Saturday, October 28, 2023

ಆ ಮಯ್ಯತ್ ಸಂಸ್ಕಾರದಲ್ಲಿ 8 ಮಂದಿಯಷ್ಟೇ ಇದ್ದರು...





‘ಆ ಮಹಿಳೆಯ ಮೃತದೇಹವನ್ನು ಸಂಸ್ಕಾರಕ್ಕಾಗಿ ಮಸೀದಿಗೆ ಕೊಂಡೊಯ್ಯು ತ್ತಿದ್ರು. ಎಣಿಕೆಯ ಏಳು ಅಥವಾ ಎಂಟು ಮಂದಿಯಷ್ಟೇ  ಗುಂಪಿನಲ್ಲಿದ್ದರು. ಇವರಲ್ಲಿ ನಾಲ್ಕು ಮಂದಿ ಮೃತದೇಹವನ್ನಿರಿಸಲಾದ ಮಂಚಕ್ಕೆ ಹೆಗಲು ಕೊಟ್ಟಿದ್ದರು. ಉಳಿದ ಮೂರೋ-ನಾಲ್ಕೋ  ಮಂದಿ ಮಂಚದ ಹಿಂದೆ-ಮುಂದೆ  ಇದ್ದರು. ನಂಗೆ ಆ ಮೃತ ಮಹಿಳೆಯ ಪರಿಚಯವಿಲ್ಲ. ಆದರೆ ಮನಸ್ಸು ತಡೆಯಲಿಲ್ಲ. ಪುರುಷನ  ಮೃತದೇಹವಾಗಿರುತ್ತಿದ್ದರೆ ಹೀಗಿರುತ್ತಿತ್ತೇ... ಎಂದು ಆಲೋಚಿಸಿದೆ. ಈ ಮೃತ ಮಹಿಳೆಗೆ ಪತಿ-ಮಕ್ಕಳಿಲ್ಲವೇ, ಕುಟುಂಬ ಇಲ್ಲವೇ,  ಗೆಳೆಯರಿಲ್ಲವೇ... ಎಂದೆಲ್ಲಾ ಚಿಂತಿಸಿದೆ. ಬಳಿಕ ಆ ಗುಂಪಿನೊಂದಿಗೆ ಸೇರಿಕೊಂಡೆ. ಮಯ್ಯತ್ ಸಂಸ್ಕಾರದಲ್ಲಿ ಭಾಗಿಯಾದೆ. ಆ ಗುಂಪಿನಲ್ಲಿದ್ದ ಓರ್ವರು ನನಗೆ ಅಷ್ಟಿಷ್ಟು ಪರಿಚಿತರಿದ್ದರು. ತಳಮಳ ತಡೆಯಲಾಗದೇ ನನ್ನ ಅನುಮಾನವನ್ನು ಮುಂದಿಟ್ಟೆ. ನಿಜವಾಗಿ, ಆ ಮಹಿಳೆ  ಭಿಕ್ಷುಕಿಯೋ ಇನ್ನಾವುದೋ ಊರಿನಿಂದ ಬಂದು ಮೃತಪಟ್ಟ ಅಪರಿಚಿತೆಯೋ ಆಗಿರಲಿಲ್ಲ. ಪತಿ ಮೃತಪಟ್ಟಿದ್ದರು. ಮಕ್ಕಳಿರಲಿಲ್ಲ.  ಇವೆರಡರ ಹೊರತಾಗಿ ಅದೇ ಊರಿನಲ್ಲಿ ಬದುಕಿದ್ದ ಹಿರಿ ಜೀವಿಯಾಗಿದ್ದರು. ನೆರೆಕರೆಯವರು ಮನೆಗೆ ಭೇಟಿಕೊಟ್ಟು ಹೋಗಿದ್ದಾರೆ.  ತೀರಾ ಹತ್ತಿರದ ಕುಟುಂಬಿಕರು ಮೃತದೇಹವನ್ನು ನೋಡುವ ಸುನ್ನತನ್ನು ಪಾಲಿಸಿ ಮರಳಿದ್ದಾರೆ. ಹೀಗೆ ಮರಳದೇ ಉಳಿದ ತೀರಾ  ಹತ್ತಿರದ ಕುಟುಂಬಿಕರು ಮತ್ತು ಒಂದಿಬ್ಬರು ನೆರೆಕರೆಯವರಷ್ಟೇ ಮಯ್ಯತ್ ಸಂಸ್ಕಾರದವರೆಗೆ ಉಳಿದಿದ್ದಾರೆ...’

