Thursday, June 27, 2024

ಜನರನ್ನು ನರಕಕ್ಕೆಸೆಯಲು ಕಾದು ಕುಳಿತ ಕಠಿಣ ಹೃದಯಿಯೇ ಅಲ್ಲಾಹ್?



ಪವಿತ್ರ ಕುರ್‌ಆನಿನ ಅಲ್ ಬಕರ ಅಧ್ಯಾಯದ 260ನೇ ವಚನವನ್ನು ನೀವು ಈಗಾಗಲೇ ಓದಿರಬಹುದು. ಆದರೆ ಇನ್ನೊಮ್ಮೆ ಗಮನವಿಟ್ಟು ಓದಿ.  ಪ್ರವಾದಿ ಇಬ್ರಾಹೀಮ್(ಅ) ಮತ್ತು ಅಲ್ಲಾಹನ ನಡುವಿನ ಆ ಸಂಭಾಷಣೆ ಬರೇ ಸಂಭಾಷಣೆ ಅಲ್ಲ. ಅದರಲ್ಲಿ ಅಪಾರ ಪ್ರೀತಿ ಮತ್ತು ಒಲುಮೆ  ಇದೆ. ದಾಸ ಮತ್ತು ಒಡೆಯ ಎಂಬ ಭಾವವನ್ನು ಮೀರಿದ ಆಪ್ತತೆಯಿದೆ. ಪ್ರವಾದಿ ಇಬ್ರಾಹೀಮ್(ಅ) ಅಲ್ಲಾಹನಲ್ಲಿ ಹೀಗೆ ಪ್ರಶ್ನಿಸುತ್ತಾರೆ,

‘ದೇವಾ, ಸತ್ತವರನ್ನು ನೀನು ಹೇಗೆ ಜೀವಂತಗೊಳಿಸುತ್ತೀ?’

ಈ ಪ್ರಶ್ನೆಗೆ ಅಲ್ಲಾಹನು ನೇರವಾಗಿ ಉತ್ತರಿಸುವುದಿಲ್ಲ. ಆತ ಪ್ರಶ್ನೆಯೊಂದರ ಮೂಲಕ ಇಬ್ರಾಹೀಮರನ್ನು ಕೆಣಕುತ್ತಾನೆ,

‘ಅಲ್ಲ, ನಿಮಗೆ ಇನ್ನೂ ನಂಬಿಕೆ ಬಂದಿಲ್ಲವೇ?’

ಅದಕ್ಕೆ ಇಬ್ರಾಹೀಮ್(ಅ) ಹೀಗೆ ಉತ್ತರಿಸುತ್ತಾರೆ,

‘ನಂಬಿಕೆ ಇದೆ ದೇವಾ, ಆದರೆ ಮನಸ್ಸಿನ ತೃಪ್ತಿಗಾಗಿ ಕೇಳುತ್ತಿದ್ದೇನೆ..’

