Tuesday, February 26, 2013

ಆ ಸುದ್ದಿಯನ್ನು ಓದಿದ ಬಳಿಕ ಅವರ ಬಗ್ಗೆ ಬರೆಯಬೇಕೆನಿಸಿತು..

   2002 ಜೂನ್ 18
   “ತಿಹಾರ್ ಜೈಲಿನ ‘ವಿಚಾರಣಾಧೀನ ಕೈದಿ'ಗಳ ಕೋಣೆಗೆ ನನ್ನನ್ನು ಕೊಂಡು ಹೋದರು. ಅಲ್ಲೊಂದು ಮೇಜು. ಅದರ ಬಳಿ ಜೈಲು ವರಿಷ್ಠಾಧಿಕಾರಿ ಕುಳಿತಿದ್ದರು. ಅಲ್ಲದೇ ಆ ಕೋಣೆಯಲ್ಲಿ 10-12 ಮಂದಿಯೂ ಇದ್ದರು. ವರಿಷ್ಠಾಧಿಕಾರಿ ನನ್ನ ಹೆಸರು ಕೇಳಿದರು. ನಾನು ಹೇಳಿ ಮುಗಿಸುವುದಕ್ಕಿಂತ ಮೊದಲೇ ಓರ್ವ ನನ್ನ ಕಪಾಳಕ್ಕೆ ಹೊಡೆದ. ಅದರ ಬೆನ್ನಿಗೇ ಏಟುಗಳ ಸುರಿಮಳೆಯಾಯಿತು. ತುಳಿದರು. ಒಬ್ಬಾತ ನನ್ನ ತಲೆಗೂದಲನ್ನು ಹಿಡಿದು ನನ್ನ ಮುಖವನ್ನು ಮೇಜಿಗೆ ಗುದ್ದಿದ. ಕಿವಿ, ಬಾಯಿ, ಮೂಗುಗಳಿಂದ ರಕ್ತ ಸುರಿಯಲಾರಂಭಿಸಿತು. ‘ಸಾಲಾ, ಗದ್ದಾರ್, ಪಾಕಿಸ್ತಾನಿ.. ನಿನ್ನಂಥವರನ್ನು ಬದುಕಿರಲು ಬಿಡಬಾರದು. ದೇಶದ್ರೋಹಿಗಳನ್ನು ಗಲ್ಲಿಗೇರಿಸಬೇಕು..' ಎಂದೆಲ್ಲಾ ಕಿರುಚಾಡಿದರು. ಸುಮಾರು ಅರ್ಧಗಂಟೆಗಳ ಕಾಲ ನಡೆದ ಸಾಮೂಹಿಕ ದೌರ್ಜನ್ಯದಲ್ಲಿ ನಾನು ಪ್ರಜ್ಞೆ ತಪ್ಪಿ ಬಿದ್ದೆ. ಎಚ್ಚರವಾದಾಗ ಮುಖದ ತುಂಬಾ ರಕ್ತದ ಕಲೆಗಳಿದ್ದವು. ಮುಖ ತೊಳೆದು ಬರುವಂತೆ ಆಜ್ಞಾಪಿಸಲಾಯಿತು. ಜೊತೆಗೇ ಇನ್ನೊಂದು ಆಜ್ಞೆ - ಪಾಯಿಖಾನೆ ಸ್ವಚ್ಛ ಮಾಡು. ಆ ಪಾಯಿಖಾನೆ ಎಷ್ಟು ಕೊಳಕಾಗಿತ್ತೆಂದರೆ ಬಸ್ ನಿಲ್ದಾಣಗಳಲ್ಲಿರುವ ಸಾರ್ವಜನಿಕ ಪಾಯಿಖಾನೆಗಳಿಗಿಂತಲೂ ಹೆಚ್ಚು. ಸ್ವಚ್ಛ ಮಾಡುವುದಕ್ಕೆ ಒಂದು ತುಂಡು ಬಟ್ಟೆಗಾಗಿ ಅತ್ತಿತ್ತ ನೋಡಿದೆ. ಶರ್ಟು ಬಿಚ್ಚಿ ಸ್ವಚ್ಛ ಮಾಡು ಎಂಬ ಇನ್ನೊಂದು ಆಜ್ಞೆ ಬಂತು. ಮಾಡದೇ ವಿಧಿ ಇರಲಿಲ್ಲ. ಸ್ವಚ್ಛತಾ ಕಾರ್ಯ ಪೂರ್ಣಗೊಳ್ಳುವುದಕ್ಕೆ ಒಂದು ಗಂಟೆಯಷ್ಟು