Monday, March 25, 2013

ಪೊಲೀಸ್ ಠಾಣೆಯಲ್ಲಿರುವ ಎತ್ತು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಿ..

   ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯು ತನ್ನ ಭದ್ರ ನೆಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ನೆಲ ಕಚ್ಚಿದ್ದೇಕೆ ಎಂಬ ಪ್ರಶ್ನೆಗೆ; ಕಲ್ಲಡ್ಕ ಪ್ರಭಾಕರ ಭಟ್ಟರ ಸರ್ವಾಧಿಕಾರಿ ನಿಲುವು, ಬಿಜೆಪಿಯ ಒಳಜಗಳ, ಭ್ರಷ್ಟಾಚಾರ, ಯಡಿಯೂರಪ್ಪ ಫ್ಯಾಕ್ಟರ್.. ಮುಂತಾದ ಕಾರಣಗಳನ್ನು ಕೊಡುತ್ತಾ ಹೋದರೆ ಈ ಜಿಲ್ಲೆಗಳ ಸಾಮಾನ್ಯ ಮಂದಿ ಸುಮ್ಮನೆ ನಗುತ್ತಾರೆ. ಯಾಕೆಂದರೆ, ಇವನ್ನೆಲ್ಲಾ ಕಾರಣ ಎಂದು ಅವರು ಒಪ್ಪುವುದೇ ಇಲ್ಲ. ಅವರು ಕೊಡುವ ಕಾರಣವೇ ಬೇರೆ,
   ಕೋಮುಗಲಭೆ ಆಗಿಲ್ಲ..
  ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರ ರಾಜ್ಯವನ್ನಾಳುತ್ತಿದ್ದ ಸಂದರ್ಭ. 2006 ಅಕ್ಟೋಬರ್ 5ರಂದು ಮಂಗಳೂರು ಬಂದ್‍ಗೆ ಸಂಘಪರಿವಾರ ಕರೆ ಕೊಡುತ್ತದೆ. ಅಕ್ರಮವಾಗಿ ಗೋಸಾಗಾಟ ನಡೆಸುತ್ತಿದ್ದ ಕ್ವಾಲಿಸ್ ವಾಹನವೊಂದನ್ನು ಮಂಗಳೂರಿನ ಸಂಘಪರಿವಾರದ ಕಾರ್ಯಕರ್ತರು ಬೆನ್ನಟ್ಟಿದಾಗ ಅದು ಮಹಿಳೆಗೆ ಢಿಕ್ಕಿ ಹೊಡೆದು, ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿದೆ ಅನ್ನುವ ಕಾರಣಕ್ಕಾಗಿ ಬಂದ್‍ಗೆ ಕರೆ ಕೊಡಲಾಗಿತ್ತು. ಶಶಿಧರ್ ಭಟ್ ಅನ್ನುವ ವ್ಯಕ್ತಿ ಸಾವಿಗೀಡಾಗಿದ್ದಾರೆ ಅನ್ನುವ ಸುದ್ದಿಯನ್ನು ಪತ್ರಿಕೆಯೊಂದು ಇದೇ ಸಂದರ್ಭದಲ್ಲಿ ತೇಲಿ ಬಿಟ್ಟಿತ್ತು. ನಿಜವಾಗಿ, ಮಹಿಳೆಗೆ ಢಿಕ್ಕಿ ಹೊಡೆದದ್ದಾಗಲಿ, ಭಟ್ ಸಾವಿಗೀಡಾದದ್ದಾಗಲಿ ನಡೆದೇ ಇಲ್ಲ ಎಂದು ಅಕ್ಟೋಬರ್ 5ರಂದು ಜಿಲ್ಲಾ  ಎಸ್.ಪಿ.ಯವರು ಮಾಧ್ಯಮದೆದುರು ಘೋಷಿಸಿದರೂ ದೊಂಬಿ ಜಿಲ್ಲೆಯನ್ನಿಡೀ ಆವರಿಸಿಬಿಟ್ಟಿತ್ತು. ತೊಕ್ಕೊಟ್ಟು, ಸುರತ್ಕಲ್, ನಂತೂರು, ಫರಂಗಿಪೇಟೆ, ಕಣ್ಣೂರು, ಕೃಷ್ಣಾಪುರ, ಬಿ.