Saturday, December 14, 2019

ಎನ್‍ಕೌಂಟರ್: ಸಂಭ್ರಮ ಮತ್ತು ಸೂತಕದ ನಡುವಿನ ಬಿಂದುವಿನಲ್ಲಿ ನಿಂತು...
ಕೆಲವು ಅಂಕಿ-ಅಂಶಗಳು ಹೀಗಿವೆ;
1. ಭಾರತದ ಜೈಲುಗಳಲ್ಲಿ ಸದ್ಯ ಗಲ್ಲು ಶಿಕ್ಷೆಯ ತೀರ್ಪನ್ನು ಪಡೆದುಕೊಂಡ ಮತ್ತು ಯಾವ ಕ್ಷಣದಲ್ಲೂ ನೇಣಿಗೆ ಏರಿಸಲ್ಪಡುವೆವೆಂಬ ಭಯದಲ್ಲಿ 380ರಷ್ಟು ಅಪರಾಧಿಗಳು ತಣ್ಣಗೆ ಬದುಕುತ್ತಿದ್ದಾರೆ. ಹಾಗಂತ, ಇವರೆಲ್ಲ ನಿನ್ನೆ ಮೊನ್ನೆ ಗಲ್ಲು ಶಿಕ್ಷೆ ಪಡಕೊಂಡವರಲ್ಲ. ಇವರಲ್ಲಿ 27 ವರ್ಷದಿಂದ ಗಲ್ಲು ಶಿಕ್ಷೆಯನ್ನು ಎದುರು ನೋಡುತ್ತಿರುವವನೂ ಇದ್ದಾನೆ. ಉಳಿದವರಲ್ಲಿ 5, 10, 15 ವರ್ಷ ಗಳಿಂದ ಗಲ್ಲು ಶಿಕ್ಷೆಯನ್ನು ಕಾಯುತ್ತಿರುವವರೂ ಇದ್ದಾರೆ.
2. 2016ರ ಆರಂಭದಲ್ಲಿ ಈ ದೇಶದಲ್ಲಿ ಒಟ್ಟು 1,18,537 ಅತ್ಯಾಚಾರ ಪ್ರಕರಣಗಳು ನ್ಯಾಯಾಲಯದಲ್ಲಿದ್ದುವು. ಆದರೆ, 2016ರ ಕೊನೆಗಾಗುವಾಗ ಈ ಅತ್ಯಾಚಾರ ಪ್ರಕರಣಗಳ ಸಂಖ್ಯೆ 1,33,813ಕ್ಕೆ ಏರಿಕೆ ಕಂಡಿತು. ಇದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ(NCRB)ದ ವರದಿ. ನೆನಪಿರಲಿ- 2012ರ ನಿರ್ಭಯ ಪ್ರಕರಣದ ಬಳಿಕದ ಅಂಕಿ ಅಂಶ ಇದು. 2012 ಡಿಸೆಂಬರ್ 16ರ ರಾತ್ರಿ ಬಸ್ ಒಂದರಲ್ಲಿ 23 ವರ್ಷದ ಈ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಯಿತು. ಬಳಿಕ ಆಕೆ ಆಸ್ಪತ್ರೆಯಲ್ಲಿ ನಿಧನಳಾದಳು. ಅಪರಾಧಿಗಳನ್ನು ಗಲ್ಲಿಗೇರಿಸ ಬೇಕೆಂದು ವಿಪಕ್ಷ ನಾಯಕಿ ಸುಶ್ಮಾ ಸ್ವರಾಜ್ ಅಂದು ಸಂಸತ್ತಿ ನಲ್ಲಿ ಆಗ್ರಹಿಸಿದ್ದರು. 