1. ಮಹಾರಾಷ್ಟ್ರದಲ್ಲಿ ಕೊನೆಗೂ ಶಿವಸೇನೆ-ಎನ್‍ಸಿಪಿ-ಕಾಂಗ್ರೆಸ್ ಮೈತ್ರಿ ಸರಕಾರ: ಉದ್ಧವ್ ಮುಖ್ಯಮಂತ್ರಿ
2. Uಜಜhಚಿv ಣo be ಒಚಿhಚಿಡಿಚಿshಣಡಿಚಿ ಅಒ
ನವೆಂಬರ್ 23ರ ಶನಿವಾರದಂದು ಪ್ರಕಟವಾದ ಎಲ್ಲ ಪತ್ರಿಕೆಗಳ ಮುಖಪುಟದ ಶೀರ್ಷಿಕೆ ಬಹುತೇಕ ಹೀಗೆಯೇ ಇತ್ತು ಮಾತ್ರವಲ್ಲ, ದೇಶದ ಬಹುತೇಕ ಎಲ್ಲ ಭಾಷೆಯ ಪತ್ರಿಕೆಗಳ ಮುಖಪುಟದ ಮುಖ್ಯ ಸುದ್ದಿ ಇದುವೇ ಆಗಿತ್ತು. ತನ್ನ ಪತ್ನಿ ರಶ್ಮಿಯೊಂದಿಗೆ ಉದ್ಧವ್ ಠಾಕ್ರೆಯವರು ಕೈ ಮುಗಿದು ಸಾರ್ವಜನಿಕರಿಗೆ ದರ್ಶನ ನೀಡುತ್ತಿರುವ ಫೋಟೋವನ್ನು ಹೆಚ್ಚಿನೆಲ್ಲ ಪತ್ರಿಕೆಗಳು ಈ ಸುದ್ದಿಯೊಂದಿಗೆ ಮುದ್ರಿಸಿದ್ದುವು. ತಮಾಷೆ ಏನೆಂದರೆ, ಶನಿವಾರ ಬೆಳಿಗ್ಗೆ ಓದುಗರು ಈ ಸುದ್ದಿಯನ್ನು ಓದಿ ಓದಿ ನಕ್ಕರು. ಯಾಕೆಂದರೆ, ಪತ್ರಿಕೆಗಳ ಮುಖಪುಟದ ಸುದ್ದಿಗೂ ಮಹಾರಾಷ್ಟ್ರದಲ್ಲಿ ನಡೆದಿರುವ ಬೆಳವಣಿಗೆಗಳಿಗೂ ಸಂಬಂಧವೇ ಇರಲಿಲ್ಲ. ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಮತ್ತು ಉಪಮುಖ್ಯ ಮಂತ್ರಿಯಾಗಿ ಎನ್‍ಸಿಪಿಯ ಅಜಿತ್ ಪವಾರ್ ಅವರು ಅದೇ ದಿನ ಬೆಳಿಗ್ಗೆ ಪ್ರತಿಜ್ಞಾ ವಿಧಿ ಸ್ವೀಕರಿಸುತ್ತಿರುವುದನ್ನು ಟಿವಿ ಚಾನೆಲ್‍ಗಳು ಪ್ರಸಾರ ಮಾಡುತ್ತಿದ್ದುವು. ಶನಿವಾರ ಬೆಳ್ಳಂ ಬೆಳಗ್ಗೆ 5.30ರ ಹೊತ್ತಿಗೆ ಫಡ್ನವಿಸ್ ಅವರು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಭೇಟಿಯಾದರು. ಸರ್ಕಾರ ರಚಿಸುವ ಹಕ್ಕು ಮಂಡಿಸಿದರು. ತಕ್ಷಣ ರಾಷ್ಟ್ರಪತಿ ಆಳ್ವಿಕೆಯನ್ನು ವಾಪಸ್ ಪಡೆಯುವ ಪ್ರಕ್ರಿಯೆ ನಡೆಯಿತು. 7.30ರ ಹೊತ್ತಿಗೆ ಪ್ರಮಾಣ ವಚನ ಕಾರ್ಯಕ್ರಮವೂ ನಡೆಯಿತು. ನಿಜವಾಗಿ,
