Monday, December 4, 2017

ಅಲೆಕ್ಸಾಂಡರ್‍ನನ್ನು ಕಣ್ಣೀರಾಗಿಸಿದ ಆ ಕ್ಷಮೆ...

    1. ತನ್ನ ಸಂಬಂಧಿಕನನ್ನು ಕೊಲೆಗೈದ ವ್ಯಕ್ತಿಯೊಂದಿಗೆ ಓರ್ವನು ಪ್ರವಾದಿ ಮುಹಮ್ಮದ್‍ರ(ಸ) ಬಳಿಗೆ ಬರುತ್ತಾನೆ. ನಡೆದ ವಿಷಯವನ್ನು ಹೇಳುತ್ತಾನೆ. ಆರೋಪಿ ತಪ್ಪೊಪ್ಪಿಕೊಳ್ಳುತ್ತಾನೆ. ಪ್ರವಾದಿ(ಸ) ಹೇಳುತ್ತಾರೆ, ಅಪರಾಧಿಯನ್ನು ಕ್ಷಮಿಸು. ವ್ಯಕ್ತಿ ಒಪ್ಪಿಕೊಳ್ಳುವುದಿಲ್ಲ. ಪ್ರವಾದಿ(ಸ) ಮತ್ತೆ ಹೇಳುತ್ತಾರೆ, ಆತನಿಂದ ರಕ್ತ ಪರಿಹಾರವನ್ನು ಪಡೆದುಕೊಂಡು ಆತನನ್ನು ಕ್ಷಮಿಸು. ವ್ಯಕ್ತಿ ಅದಕ್ಕೂ ಒಪ್ಪುವುದಿಲ್ಲ. ಆಗ ಪ್ರವಾದಿ(ಸ) ಹೇಳುತ್ತಾರೆ, ಹಾಗಾ ದರೆ ಆತನನ್ನು ವಧಿಸು. ನೀನೂ ಆತನಂತೆ ಆಗಬಯಸುವಿ ಯೆಂದಾದರೆ ಹಾಗೆ ಮಾಡು. (ಅಬೂದಾವೂದ್- 4497)
2. ಓರ್ವ ವ್ಯಕ್ತಿ ಪ್ರವಾದಿಯವರ ಬಳಿಗೆ ಬಂದು ಹೇಳುತ್ತಾನೆ,
ನನ್ನ ಕೆಲಸಗಾರನನ್ನು ನಾನು ಎಷ್ಟು ಬಾರಿ ಕ್ಷಮಿಸಬೇಕು?’
ಪ್ರವಾದಿ ಹೇಳುತ್ತಾರೆ,
ಪ್ರತಿದಿನ 70 ಬಾರಿ (ತಿರ್ಮಿದಿ: 1424).
ಪವಿತ್ರ ಕುರ್‍ಆನ್ ಹೇಳುತ್ತದೆ,
1. ಇತರರ ಅಪರಾಧಗಳನ್ನು ಕ್ಷಮಿಸುವ ಸಜ್ಜನರು ಅಲ್ಲಾಹನಿಗೆ ಅತ್ಯಂತ ಮೆಚ್ಚುಗೆಯವರು. (3: 134)
2. ಅಲ್ಲಾಹನು ಮಹಾ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ. (42: 5)
ಎರಡು ಪ್ರವಾದಿ ವಚನಗಳು ಮತ್ತು ಎರಡು ಕುರ್‍ಆನ್ ವಚನಗಳನ್ನು ಇಲ್ಲಿ ಉಲ್ಲೇಖಿಸುವುದಕ್ಕೆ ಒಂದು ಕಾರಣ ಇದೆ.