2013 ಆಗಸ್ಟ್‍ನಲ್ಲಿ 22 ವರ್ಷದ ಪೋಟೋ ಪತ್ರಕರ್ತೆಯ ಮೇಲೆ ಮುಂಬೈಯ ಶಕ್ತಿ ಮಿಲ್ಸ್ ಆವರಣದಲ್ಲಿ ಐವರು ಸಾಮೂಹಿಕ ಅತ್ಯಾಚಾರ ನಡೆಸಿದರು. ಇಂಗ್ಲಿಷ್ ಭಾಷೆಯ ಮ್ಯಾಗಸಿನ್ ಒಂದಕ್ಕೆ ಅಸೈನ್‍ಮೆಂಟ್ ತಯಾರಿಸಲು ತನ್ನ ಗೆಳೆಯನೊಂದಿಗೆ ಹೋಗಿದ್ದ ವೇಳೆ ಈ ಅತ್ಯಾಚಾರ ನಡೆಯಿತು. 2015 ಮಾರ್ಚ್ 14ರಂದು ಪಶ್ಚಿಮ ಬಂಗಾಲದ ರಾಣಾಘಾಟ್‍ನ ಜೀಸಸ್ ಮತ್ತು ಮೇರಿ ಕಾನ್ವೆಂಟ್‍ನಲ್ಲಿ 71 ವರ್ಷದ ನನ್ ಒಬ್ಬರನ್ನು ಅತ್ಯಾಚಾರಗೈಯಲಾಯಿತು. ರಾಷ್ಟ್ರಮಟ್ಟದಲ್ಲಿ ಭಾರೀ ಸದ್ದಿನೊಂದಿಗೆ ಸುದ್ದಿಗೀಡಾದ ಮತ್ತು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗೆ ಗುರಿಯಾದ ಈ ಪ್ರಕರಣಗಳ ಬಳಿಕದ ವರದಿ ಇದು ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳಿ.
3. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ(ಓಅಖಃ)ದ ವರದಿಯಲ್ಲಿ ಇನ್ನಷ್ಟು ಅಚ್ಚರಿಗಳಿವೆ. ಅತ್ಯಾಚಾರ ಆರೋಪವು ಶಿಕ್ಷೆಯಾಗಿ ಪರಿವರ್ತನೆಯಾಗುವ ಪ್ರಮಾಣಗಳ ಕುರಿತೂ ಅದು ವಿವರವಾಗಿ ಅಂಕಿ ಅಂಶಗಳನ್ನು ಮುಂದಿಟ್ಟಿದೆ. 2013ರ ವರೆಗಿನ ಅದರ ವರದಿಗಳೇ ಪರಿಸ್ಥಿತಿಯನ್ನು ನಮಗೆ ಮನದಟ್ಟು ಮಾಡಿ ಕೊಳ್ಳಲು ದಾರಾಳ ಸಾಕು. ಇಲ್ಲೂ ಓದುಗರಲ್ಲಿ ಒಂದು ಎಚ್ಚರಿಕೆ ಇರಬೇಕು. ಇಲ್ಲಿ ನೀಡಲಾಗಿರುವ ಅಂಕಿ-ಅಂಶಗಳೆಲ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲುಗೊಂಡು, ಎಫ್‍ಐಆರ್ ಆಗಿ ಆ ಬಳಿಕ ಅದು ನ್ಯಾಯಾಲಯಕ್ಕೆ ತಲುಪಿದ ಪ್ರಕರಣಗಳು. ಇಂಥ ಯಾವ ಪ್ರಕ್ರಿಯೆಗೂ ಒಳಗಾಗದೇ ಮತ್ತು ಹೊರ ಜಗತ್ತಿನ ಮುಂದೆ ಅನಾವರಣಗೊಳ್ಳದೆಯೇ ಸತ್ತು ಹೋದ ಪ್ರಕರಣಗಳು ಈ ಅಂಕಿ-ಅಂಶಗಳಿಗೆ ಸೇರಿರುವುದಿಲ್ಲ. ಈ ಅಂಕಿ-ಅಂಶಗಳು ಹೀಗಿವೆ:
