ಅದು ಹುತಾತ್ಮತೆಯಲ್ಲ, ಆತ್ಮಹತ್ಯೆ. ಆತ್ಮಹತ್ಯೆಯನ್ನು ಅಲ್ಲಾಹನು ನಿಷಿದ್ಧಗೊಳಿಸಿದ್ದಾನೆ. (ಪವಿತ್ರ ಕುರ್‍ಆನ್: 4: 29)
ಓರ್ವನು ಜಿಹಾದ್‍ನಲ್ಲಿ ಭಾಗಿಯಾಗಿದ್ದೂ ಆತ್ಮಹತ್ಯೆ ಮಾಡಿಕೊಂಡರೆ ಅದು ಜಿಹಾದೂ ಅಲ್ಲ, ಆತನಿಗೆ ಸ್ವರ್ಗವೂ ಇಲ್ಲ ಎಂಬ ಪ್ರವಾದಿ(ಸ) ವಚನವನ್ನು ಇಲ್ಲಿ ನೆನಪಿಸಿಕೊಳ್ಳುವುದಕ್ಕೆ ಕಾರಣ ಇದೆ.
ಬೀದರ್ ಜಿಲ್ಲೆಯ ಚೌಳಿ ಮಠದ ಮೂವರು ಸ್ವಾಮೀಜಿಗಳು ಎಪ್ರಿಲ್ 8ರಂದು ಆತ್ಮಹತ್ಯೆ ಮಾಡಿಕೊಂಡರು. ಮಾತ್ರವಲ್ಲ, ಆತ್ಮ ಹತ್ಯೆಗಿಂತ ಮೊದಲು ತಮ್ಮ ಹೇಳಿಕೆಗಳನ್ನು ಚಿತ್ರೀಕರಿಸುವ ವ್ಯವಸ್ಥೆಯನ್ನೂ ಮಾಡಿದರು. ‘ಫೆಬ್ರವರಿ 28ರಂದು ಹಿರಿಯ ಸ್ವಾಮೀಜಿ ಶ್ರೀ ಗಣೇಶ್ ಅವಧೂತರು ಸಾವಿಗೀಡಾಗಿ ಕೈಲಾಸ ಸೇರಿಕೊಂಡಿದ್ದು, ಇದೀಗ ನಾವು ಅವರ ಜೊತೆ ಸೇರ ಬಯಸಿದ್ದೇವೆ. ಇನ್ನು ಇಲ್ಲಿ ನಮಗೆ ಮಾಡುವುದಕ್ಕೇನೂ ಉಳಿದಿಲ್ಲ..' ಎಂಬ ಮೃತ್ಯು ಪತ್ರವನ್ನೂ ಬರೆದಿದ್ದರು. ಮಾಧ್ಯಮಗಳು ಈ ಕುರಿತಂತೆ ಸಾಕಷ್ಟು ಚರ್ಚಿಸಿದುವು. ಆ ಆತ್ಮಹತ್ಯೆಗೆ ಅವು; ಅಗ್ನಿ ಪ್ರವೇಶ, ಆತ್ಮಾಹುತಿ, ಜೀವಂತ ದಹನ, ದೇಹತ್ಯಾಗ, ಅಗ್ನಿ ಸಮಾಧಿ.. ಮುಂತಾದ ಹೆಸರುಗಳನ್ನೂ ಕೊಟ್ಟುವು. ಆದರೆ ಯಾವ ಹೆಸರುಗಳನ್ನು ಕೊಟ್ಟರೂ ಅವುಗಳ ಒಟ್ಟು ಅರ್ಥ ‘ಆತ್ಮಹತ್ಯೆ' ಎಂದೇ ಆಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಇಷ್ಟಕ್ಕೂ, ಗುರುಗಳು ಸಾವಿಗೀಡಾದರೆಂದು