Tuesday, March 5, 2013

ಈ ಬ್ಲ್ಯಾಕ್ ನ ಎದುರು ಆ ಯೆಲ್ಲೋ ಏನೇನೂ ಅಲ್ಲ..

1. ಗಾಬರಿ ಹುಟ್ಟಿಸುವ, ತಪ್ಪು ದಾರಿಗೆಳೆಯುವ ಶೀರ್ಷಿಕೆಗಳು.
2. ಅನಗತ್ಯವಾಗಿ ಮತ್ತು ಧಾರಾಳವಾಗಿ ಚಿತ್ರಗಳನ್ನು ಬಳಸುವುದು.
3. ಸುಳ್ಳು ಸುದ್ದಿಗಳನ್ನು ಕಲ್ಪಿತ ವಿವರಣೆಗಳೊಂದಿಗೆ ಕೊಡುವುದು.
4. ಸುದ್ದಿಗಳು ಉತ್ಪ್ರೇಕ್ಷಿತವಾಗಿ ಅತಿ ಭಾವುಕತೆಯಿಂದ ಕೂಡಿರುವುದು.
   ಯೆಲ್ಲೋ ಜರ್ನಲಿಝಮ್ (Yellow journalism - ಪೀತ ಪತ್ರಿಕೋದ್ಯಮ) ಎಂಬ ಪದ ಪ್ರಯೋಗವಾದಾಗಲೆಲ್ಲಾ ಅಮೇರಿಕದ ಫ್ರಾಂಕ್ ಲುದರ್‍ಮೋಟ್ ನೆನಪಾಗುತ್ತಾನೆ. ಪುಲಿಟ್ಝರ್ ಪ್ರಶಸ್ತಿ ವಿಜೇತ ಪತ್ರಕರ್ತನಾಗಿರುವ ಈತ, ಪೀತ ಪತ್ರಿಕೋದ್ಯಮದ ಲಕ್ಷಣಗಳನ್ನು ಮೊತ್ತಮೊದಲು ಪಟ್ಟಿ ಮಾಡಿದಾತ. ಆವರೆಗೆ ಯೆಲ್ಲೋ ಜರ್ನಲಿಝಮ್ ಎಂಬ ಪದ ಅಷ್ಟಾಗಿ ಚಾಲ್ತಿಯಲ್ಲಿರಲಿಲ್ಲ. ಓದುಗರಲ್ಲೂ ಆ ಬಗ್ಗೆ ಖಚಿತ ಅಭಿಪ್ರಾಯವಿರಲಿಲ್ಲ. ನಿಜವಾದ ಪತ್ರಿಕೋದ್ಯಮವೆಂದರೆ ‘ಇದು’ ಮತ್ತು ‘ಇದಲ್ಲ’ ಎಂದು ದೃಢವಾಗಿ ಹೇಳುವಂಥ ಪ್ರಯತ್ನಗಳೂ ಆ ವರೆಗೆ ನಡೆದಿರಲಿಲ್ಲ. ಆದರೆ 1896ರ ಬಳಿಕ ಅಮೇರಿಕದಲ್ಲಿ ಕಾಣಿಸಿಕೊಂಡ ಈ ಯೆಲ್ಲೋ ಜರ್ನಲಿಝಮನ್ನು ಅತ್ಯಂತ ಆಸಕ್ತಿಯಿಂದ ಗಮನಿಸಿಕೊಂಡು ಬಂದ ಫ್ರಾಂಕ್, 1941ರಲ್ಲಿ ಮೇಲಿನಂತೆ ಅದರ ಲಕ್ಷಣಗಳನ್ನು ಪಟ್ಟಿ ಮಾಡಿದ. ಅದು ವ್ಯವಸ್ಥೆ ಮತ್ತು ಸಮಾಜದ ಮೇಲೆ ಬೀರುವ ಅಡ್ಡ ಪರಿಣಾಮಗಳ ಬಗ್ಗೆಯೂ ವಿವರಿಸಿದ. ಆತನ ಈ ಅಧ್ಯಯನಕ್ಕೆ ಕಾರಣವೂ ಇದೆ..
