ಪದ್ಮಾವತಿ
ಹಾದಿಯ
ಇಬ್ಬರೂ ಹೆಣ್ಮಕ್ಕಳೇ. ಒಂದು- ಐತಿಹಾಸಿಕವಾಗಿ ಪ್ರಬಲ ದಾಖಲೆಗಳಿಲ್ಲದ ಕಾಲ್ಪನಿಕ ಪಾತ್ರವಾದರೆ, ಇನ್ನೊಂದು- ಜೀವಂತ ಪಾತ್ರ. ಈ ಎರಡು ವ್ಯಕ್ತಿತ್ವಗಳ ನಡುವೆ ಸುಮಾರು ಏಳೂಕಾಲು ಶತಮಾನಗಳ ಅಂತರ ಇದೆ. ನಿಜವಾಗಿ, ಪದ್ಮಾವತಿ ಅಥವಾ ಪದ್ಮಿನಿ ಎಂಬೋರ್ವ ರಾಣಿ ಇದ್ದಳೋ ಎಂಬ ಬಗ್ಗೆ ಇತಿಹಾಸ ಕಾರರಲ್ಲಿ ಗೊಂದಲ ಇದೆ. 1540ರಲ್ಲಿ ಸೂಫಿ ಕವಿ ಮಲಿಕ್ ಮುಹಮ್ಮದ್ ಜಾಯಿಸಿಯ ಕಾವ್ಯದ ಮೂಲಕ ಮೊದಲ ಬಾರಿ ಪದ್ಮಿನಿ ಮುನ್ನೆಲೆಗೆ ಬರುತ್ತಾಳೆ. ಕಾವ್ಯವೆಂಬುದು ರೂಪಕ, ಸಂಕೇತ, ಕಲ್ಪಿತ ಪ್ರೇಮ, ವಿರಹ, ಸುಖಗಳ ಗುಚ್ಚವೆಂಬುದನ್ನು ನಮ್ಮೊಳಗೆ ನಾವು ಸ್ಪಷ್ಟಪಡಿಸಿಕೊಂಡರೆ, ಪದ್ಮಿನಿಯನ್ನು ಅರ್ಥೈಸಿಕೊಳ್ಳು ವುದು ಕಷ್ಟವೇನಲ್ಲ. 1303ರಲ್ಲಿ ಚಿತ್ತೂರಿನ ರಾಜ ರಾಣಾ ಜಯಸಿಂಹನ ಮೇಲೆ ಅಲ್ಲಾವುದ್ದೀನ್ ಖಿಲ್ಜಿ ದಾಳಿ ಮಾಡುತ್ತಾನೆ. ಸೋಲಿಸುತ್ತಾನೆ. 1316ರಲ್ಲಿ ಖಿಲ್ಜಿ ಸಾವಿಗೀಡಾಗುತ್ತಾನೆ. ಐತಿಹಾಸಿಕ ದಾಖಲೆಗಳಲ್ಲಿ ಈ ಇಬ್ಬರ ಹೆಸರಿದೆಯೇ ಹೊರತು ಎಲ್ಲೂ ಪದ್ಮಿನಿ ಅಥವಾ ಪದ್ಮಾವತಿಯ ಹೆಸರಿಲ್ಲ. ಆದರೆ ಕವಿ ಜಾಯಿಸಿ ಈ ಇಡೀ ಘಟನೆಗೆ ರಮ್ಯ ಹಿನ್ನೆಲೆಯೊಂದನ್ನು ಒದಗಿಸುತ್ತಾನೆ. `ಖಿಲ್ಜಿಗೆ ರಾಣಿ ಪದ್ಮಾವತಿಯ ಮೇಲೆ ಮೋಹ ಉಂಟಾಗುತ್ತದೆ, ಆ ಕಾರಣದಿಂದಲೇ ಯುದ್ಧ ಏರ್ಪಡುತ್ತದೆ, ಖಿಲ್ಜಿಯ ವಶವಾಗುವುದನ್ನು ತಪ್ಪಿಸುವುದಕ್ಕಾಗಿ ರಾಣಿ ಪದ್ಮಿನಿ ಇತರ 16 ಸಾವಿರ ಮಹಿಳೆಯರೊಂದಿಗೆ ಸಾಮೂಹಿಕ ಸತಿ ಸಹಗಮನ (ಜೋಹರ್) ಮಾಡುತ್ತಾಳೆ..’ ಇದು ಜಾಯಿಸಿಯ ಕಾವ್ಯದ ಸಾರಾಂಶ. ಇನ್ನೋರ್ವಳು ಹಾದಿಯ. ಈಕೆ ದಂತಕತೆಯಲ್ಲ. ನಮ್ಮ ನಡುವಿನ ವಾಸ್ತವ. ಕೇರಳದ ನೆಡುಂಬಾಶ್ಶೇರಿ ವಿಮಾಣ ನಿಲ್ದಾಣದಲ್ಲಿ ತನ್ನನ್ನು ಸುತ್ತುವರಿದಿರುವ ಪೊಲೀಸರ ನಡುವೆ ಮಾಧ್ಯಮದ ಮಂದಿಯನ್ನು ಕೂಗಿ ಕರೆದು- ‘ನಾನು ಮುಸ್ಲಿಮ್, ನನ್ನನ್ನು ಯಾರೂ ಬಲವಂತದಿಂದ ಮತಾಂತರಿಸಿಲ್ಲ, ನನ್ನ ಗಂಡ ಶಫಿನ್ ಜಹಾನ್...’ ಎಂದುದನ್ನು ಕಳೆದ ವಾರ ಟಿವಿ ಚಾನೆಲ್‍ಗಳು ನೇರವಾಗಿ ಪ್ರಸಾರ ಮಾಡಿದುವು. ಹಾಗಂತ, ಆಕೆ ತನ್ನನ್ನು ತಾನು ಹೀಗೆ ಪ್ರಸ್ತುತಪಡಿಸುತ್ತಿರುವುದು ಇದೇ ಮೊದಲಲ್ಲ. ಆಕೆ ಕೇರಳ ಹೈಕೋರ್ಟಿನ ಮುಂದೆ ಅದನ್ನು ಈ ಮೊದಲೇ ವ್ಯಕ್ತಪಡಿಸಿದ್ದಳು. ತನ್ನ ಹೆತ್ತವರ ಮುಂದೆ 2015ರ ನವೆಂಬರ್ ನಲ್ಲೇ ಹೇಳಿಕೊಂಡಿದ್ದಳು. 2016 ಮೇ 24 ರಂದು ಕೇರಳ ಹೈಕೋರ್ಟು ನೀಡಿದ ತೀರ್ಪಿನಲ್ಲಿ ಆಕೆಯ ಇಸ್ಲಾಮ್ ಸ್ವೀಕಾರದ ಬಗ್ಗೆ ವಿವರವಾಗಿ ಹೇಳಲಾಗಿತ್ತು. ತಮಿಳುನಾಡಿನ ಸೇಲಂನಲ್ಲಿರುವ ಶಿವರಾಜ್ ಹೋಮಿಯೋಪತಿ ಮೆಡಿಕಲ್ ಕಾಲೇಜ್‍ನಲ್ಲಿ ಓದುವಲ್ಲಿಂದ ಹಿಡಿದು 2015ರಲ್ಲಿ ದೊಡ್ಡಪ್ಪ ಸತ್ತಾಗ ನಡೆದ ಪ್ರಸಂಗಗಳ ವರೆಗೆ ಅದು ಹಾದಿಯಾಳ ಬದುಕು ಸಾಗಿ ಬಂದ ದೃಶ್ಯಗಳನ್ನು ಕಟ್ಟಿಕೊಟ್ಟಿತ್ತು. ಸೇಲಂನ ಮೆಡಿಕಲ್ ಕಾಲೇಜ್‍ನ ಹತ್ತಿರದಲ್ಲೇ ಇರುವ ಬಾಡಿಗೆ ಮನೆಯೊಂದರಲ್ಲಿ ಇತರ ನಾಲ್ವರು ಹೆಣ್ಣು