Tuesday, May 21, 2024

ಗೆಲ್ಲಿಸಿದ ಸೋಶಿಯಲ್ ಮೀಡಿಯಾವೇ ಸೋಲಿಸಲಿದೆಯೇ?




1. ಟೈಮ್ಸ್ ನೌ
2. ಝೀ ನ್ಯೂಸ್
3. ರಿಪಬ್ಲಿಕ್ ಭಾರತ್
4. ಸಿಎನ್-ನ್ಯೂಸ್ 18
5. ಇಂಡಿಯಾ ಟಿವಿ
6. ಟಿವಿ ಟುಡೇ ನೆಟ್‌ವರ್ಕ್
7. ಇಂಡಿಯಾ ಟುಡೇ
8. ಆಜ್‌ತಕ್

ಒಂದುವೇಳೆ, ಇವು ಮತ್ತು ಇಂಥ ಇನ್ನಿತರ ಟಿವಿ ಚಾನೆಲ್‌ಗಳು ‘ಮೋದಿ ಕಾವಲು’ಗಾರರಾಗಿ ಬದಲಾಗದೇ ಇರುತ್ತಿದ್ದರೆ ನಮಗೋರ್ವ ಧ್ರುವ್ ರಾಠಿ ಸಿಗ್ತಾ ಇದ್ದರೇ? ರವೀಶ್ ಕುಮಾರ್ ಈ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆಯುತ್ತಿದ್ದರೇ? ಓರ್ವ ಆಕಾಶ್ ಬ್ಯಾನರ್ಜಿ, ಮುಹಮ್ಮದ್ ಝುಬೇರ್, ಕುನಾಲ್ ಕಾಮ್ರಾ, ಕುಮಾರ್ ಶ್ಯಾಮ್‌ಗಳು ಜನರ ನಾಲಿಗೆಯ ತುದಿಯಲ್ಲಿ ಇರುತ್ತಿದ್ದರೇ?