ಕಳೆದ ತಿಂಗಳು ಅಮೇರಿಕದ ಕೆಂಟುಕಿಯ ಕೋರ್ಟ್‍ನಲ್ಲಿ ಅಚ್ಚರಿಯ ಘಟನೆಯೊಂದು ನಡೆಯಿತು. 2015 ಎಪ್ರಿಲ್‍ನಲ್ಲಿ ನಡೆದ ಹತ್ಯೆಗೆ ಸಂಬಂಧಿಸಿ ಅಂತಿಮ ತೀರ್ಪು ಪ್ರಕಟವಾಗುವುದಕ್ಕೆ ಎಲ್ಲವೂ ಸಿದ್ಧವಾಗಿತ್ತು. ಸಲಾಹುದ್ದೀನ್ ಜಿತ್‍ಮೌದ್ ಎಂಬ 22 ವರ್ಷದ ತರುಣನನ್ನು ಹತ್ಯೆ ಮಾಡಿದ ಪ್ರಕರಣದ ತೀರ್ಪು. ಸಲಾಹುದ್ದೀನನ ತಂದೆ ಅಬ್ದುಲ್ ಮುನೀಮ್ ಸಂಬಾಟ್ ಜಿತ್‍ಮೌದ್ ತನ್ನ ಕುಟುಂಬ ಸಮೇತ ಕೋರ್ಟ್‍ನಲ್ಲಿದ್ದರು. ಅಪರಾಧಿ ಟ್ರೆ ಅಲ್‍ಕ್ಸಾಂಡರ್ ರೆಲ್ ಫೋರ್ಡ್ ಕೂಡ ಕಟಕಟೆಯಲ್ಲಿದ್ದ. ಆತನ ಕುಟುಂಬವು ತೀರ್ಪನ್ನು ನಿರೀಕ್ಷಿಸುತ್ತಾ ನ್ಯಾಯಾಲಯದಲ್ಲಿತ್ತು. ನ್ಯಾಯಾಧೀಶೆ ಕಿಂಬರ್ಲಿ ಬಿನ್ನೆಲ್ ಇನ್ನೇನು ತೀರ್ಪು ಘೋಷಿಸಲು ಮುಂದಾಗುತ್ತಿರುವಂತೆಯೇ, 64 ವರ್ಷದ ಇಸ್ಲಾಮೀ ವಿದ್ವಾಂಸ ಮತ್ತು ಅಮೇರಿಕದ ಲೆಕ್ಸಿಂಗ್ಟನ್ ಯುನಿವರ್ಸಲ್ ಅಕಾಡಮಿ ಮತ್ತು ಸೈಂಟ್ ಲೂಯಿಸ್‍ನ ಅಲ್ ಸಲಾಮ್ ಡೇ ಸ್ಕೂಲ್ ಸೇರಿದಂತೆ ಹಲವಾರು ಇಸ್ಲಾಮಿಕ್ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಸದ್ಯ ನಿವೃತ್ತರಾಗಿರುವ ಮೂಲತಃ ಥಾೈಲೆಂಡ್‍ನವರಾದ ಅಬ್ದುಲ್ ಮುನೀಮ್ ಜಿತ್‍ಮೌದ್ ಅವರು ಎದ್ದು ನಿಂತರಲ್ಲದೇ ತಾನು ಅಲೆಕ್ಸಾಂಡರ್‍ನನ್ನು ಕ್ಷಮಿಸಿದ್ದೇನೆ ಎಂದು ತುಂಬಿದ ಕಣ್ಣೀರಿನೊಂದಿಗೆ ಘೋಷಿಸಿದರು.
