ಸನ್ಮಾರ್ಗ ಸಂಪಾದಕೀಯ
ಕೊರೋನಾ ತಂದಿಟ್ಟ ಸಂಕಷ್ಟದ ಕುಲುಮೆಯಲ್ಲಿ ಬೆಂದು ಹೋದವರ ಸಂಖ್ಯೆ ಅಪಾರ. ಲಾಕ್ ಡೌನ್‍ನ ಮೂಲಕ ಆರಂಭವಾದ ಈ ಸಂಕಷ್ಟ ಸಮಾಜದ ಎಲ್ಲ ವರ್ಗವನ್ನೂ ಆವರಿಸಿದೆ. ಉದ್ಯೋಗ ನಷ್ಟ, ವ್ಯಾಪಾರ ನಷ್ಟ, ಕೈಗಾರಿಕೆಗಳ ಸ್ಥಗಿತ, ಉದ್ಯೋಗ ರಹಿತ ಕೂಲಿಕಾರ್ಮಿಕರು, ಖಾಸಗಿ ಶಾಲೆಯ ಶಿಕ್ಷಕರು, ಮದ್ರಸದ ಶಿಕ್ಷಕರು- ಹೀಗೆ ಪ್ರತಿಯೊಬ್ಬರೂ ಕೊರೋನಾ ದಾಳಿಯ ಸಂತ್ರಸ್ತರೇ. ವಿಷಾದ ಏನೆಂದರೆ, ಈ ಎಲ್ಲರ ಪೈಕಿ ಅತ್ಯಂತ ಕಡಿಮೆ ಚರ್ಚೆಗೆ ಒಳಗಾದವರೆಂದರೆ, ಮದ್ರಸ ಶಿಕ್ಷಕರು. ಇವರು ಟಿ.ವಿ. ಚಾನೆಲ್‍ಗಳ ಮುಂದೆ ಬಂದದ್ದು ಕಡಿಮೆ. ಪತ್ರಿಕೆಗಳ ಮುಂದೆ ತಮ್ಮ ಸಂಕಷ್ಟಗಳನ್ನು ಹೇಳಿಕೊಂಡದ್ದೂ ಕಡಿಮೆ. ಒಂದುರೀತಿಯಲ್ಲಿ, ನಮ್ಮ ನಡುವೆಯೇ ಇದ್ದು ನಮ್ಮವರಾಗದೇ ಉಳಿದುಕೊಂಡರೇನೋ ಎಂದು ಅಂದುಕೊಳ್ಳಬಹುದಾದ ಸ್ಥಿತಿ ಅವರದು.ಮದ್ರಸ ಶಿಕ್ಷಣ ಎಂಬುದು ಸಂಪೂರ್ಣವಾಗಿ ಮುಸ್ಲಿಮರಿಗೆ ಸಂಬಂಧಿಸಿರುವುದರಿಂದ ಮತ್ತು ಅಲ್ಲಿ ಕಲಿಸುವ ಶಿಕ್ಷಕರು ಪೂರ್ಣವಾಗಿ ಮುಸ್ಲಿಮರ ಸಾಂಪ್ರದಾಯಿಕ ಉಡುಪನ್ನು ಧರಿಸುವುದರಿಂದ ಸಾಮಾಜಿಕವಾಗಿ ಅವರು ಒಂದು ಪ್ರತ್ಯೇಕ ಗುರುತನ್ನು ಪಡೆದುಕೊಂಡಿದ್ದಾರೆ. ಈ ಗುರುತು ಮುಸ್ಲಿಮ್ ಸಮುದಾಯದ ಹಿನ್ನೆಲೆಯಲ್ಲಿ ನೋಡುವಾಗ ಅವರಿಗೆ ಪೂರಕವಾಗಿದ್ದರೂ ಒಟ್ಟು ಸಮಾಜದ ದೃಷ್ಟಿಯಿಂದ ನೋಡುವಾಗ ಅದು ಅವರ ಪಾಲಿಗೆ ಮಾರಕವಾಗಿ ಮಾರ್ಪಡುವುದಕ್ಕೂ ಅವಕಾಶ ಇದೆ. ಅವರನ್ನು ಸಂಪರ್ಕಿಸುವುದಕ್ಕೆ, ಮಾತಾಡಿಸುವುದಕ್ಕೆ ಮುಸ್ಲಿಮೇತರ ಸಮುದಾಯ ಮತ್ತು ಮಾಧ್ಯಮದ ಮಂದಿ ಅಂಜಿಕೆ ತೋರಿದ್ದರೆ ಅದಕ್ಕೆ ಈ ಗುರುತೂ ಒಂದು ಕಾರಣ. ಮುಸ್ಲಿಮರಿಗೆ ಸಂಬಂಧಿಸಿ ಮದ್ರಸ ಶಿಕ್ಷಕರು ಮತ್ತು ಮಸೀದಿ ಉಸ್ತಾದರೆಂದರೆ ವಿಶೇಷ ಗೌರವ ಮತ್ತು ಆದರ ಇದೆ. ಅವರು ಸಮುದಾಯದ ಮಾರ್ಗದರ್ಶಕರು ಎಂಬ ಪ್ರೀತಿಯಿದೆ. ಆದರೆ,
