Saturday, September 26, 2020

ನಾವು ಹೆಮ್ಮೆ ಪಡಬೇಕಾದುದು ಯಾವಾಗ ಅಂದರೆ?



ಮೊದಲಿಗೆ ಒಂದಿಷ್ಟು ಮಾಹಿತಿಗಳು.

ಕೇಂದ್ರ ಲೋಕಸೇವಾ ಆಯೋಗವು (UPSC) ಈ ಬಾರಿ ನಡೆಸಿದ ಪರೀಕ್ಷೆಯಲ್ಲಿ ಒಟ್ಟು 829 ಮಂದಿ ತೇರ್ಗಡೆಯಾಗಿದ್ದು, ಇವರಲ್ಲಿ 42 ಮಂದಿ ಮುಸ್ಲಿಮರು. ಟಾಪ್ 100ರಲ್ಲಿ ಸ್ಥಾನ  ಪಡೆದ ಏಕೈಕ ಮುಸ್ಲಿಮ್ ಅಭ್ಯರ್ಥಿ ಸಪ್ನಾ ನಝರುದ್ದೀನ್. ಇವರ ರಾಂಕ್ 45. ಆಗಸ್ಟ್ 4ರಂದು ಈ ಫಲಿತಾಂಶ ಬಿಡುಗಡೆಗೊಂಡಿದೆ. ಕಳೆದ ವರ್ಷ ಒಟ್ಟು 759 ಮಂದಿ ತೇರ್ಗಡೆಯಾಗಿದ್ದರು ಮತ್ತು ಇವರಲ್ಲಿ 28 ಮಂದಿಯಷ್ಟೇ ಮುಸ್ಲಿಮರಿದ್ದರು. 2016ರಲ್ಲಿ ಒಟ್ಟು ತೇರ್ಗಡೆಗೊಂಡವರ ಪೈಕಿ 50 ಮಂದಿ ಮುಸ್ಲಿಮರಿದ್ದರು. ಅಲ್ಲದೇ, ಟಾಪ್ 100ರಲ್ಲಿ 10 ಮಂದಿ  ಮುಸ್ಲಿಮರಿದ್ದರು. 2012, 13, 14, 15ರಲ್ಲಿ ಕ್ರಮವಾಗಿ 30, 34, 38, 36 ಮುಸ್ಲಿಮ್ ಅಭ್ಯರ್ಥಿಗಳು ಈ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.

ಮೊನ್ನೆ ಆಗಸ್ಟ್ 21ರಂದು ಹೊರಬಿದ್ದ ಸಿಇಟಿ ಪರೀಕ್ಷಾ ಫಲಿತಾಂಶದ ಕತೆಯೂ ಇದುವೇ. ಐದು ವಿಭಾಗಗಳ ಮೊದಲ 50  ರಾಂಕ್ ಗಳಲ್ಲಿ ಸ್ಥಾನ ಪಡೆದಿರುವುದು ಒಬ್ಬನೇ ಒಬ್ಬ ಮುಸ್ಲಿಮ್  ಅಭ್ಯರ್ಥಿ. ಸಿಇಟಿಯ ಐದು ವಿಭಾಗಗಳಾದ ಎಂಜಿನಿಯರಿಂಗ್, ಬಿಎಸ್‍ಸಿ ಅಗ್ರಿಕಲ್ಚರ್, ಪಶು ವೈದ್ಯಕೀಯ, ಬಿ ಫಾರ್ಮ ಮತ್ತು ನ್ಯಾಚುರೋಪಥಿ ಆ್ಯಂಡ್ ಯೋಗಿಕ್ ಸೈನ್ಸ್ ಗಳಲ್ಲಿ ಎಂ.ಡಿ.  ಅರ್ಬಾಜ್  ಅಹ್ಮದ್‍ರನ್ನು ಬಿಟ್ಟರೆ ಮೊದಲ 50 ರಾಂಕ್ ಗಳಲ್ಲಿ ಇನ್ನಾರೂ ಮುಸ್ಲಿಮರಿಲ್ಲ.
ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 73% ವಿದ್ಯಾರ್ಥಿಗಳು ಪಾಸಾಗಿದ್ದರೆ, ಪರಿಶಿಷ್ಟ ಪಂಗಡದಿಂದ 71% ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಮುಸ್ಲಿಮರು  ಒಳಗೊಂಡಿರುವ 2ಬಿ ವಿಭಾಗದ ಪರೀಕ್ಷಾ ಫಲಿತಾಂಶ 67%.

