Wednesday, October 30, 2019

ಉಸ್ತಾದರು ಬಟ್ಟೆ ಹಾಸಿದ್ದಾರೆ, ಸಮುದಾಯ ಭಿಕ್ಷೆ ಹಾಕುತ್ತಿದೆ...



1. Redirecting money from the Gulf.
2. ಬೇಡುವ ಸ್ಥಿತಿ ಬರದಿರಲಿ ಎಂದು ಅಲ್ಲಾಹನಲ್ಲಿ ಬೇಡಿದ ಖತೀಬರು ಮಸೀದಿಯಲ್ಲಿ ಬೇಡಲು ಕುಳಿತಾಗ ಕರುಳು ಹಿಂಡಿದಂತಾಯಿತು...
ಕಳೆದವಾರ ನನ್ನ ಆಸಕ್ತಿಯನ್ನು ಕೆರಳಿಸಿದ ಎರಡು ಬರಹಗಳ ಶೀರ್ಷಿಕೆಗಳಿವು. ಈ ಎರಡೂ ಬರಹಗಳ ವಸ್ತು, ವಿಶ್ಲೇಷಣೆ, ನಿರೂಪಣಾ ಶೈಲಿ, ಭಾಷೆ ಮತ್ತು ಪದಬಳಕೆ.. ಎಲ್ಲವೂ ಬೇರೆ ಬೇರೆ. ಆದರೆ  ಗುರಿ ಮಾತ್ರ ಒಂದೇ- ಅದು ಮುಸ್ಲಿಮ್ ಸಮುದಾಯ. ಕಳಕಳಿಯೂ ಅದುವೇ. ಮುಸ್ಲಿಮ್ ಸಮುದಾಯದ ಬಗ್ಗೆ ಕಳಕಳಿ ವ್ಯಕ್ತಪಡಿಸುವ ಎರಡು ಬೇರೆ ಬೇರೆ ಬರಹಗಳು ಎಂಬ ಸಾಮಾನ್ಯ ಭಾವದ  ಆಚೆ ನಿಂತು ಚರ್ಚಿಸಲೇಬೇಕಾದ ವಿಷಯಗಳು ಆ ಎರಡು ಬರಹಗಳಲ್ಲಿದ್ದುವು.
 Redirecting money from the Gulf.- ಅಕ್ಟೋಬರ್ 14ರ ದ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ಬರಹ ಇದು. ದ ಹಿಂದೂ ಪತ್ರಿಕೆಯ ಮಾಜಿ ಸಹಸಂಪಾದಕರಾಗಿದ್ದ ಮತ್ತು  ಈಗ ಸ್ವತಂತ್ರ ಪತ್ರಕರ್ತರಾಗಿ ದುಡಿಯುತ್ತಿರುವ ಕೆ.ಪಿ.ಎಂ. ಬಶೀರ್ ಅವರು ಇದನ್ನು ಬರೆದಿದ್ದಾರೆ. (ಅಕ್ಟೋಬರ್ 18ರ ವಾರ್ತಾಭಾರತಿ ಪತ್ರಿಕೆಯು ‘ಕೊಲ್ಲಿ ರಾಷ್ಟ್ರಗಳಿಂದ ಬರುವ ಹಣ ಎಲ್ಲಿ  ಹೂಡಿಕೆಯಾಗಬೇಕು’ ಎಂಬ ಶೀರ್ಷಿಕೆಯಲ್ಲಿ ಈ ಲೇಖನವನ್ನು ಮರು ಮುದ್ರಿಸಿದೆ). ಇಡೀ ಲೇಖನದ ಕೇಂದ್ರ ಬಿಂದು- ಕೇರಳದ ಮುಸ್ಲಿಮರು. ಅದರಲ್ಲಿರುವ ಒಂದು ಪ್ಯಾರಾ ಹೀಗಿದೆ:
“ಕೇರಳದ ಮುಸ್ಲಿಮರಲ್ಲಿ ಇನ್ನೊಂದು ತಲೆಮಾರಿನ ಕೊನೆಯ ವರೆಗೂ ಉಳಿಯುವಷ್ಟು ಕಾರುಗಳಿವೆ. ಬಂಗಲೆಗಳಿವೆ ಮತ್ತು ಚಿನ್ನಾಭರಣಗಳಿವೆ. ಆದರೆ ಉದ್ಯೋಗಗಳಿಲ್ಲ. ಕೇರಳದಲ್ಲೇ ಇರುವ ಯುವಕರಿಗೂ ಉದ್ಯೋಗಗಳಿಲ್ಲ. ಹಾಗೆಯೇ ಗಲ್ಫ್ ರಾಷ್ಟ್ರಗಳಿಂದ ದಿಢೀರನೆ ಉದ್ಯೋಗ ಕಳೆದುಕೊಂಡು ಬರುವವರಿಗೂ ಉದ್ಯೋಗಗಳಿಲ್ಲ. ಅನಿವಾಸಿ ಕೇರಳೀಯರು ಕಳೆದ ಎರಡು ದಶಕಗಳಲ್ಲಿ ತಾವು  ತಮ್ಮ ರಾಜ್ಯಕ್ಕೆ ಕಳುಹಿಸಿದ್ದ ಭಾರೀ ಮೊತ್ತದಿಂದ ಕೇವಲ ಶೇಕಡ ಒಂದರಷ್ಟನ್ನು ಉದ್ಯೋಗ ಸೃಷ್ಟಿಸುವ ವ್ಯಾಪಾರ ಮತ್ತು ಉದ್ದಿಮೆಗಳಲ್ಲಿ ಹೂಡಿಕೆ ಮಾಡುತ್ತಿದ್ದರೂ ಕೇರಳದ ಮುಂದಿನ ತಲೆಮಾರಿಗೆ  ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗಕ್ಕಾಗಿ ಪರದಾಡುವ ಸ್ಥಿತಿ ಬರುತ್ತಿರಲಿಲ್ಲ...”
