Saturday, October 24, 2020

ಹಾಥರಸ್: Fact ಮತ್ತು Truth ಗಳು



Fact
Truth 

ಬಾಹ್ಯನೋಟಕ್ಕೆ ಈ ಎರಡೂ ಪದಗಳು ಧ್ವನಿಸುವ ಅರ್ಥ ಸಮಾನವಾದುದು. ನಿಜ, ಸತ್ಯ, ನಿಖರ ಇತ್ಯಾದಿ ಅರ್ಥಗಳಲ್ಲಿ ಈ ಮೇಲಿನ ಎರಡೂ ಪದಗಳನ್ನು ಬಳಸಲಾಗುತ್ತದೆ. ಇದು ತಪ್ಪೂ ಅಲ್ಲ. ಆದರೆ, ಎಲ್ಲ ಸಂದರ್ಭಗಳಲ್ಲಿ Fact ಎಂಬುದು Truth  ಆಗಿರುವುದಿಲ್ಲ. ಹೇಳುವುದು ಸತ್ಯವೇ (Fact) ಆಗಿರಬಹುದು. ಆದರೆ ಆ ಸತ್ಯ ಆ ಸಂದರ್ಭದಲ್ಲಿ ತಪ್ಪಾದ ಸಂದೇಶವನ್ನು  ಮತ್ತು ತಪ್ಪು ಗ್ರಹಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಲೂಬಹುದು. ಅಥವಾ ಅದು ಸತ್ಯವಾಗಿದ್ದರೂ ಆ ಸಂದರ್ಭದಲ್ಲಿ  ಉದ್ದೇಶಿತ ಸತ್ಯ (Truth) ಆಗಿರುವುದಿಲ್ಲ. 

ಒಂದು ಉದಾಹರಣೆ ಕೊಡುತ್ತೇನೆ.

ಒಂದು ಮನೆ ಉರಿದು ಭಾಗಶಃ ಭಸ್ಮವಾಗಿರುತ್ತದೆ. ಆ ಮನೆಗೆ ಮತ್ತು ಆ ಮನೆಯಲ್ಲಿರುವ ಸೊತ್ತುಗಳಿಗೆ ಸಾಕಷ್ಟು ಹಾನಿ  ತಟ್ಟಿರುತ್ತದೆ. ತನಿಖಾಧಿಕಾರಿ ಆ ಮನೆಗೆ ಭೇಟಿ ಕೊಡುತ್ತಾನೆ ಮತ್ತು ಪರಿಶೀಲನೆಯ ವೇಳೆ ಅವನಿಗೆ ಸೀಮೆ ಎಣ್ಣೆ ಮತ್ತು ಬೆಂಕಿ ಪೆÇಟ್ಟಣ ಕಾಣಿಸುತ್ತದೆ. ಇದಾದ ಬಳಿಕ ಪತ್ರಕರ್ತ ಆತನನ್ನು ಕಂಡು ಹೀಗೆ ಪ್ರಶ್ನಿಸುತ್ತಾನೆ-

‘ಮನೆಗೆ ಹೇಗೆ ಬೆಂಕಿ ಹತ್ತಿಕೊಂಡಿತು?’

‘ಆ ಸ್ಥಳದಲ್ಲಿ ಆಮ್ಲಜನಕ ಇದ್ದುದರಿಂದ ಬೆಂಕಿ ಹತ್ತಿಕೊಂಡಿತು’ ಎಂದು ತನಿಖಾಧಿಕಾರಿ ಉತ್ತರಿಸುತ್ತಾನೆ.