“ನಾನು ನಿನ್ನ ಮೇಲೆ ಕೋಪಿಸಲಾರೆ. ನಿನ್ನನ್ನು ಈ ಕೃತ್ಯಕ್ಕೆ ಪ್ರೇರೇಪಿಸಿದ ಶೈತಾನನೇ ನಿಜವಾದ ಅಪರಾಧಿ. ನಿನ್ನನ್ನು ಅಂಥ ಕ್ರೂರ ಕೃತ್ಯಕ್ಕೆ ಪ್ರೇರೇಪಿಸಿದ ಶೈತಾನನ ಮೇಲೆ ನಾನು ಸಿಟ್ಟಾಗುವೆ. ಈ ಜಗತ್ತಿನಲ್ಲಿ ಸಂತ್ರಸ್ತನು ಪಾಪಿಯನ್ನು ಕ್ಷಮಿಸದಿದ್ದರೆ ದೇವನೂ ಪಾಪಿಯನ್ನು ಕ್ಷಮಿಸಲಾರ ಅನ್ನುವುದು ನನ್ನ ವಿಶ್ವಾಸ. ಆದ್ದರಿಂದ ನಾನು ನಿನ್ನನ್ನು ಕ್ಷಮಿಸಿದ್ದೇನೆ..” ಎಂದವರು ನಡುಗುವ ದನಿಯೊಂದಿಗೆ ಹೇಳಿದರು. ಜೊತೆಗೇ, ಪವಿತ್ರ ಕುರ್‍ಆನಿನ 9ನೇ ಅಧ್ಯಾಯದ 51ನೇ ವಚನದಲ್ಲಿ ಹೇಳಲಾಗಿರುವ, “ಅಲ್ಲಾಹನು ನಮಗಾಗಿ ಲಿಖಿತಗೊಳಿಸಿರುವುದರ ಹೊರತು ಬೇರಾವುದೂ (ಒಳಿತು ಮತ್ತು ಕೆಡುಕು) ನಮ್ಮನ್ನು ಬಾಧಿಸುವುದಿಲ್ಲ. ಅಲ್ಲಾಹನೇ ನಮ್ಮ ಮಾಲಿಕನಾಗಿದ್ದಾನೆ. ಸತ್ಯವಿಶ್ವಾಸಿಗಳು ಅವನ ಮೇಲೆಯೇ ಭರವಸೆಯನ್ನಿರಿಸಬೇಕು..” ಎಂಬ ವಚನವೇ ನನ್ನ ಈ ನಿರ್ಧಾರಕ್ಕೆ ಕಾರಣ ಎಂದೂ ಹೇಳಿದರು. ಅವರು ಹೀಗೆ ಹೇಳಿ ಮುಗಿಸುತ್ತಿರುವಂತೆಯೇ ನ್ಯಾಯಾಲಯದ ವಾತಾವರಣ ಸಂಪೂರ್ಣ ಬದಲಾಯಿತು. ತೀರ್ಪು ಹುಟ್ಟು ಹಾಕಿದ್ದ ಕುತೂಹಲವು ಭಾವುಕ ಸನ್ನಿವೇಶವಾಗಿ ಮಾರ್ಪಾಟಾಯಿತು. ಸ್ವತಃ ನ್ಯಾಯಾಧೀಶರಾದ ಕಿಂಬರ್ಲಿ ಬಿನ್ನೆಲ್ ಅವರೇ ಭಾವುಕರಾದರು. ಅವರ ಗಂಟಲು ಕಟ್ಟಿಕೊಂಡಿತು. ತೀರ್ಪು ಘೋಷಣೆ ಸಾಧ್ಯವಾಗದೇ ಸ್ವಲ್ಪ ಸಮಯ ಕಲಾಪ ಮುಂದೂಡಿ ಬಳಿಕ ಹಿಂತಿರುಗಿ ಬಂದು ಅಪರಾಧಿ ಅಲೆಕ್ಸಾಂಡರ್‍ಗೆ 31 ವರ್ಷಗಳ ಶಿಕ್ಷೆಯನ್ನು ಘೋಷಿಸಿ ದರು. ಬಳಿಕ ಅಬ್ದುಲ್ ಮುನೀಮ್ ಜಿತ್‍ಮೌದ್‍ರು ಅಲೆಕ್ಸಾಂಡರ್ ನನ್ನು ತಬ್ಬಿಕೊಂಡರು. ಅಲೆಕ್ಸಾಂಡರ್ ಪಶ್ಚಾತ್ತಾಪ ಭಾವದಿಂದ ಕಣ್ಣೀರಿಳಿಸಿದ. ತನ್ನನ್ನು ಕ್ಷಮಿಸುವಂತೆ ಕೋರಿಕೊಂಡ.