1 ಜೋಸೆಫ್ ಪುಲಿಟ್ಝರ್
2 ವಿಲಿಯಂ ರ್ಯಾಂಡಲ್ಪ್ ಹಸ್ರ್ಟ್
   ಯೆಲ್ಲೋ ಜರ್ನಲಿಝಮ್‍ಗೆ ಜನ್ಮ ಕೊಟ್ಟದ್ದೇ ಈ ಇಬ್ಬರು ಅಮೇರಿಕದ ಪತ್ರಿಕೋದ್ಯಮಿಗಳು. 1883ರಲ್ಲಿ ದಿ ನ್ಯೂಯಾರ್ಕ್ ವರ್ಲ್ದ್  ಎಂಬ ಪತ್ರಿಕೆಯನ್ನು ಜೋಸೆಫ್ ಪುಲಿಟ್ಝರ್ ಖರೀದಿಸಿದ. ಆಗ ಆ ಪತ್ರಿಕೆಯ ಪ್ರಸಾರ ಸಂಖ್ಯೆ ತೀರಾ ತಳಮಟ್ಟದಲ್ಲಿತ್ತು. ಆತ ಪತ್ರಿಕೆಯ ಇಡೀ ಸ್ವರೂಪವನ್ನೇ ಬದಲಿಸಲು ತೀರ್ಮಾನಿಸಿದ. ಪತ್ರಿಕೆಯ ದರವನ್ನು ಇಳಿಸಿದ. ಪುಟಗಳನ್ನು 12ಕ್ಕೆ ಏರಿಸಿದ. ಆವತ್ತು ಇತರ ಪತ್ರಿಕೆಗಳು ಅಷ್ಟೇ ದರದಲ್ಲಿ ಕೇವಲ 4 ಪುಟಗಳನ್ನಷ್ಟೇ ನೀಡುತ್ತಿದ್ದವು. ಅಲ್ಲದೇ ಪತ್ರಿಕೆಯಲ್ಲಿ ಕ್ರೈಮ್ ನ್ಯೂಸ್‍ಗಳಿಗೆ ಮುಖಪುಟದಲ್ಲೇ ಜಾಗ ಕೊಟ್ಟ. ರಸವತ್ತಾದ, ಮಸಾಲೆಭರಿತ ಸುದ್ದಿಗಳನ್ನು ಧಾರಾಳ ಕೊಡತೊಡಗಿದ. ಈ ಮೂಲಕ ಓದುಗರಲ್ಲಿ ಒಂದು ಬಗೆಯ ಥ್ರಿಲ್ ಅನ್ನು ಹುಟ್ಟಿಸಲು ಪುಲಿಟ್ಝರ್ ಯಶಸ್ವಿಯಾದ. ಹೀಗೆ ಕೇವಲ ಎರಡೇ ವರ್ಷಗಳಲ್ಲಿ ಇಡೀ ನ್ಯೂಯಾರ್ಕ್ ನಗರದಲ್ಲೇ ಅತ್ಯಂತ ಹೆಚ್ಚು ಖರ್ಚಾಗುವ ಪತ್ರಿಕೆಯಾಗಿ ನ್ಯೂಯಾರ್ಕ್ ವರ್ಲ್ದ್  ಅನ್ನು ತಂದು ನಿಲ್ಲಿಸಿದ. ನಿಜವಾಗಿ, ಸಮಸ್ಯೆ ಪ್ರಾರಂಭವಾದದ್ದೇ ಇಲ್ಲಿ. ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ಕಲಿಯುತ್ತಿದ್ದ ವಿಲಿಯಂ ರಾಂಡಲ್ಪ್ ಹರ್ಸ್ಟ್  ಎಂಬ ವಿದ್ಯಾರ್ಥಿ ಈ ಬೆಳವಣಿಗೆಯನ್ನು ಆಸಕ್ತಿಯಿಂದ ಗಮನಿಸುತ್ತಿದ್ದ. ಸಣ್ಣ ಅವಧಿಯಲ್ಲಿ ಪುಲಿಟ್ಝರ್ ಏರಿದ ಎತ್ತರ ಆತನನ್ನು ಚಕಿತಗೊಳಿಸಿತ್ತು. ಅಲ್ಲದೇ ಹರ್ಸ್ಟ್ ನ ತಂದೆಯು ‘ಸ್ಯಾನ್ ಫ್ರಾನ್ಸಿಸ್ಕೋ ಎಕ್ಸಾಮಿನರ್’ ಎಂಬ ಪತ್ರಿಕೆಯನ್ನು ನಡೆಸುತ್ತಿದ್ದುದರಿಂದ ಆತನ ಕುತೂಹಲ ಸಹಜವೂ ಆಗಿತ್ತು. ಅಪ್ಪನಿಂದ ‘ಎಕ್ಸಾಮಿನರ್’ ಪತ್ರಿಕೆಯನ್ನು ಪಡಕೊಂಡ ಆತ, ಶೇ. 25ರಷ್ಟು ಜಾಗವನ್ನು ಕ್ರೈಮ್ ನ್ಯೂಸ್‍ಗೇ ಮೀಸಲಿಟ್ಟ. ಇದರ ಮಧ್ಯೆಯೇ, ದಿ ನ್ಯೂಯಾರ್ಕ್ ಜರ್ನಲ್ ಎಂಬ ಪತ್ರಿಕೆಯನ್ನು 1895ರಲ್ಲಿ ಖರೀದಿಸಿದ. ಮಾತ್ರವಲ್ಲ, ನ್ಯೂಯಾರ್ಕ್ ವರ್ಲ್ದ್ ನೊಂದಿಗೆ ಸೆಣಸುವುದಕ್ಕಾಗಿ ದರ ಸಮರಕ್ಕಿಳಿದ. ಪತ್ರಿಕೆಯ ಬೆಲೆಯನ್ನು ಇಳಿಸಿದ. ಭಾವುಕ ಶೀರ್ಷಿಕೆ, ನೈತಿಕ-ಅನೈತಿಕತೆಯನ್ನು ಪರಿಗಣಿಸದ ಚಿತ್ರಗಳು ಮತ್ತು ಮಸಾಲೆ ಲೇಪಿತ ವಿವರಗಳನ್ನು ಪತ್ರಿಕೆಯಲ್ಲಿ ಕೊಡತೊಡಗಿದ. ಎರಡೇ ವರ್ಷಗಳಲ್ಲಿ ನ್ಯೂಯಾರ್ಕ್ ಜರ್ನಲ್‍ನ ಪ್ರಸಾರ ಸಂಖ್ಯೆಯು ನ್ಯೂಯಾರ್ಕ್ ವರ್ಲ್ದ್ ನ  ಪ್ರಸಾರ ಸಂಖ್ಯೆಗೆ ಸಮವಾಗುವಷ್ಟರ ಮಟ್ಟಿಗೆ ಏರಿಬಿಟ್ಟಿತು. ಒಂದು ರೀತಿಯಲ್ಲಿ ಯೆಲ್ಲೋ ಜರ್ನಲಿಝಮ್ ಹುಟ್ಟು ಪಡೆದದ್ದೇ ಇಲ್ಲಿ. ಆದರೆ ಅದು ಅಷ್ಟಕ್ಕೇ ನಿಲ್ಲಲಿಲ್ಲ.
   ಅಮೇರಿಕ - ಸ್ಪೈನ್ ನಡುವೆ ಯುದ್ಧ..