ಮಕ್ಕಳೊಂದಿಗೆ ಅಖಿಲ ಎಂಬ ಹಾದಿಯ ವಾಸವಾಗಿದ್ದಳು. ನಾಲ್ವರು ರೂಮ್‍ಮೇಟ್‍ಗಳಲ್ಲಿ ಫಸೀನ ಮತ್ತು ಜಸೀನ ಎಂಬಿಬ್ಬರು ಮುಸ್ಲಿಂ ವಿದ್ಯಾರ್ಥಿನಿಯರೂ ಇದ್ದರು. ಜಸೀನಳ ಮನೆಗೆ ಅಖಿಲ ಹಲವು ಬಾರಿ ಹೋಗಿದ್ದಾಳೆ. ಇವರಿಬ್ಬರ ನಡತೆ ಅಖಿಲಳನ್ನು ತೀವ್ರವಾಗಿ ಆಕರ್ಷಿಸಿದೆ. ಅವರು ಮಾಡುತ್ತಿರುವ ನಮಾಝ್‍ನಿಂದ ಅಖಿಲ ಪ್ರಭಾವಿತಳಾಗಿದ್ದಾಳೆ. ಬಹುದೇವತ್ವಕ್ಕಿಂತ ಏಕದೇವತ್ವದ ಪರಿಕಲ್ಪನೆ ಆಕೆಗೆ ಹೆಚ್ಚು ಆಪ್ತವಾಗಿ ಕಂಡಿದೆ. ಇಸ್ಲಾಮ್‍ಗೆ ಸಂಬಂಧಿಸಿದ ಪುಸ್ತಕಗಳು ಮತ್ತು ವೀಡಿಯೋಗಳನ್ನು ಆಕೆ ವೀಕ್ಷಿಸ ತೊಡಗಿದ್ದಾಳೆ. ನಮಾಝನ್ನು ಅಭ್ಯಾಸ ಮಾಡತೊಡಗಿದ್ದಾಳೆ. ಮನೆಯಲ್ಲಿ ತಾನು ನಮಾಝ್ ಮಾಡಿದುದನ್ನು ನೋಡಿ ಅಪ್ಪ ಅಶೋಕನ್ ಗದರಿಸಿಯೂ ಇದ್ದಾರೆ. ಇನ್ನೊಮ್ಮೆ ಈ ಭಂಗಿ ಪುನರಾವರ್ತಿಸಬಾರದು ಎಂದೂ ತಾಕೀತು ಮಾಡಿದ್ದಾರೆ. ಆದರೆ 2015 ನವೆಂಬರ್ ನಲ್ಲಿ ದೊಡ್ಡಪ್ಪ ಮೃತಪಟ್ಟ ಸಮಯದಲ್ಲಿ ಅಖಿಲಳ ನಿಜ ರೂಪ ಮನೆಯವರಿಗೆ ಗೊತ್ತಾಗಿದೆ. ದೊಡ್ಡಪ್ಪರ ಸದ್ಗತಿಗಾಗಿ ಮನೆಯಲ್ಲಿ ಹಮ್ಮಿಕೊಂಡ 40 ದಿನಗಳ ಕಾಲದ ಪೂಜಾ ಕಾರ್ಯಗಳಲ್ಲಿ ಭಾಗವಹಿಸಲು ಅಖಿಲಾ ನಿರಾಕರಿಸಿದ್ದಾಳೆ. ತಂದೆ ಒತ್ತಾಯಿಸಿದಾಗ ಆಕೆ ತನ್ನ ಧರ್ಮ ವಿಶ್ವಾಸವನ್ನು ಬಹಿರಂಗ ಪಡಿಸಿದ್ದಾಳೆ. ‘ತಾನು ಪ್ರೌಢೆ ಮತ್ತು ಅಕ್ಷರಸ್ಥೆ’ ಎಂದು ಆಕೆ ನ್ಯಾಯಾಲಯದ ಮುಂದೆ ಹೇಳಿಕೊಳ್ಳುತ್ತಾಳೆ. ಕೋರ್ಟು ಒಪ್ಪಿಕೊಳ್ಳುತ್ತದೆ. ಇದಾದ ಬಳಿಕ 2016 