ಈ ಸಂಭಾಷಣೆಯ ಶೈಲಿಯನ್ನೊಮ್ಮೆ ಗಮನಿಸಿ. ಅಲ್ಲಾಹನು ಮಾತಾಡಿರುವುದು ಸಾಮಾನ್ಯ ವ್ಯಕ್ತಿಯ ಜೊತೆ ಅಲ್ಲ. ಪ್ರವಾದಿಯ ಜೊತೆ. ಅಲ್ಲಾಹ್  ಅಂದರೆ ಏನು, ಆತನ ಸಾಮರ್ಥ್ಯ ಏನು. ಆತ ಏನನ್ನು ಬಯಸುತ್ತಾನೆ, ಸೃಷ್ಟಿಗಳು ಮತ್ತು ಸೃಷ್ಟಿಕರ್ತನ ನಡುವಿನ ಸಂಬಂಧ ಹೇಗಿರಬೇಕು,  ಒಡೆಯನ ಜೊತೆ ದಾಸನ ಮಾತುಕತೆ ಏನಾಗಿರಬೇಕು... ಇತ್ಯಾದಿಗಳೆಲ್ಲ ಗೊತ್ತಿಲ್ಲದ ವ್ಯಕ್ತಿ ಅಲ್ಲಾಹನಲ್ಲಿ, ‘ನೀನು ಹೇಗೆ ಸತ್ತವರನ್ನು  ಜೀವಂತಗೊಳಿಸುತ್ತೀ...’ ಎಂದು ಪ್ರಶ್ನಿಸುವುದು ಬೇರೆ, ಪ್ರವಾದಿ ಇಬ್ರಾಹೀಮ್(ಅ) ಪ್ರಶ್ನಿಸುವುದು ಬೇರೆ. ಈ ಸಂಭಾಷಣೆ ನಡೆಸುವಾಗ  ಇಬ್ರಾಹೀಮ್(ಅ) ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ಅವರನ್ನು ಅಲ್ಲಾಹನು ಪ್ರವಾದಿಯಾಗಿ ಆಯ್ಕೆ ಮಾಡಿದ್ದನು. ಅಲ್ಲಾಹನೇ ಆಯ್ಕೆ ಮಾಡಿದ  ವ್ಯಕ್ತಿಗೆ ಅಲ್ಲಾಹನ ಜೊತೆಗಿನ ಮಾತುಕತೆ ಹೇಗಿರಬೇಕು ಎಂಬುದು ಗೊತ್ತಿರಲೇಬೇಕು. ಅಲ್ಲಾಹನ ಸಾಮರ್ಥ್ಯ ಏನು ಅನ್ನುವುದೂ  ಗೊತ್ತಿರಲೇಬೇಕು. ಹೀಗಿದ್ದ ಮೇಲೂ, ‘ನೀನು ಸತ್ತವರನ್ನು ಹೇಗೆ ಜೀವಂತಗೊಳಿಸುತ್ತೀ’ ಎಂದು ಇಬ್ರಾಹೀಮ್(ಅ) ಕೇಳಿದ್ದು ಏಕೆ? ಆ  ಧೈರ್ಯ ಅವರಲ್ಲಿ ಬಂದದ್ದು ಹೇಗೆ? ತಾನು ಹೀಗೆ ಪ್ರಶ್ನಿಸುವುದು ಅಧಿಕ ಪ್ರಸಂಗ ವಾದೀತು ಎಂಬ ಭಯ ಅವರಲ್ಲಿ ಮೂಡದಿರಲು  ಕಾರಣವೇನು?

ನಿಜವಾಗಿ,

ಲ್ಲಾಹನನ್ನು ಇವತ್ತು ನಾವು ಹೇಗೆ ಪರಿಭಾವಿಸಿಕೊಂಡಿದ್ದೇವೋ ಅದಕ್ಕಿಂತ ಭಿನ್ನವಾಗಿ ಇಬ್ರಾಹೀಮ್(ಅ)ರು ಅಲ್ಲಾಹನನ್ನು ಪರಿ ಭಾವಿಸಿದ್ದರು  ಎಂದೇ ಈ ಸಂಭಾಷಣೆ ಸ್ಪಷ್ಟಪಡಿಸುತ್ತದೆ. ಈ ಸಂಭಾಷಣೆಯಲ್ಲಿ ಗೆಳೆಯರಂಥ ಭಾವವಿದೆ. ತನಗೆ ಏನನಿಸುತ್ತದೋ ಅವೆಲ್ಲವನ್ನೂ ಕೇಳಿ  ತಿಳಿದುಕೊಳ್ಳುವ ಹಂಬಲವಿದೆ. ಅಲ್ಲಾಹನನ್ನು ಗೆಳೆಯನಾಗಿ ಮತ್ತು ಆಪ್ತನಾಗಿ ಮಾಡಿಕೊಂಡಾಗ ಮಾತ್ರ ಈ ಬಗೆಯ ಸಂಭಾಷಣೆ ಸಾಧ್ಯ. ನಾವು  ಗೆಳೆಯರನ್ನೋ ಆಪ್ತರನ್ನೋ ಭೇಟಿಯಾಗುವ ಸಂದರ್ಭಕ್ಕಾಗಿ ಕಾಯುತ್ತಿರುತ್ತೇವೆ. ಅವರು ಸಿಕ್ಕಿ ದರೆ ಅಪಾರ ಖುಷಿ ಪಡುತ್ತೇವೆ. ಅವರ ಜೊತೆ  ಗೊತ್ತಿರುವುದನ್ನು ಮತ್ತು ಗೊತ್ತಿಲ್ಲದಿರುವುದನ್ನೂ ಪ್ರಶ್ನಿಸಿ ತಿಳಿದುಕೊಳ್ಳುತ್ತೇವೆ. ಮಾರು ತ್ತರ ನೀಡುತ್ತೇವೆ. ಇಲ್ಲಿ ಪರದೆ ಎಂಬುದು ಇರುವುದೇ  ಇಲ್ಲ. ಅಲ್ಲಾಹನನ್ನು ಹೀಗೆ ಗೆಳೆಯನಂತೆ ಪರಿಭಾವಿಸಿಕೊಂಡು ನಮಗೆ ಮಾತಾಡಲು ಸಾಧ್ಯವೇ? ಅಲ್ಲಾಹ್ ಒಡೆಯ ನಿಜ. ಆದರೆ ಒಡೆಯ  ನಾಚೆಗೆ ಗೆಳೆಯನೂ ಆಗಬಲ್ಲನೇ? ಹಾಗೆ ಆಗುವಾಗ ಉಂಟಾಗುವ ರೋಮಾಂಚನ ಯಾವ ರೀತಿಯದ್ದಿರಬಹುದು? ಹಾಗಂತ,