ಇನ್ನೊಂದು ಬರಹ- ಮಿತ್ರ ಹನೀಫ್ ಪುತ್ತೂರು ಅವರದ್ದು. ಅವರ ಬರಹದಿಂದ ಆರಿಸಿದ ಒಂದು ತುಂಡು ಬರಹ ಹೀಗಿದೆ:
“ಕಳೆದ ಶುಕ್ರವಾರ ಜುಮಾ ನಮಾಜ್ ಮುಗಿದ ಬಳಿಕ ಮಸೀದಿಯ ಇಮಾಮರು ಹೀಗೆ ಪ್ರಕಟಣೆ ಹೊರಡಿಸಿದರು- ‘ಮಸೀದಿಯ ಬಾಗಿಲ ಬಳಿ ಉಸ್ತಾದರೊಬ್ಬರು (ಖತೀಬರು) ಬಟ್ಟೆ ಹಾಸಿ  ಕುಳಿತುಕೊಂಡಿದ್ದಾರೆ. ಅವರಿಗೆ ಮೂರು ಹೆಣ್ಣು ಮಕ್ಕಳು. ನಿಮ್ಮ ಕೈಲಾದ ನೆರವು ನೀಡಿ’. ಸಾಮಾನ್ಯವಾಗಿ, ‘ಬೇಡುವ ಸ್ಥಿತಿ ಯಾರಿಗೂ ನೀಡದಿರು ದೇವಾ’ ಎಂದು ಖತೀಬರು ಪ್ರಾರ್ಥಿಸುವುದು ರೂಢಿ.  ಹೀಗಿರುತ್ತಾ, ಹಾಗೆ ಪ್ರಾರ್ಥಿಸುವ ಖತೀಬರೇ ಬಾಗಿಲ ಬಳಿ ಬಟ್ಟೆ ಹಾಸಿ ಬೇಡಲು ಕುಳಿತುದಕ್ಕೆ ಕಾರಣ ಏನು?”