ಆಗಸ್ಟ್ 16 ರಂದು ಮಗಳ ಸುರಕ್ಷತತೆಯ ಭಯವನ್ನು ಮುಂದಿಟ್ಟುಕೊಂಂಡು ತಂದೆ ಅಶೋಕನ್ ಮತ್ತೆ ನ್ಯಾಯಾಲಯದ ಮೊರೆ ಹೋಗುತ್ತಾರೆ. ಮಗಳನ್ನು ವಿದೇಶಕ್ಕೆ ರವಾನಿಸುವ ಆತಂಕವನ್ನು ಅವರು ತೋಡಿಕೊಳ್ಳುತ್ತಾರೆ. ನಿಜ ಏನೆಂದರೆ, ಆಕೆಯಿನ್ನೂ ಪಾಸ್ ಪೋರ್ಟೇ ಮಾಡಿಕೊಂಡಿರಲಿಲ್ಲ. ಅಖಿಲ ತನ್ನ ಹೆತ್ತವರೊಂದಿಗೆ ಹೋಗಲು ನಿರಾಕರಿಸುತ್ತಾಳೆ. ಮುಂದಿನ ವಿಚಾರಣೆಗಾಗಿ 2016 ಡಿ. 21 ರಂದು ಅಖಿಲ ಕೋರ್ಟ್‍ಗೆ ಹಾಜರಾಗುವಾಗ ತನಗೆ ಮದುವೆಯಾಗಿರುವುದಾಗಿ ಹೇಳಿಕೊಳ್ಳುತ್ತಾಳೆ. ಜೊತೆಗಿದ್ದ ಶಫಿನ್ ಜಹಾನ್ ತನ್ನ ಪತಿ ಎಂದೂ ಸ್ಪಷ್ಟಪಡಿಸುತ್ತಾಳೆ. ಮದುವೆಯಾದ ಸ್ಥಳ, ನೋಂದಣಿಯ ವಿವರಗಳನ್ನು ಆಕೆ ನ್ಯಾಯಾಲಯದ ಮುಂದಿಡುತ್ತಾಳೆ. ಜಸ್ಟೀಸ್ ಕೆ. ಸುರೇಂದ್ರ ಮೋಹನ್ ಮತ್ತು ಕೆ. ಅಬ್ರಹಾಂ ಅವರಿದ್ದ ನ್ಯಾಯಾಂಗೀಯ ಪೀಠ ಈ ಬೆಳವಣಿಗೆಗೆ ಅಚ್ಚರಿ ವ್ಯಕ್ತಪಡಿಸುತ್ತದೆ. ನೋಂದಣಿಯಲ್ಲಿ Shafin Jahan ಎಂಬುದರ ಬದಲು Jefin Jahan ಎಂದಿರುವುದನ್ನು ಪೀಠ ಗಂಭೀರವಾಗಿ ಪರಿಗಣಿಸಿ ವಿವಾಹವನ್ನೇ ರದ್ದುಪಡಿಸುವ ಅಭೂತಪೂರ್ವ ತೀರ್ಮಾನ ಕೈಗೊಳ್ಳುತ್ತದೆ. ಮಾತ್ರವಲ್ಲ,
`ಹಾದಿಯ ಪ್ರಬುದ್ಧಳಾಗಿರಬಹುದು, ಆದರೆ 20ರ ಹರೆಯವು ಚಂಚಲವಾದುದು. ಹೆತ್ತವರಿಗೆ ಆಕೆಯ ಸುರಕ್ಷಿತತೆಯ ಬಗ್ಗೆ ಭಯವಿದೆ. ಭಾರತೀಯ ಸಂಸ್ಕೃತಿಯ ಪ್ರಕಾರ ಮಗಳನ್ನು ಮದುವೆ ಮಾಡಿಕೊಡುವ ಹಕ್ಕು ಹೆತ್ತವರಿಗಿದೆ...’