ಖಾಲಿದ್ ಮಿಶ್‍ಅಲ್ |
ಜೋರ್ಡಾನ್‍ನ ರಾಜಧಾನಿ ಅಮ್ಮಾನ್‍ನಲ್ಲಿರುವ ತಮ್ಮ ಕಚೇರಿಗೆ ಹಮಾಸ್‍ನ ನಾಯಕ ಖಾಲಿದ್ ಮಿಶ್‍ಅಲ್ ಬರುತ್ತಿ ದ್ದರು. ಆಗ ಇಸ್ರೇಲ್‍ನ ಪ್ರಧಾನ ಮಂತ್ರಿಯಾಗಿದ್ದುದು ಬೆಂಜಮಿನ್ ನೇತನ್ಯಾಹು. ಬಾಲ್ಯದಲ್ಲೇ ಫೆಲೆಸ್ತೀನಿನಿಂದ ಕುವೈಟ್‍ಗೆ ವಲಸೆ ಹೋಗಿ, ರಸಾಯನ ಶಾಸ್ತ್ರದಲ್ಲಿ ಪದವಿ ಪಡೆದಿದ್ದ ಮಿಶ್‍ಅಲ್‍ರು 1984ರಿಂದ ಹಮಾಸ್‍ನ ಪೂರ್ಣಕಾಲಿಕ ಕಾರ್ಯಕರ್ತರಾಗಿ ನಿಯುಕ್ತರಾಗಿದ್ದರು. 1991ರ ಗಲ್ಫ್ ಯುದ್ಧದ ಸಂದರ್ಭದಲ್ಲಿ ಕುವೈಟ್‍ನಿಂದ ಜೋರ್ಡಾನ್‍ಗೆ ತೆರಳಿದ ಅವರು ಅಲ್ಲೂ ಹಮಾಸ್ ಪರ ಚಟುವಟಿಕೆಯ ನಡೆಸುತ್ತಿರುವುದು ನೇತನ್ಯಾಹುರನ್ನು ಸಿಟ್ಟುಗೆಬ್ಬಿಸಿತು. ಅವರು ಮೊಸಾದ್‍ನ (ಇಸ್ರೇಲ್ ನ ಗುಪ್ತ ಚರ ಸಂಸ್ಥೆ) ಜೊತೆ ಸೇರಿ ಮಿಶ್‍ಅಲ್‍ರ ಹತ್ಯೆಗೆ ಷಡ್ಯಂತ್ರ ರೂಪಿಸಿದರು. ಅದರಂತೆ ಮೊಸಾದ್‍ನ ಇಬ್ಬರು ಏಜಂಟರನ್ನು ಕೆನಡದ ನಕಲಿ ಪಾಸ್ ಪೋರ್ಟ್ ನೊಂದಿಗೆ ಜೋರ್ಡಾನ್‍ಗೆ ಕಳುಹಿಸಲಾಯಿತು. 1997 ಸೆ. 25ರಂದು ತನ್ನ ಕಚೇರಿಯ ಕಡೆಗೆ ಮಿಶ್‍ಅಲ್‍ರು ನಡೆದು ಬರುತ್ತಿರುವಂತೆಯೇ ಹಿಂದಿನಿಂದ ಬಂದ ಓರ್ವ ಮೊಸಾದ್ ಏಜೆಂಟ್, ಅವರ ಎಡಕಿವಿಯ ಕಡೆಗೆ ಒಂದು ವಸ್ತುವನ್ನು ಹಿಡಿದ. ಅಪಾಯಕಾರಿ ವಿಷವನ್ನು ದೇಹಕ್ಕೆ ವರ್ಗಾಯಿಸುವ ಉಪಕರಣವಾಗಿತ್ತು ಅದು. ಬಳಿಕ ಮುಹಮ್ಮದ್ ಅಬೂ ಸೈಫ್ ಎಂಬ ಅಂಗರಕ್ಷಕನ ನೆರವಿನೊಂದಿಗೆ ಆ ಇಬ್ಬರು ಏಜಂಟರನ್ನೂ ಬಂಧಿಸಲಾಯಿತು. ತಕ್ಷಣ ಜೋರ್ಡಾನಿನ ಅಧ್ಯಕ್ಷ ಕಿಂಗ್ ಹುಸೈನ್‍ರು ಆ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಕಿಂಗ್ ಹುಸೈನ್ ಮೆಡಿಕಲ್ ಸೆಂಟರ್‍ನಲ್ಲಿ ಕೋಮಾ ಸ್ಥಿತಿಯಲ್ಲಿ ಮಲಗಿರುವ ಮಿಶ್‍ಅಲ್‍ರಿಗೆ ಚಿಕಿತ್ಸೆ ನೀಡಲು ಪ್ರತ್ಯೌಷಧ (Antidote) ಕಳುಹಿಸಿಕೊಡುವಂತೆ ನೇತನ್ಯಾಹುರನ್ನು ಆಗ್ರಹಿಸಿದರು. ಇಲ್ಲದಿದ್ದರೆ, ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಳ್ಳುವ ಮತ್ತು ಇಬ್ಬರು ಮೊಸಾದ್ ಏಜಂಟರನ್ನು ಕಠಿಣವಾಗಿ ಶಿಕ್ಷಿಸುವ ಬೆದರಿಕೆ ಹಾಕಿದರು. ಆರಂಭದಲ್ಲಿ ನೇತನ್ಯಾಹು ತನ್ನ ಕೈವಾಡವನ್ನು ಒಪ್ಪಿಕೊಳ್ಳಲಿಲ್ಲ. ಆದರೆ ಪ್ರಕರಣವು ಅಂತಾರಾಷ್ಟ್ರೀಯ ಗಮನ ಸೆಳೆಯುತ್ತಿರುವಂತೆಯೇ ಅಮೇರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಮಧ್ಯೆ ಪ್ರವೇಶಿಸಿದರಲ್ಲದೇ, ಪ್ರತ್ಯೌಷಧ ಕೊಡುವಂತೆ ನೇತನ್ಯಾಹುರನ್ನು ಬಲವಂತಪಡಿಸಿದರು. ಹೀಗೆ ನೇತನ್ಯಾಹುರ ಆದೇಶದಂತೆ ಮೊಸಾದ್‍ನ ಮುಖ್ಯಸ್ಥ ಡ್ಯಾನಿ ಯತೂಮ್(Danny yatom )ರು ಔಷಧಿಯೊಂದಿಗೆ ಜೋರ್ಡಾನಿಗೆ ಪ್ರಯಾಣಿಸಿದರು. ಆದರೆ ಅದಾಗಲೇ ಕಿಂಗ್ ಹುಸೈನ್ ಆಸ್ಪತ್ರೆಯ ವೈದ್ಯರು ವಿಷದ (Opioid) ಲಕ್ಷಣಗಳನ್ನು ಪತ್ತೆಹಚ್ಚಿ ಚಿಕಿತ್ಸೆ (Narcan) ಪ್ರಾರಂಭಿಸಿದ್ದರು. ಒಂದು ರೀತಿಯಲ್ಲಿ ಇಸ್ರೇಲ್‍ನ ವರ್ಚಸ್ಸು ಜಾಗತಿಕ ಮಟ್ಟದಲ್ಲೇ ಮಬ್ಬಾದ ಪ್ರಕರಣ ಅದು. ನೇತನ್ಯಾಹು ತೀವ್ರ ಮುಖಭಂಗಕ್ಕೆ ಒಳಗಾದರು. ಮಾತ್ರವಲ್ಲ, ಹಮಾಸ್‍ನ ಬೆಳವಣಿಗೆಗೆ ಈ ಘಟನೆಯು ಭಾರೀ ಸಹಕಾರಿಯಾಯಿತು. ಮೊಸಾದ್‍ನ ಆ ಇಬ್ಬರು ಏಜೆಂಟರನ್ನು ಜೋರ್ಡಾನ್ ಗಡೀಪಾರು ಮಾಡಿತಲ್ಲದೇ ಇಸ್ರೇಲ್‍ನ ವಶದಲ್ಲಿದ್ದ ಅನೇಕಾರು ಫೆಲೆಸ್ತೀನಿ ಕೈದಿಗಳನ್ನು ಬಿಡಿಸಿಕೊಂಡಿತು..
ಆದ್ದರಿಂದಲೇ,
ಅಮೆರಿಕಾದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಶ್‍ರನ್ನು ‘ದೆವ್ವ’ ಎಂದು ವಿಶ್ವಸಂಸ್ಥೆಯಲ್ಲಿ ಎಲ್ಲರೆದುರೇ ಕರೆದ, ಬುಶ್‍ರ ಎದುರು ಹಿಟ್ಲರನು ‘ಎದೆಹಾಲುಣ್ಣುವ ಸಣ್ಣ ಮಗು’ ಎಂದು ಕುಟುಕಿದ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಂಡೊಲಿಸಾ ರೈಸ್‍ರನ್ನು ‘ಓ ಪುಟ್ಟ ಬಾಲಕಿ’ ಎಂದು ಟೀಕಿಸಿದ ಮತ್ತು ಅಮೆರಿಕನ್ ಸಾಮ್ರಾಜ್ಯಶಾಹಿತ್ವಕ್ಕೆ ಸಡ್ಡು ಹೊಡೆಯುವಂತೆ ದಕ್ಷಿಣ ಅಮೆರಿಕನ್ ರಾಷ್ಟ್ರಗಳನ್ನು ಕಟ್ಟಲು ಶ್ರಮಿಸಿದ ವೆನೆಜುವೇಲದ ಅಧ್ಯಕ್ಷ ಹ್ಯೂಗೋ ಚಾವೇಝ್‍ರ ಸಾವಿನಲ್ಲೂ ಅನುಮಾನಗಳು ಮೂಡುವುದು. ಅಷ್ಟಕ್ಕೂ,
1. ಫರ್ನಾಂಡೋ ಲುಗೊ
2. ಲೂಯಿಸ್ ಇನಾಸಿಯೊ ಲುಲ ಡ ಸಿಲ್ವ
3. ಹ್ಯೂಗೋ ಚಾವೇಝ್
4. ಕ್ರಿಸ್ಟಿನಾ ಫೆರ್ನಾಂಡಿಸ್ ಡೆ ಕಿರ್ಚ್ ನರ್
ಎಂಬ ದಕ್ಷಿಣ ಅಮೆರಿಕದ ಈ ನಾಲ್ವರು ಸಮಾಜವಾದಿ (ಕಮ್ಯೂನಿಸ್ಟ್) ನಾಯಕರು ಬೆನ್ನು ಬೆನ್ನಿಗೆ ಕ್ಯಾನ್ಸರ್‍ಗೆ ತುತ್ತಾಗಿ ರುವುದೇಕೆ? ಕಳೆದ 20 ತಿಂಗಳ ಅವಧಿಯೊಳಗೆ ಈ ನಾಲ್ವರು ನಾಯಕರಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿರುವುದು ಬರೇ ಆಕಸ್ಮಿಕವೇ ಅಥವಾ The disease may be a new wepon of the empaire to eliminate unwanted leaders (ತನಗಿಷ್ಟವಿಲ್ಲದ ನಾಯಕರನ್ನು ನಾಶಪಡಿಸಲು ಅಮೆರಿಕವು ಈ ರೋಗವನ್ನು ಅಭಿವೃದ್ಧಿಪಡಿಸಿರ ಬಹುದು) ಎಂಬ ಚಾವೇಝ್‍ರ ಮಾತೇ ನಿಜವಾಗಿರಬಹುದೇ? ಇಲ್ಲದಿದ್ದರೆ ಚಾವೇಝ್‍ರ ನಿಧನ ವಾರ್ತೆಯನ್ನು ಘೋಷಿಸುವುದಕ್ಕಿಂತ ಗಂಟೆಗಳ ಮೊದಲು ಇಬ್ಬರು ಅಮೇರಿಕನ್ ರಾಜತಾಂತ್ರಿಕರನ್ನು ವೆನೆಝವೇಲ ತನ್ನ ದೇಶದಿಂದ ಉಚ್ಛಾಟಿಸಿದ್ದೇಕೆ? ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ಮಾಜಿ ಅಧ್ಯಕ್ಷ ಆಲ್ಟನ್ ಓಸ್ಚನರನ್ನು ಬಳಸಿಕೊಂಡು 1970ರಲ್ಲಿ ‘ಡರ್ಟ್ ಗನ್ನನ್ನು’ (ಇದು ಹೃದಯಾಘಾತಕ್ಕೆ ಸಂಬಂಧಿಸಿದ್ದು) ನಿರ್ಮಿಸಿ ವಿರೋಧಿಗಳ ಮೇಲೆ ಪ್ರಯೋಗಿಸಿದ್ದ CIA, (ಅಮೆರಿಕದ ಗುಪ್ತಚರ ಸಂಸ್ಥೆ) ಈ 20ನೇ ಶತಮಾನದಲ್ಲಿ ಸುಮ್ಮನಿರುವುದಕ್ಕೆ ಸಾಧ್ಯವೇ?
2008ರಲ್ಲಿ ದಕ್ಷಿಣ ಅಮೆರಿಕದ ಸಮಾಜವಾದಿ ರಾಷ್ಟ್ರವಾದ ಪರಾಗ್ವೆಯಲ್ಲಿ ಚುನಾವಣೆಯ ತಯಾರಿ ನಡೆಯುತ್ತಿತ್ತು. ಎಲ್ಲ 4 ಮಂದಿ ಅಧ್ಯಕ್ಷೀಯ ಅಭ್ಯರ್ಥಿಗಳ ಬಯೋಡಾಟಾ, DNA ಮಾಹಿತಿಗಳನ್ನು ಸಂಗ್ರಹಿಸಿ ಕಳುಹಿಸಿಕೊಡುವಂತೆ CIAಯು ಅಲ್ಲಿನ ಅಮೆರಿಕನ್ ರಾಯಭಾರಿಯಲ್ಲಿ ಕೇಳಿಕೊಂಡಿರುವುದನ್ನು ಇತ್ತೀಚೆಗೆ ವಿಕಿಲೀಕ್ಸ್ ಬಹಿರಂಗಪಡಿಸಿತ್ತು. ಆ ಬಳಿಕ ಫರ್ನಾಂಡೋ ಲುಗೋ ಅಧ್ಯಕ್ಷರಾಗಿ ಆಯ್ಕೆಯಾದರು. 60 ವರ್ಷದ ಲುಗೋ 2010ರಲ್ಲಿ ಕ್ಯಾನ್ಸರ್ ಗಡ್ಡೆಗಾಗಿ ಚಿಕಿತ್ಸೆಗೆ ಒಳಗಾದರು. ಬ್ರೆಝಿಲ್‍ನ ಮಾಜಿ ಅಧ್ಯಕ್ಷ 66 ವರ್ಷದ ಲುಲ ಡ ಸಿಲ್ವ 2011ರಲ್ಲಿ ಲಂಗ್ಸ್ ಕ್ಯಾನ್ಸರ್‍ಗೆ ತುತ್ತಾದರು. ಈ ಕಾರಣದಿಂದಲೇ ತನ್ನ ಹುದ್ದೆಯನ್ನು ಡೆಲ್ಮ ರಸ್ಸೆಫ್‍ಗೆ ವರ್ಗಾಯಿಸಿದರು. ನಿಜವಾಗಿ ಅಮೆರಿಕಕ್ಕೆ ತಲೆಬಾಗದೆಯೇ ದೇಶವನ್ನು ಅಭಿವೃದ್ಧಿ ಪಡಿಸಲು ಸಾಧ್ಯ ಎಂಬುದನ್ನು ಮೊದಲಾಗಿ ಸಾಧಿಸಿ ತೋರಿಸಿದ್ದೇ ಲುಲ ಡ ಸಿಲ್ವ. ಬ್ರೆಝಿಲನ್ನು ಜಾಗತಿಕವಾಗಿಯೇ ಪ್ರಬಲ ಆರ್ಥಿಕ ಶಕ್ತಿಯಾಗಿ ಮಾರ್ಪಡಿಸಿದ್ದು ಅವರ ಅಮೋಘ ಸಾಧನೆಯಾಗಿತ್ತು. ಇದೀಗ ಡೆಲ್ಮಾ ರಸ್ಸೆಫ್‍ರೂ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದಾರೆ. 2011ರಲ್ಲಿ ವೆನೆಝುವೇಲದ ಹ್ಯೂಗೋ ಚಾವೇಝ್ ಮೊದಲ ಬಾರಿ ಕ್ಯೂಬಾದ ಹವಾನದಲ್ಲಿ ಕ್ಯಾನ್ಸರ್‍ಗಾಗಿ ಚಿಕಿತ್ಸೆ ಪಡೆದರು. ಅರ್ಜಂಟೀನಾದ ಅಧ್ಯಕ್ಷೆ ಕ್ರಿಸ್ಟಿನಾ 2012ರ ಜನವರಿಯಲ್ಲಿ ಥೈರಾಯಿಡ್ ಗ್ರಂಥಿಯ ಕ್ಯಾನ್ಸರ್ ಗಾಗಿ ಸರ್ಜರಿಗೆ ಒಳಗಾಗಿದ್ದಾರೆ. ಈ ಮೊದಲು ಅರ್ಜಂಟೀನಾದ ಅಧ್ಯಕ್ಷರಾಗಿದ್ದ ಅವರ ಪತಿ ನೆಸ್ಟರ್ ಕಿರ್ಚನರ್ ರು 2010ರಲ್ಲಿ ಕ್ಯಾನ್ಸರ್ ಗೆ ತುತ್ತಾಗಿ ಆ ಬಳಿಕ ಸಾವಿಗೀಡಾಗಿದ್ದರು. ದಕ್ಷಿಣ ಅಮೇರಿಕದ ಇನ್ನೊಂದು ಸಮಾಜವಾದಿ ರಾಷ್ಟ್ರವಾದ ಪೆರುವಿನ ಅಧ್ಯಕ್ಷ ಒಲ್ಲಂಟ ಹುಮಾಲ 2011ರಲ್ಲಿ ಕ್ಯಾನ್ಸರ್ ಗಡ್ಡೆಯ ನಿವಾರಣೆಗಾಗಿ ಚಿಕಿತ್ಸೆ ಪಡೆದಿದ್ದಾರೆ.
ಅಮೆರಿಕದ ದಬ್ಬಾಳಿಕೆ, ಸಾಮ್ರಾಜ್ಯಶಾಹಿ ನೀತಿಗಳೇನೇ ಇರಲಿ, ಅದರ ದಕ್ಷಿಣಕ್ಕಿರುವ ಸುಮಾರು 20ರಷ್ಟು ರಾಷ್ಟ್ರಗಳು ಅಮೆರಿಕವನ್ನು ಅನುಮಾನಿಸಿದ್ದೇ ಹೆಚ್ಚು. ಅಮೆರಿಕ ತನ್ನ ದೊಡ್ಡತನವನ್ನು ಪ್ರದರ್ಶಿಸಿದಂತೆಲ್ಲಾ ಈ ರಾಷ್ಟ್ರಗಳು ಹೆಚ್ಚೆಚ್ಚು ಸಮಾಜವಾದಿ ವಿಚಾರಧಾರೆಗೆ ಆಕರ್ಷಿತವಾಗುತ್ತಾ ಹೋದುವು. ಕ್ಯೂಬಾದ ಫಿಡೆಲ್ ಕ್ಯಾಸ್ಟ್ರೊ, ವೆನೆಝುವೇಲದ ಚಾವೇಝ್, ಬ್ರೆಝಿಲ್‍ನ ಲುಲ ಡ ಸಿಲ್ವ... ಸಹಿತ ಪ್ರಮುಖ ನಾಯಕರು ದಕ್ಷಿಣ ಅಮೆರಿಕವನ್ನು ಸಾಮ್ರಾಜ್ಯಶಾಹಿ ವಿರೋಧಿಯಾಗಿ ಕಟ್ಟ ತೊಡಗಿದರು. ನಿಜವಾಗಿ, ಈ ದೇಶಗಳು ಅಮೆರಿಕದ ವಿರುದ್ಧ ವಷ್ಟೇ ಒಂದುಗೂಡಿದ್ದಲ್ಲ, ಇಸ್ರೇಲ್‍ನ ವಿರುದ್ಧವೂ ಇವು ಬಹುತೇಕ ಒಂದೇ ದನಿಯಲ್ಲಿ ಮಾತಾಡಿವೆ. ಫೆಲೆಸ್ತೀನ್‍ನ ಸಾರ್ವ ಭೌಮತೆಯನ್ನು ಬಹಿರಂಗವಾಗಿ ಘೋಷಿಸಿದ್ದು ಈ ರಾಷ್ಟ್ರಗಳೇ. ಅಲ್ಲದೆ, ಚಾವೇಝ್‍ರಂತೂ ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳ ಸಂಬಂಧವನ್ನು ಆಫ್ರಿಕ ಮತ್ತು ಅರಬ್ ಜಗತ್ತಿನೊಂದಿಗೆ ಬೆಳೆಸಲು ತೀವ್ರವಾಗಿ ಶ್ರಮಿಸಿದ್ದರು. ಆದ್ದರಿಂದಲೇ, Chavez take care. These people have developed technology. You are very careless. Take care what you eat. What they give you to eat. A little needle and they inject you with. I dont know what. (ಚಾವೇಝ್ ಜಾಗ್ರತೆ, ಅವರು (ಅಮೆರಿಕ) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ನೀನು ತುಂಬಾ ಅಜಾಗರೂಕತೆಯ ವ್ಯಕ್ತಿ. ನೀನು ತಿನ್ನುವಾಗಲೂ ತುಂಬಾ ಜಾಗರೂಕನಾಗಿರಬೇಕು. ತಿನ್ನುವ ಆಹಾರದ ಮೂಲಕವೂ ಅವರು ನಿನಗೆ ಸಣ್ಣ ಸೂಜಿಯನ್ನು ಚುಚ್ಚಬಹುದು) ಎಂದು ಕ್ಯಾಸ್ಟ್ರೊ ಆಗಾಗ ಚಾವೇಝ್‍ರನ್ನು ಎಚ್ಚರಿಸುತ್ತಿದ್ದರು. ಸ್ವತಃ ಫಿಡೆಲ್ ಕ್ಯಾಸ್ಟ್ರೋರ ಮೇಲೆ 900ರಷ್ಟು ಬಾರಿ ಹತ್ಯಾ ಯತ್ನಗಳು ನಡೆದಿವೆ ಎಂದು ಖ್ಯಾತ ಬರಹಗಾರ ಲೂಯಿಸ್ ಬ್ರಿಟ್ಟೊ ಗಾರ್ಸಿಯ ಇತ್ತೀಚೆಗೆ ಬರೆದಿದ್ದರು. ಅಂದ ಹಾಗೆ, ಮೆದುಳು ಆಘಾತದಿಂದ 2004ರಲ್ಲಿ ಮೃತಪಟ್ಟ ಫೆಲೆಸ್ತೀನಿನ ಅಧ್ಯಕ್ಷ ಯಾಸಿರ್ ಅರಫಾತ್‍ರ ಸಾವಿನ ಹಿಂದೆ ಇಸ್ರೇಲ್‍ನ ಕೈವಾಡ ಇದೆ ಎಂಬುದು ಇವತ್ತು ಗುಟ್ಟಾಗಿಲ್ಲವಲ್ಲ.
