Tuesday, November 14, 2023

15ರ ಬಾಲೆ ನೀಡಿದ ಸುಳ್ಳು ಸಾಕ್ಷ್ಯ ಇರಾಕ್ ಯುದ್ಧಕ್ಕೆ ಕಾರಣವಾಗಿತ್ತು...




ನಾಯಿರಾ
ಕಾಲಿನ್ ಪವೆಲ್

ಯಾವುದೇ ಯುದ್ಧದ ಸಂದರ್ಭದಲ್ಲಿ ನೆನಪಿಗೆ ಬರುವ ಮತ್ತು ಸದಾಕಾಲ ನೆನಪಿಗೆ ಬರಬೇಕಾದ ಹೆಸರುಗಳಿವು.

“ಮಿಸ್ಟರ್ ಚೆಯರ್‌ಮ್ಯಾನ್ ಮತ್ತು ಕಮಿಟಿ ಸದಸ್ಯರೇ, ನಾನು ನಾಯಿರಾ. ನಾನು ಈಗಷ್ಟೇ ಕುವೈಟ್‌ನಿಂದ ಬಂದಿರುವೆ. ಆಗಸ್ಟ್ 2ರಂದು  ನಾನು ಮತ್ತು ನನ್ನ ತಾಯಿ ಕುವೈಟ್‌ನಲ್ಲಿದ್ದೆವು. ನನ್ನ ದೊಡ್ಡಕ್ಕ ಜುಲೈ 29ರಂದು ಮಗುವಿಗೆ ಜನ್ಮ ನೀಡಿದಳು. ಆದ್ದರಿಂದ ಆಕೆಯ ಜೊತೆ  ಸಮಯ ಕಳೆಯುವುದಕ್ಕಾಗಿ ನಾವು ಅಲ್ಲಿದ್ದೆವು. ಆಗಸ್ಟ್ 2ರಂದು ನಮ್ಮ ದೇಶದ ಮೇಲೆ ಇರಾಕ್ ಆಕ್ರಮಣ ನಡೆಸಿತು. ನನ್ನ ಅಕ್ಕ ತನ್ನ  ಮಗುವನ್ನು ಉಳಿಸುವುದಕ್ಕಾಗಿ ಮರಳುಗಾಡಿನಲ್ಲಿ ಸಂಚರಿಸಿ ಹಾಲು-ನೀರು ಇಲ್ಲದೇ ಸಂಕಟ ಪಟ್ಟು ಹೇಗೋ ಸೌದಿ ಅರೇಬಿಯ  ಸೇರಿಕೊಂಡಳು. ನಾನು ನನ್ನ ದೇಶಕ್ಕಾಗಿ ಏನಾದರೂ ಮಾಡಲೇಬೇಕೆಂದು ಬಯಸಿ ಅಲ್ಲೇ  ಉಳಿದೆ. ಇರಾಕ್ ಆಕ್ರಮಣದ ಎರಡನೇ  ವಾರ ನಾನು ಕುವೈಟ್‌ನ ಅಲ್‌ದಾರ್ ಆಸ್ಪತ್ರೆಯಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡುತ್ತಿದ್ದೆ. ನನ್ನ ಜೊತೆ ಇತರ 12 ಮಹಿಳೆಯರೂ  ಇದ್ದರು. ಇವರಲ್ಲಿ ಅತೀ ಕಿರಿಯವಳೆಂದರೆ ನಾನೇ. ನನ್ನ ಕಣ್ಣ ಮುಂದೆಯೇ ಇರಾಕಿ ಯೋಧರು ಬಂದೂಕಿನೊಂದಿಗೆ ಆಸ್ಪತ್ರೆಗೆ  ಬಂದರು. ಶಿಶುಗಳನ್ನು ಇನ್‌ಕ್ಯುಬೇಟರ್ (ಉಷ್ಣಪೋಷಕ ಯಂತ್ರ ಅಥವಾ ಜನಿಸಿದ ಮಕ್ಕಳಿಗೆ ಕಾವು ಕೊಡುವ ಯಂತ್ರ)ನಿಂದ  ಎತ್ತಿ  ನೆಲದಲ್ಲಿಟ್ಟು ಸಾಯಲು ಬಿಟ್ಟರು ಮತ್ತು ಇನ್‌ಕ್ಯುಬೇಟರ್‌ಗಳನ್ನು ಹೊತ್ತೊಯ್ದರು. ಇದು ಭಯಾನಕ ಅನುಭವ. ನಾನು ಆಸ್ಪತ್ರೆಯಿಂದ  ಹೊರಬಂದೆ. ನನ್ನ ಗೆಳೆಯನನ್ನು ಭೇಟಿಯಾದೆ. 22 ವರ್ಷದ ಆತನನ್ನು ಇರಾಕಿ ಯೋಧರು ಚಿತ್ರಹಿಂಸೆ ಕೊಟ್ಟು  ಬಿಡುಗಡೆಗೊಳಿಸಿದ್ದರು. ಯೋಧರು ಆತನ ತಲೆಯನ್ನು ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿಸಿದ್ದರು. ಸಾಯುವ ಹಂತದಲ್ಲಿ ಮೇಲೆತ್ತಿದ್ದರು.  ಆತನ ಬೆರಳುಗಳಿಂದ ಉಗುರುಗಳನ್ನು ಕಿತ್ತೆಸೆದಿದ್ದರೆ ಮತ್ತು ಆತನ ಖಾಸಗಿ ಭಾಗಗಳಿಗೆ ವಿದ್ಯುತ್ ಶಾಕ್ ಕೊಟ್ಟಿದ್ದರು. 15  ವರ್ಷದವಳಾದ ನನಗೆ ಸದ್ದಾಮ್ ಹುಸೇನ್ ಆಕ್ರಮಣದ ಮುಂಚಿನ ಕುವೈಟನ್ನು ಮತ್ತು ಆಕ್ರಮಣ ನಂತರದ ಕುವೈಟನ್ನು ನೆನಪಿನಲ್ಲಿಟ್ಟುಕೊಳ್ಳುವುದಕ್ಕೆ ಈ ವಯಸ್ಸು ಧಾರಾಳ ಸಾಕು, ಥ್ಯಾಂಕ್ಯು...”