ಗೆಳೆಯರೊಬ್ಬರು ಮೊನ್ನೆ ತೀರಾ ನೋವಿನಿಂದ ಈ ವಿಷಯ ಹಂಚಿಕೊಂಡರು.

ಹಾಗಂತ, ಈ ಒಂಟಿ ಘಟನೆಯನ್ನು ಎತ್ತಿಕೊಂಡು, ಎಲ್ಲ ಮೃತ ಮಹಿಳೆಯ ಪರಿಸ್ಥಿತಿಯೂ ಹೀಗೆಯೇ ಎಂದು ಷರಾ ಬರೆದು  ಬಿಡುವಂತಿಲ್ಲ. ಬಿಡಿ ಘಟನೆಯನ್ನು ಬಿಡಿಯಾಗಿಯೇ ನೋಡಬೇಕು ಮತ್ತು ಸಾರ್ವತ್ರಿಕವಾಗಿ ಅನ್ವಯಿಸಬಾರದು ಎಂಬುದೂ ಸರಿ.  ಆದರೂ ಕೆಲವು ಪ್ರಶ್ನೆಗಳು ಸಹಜವಾಗಿಯೇ ಉದ್ಭವಿಸುತ್ತವೆ. ನಿಜಕ್ಕೂ ಈ ಮೇಲಿನ ಘಟನೆ ಒಂಟಿಯೆಂದು  ತಿರಸ್ಕರಿಸಿ ಬಿಡ  ಬಹುದಾದಷ್ಟು ಕ್ಷುಲ್ಲಕವೇ? ಮನಸಿಗೆ ಕಸಿವಿಸಿಯಾಗುವ ಇಂಥ ಸನ್ನಿವೇಶ ಬೇರೆ ಕಡೆ ನಡೆದಿಲ್ಲವೇ, ನಡೆಯುತ್ತಿಲ್ಲವೇ? ಅಥವಾ ಇದು  ಗಂಭೀರವಾಗಿ ಪರಿಗಣಿಸತಕ್ಕ ವಿಷಯವೇ ಅಲ್ಲವೇ? ಉಸಿರು ನಿಲ್ಲುವುದರೊಂದಿಗೆ ವ್ಯಕ್ತಿಗೂ ಈ ಜಗತ್ತಿನ ಜಂಜಾಟಕ್ಕೂ ಪರದೆ  ಬೀಳುತ್ತದೆ. ಆ ಬಳಿಕ ಯಾರು ಸೇರಿದರೂ, ಎಷ್ಟು ಮಂದಿ ಸೇರಿದರೂ ಅಥವಾ ಸೇರದೇ ಇದ್ದರೂ ಆ ಮೃತ ವ್ಯಕ್ತಿಗೂ ಅದಕ್ಕೂ  ಸಂಬಂಧವೇ ಇಲ್ಲ ಎಂಬ ನಿಲುವೇ?

ಗೊತ್ತಿಲ್ಲ.