ಎಂದೂ ಅದು ತೀರ್ಪು ನೀಡುತ್ತದೆ. ಇಲ್ಲಿ ಕಾಡುವ ಪ್ರಶ್ನೆ ಏನೆಂದರೆ, ಹಾದಿಯಾಳ ಸ್ಥಾನದಲ್ಲಿ ಓರ್ವ ಗಂಡು ಇರುತ್ತಿದ್ದರೆ ವಿಚಾರಣಾ ಪ್ರಕ್ರಿಯೆಯ ಸ್ವರೂಪ ಹೇಗಿರುತ್ತಿತ್ತು? ಅವನನ್ನು ಹೆತ್ತವರ ಸುಪರ್ದಿಗೆ ಕೊಡಲಾಗುತ್ತಿತ್ತೆ? ಆತನ ವಿವಾಹವನ್ನು ರದ್ದುಪಡಿಸಲಾಗುತ್ತಿತ್ತೆ? ಆತನ ವಿವಾಹದ ಹೊಣೆಗಾರಿಕೆ ಹೆತ್ತವರದ್ದು ಎಂಬ ಸಮರ್ಥನೆ ಲಭಿಸುತ್ತಿತ್ತೆ? ಅಂದಹಾಗೆ, ಪ್ರೌಢರಾದ ಹೆಣ್ಣು ಮತ್ತು ಗಂಡು ತಮ್ಮಗಿಷ್ಟವಾದ ಧರ್ಮವನ್ನು ಸ್ವೀಕರಿಸುವುದು ಮತ್ತು ತಮಗಿಷ್ಟವಾದವರನ್ನು ವರಿಸುವುದನ್ನು ಈ ಸಮಾಜ ಹೇಗೆ ಪರಿಗಣಿಸಬೇಕು? ಒಂದುಕಡೆ, ಮರ್ಯಾದೆಗೇಡು ಹತ್ಯೆ ನಡೆಯುತ್ತಿದೆ. ಕುಟುಂಬ, ಜಾತಿ, ಸಮಾಜದ ಮರ್ಯಾದೆಯೇ ಅದರ ಕೇಂದ್ರ ಬಿಂದು. ಅದನ್ನು ತೀರ್ಮಾನಿಸುವುದು ಪುರುಷರೇ ತುಂಬಿಕೊಂಡಿರುವ ಖಾಪ್ ಪಂಚಾಯತ್. ಅಲ್ಲೂ ಹೆಣ್ಣೇ ಬಲಿಪಶು. ಪದ್ಮಾವತಿ ಪ್ರಕರಣದಲ್ಲಿ ವಿಜೃಂಬಿಸುತ್ತಿರುವುದೂ ಪುರುಷರೇ. ಹಾದಿಯಾಳ ಪ್ರಕರಣದಲ್ಲಿ ‘ಹೆಣ್ಣಿನ ಮೇಲಿನ ಹೆತ್ತವರ ಹಕ್ಕು ಆಕೆಯ ವಿವಾಹದವರೆಗಿದೆ...’ ಎಂಬರ್ಥದಲ್ಲಿ ತೀರ್ಪು ನೀಡಿದ ಹೈಕೋರ್ಟಿನ ನ್ಯಾಯಾಧೀಶರಿಬ್ಬರೂ ಪುರುಷರೇ. ಇದು ಅನುದ್ದೇಶಿತವೇ ಆಗಿರಬಹುದು. ಆದರೂ ಕೆಲವು ಪ್ರಶ್ನೆಗಳಿಗಂತೂ ನಾವು ಉತ್ತರಗಳನ್ನು ಹುಡುಕಲೇಬೇಕು. ಹೆಣ್ಣಿನ ಮೇಲಿನ ಕಾಳಜಿಯ ನೆಪದಲ್ಲಿ ಹೆಣ್ಣನ್ನು ಪುರುಷ ವಿಚಾರಧಾರೆಯು ಆಪೋಶನ ತೆಗೆದುಕೊಳ್ಳುತ್ತಿದೆಯೇ? ಪುರಾತನ ಕಾಲದಲ್ಲಿ ಹೆಣ್ಣು ಹೇಗೆ ದುರ್ಬಲತೆಯ ಸಂಕೇತವೋ ಹಾಗೆಯೇ ಈ 21ನೇ ಶತಮಾನದಲ್ಲೂ ಹೆಣ್ಣು ದುರ್ಬಲಳೇ ಆಗಿರುವುದೇಕೆ? ಇದು ನಿಜಕ್ಕೂ ಅವಳ ಸ್ಥಿತಿಯೋ ಅಥವಾ ಪುರುಷ ಪ್ರಧಾನ ಸಮಾಜವು ಬಲವಂತದಿಂದ ಆಕೆಯ ಮೇಲೆ ಹೇರಿದ ಸ್ಥಿತಿಯೋ? ಒಂದು ಕಡೆ, ಮಹಿಳಾ ಹಕ್ಕು, ಸ್ವಾತಂತ್ರ್ಯ, ಸಮಾನತೆ... ಇತ್ಯಾದಿಗಳ ಕುರಿತಂತೆ ನ್ಯಾಯಾಲಯವೂ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಕರ್ಣಾನಂದಕರ ಹೇಳಿಕೆಗಳು ಹೊರ ಬೀಳುತ್ತಿವೆ. ಇನ್ನೊಂದೆಡೆ, ಪ್ರೌಢ ಹೆಣ್ಣನ್ನು ಚಂಚಲೆಯೆಂದೋ ನಿರ್ಧಾರ ತಳೆಯುವ ಸಾಮರ್ಥ್ಯ ಇಲ್ಲದವಳೆಂದೋ ಹೇಳಿ ಅದುಮಲಾಗುತ್ತದೆ. ಪದ್ಮಿನಿಯ ವಿಚಾರವಾಗಿ ಬೀದಿಯಲ್ಲಿರುವುದು ಮಹಿಳೆಯರಲ್ಲ, ಪುರುಷರೇ. ಹಾದಿಯಾಳ ಪ್ರಕರಣವನ್ನು ಲವ್ ಜಿಹಾದ್ ಆಗಿ ಪರಿವರ್ತಿಸಿ ಗದ್ದಲ ಎಬ್ಬಿಸುತ್ತಿರುವುದೂ ಪುರು ಷರೇ. ಪುರಾತನ ಕಾಲದ ಪುರುಷ ಪ್ರಧಾನ ಮನಸ್ಥಿತಿಯು ಆಧುನಿಕ ಕಾಲದಲ್ಲಿ ಹೀಗೆ ವೇಷ ಬದಲಿಸಿ ಅಸ್ತಿತ್ವ ಪಡಕೊಳ್ಳುತ್ತಿದೆಯೇ? ಜೊತೆಗೆ, 1829 ಡಿಸೆಂಬರ್ 8 ರಂದು ನಿಷೇಧಕ್ಕೊಳಗಾದ ಸತಿ ಪದ್ಧತಿಯ ಬಗ್ಗೆ ಹೆಮ್ಮೆಪಟ್ಟುಕೊಳ್ಳುವ ವಿಚಾರಧಾರೆಯೊಂದು ಈಗಲೂ ಅಸ್ತಿತ್ವದಲ್ಲಿದೆಯೇ? ಪದ್ಮಾವತಿಯನ್ನು `ರಾಷ್ಟ್ರ ಮಾತಾ ಪದ್ಮಾವತಿ' ಎಂದು ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ ಕರೆದಿರುವುದರಲ್ಲಿ ಸತಿ ಸಹಗಮನದ ಆರಾಧನೆಯೂ ಇದೆಯಲ್ಲವೇ? ‘ಯಾಕೆ ಹೆಣ್ಣೇ ಸತಿ ಹೋಗಬೇಕು, ಪುರುಷ ಯಾಕೆ ಸತಿ ಹೋಗಬಾರದು’ ಎಂಬ ಪ್ರಶ್ನೆ ಎತ್ತಬೇಕಾದ ಕಡೆ, ಸತಿಯನ್ನೇ ವೈಭವೀಕರಿಸುವ ಮತ್ತು ಇನ್ನೋರ್ವ ಹೆಣ್ಣಿನ (ದೀಪಿಕಾ ಪಡುಕೋಣೆ) ಮೂಗು ಕೊಯ್ಯುವ, ತಲೆ ಕತ್ತರಿಸುವ ಹೇಳಿಕೆಗಳು ಬರುತ್ತವಲ್ಲ, ಏನಿದರ ಅರ್ಥ? ಹಾದಿಯ ಎತ್ತುವ ಪ್ರಶ್ನೆಯೂ ಬಹುತೇಕ ಇದರ ಸುತ್ತಲೇ ಇದೆ. ಆಕೆ ಯಾವ ಕ್ರಿಮಿನಲ್ ಕಾರ್ಯದಲ್ಲೂ ಭಾಗಿಯಾಗಿಲ್ಲ. ಸಂವಿಧಾನ ಒದಗಿಸಿರುವ ವೈಯಕ್ತಿಕ ಹಕ್ಕನ್ನು ಚಲಾಯಿಸಿದ್ದಾಳೆ ಎಂದ ಮಾತ್ರಕ್ಕೇ ಆಕೆಯನ್ನು ಕಟಕಟೆಯಲ್ಲಿ ನಿಲ್ಲಿಸಿ ಒಂದೂವರೆ ಗಂಟೆಗಳ ಕಾಲ ಆಕೆಯ ಪರ, ವಿರುದ್ಧ ಮತ್ತು ಆಕೆ ಇಷ್ಟಪಟ್ಟ ಯುವಕನ ಬಗ್ಗೆ ವಾದಗಳನ್ನು ಆಲಿಸುವಂತೆ ಸುಪ್ರೀಮ್ ಕೋರ್ಟ್ ಆಕೆಯನ್ನು ಬಲವಂತ ಪಡಿಸಿದುದು ಎಷ್ಟು ಸರಿ? ಆಕೆಯ ಮೇಲೆ ಯಾವ ಆರೋಪವೂ ಇಲ್ಲ. ಪ್ರೌಢೆ ಹೆಣ್ಣು ಮಗಳೊಬ್ಬಳು ತನಗಿಷ್ಟ ಬಂದ ಧರ್ಮವನ್ನು ಸ್ವೀಕರಿಸುವುದು ಮತ್ತು ತನಗಿಷ್ಟ ಬಂದವರನ್ನು ವಿವಾಹವಾಗುವುದು ನ್ಯಾಯಿಕ ಭಾಷೆಯಲ್ಲೂ ಅಪರಾಧವಲ್ಲ. ಹೀಗಿದ್ದರೂ ಆಕೆಯನ್ನು ಪೊಲೀಸು ಕಾವಲಿನಲ್ಲಿ ದಿಗ್ಬಂಧನದಲ್ಲಿಟ್ಟುದುದು ಮತ್ತು ದೆಹಲಿವರೆಗೆ ಕೊಂಡೊಯ್ದು ಕೋರ್ಟಿನಲ್ಲಿ ಹಾಜರುಗೊಳಿಸಿದುದನ್ನು ಹೇಗೆಂದು ವ್ಯಾಖ್ಯಾನಿಸಬೇಕು? ಅಷ್ಟಕ್ಕೂ,