ಅಷ್ಟಕ್ಕೂ, 

ಈ ಉತ್ತರ ಸುಳ್ಳಲ್ಲ. ಆಮ್ಲಜನಕದ ಅನುಪಸ್ಥಿತಿಯಲ್ಲಿ ಬೆಂಕಿ ಹತ್ತಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ತನಿಖಾಧಿಕಾರಿ ಸತ್ಯವ ನ್ನೇ ಹೇಳಿದ್ದಾನೆ. ಆದರೆ ಆ ಪತ್ರಕರ್ತನ ಪ್ರಶ್ನೆಗೆ ಈ ಉತ್ತರ ಸಮಂಜಸವೇ ಎಂದು ಪರಿಶೀಲಿಸಿದರೆ ಅಲ್ಲ ಎಂದೇ ಸ್ಪಷ್ಟವಾಗುತ್ತದೆ.  ಇದು ಆ ಸಂದರ್ಭಕ್ಕೆ ಅಪ್ರಸ್ತುತವಾದ, ಅನಗತ್ಯ ವಾದ ಮತ್ತು ಪತ್ರಕರ್ತನನ್ನು ತಪ್ಪುಗ್ರಹಿಕೆಗೆ ಈಡು ಮಾಡುವ ಉತ್ತರವೇ ಹೊರತು  ಖಿಡಿuಣh ಅಲ್ಲ. ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬ ಪತ್ರಕರ್ತನ ಪ್ರಶ್ನೆಯಲ್ಲಿ, ಆ ಬೆಂಕಿ ಉದ್ದೇಶಪೂರ್ವಕವೋ ಆಕಸ್ಮಿಕವೋ  ಎಂಬ ಅಂಶವೂ ಒಳಗೊಂಡಿದೆ. ಒಂದುವೇಳೆ, ಉದ್ದೇಶಪೂರ್ವಕ ಎಂದಾದರೆ, ಅದಕ್ಕೆ ಏನು ಕಾರಣ ಮತ್ತು ಯಾರು ಕಾರಣ  ಎಂಬ ಪ್ರಶ್ನೆಯೂ ಇದೆ. ಅಂದಹಾಗೆ,

ಉತ್ತರ ಪ್ರದೇಶದ ಹಾಥರಸ್‍ನ ಘಟನೆ ಮುಖ್ಯವಾಗುವುದು ಇಲ್ಲೇ. ಇಲ್ಲಿ ವಿಶೇಷವಾಗಿ ನಾವು ಎರಡು ರೀತಿಯ ಮಾತುಗಳನ್ನು  ಎತ್ತಿಕೊಳ್ಳಬಹುದು.

1. ಆ ಯುವತಿಯ ಸಾವಿನಿಂದ ನನಗೆ ಅಪಾರ ನೋವಾಗಿದೆ.

2. ಹಾಥರಸ್‍ನಲ್ಲಿ ಅತ್ಯಾಚಾರಕ್ಕೀಡಾದ ಯುವತಿ.

