1. ಉಹುದ್
2. ತಾಯಿಫ್
ಮಕ್ಕಾದಲ್ಲಿ ಪ್ರವಾದಿ ಮುಹಮ್ಮದರ(ಸ) ಪಾಲಿಗೆ ದೊಡ್ಡ ಶಕ್ತಿಯಾಗಿದ್ದ ದೊಡ್ಡಪ್ಪ ಅಬೂತಾಲಿಬ್ ಮತ್ತು ಪತ್ನಿ ಖದೀಜಾ- ಇಬ್ಬರೂ ಬೆನ್ನು ಬೆನ್ನಿಗೇ ಮೃತಪಟ್ಟ ಬಳಿಕ ಪ್ರವಾದಿ ಅನಾಥತೆ ಯನ್ನು ಅ ನುಭವಿಸಿದರು. ಅಬೂತಾಲಿಬ್ ಜೀವಿಸಿರುವವರೆಗೆ ಅವರಿಗೆ ಅಸ್ತಿತ್ವದ ಸಮಸ್ಯೆ ಕಾಡಿರಲಿಲ್ಲ. ಅಬೂತಾ ಲಿಬ್ ಅಭಯ ನೀಡಿದ್ದರು. ಅಬೂತಾಲಿಬ್‍ರನ್ನು ಎದುರು ಹಾಕಿಕೊಂಡು ಪ್ರವಾದಿ ಮುಹಮ್ಮದ್‍ರೊಂ ದಿಗೆ ಜಗಳ ಕಾಯುವ ಮತ್ತು ಅವರನ್ನು ಮಕ್ಕಾದಿಂದ ಹೊರ ಹಾಕುವ ಧೈರ್ಯ ಯಾರಿಗೂ ಇರಲಿಲ್ಲ. ಆದರೆ ಅವರ ನಿಧನದ ಜೊತೆಗೇ ಪ್ರವಾದಿ ಮುಹಮ್ಮದರ ಪಾಲಿನ ಕರಾಳ ದಿನಗಳೂ ತೆರೆದುಕೊಂಡವು. ಅವರ ವಿಚಾರಧಾರೆಗಳನ್ನು ವಿರೋಧಿಸುತ್ತಿದ್ದ ಮಂದಿ ಚುರುಕಾದರು. ಪ್ರವಾದಿಯನ್ನು ನಖಶಿಖಾಂತ ದ್ವೇಷಿಸಿದರು.
ಒಂದು ಘಟನೆ ಹೀಗಿದೆ:
ಒಂದು ಮುಂಜಾನೆ. ಪ್ರವಾದಿ ಮುಹಮ್ಮದರು ತನ್ನ ವಿಚಾರಧಾರೆಯನ್ನು ಜನರ ಜೊತೆ ಹಂಚಿಕೊಂಡರು. ಆದರೆ ಆ ಮಾತುಗಳನ್ನು ಆಲಿಸಿದವರಲ್ಲಿ ಕೆಲವರು ಅವರ ಮುಖಕ್ಕೆ ಉಗುಳಿದರು. ಕೆಲವರು ಮಣ್ಣು ಎಸೆದರು. ಬೈದರು. ಹೀನಾಯ ಭಾಷೆಯಲ್ಲಿ ನಿಂದಿಸಿದರು. ಪ್ರವಾದಿ ಏನೂ ಮಾಡ ಲಿಲ್ಲ. ಅವರ ಸುತ್ತ ಸೇರಿಕೊಂಡವರು ವ್ಯಂಗ್ಯ, ದೂಷಣೆ, ಬೈಗುಳ ಸುರಿಸುತ್ತಾ ಮನಬಂದಂತೆ ವರ್ತಿಸುತ್ತಿದ್ದರು. ಬೆಳಕು ಹರಿದು ಹಗಲು ಸ್ಪಷ್ಟವಾದಾಗ ಓರ್ವ ಹೆಣ್ಣು ಮಗಳು ಪಾತ್ರೆ ತುಂಬಾ ನೀರು ಹಿಡಿದುಕೊಂಡು ಬಂದಳು. ಆಕೆಯ ಕಣ್ಣು ತುಂಬಿಕೊಂಡಿತ್ತು. ಪ್ರವಾದಿ ತನ್ನ ಕೈ ಮತ್ತು ಮುಖವನ್ನು ತೊಳೆದುಕೊಂಡರು. ಬಳಿಕ ಹೇಳಿದರು,