ಸಿ. ರೋಡ್, ಸಿದ್ಧಕಟ್ಟೆ, ಮೆಲ್ಕಾರ್, ಕಲ್ಲಡ್ಕ.. ಮುಂತಾದ ಹತ್ತಾರು ಪ್ರದೇಶಗಳು ಹೊತ್ತಿ ಉರಿದುವು. ಅಬ್ದುಲ್ ಗಫೂರ್ ಮದನಿ ಮತ್ತು ಇಬ್ರಾಹೀಮ್ ಬೋಳಿಯಾರ್ ಎಂಬಿಬ್ಬರನ್ನು ಇರಿದು ಕೊಲ್ಲಲಾಯಿತು. ಮುಸ್ಲಿಮರ ಅಂಗಡಿ-ಮುಂಗಟ್ಟುಗಳು ಅತ್ಯಂತ ಯೋಜಿತ ರೀತಿಯಲ್ಲಿ ಆಕ್ರಮಣಕ್ಕೆ ತುತ್ತಾದುವು. ಮುಂದಿನ ಐದಾರು ವರ್ಷಗಳ ವರೆಗೆ ಮುಸ್ಲಿಮರು ಆರ್ಥಿಕವಾಗಿ ತಲೆ ಎತ್ತದಂಥ ‘ಪಾಠ ಕಲಿಸಿ' ಬಂದ್ ಕೊನೆಗೊಂಡಿತು. ಮುಂದಿನ ಒಂದು ವರ್ಷದ ಅವಧಿಯಲ್ಲಿ (2008) ವಿಧಾನ ಸಭೆಗೆ ಚುನಾವಣೆ ಘೋಷಣೆಯಾದಾಗ ಈ ಗಲಭೆಯ ಕಾವು ಇನ್ನೂ ಆರಿರಲಿಲ್ಲ. ಒಂದು ಹಂತದ ವರೆಗೆ ‘ಗಲಭೆಯ ವಾತಾವರಣವನ್ನು' ಉಳಿಸಿಕೊಳ್ಳುವುದಕ್ಕೆ ಬಿಜೆಪಿ ಯಶಸ್ವಿಯಾಗಿತ್ತು. ಇಲ್ಲದಿದ್ದರೆ ಮಲ್ಲಿಕಾ ಪ್ರಸಾದ್ ಎಂಬ ‘ಅಡುಗೆಮ್ಮ’ ಪುತ್ತೂರಿನಿಂದ ಗೆದ್ದು ಬರಲು ಸಾಧ್ಯವಿತ್ತೇ? ವಿಧಾನಸಭೆಗೆ ಆಯ್ಕೆಯಾದ ಮಹಿಳಾ ಜನಪ್ರತಿನಿಧಿಗಳಲ್ಲೇ ಅತ್ಯಂತ ಹೆಚ್ಚು ಚಟುವಟಿಕೆಯಿಂದಿದ್ದ, ಕ್ಷೇತ್ರದ ಸಮಸ್ಯೆಯನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಸದಾ ಗಮನ ಸೆಳೆಯುತ್ತಿದ್ದ ಮಾತುಗಾರ್ತಿ, ಶಕುಂತಳಾ ಶೆಟ್ಟಿಯೆದುರು ಮಾತೇ ಬಾರದ ಮಲ್ಲಿಕಾ ಗೆಲ್ಲುವುದೆಂದರೇನು? ಹಾಲಿ ಶಾಸಕಿಯಾಗಿದ್ದ ಶಕುಂತಳಾರಿಗೆ ಬಿಜೆಪಿ ಟಿಕೇಟು ನಿರಾಕರಿಸಿದಾಗ ಅವರು ಬಂಡಾಯವೆದ್ದಿದ್ದರು. ನಿಜವಾಗಿ, ಇಲ್ಲಿನ ಸಮಸ್ಯೆ ಬಂಡಾಯವಲ್ಲ. ಈ ಜಿಲ್ಲೆಗಳಲ್ಲಿ ಒಂದು ‘ಎಲೆಕ್ಟ್ರಿಕ್ ಕಂಭ' ಅಭ್ಯರ್ಥಿಯಾಗಿ ನಿಂತರೂ ಗೆಲುವು ಶತಸಿದ್ಧ ಅನ್ನುವ ವಾತಾವರಣ ವೊಂದನ್ನು ಕಟ್ಟಿ ಬೆಳೆಸುವಲ್ಲಿ ಬಿಜೆಪಿ ಇಂದು ಯಶಸ್ವಿಯಾಗಿದೆ. ಅದಕ್ಕೆ ಪೂರಕವಾಗಿ ಕೋಮುಗಲಭೆಗಳನ್ನು ‘ಉತ್ಪಾದಿಸಲಾಗುತ್ತದೆ’.