ಇವು ಬರೇ ಪ್ರಶ್ನೆಗಳಲ್ಲ

ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ನಲ್ಲಿ  ತಜ್ಞರಾಗಿರುವ ಯಾಮಿನಿ ಅಯ್ಯರ್ ಮತ್ತು ನೀಲಾಂಜನ್ ಸಿರ್ಕಾರ್ ಎಂಬಿಬ್ಬರು ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಸುತ್ತಾಡಿದಾಗ ಸಿಕ್ಕ ಅನುಭವವನ್ನು ದಿ ಹಿಂದೂ ಪತ್ರಿಕೆಯಲ್ಲಿ ಹಂಚಿಕೊಂಡಿದ್ದಾರೆ. ಮೋಹನ್‌ಲಾಲ್ ಗಂಜ್ ಕ್ಷೇತ್ರದ ರಾವತ್ ಸಮುದಾಯದ ಯುವಕ ಧ್ರುವ್ ರಾಠಿಯ ದೊಡ್ಡ ಫ್ಯಾನ್. ನಿರಂತರವಾಗಿ ಧ್ರುವ್ ರಾಠಿಯ ವೀಡಿಯೋ ವೀಕ್ಷಿಸುತ್ತಿರುವುದಾಗಿ ಆತ ಇವರೊಂದಿಗೆ ಹೇಳಿಕೊಂಡ. ಹಾಗಂತ, ಈತ ಬಿಜೆಪಿ ಬೆಂಬಲಿಗ. ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಭಾವ ಶಾಲಿಯಾಗಿರುವ ಮೋಹನ್‌ಲಾಲ್ ಗಂಜ್ ಕ್ಷೇತ್ರದ ಯುವಕನ ಬಗ್ಗೆಯೂ ಈ ಇಬ್ಬರು ಬರೆದಿದ್ದಾರೆ. ಈತ ಜಾಟ್ ಸಮು ದಾಯದವ. ಬಹಿರಂಗವಾಗಿ ಆತ ರಾಜಕೀಯೇತರ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾನೆ. ಆದರೆ, ಬಿಜೆಪಿಯ ಬಗ್ಗೆ ತೀವ್ರ ಅಸಮಾ ಧಾನವಿದೆ. ಆದರೆ, ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದರೆ ತೊಂದರೆ ಎದುರಾಗಬಹುದು ಎಂಬುದು ಆತನ ಅಭಿಪ್ರಾಯ. ಮಧ್ಯ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಕುರ್ಮಿ ಸಮುದಾಯ ಬಹಳ ಪ್ರಭಾವಿಯಾಗಿದೆ. ಮುಖ್ಯವಾಗಿ ಬಾರಬಂಕಿ ಪಾರ್ಲಿಮೆಂಟ್ ಕ್ಷೇತ್ರದಲ್ಲಿ ಇದೇ ಸಮುದಾಯದ ಬಾಹುಳ್ಯವಿದೆ. ಇಲ್ಲಿನ ಯುವ ತಲೆಮಾರಿನಲ್ಲಿ ಬಿಜೆಪಿಯ ಬಗ್ಗೆ ಮತ್ತು ಮುಖ್ಯ ವಾಹಿನಿ ಟಿವಿ ಚಾನೆಲ್‌ಗಳ ಸುದ್ದಿಗಳ ಬಗ್ಗೆ ತೀವ್ರ ಆಕ್ಷೇಪವಿದೆ. 2019ರಲ್ಲಿ ಬಾರಬಂಕಿ ಪಾರ್ಲಿಮೆಂಟ್ ಕ್ಷೇತ್ರದಲ್ಲಿ ಬಿಜೆಪಿ ಜಯ ಗಳಿಸಿತ್ತು. ಆದರೆ 2022ರ ವಿಧಾನಸಭಾ ಚುನಾವಣೆಯಲ್ಲಿ 5ರಲ್ಲಿ 3 ಸ್ಥಾನಗಳನ್ನೂ ಬಿಜೆಪಿ ಕಳಕೊಂಡಿತ್ತು. ಇದೇ ಉತ್ತರ ಪ್ರದೇಶದ ಆಗ್ರಾದಲ್ಲಿದ್ದ ಜಾಟ್ ಸಮುದಾಯದ ಯುವಕರ ಗುಂಪು ತಾವು ನಿರಂತರವಾಗಿ ರವೀಶ್ ಕುಮಾರ್ ವೀಡಿಯೋ ವೀಕ್ಷಿಸುತ್ತಿರುವುದಾಗಿ ಹೇಳಿರುವುದನ್ನು ಈ ಇಬ್ಬರು ತಜ್ಞರು ಬರ ಕೊಂಡಿದ್ದಾರೆ. ಹಾಗೆಯೇ, ಒಂದುವೇಳೆ, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದಕ್ಕೆ ಕಾರಣ ಧ್ರುವ್ ರಾಠಿ ಎಂದು ಓರ್ವ ಮುಸ್ಲಿಮ್ ಯುವಕ ಹೇಳಿರುವುದನ್ನೂ ಇವರು ಉಲ್ಲೇಖಿಸಿದ್ದಾರೆ.

ನಿಜವಾಗಿ,

ಈ ಬಾರಿಯ ಚುನಾವಣೆ ಬಿಜೆಪಿಯ ಟಿವಿ ಚಾನೆಲ್‌ಗಳು ಮತ್ತು ವಿರೋಧ ಪಕ್ಷಗಳ ಸೋಶಿಯಲ್ ಮೀಡಿಯಾಗಳ ನಡುವೆ ನಡೆಯುತ್ತಿದೆ ಎನ್ನುವುದೇ ಹೆಚ್ಚು ಸರಿ. ಅದರಲ್ಲೂ ಯೂಟ್ಯೂಬ್ ಚಾನೆಲ್‌ಗಳ ಪಾತ್ರ ಬಹಳ ಹಿರಿದು. 2019ರಲ್ಲೂ ಬಹುತೇಕ ಇಂಥದ್ದೇ  ವಾತಾವರಣ ಇತ್ತು. ಈಗಿನಷ್ಟಲ್ಲದಿದ್ದರೂ ಸೋಶಿಯಲ್ ಮೀಡಿಯಾ ಜನಪ್ರಿಯವಾಗಿಯೇ ಇತ್ತು. ಪ್ರಧಾನಿ ಮೋದಿಯನ್ನು ಕಾವಲು ಕಾಯುವ ಟಿವಿ ಚಾನೆಲ್‌ಗಳು, ಪತ್ರಿಕೆಗಳು ಮತ್ತು ಬಿಜೆಪಿ ಪ್ರಣೀತ ಸೋಶಿಯಲ್ ಮೀಡಿಯಾ ಒಂದುಕಡೆಯಾದರೆ ಇನ್ನೊಂದು ಕಡೆ ಅವುಗಳ ಪ್ರೊಪಗಾಂಡಾ ವನ್ನು ಪ್ರಶ್ನಿಸುವ ಸೋಶಿಯಲ್ ಮೀಡಿಯಾಗಳಿದ್ದುವು. ಒಂದು ವೇಳೆ, ಪುಲ್ವಾಮ ಮತ್ತು ರಾಮಮಂದಿರ ಇಶ್ಯೂಗಳೆರಡು ಅಲ್ಲದೇ ಇರುತ್ತಿದ್ದರೆ ಬಿಜೆಪಿ 313 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಕಡಿಮೆ ಇತ್ತು. ಆದರೆ,