ಶಿಷ್ಯರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಪದಗುಚ್ಛಗಳ ಮೂಲಕವೋ ಸಿದ್ಧಿಯ (ಪವಾಡ ಪ್ರಾಪ್ತಿ) ನೆಪದಲ್ಲೋ ಸಮರ್ಥಿಸಿಕೊಳ್ಳಬಹುದೇ? ಒಂದು ಮಠಕ್ಕೆ, ಅದನ್ನು ನೋಡಿಕೊಳ್ಳುವ ಗುರುಗಳಿಗೆ, ಶಿಷ್ಯ ವೃಂದ ಮತ್ತು ಭಕ್ತಾದಿಗಳಿಗೆ ಅವರವರದ್ದೇ ಆದ ಉದ್ದೇಶ, ಗುರಿಗಳಿರುತ್ತದಲ್ಲವೇ? ಸಮಾಜಕ್ಕೆ ಮಾರ್ಗದರ್ಶನ ಮಾಡುವ, ಮೌಲ್ಯಗಳನ್ನು ಹೇಳಿಕೊಡುವ, ತಿದ್ದುವ ಕೆಲಸಗಳನ್ನು ಮಠಗಳು ಮಾಡುತ್ತವೆ ಎಂಬ ನಂಬಿಕೆಯಿಂದಲೇ ಅಲ್ಲವೇ ಜನರು ಮಠ ಗಳತ್ತ ನೋಡುವುದು, ಗುರುಗಳತ್ತ ಧಾವಿಸುವುದು? ಆದರೆ ಮಾರ್ಗದರ್ಶನ ಮಾಡಬೇಕಾದವರೇ ಆತ್ಮಹತ್ಯೆಯ ದಾರಿ ಹಿಡಿದರೆ ಅದು ಭಕ್ತಾದಿಗಳಿಗೆ ಕೊಡುವ ಸಂದೇಶವೇನು? ಸುಖ-ದುಃಖ, ನೋವು-ನಲಿವು, ಸಿಟ್ಟು-ವೈರಾಗ್ಯ.. ಎಲ್ಲವನ್ನೂ ಸಮಚಿತ್ತದಿಂದಲೇ ನಿಭಾಯಿಸುವ ಕಲೆಯನ್ನು ಸಮಾಜಕ್ಕೆ ಕಲಿಸ ಬೇಕಾದವರೇ ‘ಸಮಚಿತ್ತ' ಕಳಕೊಂಡರೆ ಅನುಯಾಯಿಗಳು ಏನಾದಾರು? ಸಾವು ಪ್ರತಿಯೊಂದು ಜೀವಿಗೂ ಶತಃಸಿದ್ಧ. ಗುರುಗಳೂ ಅದರಿಂದ ಹೊರತಲ್ಲ. ಇದನ್ನು ಅತ್ಯಂತ ಚೆನ್ನಾಗಿ ತಿಳಿದು ಕೊಂಡಿರಬೇಕಾದವರು ಅವರ ಆಪ್ತ ಶಿಷ್ಯರೇ. ಸಾವಿನ ಮರ್ಮವನ್ನು ಸಮಾಜಕ್ಕೆ ಹೇಳಿಕೊಡುವುದಕ್ಕೆ, ಗುರುಗಳು ಬೋಧಿಸಿದ ಮೌಲ್ಯಗಳನ್ನು ಪ್ರಚಾರ ಮಾಡುವುದಕ್ಕೆ ಆ ಸಾವು ಒಂದು ಉತ್ತಮ ಅವಕಾಶ. ಆದರೆ, ಶಿಷ್ಯರೇ ಅದಕ್ಕೆ ಬೆನ್ನು ತಿರುಗಿಸಿದರೆ? ಅಗಲಿಕೆಯ ಭಾರದಿಂದ ಕುಸಿದು ಕೂತರೆ?