ದೀರ್ಘ ಕಾಲ ಹಿಡಿಯಿತು. ಬಳಿಕ ನನ್ನನ್ನು ಜೈಲಿನ ವೈದ್ಯನ ಬಳಿಗೆ ಕರೆತರಲಾಯಿತು. ಆತನ ಕೆಲಸ ಏನೆಂದರೆ, ನನ್ನ ದೇಹದ ಮೇಲೆ ಏನಾದರೂ ಗಾಯಗಳಾಗಿದ್ದರೆ ಅದನ್ನು ದಾಖಲಿಸುವುದು. ವೈದ್ಯನು ತನ್ನ ಹತ್ತಿರ ಇದ್ದ ವ್ಯಕ್ತಿಯಲ್ಲಿ, ನನ್ನ ಅಪರಾಧವೇನೆಂದು ಕೇಳಿದ. ಐಎಸ್‍ಐ ಏಜೆಂಟ್ ಎಂದು ಆತ ಉತ್ತರಿಸಿದಾಗ ವೈದ್ಯನೂ ಥಳಿಸಿದ. ಬಳಿಕ ಪಾಯಿಖಾನೆ ಸ್ವಚ್ಛ ಮಾಡಿದ ಅದೇ ಶರ್ಟನ್ನು ಧರಿಸಿಕೊಳ್ಳುವಂತೆ ಆದೇಶಿಸಿದ. ಇಷ್ಟಕ್ಕೂ, ಧರಿಸುವುದು ಬಿಡಿ, ಹತ್ತಿರ ಇಟ್ಟುಕೊಳ್ಳುವುದಕ್ಕೂ ಆ ಶರ್ಟು ಅಯೋಗ್ಯವಾಗಿತ್ತು. ನಾನು ಮೂರು ದಿನಗಳ ಕಾಲ ಅದನ್ನೇ ಧರಿಸಿದೆ. ಜೈಲಿನಲ್ಲಿ ನನ್ನ ದಿನಚರಿ ಹೇಗಿರಬೇಕೆಂದು ಅಧಿಕಾರಿಗಳು ನಿರ್ಧರಿಸಿದ್ದರು. ಬೆಳಗ್ಗೆದ್ದು ಎಲ್ಲ ಸಾಮಾನ್ಯ ಪಾಯಿಖಾನೆಗಳನ್ನೂ ಸ್ವಚ್ಛಗೊಳಿಸಬೇಕು. ಬಳಿಕ ಸ್ನಾನದ ಕೋಣೆ ಮತ್ತು ನೆಲವನ್ನು ಗುಡಿಸಿ ಚೊಕ್ಕವಾಗಿಡಬೇಕು. ಇಷ್ಟೇ ಅಲ್ಲ, ಊಟದ ಬಳಿಕ ಉಳಿದೆಲ್ಲ ಕೈದಿಗಳನ್ನು ಅವರವರ ಕೋಣೆಯಲ್ಲಿ ಕೂಡಿ ಹಾಕಿ ವಿಶ್ರಾಂತಿ ಪಡೆಯಲು ಬಿಡಲಾಗುತ್ತಿದ್ದರೆ, ನನಗೆ ಅದಕ್ಕೂ ಅವಕಾಶ ಇರಲಿಲ್ಲ. ನನ್ನನ್ನು ಮತ್ತು ಇತರ ಕೆಲವು ಮಂದಿಯನ್ನು ಜೈಲಿನೊಳಗಿನ ಕಾಂಕ್ರೀಟು ಕಟ್ಟಡವೊಂದರ ನಿರ್ಮಾಣ ಕೆಲಸದಲ್ಲಿ ದುಡಿಸಲಾಗುತ್ತಿತ್ತು. ಕೈ ತುಂಬಾ ಗಾಯಗಳು.. ಗೀರುಗಳು.. ಬಹುಶಃ ನನಗೆ ಎಷ್ಟು ಕಷ್ಟ ಕೊಡಲು ಸಾಧ್ಯವೋ ಅಷ್ಟನ್ನೂ ಕೊಡಬೇಕೆಂದು ಅಧಿಕಾರಿಗಳಿಗೆ ಯಾರೋ ನಿರ್ದೇಶಿಸಿದಂತೆ ಕಾಣುತ್ತಿತ್ತು..
   ಪತ್ರಕರ್ತ ಇಫ್ತಿಕಾರ್ ಗೀಲಾನಿಯ ಬರಹವನ್ನು ಓದುತ್ತಾ ಹೋದಂತೆ ವ್ಯವಸ್ಥೆಯ ದಾರುಣ ಮುಖವೊಂದು ಅನಾವರಣಗೊಳ್ಳುತ್ತಾ ಹೋಗುತ್ತದೆ.