ವಿಷಾದ ಏನೆಂದರೆ, ಮುಸ್ಲಿಮ್ ಸಮುದಾಯದಲ್ಲಿ ಅತ್ಯಂತ ಕಡಿಮೆ ಚರ್ಚೆಗೆ ಒಳಗಾಗುವ ವಿಷಯಗಳು ಇವು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮುಸ್ಲಿಮ್  ವಿದ್ಯಾರ್ಥಿಗಳ ವಿವರಗಳು ಒಂದೆರಡು ದಿನಗಳ ಕಾಲ ಮುಸ್ಲಿಮರ ಮೊಬೈಲ್‍ಗಳಲ್ಲಿ ಹರಿದಾಡುತ್ತವಾದರೂ ಅದರಾಚೆಗೆ ಸಿಇಟಿ, ಯುಪಿಎಸ್‍ಸಿ, ನೀಟ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳ  ವಿವರ ಹರಿದಾಡುವುದು ಶೂನ್ಯ ಅನ್ನುವಷ್ಟು ಕಡಿಮೆ. ಈ ಸಮುದಾಯದ ಹೆಚ್ಚಿನ ಮಂದಿಗೆ ಎಸ್ಸೆಸ್ಸೆಲ್ಸಿ, ಡಿಗ್ರಿ ಇತ್ಯಾದಿ ಹೆಸರುಗಳ ಹೊರತಾಗಿ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಅವುಗಳಲ್ಲಿ  ತೇರ್ಗಡೆಯಾಗುವ ಮೂಲಕ ಆಗುವ ಪ್ರಯೋಜನಗಳ ಕುರಿತು ಅರಿವಿಲ್ಲ. ಅಲ್ಲದೇ, ಅರಿವಿದ್ದವರಿಂದ ಅರಿವಿಲ್ಲದವರಿಗೆ ಅವು ಹಂಚಿಕೆಯಾಗುವ ಸನ್ನಿವೇಶಗಳು ದೊಡ್ಡ ಪ್ರಮಾಣದಲ್ಲಿ  ಸೃಷ್ಟಿಯಾಗುತ್ತಲೂ ಇಲ್ಲ. ಹಾಗಂತ,

ಇದಕ್ಕೆ ಬೇಕಾದ ಸಂಪನ್ಮೂಲ ವ್ಯಕ್ತಿಗಳು ಮತ್ತು ವ್ಯವಸ್ಥೆಗಳು ಇಲ್ಲ ಎಂದಲ್ಲ. ಈಗ ಇರುವ ವ್ಯವಸ್ಥೆ ಎಷ್ಟು ಅದ್ಭುತವಾಗಿದೆ ಯೆಂದರೆ, ಈ ವ್ಯವಸ್ಥೆ ಇನ್ನಾವುದಾದರೂ ಸಮುದಾಯದಲ್ಲಿ ಇ ದ್ದಿದ್ದಿದ್ದೇ ಆಗಿದ್ದರೆ ಅವು ಯಾರ ಕೈಗೂ ಸಿಗದಷ್ಟು ಎತ್ತರಕ್ಕೆ ಏರಿ ಬಿಡುತ್ತಿದ್ದುವು.

