Tuesday, December 11, 2012

ಅಬ್ದುಲ್ ನಾರಾಯಣ್ ಡಿ' ಸೋಜ ಎಂಬ ಸೌಹಾರ್ದಪ್ರೇಮಿ?

ಸಂಪಾದಕರೇ,
  ನಾನು ಕೆಎಸ್‍ಆರ್‍ಟಿಸಿಯಲ್ಲಿ ನೌಕರ. ಕಳೆದ ದೀಪಾವಳಿಯ ಸಂದರ್ಭದಲ್ಲಿ ಸಹೋದ್ಯೋಗಿಗಳು ನನ್ನಲ್ಲಿ ಚಂದಾ ಕೇಳಿದರು. ನಾನು ನಯವಾಗಿ ನಿರಾಕರಿಸಿದೆ. ಇಸ್ಲಾಮಿನಲ್ಲಿ ವಿಗ್ರಹ ಪೂಜೆ ಮಾಡುವುದು ಮತ್ತು ಅದಕ್ಕೆ ಪ್ರೋತ್ಸಾಹ ಕೊಡುವುದು ನಿಷಿದ್ಧ ಎಂದೆ. ಸಹೋದ್ಯೋಗಿಗಳಿಗೆ ಇಷ್ಟವಾದಂತೆ ಕಾಣಿಸಲಿಲ್ಲ. ಬಳಿಕ, ಬಸ್ಸಿಗೆ ಹೂಹಾರ ಹಾಕುವಂತೆ ಒತ್ತಾಯಿಸಿದರು. ಆಗಲೂ ನಾನು ನಿರಾಕರಿಸಿದೆ. ಇಸ್ಲಾಮಿನಲ್ಲಿ ಇಂಥ ಆಚರಣೆಗಳಿಗೆ ಅವಕಾಶ ಇಲ್ಲ. ಇದು ಹಿಂದೂ ಧರ್ಮದ ಆಚರಣೆ. ನೀವು ಆಚರಿಸಿ. ಆದರೆ ನನ್ನನ್ನು ಬಲವಂತಪಡಿಸಬೇಡಿ ಎಂದೆ. ಅವರು ಒಪ್ಪಿಕೊಳ್ಳಲಿಲ್ಲ. ನನ್ನನ್ನು ಕೋಮುವಾದಿಯಂತೆ, ಸೌಹಾರ್ದದ ವಿರೋಧಿಯಂತೆ ಬಿಂಬಿಸಿದರು. ಮೇಲಧಿಕಾರಿಗಳಿಗೆ ದೂರು ಕೊಟ್ಟರು. ಯಾವುದಾದರೂ ಪ್ರಕರಣದಲ್ಲಿ ಸಿಲುಕಿಸಿ ಕೆಲಸದಿಂದ ವಜಾ ಮಾಡುವುದಕ್ಕಾಗಿ ಪಿತೂರಿ ನಡೆಸಿದರು. ಹೀಗಾಗಿ ನಾನು ಸಾಕಷ್ಟು ನೊಂದಿದ್ದೇನೆ. ಇನ್ನೊಂದು ಧರ್ಮವನ್ನು ಗೌರವಿಸುತ್ತಾ, ನನ್ನ ಧರ್ಮಕ್ಕೆ ನಾನು ನಿಷ್ಠನಾಗುವುದು ಯಾಕೆ ಸೌಹಾರ್ದದ ವಿರೋಧಿ ಅನ್ನಿಸಿಕೊಳ್ಳುತ್ತದೆ ಅನ್ನುವುದು ಇನ್ನೂ ನನಗೆ ಅರ್ಥವಾಗಿಲ್ಲ. ನಾನು ತಪ್ಪು ಮಾಡಿದ್ದೇನೆಯೇ ತಿಳಿಸಿ..
  ಹಾಗಂತ ನನ್ನ ದೂರದ ಗೆಳೆಯನೊಬ್ಬ ದೂರವಾಣಿ ಕರೆ ಮಾಡಿ ಇತ್ತೀಚೆಗೆ ವಿನಂತಿಸಿದ್ದ..