   2013 ಮಾರ್ಚ್ 19
  ಉಡುಪಿ ಜಿಲ್ಲೆಯ ಅಡ್ಡಬೆಂಗ್ರೆಯಲ್ಲಿ ಜಾವೀದ್ ಎಂಬವರ ಮನೆಯಿದೆ. ಅವರೇನೂ ಗೋ ವ್ಯಾಪಾರಿಯಲ್ಲ. ರಿಯಲ್ ಎಸ್ಟೇಟ್ ಮತ್ತು ವಾಹನ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಅವರ ಮನೆಗೆ ಮೊನ್ನೆ ಮಾರ್ಚ್ 19ರಂದು ಸಂಜೆ ಸಂಘಪರಿವಾರದ ಸುಮಾರು 60-70ರಷ್ಟು ಮಂದಿ ಪೊಲೀಸರ ಜೊತೆ ಬಂದರಲ್ಲದೇ, ಮನೆಯಲ್ಲಿದ್ದ ಒಂದೂವರೆ ವರ್ಷದ ಎತ್ತನ್ನು ಠಾಣೆಗೆ ಎತ್ತಿಕೊಂಡು ಹೋದರು. ಅಕ್ರಮ ಗೋಸಾಗಾಟದಲ್ಲಿ ಜಾವೀದ್ ಭಾಗಿಯಾಗಿದ್ದಾರೆ ಅನ್ನುವ ವದಂತಿಯನ್ನು ಅದರ ಜೊತೆಗೇ ಹಬ್ಬಿಸಿದರು. ವದಂತಿಯಲ್ಲಿ ಎತ್ತು, ಗೋವಾಗಿ ಪರಿವರ್ತನೆಯಾಗಿತ್ತು. ನಿಜವಾಗಿ, ಜಾವೀದ್‍ರು ಕುರ್ಬಾನಿಗಾಗಿ ಎತ್ತು ಖರೀದಿಸಿ ತರುತ್ತಿದ್ದರು. ಸ್ವಯಂ ಕುರ್ಬಾನಿಯನ್ನೂ ಮಾಡುತ್ತಿದ್ದರು. ಅಲ್ಲದೇ ಕುರ್ಬಾನಿಯ ಸಂದರ್ಭದಲ್ಲಿ ಎತ್ತುಗಳನ್ನು ಮಾರುವುದೂ ಇತ್ತು. ಅಕ್ರಮ ಗೋಸಾಗಾಟಕ್ಕೂ ಕುರ್ಬಾನಿಗಾಗಿ ಎತ್ತು ಸಾಕುವುದಕ್ಕೂ ವ್ಯತ್ಯಾಸ ಇಲ್ಲವೇ? ಮುಸ್ಲಿಮರ ಮನೆಯಲ್ಲಿ ಎತ್ತು ಅಥವಾ ಗೋವು ಇದ್ದರೆ, ಅದನ್ನು ‘ಅಕ್ರಮ ಚಟುವಟಿಕೆ'ಯಂತೆ ಕಾಣುವ ಸಂಘ ಪರಿವಾರದ ಮನಸ್ಥಿತಿಗೆ ಏನೆನ್ನಬೇಕು? ಮುಸ್ಲಿಮರು ಎತ್ತು ಸಾಕುವುದನ್ನು ಸಾಂವಿಧಾನಿಕವಾಗಿ ನಿಷಿದ್ಧಗೊಳಿಸಲಾಗಿದೆಯೇ? ಆದರೆ ಇಂಥ ಪ್ರಶ್ನೆಗಳನ್ನೆಲ್ಲಾ ಸುಳ್ಳು ವ್ಯಾಖ್ಯಾನದ ಆರ್ಭಟದಲ್ಲಿ ಹತ್ತಿಕ್ಕುವುದನ್ನು ಸಂಘಪರಿವಾರ ಚೆನ್ನಾಗಿ ಕಲಿತುಕೊಂಡಿದೆ. 