ಇವತ್ತು ನಾವು ಅಲ್ಲಾಹನನ್ನು ಪರಿಭಾವಿಸಿಕೊಂಡಿರುವುದು ಹೇಗೆ? ಜನರನ್ನು ನರಕಕ್ಕೆ ಹಾಕಲು ಹೊಂಚು ಹಾಕಿ ಕುಳಿತಿರುವ ನಿರ್ದಯಿಯಂತೆ  ಆತನನ್ನು ಪ್ರಸ್ತುತಪಡಿಸುತ್ತಿದ್ದೇವೆಯೇ? ಅಲ್ಲಾಹ ನನ್ನು ಭೀತಿಯ ಅನ್ವರ್ಥ ರೂಪವಾಗಿ ಕಟ್ಟಿ ಕೊಡುತ್ತಿದ್ದೇವೆಯೇ? ಒಂದುವೇಳೆ, ಪ್ರವಾದಿ  ಇಬ್ರಾಹೀಮರಂತೆ ನಮ್ಮಲ್ಲಾರಾದರೂ ಅಲ್ಲಾಹನ ಶಕ್ತಿ-ಸಾಮರ್ಥ್ಯಗಳ ಬಗ್ಗೆ ಪ್ರಶ್ನಿಸಿದರೆ ನಾವು ಇವತ್ತು ಹೇಗೆ ಉತ್ತರ ಕೊಡಬಲ್ಲೆವು?  ಉತ್ತರದಲ್ಲಿ ಎಷ್ಟು ಕಠಿಣ ಪದಗಳಿದ್ದೀತು? ಧ್ವನಿಯಲ್ಲಿ ಬೆದರಿಕೆಯ ಭಾವ ಇದ್ದೀತೇ? ಪ್ರಶ್ನಿಸಿದವನ ವಿಶ್ವಾಸವನ್ನೇ ಅನುಮಾನಕ್ಕೀಡು ಮಾಡುವ  ರೀತಿಯಲ್ಲಿ ಇದ್ದೀತೇ? ಆತನಿಗೆ ಧರ್ಮ ವಿರೋಧಿ ಎಂಬ ಪಟ್ಟ ಕಟ್ಟುವ ರೀತಿಯಲ್ಲಿ ಇದ್ದೀತೇ?

ಇನ್ನೊಂದು ಸಂಭಾಷಣೆ ನೋಡಿ.