ಭಾರತದ ಮಟ್ಟಿಗೆ ಕೇರಳ ಒಂದು ಅಚ್ಚರಿ. ಹಲವು ಪ್ರಥಮಗಳನ್ನು ತನ್ನದಾಗಿಸಿಕೊಂಡಿರುವ ರಾಜ್ಯ ಇದು. ಒಟ್ಟು 3.5 ಕೋಟಿ ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು ಶೇ. 56, ಮುಸ್ಲಿಮರ ಪಾಲು ಶೇ.  25 ಮತ್ತು ಕ್ರೈಸ್ತರದ್ದು ಶೇ. 19. ಭಾರತದ ಉಳಿದ ಭಾಗಗಳಲ್ಲಿರುವ ಜನಸಾಂದ್ರತೆಗೆ ಹೋಲಿಸಿದರೆ ಕೇರಳದ ಜನಸಾಂದ್ರತೆ 3 ಪಟ್ಟು ಹೆಚ್ಚು. ಪ್ರತಿ ಚದರ ಮೈಲಿಗೆ ಜನಸಾಂದ್ರತೆಯ ಪ್ರಮಾಣ 2,200  ಅಥವಾ ಪ್ರತಿ ಚದರ ಕಿಲೋಮೀಟರ್ ಗೆ ಜನಸಾಂದ್ರತೆಯ ಮಟ್ಟ 860. ದೇಶದ ಇನ್ನಾವ ಕಡೆಯೂ ಈ ಮಟ್ಟದ ಜನದಟ್ಟಣೆಯಿಲ್ಲ. ಭಾರತದ ರಾಜ್ಯಗಳ ಪೈಕಿ ಅತಿ ಸಣ್ಣ ರಾಜ್ಯಗಳಲ್ಲಿ ಒಂದಾಗಿರುವ  ಕೇರಳವು ದೇಶದ ಜಿಡಿಪಿಗೆ ಅತಿ ಮಹತ್ವದ ಕೊಡುಗೆಯನ್ನು ನೀಡುತ್ತಿದೆ. ಭಾರತದ ಒಟ್ಟು ಮಾನವ ಅಭಿವೃದ್ಧಿ ಸೂಚ್ಯಂಕವು ಏನಿದೆಯೋ ಅದಕ್ಕಿಂತ ಕೇರಳದ ಮಾನವ ಅಭಿವೃದ್ಧಿ ಸೂಚ್ಯಂಕವು ಬಹಳ  ಮುಂದಿದೆ. ಅದರ ಪ್ರಮಾಣ 0.79. ಕೇರಳದ ಸಾಕ್ಷರತೆಯ ಪ್ರಮಾಣ ಶೇ. 98.9. ಕೇರಳಿಗರ ಸರಾಸರಿ ಆಯುಷ್ಯ 74 ವರ್ಷ. ಭಾರತದ ಇತರ ಭಾಗಗಳಿಗೆ ಹೋಲಿಸಿದರೆ ಇವೆಲ್ಲ ತುಂಬಾ ತುಂಬಾ  ಹೆಚ್ಚು. ಅಲ್ಲದೇ, ಇನ್ನೊಂದು ಅಚ್ಚರಿಯ ಅಂಕಿಅಂಶವೂ ಇದೆ. ಅದೇನೆಂದರೆ, ಬಡತನದ ಸೂಚ್ಯಂಕ. ಕೇರಳದ ಗ್ರಾಮೀಣ ಭಾಗದಲ್ಲಿ ಬಡತನದ ಸೂಚ್ಯಂಕವು 1970ರಲ್ಲಿ 59% ಇದ್ದರೆ 2010ರ ವೇಳೆಗೆ  ಇದು ಕೇವಲ 12%ಕ್ಕೆ ಇಳಿದಿತ್ತು. ವಿಶೇಷ ಏನೆಂದರೆ, 1970 ಮತ್ತು 2010ರ ನಡುವೆ ಕೇರಳದ ಬಡತನ ಸೂಚ್ಯಂಕದಲ್ಲಿ 47%ದಷ್ಟು ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದ್ದರೆ ಅದೇ ಅವಧಿಯಲ್ಲಿ ಭಾರತದ  ಇತರ ರಾಜ್ಯಗಳ ಗ್ರಾಮೀಣ ಭಾಗದಲ್ಲಿ ಬಡತನ ಸೂಚ್ಯಂಕದಲ್ಲಿ ಆದ ಇಳಿಕೆ ಕೇವಲ 29%. ಅಂದಹಾಗೆ,
ಭಾರತ ಮತ್ತು ಕೇರಳದ ನಡುವೆ ಆಯುಷ್ಯ, ಆರೋಗ್ಯ, ಸಾಕ್ಷರತೆ, ಆದಾಯ ಇತ್ಯಾದಿ ಇತ್ಯಾದಿಗಳಲ್ಲಿ ಭಾರೀ ಪ್ರಮಾಣದಲ್ಲಿ ಅಂತರ ಉಂಟಾಗಿರುವುದಕ್ಕೆ ಬಹಳ ಮುಖ್ಯ ಕಾರಣ ಏನೆಂದರೆ, ಗಲ್ಫ್  ಉದ್ಯೋಗ.