1990 ಅಕ್ಟೋಬರ್ 10ರಂದು ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ ಸಭೆಯಲ್ಲಿ ಕುವೈಟ್‌ನ ನಾಯಿರಾ ಎಂಬ 15ರ ಹರೆಯದ  ಯುವತಿ ನೀಡಿದ ಈ ಸಾಕ್ಷ್ಯವನ್ನು Hill and Knowlton   ಎಂಬ ಸಂಸ್ಥೆ ಪೂರ್ಣವಾಗಿ ಚಿತ್ರೀಕರಿಸಿಕೊಂಡಿತು. ಒಟ್ಟು 4  ನಿಮಿಷಗಳಷ್ಟು ಅವಧಿಯ ಸಾಕ್ಷ್ಯನುಡಿ. ಅಮೇರಿಕದಲ್ಲಿ ಕುವೈಟ್ ಪರವಾಗಿ ಜನಾಭಿಪ್ರಾಯ ರೂಪಿಸುವುದಕ್ಕಾಗಿ ಕುವೈಟ್ ಸರಕಾರವೇ ಈ  Hill and Knowlton  ಸಂಸ್ಥೆಯನ್ನು ಸ್ಥಾಪಿಸಿತ್ತು ಮತ್ತು Citizen for a Free Kuwait Public Relations ಎಂಬ ಅಭಿಯಾನವನ್ನೂ ಇದು ಅಮೇರಿಕಾದಲ್ಲಿ ನಡೆಸುತ್ತಿತ್ತು. ನಾಯಿರಾ ನೀಡಿದ ಈ ಭಾವನಾತ್ಮಕ ಮತ್ತು  ದಂಗುಬಡಿಸುವ ಸಾಕ್ಷ್ಯ  ನುಡಿಯನ್ನು ಈ Hill and Knowlton  ಸಂಸ್ಥೆಯು ಅಮೇರಿಕದ ವಿವಿಧ ಚಾನೆಲ್‌ಗಳಿಗೆ ನೀಡಿತು.  ಅಮೇರಿಕದ ಒಟ್ಟು 700 ಚಾನೆಲ್‌ಗಳಲ್ಲಿ ಈ ವೀಡಿಯೋ ಪ್ರಸಾರವಾಯಿತು. ಮುಖ್ಯವಾಗಿ,