40-50ರಷ್ಟಿದ್ದ ಸಂಘ ಪರಿವಾರದ ಮಂದಿ ರಾತ್ರಿ ಪುನಃ ಬಂದರಲ್ಲದೇ ನಮಾಝ್‍ಗೆ ಬಂದವರ ಟೊಪ್ಪಿಯನ್ನು ಎಳೆದರು. ಪಾಕಿಸ್ತಾನ್ ಮುರ್ದಾಬಾದ್, ಅಲ್ಲಾಹ್ ಮುರ್ದಾಬಾದ್.. ಘೋಷಣೆ ಗಳನ್ನು ಕೂಗಿದರು. ಮರುದಿನ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಪೊಲೀಸರ ಸಮ್ಮುಖದಲ್ಲೇ ಜಾವೀದ್‍ರ ಮನೆಗೆ ಕಲ್ಲೆಸೆಯಲಾಯಿತು. ಬಾಗಿಲಿಗೆ ಹಾನಿ ಮಾಡಿ, ಮನೆಯ ಟಿ.ವಿ. ಮತ್ತಿತರ ವಸ್ತುಗಳನ್ನು ಧ್ವಂಸ ಮಾಡಲಾಯಿತು..
   ಇಷ್ಟಕ್ಕೂ ಪಡಿತರ ಚೀಟಿ, ಮತದಾನದ ಗುರುತು ಚೀಟಿ ಸಹಿತ ಈ ದೇಶದ ನಾಗರಿಕನೆಂದು ಗುರುತಿಸಿಕೊಳ್ಳುವುದಕ್ಕೆ ಎಲ್ಲವೂ ಇರುವ ಓರ್ವ ವ್ಯಕ್ತಿ ಎತ್ತು ಸಾಕುವುದನ್ನು ಈ ಮಟ್ಟದ ಅಪರಾಧವಾಗಿ ಪರಿಗಣಿಸಲು ಆತ ಮುಸ್ಲಿಮ್ ಆಗಿರುವುದರ ಹೊರತು ಇನ್ನಾವುದನ್ನಾದರೂ ಕಾರಣವಾಗಿ ಹೇಳಲು ಸಾಧ್ಯವಾ? ನಿಜವಾಗಿ ಈ ಎರಡು ಜಿಲ್ಲೆಗಳಲ್ಲಿ ಮುಸ್ಲಿಮರು ದನ ಸಾಕುವುದು, ದನದ ವ್ಯಾಪಾರ ಮಾಡುವುದನ್ನೆಲ್ಲಾ ಅಪರಾಧದ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಂಥ ‘ಅಪರಾಧ' ಮಾಡುವವರನ್ನು ಥಳಿಸುವುದು ಸರಿ ಅನ್ನುವ ಭಾವನೆಯನ್ನು ಬಿತ್ತುವ ಪ್ರಯತ್ನಗಳು ನಡೆಯುತ್ತಲೇ ಇವೆ. ಬಿಜೆಪಿಯ ಇಮೇಜಿಗೆ ತುಸು ಮುಕ್ಕಾದರೆ ಈ ಜಿಲ್ಲೆ ಗಳಲ್ಲಿ ‘ಗೋವು' ಸುದ್ದಿ ಮಾಡುತ್ತದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 4 ದಶಕಗಳ ಇತಿಹಾಸದಲ್ಲಿಯೇ ಮೊತ್ತಮೊದಲ ಬಾರಿಗೆ ಶಾಸಕ ರಘುಪತಿ ಭಟ್ಟರ ಕ್ಷೇತ್ರವಾದ ಉಡುಪಿ ನಗರ ಸಭೆಯಲ್ಲಿ ಬಿಜೆಪಿಗೆ ಸೋಲಾಗಿದೆ. ಸದ್ಯ ಒಂದು ಕೋಮುಗಲಭೆಯ ಹೊರತು ಈ ಎರಡು ಜಿಲ್ಲೆಗಳಲ್ಲಿ ಬಿಜೆಪಿಯನ್ನು ಹಳಿಗೆ ತರುವ ಸಾಧ್ಯತೆಯಂತೂ ಕಾಣುತ್ತಿಲ್ಲ. ಹೀಗಿರುವಾಗ ಜಾವೀದ್‍ರ ಮನೆಯ ಎತ್ತನ್ನು ಏ.ಕೆ. 47ನಂತೆ ಬಿಂಬಿಸುವುದು ಪರಿವಾರದ ತುರ್ತು ಅಗತ್ಯವಾಗಿತ್ತು.