   2002 ಜೂನ್ 9 - ರವಿವಾರ
ಸಂಸತ್ತಿನ ಮೇಲೆ ದಾಳಿ ನಡೆದು ಐದಾರು ತಿಂಗಳುಗಳಷ್ಟೇ ಆಗಿತ್ತು. ಜೂನ್ 9ರಂದು ಮುಂಜಾನೆ ಆದಾಯ ತೆರಿಗೆ ವಿಭಾಗದ ಅಧಿಕಾರಿಗಳ ವೇಷದಲ್ಲಿ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಬಾಗಿಲು ತಟ್ಟಿದರು. ದೆಹಲಿಯ ಸಣ್ಣ ಫ್ಲಾಟೊಂದರಲ್ಲಿ ಬದುಕುತ್ತಿದ್ದ ನಾನು ಮತ್ತು ಪತ್ನಿ ಅನಿಸಾ, ಬಾಗಿಲು ತೆರೆದೆವು. ತಕ್ಷಣ ನನ್ನೆಡೆಗೆ ಬಂದೂಕು ತೋರಿಸಿ ಅಧಿಕಾರಿಗಳು ಒಳಗಡೆ ಬಂದರು. ಮನೆಯನ್ನಿಡೀ ಜಾಲಾಡಿದರು. ಬೇಕಾದ ಯಾವ ವಸ್ತುವೂ ಸಿಗದೇ ಇದ್ದದ್ದು ಅವರ ಚಿಂತೆಯನ್ನು ಹೆಚ್ಚಿಸಿತು. ಆದರೆ ದಾಳಿಯ ಸುದ್ದಿ ಎಲ್ಲೆಡೆಯೂ ಹಬ್ಬಿರುವುದರಿಂದ ಏನಾದರೂ ಮಾಡಲೇ ಬೇಕೆಂದು ಅಧಿಕಾರಿಗಳು ಪರಸ್ಪರ ಮಾತಾಡುತ್ತಿದ್ದರು. ಒಂದು ರೀತಿಯಲ್ಲಿ, ಯಾವುದೋ ಒಂದು ಯೋಜನೆಯನ್ನು ಇಟ್ಟುಕೊಂಡೇ ಬಂದಿರಬೇಕೆಂದು ಭಾವಿಸುವ ರೀತಿಯಲ್ಲಿ ಅಧಿಕಾರಿಗಳು ವರ್ತಿಸುತ್ತಿದ್ದರು. ಕೊನೆಗೆ ದಾಳಿಯ ತಂಡದ ನಾಯಕ ನನ್ನ ಕಾರಿನ ಕೀ ಕೇಳಿದ. ನಾನು ಮೇಜಿನ ಮೇಲಿದ್ದ ಬಸ್ ಪಾಸನ್ನು ನೀಡಿದೆ. ಆತ ತಬ್ಬಿಬ್ಬಾದ. ನನ್ನಲ್ಲಿ ಕಾರಿಲ್ಲ, ದೆಹಲಿ ಸಂಚಾರ ನಿಗಮದ ಬಸ್‍ಗಳಲ್ಲಿ ನನ್ನ ಪ್ರಯಾಣ ಅನ್ನುವುದನ್ನು ಆತ ನಂಬಲಿಲ್ಲ. ಅಕ್ಕಪಕ್ಕದ ಮನೆ ಗಳಲ್ಲಿ ಈ ಬಗ್ಗೆ ವಿಚಾರಿಸುವಂತೆ ಅಧಿಕಾರಿಗಳನ್ನು ಕಳುಹಿಸಿದ. ಬಳಿಕ ಮೊಬೈಲ್ ಕೇಳಿದ. ಅದೂ ನನ್ನಲ್ಲಿರಲಿಲ್ಲ. ನನ್ನ ಪತ್ನಿಯಲ್ಲಿ ಆಭರಣ ತೋರಿಸುವಂತೆ ವಿನಂತಿಸಿದರು. ಆಕೆ ಕಪಾಟನನ್ನು ತೆರೆದು ಸಣ್ಣದೊಂದು ಆಭರಣವನ್ನು ಅವರ ಕೈಗಿತ್ತಳು. ಅವರಿಗೆ ನಂಬಲಾಗಲಿಲ್ಲ. ನನ್ನ ಇಂಟರ್‍ನೆಟ್ ಪಾಸ್‍ವರ್ಡನ್ನೂ ಕೇಳಿದರು. ಕೊಟ್ಟೆ. ನನ್ನ ಮನೆಯನ್ನಿಡೀ ಜಾಲಾಡಿದ ಬಳಿಕ ಅವರಿಗೆ ಸಿಕ್ಕಿದ್ದು ಬರೇ 3,650 ರೂಪಾಯಿ. ಬೆಳಗ್ಗಿನಿಂದ ಸಂಜೆಯ ವರೆಗೆ ನಮ್ಮಿಬ್ಬರನ್ನು ಮನೆಯಲ್ಲೇ ಕೂಡಿ ಹಾಕಿ ತಪಾಸಿಸಿದ ಸುಮಾರು 60 ಮಂದಿಯ ತಂಡ ಸಂಜೆ 7ರ ಹೊತ್ತಿಗೆ ಮನೆಯ ಟಿ.ವಿ.ಯನ್ನು ಚಾಲನೆಗೊಳಿಸಿತು. ನನ್ನ ಮನೆ ಮೇಲೆ ನಡೆದ ದಾಳಿಯ ವಿವರಗಳು ವಿವಿಧ ಚಾನೆಲ್‍ಗಳಲ್ಲಿ ಬಿತ್ತರವಾಗುತ್ತಿತ್ತು. ನನ್ನ ಮನೆ ಮುಂದೆ ನಿಂತ ಆಜ್‍ತಕ್ ಚಾನೆಲ್‍ನ ದೀಪಕ್ ಚೌರಾಸಿಯ, ನಾನು ತಪ್ಪಿತಸ್ಥನೆಂದು ವರದಿ ಮಾಡುತ್ತಿದ್ದ. ನನ್ನ ಅಪರಾಧವನ್ನು ಸಾಬೀತು ಪಡಿಸಬಲ್ಲಂಥ ಸಾಕ್ಷ್ಯಾಧಾರಗಳಿರುವ ಲ್ಯಾಪ್‍ಟಾಪನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆಂದು ಘೋಷಿಸುತ್ತಿದ್ದ. ನಿಜವಾಗಿ ನನ್ನಲ್ಲಿ ಲ್ಯಾಪ್‍ಟಾಪೇ ಇರಲಿಲ್ಲ. ಪೊಲೀಸರು ದಾಖಲೆಗಳನ್ನೂ ವಶಪಡಿಸಿ ಕೊಂಡಿರಲಿಲ್ಲ. ಅಧಿಕಾರಿಗಳು ಹೇಗೆ ಮಾಧ್ಯಮ ಮಿತ್ರರನ್ನು ದಾರಿ ತಪ್ಪಿಸುವರೆಂಬುದನ್ನು ನೋಡಿ ದಿಗ್ಮೂಢನಾದೆ..