“ಮಗಳೇ, ನಿನ್ನ ಅಪ್ಪ ದುರ್ಬಲ, ಅಸಹಾಯಕ ಮತ್ತು ಯಾರ ರಕ್ಷಣೆಯೂ ಇಲ್ಲದವನೆಂದು ಭಾವಿಸ ದಿರು. ಅಲ್ಲಾಹ್ ನಿನ್ನ ತಂದೆಯ ಜೊತೆಗಿದ್ದಾನೆ..” ಆ ಹೆಣ್ಣು ಮಗಳು ಪ್ರವಾದಿಯ ಪುತ್ರಿಯಾಗಿದ್ದರು. ಹೆಸರು ಝೈನಬ್. ಆ ಇಡೀ ಘಟನೆಯನ್ನು ಮುನೀಬುಲ್ ಅಸ್ದಿ ಎಂಬವರು ಆ ಬಳಿಕ ಸ್ಮರಿಸಿಕೊಂಡಿದ್ದಾರೆ. ತ್ವಬ್ರಾನಿ ಎಂಬ ವಿದ್ವಾಂಸರು ಬರೆದಿರುವ ಮುಲ್‍ಜಮುಲ್ ಕಬೀರಿ ಎಂಬ ಗ್ರಂಥದಲ್ಲಿ ಈ ಘಟನೆ ಉಲ್ಲೇಖಗೊಂಡಿದೆ.
ಹೀಗೆ ಮಕ್ಕಾದಲ್ಲಿ ಯಾರ ಆಶ್ರಯವೂ ಇಲ್ಲದೇ ಅತಂತ್ರರಾದ ಪ್ರವಾದಿಯವರು ಮುಂದೇನು ಅನ್ನುವ ಆತಂಕಕ್ಕೆ ಸಿಲುಕುತ್ತಾರೆ. ಒಂದುಕಡೆ, ತನ್ನೂರೇ ತನ್ನನ್ನು ವೈರಿಯಂತೆ ಪರಿಗಣಿಸಿರುವುದು ಮತ್ತು ಇ ನ್ನೊಂದೆಡೆ ತನ್ನ ವಿಚಾರಧಾರೆಗೆ ಬದ್ಧವಾಗಿ ಬದುಕುವುದು- ಇವೆರಡೂ ಅವರನ್ನು ಪ್ರಶ್ನೆಯ ಮೊ ನೆಯಲ್ಲಿ ನಿಲ್ಲಿಸುತ್ತದೆ. ತನ್ನೂರಿನ ಜನರ ಜೀವನ ಕ್ರಮದಲ್ಲಿರುವ ತಪ್ಪುಗಳನ್ನು ಕಂಡು ಮೌ ನವಾಗಿರುವುದಕ್ಕೆ ಅವರ ಮನಸ್ಸು ಒಪ್ಪುತ್ತಿಲ್ಲ. ಪರಂಪರಾಗತ ವೆಂದೋ ಸಂಪ್ರದಾಯವೆಂದೋ ಹೇಳಿಕೊಂಡು ಮೌಢ್ಯಗಳನ್ನೇ ಜೀವನ ವಿಧಾನವಾಗಿ ಒಪ್ಪಿಕೊಂಡವರ ಜೊತೆ ರಾಜಿ ಮಾಡಿ ಕೊಳ್ಳುವುದನ್ನು ಕಲ್ಪಿಸಿಕೊಳ್ಳುವುದೂ ಅವರ ಪಾಲಿಗೆ ಅಸಾಧ್ಯವಾಗಿತ್ತು. ಇನ್ನೊಂದೆಡೆ, ತನ್ನ ವಿಚಾರಧಾರೆಯನ್ನು ಸಹಿಸುವುದಕ್ಕೆ ತನ್ನೂರು ಸಿದ್ಧವಿರಲಿಲ್ಲ. ಇಂಥ ಸ್ಥಿತಿಯಲ್ಲಿ ಅವರು ತನಗೆ ಆಶ್ರಯ ನೀಡ ಬಹುದಾದ ಅಥವಾ ಕನಿಷ್ಠ ತನ್ನ ಮಾತುಗಳನ್ನು ಆಲಿಸಬಹುದಾದ ಇನ್ನೊಂದು ಊರನ್ನು ಬಯಸಿದರು. ಮುಖ್ಯವಾಗಿ ಅವರಿಗೆ ಅಭಯ ನೀಡಬಹುದಾದ ಊರಿನ ಅಗತ್ಯವಿತ್ತು. ಆಗ ಅವರಿಗೆ ನೆನಪಾದದ್ದೇ ತಾಯಿಫ್.