ಸುಮ್ಮನೆ, ನಮ್ಮ ನಮ್ಮ ವ್ಯಾಪ್ತಿಯಲ್ಲಿರುವ ಮಸೀದಿಗಳನ್ನೊಮ್ಮೆ ಲೆಕ್ಕ ಹಾಕಿ. ಫರ್ಲಾಂಗಿಗೊಂದರಂತೆ ಮಸೀದಿಗಳಿವೆ. ಈ ಮಸೀದಿಗಳೆಲ್ಲ ಭೂಮಿಯಡಿಯಿಂದ ದಿಢೀರ್ ಆಗಿ ಉದ್ಭವವಾದವುಗಳಲ್ಲ. ಒಂದು ಪ್ರದೇಶದಲ್ಲಿ ಮಸೀದಿ ಇದೆ ಎಂದಾದರೆ, ಆ ಪ್ರದೇಶದಲ್ಲಿ ಮುಸ್ಲಿಮರಿದ್ದಾರೆ ಎಂದರ್ಥ. ಯಾವ ಸರಕಾರವೂ ಮಸೀದಿ ಕಟ್ಟಿ ಕೊಡುವುದಿಲ್ಲ. ಮಸೀದಿ ಕಟ್ಟಿಕೊಳ್ಳುವುದು  ಮುಸ್ಲಿಮರು. ಆ ಮಸೀದಿಯಲ್ಲಿ ನಿತ್ಯದ ಪ್ರಾರ್ಥನೆಗಾಗಿ ಮತ್ತು ನೀರು, ಚಾಪೆ, ವಿದ್ಯುತ್, ನೈರ್ಮಲ್ಯಗಳನ್ನು ಕಾಯ್ದುಕೊಳ್ಳುವುದಕ್ಕಾಗಿ ಬೇಕಾದ ವ್ಯವಸ್ಥೆ ಮಾಡಿಕೊಳ್ಳುವುದೂ ಮುಸ್ಲಿಮರೇ.  ಐದು ಬಾರಿ ಅದಾನ್ ಕೊಡುವುದಕ್ಕೆ, ನಮಾಜ್ ಗೆ ನೇತೃತ್ವ ನೀಡುವು ದಕ್ಕೆ ಮತ್ತು ಮದ್ರಸದಲ್ಲಿ ವಿದ್ಯಾರ್ಥಿಗಳಿಗೆ ಕಲಿಸುವುದಕ್ಕೆ ಬೇಕಾದ ಏರ್ಪಾಡುಗಳನ್ನು ಮಾಡುವುದೂ ಮುಸ್ಲಿಮರೇ.  ಇವೆಲ್ಲವು ಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗುವುದಕ್ಕಾಗಿ ಮಸೀದಿ ಕಮಿಟಿಯನ್ನು ರಚಿಸುವುದೂ ಮುಸ್ಲಿಮರೇ. ಆದ್ದರಿಂದಲೇ, ಪ್ರಶ್ನೆಗಳೂ ಹುಟ್ಟಿಕೊಳ್ಳೋದು.
ಇಷ್ಟೆಲ್ಲ ಸಾಧ್ಯವಿರುವ ಮುಸ್ಲಿಮರಿಗೆ ಸಿಇಟಿ, ಯುಪಿಎಸ್‍ಸಿ, ನೀಟ್-ಜೆಇಇ, ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಇತ್ಯಾದಿ ಇತ್ಯಾದಿಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಟಾಪರ್ ಆಗಿ ಮೂಡಿ  ಬರುವಂತೆ ಮಾಡುವುದು ಕಷ್ಟವೇ? ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಗ್ರಿಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಶೇ. 95ಕ್ಕಿಂತ ಹೆಚ್ಚು ತೇರ್ಗಡೆ ಹೊಂದುವಂತೆ ಮಾಡುವುದು ಅಸಾಧ್ಯವೇ? ಸ್ಪರ್ಧಾತ್ಮಕ  ಪರೀಕ್ಷೆಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಭಾರೀ ಪ್ರಮಾಣದಲ್ಲಿ ಭಾಗವಹಿಸುವಂತೆ ಮಾಡುವುದು ಮತ್ತು ಉನ್ನತ 100ರ ಪಟ್ಟಿಯಲ್ಲಿ ಪ್ರಾಬಲ್ಯವನ್ನು ಸ್ಥಾಪಿಸುವಂತೆ ಮಾಡಲಾಗದೇ?