ಆದರೆ,
ಹತ್ತಕ್ಕಿಂತಲೂ ಕಡಿಮೆ ಮಂದಿ ಸೇರಿಕೊಂಡು ಮೃತದೇಹವನ್ನು ಕೊಂಡೊಯ್ಯುತ್ತಿದ್ದಾರೆ ಎಂಬುದು ಕ್ಷಣ ಕಸಿವಿಸಿಗೋ, ತಳಮಳಕ್ಕೋ  ಆಘಾತಕ್ಕೋ ಕಾರಣವಾಗುವುದರಲ್ಲಿ ಅಚ್ಚರಿ ಏನಿಲ್ಲ. ಇದು ಸಹಜ ಅಲ್ಲ. ಒಂದು ಕಡೆ ಮೃತದೇಹವನ್ನು ನೋಡುವುದಕ್ಕೆ ಸಾವಿರಾರು  ಮಂದಿ ಸೇರುವ ಸನ್ನಿವೇಶಗಳು ನಡೆಯುತ್ತವೆ. ಮೃತದೇಹವನ್ನು ಮಸೀದಿಗೆ ಕೊಂಡೊಯ್ಯುವ ವೇಳೆಯೂ ಈ ಜನಸಾಗರ ಹಿಂಬಾಲಿಸುತ್ತದೆ. ಎಲ್ಲೆಲ್ಲಿಂದಲೋ, ಯಾವ್ಯಾವ ಊರಿನಿಂದಲೋ ಜನರು ದಂಡು ದಂಡಾಗಿ ಆಗಮಿಸುತ್ತಾರೆ. ಮೃತ ವ್ಯಕ್ತಿಯನ್ನು ಕೊನೆಯ  ಬಾರಿ ಕಾಣ್ತುಂಬಿಕೊಳ್ಳುವುದಕ್ಕಾಗಿ ನೂಕು-ನುಗ್ಗಲು ನಡೆಯುತ್ತದೆ. ಆ ಬಳಿಕ ಸಂತಾಪ ಸಭೆಗಳೂ ನಡೆಯುತ್ತವೆ. ಹಾಗಂತ,

ಇವೆಲ್ಲ ನಡೆಯಬಾರದು ಎಂದಲ್ಲ. ಓರ್ವ ಅಸಾಮಾನ್ಯ ವ್ಯಕ್ತಿ ಮೃತಪಟ್ಟಾಗ ಇವೆಲ್ಲ ಸಹಜ. ಮತ್ತು ಇಲ್ಲೂ ಒಂದು ವಿಶೇಷತೆ ಇದೆ.  ಅದೇನೆಂದರೆ, ಹೀಗೆ ಮೃತಪಟ್ಟವರು ಪುರುಷರೇ ಆಗಿರುತ್ತಾರೆ. ಮಹಿಳೆಯರಿಗೆ ಸಂಬಂಧಿಸಿ ಇಂಥ ಸನ್ನಿವೇಶಗಳು ಶೂನ್ಯ ಅನ್ನುವಷ್ಟು  ಕಡಿಮೆ. ಅಸಾಮಾನ್ಯರು ಬಿಡಿ, ಸಾಮಾನ್ಯ ಪುರುಷ ಮತ್ತು ಮಹಿಳೆಯರು ಮೃತಪಟ್ಟಾಗಲೂ ಈ ವ್ಯತ್ಯಾಸ ಕಂಡೇ ಕಾಣುತ್ತದೆ. ಸಾಮಾನ್ಯ ಪುರುಷ  ವ್ಯಕ್ತಿ ಮೃತಪಟ್ಟ ಸುದ್ದಿಗೆ ಸ್ಪಂದಿಸುವಷ್ಟು ತೀವ್ರ ವಾಗಿ ಸಾಮಾನ್ಯ ಮಹಿಳೆ ಮೃತಪಟ್ಟ ಸುದ್ದಿಗೆ ಸಮಾಜ   ಅಥವಾ ಸಂಬಂಧಿಕರೇ ಸ್ಪಂದಿಸುವುದಿಲ್ಲ. ಯಾಕೆ ಹೀಗೆ? ಇದಕ್ಕೆ ಮಹಿಳೆ ಎಷ್ಟು ಹೊಣೆ? ಪುರುಷ ಎಷ್ಟು ಹೊಣೆ? ಸಮುದಾಯ ಎಷ್ಟು ಹೊಣೆ?