ABC Nightline ಮತ್ತು NBC Nightly News  ಎಂಬೆರಡು ಪ್ರಮುಖ ಚಾನೆಲ್‌ಗಳ ಮೂಲಕ ಆ ಕಾಲದಲ್ಲೇ  30ರಿಂದ 53  ಮಿಲಿಯನ್ ಜನರಿಗೆ ಈ ವೀಡಿಯೋ ತಲುಪಿತು. ಅಮೇರಿಕ ದಾದ್ಯಂತ ಈ 15ರ ಹರೆಯದ ನಾಯಿರಾ ಸುದ್ದಿಯಾದಳು. ಆಕೆಯ  ಭಾವುಕ ಮಾತುಗಳು ಅನೇಕರ ಕಣ್ಣನ್ನು ತೋಯಿಸಿದುವು. 1990 ಆಗಸ್ಟ್ 2ರಂದು ಕುವೈಟ್‌ನ ಮೇಲೆ ಆಕ್ರಮಣ ಮಾಡಿದ ಇರಾಕ್‌ನ  ಸದ್ದಾಮ್ ಹುಸೈನ್ ಮತ್ತು ಅವರ ಸೇನಾಪಡೆ ಎಂಥ ಕ್ರೂರಿಗಳು ಎಂದು ಜನರಾಡಿಕೊಳ್ಳತೊಡಗಿದರು. ಅಮೇರಿಕದ ಆಗಿನ ಅಧ್ಯಕ್ಷ   ಜಾರ್ಜ್ ಡಬ್ಲ್ಯು ಬುಶ್ ಅವರು ಕನಿಷ್ಠ 10 ಬಾರಿಯಾದರೂ ಈ ನಾಯಿರಾ ಸಾಕ್ಷ್ಯ ನುಡಿಯನ್ನು ಪುನರಾ ವರ್ತಿಸಿದರು. ಅಮೇರಿಕದ 7  ಮಂದಿ ಸೆನೆಟರ್‌ಗಳು ನಾಯಿರಾ ಸ್ಟೋರಿಯನ್ನು ಪುನರುಚ್ಛರಿಸಿದರು. ಬ್ರಿಟನ್ ಮೂಲದ ಸರಕಾರೇತರ (NGO) ದೈತ್ಯ  ಸಂಸ್ಥೆಯಾಗಿರುವ ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಈ ಸುದ್ದಿಗೆ ಭಾರೀ ಪ್ರಚಾರವನ್ನು ನೀಡಿತು. ಈ ಸುದ್ದಿ ಜಾಗತಿಕವಾಗಿ  ಪ್ರಸಾರವಾಗುವಂತೆಯೂ ಶಕ್ತಿಮೀರಿ ಯತ್ನಿಸಿತು. ಇದಕ್ಕೆ ಪೂರಕವಾಗಿ ವಿವಿಧ ರಾಷ್ಟ್ರಗಳ ಪತ್ರಿಕೆಗಳು ಮತ್ತು ಟಿ.ವಿ.ಗಳು ತಮ್ಮದೇ  ಮಸಾಲೆಯನ್ನು ಬೆರೆಸಿ ಸುದ್ದಿ ಪ್ರಸಾರ ಮಾಡಿದುವು. ಸದ್ದಾಮ್ ಹುಸೈನ್‌ರನ್ನು ಅತ್ಯಂತ ಕ್ರೂರಿ ಮತ್ತು ಮನುಷ್ಯ ದ್ರೋಹಿಯಾಗಿ  ಬಿಂಬಿಸುವುದಕ್ಕೆ ಮತ್ತು ಕುವೈಟ್ ಮೇಲಿನ ಅವರ ಆಕ್ರಮಣಕ್ಕೆ ಪ್ರತಿಯಾಗಿ ಇರಾಕ್ ಮೇಲೆ ದಾಳಿ ನಡೆಸುವುದಕ್ಕೆ ಅಮೇರಿಕ ಸಹಿತ  ಜಾಗತಿಕ ರಾಷ್ಟ್ರಗಳಿಗೆ ಈ ಸಾಕ್ಷ್ಯ ನುಡಿ ತೀವ್ರ ಪ್ರಚೋದನೆಯನ್ನೂ ನೀಡಿತು. ಅಮೇರಿಕದ ನಾಗರಿಕರ ಮೇಲಂತೂ ಈ ನಾಯಿರಾಳ  ಮಾಹಿತಿಗಳು ತೀವ್ರ ಪ್ರಭಾವವನ್ನು ಬೀರಿದುವು. ಇರಾಕ್ ವಿರುದ್ಧ ದಾಳಿ ಮಾಡುವಂತೆ ಅಧ್ಯಕ್ಷ ಬುಶ್‌ರ ಮೇಲೆ ಅವರು ಒತ್ತಡವನ್ನೂ  ಹೇರಿದರು. ಹೀಗೆ,

1991 ಜನವರಿ 17ರಂದು ಅಮೇರಿಕ ನೇತೃತ್ವದ ಮಿತ್ರಪಡೆಗಳು ಇರಾಕ್ ಮೇಲೆ ದಾಳಿ ಮಾಡಿತು. ಸೈನಿಕರು ಮತ್ತು ನಾಗರಿಕರೂ  ಸೇರಿದಂತೆ ಸುಮಾರು 30ರಿಂದ 40 ಸಾವಿರದಷ್ಟು ಇರಾಕಿಯನ್ನರು ಈ ದಾಳಿಗೆ ಬಲಿಯಾದರು. ಈ ಯುದ್ಧದಲ್ಲಿ ಇರಾಕ್ ದಯ ನೀಯವಾಗಿ ಸೋತಿತು ಮತ್ತು ಕುವೈಟ್‌ನಿಂದ ಹಿಂಜರಿಯಿತು.