ಕೇರಳದ ಪ್ರತಿ ಹತ್ತರಲ್ಲಿ ಓರ್ವ ವ್ಯಕ್ತಿ ವಿದೇಶದಲ್ಲಿ ದುಡಿಯುತ್ತಿದ್ದಾರೆ ಎಂಬ ಅಂದಾಜಿದೆ. ಅಂದರೆ, ಸುಮಾರು 35 ಲಕ್ಷ ಮಂದಿ. ಇವರಲ್ಲಿ ಸುಮಾರು 90% ಮಂದಿಯೂ ಯುಎಇ, ಸೌದಿ ಅರೇಬಿಯಾ,  ಕುವೈತ್, ಕತರ್, ಒಮನ್, ಬಹ್ರೈನ್‍ಗಳಲ್ಲಿ ದುಡಿಯುತ್ತಿದ್ದಾರೆ. ಪ್ರತಿದಿನ ಸುಮಾರು 200 ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತ ಕೇರಳಕ್ಕೆ ಈ ರಾಷ್ಟ್ರಗಳಿಂದ ಹರಿದು ಬರುತ್ತಿದೆ ಎಂಬ ಲೆಕ್ಕಾಚಾರವೂ  ಇದೆ. ಕೇವಲ 2013ರಲ್ಲೇ 70 ಬಿಲಿಯನ್ ಡಾಲರ್ ನ ಷ್ಟು ಮೊತ್ತವನ್ನು ಗಲ್ಫ್ ಉದ್ಯೋಗಿಗಳು ಕೇರಳಕ್ಕೆ ಕಳುಹಿಸಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. 21ನೇ ಶತಮಾನದ ಆರಂಭದಿಂದ ಇಂದಿನವರೆಗೆ 60  ಟ್ರಿಲಿಯನ್ ರೂಪಾಯಿಯನ್ನು ಗಲ್ಫ್ ರಾಷ್ಟ್ರಗಳ ಉದ್ಯೋಗಿಗಳು ಕೇರಳಕ್ಕೆ ಕಳುಹಿಸಿಕೊಟ್ಟಿದ್ದಾರೆ. ಈ ಹಣದಲ್ಲಿ ಕೇರಳದ ಮುಸ್ಲಿಮರ ಪಾಲು ಬಹಳ ದೊಡ್ಡದು. ಕೇರಳದ ಒಟ್ಟು ಜನಸಂಖ್ಯೆಯ ಕಾಲಂಶದಷ್ಟಿರುವ ಈ ಮುಸ್ಲಿಮರು ಭಾರತದ ಇತರ ಭಾಗದಲ್ಲಿರುವ ಮುಸ್ಲಿಮರಿಗಿಂತ ಹೆಚ್ಚು ಶ್ರೀಮಂತರು, ಸ್ಥಿತಿವಂತರು, ಅಕ್ಷರಸ್ಥರು ಮತ್ತು ಆರೋಗ್ಯವಂತರು ಕೂಡ. ವಿಚಿತ್ರ ಏನೆಂದರೆ, ಅಮೇರಿಕ,  ಬ್ರಿಟನ್‍ನಂಥ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಕೇರಳೀಯರಲ್ಲಿ ಹೆಚ್ಚಿನವರು ಕೇರಳದಲ್ಲಿರುವ ತಮ್ಮ ಜಮೀನು-ಆಸ್ತಿಪಾಸ್ತಿಗಳನ್ನು ಮಾರಿ ಹಣವನ್ನು ವಿದೇಶಕ್ಕೆ ತರಿಸಿಕೊಂಡು ಅಲ್ಲೇ ಖಾಯಂ ಆಗಿ  ವಾಸಿಸಲು ಮುಂದಾಗುತ್ತಿರುವಾಗ ಗಲ್ಫ್ ನಲ್ಲಿ ದುಡಿಯುತ್ತಿರುವ ಕೇರಳಿಗರು ಮಾತ್ರ ಅಲ್ಲೇ ನೆಲೆಸುವುದನ್ನು ಇಷ್ಟಪಡದೇ ಹಣವನ್ನೆಲ್ಲ ಊರಿಗೆ ಕಳುಹಿಸುತ್ತಿದ್ದಾರೆ ಎಂಬುದು. ಪ್ರಶ್ನೆ ಇರುವುದೂ ಇಲ್ಲೇ.  ಹೀಗೆ ಕಳುಹಿಸಲಾಗುವ ಹಣ ಎಲ್ಲಿಗೆ ಹೋಗುತ್ತದೆ? ಯಾವುದಕ್ಕೆ ಬಳಕೆಯಾಗುತ್ತದೆ? ಕೇರಳದ ರಾಜರಸ್ತೆಗಳಲ್ಲಿ ಸಾಗುವಾಗ ರಸ್ತೆಯ ಎರಡೂ ಬದಿಗಳಲ್ಲಿ ಎದುರಾಗುವ ಬಂಗಲೆಗಳು, ಮಹಲುಗಳು,  ಚಿನ್ನದಂಗಡಿಗಳು, ಬಹುಮಹಡಿ ಕಟ್ಟಡಗಳು ಇತ್ಯಾದಿಗಳಿಗೆಲ್ಲ ಸುರಿದಿರುವ ಕೋಟಿಗಳೆಷ್ಟಿರಬಹುದು? ಈ ಪ್ರಶ್ನೆಯನ್ನು ಕರ್ನಾಟಕದ ಮುಸ್ಲಿಮರಿಗೆ ಸಂಬಂಧಿಸಿಯೂ ಕೇಳಬಹುದು. ಕರಾವಳಿ ಕರ್ನಾಟಕದ ಮುಸ್ಲಿಮರಿಗೆ ಸಂಬಂಧಿಸಿಯೂ ಕೇಳಬಹುದು. ಪ್ರತಿದಿನ 200 ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತ ಕೇರಳಕ್ಕೆ ಹರಿದು ಬರುತ್ತದೆಂದಾದರೆ, ಆ ಮೊತ್ತ ಕರಗುವುದೆಲ್ಲಿ? ಈ ಬೃಹತ್  ಮೊತ್ತವನ್ನು ನಿರ್ಮಾಣಾತ್ಮಕ ಕೆಲಸಗಳಲ್ಲಿ ಹೂಡಿಕೆಯಾಗುವಂತೆ ಮಾಡಲು ಮುಸ್ಲಿಮ್ ಸಮುದಾಯ ಯಾಕೆ ಯಾವ ನೀಲ ನಕ್ಷೆಯನ್ನೂ ರೂಪಿಸಿಲ್ಲ? ಒಂದುವೇಳೆ, ರೂಪಿಸಿರುತ್ತಿದ್ದರೆ, ಕೇರಳದ  ಯುವ ಸಮೂಹದ ಇಂದಿನ ನಿರುದ್ಯೋಗ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿತ್ತಲ್ಲವೇ? ಗಲ್ಫ್ ಅನ್ನುವುದು ಬಸಿದಷ್ಟೂ ಬತ್ತದ ಸಮುದ್ರ ಏನಲ್ಲ. ಒಂದಲ್ಲ ಒಂದು ದಿನ ಅಲ್ಲಿನ  ಉದ್ಯೋಗಕ್ಕೆ ಕತ್ತರಿ ಬೀಳುವ ಎಲ್ಲ ಸಾಧ್ಯತೆಗಳೂ ಇವೆ. ಅಂಥದ್ದೊಂದು ಸ್ಥಿತಿಯನ್ನು ಎದುರಿಸಲು ಕೇರಳವನ್ನು ಎಚ್ಚರಗೊಳಿಸುವುದು ಯಾರ ಹೊಣೆ? ಯಾಕೆ ಆ ಹೊಣೆಗಾರಿಕೆಯನ್ನು ಮುಸ್ಲಿಮ್  ಸಮುದಾಯದ ಯಾರೂ ಮುಖ್ಯ ಅಜೆಂಡಾವಾಗಿ ಎತ್ತಿಕೊಂಡಿಲ್ಲ? ಅಂದಹಾಗೆ,
ಗಲ್ಫ್ ನ ಉದ್ಯೋಗಕ್ಕೆ ಕತ್ತರಿ ಬಿದ್ದರೆ ಮಹಲುಗಳು ಯಾವ ಆದಾಯವನ್ನೂ ಕೊಡವು. ಐಶಾರಾಮಿ ಆಸ್ಪತ್ರೆಗಳಿಗೆ ವ್ಯಯಿಸಿದ ಹಣದಲ್ಲಿ ಒಂದು ನಯಾ ಪೈಸೆಯೂ ಮರಳಿ ಬಾರದು. ಕಾರುಗಳು,  ಬೈಕ್‍ಗಳು ಮತ್ತಿತರ ವಾಹನಗಳಿಂದ ಯಾವ ಹುಟ್ಟುವಳಿಯೂ ಆಗದು. ಅವೆಲ್ಲ ಉತ್ಪಾದನಾ ರಹಿತ ಹೂಡಿಕೆಗಳು. ಹೀಗೆ ಅನುತ್ಪಾದಕದ ಕ್ಷೇತ್ರದಲ್ಲಿ ಆಗುತ್ತಿರುವ ಭಾರೀ ಪ್ರಮಾಣದ ಹೂಡಿಕೆಯನ್ನು  ನಿಲ್ಲಿಸಿ ಅವುಗಳ ಬದಲು ಕೈಗಾರಿಕೆ, ಕೃಷಿ, ಉದ್ಯಮಗಳಲ್ಲಿ ಹೂಡಿಕೆಯಾಗುವಂತೆ ಮಾರ್ಗದರ್ಶನ ಮಾಡುವ ಪ್ರಯತ್ನಗಳು ಮುಸ್ಲಿಮ್ ಸಮುದಾಯದಿಂದ ವ್ಯವಸ್ಥಿತವಾಗಿ ನಡೆದಿರುತ್ತಿದ್ದರೆ ಗಲ್ಫ್ ನಲ್ಲಿ  ಉದ್ಯೋಗಕ್ಕೆ ಕತ್ತರಿ ಬಿದ್ದರೂ ಚಿಂತಿಸುವ ಅಗತ್ಯವಿರಲಿಲ್ಲ. ಯುವ ತಲೆಮಾರು ಗಲ್ಫ್ ನ ಕಡೆಗೆ ತಲೆ ಹಾಕಿ ಮಲಗಬೇಕಾದ ಅಗತ್ಯವೂ ಇರಲಿಲ್ಲ. ಹೀಗಾಗಿರುತ್ತಿದ್ದರೆ, ಕೇರಳೀಯರಿಗೆ ದೊಡ್ಡ ಪ್ರಮಾಣದಲ್ಲಿ  ಉದ್ಯೋಗ ಕೊಟ್ಟ ಸಂತೃಪ್ತಿಯೊಂದಿಗೆ ಗಲ್ಫ್ ನಿಂದ ಮರಳಿ ಬರುವ ಒಂದು ಅವಕಾಶ ಅನಿವಾಸಿ ಕೇರಳೀಯರಿಗೆ ಖಂಡಿತ ಇತ್ತು. ಈಗಲೂ ಇದೆ. ಆದರೆ,
ಇದು ಯಶಸ್ವಿಯಾಗಬೇಕಾದರೆ ಮುಸ್ಲಿಮ್ ಸಮುದಾಯ ನೀಲನಕ್ಷೆಯನ್ನು ತಕ್ಷಣ ರೂಪಿಸಬೇಕಿದೆ. ಮನೆ, ಕಾರು, ಆಸ್ಪತ್ರೆ ಗಳಿಗೆ ಅತಿಯಾಗಿ ಖರ್ಚು ಮಾಡದಂತೆ ಮತ್ತು ನಿರ್ಮಾಣಾತ್ಮಕ ಕೆಲಸಗಳಲ್ಲಿ  ಹೂಡಿಕೆ ಮಾಡುವಂತೆ ಜಾಗೃತಿ ಕೆಲಸಗಳನ್ನು ನಡೆಸಬೇಕಾಗಿದೆ. ಹೈನುಗಾರಿಕೆ, ಕೃಷಿ, ಕೈಗಾರಿಕೆ ಮತ್ತಿತರ ಕ್ಷೇತ್ರಗಳಲ್ಲಿ ಹೇಗೆಲ್ಲ ಹೂಡಿಕೆ ಮಾಡಬಹುದು ಮತ್ತು ಯಾವ ಕ್ಷೇತ್ರ ಹೂಡಿಕೆ ಸ್ನೇಹಿಯಾಗಿದೆ ಎಂಬ ಬಗ್ಗೆ ಗಲ್ಫ್ ಉದ್ಯೋಗಿಗಳಿಗೆ ಮನದಟ್ಟು ಮಾಡುವ ಅಭಿಯಾನಗಳು ನಡೆಯಬೇಕಾಗಿದೆ. ನಿಜವಾಗಿ,
ಕೇರಳಿಗರಿಗಷ್ಟೇ ಅಲ್ಲ, ಕೇರಳದ ಹೊರಗಿನ ಭಾರತೀಯರಿಗೂ ಉದ್ಯೋಗ ನೀಡುವಷ್ಟು ಬೃಹತ್ ಪ್ರಮಾಣದ ಉದ್ಯೋಗ ಸೃಷ್ಟಿಗೆ ಹೆಸರಾಗಬೇಕಿದ್ದ ಮತ್ತು ಹಲವು ಯಶಸ್ವಿ ಮುಸ್ಲಿಮ್ ಉದ್ಯಮಿಗಳನ್ನು  ದೇಶಕ್ಕೆ ಕೊಡುಗೆಯಾಗಿ ನೀಡಬೇಕಿದ್ದ ಕೇರಳವು ಈ ವಿಷಯದಲ್ಲಿ ದಯನೀಯ ವೈಫಲ್ಯ ಕಂಡಿರುವುದಕ್ಕೆ ಕಾರಣ- ಕೇವಲ ಗಲ್ಫ್ ಉದ್ಯೋಗಿಗಳಷ್ಟೇ ಅಲ್ಲ, ಅವರಿಗೆ ಸೂಕ್ತ ಮಾರ್ಗದರ್ಶನ ಮಾಡದ  ಮತ್ತು ನಿರ್ಮಾಣಾತ್ಮಕ ಸಲಹೆಗಳನ್ನು ನೀಡುವಲ್ಲಿ ವಿಫಲವಾದ ಮುಸ್ಲಿಮ್ ಸಮುದಾಯದ ಸಂಘ-ಸಂಸ್ಥೆಗಳೂ ಅಷ್ಟೇ ಕಾರಣ. ಅಷ್ಟಕ್ಕೂ,
