Tuesday, April 2, 2013

ಕುದಿಯುವ ಅಪ್ಪನಿಂದ ತಣ್ಣನೆಯ ಮಗಳು ಹೇಗೆ ಸೃಷ್ಟಿಯಾದಾಳು ಹೇಳಿ?

ತೀರ್ಥಹಳ್ಳಿಯ ಘಟನೆ
   ಮೇಜಿನ ಮೇಲೆ ಚಿಕ್ಕದೊಂದು ಫೈಲು. ಅದರ ಪಕ್ಕ ಆ ಅಪ್ಪ ಕೂತಿದ್ದಾರೆ. ಬ್ಯುಝಿ ಇರ್ಬೇಕು, ಫೈಲನ್ನು ಭಾರೀ ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆ. ಏನೋ ಬರೆಯುವುದು, ತುಸು ಹೊತ್ತು ನಿಂತು, ಆಲೋಚಿಸಿ ಪುನಃ ಬರೆಯೋದು.. ಹೀಗೆ ನಡೆಯುತ್ತಿರುತ್ತದೆ. 8 ವರ್ಷದ ಆ ಮಗಳಿಗೆ ಅಪ್ಪ ಅಂದರೆ ಇಷ್ಟ. ಅಪ್ಪನಿಗೂ ಮಗಳೆಂದರೆ ಇಷ್ಟವೇ. ಅಪ್ಪ ಬರೆಯುವಾಗ ಆಕೆ
ಪೆನ್ನು ಕೇಳುವಳು. ಲೈಟು ಆಫ್ ಮಾಡುವಳು. ಅಪ್ಪ ಸಿಟ್ಟಾದರೆ ಸುಮ್ಮನೆ ನಗುವಳು. ತನ್ನ ಬ್ಯಾಗ್‍ನಿಂದ ಪುಸ್ತಕ ತೆಗೆದು ಫೈಲಿನ ಮೇಲಿಟ್ಟು ತಂಟೆ ಕೊಡುವಳು. ಅಪ್ಪನ ಮಡಿಲಲ್ಲಿ ಬಂದು ಕೂರುವಳು. ‘ಅಸಾಧ್ಯ ತುಂಟಿ ನನ್ನ ಪುಟ್ಟಿ’ ಎಂದು ಅಪ್ಪ ಮುದ್ದು ಮಾಡಿ ಪಕ್ಕಕ್ಕೆ ಕೂರಿಸುವರು. ಹೀಗಿರುತ್ತಾ 3ನೇ ಕ್ಲಾಸಿನ ವಾರ್ಷಿಕ ಪರೀಕ್ಷೆಯ ಸಮಯ ಹತ್ತಿರ ಬಂತು. ‘ಚೆನ್ನಾಗಿ ಕಲಿತು ಹೆಚ್ಚು ಅಂಕ ಪಡೆದು ಪಾಸಾದರೆ ಗಿಫ್ಟ್ ಕೊಡುತ್ತೇನೆ’ ಮಗಳೇ'.. ಎಂದು ಅಪ್ಪ ಶಾಲೆಯ ಆರಂಭದಲ್ಲಿ ಹೇಳಿದ್ದು ಆಕೆಗಿನ್ನೂ ನೆನಪಿತ್ತು. ಹಾಗಂತ ಆಕೆಯೇನೂ ದಡ್ಡಿಯಲ್ಲ. ಮೊದಲ ನಾಲ್ಕೈದು ರಾಂಕುಗಳಲ್ಲಿ ಯಾವಾಗಲೂ ಒಂದು ಆಕೆಗೇ ಮೀಸಲಿರುತ್ತಿತ್ತು. ಆದರೆ ಅಂತಿಮ ಪರೀಕ್ಷೆಗೆ ತಯಾರಿ ನಡೆಸುವ ಹೊತ್ತಿನಲ್ಲೇ ಆರೋಗ್ಯ ಕೈಕೊಟ್ಟಿತು. ಹುಡುಗಿ ತೀವ್ರ ಅಸ್ವಸ್ಥಳಾದಳು. ಅಪ್ಪ ಅಧೀರನಾಗಿಬಿಟ್ಟ. ಮಗಳನ್ನು ಉಳಿಸಿಕೊಳ್ಳಬೇಕಾದರೆ ದೊಡ್ಡದೊಂದು ತ್ಯಾಗಕ್ಕೆ ಆತ ಸಿದ್ಧನಾಗಬೇಕಿತ್ತು. ಅಪ್ಪ ಸಿದ್ಧನಾದ. ಮಗಳು ಚೇತರಿಸಿಕೊಂಡಳು. ತಂಟೆ, ತಕರಾರು, ಮುದ್ದು, ಲವಲವಿಕೆ.. ಎಲ್ಲವನ್ನೂ ಕಳಕೊಂಡು ಆಸ್ಪತ್ರೆಯ ಮಂಚದಲ್ಲಿ ಮುದುಡಿ ಮಲಗಿದ್ದ ಮಗಳು ಮತ್ತೆ ಅವೆಲ್ಲವನ್ನೂ ಪಡಕೊಂಡಳು. ಪರೀಕ್ಷೆ ಬರೆದಳು. ಒಂದು ದಿನ ಸಂಜೆ ಅಪ್ಪನನ್ನೇ ಕಾಯುತ್ತಾ ಗೇಟಿನಲ್ಲಿ ನಿಂತಿದ್ದ ಅವಳು ಓಡೋಡಿ ಅಪ್ಪನ ಕೈ ಹಿಡಿದಳು. ಗಿಫ್ಟ್ ಕೊಡಿ ಅಂದಳು. ಅಪ್ಪ ಆಕೆಯನ್ನು ಎತ್ತಿ ಮುದ್ದಿಸಿ ಬೆನ್ನು ತಟ್ಟಿದರು. ಡ್ರೆಸ್ಸು ಬದಲಿಸಿ, ನೀರು ಕುಡಿಯುತ್ತಿದ್ದ ಅಪ್ಪನ ಮಡಿಲಲ್ಲಿ ಕೂತ ಮಗಳು ಮತ್ತೆ ಪ್ರಶ್ನಿಸಿದಳು,
  ಅಪ್ಪ, ಏನು ಗಿಫ್ಟ್ ಕೊಡುತ್ತೀರಿ?
ಅಪ್ಪ ಮಗಳನ್ನೇ ನೋಡಿದರು. ಆಸ್ಪತ್ರೆಯ ಮಂಚದಲ್ಲಿ ಸಾವು-ಬದುಕಿನ ಹೋರಾಟದಲ್ಲಿ ಅಸಾಧ್ಯ ಸಂಕಟ ಅನುಭವಿಸುತ್ತಿದ್ದ ಮಗಳನ್ನು ನೋಡಲಾರದೇ ಕಣ್ಣೀರಿಳಿಸಿದ್ದು, ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದದ್ದು, ಸಿಕ್ಕ-ಸಿಕ್ಕ ವೈದ್ಯರನ್ನು ಸಂಪರ್ಕಿಸಿದ್ದು, ಪ್ರಾರ್ಥಿಸಿದ್ದು.. ಎಲ್ಲವೂ ನೆನಪಿಗೆ ಬಂತು. ಅವರು ಮಗಳನ್ನು ಸಂತೈಸುತ್ತಾ ಹೇಳಿದರು,
  ನಿನಗೆ ಈಗಾಗಲೇ ದೊಡ್ಡದೊಂದು ಗಿಫ್ಟ್ ಕೊಟ್ಟಿದ್ದೇನೆ ಮಗೂ.
  ಏನಪ್ಪ ಅದು?
  ಕಿಡ್ನಿ
  ಕಿಡ್ನಿಯಾ? ಎಲ್ಲಿದೆ ಅದು?
  ನಿನ್ನ ಹೊಟ್ಟೆಯೊಳಗಿದೆ ಪುಟ್ಟಿ
  ಹೋಗಪ್ಪ ನೀನು. ಹೊಟ್ಟೆಯೊಳಗಿಟ್ಟು ಏನು ಪ್ರಯೋಜನ? ನೀನೇ ಅದನ್ನು ತಗೊ. ನನಗೆ ಬೇರೆಯದೇ ಗಿಫ್ಟ್ ಕೊಡಪ್ಪಾ..
  ಅವರು ಮೃದುವಾಗಿ ನಕ್ಕು ಮಗಳನ್ನು ಎತ್ತಿಕೊಂಡರು. ಮುತ್ತು ಕೊಟ್ಟರು. ಕಣ್ಣು ಮಂಜಾಗುತ್ತಿತ್ತು.