ಯಾವುದೇ ಓರ್ವ ಪುರುಷ ಅಸಾಮಾನ್ಯ ವ್ಯಕ್ತಿಯಾಗಿರುವುದರ ಹಿಂದೆ ಆತನ ತಾಯಿ ಮತ್ತು ಪತ್ನಿಯ ಪ್ರಮುಖ ಪಾತ್ರ ಇರುತ್ತದೆ.  ತಾಯಿ ಮತ್ತು ಪತ್ನಿಯ ಸೇವಾ ಮನೋಭಾವ ಮತ್ತು ನಿಸ್ವಾರ್ಥ ಶ್ರಮದ ಹೊರತು ಪುರುಷನೋರ್ವ ಅಪ್ರತಿಮ ಸಮಾಜ ಸೇವಕ,  ಕೊಡುಗೈ ದಾನಿ ಆಗುವ ಸಾಧ್ಯತೆ ಕಡಿಮೆ. ವ್ಯಕ್ತಿಯೋರ್ವ ಸಮಾಜ ಸೇವಕನೋ ಇನ್ನೇನೋ ಆಗಿ ಗುರುತಿಸಿ ಕೊಳ್ಳುವಾಗ ಮನೆಯನ್ನು  ತಾಯಿ ಮತ್ತು ಪತ್ನಿ ನಿಭಾಯಿಸುತ್ತಿರುತ್ತಾರೆ. ಯಾವುದೋ ಕರೆಗೆ ಸ್ಪಂದಿಸಿ ಪುರುಷ ಹೊತ್ತಲ್ಲದ ಹೊತ್ತಿನಲ್ಲೂ ಮನೆಯಿಂದ ಹೊರಟು  ಹೋಗುವಾಗ ಮನೆ ಮತ್ತು ಮಕ್ಕಳ ಜವಾಬ್ದಾರಿ ಸಂಪೂರ್ಣವಾಗಿ ಮನೆಯ ಮಹಿಳೆಯರ ಮೇಲೆ ಬೀಳುತ್ತದೆ. ಮಕ್ಕಳನ್ನು ಶಾಲೆಗೆ  ಸಿದ್ಧಗೊಳಿಸಬೇಕು, ಅದಕ್ಕಿಂತ ಮೊದಲು ಮಕ್ಕಳಿಗೆ ಆಹಾರ ತಯಾರಿಸಬೇಕು. ಬಟ್ಟೆ-ಬರೆಗಳನ್ನು ಒಪ್ಪ-ಓರಣಗೊಳಿಸಬೇಕು, ಹೋಮ್  ವರ್ಕ್ ನಿಂದ  ಹಿಡಿದು ಶಾಲೆಗೆ ತೆರಳಿ ಶಿಕ್ಷಕರನ್ನು ಭೇಟಿಯಾಗುವರೆಗೆ ಎಲ್ಲವನ್ನೂ ನಿಭಾಯಿಸಬೇಕು. ಶಾಲೆಗೆ ತೆರಳಿದ ಮಕ್ಕಳು ಸಂಜೆ  ಮನೆಗೆ ಬರುವ ವೇಳೆ ಅವರನ್ನು ಸ್ವಾಗತಿಸುವುದಕ್ಕೆ ಮತ್ತು ಅವರ ಹಸಿವನ್ನು ತಣಿಸುವುದಕ್ಕೆ ಮುಂದಾಗಬೇಕು. ಬೆಳೆದ ಮಕ್ಕಳಾದರೆ  ಮೊಬೈಲ್‌ನಲ್ಲಿ ಏನೇನು ವೀಕ್ಷಿಸುತ್ತಾರೆ ಅನ್ನುವ ಆತಂಕ, ಎರಡು ಕಣ್ಣುಗಳಲ್ಲಿ ಒಂದನ್ನು ಅತ್ತವೇ ಇಡಬೇಕಾದ ಒತ್ತಡ. ಹೊರಗೆ  ಹೋಗುವ ಗಂಡು ಮಕ್ಕಳು ಮನೆಗೆ ಮರಳಲು ತುಸು ತಡವಾದರೂ ಮನದಲ್ಲಿ ನೂರು ಭಾವ. ಮಕ್ಕಳನ್ನು ಯಾವ ಶಾಲೆಗೆ, ಯಾವ  ಕೋರ್ಸ್ ಗೆ  ಸೇರಿಸಬೇಕು ಎಂಬ ಬೇಗುದಿ... ಇತ್ಯಾದಿಗಳು ಬ್ಯುಝಿ ಪುರುಷನ ಮನೆಯಲ್ಲಿರುವ ಮಹಿಳೆಯರ ಮೇಲಿರುತ್ತದೆ. ಪುರುಷ  ಮನೆಯ ಹೊರಗಿನ ಕೆಲಸಗಳಲ್ಲಿ ನಿರತವಾಗಿರುವಾಗ ಮನೆಯ ಇಡೀ ಜವಾಬ್ದಾರಿಯನ್ನು ಮಹಿಳೆ ಹೊತ್ತುಕೊಳ್ಳುತ್ತಾಳೆ. ಇದು ಕೇವಲ  ಸಮಾಜ ಸೇವೆಯಲ್ಲಿ ತೊಡಗಿರುವ ಪುರುಷರಿಗೆ ಸಂಬಂಧಿಸಿ ಮಾತ್ರ ಹೇಳುವುದಲ್ಲ. ಸಮಾಜದಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿರುವವರು,  ವೈದ್ಯರು, ನ್ಯಾಯವಾದಿಗಳು, ಶಿಕ್ಷಕರು, ಸಾಹಿತಿಗಳು, ಉದ್ಯಮಿಗಳು ಇತ್ಯಾದಿ ಎಲ್ಲರಿಗೆ ಸಂಬಂಧಿಸಿಯೂ ಬಹುತೇಕ ಈ ಮಾತುಗಳು  ಅನ್ವಯಿಸುತ್ತವೆ. ಒಂದುವೇಳೆ,