ಈ ಬಾರಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. 2014 ಮತ್ತು 2019ರ ಚುನಾವಣಾ ಗೆಲುವಿಗೆ ಬಿಜೆಪಿ ಯಾವ ಮಾಧ್ಯಮವನ್ನು ಬಳಸಿಕೊಂಡಿತ್ತೋ ಅದೇ ಸೋಶಿಯಲ್ ಮೀಡಿಯಾವೇ ಇವತ್ತು ಬಿಜೆಪಿಗೆ ಸವಾಲಾಗಿ ನಿಂತಿದೆ. ಮುಖ್ಯವಾಗಿ 2019ರಿಂದ ಈ 2024ರ ನಡುವೆ 5 ವರ್ಷಗಳು ಕಳೆದಿವೆ. ಇದು ಸೋಶಿಯಲ್ ಮೀಡಿಯಾಕ್ಕೆ ಸಂಬಂಧಿಸಿ ಮಹತ್ವಪೂರ್ಣ ಅವಧಿ. ಈ ಅವಧಿ ಯಲ್ಲಿ ಕೋಟ್ಯಂತರ ಯುವಕರು ಪದವೀಧರರಾಗಿ ಶಿಕ್ಷಣ ಸಂಸ್ಥೆಗಳಿಂದ  ಹೊರಬಂದಿದ್ದಾರೆ. ಶಾಲೆಗಳಲ್ಲಿ ಕಲಿಯುತ್ತಿದ್ದವರು ಕಾಲೇಜು ಮೆಟ್ಟಿಲು ಹತ್ತಿದ್ದಾರೆ. ಕಾಲೇಜು ಮೆಟ್ಟಿಲು ಹತ್ತಿದವರು ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೊರೋನಾ ನಂತರ ಹರೆಯದವರ ಕೈಗೂ ಮೊಬೈಲ್ ಬಂದಿದೆ. ಇದು ಒಂದು ಭಾಗವಾದರೆ, ಇನ್ನೊಂದು ಭಾಗ ಸಾಮಾನ್ಯ ನಾಗರಿಕರದ್ದು. ಕಳೆದೈದು ವರ್ಷಗಳಲ್ಲಿ ಮೊಬೈಲ್ ವೀಕ್ಷಣೆ ಮತ್ತು ವಿಷಯಗಳ ಆದ್ಯತೆಯಲ್ಲಿ ಇವರು ಹೆಚ್ಚು ಪ್ರಬುದ್ಧರಾಗಿದ್ದಾರೆ. ಕಂಟೆಂಟ್  ಆಧಾರಿತ ಕಾರ್ಯಕ್ರಮಗಳನ್ನು ವೀಕ್ಷಿಸಲು ಪ್ರಾರಂಭಿಸಿದ್ದಾರೆ. 2010ರಿಂದ 2019ರ ನಡುವೆ ಜನರು ಸಾಮಾನ್ಯವಾಗಿ ಟಿವಿ ಚಾನೆಲ್‌ಗಳ ನರೇಟಿವ್‌ಗಳ ಮೇಲೆಯೇ ಹೆಚ್ಚು ನಂಬಿಕೆ ಇಡುತ್ತಿದ್ದರು. ಕಂಟೆAಟ್‌ಗಳಿಗಿಂತ  ಟಿವಿ ಚಾನೆಲ್‌ಗಳ ಮೇಲಿನ ನಂಬಿಕೆಯೇ ಅವರನ್ನು ನಿಯಂತ್ರಿಸುತ್ತಿತ್ತು. ವಿವಿಧ ಹೆಸರುಗಳಲ್ಲಿ ಮೋದಿ ಪರ ನೀಡುತ್ತಿದ್ದ ವಿವಿಧ ಕಾರ್ಯಕ್ರಮಗಳ ಮೇಲೆ ವಿಶ್ವಾಸವನ್ನೂ ತಾಳುತ್ತಿದ್ದರು. ಆದರೆ,