ಸೋನಂ
   ಅಪ್ಪ-ಮಕ್ಕಳ ನಡುವಿನ ಸಂಬಂಧ, ಮಕ್ಕಳ ಬೆಳವಣಿಗೆಯಲ್ಲಿ ಯಾರ ಪಾತ್ರ ಮೇಲು- ಅಪ್ಪನದ್ದೋ  ಅಮ್ಮನದ್ದೋ ಎಂಬೆಲ್ಲಾ ಚರ್ಚೆಗಳು ಈ ಸಮಾಜದಲ್ಲಿ ಧಾರಾಳ ನಡೆದಿವೆ. ಹೆಚ್ಚಿನ ಚರ್ಚೆಗಳ ಕೇಂದ್ರ ಬಿಂದು ಅಮ್ಮನೇ. ಅಮ್ಮನ ಪಾತ್ರವನ್ನೇ ಮುಖ್ಯ ವಾಗಿಸಿ, ‘ಅಮ್ಮ ಹೇಗಿರುತ್ತಾಳೋ ಹಾಗೆಯೇ ಮಕ್ಕಳು' ಎಂಬಲ್ಲಿಗೆ ಹೆಚ್ಚಿನ ಚರ್ಚೆಗಳು ಮುಕ್ತಾಯಗೊಳ್ಳುತ್ತವೆ. ಇದು ತಪ್ಪು ಎಂದಲ್ಲ. ಆದರೆ, ಕಿಡ್ನಿ ಕೊಟ್ಟೂ ಅದರ ಮಹತ್ವವನ್ನು ಮನದಟ್ಟಾಗಿಸಲು ಚಡಪಡಿಸುವ, ಒತ್ತಿ ಬರುವ ಕಣ್ಣೀರನ್ನು ಮುಖ ತೊಳೆದೊ, ನೆಪ ಹೇಳಿಯೋ ಅಡಗಿಸುವ, ಮಕ್ಕಳಿಗೆ ಪತ್ನಿ ಏಟು ಕೊಡುತ್ತಿದ್ದರೆ ಒಳಗೊಳಗೇ ಕರುಬುವ ಅಪ್ಪ.. ಚರ್ಚೆಯ ವ್ಯಾಪ್ತಿಗೆ ಬರುವುದೇ ಕಡಿಮೆ. ಅಮ್ಮನಿಗೆ ಕಣ್ಣೀರಿಳಿಸಲು ಬರುತ್ತದೆ; ತನ್ನ ಭಾವನೆಗಳನ್ನು ಎಲ್ಲರೆದುರು ವ್ಯಕ್ತಪಡಿಸುವುದಕ್ಕೂ ಆಗುತ್ತದೆ. ಆದರೆ, ಅಪ್ಪ ಈ ವಿಷಯಗಳಲ್ಲಿ ತೀರಾ ಕಂಜೂಸು. ಕಣ್ಣೀರಿಳಿಸಲು ಬರುತ್ತದಾದರೂ ಎಲ್ಲರೆದುರು ಕಣ್ಣೀರಿಳಿಸುವುದಕ್ಕೆ, ಮಕ್ಕಳ ಮೇಲಿನ ಪ್ರೀತಿಯನ್ನು ಬಹಿರಂಗವಾಗಿ ಅಷ್ಟೇ ತೀವ್ರತನದಿಂದ ವ್ಯಕ್ತಪಡಿಸುವುದಕ್ಕೆ ಆತನಿಗೆ ಬರುವುದಿಲ್ಲ. ಸ್ನಾನ ಗೃಹದಲ್ಲಿ, ಕತ್ತಲ ಕೋಣೆಯಲ್ಲಿ ಒಂಟಿಯಾಗಿ ಕಣ್ಣೀರಿಳಿಸಿ, ಹೊರಗೆ ಆತ ನಗು ನಗುತ್ತಾ ಬದುಕುತ್ತಾನೆ. ಈ ದೌರ್ಬಲ್ಯವೇ ಆತನನ್ನು ‘ಅಮುಖ್ಯ' ವ್ಯಕ್ತಿಯಾಗಿ ಪರಿಗಣಿಸುವುದಕ್ಕೆ ಮುಖ್ಯ ಕಾರಣವಾಗಿದೆ. ಇಷ್ಟಕ್ಕೂ, ಟಿ.ವಿ. ಜಾಹೀರಾತಿನಲ್ಲಿ ಬರುವ ಸೂಪರ್ ವೇಗದಲ್ಲಿ ಓಡುವ ಬೈಕನ್ನು ತೋರಿಸಿ, ‘ನೀನು ಹಾಗೆ ಓಡಿಸಬಲ್ಲೆಯಾ..’ ಎಂದು ಮಕ್ಕಳು ಕೇಳುವುದು ಅಪ್ಪನಲ್ಲೇ. ಸೂಪರ್‍ಮ್ಯಾನ್, ಸ್ಪೈಡರ್‍ಮ್ಯಾನ್‍ಗಳನ್ನೆಲ್ಲಾ ಯಾವ ಮಕ್ಕಳೇ ಆದರೂ ತಾಯಿಗೆ ಹೋಲಿಸಿ ನೋಡುತ್ತಾರಾ? ಮುಖ್ಯವಾಗಿ, ಹೆಣ್ಣು ಮಕ್ಕಳ ಪಾಲಿಗೆ ಅಪ್ಪ ಯಾವಾಗಲೂ ಹೀರೋನೇ. ಶಾಲೆಗೆ ಹೋಗುವ ಪುಟ್ಟ ಮಕ್ಕಳು ಪರಸ್ಪರ ತಂದೆಯಂದಿರನ್ನು ಹೋಲಿಸಿಕೊಂಡು ಜಗಳ ಮಾಡುತ್ತಾರೆ. ನನ್ನ ಅಪ್ಪ ಅಷ್ಟು ಸ್ಪೀಡ್ ಬೈಕ್ ಓಡಿಸ್ತಾರೆ, ನನ್ನ ಅಪ್ಪನಲ್ಲಿ ಅಂಥ ಕಾರಿದೆ, ನನ್ನ ಅಪ್ಪ ಅಷ್ಟು ಎತ್ತರ ಇದ್ದಾರೆ, ಅವರು ಹಾಗೆ, ಅವರು ಹೀಗೆ.. ಎಂದೆಲ್ಲಾ ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಇಂಥ ಸಂದರ್ಭಗಳಲ್ಲೆಲ್ಲಾ ತಾಯಿಯ ಪ್ರಸ್ತಾಪವಾಗುವುದು ಕಡಿಮೆ. ಹಾಗಂತ ತಾಯಿ ಅಮುಖ್ಯ ಎಂದಲ್ಲ. ತಾಯಿ ಯಾವಾಗಲೂ ತಾಯಿಯೇ. ಅಪ್ಪ ಆಕೆಯನ್ನು ಸರಿಗಟ್ಟಲಾರ. ಆದರೂ, ಮಕ್ಕಳ ಪಾಲಿಗೆ ಹೀರೋ ಪಾತ್ರವೊಂದರ ಅಗತ್ಯವಿರುತ್ತದೆ. ಯಾವಾಗಲೂ ಮಕ್ಕಳು ತಾಯಿಯನ್ನು ಅತಿಯಾಗಿ ಅವಲಂಬಿಸುವುದಾದರೂ ತಂದೆಯ ವರ್ಚಸ್ಸನ್ನು ಪಡೆದುಕೊಳ್ಳಲು ಹಂಬಲಿಸುತ್ತವೆ. ಅದರಲ್ಲೂ ಹೆಣ್ಣು ಮಕ್ಕಳು ತಂದೆಯಿಂದ ಹೆಚ್ಚು ಪ್ರಭಾವಿತವಾಗುತ್ತವೆ. ತಂದೆಗೆ ಮನೆಯಲ್ಲಿ ಸಿಗುವ ಗೌರವ, ಉಪಚಾರ, ಅವರ ಮಾತಿಗಿರುವ ಮನ್ನಣೆಗಳನ್ನೆಲ್ಲಾ ಮಗು ಅತ್ಯಂತ ಆಸಕ್ತಿಯಿಂದ ಅಭ್ಯಸಿಸುತ್ತದೆ. ಅಪ್ಪ ಮಾತಾಡುವ ಶೈಲಿಯಲ್ಲಲ್ಲ ಅಮ್ಮ ಮಾತಾಡುವುದು. ಬೈಕಲ್ಲಿ ಝುಯ್ಯನೆ ಹೋಗಿ ಇಷ್ಟದ ವಸ್ತುಗಳನ್ನು ತಂದುಕೊಡುವುದು ಅಪ್ಪನೇ ಹೊರತು ಅಮ್ಮನಲ್ಲ. ಪೇಟೆಗೆ ಹೋದರೂ ಅಪ್ಪನದ್ದೇ ಕಾರುಬಾರು. ಒಂದು ರೀತಿಯಲ್ಲಿ ದೈಹಿಕವಾಗಿ, ಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ ಅಪ್ಪನನ್ನು ತುಂಬಿ ಕೊಂಡೇ ಮಕ್ಕಳು ಬೆಳೆಯುತ್ತವೆ. ಆದ್ದರಿಂದಲೇ ಇವತ್ತಿನ ದಿನಗಳಲ್ಲಿ ಮಾಧ್ಯಮ ಸುದ್ದಿಗಳನ್ನು ಓದುವಾಗ ಆಘಾತವಾಗುವುದು, ಹತ್ತು-ಹಲವು ಪ್ರಶ್ನೆಗಳು ಮೂಡುವುದು.