ಮನೆಯ ಮಹಿಳೆಯು ಸಹಕರಿಸದೇ ಇದ್ದರೆ ಯಾವ ಪುರುಷನೂ ಯಶಸ್ವಿ ಉದ್ಯಮಿ, ಸದಾ ಕೈಗೆ ಸಿಗುವ ಸಮಾಜ ಸೇವಕ, ಯಶಸ್ವಿ  ರಾಜಕಾರಣಿ, ವೈದ್ಯ, ಶಿಕ್ಷಕ ಆಗುವ ಸಾಧ್ಯತೆಗಳು ತೀರಾ ತೀರಾ ಕಡಿಮೆ. ಪುರುಷನೋರ್ವ ಪ್ರತಿಷ್ಠಿತ ವ್ಯಕ್ತಿಯಾಗಿ ಸಮಾಜದಲ್ಲಿ  ಗುರುತಿಸಿಕೊಳ್ಳುವುದರ ಹಿಂದೆ ಮನೆ ಮಹಿಳೆಯರ ಬೆವರಿರುತ್ತದೆ. ಆದರೆ ಸಮಾಜಕ್ಕೆ ಈ ಬೆವರು ಕಾಣಿಸುವುದಿಲ್ಲ. ಬದಲು ಅದರ ಫ ಲಿತಾಂಶವಾಗಿರುವ ಪುರುಷನಷ್ಟೇ ಕಾಣಿಸುತ್ತಾನೆ. ಅಷ್ಟಕ್ಕೂ,