ಖಂಡಿತ ಸಾಧ್ಯವಿದೆ.

ಎಲ್ಲ ಮಸೀದಿಯ ಆಡಳಿತ ಸಮಿತಿ ಮತ್ತು ಉಸ್ತಾದರು ಮಸೀದಿಯ ಮಿಂಬರಿನ ಪಕ್ಕ ಕುಳಿತು ಹೀಗೆ ಒಮ್ಮೆ ಅವಲೋಕನ ನಡೆಸಿಕೊಳ್ಳಲಿ-
ನಮ್ಮ ಜಮಾಅತ್‍ನಲ್ಲಿ ಎಸ್ಸೆಸ್ಸೆಲ್ಲಿ, ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಎಷ್ಟಿದ್ದಾರೆ? ಈ ಮುಗಿಸಿದವರಲ್ಲಿ ತೇರ್ಗಡೆ ಹೊಂದಿ ಮುಗಿಸಿದವರು ಎಷ್ಟು, ಅನುತ್ತೀರ್ಣರಾಗಿ ಅರ್ಧದಲ್ಲೇ   ಮುಗಿಸಿದವರು ಎಷ್ಟು? ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದವರು ಏನು ಮಾಡುತ್ತಿದ್ದಾರೆ, ಅವರಿಗೆ ಉದ್ಯೋಗ ಸಿಕ್ಕಿದೆಯೇ, ಮಗ ಹಾಳಾಗುತ್ತಿದ್ದಾನೆ ಎಂಬ ದೂರು ಮನೆಯವರಲ್ಲಿ ಇದೆಯೇ? ಮಗ ನ/ಳ ವಿದ್ಯಾಭ್ಯಾಸವನ್ನು ಮುಂದುವರಿಸಲು ಅವರು ಪ್ರಯತ್ನ ಪಟ್ಟಿದ್ದಾರೆಯೇ? ಆತ/ಕೆಗೆ ಮಾರ್ಗದರ್ಶನ ಮಾಡಿದರೆ ಸಾಧನೆ ಮಾಡಬಲ್ಲನೇ/ಳೇ? ಹಾಗೆಯೇ ಎಸ್ಸೆಸ್ಸೆಲ್ಸಿಯಲ್ಲಿ  ಉತ್ತೀರ್ಣರಾದ ಹುಡುಗ/ಹುಡುಗಿಗೆ ನಾವು ಏನು ಮಾರ್ಗದರ್ಶನ ಮಾಡಿದ್ದೇವೆ? ಯಾವ ಯಾವ ಆಯ್ಕೆಗಳು ಇವರ ಮುಂದಿವೆ ಮತ್ತು ಯಾವ ಆಯ್ಕೆ ಯಾವ ವಿದ್ಯಾರ್ಥಿಗೆ ಸೂಕ್ತ  ಎಂದು ಅಂಕಗಳನ್ನು ಆಧರಿಸಿ ನಿರ್ಣಯಿಸುವ ವ್ಯವಸ್ಥೆ ಮಾಡಲಾಗಿದೆಯೇ? ನುರಿತ ವ್ಯಕ್ತಿಗಳಿಂದ ಅವರಿಗೆ ಮಾರ್ಗದರ್ಶನ ಲಭಿಸಿದೆಯೇ? ತಮ್ಮ ಮಸೀದಿ ವ್ಯಾಪ್ತಿಯ ಯಾವ ಮನೆಯಲ್ಲಿ  ಎಷ್ಟು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದಾರೆ, ಪಿಯುಸಿಗೆ ಹಾಜರಾಗಿದ್ದಾರೆ ಮತ್ತು ಯಾರ್ಯಾರು ಎಷ್ಟೆಷ್ಟು ಅಂಕಗಳನ್ನು ಪಡೆದಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆಯೇ? ಯಾವ  ಮನೆಯ ವಿದ್ಯಾರ್ಥಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾನೆ/ಳೆ ಮತ್ತು ಅವರಲ್ಲಿ ಯಾರ ಸಂಕಷ್ಟಕ್ಕೆ ನೆರವಾದರೆ ಅವರ ಭವಿಷ್ಯ ಉಜ್ವಲವಾಗಬಹುದು? ತಮ್ಮ ಮಸೀದಿ ವ್ಯಾಪ್ತಿಯಲ್ಲಿ ಎಷ್ಟು ಮಂದಿ  ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದಾರೆ ಮತ್ತು ಆ ಚಟುವಟಿಕೆಗಳು ಯಾವುವು ಹಾಗೂ ಅವನ್ನು ಇನ್ನಷ್ಟು ಹರಿತಗೊಳಿಸುವುದಕ್ಕೆ ಏನು ತೊಂದರೆಗಳಿವೆ? ಉತ್ತಮ  ತರಬೇತು ದಾರರಿಂದ ಅವರಿಗೆ ಮಾರ್ಗದರ್ಶನ ಲಭಿಸಿದರೆ ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಿಂಚಬಲ್ಲರೇ? ಅದೇರೀತಿ,

ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಓದುವ ಮಕ್ಕಳಿಗೆ ಮತ್ತು ಅವರ ಹೆತ್ತವರಿಗೆ ಎಷ್ಟು ಗೊತ್ತಿದೆ? ಸಿಇಟಿ, ನೀಟ್, ಐಐಟಿ ಮುಂತಾದ ಪರೀಕ್ಷೆಗಳಲ್ಲಿ ಹಾಜರಾಗಲು ಈ  ವಿದ್ಯಾರ್ಥಿಗಳಲ್ಲಿ ಎಷ್ಟು ಮಂದಿ ಅರ್ಹರು ಮತ್ತು ಅವರನ್ನು ಹೇಗೆ ತರಬೇತುಗೊಳಿಸಬಹುದು? ಮನೆಯವರ ನಿಲುವು ಏನು? ಪದವಿ ಶಿಕ್ಷಣ ಪೂರೈಸಿದವರು ಮತ್ತು ಇನ್ನಿತರ ರೂಪದಲ್ಲಿ  ಶಿಕ್ಷಣ ಮುಗಿಸಿದವರಿಗೆ ಸರಕಾರಿ ಉದ್ಯೋಗಕ್ಕೆ ಸೇರಲು ತೊಂದರೆಯಾಗಿದೆಯೇ? ಅರ್ಹತೆಯಿದ್ದೂ ಉದ್ಯೋಗ ಸಿಗದೇ ಹತಾಶರಾಗಿದ್ದಾರೆಯೇ? ಕಲಿಕೆಗೆ ತಕ್ಕ ಉದ್ಯೋಗ ಸಿಕ್ಕಿಲ್ಲ ಎಂಬ  ಭಾವದಲ್ಲಿ ದಿನೇ ದಿನೇ ಕೊರಗುತ್ತಿದ್ದಾರೆಯೇ?
ಪ್ರಶ್ನೆಗಳು ಇನ್ನೂ ಇವೆ ಮತ್ತು ಇವೆಲ್ಲ ಬರೇ ಪ್ರಶ್ನೆಗಳೂ ಅಲ್ಲ. ಪ್ರತಿ ಮಸೀದಿ ಕಮಿಟಿಗಳೂ ಒಂದಿಷ್ಟು ಹೊತ್ತು ಚರ್ಚೆಗೆ ಮೀಸಲಿಡಬೇಕಾದ ಸಂಗತಿಗಳು. ಮಸೀದಿ ಕಮಿಟಿಗಳು ಈವರೆಗೆ  ಮಸೀದಿಗೆ ಬಳಿಯಬೇಕಾದ ಬಣ್ಣ, ರಬೀವುಲ್ ಅವ್ವಲ್‍ನಲ್ಲಿ ಮಾಡಬೇಕಾದ ಅಲಂಕಾರ, ಮಸೀದಿಯ ಮೈಕ್ ಬದಲಾವಣೆ, ಏ.ಸಿ. ಅಳವಡಿಕೆ, ಹೊಸ ಮಿನಾರ, ಮಿಂಬರ್ ಇತ್ಯಾದಿಗಳ  ಚರ್ಚೆಗಾಗಿ ಸಾಕಷ್ಟು ಸಮಯ ವಿನಿಯೋಗಿಸಿದೆ. ಅನೇಕ ಬಾರಿ ಇಂಥವುಗಳ ಚರ್ಚೆಗಾಗಿ ಮೀಟಿಂಗ್‍ಗಳ ಮೇಲೆ ಮೀಟಿಂಗ್‍ಗಳು ನಡೆದಿವೆ. ಹಣವೂ ಖರ್ಚಾಗಿವೆ. ಹಾಗಂತ,