    ಆತ್ಮಹತ್ಯೆಯ ಸುದ್ದಿಯನ್ನು ಕೇಳದ, ಓದದ ಒಂದೇ ಒಂದು ದಿನವಾದರೂ ಇವತ್ತಿದೆಯೇ? ಮುಖ್ಯವಾಗಿ ಹೆಣ್ಣು ಮಕ್ಕಳು ಆತ್ಮಹತ್ಯೆಗೆ ಶರಣಾಗುವ ಸುದ್ದಿಗಳು ಎಷ್ಟಿಲ್ಲ ಹೇಳಿ? ಕೊಲೆಗಾರ ಯುವಕರೂ ಧಾರಾಳ ಇದ್ದಾರಲ್ಲವೇ? ಎಲ್ಲೋ ದೂರದಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆಂದು ಹೋದ ಮಗಳು ಕೊಲೆಗೀಡಾಗಿಯೋ ಸ್ವಯಂ ಜೀವ ಕಳಕೊಂಡೋ ಸುದ್ದಿ ಮಾಡುತ್ತಿರುವುದು ಇವತ್ತಿನ ದಿನಗಳಲ್ಲಿ ಮಾಮೂಲಿ ಆಗುತ್ತಿರುವುದೇಕೆ? ಅದಕ್ಕೆ ಲವ್ ಅಫೇರು, ಅದು-ಇದುಗಳನ್ನು ಕಾರಣವಾಗಿ ಕೊಡಬಹುದಾದರೂ ಅವು ಸಾಯುವಷ್ಟು ಮತ್ತು ಸಾಯಿಸುವಷ್ಟು ಭೀಕರ ಅಪರಾಧಗಳೇ? ಅಷ್ಟಕ್ಕೂ ‘ಸಾಯುವ' ಮನಸ್ಥಿತಿಯನ್ನು ಮಕ್ಕಳಲ್ಲಿ ತುಂಬಿದ ಪ್ರಚೋದನೆಗಳು ಯಾವುದಿರಬಹುದು? ಅವರನ್ನು ಅಷ್ಟು ಕಟು ತೀರ್ಮಾನಕ್ಕೆ ದೂಡುವಲ್ಲಿ ಅವರು ಬಾಲ್ಯದಲ್ಲಿ ಕಂಡುಂಡ ಸಂಗತಿಗಳು ಕಾರಣವಾಗಿರಬಹುದೇ? ಮನೆಯ ವಾತಾವರಣ, ಹೆತ್ತವರ ವರ್ತನೆಗಳು ಒಂದು ಹಂತದ ವರೆಗೆ ಮಕ್ಕಳ ನಿರ್ಧಾರದ ಮೇಲೆ ಪ್ರಭಾವ ಬೀರಿರಬಹುದೇ?