ಯಾವುದೇ ಯಶಸ್ವಿ ಉದ್ಯಮಿಯ ಪತ್ನಿ ಉದ್ಯಮಿಯಾಗುವುದು ಕಡಿಮೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಯ ಪತ್ನಿ  ಅಷ್ಟೇ ತೀವ್ರವಾಗಿ ಸಮಾಜ ಸೇವೆಯಲ್ಲಿ ಸಾರ್ವಜನಿಕವಾಗಿ ತೊಡಗಿಸಿಕೊಂಡಿರುವುದು ಕಡಿಮೆ. ವೈದ್ಯನೋರ್ವ ವೈದ್ಯೆಯನ್ನೇ  ಮದುವೆಯಾದರೂ ತ್ಯಾಗದ ಸಂದರ್ಭ ಬಂದಾಗ ವೈದ್ಯೆ ಅದಕ್ಕೆ ಸಿದ್ಧವಾಗುತ್ತಾಳೆ. ಅನೇಕ ಬಾರಿ ಮನೆವಾರ್ತೆ ನೋಡಿಕೊಳ್ಳುವುದಕ್ಕಾಗಿ  ವೈದ್ಯಕೀಯ ಸೇವೆಯಿಂದಲೇ ದೂರ ನಿಲ್ಲುತ್ತಾರೆ. ಶಿಕ್ಷಕ ಮತ್ತು ಶಿಕ್ಷಕಿಗೆ ಸಂಬಂಧಿಸಿಯೂ ಇವೇ ಮಾತು ಅನ್ವಯವಾಗುತ್ತದೆ. ಮಕ್ಕಳ  ಲಾಲನೆ-ಪಾಲನೆ, ಕುಟುಂಬ ನಿರ್ವಹಣೆ ಎಂಬಿತ್ಯಾದಿ ಕಾರಣಗಳನ್ನು ಮುಂದಿಟ್ಟು ತನ್ನ ಶಿಕ್ಷಕ ವೃತ್ತಿಯನ್ನೋ ಲಾಯರ್ ವೃತ್ತಿಯನ್ನೋ  ಕೈಬಿಡುವ ಮಹಿಳೆಯರಿದ್ದಾರೆಯೇ ಹೊರತು ಪುರುಷರಿಲ್ಲ. ರಾಜಕಾರಣಿಯ ಪತ್ನಿ ರಾಜಕಾರಣಿಯಾಗುವುದು ತೀರಾ ತೀರಾ ಅಪರೂಪ.  ಹಾಗಂತ, ಈ ರಾಜಕಾರಣಿಗಳ ಪತ್ನಿಯರು ರಾಜಕೀಯ ಮಹತ್ವಾಕಾಂಕ್ಷೆ ಇಲ್ಲದವರೆಂದೋ ಅಸಮರ್ಥರೆಂದೋ ಇದರರ್ಥವಲ್ಲ.  ರಾಜಕಾರಣಿಯ ಪತ್ನಿಗೆ ಮನೆ ನಿರ್ವಹಣೆಯೇ ಬಹುದೊಡ್ಡ ಸವಾಲು. ರಾಜಕಾರಣಿ ಪತಿ ಮನೆಯಲ್ಲಿರುವುದು ಕಡಿಮೆ. ಇದ್ದರೂ  ಕುಟುಂಬಕ್ಕೆ ಸಮಯ ಮೀಸಲಿಡುವುದು ಇನ್ನೂ ಕಡಿಮೆ. ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಆಪ್ತರು.. ಎಂಬೆಲ್ಲಾ ದಂಡು ಅವರ  ಸುತ್ತ-ಮುತ್ತ ತಿರುಗಾಡುತ್ತಿರುತ್ತದೆ. ಇದರ ನಡುವೆಯೇ ಮಹಿಳೆಯರು ಮನೆ ನಿರ್ವಹಣೆ ಮಾಡಬೇಕು. ಮಕ್ಕಳನ್ನು ನೋಡಿಕೊಳ್ಳಬೇಕು.  ಅನೇಕ ವೇಳೆ, ರಾಜಕಾರಣಿ ಪತಿ ಮೃತಪಟ್ಟ ಬಳಿಕ ಪತ್ನಿ ರಾಜಕೀಯ ಪ್ರವೇಶಿಸುವುದೂ ಇದೆ. ಒಂದುರೀತಿಯಲ್ಲಿ,