ಈ ಮೇಲಿನ ಎರಡೂ ರೀತಿಯ ಮಾತುಗಳನ್ನು ನೀವು ಆಲಿಸಿಯೇ ಇರುತ್ತೀರಿ. ಟಿ.ವಿ. ಚರ್ಚೆಗಳಲ್ಲಿ ಮತ್ತೆ ಮತ್ತೆ ಇಂಥ ಪದ ಪ್ರಯೋಗವನ್ನು ಕೇಳಿಯೂ ಇರುತ್ತೀರಿ. ಮೇಲ್ನೋಟಕ್ಕೆ ಭಾಸವಾಗುವಂತೆ, ಈ ಬಗೆಯ ಪದಪ್ರಯೋಗದಲ್ಲಿ ಅಸತ್ಯವೇನೂ  ಕಾಣಿಸುವುದಿಲ್ಲ. ಯಾರದೇ ಸಾವಿನಲ್ಲಿ ನೋವಾಗುವುದೂ ಸಹಜ ಮತ್ತು ಯುವತಿಯರ ಮೇಲೆ ಅತ್ಯಾಚಾರವಾಗುವುದೂ ಸಹಜ.  ಈ ಮೇಲಿನ ಮಾತುಗಳಲ್ಲಿ ಸುಳ್ಳೇನೂ ಇಲ್ಲ. ಆದರೆ ಸತ್ಯವನ್ನು ಪ್ರಖರವಾಗಿ ಮತ್ತು ಸನ್ನಿವೇಶಕ್ಕೆ ಅನುಗುಣವಾಗಿ ಇಲ್ಲಿನ  ಮಾತುಗಳು ಕಟ್ಟಿ ಕೊಡುತ್ತವೆಯೇ ಎಂದು ವಿಶ್ಲೇಷಿಸಲು ಹೊರಟರೆ ಇಲ್ಲ ಎಂಬ ಉತ್ತರವೇ ಎದುರಾಗುತ್ತದೆ.
ಮೊದಲನೆಯದಾಗಿ, ‘ಹಾಥರಸ್‍ನ ಯುವತಿಯ ಸಾವಿನಿಂದ ನನಗೆ ತೀವ್ರ ನೋವಾಗಿದೆ’ ಎಂಬ ಹೇಳಿಕೆಯಲ್ಲಿ ಅನುಕಂಪ ಇದೆ,  ದುಃಖ ಇದೆ. ಅಲ್ಲದೇ ಹಾಥರಸ್‍ನ ಯುವತಿ ಸತ್ತಿರುವುದೂ ನಿಜ. ಸತ್ತವರಿಗಾಗಿ ದುಃಖಿತ ಭಾವ ವ್ಯಕ್ತಪಡಿಸುವುದೂ ಸಹಜ.  ಆದರೆ, ಸಾವು ಎಂಬ ಪದ ಹಾಥರಸ್‍ನ ಘಟನೆಗೆ ಸೂಕ್ತವೇ? ಅದು ಸಾವೇ?

ಸಾಮಾನ್ಯವಾಗಿ ಸಾವು ಎಂಬ ಪದವನ್ನು ನಾವು ಅಪಘಾತದಿಂದಾಗುವ ಅಥವಾ ಕಾಯಿಲೆಯಿಂದಾಗುವ ಸಾವಿಗೆ ಬಳಸುತ್ತೇವೆ.  ಹೆಣ್ಣಾಗಲಿ, ಗಂಡಾಗಲಿ ಸಹಜ ಮರಣವನ್ನಪ್ಪುವುದಕ್ಕೆ ಸಾವು ಎಂದು ಉಲ್ಲೇಖಿಸುತ್ತೇವೆ. ಆದರೆ ಹಾಥರಸ್‍ನಲ್ಲಿ ನಡೆದಿರುವುದೇನು? ಕೇವಲ ಸಾವು ಎಂಬ ಪದದೊಳಗೆ ತುಂಬಿಬಿಡ ಬಹುದಾದ ಸಣ್ಣ ಕೃತ್ಯವೇ ಅದು? ಆ ಯುವತಿಯನ್ನು ಬರ್ಬರವಾಗಿ  ನಡೆಸಿಕೊಳ್ಳಲಾಗಿದೆ. ಅತ್ಯಾಚಾರ ನಡೆಸಲಾಗಿದೆ ಮತ್ತು ಕ್ರೂರ ಹಿಂಸೆಗೆ ಒಳಪಡಿಸಲಾಗಿದೆ. ಅಂತಿಮವಾಗಿ ಆ ಹೆಣ್ಮಗು ಪ್ರಾಣ  ಕಳಕೊಂಡಿದೆ. ಸಾವು ಎನ್ನುವ ಪದ ಈ ಎಲ್ಲವನ್ನೂ ಬಿಂಬಿಸುತ್ತದೆಯೇ?
 ನಿಜವಾಗಿ,
‘ಹಾಥರಸ್‍ನ ಯುವತಿಯ ಸಾವಿನಿಂದ ನೋವಾಗಿದೆ’ ಎಂಬ ವಾಕ್ಯವೇ ತಪ್ಪು. ಹಾಥರಸ್‍ನಲ್ಲಿ ಯುವತಿ ಸಾವಿಗೀಡಾದದ್ದಲ್ಲ,  ಬರ್ಬರವಾಗಿ ಹತ್ಯೆ ನಡೆಸಲಾಗಿದೆ. ಅದಕ್ಕೆ ಮಾಮೂಲಿ ನೋವನ್ನು ಪ್ರಕಟಿಸಿದರೆ ಸಾಲದು. ಆ ನೋವಿನಲ್ಲಿ ಆಕ್ರೋಶ, ಸಿಟ್ಟು, ಅನ್ಯಾಯಕ್ಕೊಳಗಾದ ಭಾವ ಬಿಂಬಿತವಾಗಬೇಕು. ಇದೇ ರೀತಿಯಲ್ಲಿ ಈ ಮೇಲಿನ ಇನ್ನೊಂದು ಹೇಳಿಕೆಯನ್ನೂ ಎತ್ತಿಕೊಳ್ಳಬಹುದು.  ‘ಹಾಥರಸ್‍ನಲ್ಲಿ ಅತ್ಯಾಚಾರಕ್ಕೀಡಾದ ಯುವತಿ..’ ಎಂಬ ಮಾತು ನಿಜ (Fact) ಹೌದು. ಆದರೆ ಪೂರ್ಣ ನಿಜ ಅಲ್ಲ. ಹಾಥರಸ್ ನಲ್ಲಿ ಅತ್ಯಾಚಾರಕ್ಕೀಡಾದ ದಲಿತ ಯುವತಿ ಎಂಬುದೇ ಸಂಪೂರ್ಣ ನಿಜ (Truth).

ಈ ದೇಶದಲ್ಲಿ ನಡೆಯುವ ಅತ್ಯಾಚಾರಕ್ಕೂ ದಲಿತ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರಕ್ಕೂ ವ್ಯತ್ಯಾಸ ಇದೆ. ಹಾಗೆಯೇ ಮುಸ್ಲಿಮರ  ಮೇಲಿನ ದೌರ್ಜನ್ಯಕ್ಕೂ ವ್ಯತ್ಯಾಸ ಇದೆ. ದಲಿತರ ಮೇಲಿನ ಹಲ್ಲೆಗೂ ಸಾಮಾನ್ಯ ಹಲ್ಲೆಗೂ ವ್ಯತ್ಯಾಸ ಇದೆ. ಅತ್ಯಾಚಾರ ಈ ದೇಶಕ್ಕೆ  ಹೊಸತಲ್ಲ. ದೌರ್ಜನ್ಯವೂ ಹಾಗೆಯೇ. 130 ಕೋಟಿ ಜನಸಂಖ್ಯೆಯಿರುವ ದೇಶದಲ್ಲಿ ಹತ್ಯೆಗೆ ಬೆಚ್ಚಿ ಬೀಳುವವರೂ ಇಲ್ಲ. ಆದರೆ,  ಸಾಮಾನ್ಯ ಹಲ್ಲೆಗೂ ದಲಿತರ ಮೇಲಿನ ಹಲ್ಲೆಗೂ ನಡುವೆ ಇರುವ ವ್ಯತ್ಯಾಸ ಏನೆಂದರೆ- ಜಾತಿ. ಮುಸ್ಲಿಮರಿಗೆ ಸಂಬಂಧಿಸಿ  ಹೇಳುವುದಾದರೆ ಅವರ ಧರ್ಮ. ದಲಿತೇತರ ಮತ್ತು ಮುಸ್ಲಿಮೇತರ ಹಲ್ಲೆ-ಹತ್ಯೆ, ದೌರ್ಜನ್ಯಗಳಿಗೆ ಈ ಹೆಚ್ಚುವರಿ ಕಾರಣಗಳು  ಇರುವುದಿಲ್ಲ. ಮೇಲ್ಜಾತಿಯ ಇಬ್ಬರು ಯುವಕರು ಪರಸ್ಪರ ವಾಗ್ವಾದಗಳಲ್ಲಿ ತೊಡಗುವುದಕ್ಕೂ ದಲಿತ ಯುವಕ ಮತ್ತು ಮೇಲ್ಜಾತಿಯ  ಯುವಕರಿಬ್ಬರು ವಾಗ್ವಾದಗಳಲ್ಲಿ ತೊಡಗುವುದಕ್ಕೂ ಭಿನ್ನತೆ ಇದೆ. ಮೇಲ್ಜಾತಿಯ ಯುವಕನಿಗೆ ಆ ವಾಗ್ವಾದಕ್ಕೆ ಕಾರಣವಾದ  ವಿಷಯಕ್ಕಿಂತಲೂ ತನ್ನ ಜೊತೆ ವಾಗ್ವಾದದಲ್ಲಿ ತೊಡಗಿರುವ ಯುವಕನ ಜಾತಿ ಮುಖ್ಯವಾಗುತ್ತದೆ. ಅದುವೇ ಆತನನ್ನು ಆಕ್ರೋ ಶಗೊಳ್ಳುವಂತೆಯೂ ಮಾಡುತ್ತದೆ. ಮೇಲ್ಜಾತಿ ಯುವಕರಿಬ್ಬರ ನಡುವಿನ ವಾಗ್ವಾದ ಅತಿರೇಕಕ್ಕೆ ಹೋಗದೇ ಶಾಂತವಾಗುವಾಗ ದಲಿತ  ಯುವಕ ಮತ್ತು ಮೇಲ್ಜಾತಿ ಯುವಕನ ನಡುವಿನ ವಾಗ್ವಾದ ಹೊೈ-ಕೈ, ಹಲ್ಲೆಯಲ್ಲಿ ಕೊನೆಗೊಳ್ಳುವುದಕ್ಕೆ ಅವಕಾಶ ಇದೆ. 

ಮುಸ್ಲಿಮರಿಗೆ  ಸಂಬಂಧಿಸಿಯೂ ಈ ಮಾತನ್ನು ಸಂಪೂರ್ಣ ಅಲ್ಲದಿದ್ದರೂ ಬಹುತೇಕ ಅನ್ವಯಿಸಿ ನೋಡಬಹುದು. ಇಬ್ಬರು ಮುಸ್ಲಿಮ್ ಯುವಕರ  ನಡುವಿನ ಜಗಳ ಹಿಂದೂ ಮತ್ತು ಮುಸ್ಲಿಮ್ ಯುವಕರ ನಡುವಿನ ಜಗಳದಂತೆ ಇರುವುದು ಕಡಿಮೆ. ಹಾಗೆ ಕೊನೆಗೊಳ್ಳುವುದೂ  ಕಡಿಮೆ. ಇಬ್ಬರು ಮುಸ್ಲಿಮ್ ಯುವಕರ ನಡುವಿನ ಜಗಳ ಅವರಿಬ್ಬರ ನಡುವಿನ ಜಗಳವಾಗಿ ಗುರುತಿಸಿಕೊಂಡರೆ, ಹಿಂದೂ ಮತ್ತು  ಮುಸ್ಲಿಮ್ ಯುವಕರ ನಡುವಿನ ಜಗಳವು ಎರಡು ಸಮುದಾಯಗಳ ನಡುವಿನ ಜಗಳವಾಗಿ ಮತ್ತು ಎರಡೂ ಸಮುದಾಯಗಳ  ಪಾಲಿನ ಪ್ರತಿಷ್ಠೆಯಾಗಿ ಪರಿವರ್ತಿತವಾಗುವುದೇ ಹೆಚ್ಚು. ಇವತ್ತಿನ ದಿನಗಳಂತೂ ಇಂಥ ಸಾಧ್ಯತೆಯನ್ನು ಹಲವು ಪಟ್ಟು ವೃದ್ಧಿಸಿದೆ. ಈ  ಹಿನ್ನೆಲೆಯಲ್ಲೂ, ಹಾಥರಸ್ ಅತ್ಯಾಚಾರ ಮುಖ್ಯವಾಗುತ್ತದೆ.