ಒಂದು ರೀತಿಯಲ್ಲಿ ಅಮೆರಿಕದ ಅಪ್ಪಣೆಯನ್ನು ಶಿರಸಾ ಪಾಲಿಸುವ ರಾಷ್ಟ್ರಗಳು ಜಗತ್ತಿನಲ್ಲಿ ಅನೇಕಾರು ಇದ್ದರೂ ಅಮೆರಿಕದ ಸುತ್ತಮುತ್ತಲಿನ ಕೆಲವು ರಾಷ್ಟ್ರಗಳು ಅದರ ಹಂಗಿಲ್ಲದೇ ಬದುಕುವ ಪಣತೊಟ್ಟದ್ದು, ಅದಕ್ಕಾಗಿ ಶ್ರಮಿಸಿದ್ದು ಆ ರಾಷ್ಟ್ರಗಳ ನಾಯಕರಿಗೆ ಕ್ಯಾನ್ಸರ್ ಹರಡಲು ಕಾರಣ ಎಂದು ನಂಬುವಂತಹ ವಾತಾವರಣ ಇವತ್ತು ಸೃಷ್ಟಿಯಾಗಿದೆ. ಚಾವೇಝ್ ಅಂತೂ ಅಂಥ ಅನುಮಾನವನ್ನು ವ್ಯಕ್ತಪಡಿಸಿಯೇ ಸಾವಿಗೆ ತುತ್ತಾದರು. ಒಂದು ವೇಳೆ ಇನ್ನೊಂದು ಹತ್ತು ವರ್ಷ ಅವರು ಬದುಕಿರುತ್ತಿದ್ದರೆ ದಕ್ಷಿಣ ಅಮೆರಿಕದ ಒಟ್ಟು ಭೂಪಟವೇ ಬದಲಾಗಿ ಬಿಡುವ ಸಾಧ್ಯತೆಯಿತ್ತು. ಅವರು 2008ರಲ್ಲಿ 12 ರಾಷ್ಟ್ರಗಳ ದಕ್ಷಿಣ ಅಮೆರಿಕನ್ ಒಕ್ಕೂಟವನ್ನು ರಚಿಸಿದರು. ಮಾತ್ರವಲ್ಲ, ಈ ಒಕ್ಕೂಟವನ್ನು ಯುರೋಪಿಯನ್ ಯೂನಿಯನ್‍ಗೆ ಸಡ್ಡು ಹೊಡೆಯುವಂತೆ ಕಟ್ಟುವಲ್ಲಿ ನಿರತರಾದರು. ಈ ಒಕ್ಕೂಟದ ಸದಸ್ಯ ರಾಷ್ಟ್ರಗಳು ಪರಸ್ಪರ ಆರ್ಥಿಕ, ವೈಜ್ಞಾನಿಕ, ರಾಜಕೀಯ ಸಹಕಾರದೊಂದಿಗೆ ಸಮೃದ್ಧವಾಗಿ ಬೆಳೆಯುವುದಕ್ಕೆ ನೀಲನಕ್ಷೆ ರೂಪಿಸಿದರು. ಆದ್ದರಿಂದಲೇ ಈ ರಾಷ್ಟ್ರಗಳು ತಮ್ಮ ಅಗತ್ಯಗಳಿಗೆ ಅಮೆರಿಕವನ್ನು ಅಲಂಬಿಸುವುದರ ಬದಲು, ಪರಸ್ಪರ ಅವಲಂಬಿಸುವ ಹೊಸ ದಾರಿಯನ್ನು ಕಂಡುಕೊಂಡವು. ವಿಶ್ವ ಬ್ಯಾಂಕ್‍ಗೆ ಪರ್ಯಾಯವಾಗಿ ದಿ ಬ್ಯಾಂಕ್ ಆಫ್ ಸೌತ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಬಹುಶಃ ಅಮೆರಿಕವನ್ನು ಮತ್ತು ಅದರ ನೆರವನ್ನು ಅವಲಂಬಿಸದೇ ಬದುಕುವ ಹೊಸ ಸಾಧ್ಯತೆಯನ್ನು ನಿಜಗೊಳಿಸುವತ್ತ ಅವರು ಯಶಸ್ವಿಯಾಗುತ್ತಿರುವುದನ್ನು ಮನಗಂಡೇ 2009ರಲ್ಲಿ ಅವರನ್ನು ಮತ್ತು ಬೊಲಿವಿಯನ್‍ನ ಅಧ್ಯಕ್ಷ ಇವೊ ಮಾರೆಲ್ಸ್ ರನ್ನು ಕೊಲ್ಲಲು CIA ಶ್ರಮಿಸಿರಬೇಕು. ವಿಮಾನದಲ್ಲಿ ಇವರಿಬ್ಬರು ಸಾಲ್ವಡೋರ್‍ಗೆ ಪ್ರಯಾಣಿಸುತ್ತಿದ್ದಾಗ ಪೊಸಾಡ ಕ್ಯಾರಿಲ್ಸ್ ಎಂಬ ಲಾಂಚರ್ ತಜ್ಞನ ಮುಖಾಂತರ ರಾಕೆಟ್ ಹಾರಿಸಿ ವಿಮಾನವನ್ನು ಉರುಳಿಸಲು CIA ಪ್ರಯತ್ನಿ ಸಿತ್ತು. ಅಲ್ಲದೇ 2002ರಲ್ಲಿ ವೆನೆಜುವೇಲದ ಕೆಲವು ಅತೃಪ್ತ ಮಿಲಿಟರಿ ಅಧಿಕಾರಿಗಳು ಚಾವೇಝ್‍ರನ್ನು 48 ಗಂಟೆಗಳ ಕಾಲ ದಿಗ್ಬಂಧನದಲ್ಲಿರಿಸಿ ಕ್ಷಿಪ್ರ ಕ್ರಾಂತಿಗೆ ಮುಂದಾದಾಗ, ಅಷ್ಟು ಸಣ್ಣ ಅವಧಿಯೊಳಗೆ ಅಮೆರಿಕ ಮತ್ತು IMF ಆ ಹೊಸ ಸರಕಾರಕ್ಕೆ ಬೆಂಬಲ ಸಾರಿತ್ತು. ಆದರೆ ಆ ಬಳಿಕ ವೆನೆಝುವೇಲದ ಜನರೇ ದಂಗೆಯೆದ್ದು ಕ್ಷಿಪ್ರಕ್ರಾಂತಿಯನ್ನು ವಿಫಲಗೊಳಿಸಿದ್ದರು.
ಹೀಗಿರುವಾಗ,
ಮುಂದೊಂದು ದಿನ ಅಮೆರಿಕದ ಜನರೇ ದಂಗೆಯೆದ್ದು ಚಾವೇಝ್‍ರ ‘ದೆವ್ವ’(ಅಮೆರಿಕನ್ ಸಾಮ್ರಾಜ್ಯಶಾಹಿ ನೀತಿ)ವನ್ನು ಪದಚ್ಯುತಗೊಳಿಸಲೂಬಹುದಲ್ಲವೇ? ಯಾರಿಗೆ ಗೊತ್ತು?
No comments:
Post a Comment