ಆದರೆ,

ಯುದ್ಧ ಮುಗಿದು ನಾಶ-ನಷ್ಟಗಳು ಸಂಭವಿಸಿದ ಒಂದು ವರ್ಷದ ಬಳಿಕ, 1992ರಲ್ಲಿ ಒಂದೊAದೇ ಸತ್ಯ ಬಹಿರಂಗವಾಗ ತೊಡಗಿತು.  ಈ ನಾಯಿರಾ ಎಂಬ 15 ವರ್ಷದ ಬಾಲಕಿ ಬೇರಾರೂ ಅಲ್ಲ, ಅಮೇರಿಕದಲ್ಲಿರುವ ಕುವೈಟ್ ರಾಯಭಾರಿ ಸೌದ್ ಅಲ್ ಸಬಾರ ಪುತ್ರಿ.  ಈಕೆಯ ಪೂರ್ತಿ ಹೆಸರು ನಾಯಿರಾ ಅಲ್ ಸಬಾ. ಆದರೆ ಸಾಕ್ಷ್ಯನುಡಿಯ ಸಂದರ್ಭದಲ್ಲಾಗಲಿ ಮುಂದಿನ ಒಂದು ವರ್ಷದವರೆಗಾಗಲಿ  ಆಕೆಯ ಪೂರ್ಣ ಹೆಸರನ್ನು ಬಹಿರಂಗಪಡಿಸಿಯೇ ಇರಲಿಲ್ಲ. ಅಲ್ಲದೇ, ಈ ಇಡೀ ಸಾಕ್ಷ್ಯನುಡಿಯು ಪೂರ್ವ ನಿರ್ಧರಿತ ಚಿತ್ರಕತೆಯಾಗಿತ್ತು.  ಈ ಚಿತ್ರಕತೆ ರಚಿಸಿದ್ದು ಆರಂಭದಲ್ಲಿ ಹೇಳಲಾದ Hill and Knowlton. ಕುವೈಟ್‌ನ ಪರವಾಗಿ ಅಮೇರಿಕದಲ್ಲಿ ಅಭಿಯಾನ  ನಡೆಸುತ್ತಿದ್ದ ಈ ಸಂಸ್ಥೆಯು ಉದ್ದೇಶಪೂರ್ವಕವಾಗಿ ಹೆಣೆದ ತಂತ್ರದ ಭಾಗವಾಗಿಯೇ ಈ ನಾಯಿರಾ ಅಲ್ ಸಬಾ ವಿಶ್ವಸಂಸ್ಥೆಯ ಮಾ ನವ ಹಕ್ಕುಗಳ ಸಭೆಯಲ್ಲಿ ಸಾಕ್ಷ್ಯ ನುಡಿದಿದ್ದಳು. (Legislator ಟು  probe allegations of Iraqi atrocities: Accused identified as daughter of Kuwait Ambassador to US -The Washington Post - January 7, 1992)

ಈ ವಿವರ ಬಹಿರಂಗಕ್ಕೆ ಬಂದ ಬಳಿಕ ಇನ್ನಷ್ಟು ಸತ್ಯಗಳೂ ಹೊರಬಿದ್ದುವು. ಈ ಸಾಕ್ಷ್ಯನುಡಿಗೆ ವ್ಯಾಪಕ ಪ್ರಚಾರ ಸಿಗುವಲ್ಲಿ ಶ್ರಮಿಸಿದ್ದ  ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಸ್ವತಃ ಮುಜುಗರಕ್ಕೆ ಒಳಗಾಯಿತು. ಸುಳ್ಳು ಹೇಳಿ ದಾರಿ ತಪ್ಪಿಸಿದುದಕ್ಕಾಗಿ ಆಮ್ನೆಸ್ಟಿ ಇಂಟರ್ ನ್ಯಾಶನಲ್‌ನ  ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದ ಜಾನ್ ಹೀಲಿಯವರು ಬುಶ್ ಆಡಳಿತವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. (Amnesty responds Healey John-  February ೨೮, 1991)