ರಾಣಾ ಮತ್ತು ಖಿಲ್ಜಿಯ ನಡುವೆ 13ನೇ ಶತಮಾನದಲ್ಲಿ ನಡೆದ ಯುದ್ಧದ ಐತಿಹಾಸಿಕ ವಿವರಗಳಲ್ಲಿ ಇರದ ಪದ್ಮಿನಿಯನ್ನು, 21ನೇ ಶತಮಾನದ ಹಾದಿಯಳಿಗೆ ಹೋಲಿಸುವಾಗ ಏನನಿಸುತ್ತದೆ? `ಪೊಲೀಸರ ತನಿಖೆಯಲ್ಲಿ ಲವ್ ಜಿಹಾದ್ ಪ್ರಕರಣಗಳು ಪತ್ತೆಯಾಗಿಲ್ಲ’ ಎಂದು ಸು. ಕೋರ್ಟಿನಲ್ಲಿ ಕೇರಳ ಸರಕಾರವು ಕಳೆದ ಅಕ್ಟೋಬರ್ ನಲ್ಲಿ ಅಫಿದವಿತ್ ಸಲ್ಲಿಸಿದ್ದರೂ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ತನಿಖಿಸುವಂತೆ ಸುಪ್ರೀಮ್ ಕೋರ್ಟ್ ರಾಷ್ಟ್ರೀಯ ತನಿಖಾ ದಳಕ್ಕೆ (NIO) ಆದೇಶಿಸಿರುವುದು ಇಲ್ಲದ ಪದ್ಮಿನಿಯನ್ನು ಹುಡುಕಲು ಹೇಳಿದಂತೆ ಆಗಬಹುದೇ? ಮಲಿಕ್ ಮುಹಮ್ಮದ್ ಜಾಯಿಸಿಯ ಕಾವ್ಯದಲ್ಲಿ ಹುಟ್ಟಿಕೊಂಡವಳು ಪದ್ಮಿನಿಯಾದರೆ ರಾಜಕೀಯ ಹಿತಸಕ್ತಿಗಾಗಿ ನಿರ್ದಿಷ್ಟ ರಾಜಕೀಯ ಪಕ್ಷ ಮತ್ತು ಅದರ ಪರಿವಾರದಿಂದ ಸೃಷ್ಟಿಯಾಗಿರುವುದೇ ಲವ್ ಜಿಹಾದ್. ಇಲ್ಲದ ಪದ್ಮಿನಿಯ ನೆಪದಲ್ಲಿ ಹೆಣ್ಣಿನ ಮೇಲೆ ದಾಳಿ ಎಸಗುವ ಬೆದರಿಕೆ ಒಡ್ಡಿದವರೇ ಹಾದಿಯ ಪ್ರಕರಣವನ್ನು ಲವ್ ಜಿಹಾದ್ ಗೊಳಿಸುವಲ್ಲೂ ಮುಂಚೂಣಿಯಲ್ಲಿದ್ದಾರೆ. ಬಾಹ್ಯ ನೋಟಕ್ಕೆ ಹೆಣ್ಣಿನ ಮೇಲಿನ ಕಾಳಜಿಯಂತೆ ಈ ಎಲ್ಲ ಬೆಳವಣಿಗೆಗಳು ಕಂಡು ಬಂದರೂ ಆಳದಲ್ಲಿ ಇದು ಹೆಣ್ಣನ್ನು ಬಂಧಿಸಿಡುವ ಪುರುಷ ಪ್ರಧಾನ ಮನಸ್ಥಿತಿಯ ಇನ್ನೊಂದು ರೂಪದಂತೆ ಕಾಣಿಸುತ್ತಿದೆ. ಆಯ್ಕೆ ಮಾಡುವ ಸಾಮರ್ಥ್ಯ ಹೆಣ್ಣಿಗಿಲ್ಲ.. ಎಂದು ಸಾರುವುದೇ ಈ ಎಲ್ಲವುಗಳ ಒಟ್ಟು ಸಾರಾಂಶ.
ಮನಸ್ಥಿತಿ ಪುರಾತನ ಕಾಲದ್ದೇ. ಪಾತ್ರಗಳು ಮಾತ್ರ ಬೇರೆ.
No comments:
Post a Comment