ಪ್ರವಾದಿ ಮುಹಮ್ಮದರು(ಸ) ಸಾವಿಗೀಡಾದ ಸುದ್ದಿ ಎಲ್ಲೆಡೆ ಹರಡತೊಡಗಿತು. ಅವರ ಅನುಯಾಯಿಗಳು ಸುದ್ದಿಯನ್ನು ಖಚಿತಪಡಿಸುತ್ತಾ, ಅವರ ಮನೆಯತ್ತ ಧಾವಿಸತೊಡಗಿದರು. ಈ ಸುದ್ದಿ ಅವರ ಆಪ್ತಶಿಷ್ಯ ಉಮರ್(ರ)ರಿಗೂ ತಲುಪಿತು. ಸಾವು ಎಲ್ಲರಿಗೂ ಶತಸಿದ್ಧ ಎಂಬುದನ್ನು ಅವರು ತಿಳಿದಿದ್ದರೂ ಆ ಕ್ಷಣದಲ್ಲಿ ಅವರು ಉದ್ವೇಗಕ್ಕೆ ಒಳಗಾದರು. ವಿಚಲಿತರಾಗಿ ಮನೆಯಿಂದ ಹೊರಟರು. ಯಾರಾದರೂ ತನ್ನ ನಾಯಕನ ಸಾವಿನ ಬಗ್ಗೆ ಮಾತಾಡಿದರೆ ಅವರನ್ನು ಕೊಂದೇ ಬಿಡಬೇಕು ಅನ್ನುವ ಆವೇಶ ಅವರಲ್ಲಿತ್ತು. ದಾರಿಯಲ್ಲಿ ಪ್ರವಾದಿಯವರ(ಸ) ಇನ್ನೋರ್ವ ಶಿಷ್ಯ ಅಬೂಬಕರ್(ರ) ಎದುರಾದರು. ತಮ್ಮ ನಾಯಕನ ಸಾವನ್ನು ಖಚಿತಪಡಿಸಿದರು. ಉಮರ್ ಒಪ್ಪಲಿಲ್ಲ, ವಾದಕ್ಕಿಳಿದರು. ಆಗ ಅಬೂಬಕರ್ ಹೇಳಿದರು, ಯಾರಾದರೂ ಪ್ರವಾದಿ ಮುಹಮ್ಮದರನ್ನು(ಸ) ಆರಾಧಿಸುತ್ತಾರೆಂದಾದರೆ, ಆ ಮುಹಮ್ಮದ್(ಸ) ಸಾವಿಗೀಡಾಗಿದ್ದಾರೆ. ಇನ್ನು, ಸೃಷ್ಟಿಕರ್ತನನ್ನು (ಅಲ್ಲಾಹ್) ಆರಾಧಿಸುವುದಾದರೆ, ಆತ ಸಾವಿಗೀಡಾಗಿಲ್ಲ, ಆಗುವುದೂ ಇಲ್ಲ..' ಉಮರ್‍ರಿಗೆ ತಪ್ಪಿನ ಅರಿವಾಯಿತು. ನನ್ನ ಆರಾಧ್ಯ ಮುಹಮ್ಮದ್(ಸ) ಅಲ್ಲ, ಸೃಷ್ಟಿಕರ್ತ ಅಲ್ಲಾಹ್ ಎಂಬುದಾಗಿ ಸ್ವಯಂ ಸ್ಪಷ್ಟಪಡಿಸಿಕೊಂಡರು.
ಅಂದಹಾಗೆ, ಪೀಪಲ್ಸ್ ಟೆಂಪಲ್, ದಿ ಆರ್ಡರ್ ಆಫ್ ದಿ ಸೋಲಾರ್ ಟೆಂಪಲ್ಸ್, ಹೆವೆನ್ಸ್ ಗೇಟ್.. ಮುಂತಾದ ಪಂಥಗಳ ಆತ್ಮಹತ್ಯಾ ಇತಿಹಾಸವನ್ನು ಬಲ್ಲವರಿಗೆ ‘ಚೌಳಿ ಮಠ' ಘಟನೆ ಆಘಾತವನ್ನೇನೂ ನೀಡದು.