ತಾಯಿಫ್ ಎಂಬ ಊರು ಮಕ್ಕಾದಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿತ್ತು. ಪ್ರವಾದಿ ಮುಹಮ್ಮದರು ಆ ಊರನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಎರಡು ಕಾರಣಗಳಿದ್ದುವು.
1. ಪ್ರವಾದಿ ಮುಹಮ್ಮದ್‍ರ ತಾಯಿ ಆಮಿನಾರ ಬಂಧುಗಳಿರುವ ಊರು.
2. ಅವರ ಸಾಕುತಾಯಿ ಹಲೀಮಾರ ಕುಟುಂಬದವರು ವಾಸಿಸು ತ್ತಿರುವ ಊರು.
ಮಕ್ಕಾದವರ ಹಿಂಸೆ ಮತ್ತು ಅವಮಾನದಿಂದ ರಕ್ಷಣೆ ಪಡೆಯುವ ಮತ್ತು ತನ್ನ ಬದುಕನ್ನು ಹೊಸ ಊರಲ್ಲಿ ಪ್ರಾರಂಭಿಸುವ ಉದ್ದೇಶದೊಂದಿಗೆ ಪ್ರವಾದಿ ಮುಹಮ್ಮರು ತನ್ನ ಸಾಕು ಪುತ್ರ ಝೈದ್ ಬಿನ್ ಹಾರಿಸರೊಂದಿಗೆ ತಾಯಿಫ್ ಎಂಬ ಊರಿಗೆ ಕಾಲ್ನಡಿಗೆಯಲ್ಲಿ ಸಾಗಿದರು. ವಿಪರೀತ ಬಿಸಿಲು. ಅಲ್ಲದೇ ಕಾಲ್ನಡಿಗೆಯಲ್ಲೇ ಪ್ರಯಾಣ. ಅದೂ 90 ಕಿಲೋಮೀಟರ್‍ನಷ್ಟು ದೀರ್ಘ ಯಾತ್ರೆ. ಪ್ರವಾದಿ ಮತ್ತು ಝೈದ್ ಬಿನ್ ಹಾರಿಸ- ಇಬ್ಬರೂ ದಣಿದಿದ್ದರು. ಆದರೂ ಅವರಿಬ್ಬರೂ ಹಠ ಬಿಡದೇ ತಾಯಿಫ್‍ಗೆ ತಲುಪಿದರು. ಬಳಿಕ ಪುರ ಪ್ರಮುಖರಾದ ಅಬ್ದುಲ್ಲಾ ಬಿನ್ ಅಮ್ರ್‍ರನ್ನು ಭೇಟಿಯಾಗಿ ತಾವು ಬಂದಿರುವ ಉದ್ದೇಶವನ್ನು ವಿವರಿಸಿದರು. ಅಲ್ಲದೇ, ಸಹೋದರರಾದ ಮಸ್‍ಊದ್ ಮತ್ತು ಹಬೀಬ್ ಎಂಬಿಬ್ಬರನ್ನೂ ಭೇಟಿಯಾದರು. ತನಗೆ ಆಶ್ರಯ ನೀಡಬೇಕೆಂದು ಕೋರಿಕೊಂಡರು. ಆದರೆ ಅವರು ಒಪ್ಪಿಕೊಳ್ಳಲಿಲ್ಲ ಎಂದು ಮಾತ್ರವಲ್ಲ, ಅಸಭ್ಯ ಭಾಷೆಯಲ್ಲಿ ನಿಂದಿಸಿದರು. ತೀವ್ರ ವಿರೋಧವನ್ನು ವ್ಯಕ್ತಪಡಿಸಿದರು. ಅವರ ಪ್ರತಿಕ್ರಿಯೆಯನ್ನು ಆಲಿಸಿದ ಬಳಿಕ ಪ್ರವಾದಿ ಹೇಳಿದರು,
‘ನೀವು ಆಶ್ರಯ ಕೊಡದಿದ್ದರೂ ಚಿಂತಿಲ್ಲ, ಆದರೆ ಆಶ್ರಯ ಕೊಡದೇ ಇರುವ ಸಂಗತಿಯನ್ನು ಮಕ್ಕಾದ ಮಂದಿಗೆ ಮಾತ್ರ ತಿಳಿಸಬೇಡಿ. ಈ ಮಾತುಕತೆಯನ್ನು ಇಲ್ಲಿಗೇ ಬಿಟ್ಟು ಬಿಡಿ.’
ಪ್ರವಾದಿ ಮರಳಿ ಮಕ್ಕಾಕ್ಕೆ ಹೊರಟು ನಿಂತರು. ತನ್ನ ತಾಯಿ ಮತ್ತು ಸಾಕು ತಾಯಿಯ ಊರ ಜನರು ತನಗೆ ಆಶ್ರಯ ನೀಡಲಿಲ್ಲವಲ್ಲ ಅನ್ನುವ ನೋವೊಂದು ಅವರಲ್ಲಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಮಕ್ಕಾದಿಂದ ಹೊರಡುವಾಗ ಅವರಲ್ಲೊಂದು ನಿರೀಕ್ಷೆ ಇತ್ತು. ತನ್ನ ತಾಯಿಯ ತವರೂರು ತನ್ನನ್ನು ಸ್ವೀಕರಿಸಬಹುದು ಅನ್ನುವ ಆಶಾವಾದವಿತ್ತು. ತನ್ನೂರಿನ ಜನರು ತನ್ನನ್ನು ತಿರಸ್ಕರಿಸಿದರೇನು, ತಾಯಿಯ ತವರೂರಲ್ಲಿ ತಾನು ಹೊಸ ಬದುಕನ್ನು ಕಂಡುಕೊಳ್ಳುವೆ ಅನ್ನುವ ವಿಶ್ವಾಸವಿತ್ತು. ಆದರೆ, ಆ ನಿರೀಕ್ಷೆ ಈಗ ಹುಸಿಯಾಗಿದೆ. ಅವರು ಝೈದ್ ಬಿನ್ ಹಾರಿಸರೊಂದಿಗೆ ಮರಳಿ ಕಾಲ್ನಡಿಗೆಯಲ್ಲಿ ಹೊರಟು ನಿಂತಾಗ ಅವರ ಸುತ್ತ ಗುಂಪು ಸೇರಿತು. ಹಲ್ಲೆ ನಡೆಸಿತು. ಕಲ್ಲೆಸೆಯಿತು. ಎಲ್ಲಿಯ ವರೆಗೆಂದರೆ, ಜೊತೆಗಿದ್ದ ಝೈದ್ ಬಿನ್ ಹಾರಿಸರ ತಲೆಗೆ ಬಿದ್ದ ಕಲ್ಲಿನೇಟಿನಿಂದಾಗಿ ರಕ್ತ ಹರಿದು ಮುಖವಿಡೀ ಕೆಂಪು ಕೆಂಪಾಯಿತು. ಪ್ರವಾದಿ ಮುಹಮ್ಮದ್‍ರ ಕಾಲಿನ ಹಿಂಭಾಗ ಕಲ್ಲಿನೇಟಿಗೆ ಒಡೆದು ರಕ್ತ ಸುರಿಯತೊಡಗಿತು. ಗುಂಪು ಅವರನ್ನು ತಮ್ಮ ಗಡಿಯವರೆಗೆ ಹಿಂಬಾಲಿಸಿ ಹಿಂಸೆ ಕೊಟ್ಟು ಮರಳಿತು. ಪ್ರವಾದಿ ನಡೆಯುತ್ತಾ ಒಂದು ತೋಟಕ್ಕೆ ಹೋದರು. ಅಲ್ಲೇ ಒರಗಿ ಕುಳಿತರು. ಆ ತೋಟದ ಕಾರ್ಮಿಕ ಅವರಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿದ. ನೀರು ಕೊಟ್ಟ.
ಪ್ರವಾದಿ ಮುಹಮ್ಮದರ ಮುಂದೆ ಈಗ ಇನ್ನೊಂದು ಸವಾಲು ಎದುರಾಯಿತು.
ಅವರೀಗ ಮಕ್ಕಾದ ಹೊರಗಿನ ತಾಯಿಫ್‍ಗೆ ಬಂದಿರುವುದು, ಅಲ್ಲಿ ಅಭಯ ಕೇಳಿರುವುದು ಮತ್ತು ತಾಯಿಫ್‍ನ ಪುರ ಪ್ರಮುಖರು ಅದನ್ನು ತಿರಸ್ಕರಿಸಿರುವುದು ಎಲ್ಲವೂ ಮಕ್ಕಾದ ತನ್ನ ವಿರೋಧಿಗಳಿಗೆ ತಿಳಿದಿರುವ ಸಾಧ್ಯತೆಯಂತೂ ಇದ್ದೇ ಇದೆ. ತನ್ನ ಮೇಲೆ ಜನರ ಗುಂಪು ಮುಗಿಬಿದ್ದಿರುವುದರಲ್ಲೇ ಈ ಸೂಚನೆ ಇದೆ. ಆಶ್ರಯ ಕೇಳಿರುವ ವಿಷಯವನ್ನು ಪುರಪ್ರಮುಖರು ಬಹಿರಂಗಪಡಿಸಿದ್ದಾರೆ. ಅದರ ಭಾಗವಾಗಿಯೇ ಜನರು ಒಟ್ಟು ಗೂಡಿದ್ದಾರೆ. ಆದ್ದರಿಂದ ಈ ಸುದ್ದಿ ಮಕ್ಕಾಕ್ಕೂ ತಲುಪಿರುವ ಸಾಧ್ಯತೆ ಇದೆ. ಇನ್ನು ನೇರವಾಗಿ ಮಕ್ಕಾಕ್ಕೆ ಹೋಗುವುದರಲ್ಲೂ ಸುಖ ಇಲ್ಲ. ಅಲ್ಲಿ ಯಾರಾದರೂ ಆಶ್ರಯವನ್ನು ಕೊಡಲು ಮುಂದೆ ಬಂದರೆ, ಪ್ರಯಾಣ ಸುಲಭ. ಈ ಹಿನ್ನೆಲೆಯಲ್ಲಿ ಪ್ರವಾದಿ ಮುಹಮ್ಮದರು ಮಕ್ಕಾದ ಮಂದಿಯಲ್ಲಿ ಅಭಯವನ್ನು ಕೋರಿ ಬಳಿಕ ಪಯಣ ಮುಂದುವರಿಸುವುದು ಉತ್ತಮವೆಂದು ಬಗೆದರು. ಹೀಗೆ ಅಖ್‍ನಸ್ ಬಿನ್ ಶರೀಖ್ ಎಂಬ ಪ್ರಮುಖ ವ್ಯಕ್ತಿಗೆ ಕೋರಿಕೆ ಸಲ್ಲಿಸಿದರು. ಆದರೆ ಆ ವ್ಯಕ್ತಿ ಒಪ್ಪಿಕೊಳ್ಳಲಿಲ್ಲ. ಬಳಿಕ ಸುಹೈಲ್ ಬಿನ್ ಅಮ್ರ್ ಎಂಬ ಮತ್ತೋರ್ವ ಪ್ರಮುಖ ವ್ಯಕ್ತಿಗೆ ಕೋರಿಕೆ ಕಳುಹಿಸಿದರು. ಆತನೂ ನಿರಾಕರಿಸಿದ. ಕೊನೆಗೆ, ಮುತ್‍ಇಮ್ ಬಿನ್ ಅದಿಯ್ಯ್ ಎಂಬ ವ್ಯಕ್ತಿಗೆ ಪ್ರವಾ ದಿಯವರು ಆಶ್ರಯ ಕೋರಿಕೆಯನ್ನು ಸಲ್ಲಿಸಿದರು. ಆತ ಒಪ್ಪಿಕೊಂಡ. ಮಾತ್ರವಲ್ಲ, ತನ್ನ ಆರು ಮಂದಿ ಪುತ್ರರನ್ನು ಸೇರಿಸಿಕೊಂಡು ಆಗಮಿಸಿದ. ಎಲ್ಲರೂ ಶಸ್ತ್ರಸಜ್ಜಿತರು. ಪ್ರವಾದಿಯನ್ನು ಕಾಬಾದ ಬಳಿ ನಿಲ್ಲಿಸಿದ ಮತ್ತು ಘೋಷಿಸಿದ-
‘ನಾನು ಮುಹಮ್ಮದರಿಗೆ ಅಭಯ ನೀಡಿದ್ದೇನೆ.’