‘ನಾನು ನಿನ್ನ ಪ್ರಭುವಾಗಿದ್ದೇನೆ ಮೂಸಾ. ನೀನು ಪಾದರಕ್ಷೆಯನ್ನು ಕಳಚಿ ಇಡು. ನೀನೀಗ ಪವಿತ್ರ ತುವಾ ಪರ್ವತದಲ್ಲಿದ್ದೀ.’
‘ಓ ಮೂಸಾ, ನಿನ್ನ ಬಲಗೈಯಲ್ಲಿ ಇರುವುದು ಏನು?’
‘ಇದು ನನ್ನ ಲಾಠಿ ಪ್ರಭು. ನಾನಿದನ್ನು ಊರಿಕೊಂಡು ನಡೆಯುತ್ತೇನೆ. ಇದರಿಂದ ಆಡುಗಳಿಗೆ ಎಲೆಗಳನ್ನು ಬೀಳಿಸುತ್ತೇನೆ. ಇದರಿಂದ ಇನ್ನೂ  ಅನೇಕ ಪ್ರಯೋಜನಗಳನ್ನು ಪಡೆಯುತ್ತೇನೆ.’
‘ಓ ಮೂಸಾ, ಆ ಬೆತ್ತವನ್ನೊಮ್ಮೆ ಎಸೆದು ಬಿಡು.’
ಮೂಸಾ ಹಾಗೆ ಮಾಡಿದ ಕೂಡಲೇ ಆ ಬೆತ್ತ ಹಾವಾಗಿ ಮಾರ್ಪಾಡಾಗುತ್ತದೆ. ಮೂಸಾ(ಅ) ಭಯಪಡುತ್ತಾರೆ. ಆಗ ಅಲ್ಲಾಹನು ಸಾಂತ್ವನ ಪಡಿಸುವುದು ಹೀಗೆ:
‘ಅದನ್ನು ಹಿಡ್ಕೊಳ್ಳಿ. ಹೆದರಬೇಡಿ. ಅದನ್ನು ನಾನು ಪೂರ್ವ ಸ್ಥಿತಿಗೆ ತರುತ್ತೇನೆ.’

ಪವಿತ್ರ ಕುರ್‌ಆನಿನ 20ನೇ ಅಧ್ಯಾಯವಾದ ತ್ವಾಹಾದಲ್ಲಿ ದಾಖಲಾಗಿರುವ ಈ ಇಡೀ ಸಂಭಾಷಣೆಯನ್ನೊಮ್ಮೆ ಗಮನಿಸಿ ನೋಡಿ. ಮೂಸಾರ  ಕೈಯಲ್ಲಿ ಇರುವುದು ಏನು ಅನ್ನುವುದು ಅಲ್ಲಾಹನಿಗೆ ಗೊತ್ತಿಲ್ಲ ಎಂದಲ್ಲ ಮತ್ತು ಅದನ್ನು ಅವರು ಯಾವು ದಕ್ಕೆಲ್ಲಾ ಉಪಯೋಗಿಸುತ್ತಾರೆ  ಎಂಬುದು ತಿಳಿದಿಲ್ಲ ಎಂದೂ ಅಲ್ಲ. ಬೆತ್ತ ಹಾವಾಗುತ್ತದೆ ಎಂದು ಅದನ್ನು ಎಸೆಯುವ ಮೊದಲೇ ಮೂಸಾರಿಗೆ ಅಲ್ಲಾಹನು ತಿಳಿಸಿ ಧೈರ್ಯ  ತುಂಬಬಹುದಿತ್ತು. ಒಡೆಯನ ವರ್ತನೆ ಸಾಮಾನ್ಯವಾಗಿ ಹಾಗೆಯೇ ಇರುತ್ತದೆ. ತನ ಗೆಲ್ಲವೂ ಗೊತ್ತು ಎಂಬ ಭಾವವನ್ನು ದಾಸನ ಮೇಲೆ  ಪ್ರಯೋಗಿಸುವ ಶೈಲಿ ಒಡೆಯನದು. ಆದರೆ ಅಲ್ಲಾಹನು ಇಲ್ಲಿ ಹಾಗೆ ಮಾಡಿಯೇ ಇಲ್ಲ. ಬೆತ್ತವನ್ನು ಎಸೆಯಲು ಹೇಳುತ್ತಾನೆ. ಅದಕ್ಕಿಂತ  ಮೊದಲು, ನಿನ್ನ ಕೈಯಲ್ಲಿರುವುದು ಏನು ಮತ್ತು ಅದು ಯಾಕೆ ಎಂದು ಗೆಳೆಯನಂತೆ ಪ್ರಶ್ನಿಸುತ್ತಾನೆ. ಮೂಸಾ(ಅ) ಕೂಡಾ ಹಾಗೆಯೇ  ಸಹಜವಾಗಿ ಉತ್ತರಿಸುತ್ತಾ ಹೋಗುತ್ತಾರೆ. ಅದುಬಿಟ್ಟು, ನೀನೇಕೆ ಪ್ರಶ್ನಿಸುತ್ತೀ, ನಿನಗೆ ಗೊತ್ತಲ್ಲವೇ ದೇವಾ.. ಎಂದು ಮರು ಪ್ರಶ್ನಿಸುವುದೇ ಇಲ್ಲ.  ಇಲ್ಲಿ ದಾಸ ಮತ್ತು ಒಡೆಯ ಎಂಬ ಭಾವದ ಆಚೆಗೆ ಇಬ್ಬರು ಗೆಳೆಯರು ಸರಾಗವಾಗಿ ಮಾತುಕತೆ ನಡೆಸಿದಂತೆ ತೋರುತ್ತದೆ. ಆದರೆ ಅಲ್ಲಾಹ್  ಗೆಳೆಯನಿಗಿಂತಲೂ ಮಿಗಿಲಾಗಿ ಒಡೆಯನೂ ಆಗಿದ್ದಾನೆ ಎಂಬುದನ್ನು ಬೆತ್ತ ಹಾವಾಗುವ ಮೂಲಕ ಸಾಬೀತುಪಡಿಸಲಾಗುತ್ತದೆ. ಆದರೆ ಅಲ್ಲೂ  ಅಲ್ಲಾಹನು ತನ್ನ ಮಹಿಮೆಯನ್ನು ಹೇಳುವ ಬದಲು, ‘ಅದನ್ನು ಹಿಡ್ಕೊಳ್ಳಿ, ಭಯ ಬೀಳಬೇಡಿ’ ಎಂದು ಸಾಂತ್ವನಿಸುವ ಮೂಲಕ ಗೆಳೆಯನಂಥ  ಭಾವವನ್ನೇ ಮುಂದುವರಿಸುತ್ತಾನೆ. ಇದೇವೇಳೆ,