ಈ ನಡುವೆ ಮಧ್ಯೇಶ್ಯಾ ಕೇಂದ್ರೀಕರಿಸಿ ಕೆಲಸ ಮಾಡುತ್ತಿರುವ ಮಾನವ ಹಕ್ಕು ಆಯೋಗವು ತನಿಖೆಗಿಳಿಯಿತು. ಕುವೈಟ್ ಆಕ್ರಮಣದ  ವೇಳೆ ಇರಾಕ್ ಸೇನೆ ನಡೆಸಿರಬಹುದಾದ ಮಾನವ ಹಕ್ಕು ಉಲ್ಲಂಘನೆಯ ಕುರಿತು ವಿವಿಧ ಸಾಕ್ಷ್ಯಗಳನ್ನು ಸಂಗ್ರಹಿಸ ತೊಡಗಿತು.  ಮಾತ್ರವಲ್ಲ, ನಾಯಿರಾಳ ಸಾಕ್ಷ್ಯನುಡಿಯಲ್ಲಿ ಹೇಳಿರುವುದಕ್ಕೆ ಯಾವುದೇ ಆಧಾರವಿಲ್ಲ ಎಂದೂ ಹೇಳಿತು. ಆಯೋಗದ ನಿರ್ದೇಶಕ  ಆ್ಯಂಡ್ರೂ ವೆಟ್ಲಿ ಈ ಕುರಿತಂತೆ ವಿಸ್ತೃತ  ವರದಿಯನ್ನೇ ಬಿಡುಗಡೆಗೊಳಿಸಿದರು. ನಾಯಿರಾ ಹೇಳಿರುವ ಕತೆಯು ಕುವೈಟ್ ನಿಂದ  ಹೊರಗಿರುವ ಮತ್ತು ಕುವೈಟನ್ನು ಚೆನ್ನಾಗಿ ಬಲ್ಲವರು ಕೃತ್ರಿಮವಾಗಿ ತಯಾರಿಸಿದ್ದಾಗಿದೆ ಎಂದು ಮುಲಾಜಿಲ್ಲದೇ ಹೇಳಿದರು. ಅಲ್ಲದೇ,  ನಾಯಿರಾ ಉಲ್ಲೇಖಿಸಿರುವ ಅಲ್ದಾರ್ ಆಸ್ಪತ್ರೆಯ ವೈದ್ಯ ರಾದ ಅಝೀಝï ಅಬು ಹಮದ್‌ರನ್ನು The Independent  ಪತ್ರಿಕೆ  ಭೇಟಿಯಾಗಿ ಮಾತುಕತೆ ನಡೆಸಿತು. ಅವರು ನಾಯಿರಾ ಹೇಳಿಕೆಯನ್ನು ಸಂಪೂರ್ಣವಾಗಿ ಅಲ್ಲಗಳೆದರು. ಅಲ್ದಾರ್ ಆಸ್ಪತ್ರೆಗೆ ಇರಾಕಿ  ಯೋಧರು ಬಂದಿರುವುದು ನಿಜ. ಆಗ ಈ ಆಸ್ಪತ್ರೆಯ ಮೆಟರ್ನಿಟಿ ವಿಭಾಗದಲ್ಲಿ 25ರಿಂದ 30ರಷ್ಟು ಶಿಶುಗಳು ಇದ್ದುವು. ಇರಾಕಿ  ಯೋಧರು ಇಲ್ಲಿನ ಇನ್‌ಕ್ಯುಬೇಟರ್ ಕೊಂಡೂ ಹೋಗಿಲ್ಲ, ಶಿಶುಗಳನ್ನು ಸಾಯಲೂ ಬಿಟ್ಟಿಲ್ಲ ಎಂದವರು ಹೇಳಿದರು. (Iraqi Baby Atrocity is  revealed as myth- January 1992).
ಆದರೆ ಸತ್ಯಗಳು ಹೀಗೆ ಬಿಡಿಬಿಡಿಯಾಗಿ ಬಹಿರಂಗವಾಗುವ ಮೊದಲೇ ನಾಯಿರಾಳ ಮೂಲಕ ಹರಡಲಾದ ಸುಳ್ಳು ಯಾವ  ಪರಿಣಾಮವನ್ನು ಬೀರಬೇಕಿತ್ತೋ ಅವೆಲ್ಲವನ್ನೂ ಬೀರಿಯಾಗಿತ್ತು.