ಪುರುಷ ಪ್ರಸಿದ್ಧನಾಗುವುದು ಅಥವಾ ತನ್ನ ಕ್ಷೇತ್ರದಲ್ಲಿ ಯಶಸ್ವಿಯಾಗುವುದು ಮಹಿಳೆಯಿಂದ. ಆಕೆಯ ತ್ಯಾಗ, ಪರಿಶ್ರಮ, ಬೆವರು ಮತ್ತು  ಪ್ರಾರ್ಥನೆಯು ಪುರುಷನ ಪಾಲಿಗೆ ಯಾವಾಗಲೂ ಆಮ್ಲಜನಕವಾಗಿ ಕೆಲಸ ಮಾಡುತ್ತದೆ. ಆದರೆ ಸಮಾಜ ಪುರುಷ ನನ್ನು  ಗುರುತಿಸುತ್ತದೆಯೇ ಹೊರತು ಅದರ ಹಿಂದಿರುವ ಶಕ್ತಿಯನ್ನು ಗಮನಿಸುವುದಿಲ್ಲ. ಈ ಯಶಸ್ವಿ ವ್ಯಕ್ತಿ ಮೃತಪಟ್ಟಾಗ ಸಾವಿರಾರು ಮಂದಿ  ಸೇರುತ್ತಾರೆ. ಗುಣಗಾನ ಮಾಡುತ್ತಾರೆ. ಆ ವ್ಯಕ್ತಿಯನ್ನು ಕೊನೆಯ ಬಾರಿ ನೋಡುವುದಕ್ಕೆ ತುದಿಗಾಲಲ್ಲಿ ನಿಲ್ಲುತ್ತಾರೆ. ಅವರ ಹೆಸರಲ್ಲಿ  ರಕ್ತದಾನ ಶಿಬಿರವನ್ನೋ ಸೇವಾ ಚಟುವಟಿಕೆ ಯನ್ನೋ ನಡೆಸುತ್ತಾರೆ. ಸಾಹಿತ್ಯ ಮತ್ತು ಭಾಷಣ ವೇದಿಕೆಗಳಿಗೆ ಅವರ ಹೆಸರನ್ನಿಡುತ್ತಾರೆ.  ಅವರ ಹೆಸರಲ್ಲಿ ಪ್ರಶಸ್ತಿ ಪುರಸ್ಕಾರವನ್ನು ನೀಡುವ ಪರಂಪರೆ ಪ್ರಾರಂಭಿಸುತ್ತಾರೆ. ಅವರ ಸಾಧನೆಯನ್ನು ಸ್ಮರಿಸುವ ಪುಸ್ತಕಗಳೂ ಬರುತ್ತವೆ.

ಆದರೆ,
ಅವರನ್ನು ಈ ಹಂತಕ್ಕೇರಿಸುವಲ್ಲಿ ಬಹುದೊಡ್ಡ ತ್ಯಾಗ ಮಾಡಿರುವ ಮತ್ತು ಬೆವರು ಹರಿಸಿರುವ ಆಕೆಯನ್ನು ಮಾತ್ರ ಸಮಾಜ ಬಹುತೇಕ  ಬಾರಿ ಮರೆತು ಬಿಡುತ್ತದೆ. ಆದ್ದರಿಂದಲೇ ಪತಿ ಮೃತಪಟ್ಟಾಗ ಸೇರಿದ ಸಾವಿರಾರು ಮಂದಿಯಲ್ಲಿ ನೂರು ಮಂದಿಯೂ ಅವರ ಪತ್ನಿ  ಮೃತಪಟ್ಟಾಗ ಸೇರುವುದಿಲ್ಲ. ಈ ನೂರು ಮಂದಿಯಲ್ಲಿ ಮೃತದೇಹದೊಂದಿಗೆ ಮಸೀದಿಗೆ ಹೋಗು ವವರು ಇನ್ನೂ ಕಡಿಮೆಯಿರುತ್ತಾರೆ.  ಇದು ಒಂದಿಷ್ಟು ಪ್ರತಿಷ್ಠಿತ ವ್ಯಕ್ತಿಗಳಿಗೆ ಸಂಬಂಧಿಸಿದ ಸಂಗತಿಯಾದರೆ, ಸಾಮಾನ್ಯ ಪುರುಷ ಮತ್ತು ಮಹಿಳೆಯರಿಗೆ ಸಂಬಂಧಿಸಿ ಈ  ಪರಿಸ್ಥಿತಿ ಇನ್ನೂ ಆಘಾತಕಾರಿಯಾಗಿರುತ್ತದೆ. ಮೃತ ಪುರುಷನನ್ನು ನೋಡಲು ಬರುವವರು ಮತ್ತು ಮಯ್ಯತ್‌ನೊಂದಿಗೆ ಮಸೀದಿವರೆಗೆ  ಹೋಗುವವರ ಸಂಖ್ಯೆಯ ಅರ್ಧದಷ್ಟೂ ಜನ ಇವರ ಪತ್ನಿಗೆ ಸಂಬಂಧಿಸಿ ಸೇರುವುದಿಲ್ಲ. ಹಳ್ಳಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ  ಪರಿಸ್ಥಿತಿ ಇಷ್ಟು ಕೆಟ್ಟಿಲ್ಲವಾದರೂ ನಗರಗಳಲ್ಲಿ ಇದು ಕಣ್ಣಿಗೆ ಕಾಣುವಷ್ಟು ಸ್ಪಷ್ಟವಾಗಿದೆ. ಹಾಗಂತ,