‘ನೀನು ಮತ್ತು ನಿನ್ನ ಸಹೋದರ ಫಿರ್‌ಔನನ ಬಳಿಗೆ ಹೋಗಬೇಕು’ ಎಂದು ಅಲ್ಲಾಹನು ಮೂಸಾ(ಅ)ರ ಜೊತೆ ಹೇಳುತ್ತಾನೆ. ಆದರೆ,  ಅಲ್ಲಾಹನ ಆದೇಶವನ್ನು ಮರು ಮಾತಿಲ್ಲದೇ ಒಪ್ಪಿಕೊಂಡು ಹೊರಡಬೇಕಾಗಿದ್ದ ಮೂಸಾ(ಅ) ಹಾಗೆ ಮಾಡುವುದಿಲ್ಲ. ಅದರ ಬದಲು,

‘ಫಿರ್‌ಔನ್ ನಮ್ಮ ಮೇಲೆ ಅತಿರೇಕವೆಸಗಬಹುದು ಮತ್ತು ಮುಗಿ ಬೀಳಬಹುದು ಎಂಬ ಆತಂಕ ನಮಗಿದೆ’ ಎಂದು ಅಲ್ಲಾಹನಲ್ಲಿ ಹೇಳುತ್ತಾರೆ.  ಇದಕ್ಕೆ ಪ್ರತಿಯಾಗಿ, ಅಲ್ಲಾಹನು ಮೂಸಾರನ್ನು ಗದರಿಸಬಹುದಿತ್ತು. ‘ಫಿರ್‌ಔನ್ ಏನು ಮಾಡಬಲ್ಲ ಎಂಬುದು ನಿನಗಿಂತ ನನಗೆ ಗೊತ್ತು, ನೀನು  ಆತಂಕ ಪಡಬೇಕಾಗಿಲ್ಲ, ಹೇಳಿದ್ದನ್ನು ಮಾಡು..’ ಎಂದು ಆದೇಶದ ಧ್ವನಿಯಲ್ಲಿ ಹೇಳಬಹುದಿತ್ತು. ಆದರೆ ಅಲ್ಲಾಹನು, ‘ಹೆದರಬೇಡಿ, ನಾನು  ನಿಮ್ಮ ಜೊತೆ ಇದ್ದೇನೆ, ಎಲ್ಲವನ್ನೂ ಆಲಿಸುತ್ತಿದ್ದೇನೆ ಮತ್ತು ವೀಕ್ಷಿಸುತ್ತಿದ್ದೇನೆ’ ಎಂದು ಆಪ್ತಭಾವದಲ್ಲಿ ಸಾಂತ್ವನಿಸುತ್ತಾನೆ. ಈ ಸಂಭಾಷಣೆಯಲ್ಲಿ  ಒಡೆಯ ಮತ್ತು ದಾಸ ಎಂಬುದಕ್ಕಿಂತ  ಮಿಗಿಲಾದ ಗೆಳೆತನದ ಭಾವ ಎದ್ದು ಕಾಣುತ್ತದೆ. ಅಲ್ಲದೇ, ‘ನನ್ನ ನಾಲಗೆಯಲ್ಲಿ ತೊಡಕಿದೆ ಪ್ರಭೂ,  ಅದನ್ನು ನೀಗಿಸು’ ಎಂದು ಮೂಸಾ(ಅ) ಅಲ್ಲಾಹ ನಲ್ಲಿ ಕೇಳಿಕೊಳ್ಳುತ್ತಾರೆ. ‘ಫಿರ್‌ಔನನೊಡನೆ ನಯವಾಗಿ ಮಾತಾಡಬೇಕು..’ ಎಂದು ಅಲ್ಲಾಹ ನು ಮೂಸಾರಿಗೆ ಹೇಳಿಕೊಡುತ್ತಾನೆ.