ಇದೊಂದು ದಿಢೀರ್ ಪ್ರಕ್ರಿಯೆ. ಇದೂ ಸಾಧ್ಯ ಅನ್ನುವುದನ್ನು ಈ ದೇಶದ ನಾಗರಿಕರು ಊಹಿಸಿರುವ ಸಾಧ್ಯತೆ ಇಲ್ಲವೇ ಇಲ್ಲ. ಒಂದು ಸರಕಾರ ರಚನೆಗಾಗಿ ರಾಜ್ಯಪಾಲರು ಬೆಳ್ಳಂಬೆಳಗ್ಗೆ ಗಂಟೆ 5.30ಕ್ಕೆ ಚುರುಕಾಗುವುದು, ಅದಕ್ಕೆ ಕೇಂದ್ರ ಸರಕಾರ ಸಾಥ್ ನೀಡುವುದು ಮತ್ತು ಇದಾಗಿ ಎರಡೇ ಗಂಟೆಯೊಳಗೆ ಹೊಸ ಸರಕಾರ ಪ್ರತಿಜ್ಞಾ ವಿಧಿ ಸ್ವೀಕರಿಸುವುದು.. ಇವೆಲ್ಲ ದೇಶದ ಪಾಲಿಗೆ ಅಚ್ಚರಿ ಮತ್ತು ಆಘಾತದ ಸುದ್ದಿ. ಇಷ್ಟೊಂದು ತುರ್ತು ಅಗತ್ಯವಿತ್ತೇ ಅನ್ನುವ ಪ್ರಶ್ನೆಯ ಜೊತೆಗೇ ಸಾಂವಿಧಾನಿಕವಾಗಿ ಇಂಥದ್ದೊಂದು ನಡೆಗೆ ಸಮ್ಮತಿ ಇದೆಯೇ ಎಂಬ ಪ್ರಶ್ನೆಯೂ ನಾಗರಿಕರಲ್ಲಿ ವ್ಯಾಪಕ ಮಟ್ಟದಲ್ಲಿ ಚರ್ಚೆಗೆ ಒಳಗಾಯಿತು. ರಾಜ್ಯ ಪಾಲರ ಅಧಿಕಾರ ವ್ಯಾಪ್ತಿ ಮತ್ತು ಅವರು ಯಾರಿಗೆ ಮತ್ತು ಯಾವುದಕ್ಕೆ ನಿಷ್ಠರಾಗಿರಬೇಕು ಎಂಬ ಬಗ್ಗೆ ತೀವ್ರ ಸಂವಾದಗಳೂ ನಡೆದುವು. ಫಡ್ನವಿಸ್ ಅವರು ಅಜಿತ್ ಪವಾರ್ ಜೊತೆ ಸೇರಿ ಸರಕಾರ ರಚಿಸುವ ಬಗ್ಗೆ ಸಾರ್ವಜನಿಕರಿಗೆ ಯಾವ ಮುನ್ಸೂ ಚನೆಯೂ ಇರಲಿಲ್ಲ. ದೇಶವನ್ನು ಕತ್ತಲಲ್ಲಿಟ್ಟು ಒಂದು ಸರಕಾರ ರಚಿಸುವ ತುರ್ತು ಏನಿತ್ತು? ಮಹಾರಾಷ್ಟ್ರದಲ್ಲಿ ಅಂಥ ಅಪಾಯಕಾರಿ ರಾಜಕೀಯ ಶೂನ್ಯತೆ ಸೃಷ್ಟಿಯಾಗಿತ್ತೇ? ಆಡಳಿತ ಸ್ತಬ್ಧವಾಗಿತ್ತೇ? ರಾಷ್ಟ್ರಪತಿ ಆಡಳಿತ ಜಾರಿಯಲ್ಲಿರುವಾಗ ಕತ್ತಲಲ್ಲಿ ಸರಕಾರ ರಚಿಸುವಷ್ಟು ತುರ್ತನ್ನು ರಾಜ್ಯಪಾಲರು ಪ್ರದರ್ಶಿಸಿದ್ದೇಕೆ? ದೇವೇಂದ್ರ ಫಡ್ನವಿಸ್‍ರಲ್ಲಿ ಸರಕಾರ ರಚಿಸುವಷ್ಟು ಬಹುಮತ ಇದೆ ಎಂಬುದನ್ನು ರಾಜ್ಯಪಾಲರು