ಹಾಗಂತ, ಆತ ಪ್ರವಾದಿ ಮುಹಮ್ಮದರ ವಿಚಾರಧಾರೆಯನ್ನು ಒಪ್ಪಿಕೊಂಡಿರಲಿಲ್ಲ. ದೊಡ್ಡಪ್ಪ ಅಬೂತಾ ಲಿಬ್‍ರ ನಿಧನದ ಬಳಿಕ ಅತಂತ್ರರಂತಾಗಿದ್ದ ಪ್ರವಾದಿ ಮುಹಮ್ಮದರು ಹೀಗೆ ಮತ್ತೆ ಅಭಯದಾತರನ್ನು ಪಡೆದುಕೊಂಡರು. ಮಕ್ಕಾದಲ್ಲಿ ತನ್ನ ವಿಚಾರ ಧಾರೆಯನ್ನು ಹರಡತೊಡಗಿದರು. ವಿರೋಧಿಗಳ ಕುಹಕ, ಹಿಂಸೆ ಎಗ್ಗಿಲ್ಲದೇ ನಡೆಯುತ್ತಿದ್ದರೂ ಅವರನ್ನು ತಾಯ್ನಾಡಿನಿಂದ ಬಲ ವಂತವಾಗಿ ಹೊರಹಾಕುವುದಕ್ಕೆ ಅವಕಾಶ ಇರಲಿಲ್ಲ. ಹಾಗಂತ, ಹಿಂಸೆಯೂ ನಿಲ್ಲಲಿಲ್ಲ. ಕೊನೆಗೆ ಅವರು ಮಕ್ಕಾವನ್ನು ಬಿಟ್ಟು ಸುಮಾರು 150 ಕಿಲೋಮೀಟರ್ ದೂರದ ಮದೀನಾಕ್ಕೆ ವಲಸೆ ಹೋಗಲು ತೀರ್ಮಾನಿಸಿದರು. ಅಲ್ಲಿ ಹೋಗಿ ನೆಲೆಸಿದರು. ಆದರೆ,
ಮಕ್ಕಾದ ಅವರ ವಿರೋಧಿಗಳು ಅವರನ್ನು ಅಲ್ಲೂ ಸಮಾ ಧಾನದಿಂದ ಬದುಕಲು ಬಿಡಲಿಲ್ಲ. ತಂತ್ರ ಹೆಣೆದರು. ಅವರ ವಿರುದ್ಧ ಯುದ್ಧ ಘೋಷಿಸಿದರು. ಮದೀನಾದಲ್ಲಿದ್ದ ಯಹೂದಿ ಗಳೊಂದಿಗೆ ಅತ್ಯಂತ ಜನಪರವಾದ ಮತ್ತು ಪೌರತ್ವ ಕೇಂದ್ರಿತವಾದ ಕರಾರೊಂದನ್ನು ಮಾಡಿಕೊಂಡು ನೆಲೆ ಕಂಡುಕೊಂಡಿದ್ದ ಪ್ರವಾದಿಯವರು ಈ ಯುದ್ಧವನ್ನು ಎದುರಿಸಬೇಕಾಗಿತ್ತು. ಹಾಗೆ, ಮದೀನಾದ ಹೊರಗಡೆಯಿರುವ ಬದ್ರ್ ಎಂಬ ಸ್ಥಳದಲ್ಲಿ ಕಾಳಗ ನಡೆಯಿತು. ಮಕ್ಕಾದ ಯುದ್ಧ ತಂಡದಲ್ಲಿ ಪ್ರವಾದಿಗೆ ಅಭಯ ನೀಡಿದ್ದ ಮುತ್‍ಇಮ್ ಬಿನ್ ಅದಿಯ್ಯ್ ಕೂಡ ಇದ್ದರು. ಪ್ರವಾದಿಗೆ ಇದು ಗೊತ್ತಾಯಿತು. ‘ಮುತ್‍ಇಮ್ ಬಿನ್ ಅದಿಯ್ಯ್‍ರನ್ನು ರಣಾಂಗಣದಲ್ಲಿ ಗುರಿ ಮಾಡಬೇಡಿ’ ಎಂದು ಪ್ರವಾದಿ ತನ್ನ ಯೋಧರಿಗೆ ಸೂಚಿಸಿದರು. ಅಲ್ಲದೇ ಯುದ್ಧದಿಂದ ದೂರ ನಿಲ್ಲುವಂತೆ ಮುತ್‍ಇಮ್‍ರಿಗೆ ಮನವಿಯನ್ನೂ ಮಾಡಿಕೊಂಡರು. ಆದರೆ ಅವರು ನಿರಾಕರಿಸಿದರು. ಕೊನೆಗೆ ಮುತ್‍ಇಮ್ ಕಾಳಗದಲ್ಲಿ ಸಾವನ್ನಪ್ಪಿದರು.