   ನಿಜವಾಗಿ, ಓರ್ವ ಹೆಣ್ಣು ಮಗಳಿಗೆ ‘ಗಂಡಿನ' ಪರಿಚಯ ಆಗುವುದೇ ತಂದೆಯಿಂದ. ಹಾಗೆಯೇ ಹೆಣ್ಣಿನ ಪರಿಚಯ ಆಗುವುದು ತಾಯಿಯಿಂದ. ಹೆಣ್ಣು ಅಂದರೆ ಹೀಗಿರಬೇಕು ಮತ್ತು ಗಂಡು ಅಂದರೆ ಹೀಗಿರಬೇಕು ಅನ್ನುವುದನ್ನು ಇವರಿಬ್ಬರ ಮಾತು, ವರ್ತನೆ, ನಗು, ತಮಾಷೆ, ಭಾವ-ಭಂಗಿಗಳಿಂದ ಹೆಣ್ಣು ಮಗು ಕಲಿತುಕೊಳ್ಳಲು ಪ್ರಾರಂಭಿಸುತ್ತದೆ. ಅಪ್ಪ ಮನೆಯಲ್ಲಿ ಪಾಸಿಟಿವ್ ಆಗಿದ್ದರೆ ಮಗಳು ಪಾಸಿಟಿವ್ ಆಗುತ್ತಾಳೆ. ಅಮ್ಮನಿಗಿಂತ ಹೆಚ್ಚು ಆಸಕ್ತಿಯಿಂದ ಅಪ್ಪನನ್ನು ನೋಡುವ ಮಗಳಿಗೆ ಅಪ್ಪ ದೊಡ್ಡದೊಂದು ರೋಲ್ ಮಾಡೆಲ್. ಅಪ್ಪ ಸಿಡುಕನಾದರೆ, ಕ್ರಮೇಣ ಮಗಳೂ ಸಿಡುಕುತನವನ್ನು ಅಳವಡಿಸಿಕೊಳ್ಳುತ್ತಾಳೆ. ಅಪ್ಪ ಸುಳ್ಳುಗಾರನಾದರೆ, ಮಗಳಿಗೂ ಅದು ಅಂಟಿಕೊಂಡುಬಿಡುತ್ತದೆ. ಸದಾ ಸಂಶಯ ಸ್ವಭಾವದ ಅಪ್ಪನಿಂದ ಮಗಳು ಕಲಿತುಕೊಳ್ಳುವುದು ಅನುಮಾನಗಳನ್ನೇ. ಅಪ್ಪನಲ್ಲಿ ಯಾವ ಕ್ವಾಲಿಟಿಯಿದೆಯೋ ಅದು ಮಗನಿಗಿಂತ ಹೆಚ್ಚು ವರ್ಗಾವಣೆಯಾಗುವುದು ಮಗಳಿಗೆ. ಆದ್ದರಿಂದಲೇ, ವಿವಾಹ ವಿಚ್ಛೇದನಗಳಲ್ಲಿ, ಆತ್ಮಹತ್ಯೆಗಳಲ್ಲಿ, ಇನ್ನಿತರ ಅನಾಹುತಕಾರಿ ನಿರ್ಧಾರಗಳಲ್ಲಿ ಹೆಣ್ಣಿನ ಪಾತ್ರ ಏನಿದೆಯೋ ಅವುಗಳ ಮೇಲೆ ತಂದೆಯ ಪ್ರಭಾವವಿರುತ್ತದೆ ಎಂದು ಮನಃಶಾಸ್ತ್ರಜ್ಞರು ಹೇಳುವುದು. ಹೆಣ್ಣು ದಿಢೀರ್ ನಿರ್ಧಾರ ಕೈಗೊಳ್ಳುವ, ಮುಂಗೋಪದ ಮನಸ್ಥಿತಿಯವಳಾಗಿದ್ದರೆ ಅದಕ್ಕೆ ಆಕೆಯಷ್ಟೇ ಕಾರಣ ಅಲ್ಲ, ಬಾಲ್ಯದಲ್ಲಿ ಆಕೆಯ ‘ಅಪ್ಪ' ನಿರ್ವಹಿಸಿದ ಪಾತ್ರವೂ ಕಾರಣವಾಗಿರುತ್ತದೆ. ಅನೇಕ ಬಾರಿ, ‘ನೀನೇಕೆ ಗಂಡು ಮಕ್ಕಳಂತೆ ವರ್ತಿಸುತ್ತಿ..' ಎಂದು ಹೆತ್ತವರು ಮಗಳನ್ನು ತರಾಟೆಗೆ ಎತ್ತಿಕೊಳ್ಳುವುದಿದೆ. ‘ಹೆಣ್ಣು ಹೆಣ್ಣಿನಂತೆ ಇರಬೇಕು' ಎಂಬ ಬುದ್ಧಿವಾದವೂ ಇರುತ್ತದೆ. ನಿಜವಾಗಿ, ಹೆಣ್ಣು