ಬಹುತೇಕ 1800ರಲ್ಲಿಯೇ ಕ್ಯೂಬಾವು ಸ್ಪೈನ್‍ನ ವಸಾಹತು ಆಗಿತ್ತು. ಈ ವಸಾಹತಿನ ವಿರುದ್ಧ ಕ್ಯೂಬಾದಲ್ಲಿ ಬಂಡಾಯವೂ ಕಾಣಿಸಿಕೊಂಡಿತ್ತು. ಆದರೆ ಸ್ಪೈನ್ ಸುಲಭದಲ್ಲಿ ಈ ಬಂಡಾಯಕ್ಕೆ ಮಣಿಯುವಂತೆ ಕಾಣುತ್ತಿರಲಿಲ್ಲ. ತನ್ನ ನೆರೆಯಲ್ಲಿ ನಡೆಯುತ್ತಿದ್ದ ಈ ಬೆಳವಣಿಗೆಯನ್ನು ಅಮೇರಿಕ ಆಸಕ್ತಿಯಿಂದ ಗಮನಿಸುತ್ತಿತ್ತು. ಕ್ಯೂಬಾದ ಮೇಲೆ ಸ್ಪೈನ್ ಹಕ್ಕು ಸಾಧಿಸುವುದು ಅಮೇರಿಕಕ್ಕೆ ಎಳ್ಳಷ್ಟೂ ಇಷ್ಟವಿರಲಿಲ್ಲ. 1823ರಲ್ಲೇ ಸ್ಪೈನ್‍ಗೆ ಅದು ಎಚ್ಚರಿಕೆಯನ್ನೂ ಕೊಟ್ಟಿತ್ತು. ಈ ಮಧ್ಯೆ 1898ರಲ್ಲಿ ಅಮೇರಿಕದ USS ಮೈನೆ ಎಂಬ ಹಡಗು ಕ್ಯೂಬಾದ ಹವಾನಾ ಬಂದರಿನಲ್ಲಿ ಅನುಮಾನಾಸ್ಪದವಾಗಿ ಮುಳುಗಿಬಿಟ್ಟಿತು. ಅದಾಗಲೇ ಬದ್ಧ ವೈರಿಗಳಂತೆ ಕಾದಾಟದಲ್ಲಿ ತೊಡಗಿದ್ದ ನ್ಯೂಯಾರ್ಕ್ ಜರ್ನಲ್ ಮತ್ತು ನ್ಯೂಯಾರ್ಕ್ ವರ್ಲ್ದ್ ಗಳು ಈ ಸುದ್ದಿಗೆ ತಮ್ಮಿಷ್ಟದ ವ್ಯಾಖ್ಯಾನಗಳನ್ನು ಕೊಡತೊಡಗಿದುವು. ಹಡಗನ್ನು ಯಾರು ಮುಳುಗಿಸಿರಬಹುದು ಎಂಬ ಚರ್ಚೆಯನ್ನು ಪ್ರಾರಂಭಿಸಿ ಕಪೋಲ ಕಲ್ಪಿತ ವಿವರಗಳನ್ನು ಸೃಷ್ಟಿ ಮಾಡಿದುವು. ಅಮೇರಿಕದ ಅಧ್ಯಕ್ಷ  ವಿಲಿಯಂ ಮೆಕಿನ್ಲೆಗೆ ಗೊತ್ತಿಲ್ಲದ ಗುಪ್ತ ಮಾಹಿತಿಗಳನ್ನು ಅವು ಪ್ರಕಟಿಸಿದುವು. ಇಷ್ಟಕ್ಕೂ, ಆ ವರದಿಗಳಿಗೆ  ಆಧಾರಗಳಿತ್ತು ಎಂದಲ್ಲ. ಆಧಾರಗಳಿರುವ ಸುದ್ದಿಗಳನ್ನು ಮಾತ್ರ ಪ್ರಕಟಿಸಬೇಕೆಂಬ ಮೂಲ ತತ್ವಗಳಿಂದ ಅವೆರಡೂ ಯಾವಾಗಲೋ ಹೊರಹೋಗಿತ್ತು. ಆದ್ದರಿಂದಲೇ ರಂಗುರಂಗಾದ, ಕುತೂಹಲಕರ ಸುದ್ದಿ, ವಿಶ್ಲೇಷಣೆ ಗಳು ದಿನಾ ಬರತೊಡಗಿದುವು. ಹಡಗನ್ನು ಮುಳುಗಿಸಿದ್ದು ಸ್ಪೈನ್ ಎಂದು ಅವು ಸ್ವತಃ ಕಂಡಂತೆ ಬರೆದುವು. ಸ್ಪೈನ್‍ನ ದಬ್ಬಾಳಿಕೆ, ಕ್ಯೂಬನ್ನರ ಅಸಹಾಯಕತೆಯ ಕತೆಗಳು ಧಾರಾಳ ಅಚ್ಚಾಗತೊಡಗಿದುವು. ಪತ್ರಿಕೆಗಳ ಸುದ್ದಿಗಳಿಂದ ಪ್ರಭಾವಿತರಾದ ಅಮೇರಿಕನ್ನರು ಸ್ಪೈನ್ ವಿರುದ್ಧ ಸಿಟ್ಟಾಗತೊಡಗಿದರು. ಕೊನೆಗೆ ಸಾರ್ವಜನಿಕ ಒತ್ತಡಕ್ಕೆ ಮಣಿದು ಅಧ್ಯಕ್ಷ  ಮೆಕಿನ್ಲೆ, ಸ್ಪೈನ್‍ನ ವಿರುದ್ಧ ಯುದ್ಧ ಸಾರಬೇಕಾಯಿತು. ಯುದ್ಧದ ಸಚಿತ್ರ ವರದಿ, ಪೋಟೋಗಳನ್ನು ಪಡಕೊಳ್ಳುವುದಕ್ಕಾಗಿ ಎರಡೂ ಪತ್ರಿಕೆಗಳು ತಮ್ಮ ವರದಿಗಾರರನ್ನು ಕಳುಹಿಸಿದುವು. ಅವರಲ್ಲಿ ನ್ಯೂಯಾರ್ಕ್ ಜರ್ನಲ್‍ನ ಫೆಡ್ರಿಕ್ ರೆಮಿಂಗ್ಟನ್ ಎಂಬ ಕಲಾವಿದನೂ (ಕುಂಚದಲ್ಲಿ ಯುದ್ಧದ ಚಿತ್ರ ಬಿಡಿಸುವವ) ಸೇರಿದ್ದ. ಆತ ಅಲ್ಲಿಗೆ ಹೋಗಿ ನೋಡುವಾಗ, ಪತ್ರಿಕೆಯಲ್ಲಿ ಪ್ರಕಟವಾದಂಥ ಸನ್ನಿವೇಶವೇನೂ ಕಾಣಿಸಲಿಲ್ಲ. ಪತ್ರಿಕೆಯಲ್ಲಿ ಏನೆಲ್ಲ ಪ್ರಕಟವಾಗುತ್ತಿತ್ತೋ ಅವೆಲ್ಲ ಕಲ್ಪಿತ ಎನ್ನುವುದು ಆತನಿಗೆ ಮನವರಿಕೆಯಾಗಿ ಬಿಟ್ಟಿತ್ತು. ವರದಿ ಮಾಡಲು ಕುತೂಹಲ ಕಾರಿಯಾದಂಥ ಏನೊಂದೂ ಇಲ್ಲವೆಂದ ಮೇಲೆ ಆತ ಅಲ್ಲಿರುವ ಅಗತ್ಯವಾದರೂ ಏನಿರುತ್ತದೆ? ಆದ್ದರಿಂದ ಆತ, 'ನನ್ನನ್ನು ಹಿಂದಕ್ಕೆ ಕರೆಸಿಕೊಳ್ಳಿ, ಇಲ್ಲಿ ಯುದ್ಧವೇ ನಡೀತಿಲ್ಲ..' ಎಂದು ಹರ್ಸ್ಟ್ ಗೆ ಟೆಲಿಗ್ರಾಮ್ ಕಳುಹಿಸಿದ. ಆದರೆ, 'ನೀನು ಅಲ್ಲೇ ಇದ್ದು ನನಗೆ ಚಿತ್ರವನ್ನು (ಯುದ್ಧದ ಕಲ್ಪಿತ ಚಿತ್ರ) ಒದಗಿಸು,  ನಾನು ಯುದ್ಧ ವನ್ನು ಒದಗಿಸುತ್ತೇನೆ' (you furnish the pictures and i will furnish the war) ಎಂದು ಹರ್ಸ್ಟ್ ಮರಳಿ ಉತ್ತರ ಕೊಟ್ಟ.