ಈ ಗೌರವ ಮತ್ತು ಆದರವು ಅವರಿಗೆ ವೇತನವನ್ನು ನಿಗದಿಗೊಳಿಸುವಾಗ ಪರಿಗಣನೆಗೆ ಬರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಅತ್ಯಂತ ನಿರಾಶಾಜನಕವಾದುದು. ಮಸೀದಿ ಉಸ್ತಾದರು ಮತ್ತು ಮದ್ರಸ ಶಿಕ್ಷಕರಿಗೆ ಗೌರವ ಕೊಡುವುದರಲ್ಲಿ ಮುಸ್ಲಿಮ್ ಸಮುದಾಯ ಹಿಂದೆ ಬಿದ್ದಿಲ್ಲ. ಆದರೆ, ಈ ಗೌರವವು ಅವರನ್ನು ಆರ್ಥಿಕವಾಗಿ ಮೇಲೆತ್ತುವುದಕ್ಕೆ ಬಹುತೇಕ ಸಫಲವೂ ಆಗಿಲ್ಲ. ಇದಕ್ಕೆ ಕಾರಣಗಳೂ ಇರಬಹುದು ಮತ್ತು ಕೆಲವೊಂದು ಕಡೆ ಇದಕ್ಕೆ ಅಪವಾದಗಳೂ ಇರಬಹುದು. ಆದರೆ, ಒಂದು ಮೊತ್ತವಾಗಿ ನೋಡುವಾಗ, ಮಸೀದಿ ಉಸ್ತಾದರು ಮತ್ತು ಮದ್ರಸ ಶಿಕ್ಷಕರು ಕ ನಿಷ್ಠ ಈ ಕೊರೋನಾ ಕಾಲದಲ್ಲಿ ಸಾಮುದಾಯಿಕ ಅವಗಣನೆಗೆ ಒಳಗಾದರೇನೋ ಎಂದು ಹೇಳಬೇಕಾಗುತ್ತದೆ.
ಮುಸ್ಲಿಮ್ ಸಮುದಾಯದ ಎಲ್ಲ ಮಸೀದಿ ಮತ್ತು ಮದ್ರಸಗಳು ಶ್ರೀಮಂತವಲ್ಲ. ಒಂದು ಮಸೀದಿಯ ವ್ಯಾಪ್ತಿಯೊಳಗೆ ಸಾವಿರದಷ್ಟು ಮನೆಗಳು ಇರುವಂತೆಯೇ 25 ಮನೆಗಳನ್ನೇ ಅವಲಂಬಿಸಿಕೊಂಡಿರುವ ಮಸೀದಿ-ಮದ್ರಸಗಳೂ ಇವೆ. ಈ ವ್ಯತ್ಯಾಸ ಬಹಳ ಮುಖ್ಯ. ಯಾಕೆಂದರೆ, ಒಂದು ಮಸೀದಿ ವ್ಯಾಪ್ತಿಯಲ್ಲಿ ಸಾವಿರದಷ್ಟು ಮನೆಗಳಿವೆ ಎಂದರೆ ಅಷ್ಟೂ ಮನೆಗಳಿಂದ ವಂತಿಗೆಗಳು ಆ ಮಸೀದಿಗೆ ಬರುತ್ತವೆ ಎಂದು ಅರ್ಥ. ವಂತಿಗೆ ಎಷ್ಟೇ ಸಣ್ಣ ಮೊತ್ತವಾದರೂ ಸಾವಿರ ಮನೆಗಳ ವಂತಿಗೆಯು ಅಂತಿಮವಾಗಿ ದೊಡ್ಡ ಮೊತ್ತವಾಗಿ ಮಾರ್ಪಡುವುದೂ ಸಹಜ. ಅಲ್ಲದೇ, ಈ ಸಾವಿರ ಮನೆಗಳಲ್ಲಿ ಅನೇಕಾರು ದೊಡ್ಡ ದೊಡ್ಡ ಶ್ರೀಮಂತರ ಮತ್ತು ಅನಿವಾಸಿಗಳ ಮನೆಗಳಿರುವುದಕ್ಕೂ ಅವಕಾಶ ಇದೆ. ಆ ಮನೆಗಳು ವಿಶೇಷ ಮೊತ್ತವನ್ನು ಅಭಿಮಾನ ಪೂರ್ವಕ ಮಸೀದಿಗೆ ನೀಡುತ್ತಿರುವುದೂ ನಡೆಯುತ್ತದೆ. ಆದ್ದರಿಂದ ಇಂಥ ಮಸೀದಿ-ಮದ್ರಸಗಳು ಆರ್ಥಿಕವಾಗಿ ಬಡವಾಗಿರುವುದಿಲ್ಲ. ಇಲ್ಲಿ ಕಲಿಸುವ ಶಿಕ್ಷಕರಾಗಲಿ, ಮಸೀದಿ ಉಸ್ತಾದರಾಗಲಿ ತಕ್ಕಮಟ್ಟಿನ ವೇತನವನ್ನೂ ಪಡೆಯುತ್ತಿರುತ್ತಾರೆ. ಮಾತ್ರವಲ್ಲ, ಕೊರೋನಾ ಲಾಕ್‍ಡೌನ್ ಮತ್ತು ಆ ಬಳಿಕದ ದಿನಗಳಲ್ಲಿ ಇವರು ತೀವ್ರ ಆರ್ಥಿಕ ಹೊಡೆತವನ್ನು ಎದುರಿಸಿರುವ ಸಾಧ್ಯತೆಯೂ ಕಡಿಮೆ. ಇವರ ವೇತನಕ್ಕೆ ಕತ್ತರಿ ಬಿದ್ದಿರುವ ಪ್ರಕರಣಗಳೂ ತೀರಾ ತೀರಾ ಕಡಿಮೆ. ಆದರೆ,
ಕಡಿಮೆ ಮನೆಗಳನ್ನು ಅವಲಂಬಿಸಿರುವ ಮಸೀದಿ-ಮದ್ರಸಗಳ ಸ್ಥಿತಿ ಹಾಗಿಲ್ಲ. ಅಲ್ಲಿ ಮಸೀದಿಗೆ ಬರುವ ವಂತಿಗೆ ತೀರಾ ಕಡಿಮೆ. ವಿಶೇಷವಾಗಿ, ಹಳ್ಳಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇಂಥ ಸ್ಥಿತಿ ದಾರಾಳ ಇದೆ. ಶ್ರೀಮಂತರು ಮತ್ತು ಅನಿವಾಸಿಗಳ ಸಂಖ್ಯೆಯೂ ಇಂಥ ಪ್ರದೇಶಗಳಲ್ಲಿ ವಿರಳ. ಕೊರೋನಾ ತಂದಿಟ್ಟ ಸಂಕಷ್ಟಕ್ಕೆ ಅತೀ ದಾರುಣವಾಗಿ ತುತ್ತಾದವರೆಂದರೆ, ಈ ಮಸೀ ದಿ-ಮದ್ರಸದ ಉಸ್ತಾದರು ಮತ್ತು ಶಿಕ್ಷಕರು. ಅನೇಕ ಮಸೀದಿಗಳು ಇವರಿಬ್ಬರಲ್ಲಿ ಉಸ್ತಾದರನ್ನು ಮಾತ್ರ ಉಳಿಸಿಕೊಂಡು ಶಿಕ್ಷಕರನ್ನು ಮನೆಗೆ ಕಳಿಸಿದ್ದೂ ಇದೆ. ಕೆಲವು ಕಡೆ ಇಬ್ಬರನ್ನೂ ಉಳಿಸಿಕೊಂಡಿದ್ದರೂ ವೇತನದಲ್ಲಿ ಕಡಿತಗೊಳಿಸಿದ್ದೂ ಇದೆ. ಒಂದುಕಡೆ, ಮಸೀದಿ ವ್ಯಾಪ್ತಿಯ ಮನೆಗಳ ಆದಾಯದಲ್ಲಿ ತೀವ್ರ ಇಳಿಕೆಯಾಗಿದೆ. ಪ್ರತಿ ಮನೆಗಳೂ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ಇದು ಸಹಜವಾಗಿಯೇ ಮಸೀದಿಯ ಆದಾಯದ ಮೇಲೂ ಪರಿಣಾಮ ಬೀರುತ್ತಿವೆ. ಅಲ್ಲದೇ, ಲಾಕ್‍ಡೌನ್‍ನ ಸಂದರ್ಭದಲ್ಲಿ ಮುಚ್ಚಲಾದ ಮದ್ರಸಗಳು ಇನ್ನೂ ಬಾಗಿಲು ತೆರೆದಿಲ್ಲ. ಮದ್ರಸಗಳಿಗೆ ವಿದ್ಯಾರ್ಥಿಗಳು ಬರುವುದಿಲ್ಲವಾದ್ದರಿಂದ ಆ ಮಕ್ಕಳ ಪೋಷಕರು ಕಲಿಕಾ ಶುಲ್ಕವನ್ನು ಪಾವತಿಸುವುದೂ ಇಲ್ಲ. ಇದರ ನೇರ ಪರಿಣಾಮವನ್ನು ಎದುರಿಸಬೇಕಾದವರು ಮದ್ರಸ ಶಿಕ್ಷಕರು. ಆದ್ದರಿಂದಲೇ, ಬರೇ ಮದ್ರಸ ಶಿಕ್ಷಕ ಉದ್ಯೋಗವನ್ನೇ ನೆಚ್ಚಿಕೊಂಡವರು ಈ ಕೊರೋನಾ ಕಾಲದಲ್ಲಿ ತೀವ್ರ ಸಂಕಷ್ಟಕ್ಕೆ ಸಹಜವಾಗಿಯೇ ತುತ್ತಾದರು. ಅನೇಕ ಮಸೀದಿಗಳು ಇಂಥ ಶಿಕ್ಷಕರನ್ನು ತಾತ್ಕಾಲಿಕವಾಗಿ ಕೈಬಿಟ್ಟವು. ಆದರೆ ಹೀಗೆ ಉದ್ಯೋಗ ಕಳಕೊಂಡ ಮದ್ರಸ ಶಿಕ್ಷಕರಿಗೆ ಪರ್ಯಾಯವಾಗಿ ಅವರ ಮುಂದಿದ್ದುದು ಬರೇ ಶೂನ್ಯ ಮಾತ್ರ. ವಿಷಾದ ಏನೆಂದರೆ,
ಖಾಸಗಿ ಶಾಲಾ ಶಿಕ್ಷಕರ ಸಂಕಷ್ಟ ಚರ್ಚೆಗೆ ಒಳಗಾದಂತೆ ಮದ್ರಸಾ ಶಿಕ್ಷಕರ ಸಂಕಷ್ಟ ಚರ್ಚೆಗೆ ಒಳಗಾಗಿಲ್ಲ ಅನ್ನುವುದು. ಮಾಧ್ಯಮಗಳೂ ಅವರ ಬಗ್ಗೆ ಒಂದಿಷ್ಟು ಅಂತರವನ್ನೇ ಕಾಯ್ದುಕೊಂಡವು. ಅಲ್ಲದೇ, ಅತೀವ ಸ್ವಾಭಿಮಾನವೂ ಈ ಶಿಕ್ಷಕರು ಹೊರ ಪ್ರಪಂಚದಲ್ಲಿ ಚರ್ಚೆಯಾಗದಂತೆ ನೋಡಿಕೊಂಡವು. ನಿಜವಾಗಿ,
ಮುಸ್ಲಿಮ್ ಸಮುದಾಯದ ಮಸೀದಿ-ಮದ್ರಸಾಗಳು ನಿರ್ವಹಿಸಲ್ಪಡುತ್ತಿರುವ ರೀತಿಯೇ ಒಂದು ಕೌತುಕ. ಯಾವುದೇ ಸರಕಾರಕ್ಕೂ ಕಡಿಮೆ ಇಲ್ಲದಂತೆ ಅತ್ಯಂತ ವ್ಯವಸ್ಥಿತವಾಗಿ ಮತ್ತು ಯೋಜನಾಬದ್ಧವಾಗಿ ಇವು ತಲೆತಲಾಂತರದಿಂದ ನಿರ್ವಹಿಸಲ್ಪಡುತ್ತಾ ಬರುತ್ತಿವೆ. ಇಲ್ಲಿ ದುಡಿಯುತ್ತಿರುವ ಯಾವ ಶಿಕ್ಷಕರೂ ಮತ್ತು ಉಸ್ತಾದರೂ ಅವರಿಗೆ ಸಿಗುವ ವೇತನದಿಂದ ಶ್ರೀಮಂತರಾದ ಉದಾಹರಣೆ ಇಲ್ಲ. ಉಸ್ತಾದರ ಮತ್ತು ಶಿಕ್ಷಕರ ದುಡಿಮೆಯನ್ನು ಸಮುದಾಯವು ಸೇವೆ ಎಂದು ಪರಿಗಣಿಸಿರುವುದೇ ಇದಕ್ಕೆ ಕಾರಣ. ಇದನ್ನು ನಿರಾಕರಿಸಬೇಕಾಗಿಯೂ ಇಲ್ಲ. ಅದೊಂದು ಸೇವೆ. ಆದರೆ ಈ ಗೌರವವೊಂದೇ ಅವರ ಹೊಟ್ಟೆಯನ್ನು ತಣಿಸದು. ಕುಟುಂಬವನ್ನು ಪೋಷಿಸದು. ಅವರ ಸೇವೆಯನ್ನು ಕೊಂಡಾಡುತ್ತಲೇ ವೈಜ್ಞಾನಿಕವಾಗಿ ಅವರಿಗೆ ವೇತನ ನಿಗದಿಗೊಳಿಸುವ ಸನ್ನಿವೇಶಗಳೂ ಸೃಷ್ಟಿಯಾಗಬೇಕು. ಮದ್ರಸಾಗಳು ಬಾಗಿಲು ಮುಚ್ಚಿವೆ ಎಂಬುದು ಅವರನ್ನು ಉದ್ಯೋಗದಿಂದ ಕಿತ್ತು ಹಾಕುವುದಕ್ಕೆ ಸಕಾರಣವಾಗುವುದಿಲ್ಲ. ಅವರ ಸೇವೆಗೆ ನಿಜವಾದ ಗೌರವ ಕೊಡಬೇಕಾದ ಸಂದರ್ಭ ಇದು. ಮಸೀದಿ ಆಡಳಿತ ಸಮಿತಿಗಳು ಅವರನ್ನು ಉಳಿಸಿಕೊಂಡು ಧೈರ್ಯ ತುಂಬಬೇಕು. ಅವರ ವೇತನಕ್ಕೆ ಪರ್ಯಾಯ ದಾರಿಗಳನ್ನು ಕಂಡುಕೊಳ್ಳಬೇಕು. ಸರ್ಕಾರದ ಮತ್ತು ವಕ್ಫ್ ಬೋರ್ಡ್‍ನ ಮುಂದೆ ಶಿಕ್ಷಕರ ಸಮಸ್ಯೆಯನ್ನು ವಿವರಿಸಬೇಕು. ಹೀಗೆ ಉದ್ಯೋಗ ಕಳಕೊಂಡ ಮದ್ರಸ ಶಿಕ್ಷಕರ ಬಗ್ಗೆ ಅಧ್ಯಯನ ನಡೆಯಬೇಕಲ್ಲದೇ, ಈ ಉದ್ಯೋಗ ರಹಿತ ಅವಧಿಯಲ್ಲಿ ಅವರಿಗಾದ ತೊಂದರೆಗಳನ್ನು ದಾಖಲಿಸಿ ಸರಕಾರದ ಮುಂದಿಡಬೇಕು ಮತ್ತು ಸೂಕ್ತ ಪರಿಹಾರ ಪ್ಯಾಕೇಜ್‍ಗಾಗಿ ಆಗ್ರಹಿಸಬೇಕು.
ಮಸೀದಿ ಮತ್ತು ಮದ್ರಸಾಗಳಷ್ಟೇ ಈ ಸಮುದಾಯದ ಆಸ್ತಿಗಳಲ್ಲ. ಅಲ್ಲಿರುವ ಉಸ್ತಾದರು ಮತ್ತು ಶಿಕ್ಷಕರೂ ಸಮುದಾಯದ ಆಸ್ತಿಗಳೇ. ಅವರು ಸಮುದಾಯಕ್ಕೆ ಮಾರ್ಗದರ್ಶಕರಾಗಿ ಮತ್ತು ಮೌಲ್ಯಯುತ ಪೀಳಿಗೆಯನ್ನು ಬೆಳೆಸುವವರಾಗಿ ಬೇಕಾದವರಾಗಿದ್ದಾರೆ. ಸಂಕಷ್ಟದ ಸಮಯದಲ್ಲಿ ಸಮುದಾಯ ಅವರನ್ನು ಕೈ ಬಿಡುವುದು ದ್ರೋಹವಾಗುತ್ತದೆ. ಅವರನ್ನು ಆದರಿಸಿ, ಅವರ ಸಮಸ್ಯೆಗಳನ್ನು ಸರ್ಕಾರದ ಮುಂದಿಟ್ಟು ಪರಿಹಾರವನ್ನು ಪಡಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ.
No comments:
Post a Comment