ಇವೆಲ್ಲ ಅನಗತ್ಯ ಎಂದಲ್ಲ. ಈ ಹಿಂದೆ ಏನೆಲ್ಲಾ ನಡೆದು ಹೋಗಿವೆಯೋ ಅವೆಲ್ಲ ನಮ್ಮ ಮುಂದಿನ ಬದುಕಿಗೆ ಪಾಠವಾಗಬೇಕು. ಇನ್ನು ನಮ್ಮ ಮಸೀದಿ ಮೀಟಿಂಗ್‍ಗಳು ಈ ಮೇಲಿನ  ವಿಷಯಗಳ ಮೇಲೆ ನಡೆಯಲಿ. ಪ್ರತಿ ಮಸೀದಿಯ ಆಡಳಿತ ಕಮಿಟಿಗಳೂ ತಮ್ಮ ಮಸೀದಿ ವ್ಯಾಪ್ತಿಯಲ್ಲಿರುವ ಪ್ರತಿ ಮನೆಗಳ ಕ್ಷೇಮಾಭ್ಯುದಯಕ್ಕಾಗಿ ಮೀಟಿಂಗ್‍ಗಳ ಮೇಲೆ ಮೀಟಿಂಗ್‍ಗಳನ್ನು  ನಡೆಸುವ ಹೊಸ ಬದಲಾವಣೆಗೆ ನಾಂದಿ ಹಾಡಲಿ. ಪ್ರತಿ ಮನೆಯ ಸದಸ್ಯರ ಡಾಟಾ ಕಲೆ ಹಾಕುವ ಮತ್ತು ಆ ಡಾಟಾದಲ್ಲಿ ಆ ಮನೆಯಲ್ಲಿರುವ ವಿದ್ಯಾರ್ಥಿಗಳೆಷ್ಟು, ಉದ್ಯೋಗಿಗಳೆಷ್ಟು,  ಮಕ್ಕಳೆಷ್ಟು? ಯಾವ ಮಕ್ಕಳು ಯಾವ್ಯಾವ ತರಗತಿಯಲ್ಲಿ ಓದು ತ್ತಿದ್ದಾರೆ, ಅವರ ಅಂಕಗಳೆಷ್ಟು, ಅವರ ಆಸಕ್ತಿ ಏನು, ಯಾವ ರೀತಿಯ ಮಾರ್ಗದರ್ಶನ ಅವರಿಗೆ ಬೇಕಾಗಿದೆ, ಯಾವ ಮ ನೆಯ ವಿದ್ಯಾರ್ಥಿಯನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಗೊಳಿಸಬಹುದು, ಯಾವ ವಿದ್ಯಾರ್ಥಿಗೆ ಯಾವ ಕ್ಷೇತ್ರ ಸೂಕ್ತ ಮುಂತಾದುವುಗಳ ಬಗ್ಗೆ ಸ್ಪಷ್ಟವಾದ ವಿವರಗಳಿರಲಿ. ಅವುಗಳನ್ನು  ಹರಡಿಕೊಂಡು ಮೀಟಿಂಗ್ ನಡೆಸಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಸಭೆಗಳನ್ನು ಮದ್ರಸದಲ್ಲಿ ಏರ್ಪಡಿಸಿ. ಭವಿಷ್ಯದ ಬಗ್ಗೆ ಅವರಲ್ಲಿ ಕನಸು ಕಾಣಲು ಹೇಳಿ. ನಿಮ್ಮದೇ ಮಸೀದಿ ವ್ಯಾಪ್ತಿಯಲ್ಲಿರುವ ಉತ್ತಮ ಸಾಧಕರನ್ನು ತಂದು ಮಕ್ಕಳಿಗೆ ಪ್ರೇರಣದಾಯಕ ಮಾತುಗಳನ್ನು ಆಡಿಸಿ. ಉದ್ಯಮಿಯೂ ಮಾತಾಡಲಿ. ವೈದ್ಯನೂ  ಮಾತಾಡಲಿ. ಶಿಕ್ಷಕನೂ ಮಾತಾಡಲಿ. ಉಸ್ತಾದರೂ ಮಾತಾಡಲಿ. ನಮ್ಮ ಸಮುದಾಯದಲ್ಲಿ ಎಷ್ಟೊಂದು ಸಾಧಕರಿದ್ದಾರೆ, ಎಂಥೆಂಥ ಅದ್ಭುತ ಮನುಷ್ಯರಿದ್ದಾರೆ ಎಂಬ ಹೆಮ್ಮೆ ಮೂಡುವಂತೆ  ಮಾಡಿ. ಹಾಗಂತ,