ಅಂದಿನ ಕಾಲದಲ್ಲಿ ಯುದ್ಧವೆನ್ನುವುದು ಅರಬಿಗಳ ಸಂಸ್ಕøತಿ ಯಾಗಿತ್ತು. ಸಣ್ಣ-ಪುಟ್ಟ ವಿವಾದವೂ ಯುದ್ಧದಲ್ಲೇ ಕೊನೆಗೊಳ್ಳುತ್ತಿತ್ತು. ಜನರೆಲ್ಲ ಯಾವುದಾದರೊಂದು ಗೋತ್ರದಲ್ಲಿ ಗುರುತಿಸಿಕೊಂಡಿದ್ದರು. ಯಾವುದೇ ವ್ಯಕ್ತಿಗಾಗುವ ಅನ್ಯಾಯ, ಅವಮಾನವು ಆ ವ್ಯಕ್ತಿಗೆ ಮಾತ್ರವಲ್ಲದೇ, ಆ ವ್ಯಕ್ತಿ ಪ್ರತಿನಿಧಿಸುವ ಗೋತ್ರಕ್ಕಾಗುವ ಅನ್ಯಾಯ, ಅವಮಾನವಾಗಿ ಗುರುತಿಗೀಡಾಗುತ್ತಿತ್ತು. ಬಳಿಕ ಅದು ಪ್ರತಿಷ್ಠೆಯ ಪ್ರಶ್ನೆಯಾಗುತ್ತಿತ್ತು. ಅದಕ್ಕಾಗಿಯೇ ಆಯಾ ಗೋತ್ರಗಳು ತಿಂಗಳುಗಟ್ಟಲೆ ಘರ್ಷಣೆಯಲ್ಲೂ ತೊಡಗುತ್ತಿತ್ತು.
ಬದ್ರ್‍ನಲ್ಲಿ ನಡೆದ ಕಾಳಗದಲ್ಲಿ ಪ್ರವಾದಿಯವರ ವಿರೋಧಿಗಳಿಗೆ ಸೋಲು ಉಂಟಾಯಿತು. ಅವರ 150ರಷ್ಟು ಮಂದಿಯನ್ನು ಪ್ರವಾದಿಯವರ ಸೇನೆ ಬಂಧಿಸಿ ಮದೀನಾಕ್ಕೆ ಕೊಂಡೊಯ್ಯಿತು. ಬಂಧಿಗಳ ಕುಟುಂಬಸ್ಥರು ದಂಡವನ್ನು ಪಾವತಿಸಿ ತಮ್ಮವರನ್ನು ಬಿಡಿಸಿಕೊಂಡು ಹೋಗತೊಡಗಿದರು. ಆಗ ಪ್ರವಾದಿ ತನ್ನ ಅನುಯಾಯಿಗಳೊಂದಿಗೆ ಹೇಳಿದ್ದು ಹೀಗೆ:
‘ಒಂದುವೇಳೆ, ಮುತ್‍ಇಮ್ ಬಿನ್ ಅದಿಯ್ಯ್ ಯುದ್ಧದಲ್ಲಿ ಸಾವಿಗೀಡಾಗದೆ ಬದುಕಿರುತ್ತಿದ್ದರೆ ಮತ್ತು ಈ ಯುದ್ಧ ಕೈದಿಗಳನ್ನು ಬಿಡುಗಡೆಗೊಳಿಸುವಂತೆ ಕೇಳಿಕೊಂಡಿದ್ದರೆ ಯಾವ ದಂಡವನ್ನೂ ಪಡೆದುಕೊಳ್ಳದೇ ಎಲ್ಲರನ್ನೂ ಬಿಡುಗಡೆಗೊಳಿಸುತ್ತಿದ್ದೆ.’