2. ಕಾಲಿನ್ ಪವೆಲ್

2002ರಿಂದ 2005ರ ವರೆಗೆ ಅಮೇರಿಕದ ರಾಜ್ಯ ಕಾರ್ಯದರ್ಶಿ ಯಾಗಿದ್ದ ಕಾಲಿನ್ ಪವೆಲ್ ಅವರು 2003 ಫೆಬ್ರವರಿ 5ರಂದು  ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಾಡಿದ ಭಾಷಣವು ಜಗತ್ತಿನ ಕುಖ್ಯಾತ ಭಾಷಣಗಳಲ್ಲಿ ಒಂದು. ಆ ಭಾಷಣದ ಆರಂಭದಿAದ  ಕೊನೆಯವರೆಗೆ ಅವರು ಕೈಯಲ್ಲಿ ಶೀಶೆಯೊಂದನ್ನು ಹಿಡಿದುಕೊಂಡಿದ್ದರು. ಈ ಶೀಶೆಯಲ್ಲಿರುವುದು ಭಯಾನಕ ಅಂತ್ರಾಕ್ಸ್ ರಾಸಾಯನಿಕ  ಎಂದೂ ಹೇಳಿದ್ದರು. ಭದ್ರತಾ ಮಂಡಳಿಯ ಅಷ್ಟೂ ರಾಷ್ಟ್ರಗಳ ಸದಸ್ಯರ ಮುಂದೆ ಅವರು ಆವೇಶಪೂರ್ಣ ಭಾಷಣ ಮಾಡಿದ್ದರು.  ಇರಾಕ್‌ನ ಅಧ್ಯಕ್ಷ  ಸದ್ದಾಮ್ ಹುಸೇನ್ ಜಗತ್ತಿಗೆ ಬೆದರಿಕೆಯಾಗಿದ್ದಾರೆ, ಸಮೂಹ ನಾಶಕ ಅಸ್ತ್ರಗಳನ್ನು ಅವರು ಅಭಿವೃದ್ಧಿಪಡಿಸುತ್ತಿದ್ದಾರೆ,  ಮಾನವ ರಹಿತ ವಾಹನ ಮತ್ತು ಆಕಾಶ ಮಾರ್ಗದ ಮೂಲಕ ಅವರು ಈ ಅಸ್ತ್ರವನ್ನು ಅಮೇರಿಕ ಸಹಿತ ನೆರೆಕರೆಯ ರಾಷ್ಟ್ರಗಳ ವಿರುದ್ಧ  ಬಳಸಲಿದ್ದಾರೆ... ಎಂದೆಲ್ಲಾ  ಆ ಭಾಷಣದಲ್ಲಿ ಹೇಳಿದ್ದರು. ಈ ಸಂದರ್ಭದಲ್ಲಿ ಸದ್ದಾಮ್‌ರನ್ನು ತಡೆಯದಿದ್ದರೆ ಜಗತ್ತಿನ ವಿನಾಶ ಖಂಡಿತ...  ಎಂಬ ರೀತಿಯಲ್ಲಿ ಅವರು ಬೆದರಿಸಿದ್ದರು. ಮಾತ್ರವಲ್ಲ,