ಇದು ಕೇವಲ ಪುರುಷರಿಂದ ಪುರುಷರಿಗೆ ಎಂಬಂಥ ಕಾರ್ಯ ಕ್ರಮ ಆಗಬಾರದು. ಮಹಿಳಾ ಸಾಧಕರನ್ನು ಕರೆತನ್ನಿ. ಮಾತಾಡಿಸಿ. ಹೆಣ್ಮಕ್ಕಳ ಸಾಧನೆಗೂ ಹೆಮ್ಮೆಪಡಿ. ಅವರನ್ನೂ  ಹುರಿದುಂಬಿಸಿ.

ರಸ್ತೆಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ಉಸ್ತಾದರ ಪೋಟೋ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿತ್ತು. ಅನೇಕರು ಆ ವ್ಯಾಪಾರವನ್ನು ಕೊಂಡಾಡಿದ್ದೂ ಇದೆ.  ಉಸ್ತಾದರ ಆರ್ಥಿಕ ಮುಗ್ಗಟ್ಟನ್ನು ಉಲ್ಲೇಖಿಸಿ ದುಃಖಿಸಿದ್ದೂ ಇದೆ. ನಿಜವಾಗಿ,

ನಾವು ಹೆಮ್ಮೆಪಡಬೇಕಾದದ್ದು- ಇಂಥ ವ್ಯಾಪಾರಿಗಳಿಂದ ಮುಸ್ಲಿಮ್ ಸಮುದಾಯದ ಐಎಎಸ್, ಐಪಿಎಸ್ ಅಧಿಕಾರಿಗಳು, ಇನ್ಸ್‍ಪೆಕ್ಟರ್, ವೈದ್ಯ, ಪ್ರೊಫೆಸರ್, ಸಂಶೋಧಕರು ಅಗತ್ಯ ವಸ್ತುಗಳ ನ್ನು ಖರೀದಿಸಿಕೊಂಡು ಹೋಗುವಂತಾದಾಗ. ಅಂಥ ಅಧಿಕಾರಿಗಳನ್ನು ಧಾರಾಳ ಸಂಖ್ಯೆಯಲ್ಲಿ ತಯಾರಿಸಿ ಸಮಾಜಕ್ಕೆ ಅರ್ಪಿಸಿದಾಗ. ಎಲ್ಲೆಂದರಲ್ಲಿ ಅವರ ಉಪಸ್ಥಿತಿಯೇ ಕಾಣುವಂತಾದಾಗ.

ಆ ಉಸ್ತಾದರಿಗೆ ಸಲಾಮ್.

No comments:

Post a Comment