ಸಾರ್ವಜನಿಕ ಬದುಕಿನಲ್ಲಿ ಕಾಣಿಸಿಕೊಳ್ಳದ ಮತ್ತು ಮನೆವಾರ್ತೆ ನೋಡಿಕೊಳ್ಳುವುದಕ್ಕೆ ತಮ್ಮನ್ನು ಸೀಮಿತಗೊಳಿಸಿದ ಕಾರಣ  ಮಹಿಳೆಯರಿಗೆ ಸಂಬಂಧಿಸಿ ಇಂಥವು ಘಟಿಸುತ್ತವೆ ಎಂದು ಸಮರ್ಥಿಸಿಕೊಳ್ಳಬಹುದು. ಆದರೆ ಇದನ್ನು ಪೂರ್ಣವಾಗಿ ಒಪ್ಪುವ ಹಾಗಿಲ್ಲ.  ಒಂದುವೇಳೆ, ಅವರು ಸಾರ್ವಜನಿಕ ಬದುಕಿನಲ್ಲಿ ಸಕ್ರಿಯರಾಗಿದ್ದರೆ, ಒಂದೋ ಕುಟುಂಬ ನಿಭಾವಣೆಯಲ್ಲಿ ಸಮಸ್ಯೆಗಳುಂಟಾಗುತ್ತಿತ್ತು  ಅಥವಾ ಪುರುಷನ ಸಕ್ರಿಯತೆಯ ಮೇಲೆ ಅದು ತೀವ್ರ ಅಡ್ಡ ಪರಿಣಾಮ ಬೀರುತ್ತಿತ್ತು. ಅಷ್ಟಕ್ಕೂ,
ಇವೆರಡನ್ನೂ ನಿಭಾಯಿಸಿಕೊಂಡು ಪತಿ ಮತ್ತು ಪತ್ನಿ ಸಾರ್ವಜನಿಕ ಬದುಕಿನಲ್ಲಿ ಯಶಸ್ವಿಯಾಗಿರುವ ದೃಷ್ಟಾಂತಗಳು ಇಲ್ಲ ಎಂದಲ್ಲ. ಇದೆ.  ಆದರೆ ಎಣಿಕೆಗೆ ಸಿಗುವಷ್ಟೇ ಇದೆ. ಅದರಾಚೆಗೆ ಯಶಸ್ವಿ ಉದ್ಯಮಿ, ಯಶಸ್ವಿ ವೈದ್ಯ, ಸಮಾಜ ಸೇವಕ, ಶಿಕ್ಷಕ, ಪ್ರಮುಖ ಸಾಹಿತಿಯ ಬೆನ್ನ  ಹಿಂದೆ ಅವರ ತಾಯಿ, ಪತ್ನಿ ಇರುತ್ತಾರೆ. ಈ ವಾಸ್ತವಕ್ಕೆ ಮುಸ್ಲಿಮ್ ಸಮುದಾಯ ಮುಖಾಮುಖಿಯಾಗಬೇಕು. ಪುರುಷರನ್ನು  ಗುರುತಿಸುವ ಮತ್ತು ಗೌರವಿಸುವ ರೀತಿಯಲ್ಲೇ  ಅವರ ಮಹಿಳೆಯರನ್ನೂ ಗುರುತಿಸುವ ಮತ್ತು ಗೌರವಿಸುವ ಪ್ರಕ್ರಿಯೆಗಳಾಗಬೇಕು.  ಮುಖ್ಯವಾಗಿ, ಗೆಳೆಯ ಹೇಳಿದಂಥ ಸನ್ನಿವೇಶ ನಿರ್ಮಾಣವಾಗದಂತೆ ಸಮುದಾಯದೊಳಗೆ ಜಾಗೃತಿ ಮೂಡಬೇಕು.

ಹೆಣ್ಣಿನ ತ್ಯಾಗ, ಪರಿಶ್ರಮವೂ ಗುರುತಿಗೀಡಾಗಲಿ.

No comments:

Post a Comment