   ಮೈ ಡೇಸ್ ಇನ್ ಪ್ರಿಝನ್ (ನನ್ನ ಜೈಲಿನ ದಿನಗಳು) ಎಂಬ ತನ್ನ ಕೃತಿಯಲ್ಲಿ ಗೀಲಾನಿ ಹೇಳುತ್ತಾ ಹೋಗುತ್ತಾರೆ.
   ಇಷ್ಟಕ್ಕೂ, ಇಫ್ತಿಕಾರ್ ಗೀಲಾನಿಗೂ ಸಂಸತ್‍ನ ಮೇಲೆ ದಾಳಿ ಮಾಡಿದ ಆರೋಪದಲ್ಲಿ ಬಂಧಿತರಾಗಿದ್ದ ಎಸ್.ಎ.ಆರ್. ಗೀಲಾನಿಗೂ ಯಾವ ಸಂಬಂಧವೂ ಇಲ್ಲ. ಇಫ್ತಿಕಾರ್ ಗೀಲಾನಿ ಕಳೆದ 16 ವರ್ಷಗಳಿಂದಲೂ ದೆಹಲಿಯಲ್ಲಿ ಪ್ರಮುಖ ಪತ್ರಕರ್ತರಾಗಿ ದುಡಿಯುತ್ತಿದ್ದಾರೆ. ಬಂಧನದ ಸಂದರ್ಭದಲ್ಲಿ ಅವರು ಕಾಶ್ಮೀರ್ ಟೈಮ್ಸ್ ನ ದೆಹಲಿಯ ಬ್ಯೂರೋದ ಮುಖ್ಯಸ್ಥರಾಗಿದ್ದರು. ಅಲ್ಲದೇ ಡೈಲಿ ಟೈಮ್ಸ್ ಮತ್ತು ಫ್ರೈಡೇ ಟೈಮ್ಸ್ ಎಂಬೆರಡು ಪಾಕಿಸ್ತಾನಿ ಪತ್ರಿಕೆಗಳ ಭಾರತದ ವರದಿಗಾರರೂ ಆಗಿದ್ದರು. ಜೊತೆಗೇ ಡಾಯ್ಜಿವೆಲ್ ಎಂಬ ರೇಡಿಯೋಕ್ಕೂ ವರದಿಗಾರರಾಗಿ ದ್ದರು. ಹುರಿಯತ್ ಕಾನ್ಫರೆನ್ಸನ ನೇತಾರ ಸಯ್ಯದ್ ಅಲಿಷಾ ಗೀಲಾನಿಯವರ ಮಗಳು ಅನಿಸಾರನ್ನು ಮದುವೆಯಾಗಿರುವ ಗೀಲಾನಿಯ ಮೇಲೆ ಪೊಲೀಸರು ಸಿಟ್ಟಾಗುವುದಕ್ಕೆ ಕೆಲವು ಕಾರಣಗಳಿದ್ದವು. ಮುಖ್ಯವಾಗಿ, ಗೀಲಾನಿ  ಕೆಲಸ ಮಾಡುತ್ತಿದ್ದ ಕಾಶ್ಮೀರ್ ಟೈಮ್ಸ್ ಪತ್ರಿಕೆಯು ಕಾಶ್ಮೀರದಲ್ಲಿ ಪೊಲೀಸರ ನಡೆಸುತ್ತಿದ್ದ  ದೌರ್ಜನ್ಯಗಳನ್ನು ಯಾವ ಮುಲಾಜೂ ಇಲ್ಲದೆ ಬಹಿರಂಗಪಡಿಸುತ್ತಿತ್ತು. ಗುಪ್ತಚರ ವಿಭಾಗದ ಮಟ್ಟಿಗೆ ಕಾಶ್ಮೀರ್ ಟೈಮ್ಸ್ ಎಂಬುದು ಪ್ರತಿಸ್ಪರ್ಧಿಯಾಗಿ ಬಿಟ್ಟಿತ್ತು. ಟೈಮ್ಸ್ ಪ್ರಕಟಿಸಿದ ಹತ್ತಾರು ಸತ್ಯ ಘಟನೆಗಳು ವ್ಯವಸ್ಥೆಯ ಇನ್ನೊಂದು ಮುಖವನ್ನು ದೇಶದ ಮುಂದಿಟ್ಟಿತ್ತು. ಆದ್ದರಿಂದಲೇ ಪತ್ರಿಕೆಯ ಸಂಪಾದಕ ವೇದ್ ಬಾಸಿನ್‍ರಿಗೆ ಜೀವ ಬೆದರಿಕೆಯ ಕರೆಗಳೂ  ಬರುತ್ತಿದ್ದುವು. ಕಾಶ್ಮೀರದಲ್ಲಾಗುವ ಮಾನವ ಹಕ್ಕುಗಳ ಹರಣದ ಬಗ್ಗೆ, ಅದರಲ್ಲಿ ಪೊಲೀಸ್ ಮತ್ತು ಸೇನೆಯ  ಪಾತ್ರದ ಬಗ್ಗೆ ಕಾಶ್ಮೀರ್ ಟೈಮ್ಸ್ ಹತ್ತು-ಹಲವು ವರದಿಗಳನ್ನು ಪ್ರಕಟಿಸುತ್ತಲೇ ಇತ್ತು. ಇಂಥ ಪತ್ರಿಕೆಯನ್ನು ಹದ್ದುಬಸ್ತಿನಲ್ಲಿಡಬೇಕಾದರೆ ಯಾರನ್ನಾದರೂ ‘ಫಿಕ್ಸ್' ಮಾಡಲೇಬೇಕಾದುದು ವ್ಯವಸ್ಥೆಯ ತುರ್ತು ಅಗತ್ಯವಾಗಿತ್ತು. ಎರಡನೆಯದಾಗಿ, ಪ್ರತ್ಯೇಕತಾವಾದದ ಪ್ರಬಲ ಪ್ರತಿಪಾದಕ ಸಯ್ಯದ್ ಅಲಿಷಾ ಗೀಲಾನಿಯ ಮೇಲೆ ಒತ್ತಡ ಹೇರುವುದಕ್ಕಾಗಿ ಇಫ್ತಿಕಾರ್ ಗೀಲಾನಿಯನ್ನು ‘ಫಿಕ್ಸ್' ಮಾಡುವ ಅಗತ್ಯವೂ ವ್ಯವಸ್ಥೆಗಿತ್ತು.
   ಆದ್ದರಿಂದಲೇ,
    14 ವರ್ಷ ಜೈಲಲ್ಲೇ ಕೊಳೆಯಿಸಬಹುದಾದ, ‘ಅಧಿಕೃತ ರಹಸ್ಯ ಕಾಯ್ದೆ 1923’ರ ಸೆಕ್ಷನ್ 3 ಮತ್ತು 9ರನ್ವಯ ಪೊಲೀಸರು ನನ್ನ ಮೇಲೆ ಕೇಸು ಹಾಕಿದರು. ‘ಪಡೆಗಳು’ (FORCESS ) ಎಂಬ ಹೆಸರಿನಲ್ಲಿ ನಾನು ಕಂಪ್ಯೂಟರಿನಲ್ಲಿ ಡೌನ್ ಲೋಡ್ ಮಾಡಿ ಇಟ್ಟುಕೊಂಡಿದ್ದ ದಾಖಲೆಗಳನ್ನು ನನ್ನ ದೇಶದ್ರೋಹಿತನಕ್ಕೆ ಪುರಾವೆಯಾಗಿ ಮಂಡಿಸಲು ಅವರು ನಿರ್ಧರಿಸಿದರು. ನಿಜವಾಗಿ, ನಾನು ಸಂಗ್ರಹಿಸಿಟ್ಟುಕೊಂಡಿದ್ದ ಆ ದಾಖಲೆಗಳು 48 ಪುಟಗಳದ್ದಾಗಿದ್ದು, 10 ಅಧ್ಯಾಯಗಳು ಮತ್ತು 7 ಅನುಬಂಧಗಳಿಂದ
ಕೂಡಿದ್ದಾಗಿತ್ತು. ಇಷ್ಟಕ್ಕೂ, ಅದೇನೂ ರಹಸ್ಯ ದಾಖಲೆ ಆಗಿರಲಿಲ್ಲ. ಕಾಶ್ಮೀರದಲ್ಲಾಗುತ್ತಿರುವ ಮಾನವ ಹಕ್ಕುಗಳ ದಮನ, ಅಲ್ಲಿ ನಿಯೋಗಿಸಲಾಗಿರುವ ಸೇನಾ ವಿವರ, ನಾಪತ್ತೆಯಾಗಿರುವವರ ಸಹಿತ ಹತ್ತಾರು ಮಾಹಿತಿಗಳುಳ್ಳ ಈ ದಾಖಲೆಗಳನ್ನು ಇನ್‍ಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್ ಸಂಸ್ಥೆಯು 1996ರಲ್ಲಿ ಕಿರು ಹೊತ್ತಗೆಯ ರೂಪದಲ್ಲಿ ಪ್ರಕಟಿಸಿತ್ತು. ಮಾತ್ರವಲ್ಲ, ಇಂಟರ್‍ನೆಟ್‍ನಲ್ಲೂ ಹಾಕಿತ್ತು. ಆದರೆ ನನ್ನನ್ನು ಮತ್ತು ಪತ್ನಿಯನ್ನು ಮನೆಯ ಕೋಣೆಯಲ್ಲಿ ಕೂಡಿ ಹಾಕಿದ ಪೊಲೀಸರು, ನನ್ನ ಆ ದಾಖಲೆಯನ್ನು ಸೂಕ್ಷ್ಮವಾಗಿ ತಿದ್ದಿದರು. ಆ ದಾಖಲೆಯ ಆರಂಭದಲ್ಲಿ, ‘ಕೇವಲ ಉಲ್ಲೇಖದ ಉದ್ದೇಶಕ್ಕೆ ಮಾತ್ರ, ಪ್ರಕಟಣೆ ಅಥವಾ ಪ್ರಸಾರ ಕಡ್ಡಾಯವಾಗಿ ನಿಷಿದ್ಧ..’ ಎಂಬ ವಾಕ್ಯವನ್ನು ಸೇರಿಸಿದರು. ಭಾರತದ ಅಧೀನದಲ್ಲಿರುವ ಕಾಶ್ಮೀರ (ಐ.ಎಚ್.ಕೆ.) ಎಂಬಲ್ಲಿ ಜಮ್ಮು ಕಾಶ್ಮೀರ ಎಂದು ತಿದ್ದಿದರು. ಅಲ್ಲದೇ ಏಳು ಅನುಬಂಧಗಳಲ್ಲಿ ಮೂರನ್ನು ಮಾತ್ರ ಉಳಿಸಿ ಉಳಿದವುಗಳನ್ನು ಅಳಿಸಿಬಿಟ್ಟರು. ಹಾಗೆ ತಿದ್ದಿದ ದಾಖಲೆಗಳ ಭಾಗವನ್ನು ಮಾತ್ರ ಪರಿಶೀಲಿಸುವಾಗ ಅದೊಂದು ರಹಸ್ಯ ದಾಖಲೆಯಂತೆ ಮೇಲುನೋಟಕ್ಕೆ ಕಾಣುವ ಸಾಧ್ಯತೆ ಖಂಡಿತ ಇತ್ತು. ಮಾತ್ರವಲ್ಲ, ಇದರ ಒಂದು ಪ್ರತಿಯನ್ನು ಕಾಶ್ಮೀರದಲ್ಲಿರುವ ನನ್ನ ಮಾವ ಅಲಿಷಾ ಗೀಲಾನಿಯವರ ಮನೆಯಲ್ಲೂ ಇರಿಸಿದರು. ಆ ಮೂಲಕ ನಮ್ಮಿಬ್ಬರ ಮಧ್ಯೆ ಯಾವುದೋ ಗುಪ್ತ ಸಂಬಂಧ ಇರುವುದನ್ನು ಸಾಬೀತುಪಡಿಸಲು ಯತ್ನಿಸಿದರು. ಪೊಲೀಸರು ನನ್ನ ಮೇಲೆ ಹೊರಿಸಿದ ಆರೋಪ ಏನೆಂದರೆ- ನಾನೋರ್ವ ಐಎಸ್‍ಐ ಗೂಢಚರನಾಗಿದ್ದು, ಕಾಶ್ಮೀರದಲ್ಲಿರುವ ಭೂಸೇನೆಯ ಮಾಹಿತಿಗಳನ್ನು ಐಎಸ್‍ಐಗೆ ರವಾನಿಸುತ್ತಿದ್ದೇನೆ, ಹಿಜ್ಬುಲ್ ಮುಜಾಹಿದೀನ್‍ನ ಅಂತರಂಗದ ಸದಸ್ಯನಾಗಿದ್ದೇನೆ.. ಎಂಬುದಾಗಿತ್ತು. ಅಲ್ಲದೇ ನನ್ನ ಬ್ಯಾಂಕ್ ಖಾತೆಯಲ್ಲಿ 1.40 ಕೋಟಿ ರೂ. ಮತ್ತು ಪತ್ನಿಯ ಖಾತೆಯಲ್ಲಿ 1.50 ಕೋಟಿ ರೂ.ಗಳಿವೆಯೆಂದೂ ಹೇಳಲಾಯಿತು. ಆ ಬಗ್ಗೆ ಕೂಡಲೇ ತನಿಖೆಯಾಗಬೇಕೆಂದು ನಾನು ನ್ಯಾಯಾಲಯದಲ್ಲಿ ಕೋರಿದೆ. ತಕ್ಷಣ, ಆರೋಪಗಳೆಲ್ಲ ಅದೃಶ್ಯವಾಗಿ ಬಿಟ್ಟವು. ಅಲ್ಲದೇ ಪಾಕ್‍ನ ಎರಡು ಪತ್ರಿಕೆಗಳಿಗೆ ನಾನು ವರದಿಗಾರನಾಗಿರುವುದರಿಂದ ಸಹಜವಾಗಿ ಕರೆ ಮಾಡುತ್ತಿದ್ದೆ. ಆ ಕರೆಯ ನಕಲು ಪ್ರತಿಯನ್ನು ನ್ಯಾಯಾಲಯಕ್ಕೆ ಹಾಜರುಗೊಳಿಸಿ ನನ್ನ ಮತ್ತು ಪಾಕ್‍ನ ಗುಪ್ತ ಸಂಬಂಧಕ್ಕೆ ಪುರಾವೆ ಹುಡುಕಲಾಯಿತು. ವಿಶೇಷ ಏನೆಂದರೆ, ಪೊಲೀಸರ ಈ ಷಡ್ಯಂತ್ರಕ್ಕೆ ನನ್ನ ಮಾಧ್ಯಮ ಮಿತ್ರರು ಬಲಿಯಾದದ್ದು. ಪತ್ರಿಕಾ ವರದಿಗಳು ಹೇಗಿತ್ತೆಂದರೆ- ನನ್ನ ಬಳಿ ಅಪಾರ ಪ್ರಮಾಣದ ವಿದೇಶಿ ಹಣವಿತ್ತು. ನಾನು ವಾಲ್ ಮೀಡಿಯಾ ಪ್ರೊಡಕ್ಷನ್ ಎಂಬ ಸಂಸ್ಥೆಯೊಂದರ ಮಾಲಿಕ. 13 ಲಕ್ಷ  ರೂಪಾಯಿ ತೆತ್ತು ಮೂರು ಬೆಡ್‍ರೂಮಿನ ಫ್ಲಾಟನ್ನು ಖರೀದಿಸಿದ್ದೇನೆ. 22 ಲಕ್ಷ  ರೂಪಾಯಿ ಅನಧಿಕೃತ ಆಸ್ತಿ ಸಂಪಾದಿಸಿದ್ದೇನೆ. 79 ಲಕ್ಷ  ರೂ. ಆದಾಯ ತೆರಿಗೆಯನ್ನು ತಪ್ಪಿಸಿದ್ದೇನೆ. ನನ್ನ ಹೆಸರಲ್ಲಿದ್ದ ಬ್ಯಾಂಕ್ ಅಕೌಂಟ್‍ಗಳಿಗೆ ಆಗಾಗ ಅಪಾರ ದುಡ್ಡು ಬರುತ್ತಿತ್ತು.. ಹೀಗೆ. ಒಂದು ಪ್ರಮುಖ ಇಂಗ್ಲಿಷ್ ಪತ್ರಿಕೆಯ ವರದಿಗಾರ್ತಿಯಂತೂ ಅಪ್ಪಟ ಸುಳ್ಳುಗಳನ್ನೇ ಬರೆದಿದ್ದಳು. ‘ಜಿಹಾದ್ ಧ್ಯೇಯಕ್ಕೆ ನಾನು ತೋರಿಸಿದ ಸಮರ್ಪಣಾ ಮನೋಭಾವನೆಯಿಂದ ನನ್ನ ಮಾವ ಎಷ್ಟು ಪ್ರಭಾವಿತರಾದರೆಂದರೆ ತನ್ನ ಮಗಳನ್ನೇ ನನಗೆ ಮದುವೆ ಮಾಡಿ ಕೊಟ್ಟರು. ನನಗೆ ಅನೇಕ ಐಎಸ್‍ಐ ಬೇಹುಗಾರರ ಸಂಪರ್ಕವಿತ್ತು, ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಿದ್ದೆ..’ ಎಂದೆಲ್ಲ  ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿರುವುದಾಗಿ ಆಕೆ ಬರೆದಿದ್ದಳು. ನಿಜವಾಗಿ, ಆ ಸಂದರ್ಭದಲ್ಲಿ ಪೊಲೀಸರು ತನಿಖೆಯನ್ನೇ ಆರಂಭಿಸಿರಲಿಲ್ಲ. ಗುಪ್ತಚರ ವಿಭಾಗವು ಮಾಧ್ಯಮ ಮಿತ್ರರನ್ನು ಹೇಗೆ ದಾರಿ ತಪ್ಪಿಸುತ್ತದೆ ಎಂಬುದಕ್ಕೆ ಇದೊಂದು ಒಳ್ಳೆಯ ಪುರಾವೆ. ಕೊನೆಗೂ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ತಿದ್ದಲ್ಪಟ್ಟ ದಾಖಲೆಗಳು ರಹಸ್ಯವಲ್ಲವೆಂದೂ ಅದು ಈ ಮೊದಲೇ ಅಸಲಿ ರೂಪದಲ್ಲಿ ಪ್ರಕಟವಾಗಿತ್ತೆಂದೂ ನನ್ನ ವಕೀಲರು ನ್ಯಾಯಾಲಯದಲ್ಲಿ ಹೇಳಿದಾಗ ಮತ್ತು ಅದನ್ನು ಹಾಜರುಪಡಿಸುವ ಮಾತನ್ನಾಡಿದಾಗ ಗುಪ್ತಚರ ವಿಭಾಗದಲ್ಲಿ ಚಡಪಡಿಕೆ ಪ್ರಾರಂಭವಾಯಿತು. ವ್ಯವಸ್ಥೆಯ ಸುಳ್ಳುಗಳನ್ನು ಒಂದು ಹಂತದ ವರೆಗೆ ನಂಬಿದ್ದ ನ್ಯಾಯಾಲಯ, ಇಲಾಖೆಗೆ ನೋಟೀಸ್ ಜಾರಿಗೊಳಿಸಿತು. ಈ ಮಧ್ಯೆ ರಕ್ಷಣಾ ಮಂತ್ರಿಯಾಗಿದ್ದ ಜಾರ್ಜ್ ಫರ್ನಾಂಡಿಸ್ ಮತ್ತಿತರರು ನನ್ನ ಪರವಾಗಿ ಗೃಹ ಸಚಿವ ಅಡ್ವಾಣಿಯವರ ಮೇಲೆ ತೀವ್ರ ಒತ್ತಡ ತಂದರು. ಕೊನೆಗೂ ಸರಕಾರ ನನ್ನ ವಿರುದ್ಧದ ಮೊಕದ್ದಮೆಯನ್ನು ಹಿಂತೆಗೆದುಕೊಳ್ಳಲು ತೀರ್ಮಾನಿಸಿತು. ಹೀಗೆ ಯಾವ ತಪ್ಪನ್ನೂ ಮಾಡದೇ ತಿಹಾರ್ ಜೈಲಿನಲ್ಲಿ 7 ತಿಂಗಳನ್ನು ಕಳೆದು ನಾನು ಬಿಡುಗಡೆಗೊಂಡೆ..”
..ಹೀಗೆ ಇಫ್ತಿಕಾರ್ ಗೀಲಾನಿ ಬರೆಯುತ್ತಾ ಹೋಗುತ್ತಾರೆ..
   ಅಂದಹಾಗೆ, ಗೀಲಾನಿಯಂಥ ಪ್ರಭಾವಿ ಪತ್ರಕರ್ತನನ್ನೇ ವ್ಯವಸ್ಥೆಗೆ ಈ ಮಟ್ಟದಲ್ಲಿ ನಡೆಸಿಕೊಳ್ಳಲು ಸಾಧ್ಯವೆಂದ ಮೇಲೆ, ಇತರರ ಬಗ್ಗೆ ಹೇಳುವುದಾದರೂ ಏನು? ಯಾರನ್ನೂ 'ಫಿಕ್ಸ್' ಮಾಡುವ ಸಾಮರ್ಥ್ಯ  ವ್ಯವಸ್ಥೆಗಿದೆ ಎಂದಲ್ಲವೇ ಇದರರ್ಥ? ತನ್ನ ತಪ್ಪುಗಳನ್ನು ಬಹಿರಂಗಪಡಿಸುವವರಿಗೆ ಒಂದು ಎಚ್ಚರಿಕೆಯ ಕ್ರಮವಾಗಿ ವ್ಯವಸ್ಥೆ ಈ 'ಫಿಕ್ಸ್'ನ್ನು ನಡೆಸುತ್ತಾ ಬಂದಿರಬಹುದಲ್ಲವೇ? ಈಗ ಬಂಧಿತರಾಗಿರುವವರಲ್ಲಿ ಎಷ್ಟು ಮಂದಿ ಇಂಥ ‘ಫಿಕ್ಸ್'ನಲ್ಲಿ ಸಿಲುಕಿರಬಹುದು? ಮುಂದಿನ ದಿನಗಳಲ್ಲಿ ಯಾರೆಲ್ಲ ಬಲಿಯಾಗಬಹುದು?
   ಅಫ್ಝಲ್ ಗುರುವನ್ನು ಗಲ್ಲಿಗೇರಿಸಿದ ದಿನದಂದು ಇಫ್ತಿಕಾರ್ ಗೀಲಾನಿಯನ್ನು 5 ಗಂಟೆಗಳ ಕಾಲ ದೆಹಲಿ ಪೊಲೀಸರು ಗೃಹ ಬಂಧನದಲ್ಲಿರಿಸಿದ ಸುದ್ದಿಯನ್ನು ಓದುತ್ತಾ ಅವರ ಬಗ್ಗೆ ಬರೆಯಬೇಕೆನಿಸಿತು.

No comments:

Post a Comment