2015 ಎಪ್ರಿಲ್ 19ರಂದು 22 ವರ್ಷದ ಸಲಾಹುದ್ದೀನ್‍ನನ್ನು ಅಲೆಕ್ಸಾಂಡರ್ ಸಹಿತ ಒಟ್ಟು ಮೂರು ಮಂದಿ ಸೇರಿ ಇರಿದು ಹತ್ಯೆಗೈದು ದರೋಡೆ ನಡೆಸಿದ್ದರೆಂದು ಆರೋಪಿಸಲಾಗಿತ್ತು. ಲೆಕ್ಸಿಂಗ್ಟನ್ ಕೋರ್ಟ್ ಅಪಾರ್ಟ್‍ಮೆಂಟ್ ಕಾಂಪ್ಲೆಕ್ಸ್ ನಲ್ಲಿ ಈ ಘಟನೆ ನಡೆದಿತ್ತು. ಆರೋಪಿಗಳು ರೆಸ್ಟೋರೆಂಟ್ ಒಂದಕ್ಕೆ ಪಿಝ್ಝಾಕ್ಕೆ ಆರ್ಡರ್ ಮಾಡಿದ್ದರು. ಪಿಝ್ಝಾ ಡೆಲಿವರಿ ಮಾಡಲು ಸಲಾಹುದ್ದೀನ್ ಬಂದಿದ್ದ. ಪೊಲೀಸರ ಪ್ರಕಾರ ಸಲಾಹುದ್ದೀನ್‍ನ ಧರ್ಮವನ್ನು ನೋಡಿಕೊಂಡು ಈ ಹತ್ಯೆ ನಡೆಸಲಾಗಿದೆ.ಕ್ಷಮೆ ಎಂಬುದು ಎರಡಕ್ಷರಗಳ ಆಚೆಗೆ ಆಲದ ಮರದಂತೆ ವಿಶಾಲವಾಗಿ ಚಾಚಿಕೊಂಡಿರುವ ವಸ್ತು. ಕ್ಷಮೆಯ ಕುರಿತಂತೆ ಗಂಟೆಗಟ್ಟಲೆ ಭಾಷಣ ಮಾಡಿದವರು ಕೂಡ ಕ್ಷಮಿಸಲೇಬೇಕಾದ ನಿರ್ಣಾಯಕ ಸನ್ನಿವೇಶ ಎದುರಾದಾಗ ಸಂದಿಗ್ಧಕ್ಕೆ ಸಿಲುಕಿದ್ದುಂಟು. ಪ್ರವಾದಿ ಮುಹಮ್ಮದ್‍ರ(ಸ) ಬದುಕಿನಲ್ಲಿ ಕ್ಷಮೆಯ ಧಾರಾಳ ಸನ್ನಿವೇಶಗಳು ಸಿಗುತ್ತವೆ. ತಾಯಿಫ್‍ನಿಂದ ಹಿಡಿದು ತನ್ನ ಕತ್ತಿನ ಶಾಲನ್ನು ಹಿಡಿದೆಳೆದ ಬುಡಕಟ್ಟು ವ್ಯಕ್ತಿಯವರೆಗೆ, ಹಿಂದ್‍ಳಿಂದ ಹಿಡಿದು ತನ್ನ ಮೇಲೆ ಕಸ ಎಸೆಯುತ್ತಿದ್ದ ಯುವತಿಯ ವರೆಗೆ. ವೈಯಕ್ತಿಕ ಪ್ರಕರಣಗಳನ್ನು ಅವರು ಕ್ಷಮೆ ಎಂಬ ಚೌಕಟ್ಟಿನೊಳಗಿಟ್ಟು ನೋಡುತ್ತಿದ್ದರು. ಶಿಕ್ಷೆಗೂ ಕ್ಷಮೆಗೂ ನಡುವೆ ಇರುವ ಬಹುದೊಡ್ಡ ವ್ಯತ್ಯಾಸ ಏನೆಂದರೆ, ಶಿಕ್ಷೆಯಿಂದ ಸಂತ್ರಸ್ತ ಕುಟುಂಬ ಪಡೆಯುವ ಸುಖ ತಾತ್ಕಾಲಿಕವಾದುದು. ಸಲಾಹುದ್ದೀನ್ ಪ್ರಕರಣವನ್ನೇ ಎತ್ತಿ ಕೊಳ್ಳೋಣ. 22 ವರ್ಷದ ಯುವಕ ಎಂಬ ನೆಲೆಯಲ್ಲಿ ಆತನ ಮೇಲೆ ಹೆತ್ತವರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರಬಹುದು. ವರಮಾನದ ನೆಲೆಯಲ್ಲೂ ಆತನ ಅಗತ್ಯ ಹೆತ್ತವರಿಗೆ ಇದ್ದಿರಬಹುದು. ಏಕೈಕ ಮಗನಾಗಿದ್ದರಂತೂ ಸಲಾಹುದ್ದೀನ್‍ಗೆ ಇನ್ನಷ್ಟು ಮಹತ್ವ ಲಭ್ಯವಾಗುತ್ತದೆ. ಹೀಗಿರುವಾಗ, ಆತನನ್ನು ಕಳಕೊಳ್ಳುವುದು ಸಣ್ಣ ಆಘಾತಕಾರಿ ಸಂಗತಿಯಲ್ಲ. ಮನೆಯಲ್ಲಿ ಸದಾ ಶೂನ್ಯ  ಕಾಡಬಹುದಾದ ಸನ್ನಿವೇಶವನ್ನು ಅದು ಹುಟ್ಟು ಹಾಕುತ್ತದೆ. ಮೆಟ್ಟು, ಪೆನ್ನು, ಶರ್ಟು, ಕನ್ನಡಕ, ಫೋಟೋ, ಪುಸ್ತಕ.. ಹೀಗೆ ಸಲಾಹುದ್ದೀನ್‍ಗೆ ಸಂಬಂಧಿಸಿದ ಪ್ರತಿಯೊಂದೂ ಆತನನ್ನು ಮರು ನೆನಪಿಸುತ್ತಾ ಚುಚ್ಚುತ್ತಿರುತ್ತದೆ. ಸಲಾಹುದ್ದೀನ್‍ನ ಗೆಳೆಯರು ಸಿಕ್ಕಾಗ ಆತ ನೆನಪಾಗುತ್ತಾನೆ. ಆತನ ಇಷ್ಟದ ವಸ್ತುಗಳನ್ನು ನೋಡಿದಾಗ ಆತ ನೆನಪಾಗುತ್ತಾನೆ. ಆತ ದಿನಾ ಕುಳಿತುಕೊಳ್ಳುತ್ತಿದ್ದ ಚಯರೋ, ಸೋಫಾವೋ ಇನ್ನೇನೋ ಆತನನ್ನು ಅನುಕ್ಷಣ ನೆನಪಿಸಿ ಇರಿಯುತ್ತಿರುತ್ತವೆ. ಆದ್ದರಿಂದ ಸಲಾಹುದ್ದೀನ್‍ನ ಹತ್ಯೆಗೆ ಕಾರಣರಾದವರ ಮೇಲೆ ಆತನ ಹೆತ್ತವರಲ್ಲಿ ಅಸಾಧ್ಯ ಸಿಟ್ಟು ಹೊಮ್ಮಲೇ ಬೇಕಾದುದು ಅಸಹಜವಲ್ಲ. ಅವರಿಗೆ ಶಿಕ್ಷೆ ದೊರಕಲೇ ಬೇಕೆಂದು ಹೋರಾಟ ನಡೆಸುವುದೂ ಅಚ್ಚರಿಯದ್ದಲ್ಲ. ಅದೊಂದು ರೀತಿಯಲ್ಲಿ ವಿಚಿತ್ರ ಸುಖ ಕೊಡುವ ಘಳಿಗೆ. ಆರೋಪಿಗಳನ್ನು ದಂಡಿಸಲೇಬೇಕು ಎಂಬ ಹಠದ ಹಿಂದೆ ಇರುವುದು ಇಲ್ಲದ ಮಗನ ನೆನಪು. ಒಂದು ವೇಳೆ ಇವೆಲ್ಲವೂ ನಿರೀಕ್ಷಿಸಿದಂತೆಯೇ ಸಾಗಿ ಅಂತಿಮವಾಗಿ ಆರೋಪಿಗಳ ಕೃತ್ಯ ಸಾಬೀತಾಯಿತು ಎಂಬಲ್ಲಿಗೆ ತಲುಪಿದಾಗಲೇ ನಿಜವಾದ ಸವಾಲು ಎದುರುಗೊಳ್ಳುತ್ತದೆ. ಅಲ್ಲಿಯವರೆಗೆ ಅವರ ಜೊತೆ ಒಂದು ಹಠ ಇತ್ತು. ಮಗನಿಗಾಗಿ ಈ ಹಠ ಎಂಬ ಸಮರ್ಥನೆಯೂ ಇತ್ತು. ಮಾತ್ರವಲ್ಲ, ಮಗನನ್ನು ಪ್ರತಿನಿತ್ಯ ಆ ಹಠ ನೆನಪಿಸುತ್ತಲೂ ಇತ್ತು. ಆದರೆ ಆರೋಪ ಸಾಬೀತಾಗಿ ಶಿಕ್ಷೆ ಘೋಷಿಸಲ್ಪಟ್ಟ ಮೇಲೆ ಉಂಟಾಗುವ ಶೂನ್ಯ ಇದೆಯಲ್ಲ, ಅದು ಅತ್ಯಂತ ಅಸಹನೀಯವಾದುದು. ತನ್ನ ಹೋರಾಟದಲ್ಲಿ ಯಶಸ್ವಿಯಾದೆ ಅನ್ನುವ ನೆಮ್ಮದಿಯ ಜೊತೆಜೊತೆಗೇ ಮಗನಿಗಾಗಿ ಮಾಡುವುದಕ್ಕೆ ಇನ್ನೇನೂ ಉಳಿದಿಲ್ಲವಲ್ಲ ಎಂಬ ಹತಾಶೆ ಆ ಬಳಿಕದ ದಿನಗಳಲ್ಲಿ ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ. ಮಗನೂ ಇಲ್ಲ, ಅಪರಾಧಿಯೂ ಇಲ್ಲ ಎಂಬ ಎರಡು ಇಲ್ಲಗಳ ಬದುಕು ಒಟ್ಟಾಗಿ ಕಾಡುವ ಸನ್ನಿವೇಶ ಅದು. ನಿಜವಾಗಿ, ಪ್ರತೀಕಾರ ಭಾವವು ಎಲ್ಲ ಸಂದರ್ಭಗಳಲ್ಲೂ ನೆಮ್ಮದಿಯನ್ನೇ ಕೊಡಬೇಕೆಂದಿಲ್ಲ. ಕೆಲವೊಮ್ಮೆ ಪ್ರತೀಕಾರದ ಬಳಿಕ ಉಂಟಾಗುವ ಭಾವವು ಪ್ರತೀಕಾರಕ್ಕಿಂತ ಮೊದಲಿನ ಭಾವಕ್ಕಿಂತಲೂ ವೇದನಾಜನಕ ವಾಗಿರುತ್ತದೆ. ಅಪರಾಧಿಯ ಕುಟುಂಬವನ್ನು ಒಲಿಸಲಾಗದ ಮತ್ತು ಮಗನನ್ನೂ ಪಡಕೊಳ್ಳಲಾಗದ ವಿಚಿತ್ರ ಸಂಕಟ ಎದುರಾಗುತ್ತದೆ. ಸಲಾಹುದ್ದೀನ್ ಪ್ರಕರಣವು ಇದಕ್ಕೆ ಉತ್ತಮ ನಿದರ್ಶನ. ಸಲಾಹುದ್ದೀನ್ ಮತ್ತು ಅಲೆಕ್ಸಾಂಡರ್‍ನ ಎರಡೂ ಕುಟುಂಬಗಳು ನ್ಯಾಯಾಲಯದ ತೀರ್ಪಿನ ವೇಳೆ ಉಪಸ್ಥಿತವಿದ್ದವು. ಮೂವರು