ಇಷ್ಟಕ್ಕೂ, ಸೌಹಾರ್ದ ಅಂದರೇನು? ಯಾವುದನ್ನೆಲ್ಲಾ ನಾವು ಸೌಹಾರ್ದ ಅಂತ ಕರೆಯಬಹುದು? ಹಿಂದೂ ವಿಧಿಯಂತೆ ಮುಸ್ಲಿಮರು ವಿವಾಹವಾಗುವುದು ಅಥವಾ ಇಸ್ಲಾಮೀ  ವಿಧಿಯಂತೆ ಹಿಂದೂಗಳು ವಿವಾಹವಾಗುವುದು ಸೌಹಾರ್ದವಾಗಬಹುದೇ? ಹಿಂದೂಗಳದ್ದೋ ಕ್ರೈಸ್ತರದ್ದೋ ಕೆಲವು ಆಚರಣೆಗಳನ್ನು ಮುಸ್ಲಿಮರು ಮಾಡುವುದು ಮತ್ತು ಮುಸ್ಲಿಮರ ಕೆಲವು ಆಚರಣೆಗಳನ್ನು ಹಿಂದೂಗಳು ಮಾಡುವುದನ್ನೆಲ್ಲಾ ಸೌಹಾರ್ದವಾಗಿ ಪರಿಗಣಿಸಬಹುದಾ? ನಿಜವಾಗಿ, ಮಾಧ್ಯಮಗಳ ಹಿಡಿತ ಈ ಸಮಾಜದ ಮೇಲೆ ಬಲವಾಗಿರುವುದರಿಂದ ಅವು ಏನೆಲ್ಲ ಹೇಳುತ್ತವೋ ಅಥವಾ ಯಾವುದನ್ನು ಅನುಕರಣೀಯ ಅಂಥ ಬೋಧಿಸುತ್ತವೋ ಅವನ್ನೇ ಸರಿ ಎಂದು ಸಮಾಜ ತೀರ್ಮಾನಿಸಿಬಿಡುತ್ತದೆ. ಮುಸ್ಲಿಮನೋರ್ವ ಇರುಮುಡಿ ಕಟ್ಟಿ ಅಯ್ಯಪ್ಪ ವ್ರತಧಾರಿಯಾಗುವುದು ಇವತ್ತಿನ ಮಾಧ್ಯಮಗಳ ಮಟ್ಟಿಗೆ ಸೌಹಾರ್ದದ ಸಂಕೇತ. ದರ್ಗಾಕ್ಕೆ ಹಿಂದೂವೊಬ್ಬ ನಡೆದುಕೊಳ್ಳುವುದು ಕೂಡಾ ಮಾಧ್ಯಮಗಳ ಕಣ್ಣಿನಲ್ಲಿ ಸೌಹಾರ್ದವಾಗುತ್ತದೆ. ‘ಕಾರಣಿಕದ’ ಜಾಗಕ್ಕೆ ಮುಸ್ಲಿಮನೋರ್ವ ನಡೆದುಕೊಂಡರೆ, ಅಂತರ್ಜಾತಿ ವಿವಾಹವಾದರೆ ಅಥವಾ ಇನ್ನೇನೋ ಅಸಂಗತಗಳು ನಡೆದರೆ ಅವಕ್ಕೆಲ್ಲಾ ಸೌಹಾರ್ದದ ಬಿರುದು ಕೊಟ್ಟು ಸಾರ್ವಜನಿಕವಾಗಿ, ‘ಇಂಥದ್ದು ಮಾತ್ರ ಸೌಹಾರ್ದ’ ಎಂಬೊಂದು ತಿಳುವಳಿಕೆಯನ್ನು ಹುಟ್ಟಿಸುವಲ್ಲಿ ಮಾಧ್ಯಮಗಳು ಬಹುವಂಶ ಇವತ್ತು ಯಶಸ್ವಿಯಾಗಿವೆ. ಆದ್ದರಿಂದಲೇ, ಚಂದಾ ಕೊಡಲು ನಿರಾಕರಿಸಿದ ನನ್ನ ಗೆಳೆಯ ಕೋಮುವಾದಿಯಾಗಿ ಬಿಂಬಿತಗೊಂಡದ್ದು.
  ಅಂದ ಹಾಗೆ, ಇಸ್ಲಾಮ್‍ನಲ್ಲಿ ಮದುವೆಯಾಗುವುದಕ್ಕೆ ನಿಶ್ಚಿತವಾದ ವಿಧಾನವಿದೆ. ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ವರ ಮತ್ತು ವಧುವಿನ ತಂದೆ ಇಲ್ಲವೇ ವಾರೀಸುದಾರರು ವಿಧಿಗಳನ್ನು ನೆರವೇರಿಸುತ್ತಾರೆ. ಅದೇ ವೇಳೆ ಹಿಂದೂಗಳ ಮದುವೆಯು ಅಗ್ನಿಸಾಕ್ಷಿಯಾಗಿ ನೆರವೇರುತ್ತದೆ. ಮಾತ್ರವಲ್ಲ, ಇಸ್ಲಾಮ್ ಪ್ರಬಲವಾಗಿ ನಿಷೇಧಿಸಿರುವ ಬಹುದೇವಾರಾಧನೆ, ವಿಗ್ರಹಾರಾಧನೆಯ ವಿಧಿ-ವಿಧಾನಗಳೂ ಬಳಕೆಯಲ್ಲಿವೆ. ಹೀಗಿರುವಾಗ, ಮುಸ್ಲಿಮನೊಬ್ಬ ಹಿಂದೂ ಧಾರ್ಮಿಕ ವಿಧಿಯಂತೆ ಮದುವೆಯಾಗುವುದಾದರೆ, ಅದು ಹಿಂದೂಗಳ ಮಟ್ಟಿಗೆ ಸೌಹಾರ್ದವಾಗಿ ಕಾಣಬಹುದು. ಆದರೆ ಮುಸ್ಲಿಮರು ಅದನ್ನು ಧರ್ಮದ್ರೋಹವೆಂದಲ್ಲದೆ ಸೌಹಾರ್ದವಾಗಿ ಪರಿಗಣಿಸಲು ಸಾಧ್ಯವೇ? ಒಂದು ಧರ್ಮಕ್ಕೆ ಅಪಚಾರವೆಸಗಿ ಮಾಡಲಾಗುವ ಯಾವುದೇ ಬಗೆಯ ಸೌಹಾರ್ದತೆಯು ಸಾಮಾಜಿಕವಾಗಿ ಒಗ್ಗಟ್ಟನ್ನು ತಂದೀತೇ? ಆದ್ದರಿಂದಲೇ ಪ್ರವಾದಿ ಮುಹಮ್ಮದರು(ಸ) ಇಂಥ ಆಲೋಚನೆಗಳನ್ನು ಬಲವಾಗಿ ತಿರಸ್ಕರಿಸಿದ್ದು. "ಒಂದು ವರ್ಷ ನೀವು ನಮ್ಮ ವಿಗ್ರಹಗಳನ್ನು ಪೂಜಿಸಿದರೆ ಇನ್ನೊಂದು ವರ್ಷ ನಿಮ್ಮ ಅಲ್ಲಾಹನನ್ನು ನಾವು ಪೂಜಿಸುತ್ತೇವೆ" ಎಂದು ಪ್ರವಾದಿಯವರಲ್ಲಿ ಮಕ್ಕಾದ ವಿರೋಧಿಗಳು ವಿನಂತಿಸಿದ್ದರು. ಒಂದು ವೇಳೆ ಪ್ರವಾದಿಯವರು  ಆ ಬೇಡಿಕೆಯನ್ನು ಒಪ್ಪಿಕೊಳ್ಳುತ್ತಿದ್ದರೆ ಅವರ ಮತ್ತು ಅವರ ಅನುಯಾಯಿಗಳ ಮೇಲೆ ನಡೆಯುತ್ತಿದ್ದ ಹಿಂಸೆ, ದೌರ್ಜನ್ಯ, ಬಹಿಷ್ಕಾರಗಳಿಗೆಲ್ಲಾ ತೆರೆ ಬೀಳುತ್ತಿತ್ತು. ಇಷ್ಟಿದ್ದೂ ಪ್ರವಾದಿ(ಸ) ಹೇಳಿದ್ದು, ‘ನಿಮಗೆ ನಿಮ್ಮ ಧರ್ಮ ಮತ್ತು ನಮಗೆ ನಮ್ಮ ಧರ್ಮ.’ ‘ಧರ್ಮದ ವಿಷಯದಲ್ಲಿ ಬಲಾತ್ಕಾರ ಸರಿಯಲ್ಲ.’ (ಪವಿತ್ರ ಕುರ್‍ಆನ್: 2: 256) (109: 6)