ಅತ್ಯಾಚಾರ ಆರೋಪವು ಸಾಬೀತುಗೊಂಡು ಶಿಕ್ಷೆಯಾಗಿ ಪರಿ ವರ್ತನೆಯಾದ ಪ್ರಕರಣಗಳು 1973ರಲ್ಲಿ 44.3% ಇದ್ದರೆ, 1983 ರಲ್ಲಿ ಇದು 37.7%ಕ್ಕೆ ಕುಸಿಯಿತು. 2009ರಲ್ಲಿ ಇದು 26.9%ಕ್ಕೆ ಕುಸಿದರೆ, 2010ರಲ್ಲಿ 26.6%, 2011ರಲ್ಲಿ 26.4%, 2012ರಲ್ಲಿ 24.2% ಮತ್ತು 2013ರಲ್ಲಿ 27.1%ಕ್ಕೆ ಕುಸಿಯುತ್ತಾ ಬಂತು. ಹಾಗಂತ, 1973ರಿಂದ 2013ರ ನಡುವೆ ಅತ್ಯಾಚಾರ ಪ್ರಕರಣಗಳಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಾ ಬಂದಿದೆ ಎಂಬುದು ಇದರ ಅರ್ಥವಲ್ಲ. ಪ್ರತಿವರ್ಷವೂ ಅತ್ಯಾಚಾರ ಪ್ರಕರಣಗಳಲ್ಲಿ ಭಾರೀ ಅನ್ನುವಂತೆ ಏರಿಕೆ ಕಂಡು ಬರುತ್ತಲೇ ಇದೆ. ಮಾತ್ರವಲ್ಲ, ಅತ್ಯಾಚಾರಗಳು ಬರ್ಬರ ಅನ್ನುವಷ್ಟು ಕ್ರೂರವಾಗುತ್ತಲೂ ಇದೆ. 2012ರ ನಿರ್ಭಯ, 2018 ಜನವರಿ 17ರ ಆಸಿಫಾ, 2019ರ ಪಶು ವೈದ್ಯೆ ಮತ್ತು ಉನ್ನಾವೋ ಯುವತಿ.. ಎಲ್ಲವೂ ಬರ್ಬರತೆ ಯಲ್ಲಿ ಒಂದಕ್ಕಿಂತ ಒಂದನ್ನು ಮೀರುವಂಥವು. ಅತ್ಯಾಚಾರ ಪ್ರಕರಣಗಳಲ್ಲಿ ಏರಿಕೆ ಮತ್ತು ಶಿಕ್ಷಾ ಪ್ರಮಾಣದಲ್ಲಿ ಇಳಿಕೆ- ಇದು 1973ರಿಂದ 2013ರ ವರೆಗಿನ ಆಘಾತಕಾರಿ ಸತ್ಯಗಳು.
4. ಭಾರತದಲ್ಲಿ ಸರಾಸರಿ ಒಂದು ಮಿಲಿಯನ್ ಜನರಿಗೆ ಕೇವಲ 14 ಮಂದಿ ನ್ಯಾಯಾಧೀಶರಿದ್ದಾರೆ. ಇದು ಜಗತ್ತಿನ 65 ರಾಷ್ಟ್ರಗಳ ಪೈಕಿ ಅತ್ಯಂತ ಕಡಿಮೆ ಪ್ರಮಾಣ. ಅತ್ಯಾಚಾರ ಪ್ರಕರಣವನ್ನು ನಿಭಾಯಿಸುವುದಕ್ಕಾಗಿ 2012ರಲ್ಲಿ ದೆಹಲಿ ಸರ್ಕಾರ 4 ತ್ವರಿತಗತಿ ನ್ಯಾಯಾಲಯವನ್ನು ರಚಿಸಿದೆ. ಇದರಿಂದ ಆಗಿರುವ ತೊಂದರೆ ಏನೆಂದರೆ, ಸಾಮಾನ್ಯ ನ್ಯಾಯಾಲಯಗಳಲ್ಲಿ ನ್ಯಾಯಾ ಧೀಶರ ಸಂಖ್ಯೆಗೆ ಕುತ್ತು ಬಂದಿದೆ. ಈ ಹಿಂದೆ ದಕ್ಷಿಣ ಆಫ್ರಿಕಾ ದಲ್ಲೂ ಅತ್ಯಾಚಾರ ಪ್ರಕರಣವು ನಾಗರಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಜನರು ನ್ಯಾಯ ವಿಳಂಬದ ಕುರಿತು ಪ್ರತಿಭಟನೆಗಿಳಿದರು. ಆದ್ದರಿಂದ ತ್ವರಿತಗತಿ ನ್ಯಾಯಾಲಯಗಳನ್ನು ಸ್ಥಾಪಿಸ ಲಾಯಿತು. 2011ರ ಲೆಕ್ಕಾಚಾರದಂತೆ, ಒಟ್ಟು ದಾಖಲಾದ ಅತ್ಯಾ ಚಾರ ಪ್ರಕರಣಗಳ ಪೈಕಿ 70ರಿಂದ 95% ಪ್ರಕರಣಗಳೂ ಸಾಬೀತು ಗೊಂಡು ಶಿಕ್ಷೆಯಾಗಿ ಪರಿವರ್ತನೆಯಾಯಿತು. ತ್ವರಿತಗತಿ ನ್ಯಾಯಾಲಯ ಸ್ಥಾಪನೆಯಾಗುವುದಕ್ಕಿಂತ ಮೊದಲು ಅಲ್ಲಿ ಈ ಶಿಕ್ಷೆಯ ಪ್ರಮಾಣ ತೀರಾ ಅತ್ಯಲ್ಪವಾಗಿತ್ತು. ಉದಾ. 1998ರಲ್ಲಿ ಈ ಶಿಕ್ಷೆಯ ಪ್ರಮಾಣ 8.9%ರಷ್ಟೇ ಇತ್ತು.
5. ಅತ್ಯಾಚಾರಿಗಳಿಗೆ ಶಿಕ್ಷೆ ವಿಧಿಸುವುದರಲ್ಲಿ ಭಾರತಕ್ಕಿಂತಲೂ ಹಿಂದಿರುವ ರಾಷ್ಟ್ರಗಳಿವೆ. ಅತ್ಯಾಚಾರಕ್ಕಾಗಿ 2012ರಲ್ಲಿ ಸ್ವೀಡನ್‍ನಲ್ಲಿ ಶಿಕ್ಷೆಗೀಡಾದವರ ಸಂಖ್ಯೆ 7%, ಫ್ರಾನ್ಸ್ ನಲ್ಲಿ 25% ಮತ್ತು ಸ್ವೀಡನ್ ನಲ್ಲಿ 10%. ಅದೇವೇಳೆ, ಇರಾನ್, ಈಜಿಪ್ಟ್, ಸೌದಿ ಅರೇಬಿಯಾಗಳಲ್ಲಿ ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.
6. ಇನ್ನೂ ಒಂದು ಲೆಕ್ಕಾಚಾರ ಹೀಗಿದೆ:
ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋದ ಪ್ರಕಾರ, 2016 ರಲ್ಲಿ ಒಟ್ಟು 38,947 ಲೈಂಗಿಕ ಹಿಂಸೆ (ಅತ್ಯಾಚಾರ) ಪ್ರಕರಣಗಳು ನಡೆದಿದ್ದು, ಇದರಲ್ಲಿ 2167ರಷ್ಟು ಸಾಮೂಹಿಕ ಅತ್ಯಾಚಾರಗಳು ನಡೆದಿವೆ. ಇದರ ಪ್ರಕಾರ ಲೆಕ್ಕ ಹಾಕಿದರೆ, ಪ್ರತಿ ಗಂಟೆಗೆ 