ಆರೋಪಿಗಳಲ್ಲಿ ಇಬ್ಬರನ್ನು ಕೋರ್ಟು ಆ ಮೊದಲೇ ದೋಷಮುಕ್ತ ಗೊಳಿಸಿದ್ದುದರಿಂದ ಅಲೆಕ್ಸಾಂಡರ್ ಕುಟುಂಬ ಮಾತ್ರ ಅಲ್ಲಿ ಉಪಸ್ಥಿತವಿತ್ತು. ಅಬ್ದುಲ್ ಮುನೀಮ್ ಜಿತ್‍ಮೌಂದ್‍ರ ಕ್ಷಮೆ ಆ ಕ್ಷಣದಲ್ಲಿ ಅನಿರೀಕ್ಷಿತವಾಗಿತ್ತು. ಅದು ನ್ಯಾಯಾಲಯ ಮತ್ತು ಅಲೆಕ್ಸಾಂಡರ್ ಕುಟುಂಬದ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ, 31 ವರ್ಷದ ಶಿಕ್ಷೆಯನ್ನೇ ನಗಣ್ಯಗೊಳಿಸುವಷ್ಟು. ಅಲೆಕ್ಸಾಂಡರ್‍ನ ಕುಟುಂಬ ಸಲಾಹುದ್ದೀನ್ ಕುಟುಂಬವನ್ನು ಆಲಿಂಗಿಸಿತು. ಅಲೆಕ್ಸಾಂಡರ್ ಮಾದಕ ವ್ಯಸನಿಯಾಗಿದ್ದ ಎಂಬುದನ್ನು ಆ ವೇಳೆ ಆ ಕುಟುಂಬ ಒಪ್ಪಿಕೊಂಡಿತು. ಅಂದಿನವರೆಗೆ ಪೊಲೀಸರಲ್ಲಾಗಲಿ, ನ್ಯಾಯಾಲಯದಲ್ಲಾಗಲಿ ಹೇಳಿರದ ಸತ್ಯ ಅದು. ಅಂಥದ್ದೊಂದು ಸತ್ಯವನ್ನು ಹೇಳಿಸಿದ್ದು ಅಬ್ದುಲ್ ಮುನೀಮ್ ಜಿತ್‍ಮೌಂದ್‍ರ ಕ್ಷಮಾ ಘೋಷಣೆ. ಆ ಕ್ಷಮೆಯು ಕೋರ್ಟಿನ ತೀರ್ಪಿನ ಮೇಲೆ ಯಾವ ಪರಿಣಾಮವನ್ನು ಬೀರದೇ ಇದ್ದರೂ ಅದು ಅಲೆಕ್ಸಾಂಡರ್ ಕುಟುಂಬದ ಮೇಲೆ ಮತ್ತು ಸ್ವತಃ ಅಲೆಕ್ಸಾಂಡರ್‍ನ ಮೇಲೆ ತೀವ್ರ ಪರಿಣಾಮವನ್ನು ಬೀರಿತು. ಟಿಶ್ಯೂ ಪೇಪರ್‍ನಿಂದ ಮತ್ತೆ ಮತ್ತೆ ಕಣ್ಣುಜ್ಜಿಕೊಳ್ಳುವ ಆತ ಇಡೀ ಘಟನೆಯ ಕೇಂದ್ರ ಬಿಂದುವಾದ. ತನ್ನನ್ನು ಕ್ಷಮಿಸಿ ಎಂದು ಬೇಡಿಕೊಂಡ. ಕೋರ್ಟ್‍ನ ಶಿಕ್ಷೆಯಿಂದ ಹೇಳಿಸಲಾಗದ ಮಾತುಗಳನ್ನು 64 ವರ್ಷದ ಗಡ್ಡದಾರಿ ವ್ಯಕ್ತಿಯ ಕ್ಷಮೆ ಹೇಳಿಸಿತು. ಪವಿತ್ರ ಕುರ್‍ಆನ್ ಘೋಷಿಸುವುದೇನೆಂದರೆ, ‘ಅಲ್ಲಾಹನು