ಈ ಸಮೂಹ ನಾಶಕ ಅಸ್ತ್ರಗಳು ಅಲ್ ಕೈದಾಕ್ಕೆ ರವಾನೆ ಯಾಗುವ ಭೀತಿಯಿದ್ದು, ಸದ್ದಾಮ್ ಮತ್ತು ಅಲ್ ಕೈದಾ ನಡುವೆ ಆಪ್ತ  ಸಂಬಂಧ ಇದೆ ಎಂದೂ ಸಭೆಗೆ ವಿವರಿಸಿದ್ದರು. ಕೈಯಲ್ಲಿ ಶೀಶೆ ಹಿಡಿದು ಪವೆಲ್ ಮಾಡಿದ ಭಾಷಣ ಆ ಕಾಲದಲ್ಲಿ ಭಾರೀ ವೈರಲ್  ಆಗಿತ್ತು. ಅಮೇರಿಕದ ನಾಗರಿಕರಷ್ಟೇ ಅಲ್ಲ, ಇರಾಕ್ ಅಕ್ಕ-ಪಕ್ಕದ ರಾಷ್ಟ್ರಗಳೂ ಭಯಭೀತವಾದುವು. ಯುರೋಪಿಯನ್ ರಾಷ್ಟ್ರಗಳೂ  ಪವೆಲ್ ಮಾತುಗಳಿಂದ ತೀವ್ರ ಪ್ರಭಾವಿತವಾದುವು. ಅಮೇರಿಕದ ಗುಪ್ತಚರ ಸಂಸ್ಥೆ CIA ನೀಡಿದ ವರದಿ ಎಂಬ ನೆಲೆಯಲ್ಲಿ ಅದು  ವ್ಯಾಪಕ ಚರ್ಚೆಗೆ ಮತ್ತು ವಿಶ್ವಾಸಕ್ಕೂ ಒಳಗಾಯಿತು. ಈ ಭಾಷಣದ ಬಳಿಕ ಜಾಗತಿಕವಾಗಿ ಉಂಟಾದ ಇರಾಕ್ ವಿರೋಧಿ ಅಲೆಯನ್ನೇ  ಬಳಸಿಕೊಂಡು ಮಾರ್ಚ್ 19, 2003ರಂದು ಇರಾಕ್ ಮೇಲೆ ಅಮೇರಿಕ ಆಕ್ರಮಣ ನಡೆಸಿತು. ವಿಶೇಷ ಏನೆಂದರೆ, ಈ ಆಕ್ರಮಣಕ್ಕಿಂತ  ಮೊದಲೇ ವಿಶ್ವಸಂಸ್ಥೆಯ 70ರಷ್ಟು ಸೈಟ್ ಇನ್ಸ್ಪೆಕ್ಟರ್‌ಗಳು ಇರಾಕ್‌ಗೆ ತೆರಳಿ ಸಮೂಹ ನಾಶಕ ಅಸ್ತ್ರಕ್ಕಾಗಿ ಹುಡುಕಾಡಿದ್ದರು. ಆದರೆ  ಅದು ಪತ್ತೆಯಾಗಿರಲಿಲ್ಲ. ಆದರೂ ಪವೆಲ್ ಅವರ ಭಾಷಣ  ಮತ್ತು ಕೈಯಲ್ಲಿದ್ದ ಶೀಶೆಯು ವಿಶ್ವಸಂಸ್ಥೆಯ 70ರಷ್ಟು ತಪಾಸಕರನ್ನೇ  ನಾಲಾಯಕ್‌ಗೊಳಿಸಲಾಯಿತು. ವಿಶ್ವಸಂಸ್ಥೆಗಿಂತ  ಅಮೇರಿಕದ ಹೇಳಿಕೆಯಲ್ಲೇ  ಜಗತ್ತು ನಂಬಿಕೆಯನ್ನಿಟ್ಟಿತು. ಈ ನಡುವೆ,
ಅಮೇರಿಕದ ಉಪಾಧ್ಯಕ್ಷರಾಗಿದ್ದ ಡಿಕ್ ಚೆನಿಯ ಕಾರ್ಯದರ್ಶಿ ಲಿಬ್ಬಿ ಮತ್ತು ರಕ್ಷಣಾ ಸಚಿವರಾಗಿದ್ದ ಡೊನಾಲ್ಡ್ ರಮ್ಸ್ಫೆಲ್ಡ್ ಅವರ  ಕಾರ್ಯದರ್ಶಿ ಡಗ್ಲಾಸ್ ವೈಟ್ ಅವರು ಸರಣಿ ಸುಳ್ಳುಗಳನ್ನು ಹಂಚತೊಡಗಿದರು. ಅಣ್ವಸ್ತ್ರ ತಯಾರಿಸಲು ಬೇಕಾದ ಯುರೇನಿಯಂ ಅನ್ನು ನೈಜರ್ ದೇಶದಿಂದ ಸದ್ದಾಮ್ ಹುಸೇನ್ ಪಡೆದಿದ್ದಾರೆ ಎಂಬುದೂ ಈ ಸುಳ್ಳುಗಳಲ್ಲಿ ಒಂದು. ನಿಜವಾಗಿ, ನೈಜರ್‌ನಲ್ಲಿದ್ದ  ಅಮೇರಿಕದ ರಾಯಭಾರಿ ವಿಲ್ಸನ್ ಅವರಲ್ಲಿ ಈ ಬಗ್ಗೆ ಪತ್ತೆಕಾರ್ಯ ನಡೆಸುವಂತೆ ಅಮೇರಿಕದ ಗುಪ್ತಚರ ಸಂಸ್ಥೆ (CIA)  ಕೇಳಿಕೊಂಡಿತ್ತು. ಆ ಬಗ್ಗೆ ಅವರು ಗುಪ್ತವಾಗಿ ಶೋಧನೆಯನ್ನೂ ನಡೆಸಿದ್ದರು ಮತ್ತು ಅಂಥ ಯಾವುದೂ ನಡೆದಿಲ್ಲ ಎಂದು  2002ರಲ್ಲೇ  ಅವರು ವರದಿಯನ್ನೂ ಕೊಟ್ಟಿದ್ದರು. (Former Cheney  aid to and guilty - 7 March,  2007) ಆದರೆ ಈ ಸತ್ಯವನ್ನೇ ಮುಚ್ಚಿಟ್ಟು ಈ ಇಬ್ಬರು ಕಾರ್ಯದರ್ಶಿಗಳು ಪುಂಖಾನುಪುಂಖವಾಗಿ ಸುಳ್ಳುಗಳನ್ನು ಹರಡತೊಡಗಿದರು.
ಆದರೆ,