ದಲಿತರ ಮೇಲಿನ ಹಲ್ಲೆಗೆ ಅಥವಾ ಅತ್ಯಾಚಾರಕ್ಕೆ ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ ಮತ್ತು ರಾಜಕೀಯ ಆಯಾಮಗಳೂ ಇರುತ್ತವೆ.  ದೇಶದ ಇವತ್ತಿನ ಪರಿಸ್ಥಿತಿಗೆ ಅನ್ವಯಿಸಿ ಹೇಳುವುದಾದರೆ, ಮುಸ್ಲಿಮರ ಮೇಲಿನ ದೌರ್ಜನ್ಯಕ್ಕೂ ಈ ಆಯಾಮ ಇದೆ. ಹಾಥರಸ್  ಘಟನೆಯ ಆರೋಪಿಯಲ್ಲೋರ್ವನಾದ ಸಂದೀಪ್‍ನ ಮನೆ ಮತ್ತು ಅತ್ಯಾಚಾರಕ್ಕೀಡಾದ ದಲಿತ ಯುವತಿಯ ಮನೆ ಪರಸ್ಪರ  ಎದುರು-ಬದುರಾಗಿದೆ. ಈ ಯುವತಿಯ ಹೆತ್ತವರಿಗೆ ಉಳುಮೆಯ ಗದ್ದೆ ಇದೆ. ಮನೆಯಲ್ಲಿ ಎರಡು ಎಮ್ಮೆಗಳಿವೆ. ಆ ಪ್ರದೇಶದ  ಇತರರಿಗೆ ಹೋಲಿಸಿದರೆ ಒಂದಿಷ್ಟು ಸಬಲ ಕುಟುಂಬ ಈ ಯುವತಿಯದು. ಅಲ್ಲದೇ, ಈ ಯುವತಿಯ ಕುಟುಂಬ ಕೊಟ್ಟ ದೂರಿ ನಿಂದಾಗಿ ಸಂದೀಪನ ತಂದೆ ನ್ಯಾಯಾಂಗ ಬಂಧನಕ್ಕೂ ಒಳಗಾಗಿದ್ದರು. ದಲಿತ ಕುಟುಂಬವೊಂದು ಸಬಲವಾಗುವುದು ಮತ್ತು  ಮೇಲ್ಜಾತಿ ಕುಟುಂಬದ ವಿರುದ್ಧ ದೂರು ಕೊಟ್ಟ ಕಂಬಿ ಎಣಿಸುವಂತೆ ಮಾಡುವುದೆಲ್ಲ ಜಾತಿ ವ್ಯಸನದಿಂದ ಬಳಲುತ್ತಿರುವ ಉತ್ತರ  ಭಾರತದಲ್ಲಿ ಸಾಮಾನ್ಯ ಸಂಗತಿಯಲ್ಲ. ಮುಂದುವರಿದ ಸಮಾಜಕ್ಕೂ ಇಂಥದ್ದನ್ನು ಸ್ವೀಕರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಆ  ಯುವತಿಯ ಅಂತ್ಯಸಂಸ್ಕಾರದ ಬಳಿಕದ ಘಟನೆಗಳನ್ನೇ ಪರಿಶೀಲಿಸಿ.