1997 ಮಾರ್ಚ್ 26ರಂದು ಅಮೇರಿಕದ ಕ್ಯಾಲಿಫೋರ್ನಿಯಾದಲ್ಲಿ 39 ಮಂದಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದಾಗಿ 4 ದಿನಗಳ ಬಳಿಕ ಮಾರ್ಚ್ 30ರಂದು ಅಮೇರಿಕದ ಖ್ಯಾತ ನಟಿ ನಿಚೆಲ್ ನಿಕೋಲಸ್‍ಳ ತಮ್ಮ ಥಾಮಸ್ ನಿಕೋಲಸ್ ಎಂಬವ ಆತ್ಮಹತ್ಯೆಗೆ ಶರಣಾಗುತ್ತಾನೆ. ‘ನನಗಿಂತ ಮೊದಲೇ ತೆರಳಿ ಆಕಾಶದಲ್ಲಿ ತೇಲಾಡುತ್ತಾ ಇರುವವರ ಜೊತೆ ಸೇರಲು ಹೋಗುತ್ತಿದ್ದೇನೆ..' ಅಂತ ಡೆತ್‍ನೋಟ್ ಬರೆದಿಡುತ್ತಾನೆ. ಇದು ಅಮೇರಿಕನ್ ಮಾಧ್ಯಮಗಳಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗುತ್ತದೆ. ಸಾರ್ವಜನಿಕರಲ್ಲಿ ಒಂದು ಬಗೆಯ ಗೊಂದಲ, ತಳಮಳಗಳು ಕಾಣಿಸಿಕೊಳ್ಳುತ್ತವೆ. ಬೋನಿ ನಿಟ್ಟೆಲ್ ಮತ್ತು ಮಾರ್ಶಲ್ ಎಂಬಿಬ್ಬರು 1970ರಲ್ಲಿ ಸ್ಥಾಪಿಸಿದ ಹೆವೆನ್ಸ್ ಗೇಟ್ ಎಂಬ ಧಾರ್ಮಿಕ ಪಂಥದ ಬಗ್ಗೆ, ಅದರ ಆಚಾರ-ವಿಚಾರ, ಆಧ್ಯಾತ್ಮಿಕ ನಿಲುವುಗಳ ಬಗ್ಗೆ ಚರ್ಚೆಗಳಾಗುತ್ತವೆ. ನಿಜವಾಗಿ, 1970ರಲ್ಲಿ ಮಾರ್ಶಲ್‍ಗೆ ಹೃದಯಾಘಾತವಾಗಿತ್ತು. ಬಳಿಕ ಚೇತರಿಸಿಕೊಂಡ ಆತ, ತನಗೆ ಸಾವಿನ ಅನುಭವವಾಗಿದೆ ಎಂದು ಹೇಳಿಕೊಂಡ. ಬೈಬಲ್‍ನಲ್ಲಿ ಉಲ್ಲೇಖಿತವಾಗಿರುವ 11:3 ವಚನಗಳ ಕುರಿತಂತೆ ತನಗೆ ಕ್ರಾಂತಿಕಾರಿ ಬೋಧನೆಗಳು ದೊರಕಿವೆ ಎಂದು ಪ್ರತಿಪಾದಿಸಿದ. ತನಗೆ ಯೇಸುವಿನೊಂದಿಗೆ ನೇರವಾದ ಸಂಬಂಧ ಇದ್ದು, ತಾನು ಮಾನವನ ಮಟ್ಟ ಕ್ಕಿಂತ ಮೇಲ್ತರದ ಸಾಮ್ರಾಜ್ಯದಲ್ಲಿದ್ದೇನೆ ಎಂದು ಹೇಳಿದನಲ್ಲದೇ, ತನ್ನನ್ನು ಆಸ್ಪತ್ರೆಯಲ್ಲಿ ಉಪಚರಿಸಿದ ನರ್ಸ್ ಬೋನಿ ನಿಟ್ಟೆಲ್‍ಳ ಜೊತೆ ಸೇರಿ ಹೆವೆನ್ಸ್ ಗೇಟ್‍ಗೆ ಅಡಿಪಾಯ ಹಾಕಿದ. ಈ ಜಗತ್ತು ನಾಶವಾಗುವ ಬಗ್ಗೆ, ಮೋಕ್ಷ, ಸಾಕ್ಷಾತ್ಕಾರದ ಬಗ್ಗೆ ವಿಚಿತ್ರ ಆಲೋಚನೆಗಳನ್ನು ಸಮಾಜದ ಮುಂದಿಟ್ಟ. ಈ ಭೂಮಿ ಶೀಘ್ರವೇ ಸರ್ವನಾಶವಾಗಲಿದ್ದು, ಈ ಗೋಲದಲ್ಲಿ ಬದುಕುವ ಮಂದಿ ಆದಷ್ಟು ಬೇಗ ಭೂಮಿಯಿಂದ ಹೊರಟು ಬಿಡುವುದು ಇದಕ್ಕಿರುವ ಪರಿಹಾರ ಎಂದು ಕರೆಕೊಟ್ಟ. ಈ ದೇಹವು ಒಂದು ವಾಹನವಾಗಿದೆ, ಜನರ ಸಂಚಾರಕ್ಕೆ ಈ ವಾಹನ ಒಂದು ನಿಮಿತ್ತ ಮಾತ್ರ. ಆತ್ಮವು ಈ ವಾಹನವನ್ನು ಬಿಟ್ಟು ಹೋಗುವುದರ ಅರ್ಥವೇ ಸಾವು.. ಎಂದೆಲ್ಲಾ ಹೇಳಿದ. 1997 ಮಾರ್ಚ್ 26ರ ಸಾಮೂಹಿಕ ಆತ್ಮಹತ್ಯೆಯ ದಿನಗಳ ಮೊದಲು ಆತ ತನ್ನ ಹೇಳಿಕೆಯನ್ನು ಚಿತ್ರೀಕರಿಸಿಕೊಂಡನಲ್ಲದೇ, ಅದರಲ್ಲಿ ಭೂಮಿಯೊಂದಿಗಿನ ಸಂಬಂಧ ಬಿಟ್ಟುಬಿಡಿ. ಕೌಟುಂಬಿಕ ಸಂಬಂಧ, ಪತಿ-ಪತ್ನಿ, ಮಕ್ಕಳು, ಉದ್ಯೋಗ, ದುಡ್ಡು.. ಹೀಗೆ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳಿ. ಬದುಕಿನ ಮುಂದಿನ ಹಂತಕ್ಕೆ ಏರಲು ಸಿದ್ಧವಾಗಿ. ಭೂಮಿ ನಾಶವಾಗಲಿದೆ.. ಎಂದೆಲ್ಲಾ ತನ್ನ ಸದಸ್ಯರಿಗೆ ಬೋಧಿಸಿದ.
ಅಷ್ಟಕ್ಕೂ, ಗುರು ಮತ್ತು ಅನುಯಾಯಿಗಳು ಜೊತೆಯಾಗಿ ಆತ್ಮ ಹತ್ಯೆ ಮಾಡಿಕೊಂಡ ಘಟನೆ ಇದೊಂದೇ ಎಂದು ಭಾವಿಸಬೇಡಿ.
1978 ನವೆಂಬರ್ 18ರಂದು ಅಮೇರಿಕದಲ್ಲಿ 918 ಮಂದಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡರು. 9/11 ಘಟನೆಯನ್ನು ಬಿಟ್ಟರೆ ಉಳಿದಂತೆ ಅಮೇರಿಕದಲ್ಲಿ ಒಂದೇ ದಿನ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಾವಿಗೀಡಾದದ್ದು ಇದೊಂದೇ. ಇಡೀ ಅಮೇರಿಕಕ್ಕೆ ಅಮೇರಿಕವೇ ಪೀಪಲ್ಸ್ ಟೆಂಪಲ್ ಪಂಥದ ಕುರಿತು, ಅದರ ಸ್ಥಾಪಕ ಜಿಮ್ ಜೋನ್ಸ್‍ನ ಬಗ್ಗೆ, ಆತನ ಸೈದ್ಧಾಂತಿಕ ನೆಲೆಗಟ್ಟು, ಹಿನ್ನೆಲೆಯ ಕುರಿತಂತೆ ಗಂಭೀರವಾಗಿ ಚರ್ಚಿಸಿತು. ಇವಾಂಜಲಿಕಲ್ ಪ್ರವಚಕನಾಗಿ ಗುರುತಿಸಿಕೊಂಡಿದ್ದ ಜೋನ್ಸ್, ಕ್ರೈಸ್ತ ಧರ್ಮದಲ್ಲಿ ಕ್ರಾಂತಿಕಾರಿ ನಿಲುವುಗಳನ್ನು ಪ್ರತಿಪಾದಿಸಿದ. ಆತನ ಹೊಸ ಪಂಥದ ಡಜನ್‍ಗಟ್ಟಲೆ ಕಚೇರಿಗಳು ಕ್ಯಾಲಿಫೋರ್ನಿಯಾದಲ್ಲಿ ತೆರೆದವು. ಆಳದಲ್ಲಿ ಆತ ಕಮ್ಯುನಿಸ್ಟ್ ನಾಸ್ತಿಕನಾಗಿದ್ದರೂ ಅಪ್ಪಟ ಆಸ್ತಿಕನಂತೆ ಗುರುತಿಸಿಕೊಂಡು ಅನುಯಾಯಿಗಳನ್ನು ಕಲೆ ಹಾಕತೊಡಗಿದ. ರಾಜಕೀಯ ನಾಯಕರ ಸಂಬಂಧ ಬೆಳೆಸಿದ. ಅನುಯಾಯಿಗಳ ಸಂಖ್ಯೆ ಬೆಳೆಯಿತು. ಹೀಗಿರುತ್ತಾ ಆತನ ಸುತ್ತ ತನಿಖೆ ನಡೆಯುತ್ತಿದೆ ಮತ್ತು ರಶ್ಯ ಆತನನ್ನು ಹಾಗೂ ಅನುಯಾಯಿಗಳನ್ನು ಸ್ವೀಕರಿಸಲು ಸಿದ್ಧವಿಲ್ಲವೆಂಬುದನ್ನು ತಿಳಿದ ಬಳಿಕ, ತನ್ನೆಲ್ಲಾ ಅನುಯಾಯಿಗಳ ಜೊತೆ ಜೋನ್ಸ್ ಟೌನ್‍ನ ತನ್ನ ಕಚೇರಿಗೆ ತೆರಳಿ, ಅವರನ್ನು ಆತ್ಮಹತ್ಯೆಗೆ ಪ್ರಚೋದಿಸಿದ. ಈ ಜಗತ್ತಿನ ಅಮಾನವೀಯ ಸ್ಥಿತಿಯನ್ನು ಪ್ರತಿಭಟಿಸಿ ‘ಕ್ರಾಂತಿಯುತವಾಗಿ ಆತ್ಮಹತ್ಯೆ ಮಾಡುತ್ತಿದ್ದೇವೆ..’ ಎಂಬ ಒಕ್ಕಣೆಯುಳ್ಳ 45 ನಿಮಿಷಗಳ ಹೇಳಿಕೆಯನ್ನು ಆತ್ಮಹತ್ಯೆಗೆ ಮೊದಲು ಚಿತ್ರೀಕರಿಸಲಾದ ವೀಡಿಯೋದಲ್ಲಿ ಹೇಳಿಕೊಂಡ. ‘ಜನರನ್ನು ಧಾರ್ಮಿಕವಾಗಿ ಒಟ್ಟುಗೂಡಿಸಿ, ಅಮೇರಿಕದಲ್ಲಿ ಕಮ್ಯೂನಿಸ್ಟ್ ಆಡಳಿತವನ್ನು (ಕ್ರಾಂತಿ) ತರಬೇಕೆಂಬುದು ಆತನ ನಿಲುವಾಗಿತ್ತೆಂದು’ ನ್ಯೂಯಾರ್ಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಆತನ ಪತ್ನಿ ಮರ್ಸಿ ಆ ಬಳಿಕ ಒಪ್ಪಿಕೊಂಡಿದ್ದಳು. ಇದಲ್ಲದೇ, 1984ರಲ್ಲಿ ಲುಕ್ ಜರ್ನೆಟ್ ಮತ್ತು ಜೋಸೆಫ್ ಡಿ ಮಾಂಬ್ರೆ ಎಂಬವರಿಂದ ಫ್ರಾನ್ಸ್ ನಲ್ಲಿ ಹುಟ್ಟು ಪಡೆದ ಸೋಲಾರ್ ಟೆಂಪಲ್ಸ್ ಎಂಬ ಪಂಥವೂ ತನ್ನ ಅನುಯಾಯಿಗಳನ್ನು ಆತ್ಮಹತ್ಯೆಗೆ ಪ್ರಚೋದಿಸಿದ ಕುಖ್ಯಾತಿಯನ್ನೇ ಹೊಂದಿದೆ. ಈ ಜಗತ್ತಿನ ದೌರ್ಜನ್ಯ ಮತ್ತು ಹಿಪಾಕ್ರಸಿಯಿಂದ ಬಚಾವಾಗುವುದಕ್ಕಾಗಿ ಆತ್ಮಹತ್ಯೆಯನ್ನು ಪರಿಹಾರವಾಗಿ ಆ ಪಂಥ ಮಂಡಿಸಿರುವುದರಿಂದಲೇ 1994-97ರ ಮಧ್ಯೆ ಅದರ 74 ಮಂದಿ ಅನುಯಾಯಿಗಳು ಆತ್ಮಹತ್ಯೆ ಮಾಡಿಕೊಂಡರು. ಇವರಲ್ಲಿ ಓರ್ವ ಮೇಯರ್, ಪತ್ರಕರ್ತ, ಸರಕಾರಿ ಅಧಿಕಾರಿ.. ಕೂಡ ಸೇರಿದ್ದರು..’
ಹಾಗಂತ, ಚೌಳಿ ಮಠವನ್ನು ಈ ಪಂಥಗಳ ಜೊತೆ ಹೋಲಿಸುವುದಕ್ಕಾಗುವುದಿಲ್ಲ. ಮೂವರು ಸ್ವಾಮೀಜಿಗಳು ಆತ್ಮಹತ್ಯೆ ಮಾಡಿಕೊಂಡರೂ ಭಕ್ತಾದಿಗಳಲ್ಲಿ ಯಾರೂ ಆ ದಾರಿಯನ್ನು ಆಯ್ಕೆ ಮಾಡಿಲ್ಲ. ಆದರೂ ಈ ಸ್ವಾಮೀಜಿಗಳು ತಮ್ಮ ಕೃತ್ಯದ ಮೂಲಕ ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲಗಳನ್ನು ಹುಟ್ಟು ಹಾಕಿರುವರೆಂಬುದು