ಒಂದುರೀತಿಯಲ್ಲಿ, ಇದೊಂದು ಹೃದ್ಯ ಸಂಭಾಷಣೆ. ನೀನು ಹೀಗೀಗೆ ಮಾಡು ಎಂದು ಅಲ್ಲಾಹನು ಹೇಳುವಾಗ, ‘ನೀನು ಹೀಗೀಗೆ ನನಗೆ ಅನುಕೂಲತೆಗಳನ್ನು ಮಾಡಿಕೊಡು’ ಎಂದು ಮೂಸಾ(ಅ) ಹೇಳುತ್ತಾರೆ. ಅಂದಹಾಗೆ, ಮೂಸಾ(ಅ)ರ ಮನಸ್ಸಲ್ಲೇನಿದೆ ಎಂದು ಅಲ್ಲಾಹನಿಗೆ  ಮೊದಲೇ ಗೊತ್ತು ಮತ್ತು ಅಲ್ಲಾಹನಿಗೆ ಮೊದಲೇ ಗೊತ್ತು ಎಂಬುದಾಗಿ ಮೂಸಾರಿಗೂ(ಅ) ಗೊತ್ತು. ತಾಹಾ ಅಧ್ಯಾಯದ ಈ  ಸಂಭಾಷಣೆಯನ್ನು ಓದುವಾಗ, ನಾವು ಅಲ್ಲಾಹನನ್ನು ಹೇಗೆ ಪರಿಭಾವಿಸಿಕೊಳ್ಳಬೇಕು ಅನ್ನುವ ಸ್ಪಷ್ಟತೆಯೊಂದು ಸಿಗುತ್ತದೆ. ಅಲ್ಲಾಹ್ ಬೆತ್ತ ಹಿಡಿದು  ನಿಂತಿರುವ ಪೊಲೀಸ್ ಅಲ್ಲ. ಆತ ನಮ್ಮ ಗೆಳೆಯನೂ ಹೌದು, ಆಪ್ತನೂ ಹೌದು. ಗೆಳೆಯನಂಥ ಭಾವದಲ್ಲಿ ಆತನೊಂದಿಗೆ ಸಂಭಾಷಣೆ ನಡೆಸುವ  ಸಲುಗೆಯನ್ನು ನಾವು ಬೆಳೆಸಿಕೊಳ್ಳಬೇಕು. ಸಹಜವಾಗಿ ಮಾತಾಡಬೇಕು. ಪರದೆ ಇಲ್ಲದೇ ಆತನ ಜೊತೆ ಮಾತಾಡುತ್ತಿದ್ದೇನೆ ಅನ್ನುವ ಫೀಲಿಂಗ್  ಅನ್ನು ಬೆಳೆಸಿಕೊಳ್ಳಬೇಕು. ಸೌರ್ ಗುಹೆಯಲ್ಲಿ ತನ್ನ ಜೊತೆ ಇದ್ದ ಅಬೂಬಕರ್(ರ)ರನ್ನು ಅಲ್ಲಾಹನ ಪ್ರವಾದಿ(ಸ) ಸಾಂತ್ವನಿಸಿದ ರೀತಿಯನ್ನು  ಅತ್ತೌಬ ಅಧ್ಯಾಯದ 40ನೇ ವಚನದಲ್ಲಿ ಹೀಗೆ ಉಲ್ಲೇಖಿಸಲಾಗಿದೆ.