2019ರ ಬಳಿಕ ಆಗಿರುವ ಬಹಳ ದೊಡ್ಡ ಬದಲಾವಣೆ ಏನೆಂದರೆ, ಗೋಧಿ ಮೀಡಿಯಾಗಳಿಂದ ರೋಸಿ ಹೋದ ಪತ್ರಕರ್ತರು ಪರ್ಯಾಯ ಮಾಧ್ಯಮಗಳನ್ನು ಪ್ರಬಲವಾಗಿ ಬಳಸಿಕೊಂಡದ್ದು. ಮುಖ್ಯವಾಗಿ, ಯೂಟ್ಯೂಬ್‌ನಲ್ಲಿ ಇವರೆಲ್ಲ ನೆಲೆ ಕಂಡುಕೊಂಡರು. ಟಿವಿ ಚಾನೆಲ್‌ಗಳ ಏಕಮುಖ ಧೋರಣೆಯನ್ನು ಖಂಡಿಸಿ ಅಲ್ಲಿಂದ ಹೊರಬಂದವರು ಮತ್ತು ಇನ್ನಿತರ ಜರ್ನ ಲಿಸ್ಟ್ ಗಳಿಗೆ  ಯೂಟ್ಯೂಬ್ ಅತ್ಯಂತ ಯೋಗ್ಯ ತಾಣವಾಯಿತು. ವರಮಾನಕ್ಕೆ ದಾರಿಯೂ ಆಯಿತು. ಇನ್ನೊಂದು ಕಡೆ ಟಿವಿ ಚಾನೆಲ್‌ಗಳ ಕಾರ್ಯಕ್ರಮಗಳನ್ನು ಪೇಲವಗೊಳಿಸುವಷ್ಟು ಗಟ್ಟಿ ಕಂಟೆAಟ್‌ಗಳನ್ನು ಇವರು ನೀಡತೊಡಗಿದರು. ನಿಖರ ಮಾಹಿತಿ, ಅಂಕಿ-ಅಂಶ, ಸಾಕ್ಷ್ಯ ಆಧಾರಿತ ವಾದಗಳ ಮೂಲಕ ಟಿವಿ ಚಾನೆಲ್‌ಗಳಿಗೆ ಸವಾಲು ಹಾಕತೊಡಗಿದರು. ಇವತ್ತು ದೇಶದಾದ್ಯಂತ 1 ಲಕ್ಷವನ್ನೂ ದಾಟಿ ಸಬ್‌ಸ್ಕ್ರೈಬರ್‌ಗಳುಳ್ಳ 40 ಸಾವಿರಕ್ಕಿಂತಲೂ ಅಧಿಕ ಯೂಟ್ಯೂಬ್ ಚಾನೆಲ್‌ಗಳಿವೆ. ಇವುಗಳಲ್ಲಿ ರಾಜಕೀಯ ಮತ್ತು ರಾಜಕೀಯೇತರ ವಿಷಯಗಳಿಗೆ ಸೀಮಿತವಾದ ಯೂಟ್ಯೂಬ್ ಗಳಿವೆಯಾದರೂ ರಾಜಕೀಯ ಯೂಟ್ಯೂಬ್‌ಗಳೇ ಅಧಿಕ ಎಂಬುದೂ ಗಮನಾರ್ಹ. ಅಂದಹಾಗೆ,

ಒಂದು  ಲಕ್ಷ ಸಬ್‌ಸ್ಕ್ರೈ ಬರ್ ಹೊಂದುವುದು ಸುಲಭ ಅಲ್ಲ. ನಿರಂತರ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದರೂ ಒಂದು ಯೂಟ್ಯೂಬ್ ಚಾನೆಲ್ ಲಕ್ಷ ಸಬ್‌ಸ್ಕೆöçÊಬರ್ ಗಡಿ ದಾಟುವುದಕ್ಕೆ ಬಹುತೇಕ ಬಾರಿ ಯಶಸ್ವಿಯಾಗುವುದಿಲ್ಲ. ಜನರು ಕಾರ್ಯಕ್ರಮ ವೀಕ್ಷಿಸಿದರೂ ಸಬ್‌ಸ್ಕ್ರೈಬ್  ಆಗುವುದಿಲ್ಲ. ಈ ಚಾನೆಲನ್ನು ಬೆಂಬಲಿಸಬೇಕು ಎಂಬ ಭಾವ ವೀಕ್ಷಕರಲ್ಲಿ ಮೂಡುವವರೆಗೆ ಚಾನೆಲ್  ಹೆಚ್ಚಾಗುವುದಿಲ್ಲ. ಇವತ್ತು ಧ್ರುವ್ ರಾಠಿ ಮತ್ತು ರವೀಶ್ ಕುಮಾರ್ ಅವರ ಯೂಟ್ಯೂಬ್ ಚಾನೆಲ್ ಒಂದು ಕೋಟಿ ಸಬ್‌ಸ್ಕ್ರೈಬನ್ನೂ ದಾಟಿದೆ. ಇವರಿಬ್ಬರೂ ಮೋದಿ ಸರಕಾರದ ಪ್ರಬಲ ಟೀಕಾಕಾರರೂ ಆಗಿದ್ದಾರೆ. ಮಾತ್ರವಲ್ಲ, ತಮ್ಮ ವಿರೋಧವನ್ನು ಬರಿದೇ ವ್ಯಕ್ತಪಡಿಸದೇ ಅತ್ಯಂತ ಪ್ರಬಲ ಸಾಕ್ಷ್ಯಾಧಾರಗಳನ್ನೂ ಅದಕ್ಕೆ ಒದಗಿಸುತ್ತಿದ್ದಾರೆ. ಮೋದಿ ಪರ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗಲು ಸಾಧ್ಯವೇ ಇಲ್ಲದ ಅತ್ಯಂತ ಶಕ್ತಿಶಾಲಿ ಕಾರ್ಯಕ್ರಮಗಳನ್ನು ಇವರು ನೀಡುತ್ತಾ ಬಂದಿದ್ದಾರೆ. 2014ರಿಂದ ಒಂದು ಬಗೆಯ ಸುದ್ದಿಯನ್ನು ಆಲಿಸುತ್ತಾ ಬಂದಿ ರುವ ಜನರಿಗೆ ಇದೀಗ ಅದನ್ನು ಪ್ರಶ್ನಿಸುವ ರೀತಿಯ ಕಾರ್ಯ ಕ್ರಮಗಳು ಆಕರ್ಷಕ ಅನ್ನಿಸತೊಡಗಿವೆ. ಟಿವಿ ಚಾನೆಲ್‌ಗಳಿಗಿಂತ ಯೂಟ್ಯೂಬ್ ಚಾನೆಲ್‌ಗಳ ಜರ್ನಲಿಸ್ಟ್ ಗಳು  ಕೊಡುವ ಸಾಕ್ಷ್ಯ  ಆಧಾರಿತ ಮತ್ತು ವಿಷಯ ಆಧಾರಿತ ಕಾರ್ಯಕ್ರಮಗಳು ಪ್ರಭಾವ ಬೀಳತೊಡಗಿವೆ. 2014ರ ಯುವ ಸಮೂಹವು ಈ 2024ರ ವೇಳೆಗೆ ಹೆಚ್ಚು ಮಾಗಿದೆ ಮತ್ತು ಅನುಭವಿಯಾಗಿದೆ. ಭ್ರಮೆ ಮತ್ತು ಭಾವನೆಯಿಂದ ಹೊರಬಂದು ವಾಸ್ತವದ ಆಧಾರದಲ್ಲಿ ಅಭಿಪ್ರಾಯಗಳನ್ನು ಕಟ್ಟುವ ತಿಳುವಳಿಕೆ ಬಂದಿದೆ. ಅಂದಹಾಗೆ,