ಯಾವ ಆಧಾರದಲ್ಲಿ ಸ್ಪಷ್ಟ ಪಡಿಸಿಕೊಂಡರು? ಅಜಿತ್ ಪವಾರ್ ರ ಜೊತೆ ಆ ಮೊದಲು ಬಿಜೆಪಿ ಮಾತುಕತೆ ನಡೆಸಿದ್ದಾಗಲಿ, ಮೈತ್ರಿ ಸಾಧ್ಯತೆಗಳಾಗಲಿ ಸಾರ್ವಜನಿಕವಾಗಿ ಬಹಿರಂಗವಾಗಿರಲಿಲ್ಲ. ಅಂಥದ್ದೊಂದು ಸೂಚನೆ ಮಾಧ್ಯಮಗಳಿಗೂ ದಕ್ಕಿರಲಿಲ್ಲ. ಅದರ ಬದಲು ಶಿವಸೇನೆ, ಎನ್‍ಸಿಪಿ ಮತ್ತು ಕಾಂಗ್ರೆಸ್‍ಗಳು ಬಹಿರಂಗವಾಗಿ ಮೈತ್ರಿ ಮಾತು ಕತೆ ನಡೆಸುತ್ತಿದ್ದುವು. ಅವು ಜೊತೆ ಸೇರಿ ಸರಕಾರ ರಚಿಸುವ ಎಲ್ಲ ಸಾಧ್ಯತೆಗಳೂ ದಿನೇ ದಿನೇ ಸ್ಪಷ್ಟವಾಗುತ್ತಲೇ ಇತ್ತು. ಹೀಗಿರುವಾಗ ಈ ಬಹಿರಂಗ ಮೈತ್ರಿಯ ಬದಲು ಅಜಿತ್ ಮತ್ತು ಫಡ್ನವಿಸ್‍ರ ‘ರಾತ್ರಿ ಮೈತ್ರಿ’ಯ ಮೇಲೆ ರಾಜ್ಯಪಾಲರು ವಿಶ್ವಾಸ ತಾಳಿದ್ದು ಯಾಕೆ? ಆ ಬಳಿಕ ಸದನದಲ್ಲಿ ಬಹುಮತ ಸಾಬೀತು ಪಡಿಸಲು ಒಂದು ವಾರಗಳಷ್ಟು ದೀರ್ಘ ಅವಧಿಯನ್ನು ರಾಜ್ಯ ಪಾಲರು ಫಡ್ನವಿಸ್‍ರಿಗೆ ನೀಡಿದ್ದು ಏಕೆ? ಏನಿದರ ಉದ್ದೇಶ? ಒಂದುವೇಳೆ, ಫಡ್ನವಿಸ್‍ರ ಮೇಲೆ ರಾಜ್ಯಪಾಲರಿಗೆ ಅಷ್ಟೊಂದು ವಿಶ್ವಾಸ ಇದ್ದಿದ್ದರೆ ಮರುದಿನವೇ ಸದನದಲ್ಲಿ ವಿಶ್ವಾಸ ಮತ ಕೋರುವಂತೆ ಆದೇಶಿಸಬಹುದಿತ್ತಲ್ಲವೇ... ಇವು ಮತ್ತು ಇಂಥ ಇನ್ನೂ ಅನೇಕ ಪ್ರಶ್ನೆಗಳು ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು. ಮಾತ್ರವಲ್ಲ, ರಾಜ್ಯಪಾಲರು ಈ ಎಲ್ಲ ಚರ್ಚೆಗಳ ಕೇಂದ್ರಬಿಂದುವಾದರು. ಅಂದಹಾಗೆ,
1969ರಲ್ಲಿ ತಮಿಳುನಾಡಿನಲ್ಲಿ ಜಸ್ಟಿಸ್ ಪಿ.ವಿ. ರಾಜಮನ್ನಾರ್ ಸಮಿತಿಯನ್ನು ರಚಿಸಲಾಗಿತ್ತು. ರಾಜ್ಯ ಮತ್ತು ಕೇಂದ್ರ ಸರಕಾರಗಳ ನಡುವಿನ ಸಂಬಂಧ ಸುಧಾರಣೆಯ ಕುರಿತಂತೆ ಪರಾಮರ್ಶೆ ನಡೆಸುವ ಮತ್ತು ಸಲಹೆ ನೀಡುವ ಹೊಣೆಗಾರಿಕೆ ಈ ಸಮಿತಿಯದ್ದು. ರಾಜ್ಯಪಾಲರ ನೇಮಕವು ರಾಜ್ಯ ಮತ್ತು ಕೇಂದ್ರ ಸರಕಾರಗಳ ನಡುವಿನ ಸಮಾಲೋಚನೆಯ ಬಳಿಕ ನಡೆಯಬೇಕು ಎಂದು ಈ ಸಮಿತಿ ಸಲಹೆ ನೀಡಿತ್ತು. ಆದರೆ, ಈ ಸಲಹೆ ಈ ವರೆಗೂ ಪುರಸ್ಕøತಗೊಂಡಿಲ್ಲ ಮತ್ತು ರಾಜ್ಯಪಾಲರೆಂದರೆ, ಕೇಂದ್ರದ ಆದೇಶವನ್ನು ಜಾರಿ ಮಾಡುವ ಸೇವಕ ಎಂಬ ಭಾವನೆ ಸಾರ್ವಜನಿಕವಾಗಿ ಚಾಲ್ತಿಯಲ್ಲಿದೆ. ನಿಜವಾಗಿ,
ಇದು ಸಂವಿಧಾನವನ್ನು ದುರ್ಬಲಗೊಳಿಸುವ ಸ್ಥಿತಿ. ಇಂಥ ಬೆಳವಣಿಗೆಗಳು ಸಂವಿಧಾನವನ್ನು ನಿಧಾನಕ್ಕೆ ಅಪ್ರಸ್ತುತಗೊಳಿಸತೊಡಗುತ್ತದೆ. ಸಂವಿಧಾನದ ಬಗ್ಗೆ ನಾಲಗೆಯಿಂದ ಹೆಮ್ಮೆಯ ಮಾತು ಗಳನ್ನಾಡುತ್ತಾ ಕ್ರಿಯೆಯಿಂದ ಸಂವಿಧಾನವನ್ನೇ ದುರ್ಬಲಗೊಳಿಸುವ ಇಂಥ ಬೆಳವಣಿಗೆಗಳು ಅತ್ಯಂತ ಅಪಾಯಕಾರಿ. ಈ ಜಗತ್ತಿನಲ್ಲಿ ಹುಟ್ಟಿಕೊಂಡ ಅನೇಕ ಲಿಖಿತ ಸಂವಿಧಾನಗಳು ಹುಟ್ಟಿಕೊಂಡಷ್ಟೇ ವೇಗವಾಗಿ ಸಾವಿಗೀಡಾದದ್ದೂ ಇದೆ. ಅದಕ್ಕೆ, ಆ ಸಂವಿಧಾನದಲ್ಲಿ ಉಲ್ಲೇಖಗೊಂಡಿರುವ ವಿಧಿಗಳೋ ಪರಿಚ್ಛೇದಗಳೋ ರಾಜ್ಯ ನಿರ್ದೇಶಕ ತತ್ವಗಳೋ ಕಾರಣ ಅಲ್ಲ. ಅದನ್ನು ಜಾರಿ ಮಾಡ ಬೇಕಾದವರು ಅದರಲ್ಲಿ ವಿಫಲವಾದಾಗ ಮತ್ತು ಸ್ವಾರ್ಥಕ್ಕಾಗಿ ಸಂವಿಧಾನದ ಆಶಯಗಳನ್ನೇ ನಿರರ್ಥಕಗೊಳಿಸುವ ಕ್ರಿಯೆಯಲ್ಲಿ ತೊಡಗಿದಾಗ ಅಂತಿಮವಾಗಿ ಸಂವಿಧಾನಗಳೇ ಸತ್ತು ಹೋಗುತ್ತವೆ. ‘ಲಿಖಿತ ಸಂವಿಧಾನಗಳ ಆಯುಷ್ಯ’ ಎಂಬ ಹೆಸರಲ್ಲಿ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ನಡೆದ ಅಧ್ಯಯನ ಮತ್ತು ಅದರಿಂದ ಬಹಿರಂಗಕ್ಕೆ ಬಂದ ಸತ್ಯಗಳು ಈ ಬಗ್ಗೆ ಸಾಕಷ್ಟು ಬೆಳಕು ಚೆಲ್ಲುತ್ತವೆ.
ಥಾಮಸ್ ಗಿನ್ಸ್ ಬರ್ಗ್, ಝಾಕರಿ ಎಲ್‍ಕಿನ್ಸ್ ಮತ್ತು ಜೇಮ್ಸ್ ಮೆಲ್ಲನ್ ಅವರನ್ನೊಳಗೊಂಡ ಈ ಅಧ್ಯಯನ ತಂಡವು 1789 ರಿಂದ 2006ರ ವರೆಗಿನ ಸಂವಿಧಾನಗಳ ಬಗ್ಗೆ ಅಧ್ಯಯನ ನಡೆಸಿದೆ. ಈ ಅವಧಿಯಲ್ಲಿ ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಎಷ್ಟು ಲಿಖಿತ ಸಂವಿಧಾನಗಳು ಅಸ್ತಿತ್ವಕ್ಕೆ ಬಂದಿವೆ, ಅವು ಎಷ್ಟು ಜೀವಂತವಿವೆ ಮತ್ತು ಎಷ್ಟು ಸಂವಿಧಾನಗಳ ಆಯುಷ್ಯ ಮುಗಿ ದಿವೆ ಎಂಬುದನ್ನು ನಿಖರವಾಗಿ ಈ ಸಮಿತಿ ಪಟ್ಟಿ ಮಾಡಿದೆ. ವಿಶೇಷ ಏನೆಂದರೆ, ಲಿಖಿತ ಸಂವಿಧಾನಗಳ ಆಯುಷ್ಯ ಬಹಳ ಹೃಸ್ವ. 1789ರಿಂದ 2006ರ ನಡುವೆ ಒಟ್ಟು 792 ಸಂವಿಧಾನಗಳು ಈ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಅಸ್ತಿತ್ವಕ್ಕೆ ಬಂದಿವೆ. ಹಾಗಂತ, ಜಗತ್ತಿನಲ್ಲಿ 792 ರಾಷ್ಟ್ರಗಳು ಇವೆ ಎಂದಲ್ಲ. ರಾಷ್ಟ್ರಗಳ ಸಂಖ್ಯೆ ಗಿಂತ ಮೂರು ಪಟ್ಟು ಹೆಚ್ಚು ಸಂವಿಧಾನಗಳು ಅಸ್ತಿತ್ವಕ್ಕೆ ಬಂದುದು ಹೇಗೆಂದರೆ, ಒಂದರ ಜಾಗದಲ್ಲಿ ಇನ್ನೊಂದು. ಅದರ ಜಾಗದಲ್ಲಿ ಮತ್ತೊಂದು. ಹೀಗೆ 518 ಸಂವಿಧಾನಗಳು ಹಳೆ ಸಂವಿಧಾನಗಳನ್ನು ಸಾಯಿಸಿ ಅಸ್ತಿತ್ವಕ್ಕೆ ಬಂದುವು ಎಂದು ಹೇಳಲಾಗಿದೆ. ಈ ನಡುವೆ ಸಂವಿಧಾನಕ್ಕೆ ತಿದ್ದುಪಡಿಗಳ ಮೇಲೆ ತಿದ್ದುಪಡಿಗಳು ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ ನಡೆಯುತ್ತಲೂ ಇವೆ. ಯಾವ ಲಿಖಿತ ಸಂವಿಧಾನವೂ ದೀರ್ಘಾಯುಷಿಯಲ್ಲ. ಹೆಚ್ಚೆಂದರೆ, 17 ವರ್ಷಗಳಷ್ಟು ಸಂವಿಧಾನಗಳು ಬಾಳುತ್ತವೆ, ಆ ಬಳಿಕ ಅವು ಬದಲಾವಣೆಗೆ ಒಳಗಾಗುತ್ತವೆ, ಬುಡಸಮೇತ ಕುಸಿದು ಬೀಳುತ್ತವೆ, ಅಪ್ರಸ್ತುತಗೊಳ್ಳುತ್ತವೆ ಎಂದು ಅಧ್ಯಯನ ಕಂಡುಕೊಂಡಿದೆ. ಹಾಗಂತ,
ಈ ಅಧ್ಯಯನಕ್ಕಿಂತ ಮೊದಲು ಭಾರತೀಯ ಸಂವಿ ಧಾನದ ಆಯುಷ್ಯದ ಕುರಿತೂ ಈ ಹಿಂದೆ ಚರ್ಚೆಗಳಾಗಿತ್ತು. ಜಗತ್ತಿನ ವಿವಿಧ ರಾಷ್ಟ್ರಗಳ ಸಂವಿಧಾನವನ್ನು ಅಧ್ಯಯನ ನಡೆಸಿ ಅವುಗಳಲ್ಲಿರುವ ಉತ್ತಮ ಮತ್ತು ಪ್ರಾಯೋಗಿಕ ಅಂಶಗಳನ್ನು ಎತ್ತಿಕೊಂಡು ರಚಿಸಲಾದ ಭಾರತೀಯ ಸಂವಿಧಾನದ ಆಯುಷ್ಯ ಎಷ್ಟು ದೀರ್ಘ ಎಂದು ತಜ್ಜರು ಚರ್ಚೆ ನಡೆಸಿದ್ದರು. ಬ್ರಿಟಿಷ್ ನ್ಯಾಯವಾದಿ, ಅಕಾಡೆಮಿಕ್ ಮತ್ತು ಕೇಂಬ್ರಿಜ್ ವಿವಿಯ ವೈಸ್ ಚಾನ್ಸಲರ್ ಆಗಿದ್ದ ಸರ್ ಐವನ್ ಜೆನ್ನಿಂಗ್ಸ್ ಇಂಥವರಲ್ಲಿ ಒಬ್ಬರು. ಅವರು ಭಾರತೀಯ ಸಂವಿಧಾನದ ಅತಿದೊಡ್ಡ ಟೀಕಾಕಾರರಾಗಿದ್ದರು. ಈ ಸಂವಿಧಾನದ ದೀರ್ಘ ಬಾಳಿಕೆಯ ಬಗ್ಗೆ ಅವರು ಸಂಶಯ ವ್ಯಕ್ತಪಡಿಸಿದ್ದರು. ಮದ್ರಾಸ್ ವಿಶ್ವವಿದ್ಯಾಲಯವು 1951ರಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಭಾರತೀಯ ಸಂವಿಧಾನವನ್ನು ವಿಮರ್ಶಿಸಿದ್ದರು.
ಮೂರು ದಿನಗಳ ಕಾಲ ನಡೆದ ಸಭೆಯಲ್ಲಿ ಅವರು ಸರಣಿ ಉಪನ್ಯಾಸ ನೀಡಿದ್ದರು. ಸಂವಿಧಾನ ತಜ್ಞನೆಂಬ ನೆಲೆಯಲ್ಲಿ ಅವರನ್ನು ವಿಶೇಷವಾಗಿ ಉಪನ್ಯಾಸಕ್ಕೆ ಆಹ್ವಾನಿಸಲಾಗಿತ್ತು. ವಿಶೇಷ ಏನೆಂದರೆ, ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿದ್ದ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಅವರು ಜೆನ್ನಿಂಗ್ ಅವರ ಈ ಎಲ್ಲ ಉಪನ್ಯಾಸಗಳಲ್ಲೂ ಸಭಿಕರಾಗಿ ಪಾಲ್ಗೊಂಡಿದ್ದರು. ಜೆನ್ನಿಂಗ್ ಅವರು ಭಾರತೀಯ ಸಂವಿಧಾನವನ್ನು ‘ತುಂಬಾ ದೀರ್ಘ, ತುಂಬಾ ಸಂಕೀರ್ಣ ಮತ್ತು ಇತಿಹಾಸದ ಬಂಧನದಲ್ಲಿರುವ ಸಂಹಿತೆ’ ಎಂದು ಕರೆದಿದ್ದರು. ಕುತೂಹಲದ ವಿಷಯ ಏನೆಂದರೆ, ಇದೇ ಜೆನ್ನಿಂಗ್ ಅವರು ಸೇರಿ ತಯಾರಿಸಿದ ಶ್ರೀಲಂಕಾದ ಸಂವಿಧಾನವು ಬರೇ ಆರೇ ವರ್ಷಗಳಲ್ಲಿ ಸಾವಿಗೀಡಾದದ್ದು. ನಿಜವಾಗಿ,