   2005 ಮಾರ್ಚ್ 13
   ಆದಿ ಉಡುಪಿಯ 60 ವರ್ಷದ ಹಾಜಬ್ಬ ಮತ್ತು ಅವರ ಮಗ 28 ವರ್ಷದ ಹಸನಬ್ಬ ಎಂಬಿಬ್ಬರನ್ನು ಇಲ್ಲಿಯ ಮೈದಾನಕ್ಕೆ ಪರಿವಾರದ ಮಂದಿ ಸಂಜೆ 7ರ ಸುಮಾರಿಗೆ ಎಳೆದು ತಂದರು. ದನದ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದಾರೆ ಅನ್ನುವ ಆರೋಪವನ್ನು ಅವರ ಮೇಲೆ ಹೊರಿಸಲಾಗಿತ್ತು. ದನದ ವ್ಯಾಪಾರ ಮಾಡುವ ಮುಸಲ್ಮಾನರನ್ನು ಬೆತ್ತಲೆ ಮಾಡಿದರೂ, ಥಳಿಸಿದರೂ ಅವಮಾನಿಸಿದರೂ ಅದು ಅಪರಾಧವಲ್ಲ ಅನ್ನುವ ವಾತಾವರಣವನ್ನು ಅದಾಗಲೇ ಜಿಲ್ಲೆಯಲ್ಲಿ ಒಂದು ಹಂತದ ವರೆಗೆ ಬಿತ್ತಲಾಗಿತ್ತು. ನಿಜವಾಗಿ ಅವರು ದನದ ವ್ಯಾಪಾರಿಗಳಾಗಿದ್ದರೂ ಗೋಮಾಂಸದ ವ್ಯಾಪಾರಿಗಳಾಗಿರಲಿಲ್ಲ. ದನ ಕರುಗಳನ್ನು ಖರೀದಿಸಿ ಮಾರಾಟ ಮಾಡುವ ದಲ್ಲಾಳಿ ಕೆಲಸವನ್ನು ಅವರಿಬ್ಬರೂ ನಿರ್ವಹಿಸುತ್ತಿದ್ದರು. ನಿಜವಾಗಿ ಕರಾವಳಿ ವಲಯದಲ್ಲಿ ಇದೊಂದು ಉಪವೃತ್ತಿ. ಈ ವ್ಯವಹಾರ ಮಾಡುವ ಹಿಂದೂಗಳೂ ಇದ್ದಾರೆ. ಆದರೆ ಅವರಿಬ್ಬರನ್ನು ಮೈದಾನಕ್ಕೆ ತಂದವರು ಬೆತ್ತಲೆಗೊಳಿಸಿದರು. ಅವರ ಹೊಡೆತ, ಬಡಿತವನ್ನು ತಾಳಲಾರದೇ ತಂದೆ-ಮಗ ಬೆತ್ತಲೆಯಾಗಿ ಮೈದಾನದಲ್ಲಿ ಓಡುವುದು, ತರುಣರು ಅವರನ್ನು ಅಟ್ಟಿಸಿಕೊಂಡು ಥಳಿಸುವುದು.. ಇದು ಸುಮಾರು ಎರಡು ಗಂಟೆಗಳ ಕಾಲ ನಡೆಯಿತು. ಮೈದಾನದಲ್ಲಿ 500-600 ಜನ ಈ ವಿಕಟ ವಿನೋದವನ್ನು ನೋಡುತ್ತಾ ನಿಂತಿದ್ದರು. ಒಂದು ವೇಳೆ ಅವರಿಬ್ಬರು ಬೆತ್ತಲಾಗಿ ಕೂತಿರುವ ಮತ್ತು ಹಸನಬ್ಬರ ತಲೆಗೂದಲನ್ನು ಒಬ್ಬ ಎತ್ತಿ ಹಿಡಿದಿರುವ ಪೊಟೋವೊಂದನ್ನು ಮಾರ್ಚ್ 15ರ ಪತ್ರಿಕೆಯೊಂದು ಪ್ರಕಟಿಸದೇ ಇರುತ್ತಿದ್ದರೆ ಈ ಘಟನೆಯೂ ಹತ್ತರಲ್ಲಿ ಹನ್ನೊಂದಾಗಿ ಬಿಡುವ ಎಲ್ಲ ಸಾಧ್ಯತೆಯೂ ಇತ್ತು. ಆಘಾತದ ಸಂಗತಿಯೆಂದರೆ, ಅಲ್ಲಿ ನೆರೆದಿರುವವರ ಮೌನ ಮನಸ್ಥಿತಿ. ಅವರೆಲ್ಲ ಪರಿವಾರದ ಬೆಂಬಲಿಗರೆಂದಲ್ಲ. ಆದರೆ ಮುಸ್ಲಿಮರ ವಿರುದ್ಧ ದ್ವೇಷ ಮತ್ತು ಸಂಶಯದ ಭಾವನೆಗಳನ್ನು ಬಿಜೆಪಿಯೇತರ ಮಂದಿಯಲ್ಲಿ ಕೂಡ ಬಿತ್ತಿ ಬೆಳೆಸಲು ಅದಕ್ಕೆ ಸಾಧ್ಯವಾಗಿತ್ತು. ಹಾಗಂತ, ನೋಡುಗರಿಗೆಲ್ಲ ಮುಸ್ಲಿಮರ ಬಗ್ಗೆ ಅಸಾಧ್ಯ ದ್ವೇಷ ಇತ್ತು ಎಂದಲ್ಲ. ಆದರೆ ಅವರನ್ನು ಥಳಿಸುವುದು, ಅವಮಾನಿಸುವುದೆಲ್ಲ ‘ನಾವು ಪ್ರತಿಭಟಿಸುವಷ್ಟು' ಗಂಭೀರ ಪ್ರಕರಣ ಅಲ್ಲ ಎಂಬ ಭಾವನೆಯೊಂದನ್ನು ಪರಿವಾರ ಈ ಜಿಲ್ಲೆಗಳಲ್ಲಿ ಒಂದು ಹಂತದ ವರೆಗೆ ಬಿತ್ತಿ ಬಿಟ್ಟಿದೆ. ಜರ್ಮನಿಯಲ್ಲಿ ಯಹೂದಿಯರ ಮೇಲೆ ಸೇನೆಯು ನಡೆಸುತ್ತಿದ್ದ ನರಮೇಧವನ್ನು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದ ಜರ್ಮನಿಯ ಜನಸಾಮಾನ್ಯರ ಬಗ್ಗೆ ಬರೆಯುತ್ತಾ ಖ್ಯಾತ ಲೇಖಕ ಗುಂಥರ್‍ಗ್ರಾಸ್,             ‘ಅವರು ಯಾರೂ ಅಸಾಧ್ಯ ದುಷ್ಟರಾಗಿರಲಿಲ್ಲ. ಅವರೆಲ್ಲ ಭಾನುವಾರ ಸಂಜೆ ತಮ್ಮ ಮಕ್ಕಳನ್ನು ಪಾರ್ಕಿಗೆ ಕರಕೊಂಡು ಹೋಗಿ ಐಸ್‍ಕ್ರೀಮ್ ಕೊಡಿಸುವ ಸದ್ಗೃಹಸ್ಥರಾಗಿದ್ದರು..' ಎಂದಿದ್ದಾರೆ. ಪರಿವಾರ ಈ ಜಿಲ್ಲೆಗಳಲ್ಲಿ ಇಂಥದ್ದೊಂದು ಸದ್ಗೃಹಸ್ಥ ಸಮೂಹವನ್ನು ಕಟ್ಟಲು ಆರಂಭದಿಂದಲೂ ಯತ್ನಿಸಿದೆ. ಅನ್ಯ ಧರ್ಮೀಯ ಹೆಣ್ಣು-ಗಂಡು ಮಾತಾಡಿದ ನೆಪದಲ್ಲಿ ಥಳಿಸುವುದು; ಹೊಟೇಲು-ಪಬ್‍ಗಳಿಗೆ ದಿಢೀರ್ ದಾಳಿ, ಅಕ್ರಮ ಗೋಸಾಗಾಟ, ಲವ್ ಜಿಹಾದ್..ನ ಹೆಸರಲ್ಲಿ ಆಗುವ ಹಿಂಸೆಗಳನ್ನು ನಾಗರಿಕ ಸಮೂಹ ಬಹುತೇಕ ಮೌನದಿಂದ ನೋಡುತ್ತದೆಯೇ ಹೊರತು, ಅದನ್ನು ತಡೆಯುವಲ್ಲಿ ಮುತುವರ್ಜಿ ವಹಿಸಿದ್ದು ಇಲ್ಲವೇ ಇಲ್ಲ.  