  ನಿಜವಾಗಿ, ಇಂಥದ್ದೊಂದು ಕಲಬೆರಕೆಯ ಸೌಹಾರ್ದತೆಯು ಆಚರಣೆಯಲ್ಲಿರಬೇಕಾದುದು ಕೊಳ್ಳುಬಾಕ ಸಂಸ್ಕ್ರತಿಯ ಮಟ್ಟಿಗೆ ಬಹಳ ಅಗತ್ಯ. ಧರ್ಮವನ್ನು ತೀರಾ ಸರಳವಾಗಿ ವ್ಯಾಖ್ಯಾನಿಸುತ್ತಾ ಬದುಕುವ ಸಮೂಹವೊಂದರ ಅಗತ್ಯ ಜಾಗತೀಕರಣಕ್ಕೆ ಮತ್ತು ಸಾಮ್ರಾಜ್ಯಶಾಹಿ ಆಲೋಚನೆಗಳಿಗೆ ತುರ್ತಾಗಿ ಬೇಕಾಗಿದೆ. ಒಂದು ಕಡೆ ಅಪ್ಪಟ ಭೌತಿಕ ವಾದಿಗಳನ್ನು ಅದು ತಯಾರಿಸುತ್ತಿರುವ ಹಾಗೆಯೇ ಇನ್ನೊಂದು ಕಡೆ, ಧರ್ಮನಿಷ್ಠರನ್ನು ಅಪಾಯಕಾರಿಗಳಂತೆ ಬಿಂಬಿಸುವುದಕ್ಕೆ ಅದು ತನ್ನ ಸರ್ವಸಾಧ್ಯ ಕಾಣಿಕೆಗಳನ್ನು ನೀಡುತ್ತಿದೆ. ಜಗತ್ತಿನ ಕೆಲವು ಕುಬೇರ ಕಂಪೆನಿಗಳು ಉತ್ಪನ್ನಗಳನ್ನು ತಯಾರಿಸಿ, ಅದಕ್ಕೆ ತಕ್ಕಂತೆ ಮಾಧ್ಯಮಗಳನ್ನು ಬಳಸಿ ಜನರನ್ನು ಭ್ರಮಾಲೋಕದಲ್ಲಿ ತೇಲುವಂತೆ ಮಾಡುತ್ತಿವೆ. ಜನರು ಈ ಉತ್ಪನ್ನಗಳನ್ನು ಮನೆ ತುಂಬಿಸಿಕೊಳ್ಳುವುದೇ ನಿಜವಾದ ಪ್ರೆಸ್ಟೀಜು ಎಂದು ಭಾವಿಸುವ ಮೂಲಕ ಅದಕ್ಕಾಗಿ ಹಗಲಿರುಳು, ನ್ಯಾಯ-ಅನ್ಯಾಯವೆನ್ನದೆ ದುಡಿಯುತ್ತಾರೆ. ದೇಶದ ಒಟ್ಟು ವ್ಯವಸ್ಥೆ ಇವತ್ತು ಭ್ರಷ್ಟವಾಗಿದ್ದರೆ, ಜನರಲ್ಲಿ ತುಂಬಲಾದ ಈ ದುರಾಸೆಗೆ ಪ್ರಥಮ ಸ್ಥಾನವಿದೆ.
  ಇದರ ಇನ್ನೊಂದು ಮುಖ, ಈ ತೀವ್ರ ಭೌತಿಕವಾದವನ್ನು ಒಪ್ಪದವರನ್ನು ಅಪಾಯಕಾರಿಗಳಂತೆ ಬಿಂಬಿಸುವುದು. ಇವತ್ತು ಸಾಮ್ರಾಜ್ಯಶಾಹಿತ್ವದ ಪ್ರಥಮ ಶತ್ರು ಯಾವುದೇ ಒಂದು ರಾಷ್ಟ್ರವಲ್ಲ ಅಥವಾ ಸರ್ವಾಧಿಕಾರಿಯೋ ಯಾವುದಾದರೊಂದು ನಿರ್ದಿಷ್ಟ ಪಕ್ಷವೋ ಅಲ್ಲ. ಧರ್ಮವನ್ನು ಅದರ ನಿಜವಾದ ಅರ್ಥದಲ್ಲಿ ಯಾರೆಲ್ಲ ಪಾಲಿಸುತ್ತಾರೋ ಅವರ ಬಗ್ಗೆ ಸಾಮ್ರಾಜ್ಯಶಾಹಿತ್ವಕ್ಕೆ ತೀವ್ರ ಸಿಟ್ಟಿದೆ. ತಮ್ಮ ಭ್ರಮಾ ಜಗತ್ತಿನೊಳಗೆ ಅವರನ್ನು ಸೆಳೆಯಲು ಸಾಧ್ಯವಿಲ್ಲ ಎಂದು ತಿಳಿದುಕೊಂಡಿರುವ ಅದು ಇವರು ತಮ್ಮ ವಿರುದ್ಧ ಧ್ವನಿಯೆತ್ತದಂತೆ ತಡೆಯುವುದಕ್ಕಾಗಿ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ತಂತ್ರಗಳನ್ನು ಹೆಣೆದುಕೊಂಡಿದೆ. ಭಾರತದಂಥ ದೇಶಗಳಲ್ಲಿ ಧರ್ಮಗಳ ನಡುವೆ ಸಂಘರ್ಷ ಉಂಟಾಗುವಂಥ ವಾತಾವರಣವನ್ನು ನಿರ್ಮಿಸಿದ್ದರೆ, ಇರಾಕ್ ಮತ್ತಿತರ ಕಡೆ ಸುನ್ನಿ-ಶಿಯಾ ಭಿನ್ನಾಭಿಪ್ರಾಯವನ್ನು, ಜನಾಂಗೀಯ ಮತ್ತು ಪ್ರಾದೇಶಿಕ ವಾದವನ್ನು ಸಂಘರ್ಷದ ವಿಷಯವಾಗಿ ತೂರಿಬಿಟ್ಟಿದೆ. ಸಾಮ್ರಾಜ್ಯಶಾಹಿತ್ವವನ್ನು ಮತ್ತು ಕಲಬೆರಕೆ ಧಾರ್ಮಿಕತೆ ಯನ್ನು ಬಲವಾಗಿ ವಿರೋಧಿಸುತ್ತಿದ್ದ ಈಜಿಪ್ಟ್ ನ ಮುಸ್ಲಿಮ್ ಬ್ರದರ್‍ಹುಡ್ ಅನ್ನು ಹುಸ್ನಿ ಮುಬಾರಕ್ ಎಂಬ ಸರ್ವಾಧಿಕಾರಿಯ ಮುಖಾಂತರ 40 ವರ್ಷಗಳವರೆಗೆ ದಮನಿಸಿದ್ದು ಇದೇ ಸಾಮ್ರಾಜ್ಯಶಾಹಿತ್ವ. ಇಲ್ಲದಿದ್ದರೆ ಫೆಲೆಸ್ತೀನ್, ಈಜಿಪ್ಟ್, ಸಿರಿಯ, ಜೋರ್ಡಾನ್, ಲೆಬನಾನ್.. ಮುಂತಾದ ರಾಷ್ಟ್ರಗಳ ಭೂಪ್ರದೇಶವನ್ನು ಆಕ್ರಮಿಸಿರುವ ಇಸ್ರೇಲ್‍ನ ವಿರುದ್ಧ ಒಂದಾಗುವುದರ ಬದಲು, ಲಿಬಿಯದ ಗದ್ದಾಫಿ, ಟ್ಯುನೀಶಿಯಾದ ಝೈನುಲ್ ಆಬಿದೀನ್, ಈಜಿಪ್ಟ್ ನ ಮುಬಾರಕ್, ಜೋರ್ಡಾನ್‍ನ ಸಾಲಿಹ್, ಸಿರಿಯದ ಅಸದ್..ರೆಲ್ಲ ತಮ್ಮದೇ ದೇಶದ ‘ಮುಸ್ಲಿಮ್ ಬ್ರದರ್‍ಹುಡ್’ಗಳ ವಿರುದ್ಧ ಒಂದಾಗುತ್ತಿದ್ದರೆ? ನಿಜವಾಗಿ, ಇಂಥ ಧರ್ಮದ ಇಂತಿಂಥ ಚಟುವಟಿಕೆಗಳು ಅಮಾನವೀಯವಾದದ್ದು, ಕ್ರೌರ್ಯದ್ದು ಎಂದು ಮಾಧ್ಯಮಗಳನ್ನು ಬಳಸಿ ಸಾಮ್ರಾಜ್ಯಶಾಹಿತ್ವವು ಗದ್ದಲವೆಬ್ಬಿಸುತ್ತದೆ. ಮಾತ್ರವಲ್ಲ, ಅದು ಹೇಗೆ ಇತರ ಧರ್ಮಗಳಿಗೆ ಅಪಾಯಕಾರಿ ಎಂಬುದನ್ನು ಸಿನಿಮಾ, ಕಾರ್ಟೂನ್ ಅಥವಾ ಇನ್ನಾವುದಾದರೂ ವಿಧಾನದ ಮೂಲಕ ಹೇಳುತ್ತಲೇ ಇರುತ್ತವೆ. ಹೀಗೆ ಒಂದು ಧರ್ಮವನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ತೆರೆಯ ಹಿಂದೆ ನಿಂತು ಅತ್ಯಂತ ಅಚ್ಚುಕಟ್ಟಾಗಿ ಅವು ಮಾಡುತ್ತಲೇ ಇರುತ್ತವೆ. ಆದ್ದರಿಂದಲೇ, ನನ್ನ ಮಿತ್ರನ ಧರ್ಮನಿಷ್ಠೆ ಆತನ ಸಹೋದ್ಯೋಗಿಗಳಿಗೆ ಕೋಮುವಾದದಂತೆ ಕಾಣಿಸಿದ್ದು. ಯಾಕೆಂದರೆ, ಕೋಮುವಾದ, ಸೌಹಾರ್ದತೆ.. ಎಂಬುದನ್ನೆಲ್ಲಾ ನಾವು