ಜೆನ್ನಿಂಗ್ ಅವರ ಮಾತನ್ನು ಸುಳ್ಳು ಮಾಡಿ ಭಾರತೀಯ ಸಂವಿಧಾನವು ನವೆಂಬರ್ 26ರಂದು 70ನೇ ವರ್ಷಕ್ಕೆ ಕಾಲಿಟ್ಟಿದೆ. ಜಗತ್ತಿನ ದೀರ್ಘಾಯುಷ್ಯದ ಲಿಖಿತ ಸಂವಿಧಾನಗಳಲ್ಲಿ ಭಾರತೀಯ ಸಂವಿಧಾನವೂ ಒಂದು. ಆದರೆ, ಈ ಸಂವಿಧಾನವನ್ನು ಅಪ್ರಸ್ತುತ ಗೊಳಿಸುವ ಪ್ರಕ್ರಿಯೆಗಳು ರಾಜಕೀಯವಾಗಿ ಮತ್ತೆ ಮತ್ತೆ ನಡೆಯುತ್ತಲೇ ಇವೆ. ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ. ರಾಷ್ಟ್ರಪತಿ ಆಳ್ವಿಕೆಯನ್ನು ರಾತೋರಾತ್ರಿ ರದ್ದುಪಡಿಸುವಂತೆ ರಾಷ್ಟ್ರಪತಿಯವರಿಗೆ ಸೂಚಿಸುವ ವಿಶೇಷಾಧಿಕಾರ ಪ್ರಧಾನ ಮಂತ್ರಿಯವರಿಗೆ ಇರಬಹುದು. ಹಾಗೆಯೇ, ಬೆಳ್ಳಂಬೆಳಗ್ಗೆ 5.30ಕ್ಕೆ ರಾಜ್ಯಪಾಲರು ಚುರುಕಾಗುವುದು ಮತ್ತು ಎರಡು ಗಂಟೆಯೊಳಗೆಯೇ ಸರಕಾರವೊಂದರ ರಚನೆಗೆ ಮುಂದಾಗುವುದೆಲ್ಲ ಸಾಂವಿಧಾನಿಕವಾಗಿ ಸರಿಯೇ ಇರಬಹುದು. ಆದರೆ, ನೈತಿಕವಾಗಿ ಎಷ್ಟು ಸರಿ? ರಾಜ್ಯಪಾಲರು ಆ ಮಟ್ಟದಲ್ಲಿ ಚುರುಕಾಗಲೇ ಬೇಕಾದ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿಯೇ ಇರಲಿಲ್ಲವಲ್ಲ. ಬೆಳ್ಳಂಬೆಳಗ್ಗೆ ರಾಷ್ಟ್ರಪತಿ ಆಡಳಿತವನ್ನು ರದ್ದುಪಡಿಸ ಬೇಕಾದ ಸಾಂವಿಧಾನಿಕ ತುರ್ತು ನಿರ್ಮಾಣವಾಗಿಯೇ ಇರಲಿಲ್ಲವಲ್ಲ. ಎರಡು ತದ್ವಿರುದ್ಧ ನಿಲುವಿನ ಪಕ್ಷಗಳು (ಬಿಜೆಪಿ-ಎನ್‍ಸಿಪಿ) ಸರಕಾರ ರಚನೆಯ ಕಾರಣಕ್ಕಾಗಿ ಮೈತ್ರಿ ಮಾತುಕತೆ ನಡೆಸಿರುವುದು ಎಲ್ಲೂ ಬಹಿರಂಗವಾಗಿ ನಡೆದೇ ಇರಲಿಲ್ಲವಲ್ಲ. ಹೀಗಿರುವಾಗ, ರಾಜ್ಯಪಾಲರ ನಡೆಯು ಸಂವಿಧಾನದ ವರ್ಚಸ್ಸಿನ ಮೇಲೆ ಬೀರುವ ಪರಿಣಾಮ ಏನು? ಅವರು ಮಾಡಿದ್ದು ಸಾಂವಿಧಾನಿಕವಾಗಿ ಸರಿ ಎಂದು ಸಮರ್ಥಿಸುವುದರಿಂದ ಸಂವಿಧಾನವನ್ನು ದುರ್ಬಲ ಗೊಳಿಸಿದಂತಾಗುವುದಿಲ್ಲವೇ? ಅಷ್ಟಕ್ಕೂ,
ಸಂವಿಧಾನದ ಅಳಿವು ಮತ್ತು ಉಳಿವು ಅದನ್ನು ಜಾರಿ ಮಾಡು ವವರ ಕೈಯಲ್ಲಿದೆ. ಕೋಶಿಯಾರಿ ಅವರ ನಡೆಯು ಅದರ ಉಳಿವಿಗೆ ಪೂರಕವಾಗಿಲ್ಲ. ಅದು ಜೆನ್ನಿಂಗ್‍ಗಷ್ಟೇ ಸಂತಸ ಕೊಡಬಹುದು.
No comments:
Post a Comment