ಆಕೆಯ ಮೇಲೆ ಅತ್ಯಾಚಾರವೇ ಆಗಿಲ್ಲ ಎಂದು ಅಲ್ಲಿನ ಪೊಲೀಸ್ ಮುಖ್ಯಸ್ಥರೇ ಹೇಳುತ್ತಾರೆ. ಇದಕ್ಕೆ ಆಧಾರವಾಗಿ ಅವರು ಮುಂದಿಟ್ಟಿರುವುದು- ವೀರ್ಯ. ವೀರ್ಯ ಸಿಕ್ಕಿಲ್ಲವಾದ್ದರಿಂದ ಅತ್ಯಾಚಾರವಾಗಿಲ್ಲ ಎಂಬುದು ಅವರ ವಾದ. ಇದು ನಿಜ ಇರಬಹುದು.  ಆದರೆ, ಅತ್ಯಾಚಾರವನ್ನು ಸಾಬೀತುಪಡಿಸುವುದಕ್ಕೆ ವೀರ್ಯ ಸಿಗಲೇಬೇಕೆಂದಿದೆಯೇ? ಕಾನೂನು ಹಾಗೆ ಹೇಳುತ್ತದೆಯೇ? ಈ ಪ್ರಶ್ನೆಯನ್ನು ಜಾಣತನದಿಂದ ಅವರು ಅಡಗಿಸಿದ್ದಾರೆ. ಅವರು ಹೇಳಿರುವುದು ಸತ್ಯ. ಆದರೆ Truth  ಏನೆಂದರೆ 2012ರ ನಿರ್ಭಯ  ಪ್ರಕರಣದ ಬಳಿಕ ತಿದ್ದುಪಡಿ ಮಾಡಲಾದ ಕಾನೂನಿನಂತೆ ಅತ್ಯಾಚಾರವನ್ನು ಸಾಬೀತುಪಡಿಸುವುದಕ್ಕೆ ವೀರ್ಯ ಸಿಗಬೇಕೆಂದಿಲ್ಲ.  ಹಾಗೆಯೇ ಹೆತ್ತವರಿಗೆ ಯುವತಿಯ ಮುಖವನ್ನೂ ತೋರಿಸದೆಯೇ ಮಧ್ಯರಾತ್ರಿ ಶವಸಂಸ್ಕಾರವನ್ನು ಪೊಲೀಸರೇ ನಿರ್ವಹಿಸಿದರಲ್ಲ,  ಅದಕ್ಕೆ ಕೊಡುವ ಕಾರಣ ಏನೆಂದರೆ, ಆ ಶವವನ್ನು ರಾಜಕೀಯಕ್ಕಾಗಿ ಭೀಮ್ ಆರ್ಮಿ ಸದಸ್ಯರು ಬಳಸಿಕೊಳ್ಳುವ ಸಾಧ್ಯತೆ ಇತ್ತು,  ಶವ ಅದಾಗಲೇ ಕೊಳೆಯಲು ಆರಂಭಿಸಿತ್ತು ಇತ್ಯಾದಿ ಇತ್ಯಾದಿ. ಭೀಮ್ ಆರ್ಮಿಯ ಸದಸ್ಯರು ಅಲ್ಲಿ ಇದ್ದುದು ನಿಜ (Fact).  ಆದರೆ, ತರಾತುರಿಯಿಂದ ಶವಸಂಸ್ಕಾರ ನಡೆಸುವುದಕ್ಕೆ ಅದೊಂದೇ ಕಾರಣವೇ? ಅಲ್ಲ. ಅತ್ಯಾಚಾರದಂಥ ಪ್ರಕರಣಗಳಿಗೆ ದೇಹವೇ  ಮುಖ್ಯ ಸಾಕ್ಷ್ಯ. ಆ ಸಾಕ್ಷ್ಯ ಎಲ್ಲಿಯವರೆಗೆ ಲಭ್ಯವಿರುತ್ತದೋ ಅಲ್ಲಿಯ ವರೆಗೆ ಅದೊಂದು ಟೈಂಬಾಂಬ್. ಆರೋಪಿಗಳು ಅತ್ಯಂತ  ಹೆಚ್ಚು ಭಯಪಡುವುದು ಆ ದೇಹಕ್ಕೆ. ಇದು Truth. ಇದನ್ನು ಅವರು ಹೇಳಲ್ಲ. 
ನಿಜವಾಗಿ,