ಇವತ್ತು ಕಲಿತದ್ದು ಧರ್ಮಗ್ರಂಥಗಳಿಂದಲ್ಲ, ಮಾಧ್ಯಮ ಜಾಹೀರಾತುಗಳಿಂದ. ನಿಜವಾಗಿ, ತನ್ನ ಧರ್ಮಕ್ಕೆ ನಿಷ್ಠವಾಗಿರುವುದು ಕೋಮುವಾದವಲ್ಲ. ತನ್ನ ಧರ್ಮದವನ ಅಪರಾಧವನ್ನು, ‘ತನ್ನ ಧರ್ಮದವ’ ಎಂಬ ಕಾರಣಕ್ಕಾಗಿ ಬೆಂಬಲಿಸುವುದೇ ಕೋಮುವಾದ. ಆದರೆ ಇವತ್ತಿನ ಸ್ಥಿತಿಯಾದರೂ ಹೇಗಿದೆ? ಸಮಾಜದಲ್ಲಿ ಕಳ್ಳಭಟ್ಟಿ ಇದೆ. ಮದ್ಯ ಇದೆ. ಲಾಟರಿ ಇದೆ. ಜೂಜು ಇದೆ.. ಹೀಗೆ ಧರ್ಮಗಳು ವಿರೋಧಿಸಿದ ಕೆಡುಕಿನ ಸಾವಿರ ಸಾವಿರ ಪ್ರಕಾರಗಳು ಇವೆ. ಆದರೆ, ಈ ಕುರಿತಂತೆ ಎಲ್ಲಾದರೂ ಗಲಭೆ ನಡೆಯುತ್ತದೆಯೇ? ಕಳ್ಳಭಟ್ಟಿ ತಯಾರಿಸುವವ ಇನ್ನೊಬ್ಬ ಕಳ್ಳಭಟ್ಟಿ ತಯಾರಕನ ಮೇಲೆ ಮುಗಿ ಬೀಳುತ್ತಾನಾ? ಒಂದು ಮದ್ಯದಂಗಡಿಯ ಮಾಲಿಕ ಇನ್ನೋರ್ವ ಮದ್ಯದಂಗಡಿ ಮಾಲಿಕನನ್ನು ಕೊಲ್ಲುತ್ತಾನಾ? ಸಿಕ್ಕಿಮ್ ಲಾಟರಿಯು ನಾಗಾಲ್ಯಾಂಡ್ ಲಾಟರಿಯನ್ನು ಮುಗಿಸಲು ನೋಡುವುದಿದೆಯೇ? ನಿಜವಾಗಿ ಎಲ್ಲ ಕೆಡುಕುಗಳ ಸ್ಥಿತಿಯೂ ಹೀಗೆಯೇ. ಒಂದು ರೀತಿಯಲ್ಲಿ, ಧರ್ಮಾನುಯಾಯಿಗಳು ಈ ಎಲ್ಲ ಕೆಡುಕುಗಳ ವಿರುದ್ಧ ಹೋರಾಡಬೇಕಿತ್ತು. ಆದರೆ ಇದು ಆಗುವ ಬದಲು; ಒಂದು ಪ್ರದೇಶಕ್ಕೆ ತೀರಾ ಕಂಟಕವಾಗಿರುವ ಹಿಂದೂ ಸಹೋದರನ ಮಾಲಿಕತ್ವದ ಮದ್ಯ ದಂಗಡಿಯ ವಿರುದ್ಧ ಮುಸ್ಲಿಮರು ಪ್ರತಿಭಟನೆ ನಡೆಸಿದರೆ, ಆ ಮದ್ಯದಂಗಡಿ ಹಿಂದೂವಿಗೆ ಸೇರಿದ್ದು ಎಂಬ ಏಕೈಕ ಕಾರಣಕ್ಕಾಗಿ ಅದರ ಪರ ಹಿಂದೂಗಳು ಒಟ್ಟು ಸೇರುವಂಥ ಘೋರ ವಿಪರ್ಯಾಸಗಳು ನಡೆಯುತ್ತಿವೆ. ಅದೇ ರೀತಿ, ಅಕ್ರಮ ಕಸಾಯಿಖಾನೆ ಒಂದು ಕಡೆ ನಡೆಯುತ್ತಿದ್ದರೆ ಮತ್ತು ಅದರ ವಿರುದ್ಧ ಹಿಂದೂಗಳು ಪ್ರತಿಭಟನೆ ನಡೆಸಿದರೆ ಅದು ಮುಸ್ಲಿಮರಿಗೆ ಸೇರಿದ್ದೆಂಬ ಕಾರಣಕ್ಕಾಗಿ ಆ ಅಕ್ರಮ ಕಸಾಯಿಖಾನೆಯನ್ನು ಮುಸ್ಲಿಮರು ಬೆಂಬಲಿಸುವಂಥ ಧರ್ಮವಿರೋಧಿ ಕೃತ್ಯಗಳು ನಡೆಯುತ್ತಿವೆ. ನಿಜವಾಗಿ, ಕೋಮುವಾದ ಅಂದರೆ ಇದುವೇ. ಇದಕ್ಕೆ ಧರ್ಮಾನುಯಾಯಿಗಳ ಅಜ್ಞಾನ ಕಾರಣವೇ ಹೊರತು ಧರ್ಮ ಅಲ್ಲ. ಆದರೆ, ಇಂಥದ್ದೊಂದು ಅಜ್ಞಾನ ಸಮಾಜದಲ್ಲಿ ಗಟ್ಟಿಯಾಗಿ ಬೇರೂರುವುದನ್ನು ಸಾಮ್ರಾಜ್ಯಶಾಹಿ ಮತ್ತು ಮಾರುಕಟ್ಟೆ ದೊರೆಗಳು ಯಾವಾಗಲೂ ಬಯಸುತ್ತಲೇ ಇರುತ್ತಾರೆ. ಹೀಗಾದರೆ, ದೇಶದ ಬಹುದೊಡ್ಡ ಜನಸಂಖ್ಯೆಯನ್ನು ತಮ್ಮ ಉತ್ಪನ್ನಗಳ ಹಿಂದೆಯೇ ಬೀಳುವಂತೆ ಮಾಡುವುದಕ್ಕೆ ಈ ಮಾರುಕಟ್ಟೆ ದೊರೆಗಳಿಗೆ ಸುಲಭವಾಗುತ್ತದೆ. ನಿಜವಾಗಿ, ಇವತ್ತು ಯಾವುದೇ ಧರ್ಮಾನುಯಾಯಿ ಸಾಮ್ರಾಜ್ಯ ಶಾಹಿತ್ವದ ಬಗ್ಗೆ ಸರಿಯಾಗಿ ಅರಿತುಕೊಂಡರೆ ಆತ ಖಂಡಿತ ಇನ್ನೊಂದು ಧರ್ಮವನ್ನು ದ್ವೇಷಿಸುವ ಬದಲು ಸಾಮ್ರಾಜ್ಯಶಾಹಿತ್ವ ಹುಟ್ಟು ಹಾಕುತ್ತಿರುವ ಭ್ರಮೆಗಳ ಮತ್ತು ಅವುಗಳಿಂದಾಗಿ ಜನರು ಸ್ವೇಚ್ಛಾಚಾರಿಗಳಾಗುತ್ತಿರುವುದರ ವಿರುದ್ಧ ಹೋರಾಡುತ್ತಿದ್ದ.
  ಅಂದಹಾಗೆ, ಸೌಹಾರ್ದಕ್ಕೆ ವ್ಯಾಖ್ಯಾನವಾದರೂ ಏನು? ಇನ್ನೊಬ್ಬರಿಗೆ ಖುಷಿಯಾಗಲಿ ಎಂದು ತನ್ನ ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸೌಹಾರ್ದವಾಗುತ್ತದೆ? ತನ್ನ ಧರ್ಮ ವಿರೋಧಿಸಿದ್ದರೂ ತನ್ನ ಸಹೋದ್ಯೋಗಿಗಳಿಗೆ ನೋವಾಗದಿರಲಿ ಎಂಬುದಕ್ಕಾಗಿ ಓರ್ವ ಮದ್ಯ ಸೇವಿಸಬಹುದೇ? ಭ್ರಷ್ಟಾಚಾರದಲ್ಲಿ ಭಾಗಿಯಾಗಬಹುದೇ? ಕಳ್ಳತನಕ್ಕೆ ಸಹಕರಿಸಬಹುದೇ? ಏಕದೇವನದ್ದೋ ವಿಗ್ರಹದ್ದೋ ಪೂಜೆ ಮಾಡಬಹುದೇ.. ನಿಜವಾಗಿ, ಹೀಗೆಲ್ಲ ಮಾಡುವುದು ಸೌಹಾರ್ದವಾಗುತ್ತದೆಂದಾದರೆ ಸೌಹಾರ್ದದ ಅರ್ಥವೇ ‘ವಂಚನೆ’ ಎಂದಾಗಿ ಬಿಡುತ್ತದೆ. ಯಾಕೆಂದರೆ, ಆತ ಹೀಗೆಲ್ಲ ಮಾಡುವುದು ಆತನ ಇಷ್ಟದಂತೆ ಅಲ್ಲ, ಇನ್ನಾರದೋ ಖುಷಿಗಾಗಿ. ಇದು ಎಷ್ಟು ಅಪಾಯಕಾರಿ ಎಂದರೆ, ಓರ್ವ ಅಬ್ದುಲ್ ನಾರಾಯಣ್ ಡಿಸೋಜ ಎಂದು ತನ್ನನ್ನು ಕರೆದುಕೊಂಡಂತೆ. ಮುಸ್ಲಿಮರಲ್ಲಿ ಆತ ಅಬ್ದುಲ್ಲ ಎಂದು ಗುರುತಿಸಿಕೊಳ್ಳುತ್ತಾನೆ. ಹಿಂದೂಗಳು ಸಿಕ್ಕರೆ ನಾರಾಯಣ್ ಎಂದೂ ಕ್ರೈಸ್ತರನ್ನು ಕಂಡರೆ ಡಿಸೋಜ ಎಂದೂ ಪರಿಚಯಿಸಿ ಕೊಳ್ಳುತ್ತಾನೆ. ನಿಜವಾಗಿ, ಆತ ಮಾಡುತ್ತಿರುವುದು ವಂಚನೆ. ಪರಿಸ್ಥಿತಿಯ ಲಾಭ ಪಡಕೊಳ್ಳುವುದಕ್ಕಾಗಿ ಆತ ವಿವಿಧ ವೇಷ ತೊಡುತ್ತಿರುತ್ತಾನೆ. ಒಂದು ರೀತಿಯಲ್ಲಿ, ಈತನಷ್ಟು ಅಪಾಯಕಾರಿಗಳು ಇನ್ನಾರೂ ಇರುವುದಿಲ್ಲ. ಸಮಾಜದಲ್ಲಿ ಇವತ್ತು ಕೆಲವರು ಒತ್ತಾಯಪಡಿಸುತ್ತಿರುವುದು ಈ ಬಗೆಯ ಸೌಹಾರ್ದವನ್ನು. ಮುಸ್ಲಿಮನೊಬ್ಬ ಗಣಪತಿಗೆ ಪೂಜೆ ಮಾಡಿದರೆ, ಕೃಷ್ಣಾಷ್ಟಮಿಯಲ್ಲಿ ವೇಷ ಹಾಕಿದರೆ ಅಥವಾ ಹಿಂದೂವೊಬ್ಬ ದರ್ಗಾಕ್ಕೋ ಇನ್ನಾವುದಕ್ಕೋ ನಡಕೊಂಡರೆ.. ಅದು ಸೌಹಾರ್ದ ಖಂಡಿತ ಅಲ್ಲ. ಅದೊಂದು ಬಗೆಯ ನಕಲಿ ಧಾರ್ಮಿಕತೆ. ಸೌಹಾರ್ದ ಅಂದರೆ ತನ್ನ ಧರ್ಮ ವಿರೋಧಿಸಿದ ಕಾರ್ಯಗಳನ್ನು ಮಾಡುವುದಲ್ಲ, ಬದಲು ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಇನ್ನೊಂದು ಧರ್ಮವನ್ನು ಮತ್ತು ಅದರ ಆಚರಣೆಗಳನ್ನು ಗೌರವಿಸುವುದು. ಆದ್ದರಿಂದಲೇ ಧರ್ಮನಿಷ್ಠ ವ್ಯಕ್ತಿ ಎಂದೂ ಕೋಮುವಾದಿಯಾಗುವುದಿಲ್ಲ. ಸೌಹಾರ್ದ ವಿರೋಧಿಯೂ ಆಗುವುದಿಲ್ಲ. ಆದರೆ ಇವತ್ತು ಕೋಮುವಾದ ಮತ್ತು ಸೌಹಾರ್ದದ ಅರ್ಥವನ್ನೇ ಕೆಲವರು ಕೆಡಿಸಿಬಿಟ್ಟಿರುವುದರಿಂದ ಧರ್ಮಿಷ್ಟರೇ ಇವತ್ತು ಕೋಮುವಾದಿಗಳು ಮತ್ತು ಸೌಹಾರ್ದ ವಿರೋಧಿಗಳಾಗಿ ಗುರುತಿಗೀಡಾಗುತ್ತಿದ್ದಾರೆ.
  ಮಿತ್ರನ ಸಂಕಟ ಕೂಡಾ ಇದುವೇ..

1 comment:

  1. estondhu mattige neeve dharma souhardathe yannu allgaleyuvudadhare, mathanthara maduva avshyakathe yenu? nimma dharma nimage, namma dharma namage endhu summaniddhu bidabahudalla, prapancha shanthiyindha jeevisabahudalla??. paraspara gouravisuvudhe nijavadha dharma. navella adhakke bhaddharagona.

    ReplyDelete