   ಹೀಗೆ ತನ್ನ ಸುಳ್ಳು, ಉತ್ಪ್ರೇಕ್ಷಿತ ಪತ್ರಿಕೋದ್ಯಮದ (ಯೆಲ್ಲೋ ಜರ್ನಲಿಝಂ) ಮೂಲಕ ಅಮೇರಿಕವನ್ನು ಯುದ್ಧಕ್ಕೆ ದೂಡುವಲ್ಲಿ ಮತ್ತು ಪತ್ರಿಕೆಯ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಹರ್ಸ್ಟ್  ಯಶಸ್ವಿಯಾದ. ಅಂದಹಾಗೆ,
   ಇಂಥ ಪತ್ರಿಕೋದ್ಯಮ 19ನೇ ಶತಮಾನದ ಪಿಡುಗಾಗಿಯಷ್ಟೇ ಇವತ್ತು ಉಳಿದಿದೆಯೇ? ಮೊನ್ನೆಯ ಹೈದಬಾರಾದ್ ಸ್ಫೋಟದ ಸಮಯದಲ್ಲಿ ಹೆಚ್ಚಿನ ಪತ್ರಿಕೆ ಮತ್ತು ಚಾನೆಲ್‍ಗಳು ಕಾಯ್ದುಕೊಂಡ ಸಂಯಮವನ್ನು ಈ ಹಿಂದಿನ ಎಷ್ಟು ಸಂದರ್ಭಗಳಲ್ಲಿ ಕಾಯ್ದುಕೊಂಡಿವೆ? ಈ ಹಿಂದೆ ಅವು ಪ್ರಕಟಿಸಿದ ಚಿತ್ರಗಳು, ವಿಶ್ಲೇಷಣೆಗಳು, ಮುಖಪುಟ ಶೀರ್ಷಿಕೆಗಳೆಲ್ಲ ಯಾವ ಯೆಲ್ಲೋ ಜರ್ನಲಿಝಮ್‍ಗಿಂತ ಕಡಿಮೆಯಿದ್ದುವು? 6 ತಿಂಗಳ ಹಿಂದೆ ಪತ್ರಕರ್ತ ಮುತೀಉರ್ರಹ್ಮಾನ್ ಸಹಿತ ಕೆಲವು ಯುವಕರನ್ನು ಬೆಂಗಳೂರಿನ ಪೊಲೀಸರು ಬಂಧಿಸಿದರಲ್ಲ, ಆ ಸಂದರ್ಭದಲ್ಲಿ ಮಾಧ್ಯಮಗಳು ವರ್ತಿಸಿದ ರೀತಿ ಹೇಗಿತ್ತು? 19ನೇ ಶತಮಾನದ ನ್ಯೂಯಾರ್ಕ್ ವರ್ಲ್ದ್  ಮತ್ತು ಜರ್ನಲ್‍ಗಳನ್ನು ನಾಚಿಸುವಷ್ಟು ಅವು ಯೆಲ್ಲೋ  ಪೀಡಿತವಾಗಿರಲಿಲ್ಲವೇ? ವಿಲಿಯಂ ಹರ್ಸ್ಟ್  ಮತ್ತು ಪುಲಿಟ್ಝರ್‍ನನ್ನೂ ಮೀರಿಸುವ ಸಾಹಸವನ್ನು ನಮ್ಮ ಕೆಲವು ಪತ್ರಕರ್ತರು ಮಾಡಿದ್ದನ್ನು ಮರೆಯಲಾದೀತೇ? 19ನೇ ಶತಮಾನದಲ್ಲಿ ಪ್ರಾರಂಭವಾದ ಈ ಯೆಲ್ಲೋ ಜರ್ನಲಿಝಮ್ ಈ 21ನೇ ಶತಮಾನದಲ್ಲೂ ಮುಂದುವರಿಯುತ್ತದೆಂದರೆ ಮತ್ತು ಅದನ್ನು ನಿರ್ಲಜ್ಜೆಯಿಂದ ಸಮರ್ಥಿಸಿಕೊಳ್ಳಲಾಗುತ್ತದೆಂದರೆ, ಅದಕ್ಕೆ ಏನೆನ್ನ ಬೇಕು? ಮಾಧ್ಯಮಗಳನ್ನು ನಿಯಂತ್ರಿಸುವುದಕ್ಕೂ ಒಂದು ಸಂಸ್ಥೆಯಿರಬೇಕು ಎಂಬ ಒತ್ತಾಯಕ್ಕೆ ಇಂಥ ಘಟನೆಗಳನ್ನು ಯಾಕೆ ಆಧಾರವಾಗಿ ಎತ್ತಿಕೊಳ್ಳಬಾರದು? ಇಷ್ಟಕ್ಕೂ, ಇವತ್ತು ಹೆಚ್ಚಿನ ಮಾಧ್ಯಮಗಳು ಉದ್ದಿಮೆದಾರರ ಕೈಯಲ್ಲೇ ಇವೆ. ಲಾಭವೇ ಇವರ ಮುಖ್ಯ ಗುರಿ. ಅದು ತಪ್ಪು ಎಂದಲ್ಲ. ಆದರೆ ಅದಕ್ಕಾಗಿ ಸಮಾಜವನ್ನು ಪೀಡಿಸಿ, ಬೆತ್ತಲೆಗೊಳಿಸಿ, ಅವಮಾನಿಸುವುದನ್ನು ಯಾಕೆ ಸಹಿಸಬೇಕು? ಮಾಧ್ಯಮ ಕ್ಷೇತ್ರವೊಂದನ್ನು ಬಿಟ್ಟು ಉಳಿದ ಕ್ಷೇತ್ರಗಳನ್ನು ಒಮ್ಮೆ ಅವಲೋಕಿಸಿಕೊಳ್ಳಿ. ನ್ಯಾಯವಾದಿಗಳು ತಮ್ಮ ವೃತ್ತಿ ಬದುಕಿನಲ್ಲಿ ತಪ್ಪು ಮಾಡಿದರೆ ಅವರ ಲೈಸೆನ್ಸನ್ನು ರದ್ದುಪಡಿಸುವ ಅಥವಾ ಅಮಾನತ್ತಿನಲ್ಲಿಡುವ ಅಧಿಕಾರ ಬಾರ್ ಕೌನ್ಸಿಲ್‍ಗಿದೆ. ಸುಪ್ರೀಮ್ ಕೋರ್ಟ್‍ ನ  ನ್ಯಾಯಾಧೀಶರು ಅಥವಾ ಹೈಕೋರ್ಟಿನ ನ್ಯಾಯಾಧೀಶರು 'ಕ್ರಮ' ತಪ್ಪಿದರೆ ಪಾರ್ಲಿಮೆಂಟ್  ವಾಗ್ದಂಡನೆ (Impeachment) ವಿಧಿಸುತ್ತದೆ. ಇದೇ ರೀತಿ ವೈದ್ಯರು, ಚಾರ್ಟರ್ಡ್ ಅಕೌನ್ ಟೆನ್ಸ್ ಗಳೆಲ್ಲ ವೃತ್ತಿ ಬದುಕಿನ ಗೌರವವನ್ನು ಕಾಪಾಡದಿದ್ದರೆ ಸಂಬಂಧಿತ ಸಂಸ್ಥೆಗಳು ಕ್ರಮ ಜರುಗಿಸುತ್ತವೆ. ಹಾಗಂತ ಮಾಧ್ಯಮ ಕ್ಷೇತ್ರದಲ್ಲಿ ಇಂಥದ್ದೊಂದು ಸಂಸ್ಥೆ ಇರದಿರುವುದಕ್ಕೆ ಕಾರಣವೇನು? ಮಾಧ್ಯಮಗಳು ತಮ್ಮನ್ನು ಸ್ವಯಂ ನಿಯಂತ್ರಿಸಿಕೊಳ್ಳಲಾರವು ಎಂಬುದಕ್ಕೆ 'ಸ್ಫೋಟ' ಪ್ರಕರಣಗಳ ಸಂದರ್ಭಗಳಲ್ಲಿ ಪ್ರಕಟವಾಗುವ ಸುದ್ದಿಗಳೇ ಪುರಾವೆಯಲ್ಲವೇ? ಇಷ್ಟಿದ್ದೂ, ಮಾಧ್ಯಮ ಪ್ರಮುಖರೇಕೆ 'ಸ್ವನಿಯಂತ್ರಣ' ಹಕ್ಕಿನ ಬಗ್ಗೆ ವಾದಿಸುತ್ತಿದ್ದಾರೆ? ಇತರೆಲ್ಲ ಕ್ಷೇತ್ರಗಳಿಗೆ ಸಾಧ್ಯವಾಗದ ಸ್ವನಿಯಂತ್ರಣವು ಮಾಧ್ಯಮ ಕ್ಷೇತ್ರಕ್ಕೆ ಸಾಧ್ಯ ಎಂದು - ಅದೂ ಇಷ್ಟೆಲ್ಲಾ ವೈಫಲ್ಯಗಳ ಬಳಿಕವೂ - ವಾದಿಸುವುದು ಎಷ್ಟು ಸರಿ? ಈ ದೇಶದಲ್ಲಿ ಕಳ್ಳತನಕ್ಕೆ ಪ್ರತ್ಯೇಕವಾದ ದಂಡಸಂಹಿತೆ ಇದೆ. ಅತ್ಯಾಚಾರಕ್ಕೆ, ಮೋಸಕ್ಕೆ, ಕೊಲೆ.. ಹೀಗೆ ಎಲ್ಲದಕ್ಕೂ ಬೇರೆ ಬೇರೆ ಕಾನೂನುಗಳಿವೆ. ಹಾಗಂತ, ಈ ದಂಡಸಂಹಿತೆಗಳನ್ನೆಲ್ಲಾ ರದ್ದುಪಡಿಸಿಬಿಡಿ, ನಾವು ಸ್ವಯಂ ನಿಯಂತ್ರಣ ಮಾಡಿಕೊಳ್ಳುತ್ತೇವೆ ಎಂದು ಕಳ್ಳರು, ಅತ್ಯಾಚಾರಿಗಳು, ವಂಚಕರು ಹೇಳಿದರೆ ಅದನ್ನು ಒಪ್ಪಿಕೊಳ್ಳಲಾಗುತ್ತಾ?
   ವಿಲಿಯಂ ಹರ್ಸ್ಟ್  ಮತ್ತು ಪುಲಿಟ್ಝರ್ 19ನೇ ಶತಮಾನದಲ್ಲಿ ಪ್ರಾರಂಭಿಸಿದ ಯೆಲ್ಲೋ ಜರ್ನಲಿಝಮನ್ನು ಇವತ್ತು ಹೆಚ್ಚಿನೆಲ್ಲಾ ಮಾಧ್ಯಮ ಕೇಂದ್ರಗಳೂ ಗೌರವಪೂರ್ವಕ ನೆಚ್ಚಿಕೊಂಡಿವೆ. ಉತ್ಪ್ರೇಕ್ಷಿತ, ಕಪೋಲ ಕಲ್ಪಿತ, ಸುಳ್ಳು ಸುದ್ದಿಗಳು ಮತ್ತು ಶೀರ್ಷಿಕೆಗಳನ್ನೇ ಹೆಚ್ಚಿನ ಪತ್ರಿಕೆಗಳು ತಮ್ಮ ಮಾರಾಟ ತಂತ್ರವಾಗಿ ಅಳವಡಿಸಿಕೊಂಡಿವೆ. ಇಂಥ ಹೊತ್ತಲ್ಲಿ, 19ನೇ ಶತಮಾನದ ಹರ್ಸ್ಟ್ ನನ್ನೋ ಪುಲಿಟ್ಝರ್ ನನ್ನೋ ದೂರಿ ಪ್ರಯೋಜನವಿಲ್ಲ. ಬುದ್ಧಿವಂತಿಕೆ, ಸುದ್ದಿ ಸೃಷ್ಟಿಸುವಿಕೆ, ಮಾರಾಟ ತಂತ್ರದಲ್ಲಿ ಅವರಿಬ್ಬರನ್ನೂ ಮೀರಿಸುವ ನಿಪುಣರು ಇವತ್ತು ಮಾಧ್ಯಮ ಕೇಂದ್ರದಲ್ಲಿ ಕೂತಿದ್ದಾರೆ. ಬಹುಶಃ ಈಗಿನ ಪತ್ರಿಕೋದ್ಯಮಕ್ಕೆ ಯೆಲ್ಲೋದ ಬದಲು ಬ್ಲ್ಯಾಕ್ (ಕರಾಳ) ಜರ್ನಲಿಝಮ್ ಎಂಬ ಹೆಸರು ಸೂಕ್ತವಾದೀತೇನೋ?

No comments:

Post a Comment