4 ಹೆಣ್ಣು ಮಕ್ಕಳು ಲೈಂಗಿಕ ಹಿಂಸೆ ಅಥವಾ ಅತ್ಯಾಚಾರಕ್ಕೆ ಗುರಿ ಯಾಗುತ್ತಾರೆ. ಕಳೆದ 10 ವರ್ಷಗಳಿಂದ ಒಟ್ಟು 2.80 ಲಕ್ಷ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಆಘಾತಕಾರಿ ಅಂಶ ಏನೆಂದರೆ, ಇವುಗಳಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳು ಶೇ. 15ಕ್ಕಿಂತಲೂ ಹೆಚ್ಚು. ಹಾಗೆಯೇ ಭಾರತದಲ್ಲಿ ನೇಣಿಗೊಳಗಾಗುವ ಒಟ್ಟು ಪ್ರಕರಣಗಳಲ್ಲಿ ಶೇ. 39ರಷ್ಟು ಪ್ರಕರಣಗಳೂ ಅತ್ಯಾಚಾರಕ್ಕೆ ಸಂಬಂಧಿಸಿದ್ದು. ಆದ್ದರಿಂದ,
ಇಂಥ ಸನ್ನಿವೇಶದಲ್ಲಿ ಅತ್ಯಾಚಾರಕ್ಕೆ ಒಳಗಾದ ಯುವತಿ, ಆಕೆಯ ಕುಟುಂಬ, ಸಂಬಂಧಿಕರು ಇತ್ಯಾದಿ ಆಪ್ತ ವಲಯವು ಅತ್ಯಾಚಾರದ ಆರೋಪಿಗಳನ್ನು ಸ್ಥಳದಲ್ಲಿಯೇ ಜಜ್ಜಿ ಹಾಕಬೇಕು ಎಂದು ಬಯಸುವುದು ಸಹಜ. ಹೈದರಾಬಾದ್‍ನ ಪಶುವೈದ್ಯೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳನ್ನು ಎನ್‍ಕೌಂಟರ್ ನಡೆಸಿದ ಪೋಲೀಸರು ಅಂಥವರ ಕಣ್ಣಲ್ಲಿ ಹೀರೋಗಳಾಗುವುದೂ ಸಹಜ. ಅವರೊಳಗೆ ಮಡುಗಟ್ಟಿದ ದುಃಖವೇ ಅವರನ್ನು ಅಂಥದ್ದೊಂದು ನಿರ್ಧಾರಕ್ಕೆ ಪ್ರೇರೇಪಿಸಿರುತ್ತದೆ. ಅತ್ಯಾಚಾರಕ್ಕೆ ಅವರು ಸಾಕ್ಷಿಗಳಾಗಿಲ್ಲದಿದ್ದರೂ ಪೊಲೀಸರು ತೋರಿಸಿದ ಆರೋಪಿಗಳನ್ನು ನಿಜ ಅಪರಾಧಿಗಳು ಎಂದೇ ಖಚಿತವಾಗಿ ನಂಬುವಂತೆ ಅವರೊಳಗಿನ ಆಕ್ರೋಶ ಮತ್ತು ನೋವು ಬಲವಂತಪಡಿಸಿರುತ್ತದೆ. ಅವರಿರುವ ಜಾಗ ಮತ್ತು ಪರಿಸ್ಥಿತಿಯಲ್ಲಿ ನಿಂತು ನೋಡಿದರೆ ನಾವೂ ಅಂಥದ್ದೇ ತೀರ್ಮಾನಕ್ಕೆ ಬರುವುದಕ್ಕೂ ಸಾಧ್ಯವಿದೆ. ಅದೇವೇಳೆ, ಎನ್‍ಕೌಂಟರ್ ಗೆ ಒಳಗಾದ ಆರೋಪಿಗಳ ಕುಟುಂಬಗಳ ಭಾವನೆ ಬೇರೆಯದೇ ಆಗಿರುತ್ತದೆ. ಹೈದರಾಬಾದ್‍ನ ವೈದ್ಯೆಯ ಪ್ರಕರಣದಲ್ಲೂ ಇದು ವ್ಯಕ್ತವಾಗಿದೆ. ಅವರಿಗೆ ಎನ್‍ಕೌಂಟರ್ ತಪ್ಪಾಗಿ ಕಾಣಿಸುತ್ತದೆ. ಅವರು ಅದಕ್ಕಾಗಿ ಸಂಭ್ರಮಿಸುವುದೂ ಇಲ್ಲ. ನ್ಯಾಯ ತೀರ್ಮಾನ ವಾಗಬೇಕಾದುದು ನ್ಯಾಯಾಲಯದಲ್ಲಿ ಎಂದವರು ವಿಷಣ್ಣವದನರಾಗಿ ವಾದಿಸುತ್ತಾರೆ. ನಿಜವಾಗಿ,
ಈ ಎರಡು ಗುಂಪುಗಳ ಪ್ರತಿಕ್ರಿಯೆಗಳನ್ನು ನಿರ್ಲಕ್ಷಿಸಿಯೇ ನಾವು ಪೊಲೀಸ್ ಎನ್‍ಕೌಂಟರ್ ಅನ್ನು ವಿಮರ್ಶೆಗೊಡ್ಡಬೇಕು. ಸಂತ್ರಸ್ತೆಯ ಕುಟುಂಬ ಮತ್ತು ಆರೋಪಿಗಳ ಕುಟುಂಬ- ಇವೆರಡರ ಪ್ರತಿಕ್ರಿಯೆಯೂ ಪ್ರಬುದ್ಧವಾಗಿರಬೇಕಿಲ್ಲ. ಎನ್ ಕೌಂಟರ್‍ನ ದೂರಗಾಮಿ ಪರಿಣಾಮವನ್ನು ಗ್ರಹಿಸಿ ಅವು ಪ್ರತಿಕ್ರಿಯಿಸಬೇಕೆಂದಿಲ್ಲ. ಕ್ಷಣದ ಆಕ್ರೋಶ, ದ್ವೇಷ, ಮಮತೆ ಇತ್ಯಾದಿಗಳೇ ಈ ಎರಡೂ ಗುಂಪುಗಳ ಸಂಭ್ರಮಕ್ಕೋ ದುಃಖಕ್ಕೋ ಕಾರಣ. ಆದರೆ, ನಾಗರಿಕ ಸಮಾಜದ ಮೇಲೆ ಅಂಥದ್ದೊಂದು ಒತ್ತಡವಿಲ್ಲ. ಆದ್ದರಿಂದಲೇ, ಅದು ವ್ಯಕ್ತಪಡಿ ಸುವ ಪ್ರತಿಕ್ರಿಯೆಯು ಆವೇಶ, ದ್ವೇಷ, ಚಂಚಲತೆಯಿಂದ ದೂರವಿರ ಬೇಕಲ್ಲದೇ, ನ್ಯಾಯಾಲಯಕ್ಕಿಂತ ಹೊರಗೆ ಜಾರಿ ಮಾಡಲಾಗುವ ಶಿಕ್ಷೆಯ ದೂರಗಾಮಿ ಪರಿಣಾಮವನ್ನು ಗ್ರಹಿಸಿದ ರೀತಿಯಲ್ಲಿರಬೇಕು. ಹಾಗಂತ, ಈ ಬರಹದ ಆರಂಭದಲ್ಲಿ ಉಲ್ಲೇಖಿಸಲಾದ ಅಂಕಿ-ಅಂಶಗಳು ನ್ಯಾಯದಾನ ದಲ್ಲಾಗುವ ವಿಳಂಬವನ್ನು ಸ್ಪಷ್ಟಪಡಿಸುತ್ತಿವೆ ಎಂಬುದು ನಿಜ. ಅಷ್ಟೇ ಅಲ್ಲ, ವಿಳಂಬದ ಜೊತೆಗೇ ನ್ಯಾಯ ನಿರಾಕರಣೆಯೂ ನಡೆಯುತ್ತಿದೆ ಅನ್ನುವುದೂ ಸತ್ಯ. ಆದರೆ, ಈ ಸಮಸ್ಯೆಗೆ ಪೊಲೀಸ್ ಎನ್ ಕೌಂಟರ್ ಪರಿಹಾರ ಆಗಬಹುದೇ? ಪೊಲೀಸ್ ವ್ಯವಸ್ಥೆಯು ನ್ಯಾಯಾಂಗ ವ್ಯವಸ್ಥೆಯಂತೆ ಸ್ವತಂತ್ರ ಅಲ್ಲವಲ್ಲ. ಪೊಲೀಸರು ಕ್ಷಣಕ್ಷಣಕ್ಕೂ ಸರಕಾರದ ನಿರ್ದೇಶನದಂತೆ ಕೆಲಸ ನಿರ್ವಹಿಸುತ್ತಾರೆ. ಸರ್ಕಾರವಾದರೋ ಪಕ್ಷಾತೀತವೂ ಅಲ್ಲ ಅಥವಾ ಬಹುಪಕ್ಷೀಯವೂ ಅಲ್ಲ. ನಿರ್ದಿಷ್ಟ ರಾಜಕೀಯ ಪಕ್ಷವನ್ನು ಪ್ರತಿನಿಧಿಸುವ ಸರ್ಕಾರವೊಂದು ಪಕ್ಷಾತೀತವಾಗಿ ಕೆಲಸ ಮಾಡುವುದಕ್ಕೆ ಸಾಧ್ಯವೂ ಇಲ್ಲ. ಯಾವ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೋ ಆ ಸರ್ಕಾರದ ಅಣತಿಯಂತೆ ಪೊಲೀಸ್ ವ್ಯವಸ್ಥೆ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಹೀಗಿರುವಾಗ, ಪೊಲೀಸರು ನಡೆಸುವ ಯಾವುದೇ ಎನ್‍ಕೌಂಟರ್ ಪಕ್ಷಾತೀತವಾಗಿ ಮತ್ತು ಸಂಪೂರ್ಣ ನ್ಯಾಯಯುತವಾಗಿ ನಡೆಯುವುದು ಅನುಮಾನಾಸ್ಪದ. ಜಮ್ಮುವಿನಲ್ಲಿ 8ರ ಹರೆಯದ ಆಸಿಫಾ ಎಂಬ ಮಗುವನ್ನು ಹಿಂಸಿಸಿ ಅತ್ಯಾಚಾರಗೈದು ಹತ್ಯೆ ನಡೆಸಿದ ಆರೋಪಿಗಳ ಪರವೇ ನಿರ್ದಿಷ್ಟ ರಾಜಕೀಯ ಪಕ್ಷದ ಶಾಸಕರು ರ್ಯಾಲಿ ನಡೆಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಸರಕಾರವು ತನಗೆ ಬೇಕಾದ ಆರೋಪಿಗಳನ್ನು ಉಳಿಸಿಕೊಂಡು ತನಗಾಗದ ಅಥವಾ ಸಂಬಂಧವಿಲ್ಲದ ಆರೋಪಿ ಗಳನ್ನು ಪೊಲೀಸರ ಮೂಲಕ ಮುಗಿಸುವುದಕ್ಕೂ ಅವಕಾಶವಿದೆ. ಸರ್ಕಾರವೇ ಭಾಗಿಯಾದ ಹಲವಾರು ಹತ್ಯಾಕಾಂಡಗಳು, ಕೌಸರ್‍ಬೀಯಂಥ ಎನ್‍ಕೌಂಟರ್ ಗಳು ಇದಕ್ಕೆ ಸಾಕ್ಷ್ಯವಾಗಿಯೂ ನಮ್ಮ ಮುಂದಿದೆ. ಆದ್ದರಿಂದ,
ಅತ್ಯಾಚಾರವಿರಲಿ, ಇನ್ನಾವುದೇ ಕ್ರೌರ್ಯವಿರಲಿ, ಪೊಲೀಸರು ತಮ್ಮ ಕಾರ್ಯವ್ಯಾಪ್ತಿಯನ್ನು ಮೀರಿ ಕ್ರಮಕ್ಕೆ ಮುಂದಾಗುವುದನ್ನು ಸಮರ್ಥಿಸಿಕೊಳ್ಳುವುದು ಒಟ್ಟು ಪ್ರಜಾತಂತ್ರದ ಹಿತದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಬಹುದು. ಸಂತ್ರಸ್ತೆಯ ಕುಟುಂಬ ಮತ್ತು ಆರೋಪಿಗಳ ಕುಟುಂಬದಂತೆ ನಾಗರಿಕರೂ ಭಾವಾವೇಶದಿಂದ ಪ್ರತಿಕ್ರಿಯಿಸತೊಡಗಿದರೆ ಅದು ಪೊಲೀಸ್ ಇಲಾಖೆಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ. ಸಾರ್ವಜನಿಕರಿಂದ ಪ್ರಶಂಸೆ ಗಿಟ್ಟಿಸಿಕೊಳ್ಳುವುದಕ್ಕಾಗಿ ಮತ್ತು ಸರ್ಕಾರದ ಪುರಸ್ಕಾರವನ್ನು ಪಡೆಯುವುದ ಕ್ಕಾಗಿಯೂ ನಕಲಿ ಎನ್‍ಕೌಂಟರ್ ಗಳಿಗೆ ಅದು ದಾರಿಯನ್ನು ತೆರೆದುಕೊಡುತ್ತದೆ. ಅಂದಹಾಗೆ, ನಿರ್ದಿಷ್ಟ ಪೊಲೀಸ್ ಪ್ರಮುಖರನ್ನು ಫ್ಯಾಂಟಮ್‍ನಂತೆ ಚಿತ್ರಿಸಿ, ಹೂಹಾರ ಹಾಕಿ ಹೀರೋನಂತೆ ಸತ್ಕರಿಸುವುದರಿಂದ ಲಾಭವೂ ಇದೆ, ನಷ್ಟವೂ ಇದೆ. ಕೆಲವೊಮ್ಮೆ ಇಂಥ ಸತ್ಕಾರವು ಅವರನ್ನು ಕಾನೂನು ಬಾಹಿರವಾಗಿ ವರ್ತಿಸುವುದಕ್ಕೂ ಪ್ರೇರಣೆ ನೀಡುತ್ತದೆ. ರಾಷ್ಟ್ರಪತಿ ಪದಕ ಸಹಿತ ಇನ್ನಿತರ ಗೌರವಾರ್ಹ ಪುರಸ್ಕಾರ ಪಡೆದವರೂ ಆ ಬಳಿಕ ವಿಲನ್ ಆದ ಇತಿಹಾಸ ಈ ದೇಶದಲ್ಲಿದೆ. ಆದ್ದರಿಂದ,
ಅತ್ಯಾಚಾರಕ್ಕೆ ಸಂಬಂಧಿಸಿ ನ್ಯಾಯಾಂಗದ ನಿಧಾನಗತಿಗೆ ಅಥವಾ ನಿಷ್ಕ್ರಿಯತೆಗೆ ಎನ್‍ಕೌಂಟರ್ ಅನ್ನು ಬೆಂಬಲಿಸುವುದು ಉತ್ತರ ಅಲ್ಲ. ಸ್ವತಃ ಅದುವೇ ಒಂದು ಪ್ರಶ್ನೆ. ದೊಡ್ಡ ಸಂಖ್ಯೆಯಲ್ಲಿ ತ್ವರಿತಗತಿ ನ್ಯಾಯಾಲಯದ ಸ್ಥಾಪನೆ ಮತ್ತು ನಿಗದಿತ ಅವಧಿಯೊಳಗೆ ವಿಚಾರಣೆ ನಡೆಸಿ ಶಿಕ್ಷೆ ಜಾರಿಮಾಡುವುದಕ್ಕೆ ದಾರಿಗಳನ್ನು ಕಂಡುಕೊಳ್ಳುವುದೇ ಇದಕ್ಕಿರುವ ಪರಿಹಾರ. ಇದು ಅಸಾಧ್ಯವೂ ಅಲ್ಲ. ಆದರೆ, ಅದಕ್ಕೆ ಸಂಭ್ರಮದ ಮೂಡ್‍ನಿಂದ ಹೊರಬಂದು ಆಲೋಚಿಸಬೇಕು, ಅಷ್ಟೇ.

No comments:

Post a Comment