ಗಂಡಿನಂತೆ ವರ್ತಿಸುವುದಕ್ಕೆ ಕಾರಣ, ಗಂಡು ಎಂಬ ಅಪ್ಪ ಆಕೆಯನ್ನು ಪ್ರಭಾವಿಸಿದ್ದು. ಇಷ್ಟಕ್ಕೂ, ಯಾವ ಮಕ್ಕಳೂ ದಿಢೀರ್ ಆಗಿ ಬೆಳೆಯುವುದಿಲ್ಲವಲ್ಲ. ಹೆಣ್ಣು ಮಕ್ಕಳಾಗಲಿ, ಗಂಡು ಮಕ್ಕಳಾಗಲಿ ಅಮ್ಮ-ಅಪ್ಪ ಎಂಬ ಹೆಣ್ಣು-ಗಂಡನ್ನು ನೋಡುತ್ತಾ, ಅಭ್ಯಸಿಸುತ್ತಾ ಬೆಳೆಯುತ್ತಾರೆ. ಮನೆಯಲ್ಲಿ ಅಪ್ಪನ ಚಟುವಟಿಕೆಗಳನ್ನು ಹತ್ತಿರದಿಂದ ವೀಕ್ಷಿಸುತ್ತಾರೆ. ಅಮ್ಮ ಎಂಬ ಹೆಣ್ಣು- ಮಕ್ಕಳ ಚಾಕರಿ ಮಾಡುತ್ತಾ, ಅಡುಗೆ ಮಾಡುತ್ತಾ, ಬಟ್ಟೆ ಒಗೆಯುತ್ತಾ, ನೆಲ ಗುಡಿಸುತ್ತಾ, ಪಾತ್ರೆ ತೊಳೆಯುತ್ತಾ, ಇಸ್ತ್ರಿ ಹಾಕುತ್ತಾ.. ಹೀಗೆ ತನ್ನನ್ನು ಗುರುತಿಸಿಕೊಳ್ಳುವಾಗ ಅಪ್ಪ ಎಂಬ ಗಂಡು ಅದಕ್ಕೆ ಭಿನ್ನವಾಗಿ ಗುರುತಿಸಿಕೊಳ್ಳುತ್ತಾನೆ. ಆತನದು ನೀಟಾಗಿ ಪ್ಯಾಂಟು ಧರಿಸುವ, ಸಂಜೆ ಮನೆಗೆ ಬಂದು ಯಜಮಾನಿಕೆ ಪ್ರದರ್ಶಿಸುವ, ಸೇವೆ ಮಾಡಿಸಿಕೊಳ್ಳುವ.. ಪಾತ್ರ. ಹೀಗಿರುವಾಗ ಮಕ್ಕಳ ಮೇಲೆ ಅಪ್ಪ ಎಂಬ ಈ ಗಂಡಿನ ಪಾತ್ರ ಪ್ರಭಾವ ಬೀರದೆಂದು ಹೇಗೆ ಹೇಳುವುದು? ಮಕ್ಕಳಿಗೆ ಒಂದೊಮ್ಮೆ ಆಯ್ಕೆಯ ಅವಕಾಶ ಕೊಟ್ಟರೆ, ಅವರು ಪಾತ್ರೆ ತೊಳೆಯುವ ಪಾತ್ರಕ್ಕಿಂತ ಯಜಮಾನಿಕೆ ಪ್ರದರ್ಶಿಸುವ ಪಾತ್ರವನ್ನೇ ಆಯ್ದುಕೊಳ್ಳಲಾರರೇ? ಒಂದು ರೀತಿಯಲ್ಲಿ ಹೆಣ್ಣು ಮತ್ತು ಗಂಡಿನ ತಪ್ಪಾದ ಇಮೇಜನ್ನು ಅಮ್ಮ ಮತ್ತು ಅಪ್ಪ ಮನೆಯಲ್ಲಿ ದಿನಂಪ್ರತಿ ಮಕ್ಕಳಿಗೆ ನೀಡುತ್ತಿರುವಾಗ, ಮಕ್ಕಳು ಅದರಿಂದ ಪ್ರಭಾವಿತವಾಗಬಾರದೆಂದು ಬಯಸುವುದಕ್ಕೆ ಏನರ್ಥವಿದೆ? ಅಪ್ಪ ಎಂಬ ಗಂಡು ಅಮ್ಮ ಎಂಬ ಹೆಣ್ಣನ್ನು ದ್ವಿತೀಯ ದರ್ಜೆಗೆ ಇಳಿಸದೇ ಇದ್ದರೆ, ಮನೆ ಗೆಲಸದಲ್ಲಿ ತಾನೂ ಭಾಗಿಯಾದರೆ, ಯಜಮಾನಿಕೆಯ ದರ್ಪವನ್ನು ಕೈಬಿಟ್ಟು ಬದುಕಿದರೆ, ಪಾತ್ರೆ ತೊಳೆಯುವ, ಮನೆ ಗುಡಿಸುವ ಕೆಲಸಗಳನ್ನು