ಕೆಲವೊಮ್ಮೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸತ್ಯವನ್ನು ಹೇಳುವುದೇ ಪರಮ ಸತ್ಯವನ್ನು (Truth) ಅಡಗಿಸುವುದಕ್ಕಾಗಿ.  ದಲಿತ ಯುವತಿ ಎಂದು ಹೇಳ್ಬೇಡಿ, ಯುವತಿ ಎಂದು ಹೇಳಿದರೆ ಸಾಕು ಎಂಬ ಸಾಬೂನು ಮಾತನ್ನು ಕೆಲವರು ಪವಿತ್ರ ವಾಕ್ಯದಂತೆ  ಹೇಳುವುದಿದೆ. ಪಕ್ಕನೆ ನಮಗೆ ಹೌದಲ್ವಾ ಎಂದು ಅನಿಸುವುದೂ ಇದೆ. ಇದು ಈಚಿಛಿಣ ಹೌದು. ಆದರೆ Truth ಅಲ್ಲ. ದಲಿತ  ಯುವತಿಯೂ ದಲಿತೇತರ ಯುವತಿಯೂ ಹೆಣ್ಣು ಎಂಬ ನೆಲೆಯಲ್ಲಿ ಸಮಾನರೇ ಹೊರತು ಅದರಾಚೆಗಿನ ಸ್ಥಾನ-ಮಾನಗಳಲ್ಲಲ್ಲ.  ಹಾಥರಸ್ ಘಟನೆಯಲ್ಲಿ ಅಲ್ಲಿನ ಮುಖ್ಯಮಂತ್ರಿಗಳಿಂದ ಹಿಡಿದು ಪೊಲೀಸ್ ಅಧಿಕಾರಿಗಳ ವರೆಗೆ ಎಲ್ಲರೂ ನಡೆದುಕೊಂಡ  ರೀತಿಯನ್ನೊಮ್ಮೆ ಗಮನಿಸಿ. ಒಂದುವೇಳೆ, 

ಆರೋಪಿಗಳು ಮೇಲ್ಜಾತಿ ಸಮುದಾಯದವ ರಾಗದೇ ಇದ್ದಿದ್ದರೆ ಅವರೆಲ್ಲ  ಹಾಗಿರುತ್ತಿದ್ದರೆ? ಜಿಲ್ಲಾಧಿಕಾರಿಯವರು ಹಾಗೆ ನಡೆದುಕೊಳ್ಳು ತ್ತಿದ್ದರೇ? ಪೊಲೀಸರು ಮಾಧ್ಯಮದವರನ್ನು ತಡೆಯುತ್ತಿದ್ದರೇ?  ಬ್ಯಾರಿಕೇಡ್‍ಗಳನ್ನಿಟ್ಟು ಊರಿಗೆ ಊರನ್ನೇ ದ್ವೀಪ ವನ್ನಾಗಿ ಮಾಡುತ್ತಿದ್ದರೇ? ಆರೋಪಿಗಳನ್ನು ರಕ್ಷಿಸುವ ಧಾಟಿಯಲ್ಲಿ ಹೇಳಿಕೆಗಳ  ಮೇಲೆ ಹೇಳಿಕೆಗಳನ್ನು ಕೊಡಿಸುತ್ತಿದ್ದರೇ? ನಿಜಕ್ಕೂ,

ಆ ಯುವತಿಯದ್ದು ಸಾವೂ ಅಲ್ಲ, ಅದಕ್ಕೆ ಬರೇ ನೋವು ಸಾಕಾಗುವುದೂ ಇಲ್ಲ. 

No comments:

Post a Comment