‘ಖೇದಿಸಬೇಡಿ, ಅಲ್ಲಾಹ್ ನಮ್ಮ ಜೊತೆ ಇದ್ದಾನೆ.’

ಬನೀ ಇಸ್ರಾಈಲ್ ಸಮುದಾಯವನ್ನು ಕರಕೊಂಡು ಹೊರಟ ಮೂಸಾರನ್ನು(ಅ) ಫಿರ್‌ಔನ್ ಮತ್ತು ಸೇನೆ ಬೆನ್ನಟ್ಟಿ ಬರುತ್ತದೆ ಮತ್ತು ಸಮುದ್ರದ  ಎದುರು ಎರಡೂ ತಂಡಗಳು ಮುಖಾಮುಖಿ ಯಾಗುವ ಸನ್ನಿವೇಶ ಸೃಷ್ಟಿಯಾದಾಗ ಮೂಸಾ(ಅ) ಸಂಗಡಿಗ ರೊಂದಿಗೆ ಹೀಗೆ  ಹೇಳಿರುವುದಾಗಿ ಅಶ್ಶುಅರಾ ಅಧ್ಯಾಯದ 62ನೇ ವಚನದಲ್ಲಿ ಇದೆ,

‘ನನ್ನ ಸಂಗಡ ನನ್ನ ಪ್ರಭು ಇದ್ದಾನೆ. ಅವನು ಖಂಡಿತ ವಾಗಿಯೂ ನನಗೆ ದಾರಿ ತೋರುವನು.’

ಲ್ಲಾಹನ ಮೇಲೆ ಎಂಥ ಅಚಂಚಲ ವಿಶ್ವಾಸವನ್ನು ತಾಳಬೇಕು ಎಂಬುದಕ್ಕೆ ಈ ಎರಡೂ ಘಟನೆಗಳು ಅತ್ಯುತ್ತಮ ಉದಾಹರಣೆ. ಪ್ರವಾದಿ  ಮುಹಮ್ಮದ್(ಸ) ಮತ್ತು ಪ್ರವಾದಿ ಮೂಸಾ(ಅ) ಅಲ್ಲಾಹನ ಮೇಲೆ ಎಂಥ ವಿಶ್ವಾಸವನ್ನು ಹೊಂದಿದ್ದರು ಅನ್ನುವುದನ್ನು ಇವೆರಡೂ  ಸೂಚಿಸುತ್ತದೆ. ಇದೇ ಮೂಸಾ(ಅ)ರು ತುವಾ ಪರ್ವತದಲ್ಲಿ ಅಲ್ಲಾಹನೊಂದಿಗೆ ನಡೆಸಿದ ಸಂಭಾಷಣೆಯ ವಿವರವನ್ನು ಅಲ್ ಅಅï‌ರಾಫ್  ಅಧ್ಯಾಯದಲ್ಲಿ ನೀಡಲಾಗಿದೆ. ‘ನನಗೆ ನಿನ್ನನ್ನು ಒಮ್ಮೆ ನೋಡಬೇಕು..’ ಎಂದು ಮೂಸಾ(ಅ) ಅಲ್ಲಾಹನಲ್ಲಿ ಹೇಳುತ್ತಾರೆ. ಹಾಗಂತ, ತಾನು ಹೀಗೆ  ಅರಿಕೆ ಮಾಡುವುದು ಸರಿಯೋ, ಇದು ಕೆಟ್ಟ ಆಸೆ ಆಗಲಾರದೇ, ಅಲ್ಲಾಹನಿಗೆ ಅವಿಧೇಯತೆ ತೋರಿದಂತೆ ಆಗಬಹುದೇ.. ಎಂದೆಲ್ಲಾ ಮೂಸಾ (ಅ) ಆಲೋಚಿಸುವುದಿಲ್ಲ ಮತ್ತು ಅಲ್ಲಾಹನು ಗದರಿಸುವುದೂ ಇಲ್ಲ. ‘ನೀನು ನನ್ನನ್ನು ನೋಡಲಾರೆ ಮೂಸಾ..’ ಎಂದು ಅಲ್ಲಾಹನು  ಹೇಳುತ್ತಾನೆ. ಬಳಿಕ ಅವರು ಮೂರ್ಛೆ ತಪ್ಪಿ ಬೀಳುತ್ತಾರೆ ಮತ್ತು ಎಚ್ಚರವಾದ ಕೂಡಲೇ, ಪಶ್ಚಾತ್ತಾಪ ಪಡುತ್ತಾರೆ, ನೀನು ಮಹಾ ಪರಿಶುದ್ಧನು  ಅನ್ನುತ್ತಾರೆ. ನಿಜವಾಗಿ,

ಲ್ಲಾಹನು ನಾವು ಕರೆದಾಗ ಉತ್ತರಿಸುವ ಕರುಣಾಮಯಿ ಶಕ್ತಿ. ನೀವು ನನ್ನನ್ನು ಸ್ಮರಿಸಿದರೆ ನಾನು ನಿಮ್ಮನ್ನು ಸ್ಮರಿಸುವೆನು ಎಂದು (2:152)  ಅಲ್ಲಾಹನು ಹೇಳಿದ್ದಾನೆ. ‘ನೀವು ಎಲ್ಲಿದ್ದರೂ ನಾನು ನಿಮ್ಮ ಜೊತೆ ಇದ್ದೇನೆ’ (57:4) ಎಂದೂ ಹೇಳಿದ್ದಾನೆ. ಇಷ್ಟು ಹತ್ತಿರ ವಾಗಿರುವ ಮತ್ತು  ಆಪ್ತವಾಗಿರುವ ಅಲ್ಲಾಹನನ್ನು ಹೃದಯದ ಹತ್ತಿರ ತಂದು ಮಾತಾಡಿಸುವ ಸಲುಗೆಯನ್ನು ನಾವು ಬೆಳೆಸಿಕೊಳ್ಳಬೇಕು. ಆತನೊಂದಿಗೆ ಗೆಳೆತನವನ್ನು  ಬೆಳೆಸಿಕೊಂಡಾಗ ಸಂಭಾಷಣೆಗೆ ಮಿತಿಯೂ ಇರುವುದಿಲ್ಲ. ಪರದೆಯೂ ಇರುವುದಿಲ್ಲ. ಅಂದುಕೊಂಡದ್ದನ್ನೆಲ್ಲ ಆತನೊಂದಿಗೆ ಹೇಳಿ  ಹಗುರವಾಗಬಹುದು. ತನಗೆ ಬೇಕಾದುದನ್ನೆಲ್ಲ ಕೇಳಿ ಸಮಾಧಾನಪಟ್ಟುಕೊಳ್ಳಬಹುದು. ಮಾತ್ರವಲ್ಲ, ನೀವು ಕೇಳಿದರೆ ನಾನು ಉತ್ತರಿಸುತ್ತೇನೆ  ಎಂದು ಆತನೇ ಹೇಳಿರುವುದರಿಂದ ಆ ಬಗ್ಗೆ ದೃಢವಿಶ್ವಾಸವನ್ನೂ ತಾಳಬೇಕು. ಶತ್ರುಗಳು ಸುತ್ತುವರಿದಿದ್ದಾಗಲೂ ಸೌರ್ ಗುಹೆಯೊಳಗಿದ್ದ  ಪ್ರವಾದಿಯವರು ತಾಳಿದ್ದ ಅದೇ ದೃಢವಿಶ್ವಾಸ. ಮುಂದೆ ಸಮುದ್ರ ಮತ್ತು ಬೆನ್ನ ಹಿಂದೆ ಫಿರ್‌ಔನ್ ಎಂಬ ಸ್ಥಿತಿ ಇದ್ದಾಗಲೂ ಪ್ರವಾದಿ ಮೂಸಾ (ಅ)ರಲ್ಲಿದ್ದ ಅದೇ ಅಚಂಚಲ ವಿಶ್ವಾಸ. ಅಲ್ಲಾಹ್ ನನ್ನ ಜೊತೆ ಇದ್ದಾನೆ ಎಂಬ ಭಾವದೊಂದಿಗೆ ಅಲ್ಲಾಹನೊಂದಿಗೆ ನಡೆಸುವ ಸಂಭಾಷಣೆಯಲ್ಲಿ  ನಿರಾಶೆಗೆ ಜಾಗವೇ ಇರುವುದಿಲ್ಲ, ಇರಬಾರದು ಕೂಡಾ.

No comments:

Post a Comment