ತಾನೂ ನಿರ್ವಹಿಸಿದರೆ.. ಪತ್ನಿ ಸಂತೃಪ್ತಳಾಗುವುದಷ್ಟೇ ಅಲ್ಲ, ಮಕ್ಕಳೂ ಸಂತುಲಿತವಾಗಿ ಬೆಳೆಯುತ್ತಾರೆ. ಬೆಳೆದ ಮಗಳು ದುಡುಕಿದಳೆಂದೋ ತಪ್ಪು ಹೆಜ್ಜೆ ಇಟ್ಟಳೆಂದೋ ಮನೆ ಬಿಟ್ಟಳೆಂದೋ ದೂರುವ ಮೊದಲು, ಆಕೆಯ ಬಾಲ್ಯ ಹೇಗಿತ್ತೆಂಬುದರ ಬಗ್ಗೆ ಪ್ರತಿ ಹೆತ್ತವರೂ ಅವಲೋಕನ ನಡೆಸಬೇಕು. ಬಾಲ್ಯದಲ್ಲಿ ಅಪ್ಪನ ಪಾತ್ರ ದುಡುಕಿನದ್ದಾದರೆ, ಜೋರು ಮಾಡಿ ಬಾಯಿ ಮುಚ್ಚಿಸುವ ರೂಪದ್ದಾದರೆ, ಔಟ್ ಗೋಯಿಂಗ್ ಮಾತ್ರ ಎಂಬ ರೀತಿಯದ್ದಾದರೆ, ಅದರ ಪ್ರಭಾವ ಮಕ್ಕಳ ಮೇಲೆ ಬಿದ್ದಿರುವುದಕ್ಕೆ ಖಂಡಿತ ಸಾಧ್ಯವಿದೆ. ಮಕ್ಕಳು ಕೀಳರಿಮೆ, ನಿರುತ್ಸಾಹಿ, ಪರಾವಲಂಬನೆಯವರಾಗಿದ್ದರೆ, ಅದರಲ್ಲಿ ಅವರ ಬಾಲ್ಯದ ಮಾದರಿಗಳ ಪಾತ್ರ ದೊಡ್ಡದಿದೆ ಎಂದೇ ಅರ್ಥ. ಅಂದಹಾಗೆ, ಪ್ರವಾದಿ ಮುಹಮ್ಮದ್(ಸ) ಎಂಬ ಗಂಡು ನಿರ್ವಹಿಸಿದ ಮಾದರಿ ಅಪ್ಪನ ಪಾತ್ರ ದಿಂದಾಗಿಯೇ ಅಲ್ಲವೇ ಫಾತಿಮಾ(ರ) ಎಂಬ ಮಾದರಿ ಹೆಣ್ಣು ಮಗಳು ಸಮಾಜಕ್ಕೆ ದಕ್ಕಿದ್ದು? ಮುಹಮ್ಮದುಲ್ ಗಝ್ಝಾಲಿ ಎಂಬ ಅಪ್ಪನ ಮಾದರಿ ವ್ಯಕ್ತಿತ್ವವಲ್ಲದಿದ್ದರೆ ಝೈನಬುಲ್ ಗಝ್ಝಾಲಿ ಎಂಬ ಧೀರ ಮಹಿಳೆ ಸೃಷ್ಟಿಯಾಗಲು ಸಾಧ್ಯವಿತ್ತೇ?
  
ಲವ್‍ನ ಕಾರಣಕ್ಕಾಗಿ ಮಾರ್ಚ್ 28ರಂದು ಸೋನಂ ಎಂಬ ಕಾಲೇಜು ತರುಣಿಯನ್ನು ತೀರ್ಥಹಳ್ಳಿಯ ನಡುಬೀದಿಯಲ್ಲಿ ವಿದ್ಯಾರ್ಥಿ ಗಳೆದುರೇ ಇರಿದು ಕೊಂದು ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿದ ಯುವಕನ ಸುದ್ದಿಯನ್ನು ಓದುತ್ತಾ ಇವೆಲ್ಲ ನೆನಪಾಯಿತು..

1 comment:

  1. hmm.., very true..,

    nijavaagiyu thande thayiya vahisuva paathragalu maneya yella sadasyara meleyu prabhava beeruthade..

    ReplyDelete