ಅತ್ಯಂತ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ’ (24:22, 22:42), ಓ ಪೈಗಂಬರರೇ ಕ್ಷಮಾಶೀಲರಾಗಿರಿ (7: 199), ಅವರ ವರ್ತನೆಗೆ ಪ್ರತಿಯಾಗಿ ಸೌಜನ್ಯಪೂರ್ಣ ಕ್ಷಮೆಯೊಂದಿಗೆ ವರ್ತಿಸಿರಿ (15: 85) ಎಂದೇ ಆಗಿದೆ. ಹಾಗಂತ,    ಪವಿತ್ರ ಕುರ್‍ಆನ್ ಪ್ರತೀಕಾರದ ಮಾರ್ಗವನ್ನು ಸಂಪೂರ್ಣ ಮುಚ್ಚಿದೆ ಎಂದಲ್ಲ. ಕ್ಷಮೆ ಮತ್ತು ಪ್ರತೀಕಾರ ಎರಡನ್ನೂ ಸಮಾ ನಾಂತರ ರೇಖೆಯಾಗಿ ಗೌರವಿಸುತ್ತಲೇ ಕ್ಷಮೆಗೆ ಒಂದಷ್ಟು ಹೆಚ್ಚು ಒತ್ತು ಕೊಟ್ಟಿರುವುದರಲ್ಲಿ ದೂರದೃಷ್ಟಿಯಿದೆ ಎಂದೇ ಅನಿಸುತ್ತದೆ. ಪವಿತ್ರ ಕುರ್‍ಆನ್‍ನ ಪ್ರಕಾರ, ‘ಪ್ರತೀಕಾರ ಎಸಗುವುದಿದ್ದರೆ ನಿಮ್ಮ ಮೇಲೆ ಅತಿರೇಕ ಎಸಗಿರುವಷ್ಟು ಮಾತ್ರ. ಆದರೆ ನೀವು ತಾಳ್ಮೆ ವಹಿಸಿದರೆ ನಿಶ್ಚಯವಾಗಿಯೂ ಇದು ಸಹನಾಶೀಲರಿಗೆ ಅತ್ಯುತ್ತಮ’ (16: 26), ‘ಯಾರಾದರೂ ಪ್ರತೀಕಾರವನ್ನು ದಾನ ಮಾಡಿದರೆ ಅದು ಅವರ ಪಾಲಿಗೆ ಪ್ರಾಯಶ್ಚಿತ್ತವಾಗುವುದು’ (5: 45), ‘ಕೆಡುಕಿನ ಪ್ರತಿಫಲ ಅದಕ್ಕೆ ಸಮಾನವಾದ ಕೆಡುಕಾಗಿದೆ. ಇನ್ನು ಯಾರಾದರೂ ಕ್ಷಮಿಸಿ ಬಿಟ್ಟರೆ ಹಾಗೂ ಸುಧಾರಿಸಿಕೊಂಡರೆ ಅದರ ಪ್ರತಿಫಲದ ಹೊಣೆ ಅಲ್ಲಾಹನ ಮೇಲಿದೆ’ (42: 40). ಒಂದು ವೇಳೆ,
    ಕ್ಷಮೆ ಮತ್ತು ಪ್ರತೀಕಾರ-ಎಂಬೆರಡು ಸಹಜ ಆಯ್ಕೆಗಳಲ್ಲಿ ಸಲಾಹುದ್ದೀನ್‍ನ ತಂದೆ ಪ್ರತೀಕಾರವನ್ನೇ ಆಯ್ದುಕೊಂಡಿದ್ದರೆ ಅಲೆಕ್ಸಾಂಡರ್‍ನು ಸುದ್ದಿಗೇ ಒಳಗಾಗುತ್ತಿರಲಿಲ್ಲವೇನೋ..No comments:

Post a Comment