ಸ್ಪಷ್ಟ. ಜನಸಾಮಾನ್ಯರು ಊಟ, ಬಟ್ಟೆ, ಮನೆ, ನೀರು.. ಸಹಿತ ಅನೇಕಾರು ಮೂಲಭೂತ ಸಮಸ್ಯೆಗಳಿಂದ ಬಳಲುತ್ತಿರುವಾಗ ಸರಕಾರದಿಂದ ಕೋಟಿಗಟ್ಟಲೆ ಅನುದಾನ ಪಡೆಯುವ ಮಠಗಳು ಹೀಗೆ ‘ಆತ್ಮಹತ್ಯೆ' ಮಾಡಿಕೊಂಡರೆ ಏನು ಮಾಡಬೇಕು? ಜನರ ಸಂಕಷ್ಟಗಳಿಗೆ ಕಣ್ಣು, ಕಿವಿ, ಹೃದಯವಾಗಬೇಕಾದ ಸ್ವಾಮೀಜಿಗಳೇ ಕಣ್ಣು ಮುಚ್ಚಿಕೊಂಡು ಹೊರಟು ಹೋಗುವುದಕ್ಕೆ ಏನರ್ಥವಿದೆ? ಆಧ್ಯಾತ್ಮ ಎಂಬುದು ಆತ್ಮಹತ್ಯೆಯ ಮೂಲಕ ಸಿದ್ಧಿಸುವಂಥದ್ದೇ? ಯಾವುದೇ ಸಮಸ್ಯೆ, ಸಂಕಷ್ಟವನ್ನು ಛಾತಿಯಿಂದ ಎದುರಿಸುವುದಕ್ಕೆ ಪ್ರಚೋದನೆ ಕೊಡುವುದರ ಹೆಸರೇ ಅಲ್ಲವೇ ಧರ್ಮ? ಚೌಳಿ ಮಠ ಘಟನೆಯು ಧರ್ಮದ ಈ ಕಲ್ಪನೆಯನ್ನು ಹೇಗೆ ಪ್ರತಿನಿಧಿಸುತ್ತದೆ? ಅಲ್ಲದೇ, ವಾರಕ್ಕೋ ತಿಂಗಳಿಗೊಮ್ಮೆಯೋ ಮಠಕ್ಕೆ ಭೇಟಿಕೊಟ್ಟು ನಡಕೊಳ್ಳುವ ಭಕ್ತರಂಥಲ್ಲವಲ್ಲ ಸ್ವಾಮೀಜಿಗಳು! ಅವರಿಗೆ ಸರಿ-ತಪ್ಪು, ಕರ್ಮ-ಅಕರ್ಮ, ಪಾಪ-ಪುಣ್ಯ, ವೇದ-ಉಪನಿಷತ್ತುಗಳೆಲ್ಲ ಚೆನ್ನಾಗಿ ಗೊತ್ತಿರುತ್ತದಲ್ಲವೇ? ಹೀಗಿರುವಾಗ ಅವರೇ ಆತ್ಮಹತ್ಯೆ ಮಾಡಿಕೊಂಡರೆ ಆತ್ಮಹತ್ಯೆಯು ‘ಧಾರ್ಮಿಕವಾಗಿ ಸರಿ’ ಎಂಬ ವಾದದ ಹುಟ್ಟಿಗೆ ಕಾರಣವಾಗದೇ? ಮುಂದೆ, ಕೈಲಾಸ ಸೇರುವುದಕ್ಕೆ ಆತ್ಮಹತ್ಯೆಯನ್ನು ಒಂದು ಮಾರ್ಗವಾಗಿ ಆಯ್ಕೆ ಮಾಡಿಕೊಳ್ಳುವವರು ಸೃಷ್ಟಿಯಾದರೆ ಏನು ಮಾಡುವುದು? ಇವೆಲ್ಲ ರವಾನಿಸುವ ಸಂದೇಶವಾದರೂ ಏನು?
ಪವಿತ್ರ ಕುರ್‍ಆನ್ ಮತ್ತು ಪ್ರವಾದಿ ಮುಹಮ್ಮದ್‍ರ(ಸ) ಬದುಕು-ಬೋಧನೆಗಳು ಇಷ್ಟವಾಗುವುದೇ ಇದಕ್ಕೆ..
No comments:
Post a Comment