ಇದರ ನಂತರ, ಇನ್ನೊಂದು ಕಾಳಗವೂ ನಡೆಯಿತು.
ಅದು ಉಹುದ್ ಎಂಬ ಬೆಟ್ಟದ ಕೆಳಗಡೆ. ಅದರಲ್ಲಿ ಪ್ರವಾದಿ ಮುಹಮ್ಮದ್‍ರ ಸೇನೆ ತೀವ್ರ ಹೊಡೆತವನ್ನು ತಿನ್ನುತ್ತದೆ. ಪ್ರವಾದಿಯವರ ಅತ್ಯಂತ ಆಪ್ತರೂ ಸೇರಿದಂತೆ 70 ಮಂದಿ ಸಾವಿಗೀಡಾಗುತ್ತಾರೆ. ಸ್ವತಃ ಪ್ರವಾದಿಯ ಹಲ್ಲುಗಳೂ ಉದುರುತ್ತವೆ. ಒಂದು ರೀತಿಯಲ್ಲಿ, ಪ್ರವಾದಿಯವರು ಬಲವಾದ ಎದಿರೇಟನ್ನು ಪಡೆದ ಕಾಳಗ. ಒಂದು ದಿನ ಅವರ ಪತ್ನಿ ಆಯಿಶಾ(ರ) ಪ್ರಶ್ನಿಸುತ್ತಾರೆ,
‘ಉಹುದ್ ಕಾಳಗದ ದಿನಗಳಿಗಿಂತ ಕಠಿಣ ಮತ್ತು ನೋವಿನ ದಿನಗಳು ನಿಮ್ಮ ಬದುಕಿನಲ್ಲಿ ಎದುರಾಗಿವೆಯೇ?’ ಪ್ರವಾದಿಯ ಉತ್ತರ ಹೀಗಿತ್ತು:
‘ನಾನು ಅಭಯವನ್ನು ಕೋರಿ ತಾಯಿಫ್‍ಗೆ ಹೋದ ದಿನವೇ ನನ್ನ ಪಾಲಿನ ಅತ್ಯಂತ ಕಷ್ಟಕರವಾದ ಮತ್ತು
ನೋವು ನೀಡಿದ ದಿನ.’
ನಿಜವಾಗಿ, ಇವು ಒಂದು ಘಟನೆಯಾಗಿಯಷ್ಟೇ ನಮ್ಮ ಎದುರು ನಿಲ್ಲಬೇಕಾದುದಲ್ಲ. ಅಥವಾ ಭಾವುಕತೆಯಿಂದ ಓದಿ ಮುಗಿಸಬೇಕಾದುದೂ ಅಲ್ಲ. ತನಗೆ ಮದೀನಾದಲ್ಲೂ ನೆಲೆ ಇಲ್ಲದಂತೆ ಮಾಡಬೇಕೆಂದು ಹೊರಟು ಬಂದ ಸೇನೆಯ ಭಾಗವಾಗಿದ್ದ ಮುತ್‍ಇಮ್ ಬಿನ್ ಅದಿಯ್ಯ್‍ನ ಬಗ್ಗೆ ಪ್ರವಾದಿಯ ಧೋರಣೆ ಮತ್ತು ತಾಯಿಫ್‍ಗಿಂತ ಅನೇಕಾರು ಪಟ್ಟು ಅಧಿಕ ನೋವನ್ನು ಮತ್ತು ಸಾವನ್ನು ನೀಡಿರುವ ಬೇರೆ ಸಂದರ್ಭಗಳಿದ್ದಾಗ್ಯೂ ಪ್ರವಾದಿ ತಾಯಿಫನ್ನೇ ಅತೀ ಪ್ರಮುಖ ನೋವಿನ ಘಟ ನೆಯಾಗಿ ಎತ್ತಿ ಹೇಳಿರುವುದೇಕೆಂಬ ಬಗ್ಗೆ ಆಳ ಚಿಂತನೆ ನಡೆಸಬೇಕಾಗಿದೆ.
ಮುತ್‍ಇಮ್ ಮತ್ತು ತಾಯಿಫ್- ಈ ಎರಡರಲ್ಲೂ ಅನೇಕ ಪಾಠಗಳಿವೆ.
No comments:
Post a Comment