ಇರಾಕ್ ನಾಶವಾದರೂ ಸಮೂಹ ವಿನಾಶಕ ಅಸ್ತ್ರ ಅಮೇರಿಕನ್ ಸೇನೆಗಾಗಲಿ, ಮಿತ್ರ ಪಡೆಗಾಗಲಿ ಸಿಗಲೇ ಇಲ್ಲ. ಈ ಬಗ್ಗೆ ಕಾಲಿನ್  ಪವೆಲ್ ಅವರನ್ನು ಅಮೇರಿಕನ್ ಪಾರ್ಲಿಮೆಂಟ್‌ನಲ್ಲಿ ಡೆಮಾಕ್ರಾಟಿಕ್ ಪಕ್ಷದ ಗ್ಯಾರಿ ಅಕರ್‌ಮ್ಯಾನ್ ತರಾಟೆಗೆ ತೆಗೆದುಕೊಂಡಿದ್ದರು. ನೀವು  ಸುಳ್ಳು ಹೇಳಿದ್ದೀರಿ ಎಂದೂ ಛೇಡಿಸಿದ್ದರು. ಆಗಲೂ ಪವೆಲ್ ಅದನ್ನು ಒಪ್ಪಿರಲಿಲ್ಲ. (Iraq Truth : Powell defends Bush- February 11, 2004) ಆದರೆ 2011ರಲ್ಲಿ ಅಲ್ ಜಝೀರಾ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು ತಪ್ಪನ್ನು ಒಪ್ಪಿಕೊಂಡಿದ್ದರು. CIA  ನೀಡಿದ ಮಾಹಿತಿಗಳು ತಪ್ಪಾಗಿದ್ದುವು ಎಂದಿದ್ದರು. (Colin Powell regrets Iraqi war intelligence: 11 Sep. 2011) ಮಾತ್ರವಲ್ಲ, ತಪ್ಪು ಮಾಹಿತಿ ನೀಡಿದ್ದಕ್ಕಾಗಿ 2017ರಲ್ಲಿ ಬ್ಲೂಂಬರ್ಗ್ ಗೆ  ನೀಡಿದ ಸಂದರ್ಶ ನದಲ್ಲಿ CIA ಯನ್ನು ಕಟುವಾಗಿ ಟೀಕಿಸಿದ್ದರು. ಅವರು 2021 ಅಕ್ಟೋಬರ್ 18ರಂದು ಕೊರೋನಾ ದಿಂದಾಗಿ ತಮ್ಮ 84ನೇ  ಪ್ರಾಯದಲ್ಲಿ ನಿಧನರಾದರು.

ಅಂದಹಾಗೆ,

ಹಮಾಸ್‌ನಿಂದ  40 ಇಸ್ರೇಲಿ ಮಕ್ಕಳ ಶಿರಚ್ಛೇದ, ಡಜನ್ನುಗಟ್ಟಲೆ ಇಸ್ರೇಲಿ ಬಾಲಕಿಯನ್ನು ಲೈಂಗಿಕ ಕಾರ್ಯಕರ್ತೆಯರಾಗಿ ಇಟ್ಟು ಕೊಂಡಿರುವ ಹಮಾಸ್, ಪುಟ್ಟ ಮಗುವನ್ನು ಅಪಹರಿಸಿದ ಹಮಾಸ್, ಗಾಝಾದ ಆಸ್ಪತ್ರೆಗೆ ರಾಕೆಟ್ ಹಾರಿಸಿ ತನ್ನದೇ 500ಕ್ಕಿಂತಲೂ ಅ ಧಿಕ ಮಂದಿಯನ್ನು ಕೊಂದ ಹಮಾಸ್, ಅಲ್‌ಕೈದಾ ಧ್ವಜವನ್ನು ಎತ್ತಿ ಹಿಡಿದ ಹಮಾಸ್ ಕಾರ್ಯಕರ್ತರು... ಇತ್ಯಾದಿ ಇತ್ಯಾದಿ ಸುದ್ದಿಗಳನ್ನು ಓದುತ್ತಾ ಇವೆಲ್ಲ ನೆನಪಾಯಿತು. ಅಷ್ಟಕ್ಕೂ, ಸೋಷಿಯಲ್ ಮೀಡಿಯಾದ ಈ ಕಾಲದಲ್ಲಿ ಸುಳ್ಳು ಗಳಿಗೆ ಹೆಚ್ಚು ಸಮಯ ಬಾಳಿಕೆಯಿಲ್ಲ  ಮತ್ತು ಹಮಾಸ್‌ಗೆ ಸಂಬಂಧಿಸಿದ ಈ ಎಲ್ಲ ಸುದ್ದಿಗಳೂ ಸುಳ್ಳು ಎಂಬುದು ಪುರಾವೆ ಸಮೇತ ಸಾಬೀತಾಗಿವೆ ಎಂಬುದೇ ಸಮಾಧಾನಕರ.

No comments:

Post a Comment