್ರ ಅದು ಎಂದು ಅಸಂಖ್ಯ ಮಂದಿ ಭಾವಿಸಿಕೊಂಡರು. ಆಕೆಯನ್ನು ದೇಶದ್ರೋಹಿ ಎಂದು ಕರೆದರು. ನಗರ ಕೇಂದ್ರಿತ ನಕ್ಸಲೀಯ ಎಂದರು. ಅತ್ಯಾಚಾರ ಮತ್ತು ಹಲ್ಲೆಯ ಬೆದರಿಕೆಯೊಡ್ಡಿದರು. ತಮಾಷೆಯ ವಸ್ತುವಾಗಿಸಿದರು. ಸಂಸದ ಪ್ರತಾಪಸಿಂಹ ಆಕೆಯನ್ನು ದಾವೂದ್ ಇಬ್ರಾಹೀಮ್‍ಗೆ ಹೋಲಿಸಿದರು. ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮತ್ತು ನಟ ರಣದೀಪ್ ಹೂಡ ತೀರಾ ಅಗ್ಗದ ತಮಾಷೆಗೆ ಒಳಗಾಗಿಸಿದರು. ಹಾಗಂತ, ಕೌರ್‍ಗೆ ಅಭಿಪ್ರಾಯ ಸ್ವಾತಂತ್ರ್ಯ ಇರುವಂತೆಯೇ ಇತರರಿಗೂ ಆ ಸ್ವಾತಂತ್ರ್ಯ ಇದೆ ಎಂದು ವಾದಿಸಬಹುದು. ಅದು ನಿಜ ಕೂಡ. ಆದರೆ, ಯುದ್ಧದಲ್ಲಿ ತಂದೆಯನ್ನು ಕಳಕೊಂಡ ಹೆಣ್ಣು ಮಗಳೊಬ್ಬಳು ‘ಯುದ್ಧ ಬೇಡ’ ಎಂದು ಅತ್ಯಂತ ಪರಿಣಾಮಕಾರಿಯಾಗಿ ಆಗ್ರಹಿಸುವುದನ್ನು ತೀರಾ ತಮಾಷೆಯಾಗಿ ಕಾಣುವುದು ಯಾವ ಮನಸ್ಥಿತಿ? ಆ ಹೆಣ್ಣು ಮಗಳ ಮೇಲೆ ಯುದ್ಧದ ನೇರ ಪರಿಣಾಮವಾಗಿದೆ. ಎರಡರ ಹರೆಯದಲ್ಲೇ ಆಕೆ ತನ್ನ ಅಪ್ಪನನ್ನು ಕಳೆದುಕೊಂಡಿದ್ದಾರೆ. ತನ್ನ ಗೆಳತಿಯರು ತಂತಮ್ಮ ಅಪ್ಪಂದಿರೊಂದಿಗೆ ಕೈ ಹಿಡಿದು ನಡೆಯುವುದನ್ನು ಆಕೆ ಕಂಡಿರ ಬಹುದು. ಅಂಥದ್ದೊಂದು ಬೆಚ್ಚನೆಯ ಪ್ರೀತಿಗಾಗಿ ಆಕೆ ಆಗ್ರಹಿಸಿರಬಹುದು. ತನ್ನಿಂದ ಅಪ್ಪನನ್ನು ಕಸಿದುಕೊಂಡಿರುವುದು ಯುದ್ಧ ಎಂಬ ಅರಿವು ಆಕೆಯೊಳಗೆ ಶಾಶ್ವತ ಗಾಯವಾಗಿ ಉಳಿದುಕೊಂಡಿರಬಹುದು. ಬಹುಶಃ ಆ ಗಾಯದ ಪ್ರತಿಕ್ರಿಯೆಯೇ ಆ ಭಿತ್ತಿಚಿತ್ರ ಎಂದೂ ಹೇಳಬಹುದು. ಆಕೆ ಯುದ್ಧವನ್ನು ದ್ವೇಷಿಸುತ್ತಾರೆ. ಶಾಂತಿಯನ್ನು ಬಯಸುತ್ತಾರೆ. ಆದ್ದರಿಂದಲೇ ಯುದ್ಧವಿರೋಧಿ ಚಳವಳಿಗಳಲ್ಲಿ ಭಾಗವಹಿಸುತ್ತಲೂ ಇದ್ದಾರೆ. ಯುದ್ಧ ವಿರೋಧಿ ಸುದ್ದಿ ಗೋಷ್ಠಿಯಲ್ಲಿ ತಾನು ಭಾಗವಹಿಸಿದುದನ್ನು ಫೋಟೋ ಸಮೇತ ಅವರು 2016 ನವೆಂಬರ್ 6ರಂದು ತನ್ನ ಫೇಸ್‍ಬುಕ್ ಪುಟದಲ್ಲಿ ಪ್ರಕಟಿಸಿದ್ದಾರೆ. ‘ಯುದ್ಧದಾಹಿಗಳ ವಿರುದ್ಧ ಕ್ರಮ ಕೈಗೊಳ್ಳಿ’ ಎಂಬ ಆಗ್ರಹದೊಂದಿಗೆ ನಡೆಸಲಾದ ಸುದ್ದಿಗೋಷ್ಠಿ ಅದು. ಅದರಲ್ಲಿ ಕೌರ್‍ರ ಜೊತೆಗೆ ಕವಿತಾ ಕೃಷ್ಣನ್ ಮತ್ತು ಸಾಮಾಜಿಕ ಕಾರ್ಯಕರ್ತ ಜಾನ್ ದಯಾಳ್ ಇದ್ದಾರೆ. ಆಕೆಯ ಭಿತ್ತಿ ಚಿತ್ರವೊಂದನ್ನು ಎತ್ತಿಕೊಂಡು ಕುಹಕವಾಡಿದವರು ಆಕೆಗಿರುವ ಈ ಹಿನ್ನೆಲೆಯನ್ನು ಯಾಕೆ ಗಮನಿಸಿಲ್ಲ ಅಥವಾ ಯಾಕೆ ಗಂಭೀರವಾಗಿ ಪರಿಗಣಿಸಿಲ್ಲ? ಹೆಣ್ಣು ಎಂದೇ?