ಇಂಥ  ಬದಲಾವಣೆಗಳು ಅದ್ಭುತ ಏನಲ್ಲ. ಎಲ್ಲ ಕಾಲಗಳಲ್ಲೂ ಈ ಬಗೆಯ ಪರಿವರ್ತನೆ ಆಗುತ್ತಲೇ ಇರುತ್ತದೆ. 2004ರಿಂದ 2014ರ ವರೆಗಿನ ಕಾಂಗ್ರೆಸ್ ಅಧಿಕಾರಾವಧಿಯಲ್ಲೂ ಈ ವಿಚಾರ ಬದಲಾವಣೆಗಳು ನಡೆದಿವೆ. ಈ ಅವಧಿಯಲ್ಲಿ ಭ್ರಷ್ಟಾಚಾರ ವಿರೋಧಿ ಅಭಿಯಾನ ಮತ್ತು ನಿರ್ಭಯ ಪ್ರಕರಣಗಳು ಸಮಾಜದ ವಿಚಾರಧಾರೆಯಲ್ಲಿ ಮಹತ್ತರ ಬದಲಾವಣೆಗೆ ಕಾರಣವಾದುವು. ಈ ಹಿಂದೆ ಕಾಂಗ್ರೆಸ್‌ಗೆ ಮತ ಚಲಾಯಿಸಿದವರೇ ಬಿಜೆಪಿಗೆ ಮತ ಚಲಾಯಿಸಿದರು. ಆದರೆ, 2014ರ ಬಳಿಕ ಆದ ಮಹತ್ತರ ಬದಲಾವಣೆ ಏನೆಂದರೆ, ಬಿಜೆಪಿಯ ಸೋಶಿಯಲ್ ಮೀಡಿಯಾ ಕಂಟೆಂಟ್ ಗಳನ್ನು ಮುಖ್ಯವಾಹಿನಿಯ ಟಿವಿ ಚಾನೆಲ್ ಗಳು ವಹಿಸಿಕೊಂಡು ಮಾತಾಡಲು ಪ್ರಾರಂಭಿಸಿದ್ದು. ಮುಸ್ಲಿಮರನ್ನು ಹೊರೆಯಂತೆ, ದೇಶದ್ರೋಹಿಗಳಂತೆ, ಹಿಂದೂ ವಿರೋಧಿ ಗಳಂತೆ ಮತ್ತು ಪಾಕ್, ಸೌದಿ ನಿಷ್ಠರಂತೆ ಬಿಂಬಿಸುತ್ತಿದ್ದ ಬಲಪಂಥೀಯ ಸೋಶಿಯಲ್ ಮೀಡಿಯಾಗಳ ವಿವರಣೆಗಳನ್ನೇ ಇವು ಅನಾಮತ್ತಾಗಿ ಎತ್ತಿಕೊಂಡು ಅದೇ ಭಾಷೆಯಲ್ಲಿ ಮಾತಾಡತೊಡಗಿದುವು. ಈ 2024ರಲ್ಲಿ ಗೋಧಿ ಮೀಡಿಯಾಗಳ ಆ್ಯಂಕರ್‌ಗಳು ಮತ್ತು ಅವರ ಭಾಷೆಯನ್ನು 2010ಕ್ಕೆ ಹೋಲಿಸಿ ನೋಡಿದಾಗ ವ್ಯತ್ಯಾಸ ಸ್ಪಷ್ಟವಾಗಿ ಗೊತ್ತಾಗುತ್ತದೆ.

2010ರ ಆಸುಪಾಸಿನಲ್ಲಿ ಮುಸ್ಲಿಮ್ ದ್ವೇಷ ಎಂಬುದು ಚಾನೆಲ್‌ಗಳ ಅಧಿಕೃತ ಭಾಷೆ ಆಗಿರಲಿಲ್ಲ. ಹಿಂದೂ-ಮುಸ್ಲಿಮ್ ಇಶ್ಯೂವನ್ನು ನಿರಂತರ ಎತ್ತುತ್ತಾ ಮತ್ತು ಅದರ ಮೇಲೆ ಏಕಮುಖ ಕಂಟೆಂಟ್  ತಯಾರಿಸುತ್ತಾ ಏಕಮುಖವಾಗಿ ನಡ ಕೊಳ್ಳುತ್ತಿರಲಿಲ್ಲ. ಬಿಜೆಪಿ ತುಂಬಿದ್ದೇ  ಈ ನಿರ್ವಾತವನ್ನು. ಅದು ಹಿಂದೂ-ಮುಸ್ಲಿಮ್ ಇಶ್ಯೂವನ್ನು ಸೋಶಿಯಲ್ ಮೀಡಿಯದಲ್ಲಿ ಮುನ್ನೆಲೆಗೆ ತಂದಿತು. ಮುಖ್ಯವಾಗಿ ಮುಸ್ಲಿಮ್ ದ್ವೇಷ ಭಾವ ಸಾರ್ವಜನಿಕರಲ್ಲಿ ಸೃಷ್ಟಿಯಾಗುವಂತೆ ನೋಡಿಕೊಳ್ಳುವುದಕ್ಕಾಗಿ ಪ್ರತಿ ವೈಯಕ್ತಿಕ ಪ್ರಕರಣಕ್ಕೂ ಧರ್ಮದ ಬಣ್ಣ ಬಳಿದು ವ್ಯಾಖ್ಯಾನಿಸತೊಡಗಿತು. ಮುಸ್ಲಿಮರ ಜನಸಂಖ್ಯೆ, ಲವ್ ಜಿಹಾದ್, ಅಸುರಕ್ಷಿತ ಹಿಂದೂ ಹೆಣ್ಮಕ್ಕಳು, ಮುಸ್ಲಿಮರ ಪಾಲಾಗುತ್ತಿರುವ ಭೂಮಿ, ಭಯೋತ್ಪಾದನೆ, ಕಾಶ್ಮೀರದ ಪಂಡಿತರ ಮೇಲಿನ ಅನ್ಯಾಯ, ಪಾಕಿಸ್ತಾನದ ಮಸಲತ್ತು, ಬಾಂಗ್ಲಾದಿಂದ  ಮುಸ್ಲಿಮರ ನುಸುಳುವಿಕೆ, ಇಂಡಿಯನ್ ಮುಜಾಹಿದೀನ್, ಅಲ್ ಖೈದಾ, ಹರ್ಕತುಲ್ ಅನ್ಸಾರ್, ಐಸಿಸ್.. ಇತ್ಯಾದಿ ಇತ್ಯಾದಿ ಮುಸ್ಲಿಮ್ ಕೇಂದ್ರಿತ ವಿಷಯಗಳನ್ನು ಕ್ರೋಢೀಕರಿಸಿ ನಿರಂತರ ಸೋಶಿಯಲ್ ಮೀಡಿಯದಲ್ಲಿ ನರೇಟಿವ್‌ಗಳನ್ನು ಸೃಷ್ಟಿಸಿತು. ಟಿವಿ ಚಾನೆಲ್‌ಗಳಲ್ಲಿ ಸಂದರ್ಭಾನುಸಾರ ಮಾತ್ರ ಚರ್ಚೆಗೊಳಗಾಗುತ್ತಿದ್ದ ಇಂಥ ವಿಷಯಗಳನ್ನು ಬಿಜೆಪಿ ಐಟಿ ಸೆಲ್ ದಿನದ 24 ಗಂಟೆಯೂ ಚರ್ಚಿಸಲು ಮತ್ತು ವಾಟ್ಸಪ್‌ನಲ್ಲಿ ಹರಿಬಿಡಲು ಪ್ರಾರಂಭಿಸಿದAತೆಯೇ ಜನರು ಆಕರ್ಷಿತರಾದರು. ಅವರಿಗೂ ಹೌದು ಅನ್ನಿಸತೊಡಗಿತು. ಅವರೂ ಮಾತಾಡತೊಡಗಿದರು. ಬಳಿಕ ಇದು ಪತ್ರಿಕೆ ಮತ್ತು ಟಿವಿ ಚಾನೆಲ್‌ಗಳ ಪಡಸಾಲೆಗೂ ಪ್ರವೇಶಿಸಿತು. ಹೀಗೆ ಬಿಜೆಪಿ ಐಟಿ ಸೆಲ್ ಸೃಷ್ಟಿಸಿದ ಪ್ರೊಪಗಾಂಡವು ಟಿವಿ ಮತ್ತು ಪತ್ರಿಕೆಗಳ ಅಧಿಕೃತ ಭಾಷೆಯಾಗಿ ಮತ್ತು ನಿರಂತರ ಕಾರ್ಯಕ್ರಮಗಳ ವಸ್ತುವಾಗಿ ಮಾರ್ಪಟ್ಟಿತು. ಆದರೆ, ಇದೀಗ ಅದೇ ಸೋಶಿಯಲ್ ಮೀಡಿಯಾ ದಿಂದ ಬಿಜೆಪಿ ತೀವ್ರ ಪ್ರತಿರೋಧವನ್ನು ಎದು ರಿಸುತ್ತಿದೆ. ಯಾವ ಮಾಧ್ಯಮವನ್ನು ಬಳಸಿ ಅದು ಅಧಿಕಾರಕ್ಕೆ ಬಂತೋ ಅದೇ ಮೀಡಿಯಾ ಮೂಲಕವೇ ಧ್ರುವ್ ರಾಠಿ, ರವೀಶ್ ಕುಮಾರ್ ಮತ್ತು ಅಸಂಖ್ಯ ಯೂಟ್ಯೂಬರ್‌ಗಳು ಸಡ್ಡು ಹೊಡೆಯುತ್ತಿದ್ದಾರೆ. ಇವರ ಜೊತೆಗೇ ಅಸಂಖ್ಯ ಯೂಟ್ಯೂಬ್ ಚಾನೆಲ್‌ಗಳೂ ಬಿಜೆಪಿ ಸುಳ್ಳುಗಳಿಗೆ ಕನ್ನಡಿ ಹಿಡಿಯುತ್ತಿವೆ. ಅಧಿಕಾರಕ್ಕೇರಲು ಬಿಜೆಪಿ ಬಳಸಿದ ಮೆಟ್ಟಿಲನ್ನೇ ಇದೀಗ ವಿರೋಧ ಪಕ್ಷಗಳೂ ಬಳಸುತ್ತಿವೆ. ಇದರಿಂದ ನಿಜಕ್ಕೂ ಅನಾಥವಾಗಿರುವುದು ಟಿವಿ ಚಾನೆಲ್‌ಗಳು. ಬಿಜೆಪಿಯನ್ನು ನಂಬಿ ಅದರ ಕಾಲಬುಡಕ್ಕೆ ತನ್ನನ್ನು ಒಡ್ಡಿಕೊಂಡ ಇವುಗಳೆಲ್ಲ ಇದೀಗ ಜನರಿಂದಲೂ ಮತ್ತು ವಿರೋಧ ಪಕ್ಷಗಳಿಂದಲೂ ತಿರಸ್ಕೃತಗೊಂಡ ಸ್ಥಿತಿಯಲ್ಲಿದೆ. ಅವುಗಳಲ್ಲಿ ಗಟ್ಟಿಯಾದ ಕಂಟೆಂಟ್ ಗಳಿಲ್ಲ. ಕಣ್ಣು ಮುಚ್ಚಿ ಮೋದಿಯನ್ನು ಬೆಂಬಲಿಸುತ್ತಾ ಬಂದಿರುವ ಅವುಗಳಿಗೆ ದಿಢೀರನೇ ಪಥ ಬದಲಿಸುವುದಕ್ಕೂ ಆಗುವುದಿಲ್ಲ. ಈಗಾಗಲೇ ವಿಶ್ವಾಸಾರ್ಹತೆಯನ್ನು ಕಳಕೊಂಡಿರುವ ಅವುಗಳು ಇದೀಗ ಮೋದಿ ವಿರೋಧಿ ನೀತಿ ಅಳವಡಿಸಿಕೊಂಡರೆ ಮತ್ತಷ್ಟು ನಗೆಪಾಟಲಿಗೀಡಾಗುವ ಅವಕಾಶವೂ ಇದೆ. ಒಂದAತೂ ಸ್ಪಷ್ಟ,

ಸೋಶಿಯಲ್ ಮೀಡಿಯಾದ ಈ ಕಾಲದಲ್ಲಿ ಯಾರೂ ಹೆಚ್ಚು ಸಮಯ ಬಾಳುವುದಿಲ್ಲ. ಯಾವ ಸುಳ್ಳಿಗೂ ದೀರ್ಘ  ಆಯುಷ್ಯವಿಲ್ಲ.


No comments:

Post a Comment