      ಕರಾವಳಿಯಲ್ಲಿ ಸಂಘ ಪರಿವಾರ ನಡೆಸುತ್ತಿರುವ ದ್ವೇಷದ ಪ್ರಚಾರಕ್ಕೂ ಈ ಮೌನಕ್ಕೂ ಖಂಡಿತ ಆಳ ಸಂಬಂಧ ಇದೆ. ಆ ದ್ವೇಷದ ಪ್ರಚಾರವನ್ನು ಬಿಜೆಪಿಯೇತರ ಮಂದಿಯೂ ನಂಬುವಷ್ಟರ ಮಟ್ಟಿಗೆ ಅತ್ಯಂತ ಯೋಜಿತವಾಗಿ ಹರಡಿ ಬಿಡಲಾಗುತ್ತಿದೆ. ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ಚೆನ್ನಮ್ಮ ಮೈದಾನವೆಂದು ಕರೆದು, ‘ರಾಷ್ಟ್ರ ಧ್ವಜ ಗೌರವ ಸಂರಕ್ಷಣಾ ಸಮಿತಿ’ ಎಂಬ ತಂಡವನ್ನು ಕಟ್ಟಿಕೊಂಡು ಗಲಭೆಯೆಬ್ಬಿಸಿ ಕರ್ನಾಟಕದ ಉತ್ತರ ಭಾಗವನ್ನು ಬಿಜೆಪಿಯ ತೆಕ್ಕೆಗೆ ಸೆಳೆಯಲು ಪ್ರಹ್ಲಾದ್ ಜೋಷಿ 1992ರ ಬಳಿಕ ನಡೆಸಿದ ತಂತ್ರ ಮತ್ತು ಬುಡನ್‍ಗಿರಿಯನ್ನು ವಿವಾದಿತ ಕೇಂದ್ರವನ್ನಾಗಿಸಿ ಹಿಂದೂ-ಮುಸ್ಲಿಮರನ್ನು ವಿಭಜಿಸಿದ್ದು.. ಎಲ್ಲವೂ ಚುನಾವಣೆಯಲ್ಲಿ ಬಿಜೆಪಿಗೆ ಧಾರಾಳ ಫಲ ಕೊಟ್ಟಿದೆ. ಅದೇ ಪ್ರಹ್ಲಾದ್ ಜೋಷಿ ಈಗ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದಾರೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಮತ್ತೆ ಸಣ್ಣ-ಪುಟ್ಟ ಪ್ರಕರಣಗಳು ನಡೆಯತೊಡಗಿವೆ. ಅಡ್ಡ ಬೆಂಗ್ರೆಯ ಎತ್ತು ಪೊಲೀಸು ಠಾಣೆ ಹತ್ತಿರುವುದು ಅದರ ಒಂದು ಸೂಚನೆ ಅಷ್ಟೇ. ಕೋಮುಗಲಭೆಯಿಲ್ಲದೇ ಚುನಾವಣೆಗೆ ಹೋಗುವುದೆಂದರೆ ಬಿಜೆಪಿಯ ಮಟ್ಟಿಗೆ ಆಯುಧವಿಲ್ಲದೇ ರಣಾಂಗಣಕ್ಕೆ ಇಳಿದಂತೆ. ಅಂಥದ್ದೊಂದು ಸಾಹಸಕ್ಕೆ ಕೈ ಹಾಕಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಈಗಾಗಲೇ ಕೈ ಸುಟ್ಟುಕೊಂಡಿದೆ. ಆದ್ದರಿಂದ ಮುಂದೆ ಅಸೆಂಬ್ಲಿ ಚುನಾವಣೆಯಲ್ಲೂ ಇದನ್ನೇ ಮುಂದುವರಿಸಿಕೊಂಡು ಹೋಗುತ್ತದೆಂಬ ಬಗ್ಗೆ ಕರಾವಳಿಯಲ್ಲಿ ಯಾರಿಗೂ ನಂಬುಗೆಯಿಲ್ಲ. ಎತ್ತು, ಕರುಗಳೆಲ್ಲ ಮತ್ತೆ ಸುದ್ದಿ ಮಾಡಲು ಪ್ರಾರಂಭಿಸಿರುವುದು ಅವರ ಅನುಮಾನವನ್ನು ಬಲಗೊಳಿಸುತ್ತಿದೆ. ಆದ್ದರಿಂದಲೇ,
ಅಡ್ಡಬೆಂಗ್ರೆಯ ಎತ್ತು ಪೊಲೀಸು ಠಾಣೆಯಿಂದ ತಪ್ಪಿಸಿಕೊಂಡು ಊರಿಗೆ ಬರದಿರಲಿ ಎಂದೇ ಜನಸಾಮಾನ್ಯರು ಪ್ರಾರ್ಥಿಸುತ್ತಿದ್ದಾರೆ..

1 comment:

  1. ಇದು ಕಾನೂನು ಸುವ್ಯವಸ್ಥೆಯ ಸ್ಪಷ್ಟ ಉಲ್ಲಂಘನೆ, ಸೊ ನೀವೆಲ್ಲಾ ಈ ಬಗ್ಗೆ ದೂರು ದಾಖಲಿಸಿದ್ದೀರ? ಸರ್ಕಾರ ಈ ಬಗ್ಗೆ ಗಮನ ಹರಿಸಿಲ್ಲ ಅಂದರೆ ರಾಜ್ಯಪಾಲರನ್ನು ಸಂಪರ್ಕಿಸಬಹುದು, ಮಾಡಿದ್ದೀರಾ? ಎಲ್ಲಕ್ಕಿಂತಾ ಹೆಚ್ಚಾಗಿ ಪ್ರತಿಪಕ್ಷಗಳು ಇಂತಾ ವಿಷಯಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತವೆ ಆದರೆ ನಮಗೆ ಇದುವರೆಗೂ ಅಂತಾ ಕಾಳಜಿ ಅವರಿಂದ ಕಂಡು ಬಂದಿಲ್ಲ ಹಾಗಿದ್ದರೆ ಅವರು ಇದರಲ್ಲಿ ಬಾಗಿಗಳೇ? ಮುಖ್ಯವಾಗಿ ಇಂತಾ ವಿಷಯಗಳು ಪ್ರಮುಖ ಮಾಧ್ಯಮಗಳಿಂದ ದೂರ ಇರುವುದಾದರೂ ಹೇಗೆ? ಹೀಗೆ ಈ ಬ್ಲಾಗ್ ಓದಿದಾಗ ಅನೇಕ ಪ್ರಶ್ನೆಗಳು ನಮ್ಮ ಮುಂದೆ ಬರುತ್ತವೆ, ಇದಕ್ಕೆ ನೀವು ಉತ್ತರಿಸುವಿರೇ? ನನ್ನ ಪ್ರಶ್ನೆಗಳನ್ನ ಕೇಳಿ ನೀವು ನಾನು ಬಿಜೆಪಿ ಕಾರ್ಯಕರ್ತ ಅಂದುಕೊಳ್ಳಬಹುದು ಆದರೆ ಖಂಡಿತ ಅಲ್ಲಾ....

    ReplyDelete