      ಹೆಣ್ಣಿನ ಧ್ವನಿಯನ್ನು ನಿರ್ಲಕ್ಷಿಸುವುದು ಅನಾಗರಿಕ ಸಮಾಜದಲ್ಲಿ ನಡೆದುಕೊಂಡು ಬಂದ ಸಂಸ್ಕೃತಿ. ಅತ್ಯಾಚಾರ ಎಂಬುದು ಆಕೆ ಯನ್ನು ಪಳಗಿಸುವುದಕ್ಕೂ ನಿಯಂತ್ರಿಸುವುದಕ್ಕೂ ಇರುವ ಆಯುಧ. ಇದು ಈಗಲೂ ಚಾಲ್ತಿಯಲ್ಲಿದೆ ಎಂಬುದಕ್ಕೆ ಗುರ್‍ಮೆಹರ್ ಕೌರ್ ಮತ್ತು ಕೇರಳದ ನಟಿ ಇತ್ತೀಚಿನ ಉದಾಹರಣೆ. ಅತ್ಯಂತ ಮುಂದುವರಿದ ಮತ್ತು ನಾಗರಿಕ ಸಮಾಜದಲ್ಲಿ ಸಂಭಾವಿತರಾಗಿ ಗುರುತಿಸಿಕೊಂಡವರೇ ಹೆಣ್ಣನ್ನು ಇಷ್ಟು ಬಾಲಿಶವಾಗಿ ನಡೆಸಿಕೊಳ್ಳುತ್ತಾ ರೆಂದರೆ, ಅದರ ಅರ್ಥ ಏನು? ಇದಕ್ಕೆ ಪರಿಹಾರವೇನು? ಹೆಚ್ಚು ಹೆಚ್ಚು ಮಹಿಳಾ ಪರ ಕಾನೂನುಗಳನ್ನು ರಚಿಸುವುದೇ? ಮಹಿಳೆ ಯರಿಗಾಗಿ ಪೊಲೀಸ್ ಸಹಾಯವಾಣಿಯನ್ನು ಹೆಚ್ಚೆಚ್ಚು ತೆರೆಯುವುದೇ? ಸುಪ್ರೀಮ್ ಕೋರ್ಟಿನಲ್ಲಿ ಈಗಿರುವ 28 ನ್ಯಾಯಾಧೀಶರಲ್ಲಿ ಓರ್ವರ ಹೊರತು ಉಳಿದವರೆಲ್ಲರೂ ಪುರುಷರೇ ಎಂಬುದನ್ನು ಕಾರಣವಾಗಿ ಉಲ್ಲೇಖಿಸುವುದೇ? ದೇಶದ 24 ಹೈಕೋರ್ಟ್‍ಗಳಲ್ಲಿ ಬರೇ 61 ಮಹಿಳಾ ನ್ಯಾಯಾ ಧೀಶರಿದ್ದಾರೆ ಎಂಬ ಕೊರತೆಯನ್ನು ತೋರಿಸುವುದೇ? ನಮ್ಮ ಪೊಲೀಸ್ ಇಲಾಖೆಯಲ್ಲಿ ಎಷ್ಟು ಮಹಿಳೆ ಯರಿದ್ದಾರೆ ಎಂಬುದನ್ನು ಲೆಕ್ಕ ಹಾಕುವುದೇ? ನಮ್ಮ ಪಠ್ಯಪುಸ್ತಕಗಳಲ್ಲಿ ಇನ್ನಷ್ಟು ಲಿಂಗ ಸಮಾನತೆಯನ್ನು ಕಾಯ್ದುಕೊಳ್ಳುವುದೇ? ನಿಜಕ್ಕೂ, ಹೆಣ್ಣನ್ನು ಅವಮಾನಿಸುವವರು ಯಾರು? ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೆಂದರೆ ನಾಗರಿಕ ಭಾಷೆಯ ತಿಳುವಳಿಕೆ ಇಲ್ಲದವರಲ್ಲ. ಲಿಂಗ ಸಮಾನತೆಯ ಬಗ್ಗೆ ಪಾಠಗಳು ಅತ್ಯಂತ ಹೆಚ್ಚು ಮೊಳಗುತ್ತಿರುವುದೇ ವಿಶ್ವವಿದ್ಯಾಲಯಗಳಲ್ಲಿ. ಕ್ರಿಕೆಟಿಗರು, ಸಂಸದರು, ಸಿನಿಮಾ ನಟರು ಮುಂತಾದವರೆಲ್ಲ ನಾಗರಿಕ ಪರಿಭಾಷೆಯ ಬಗ್ಗೆ ಚೆನ್ನಾಗಿಯೇ ತಿಳಿದುಕೊಂಡವರು. ಹೀಗಿದ್ದೂ, ಒಂದು ಭಿತ್ತಿಚಿತ್ರಕ್ಕೆ ಪ್ರತಿಯಾಗಿ ಅತ್ಯಾಚಾರದ ಬೆದರಿಕೆಗಳು ಬಂದುವಲ್ಲ, ಯಾಕೆ? ಯುದ್ಧ ವಿರೋಧಿ ಭಿತ್ತಿಚಿತ್ರವನ್ನು ಅರ್ಥೈಸಿಕೊಳ್ಳುವಷ್ಟೂ ಕಾಮನ್‍ಸೆನ್ಸ್ ಈ ವಿದ್ಯಾವಂತರಿಂದ ಪ್ರಕಟವಾಗಲಿಲ್ಲವಲ್ಲ, ಯಾವ ಕಾರಣದಿಂದ? ಅದರ ಹಿಂದೆ ಸಿದ್ಧಾಂತವೊಂದು ಕೆಲಸ ಮಾಡಿದೆಯೇ? ಹಾಗಾದರೆ ಆ ಸಿದ್ಧಾಂತ ಯಾವುದು? ಅದು ಏನನ್ನು ಪ್ರತಿಪಾದಿಸುತ್ತದೆ? ಹೆಣ್ಣಿನ ಬಗ್ಗೆ ಆ ಸಿದ್ಧಾಂತದ ನಿಲುವು ಏನು? ಆಕೆಯ ಮಾತು ಬಾಲಿಷವೇ? ಆಕೆ ಗಂಭೀರ ವಿಷಯವನ್ನು ಮಾತಾಡಬಾರದೇ? ಪುರುಷ ಸಮಾಜದ ನಿಲುವನ್ನು ಆಕೆ ಪ್ರಶ್ನಿಸಬಾರದೇ? ಆಕೆಯ ಮಾತನ್ನು ಎತ್ತಿಕೊಂಡು ಗಂಭೀರ ಚರ್ಚೆಗೆ ಒಡ್ಡುವುದು ಪುರುಷ ಸಮಾಜದ ಯೋಗ್ಯತೆಗೆ ಕುಂದೇ? ಅತ್ಯಾಚಾರ, ಹಲ್ಲೆ, ದಮನಕಾರಿ ಹೇಳಿಕೆಗಳು ಮತ್ತು ಅಪಹಾಸ್ಯಗಳು ಆ ಸಿದ್ಧಾಂತದ ಭಾಗವೇ? ಭಾರತೀಯ ಸಂಸ್ಕೃತಿಯ ರಕ್ಷಕರಂತೆ ಮತ್ತು ದೇಶಪ್ರೇಮವನ್ನು ಪೇಟೆಂಟ್ ಪಡಕೊಂಡವರಂತೆ ವರ್ತಿಸುವವರು ಈ ಸಿದ್ಧಾಂತವನ್ನು ಪ್ರತಿನಿಧಿಸುತ್ತಿದ್ದಾರೆಯೇ? ಭಾರತೀಯ ಸಂಸ್ಕೃತಿ, ಪರಂಪರೆಯ ಹೆಸರಲ್ಲಿ ಅವರು ತರಲು ಉದ್ದೇಶಿಸಿರುವುದು ಈ ವಿಚಾರಧಾರೆಯನ್ನೇ? ಕ್ರಿಕೆಟಿಗರು, ನಟರು, ಕ್ರೀಡಾಪಟುಗಳು ಇದರ ಅರಿವಿಲ್ಲ ದೆಯೇ ಅದರ ಬೆಂಬಲಿಗರಾಗುತ್ತಿದ್ದಾರೆಯೇ?
       ಗುರ್‍ಮೆಹರ್ ಮೂಲಕ ಮುನ್ನೆಲೆಗೆ ಬಂದಿರುವ ಇಂಥ ಪ್ರಶ್ನೆಗಳು ಗಂಭೀರ ಚರ್ಚೆಗೆ ಒಳಪಡಬೇಕಿದೆ.


No comments:

Post a Comment