ಈ ಬಗೆಯ ವೈಫಲ್ಯ ಕೇವಲ ಗಲ್ಫ್ ಉದ್ಯೋಗಿಗಳಿಗೆ ಸಂಬಂಧಿಸಿ ಮಾತ್ರ ಇರುವುದಲ್ಲ. ಕೇರಳ-ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಇರುವ ಮದ್ರಸ-ದರ್ಸ್ ಅಥವಾ ಮುಸ್ಲಿಮ್ ಧಾರ್ಮಿಕ ಶಿಕ್ಷಣ  ಕೇಂದ್ರಗಳೂ ದೊಡ್ಡ ಸಂಖ್ಯೆಯಲ್ಲಿ ಇಂಥ ಜನರ ಗುಂಪನ್ನು ಸಮಾಜಕ್ಕೆ ಅರ್ಪಿಸಿರುವುದನ್ನೂ ಇಷ್ಟೇ ಪ್ರಾಂಜಲ ಮನಸ್ಸಿನಿಂದ ನಾವು ಒಪ್ಪಿಕೊಳ್ಳಬೇಕಾಗಿದೆ. ಅಲ್ಲಿಂದ ಪಾರಂಗತರಾಗಿ ಬಂದವರು ಮಸೀದಿ-ಮದ್ರಸದ ಹೊರತು ಇನ್ನಾವ ಕ್ಷೇತ್ರಕ್ಕೂ ಸಲ್ಲದವರಾಗಿ ಮಾರ್ಪಟ್ಟು ಬಿಟ್ಟರು. ಅವರು ಉದ್ಯಮಿಗಳಾಗಲಿಲ್ಲ. ಸರಕಾರಿ ಉದ್ಯೋಗಿಗಳಾಗಲಿಲ್ಲ. ಖಾಸಗಿ ಕ್ಷೇತ್ರದ ಉದ್ಯೋಗಕ್ಕೆ ಬೇಕಾದ ಅರ್ಹತೆಗಳಿರಲಿಲ್ಲ. ಅರಬಿ ಭಾಷೆಯ ಹೊರತಾಗಿ ಇತರ ಭಾಷೆಗಳ ಮೇಲೆ ಹಿಡಿತ ಸಾಧಿಸುವ ಶಿಕ್ಷಣ ಲಭಿಸಲಿಲ್ಲ. ಸಾಹಿತಿಗಳಾಗಲಿಲ್ಲ. ವಿಜ್ಞಾನಿಗಳೂ ಇಂಜಿನಿಯರ್ ಗಳೂ ಆಗಲಿಲ್ಲ. ‘ಅವರು ಉಸ್ತಾದರೂ ಹೌದು, ವಿಜ್ಞಾನಿಯೂ ಹೌದು; ಅವರು ಉಸ್ತಾದರೂ ಹೌದು, ಯಶಸ್ವಿ ಉದ್ಯಮಿಯೂ ಹೌದು; ಅವರು ಉಸ್ತಾದರೂ ಹೌದು, ಇಂಜಿನಿಯರೂ ಹೌದು; ಅವರು ಉಸ್ತಾದರೂ ಹೌದು, ಶಿಕ್ಷಣ ತಜ್ಞರೂ ಹೌದು, ಸಾಹಿತಿಯೂ ಹೌದು; ಐಪಿಎಸ್, ಐಎಎಸ್ ಕೂಡಾ ಹೌದು..’ ಹೀಗೆ ಹೇಳಬಹುದಾದ ಯಾವ ವಾತಾವರಣವೂ ನಿರ್ಮಾಣವಾಗಲಿಲ್ಲ. ಮುಸ್ಲಿಮ್ ಧಾರ್ಮಿಕ ಶಿಕ್ಷಣ ಕೇಂದ್ರಗಳು (ದರ್ಸ್-ಮದ್ರಸ) ಬರೇ ಮಸೀದಿ-ಮದ್ರಸವನ್ನು ನೋಡಿಕೊಳ್ಳುವ ಜನರ ಗುಂಪನ್ನು ಉತ್ಪಾದಿಸಬಲ್ಲವೇ ಹೊರತು ನಿರ್ಮಾಣಾತ್ಮಕ ಕ್ಷೇತ್ರಕ್ಕೆ ಅಲ್ಲಿನ ಕೊಡುಗೆ ಶೂನ್ಯ ಅನ್ನುವ ಸ್ಥಿತಿ ನಿರ್ಮಾಣವಾಯಿತು. ಇದರಿಂದಾಗಿ ಅವರು ಕಲಿಸುವ ಮದ್ರಸ ಶಿಕ್ಷಣಗಳು ಜಡವಾದುವು. ಶಾಲೆಗೆ ತೆರಳಿ ಸಂಜೆಯೋ ಬೆಳಿಗ್ಗೆಯೋ ಮದ್ರಸಕ್ಕೆ ಹೋಗುವ ಮಗುವಿನ ಪ್ರಶ್ನೆಗಳನ್ನು ಅವರು ಬಂಡಾಯದಂತೆ ಕಂಡರು. ಶಾಲೆಯಲ್ಲಿ ಆಧುನಿಕ ಶಿಕ್ಷಣವನ್ನು ಪಡೆದು ಮದ್ರಸಕ್ಕೆ ಬರುತ್ತಿರುವ ಮಗು ಮತ್ತು ಆ ಶಿಕ್ಷಣವನ್ನೇ ಪಡೆಯದ ಮದ್ರಸ ಅಧ್ಯಾಪಕರು- ಈ ಎರಡರ ಮುಖಾಮುಖಿಯು ಯಾವೆಲ್ಲ ಸಮಸ್ಯೆಗಳನ್ನು ಸೃಷ್ಟಿಸಬಹುದೋ ಅವೆಲ್ಲವನ್ನೂ ಸೃಷ್ಟಿಸಿತು. ಶಿಕ್ಷಣ ಕ್ಷೇತ್ರದಲ್ಲಿ ಲೌಕಿಕ ಮತ್ತು ಧಾರ್ಮಿಕ ಎಂಬ ವಿಭಜನೆಗೆ ಅದು ಕಾರಣವಾಗಿ, ಕೊನೆಗೆ ಚೇತನವಿಲ್ಲದ ಧಾರ್ಮಿಕ ಶಿಕ್ಷಣದ ಮೇಲೆ ಲೌಕಿಕ ಶಿಕ್ಷಣದ ಸವಾರಿಗೂ ಅದು ಕಾರಣವಾಯಿತು. ನಿಜವಾಗಿ,
ಹನೀಫ್ ಪುತ್ತೂರು ಎತ್ತಿದ ಪ್ರಶ್ನೆಗೆ ಬಹುಶಃ ಇಲ್ಲೆಲ್ಲೋ ಉತ್ತರ ಇರಬೇಕು. ಹನೀಫರು ಉಲ್ಲೇಖಿಸಿದ ಆ ಖತೀಬರು ಮಸೀದಿಯ ಬಾಗಿಲಲ್ಲಿ ಬಟ್ಟೆ ಹಾಸಿರುವುದಕ್ಕೆ ಕಾರಣ ಅವರಲ್ಲ. ಮುಸ್ಲಿಮ್ ಸಮುದಾಯದ ಅನುತ್ಪಾದಕ ಶೈಕ್ಷಣಿಕ ನೀತಿಯೇ ಇಲ್ಲಿ ಬಹುದೊಡ್ಡ ಅಪರಾಧಿ. ಖತೀಬರು ಅದರ ಉತ್ಪನ್ನ ಅಷ್ಟೇ. ಹಾಗಂತ,
ಇಂದಿನ ಸ್ಥಿತಿ ಹಾಗಿಲ್ಲ. ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವನ್ನು ಉನ್ನತ ಮಟ್ಟದಲ್ಲಿ ಪಡೆದ ಹಾಗೂ ಮಸೀದಿ-ಮದ್ರಸಗಳ ಹೊರತಾಗಿ ಇತರ ಕ್ಷೇತ್ರಗಳಲ್ಲೂ ಯಶಸ್ವಿಯಾಗಿ ತೊಡಗಿಸಿಕೊಂಡ ದೊಡ್ಡ ಸಂಖ್ಯೆಯ ವಿದ್ವಾಂಸರಿದ್ದಾರೆ. ಭಾಷಣ-ಬರಹಗಳ ಮೂಲಕ ಅವರು ಸಮುದಾಯವನ್ನು ಎಚ್ಚರಿಸುತ್ತಿದ್ದಾರೆ. ಇವರಿಗೆ ಅಭಿನಂದನೆಗಳು. ಮುಸ್ಲಿಮ್ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಇವರು ಮಾರ್ಗದರ್ಶನ ಮಾಡಲಿ. ನೀಲನಕಾಶೆ ರೂಪಿಸಲಿ. ಬೇಡುವ ಖತೀಬರು ಮತ್ತು ಅನುತ್ಪಾದಕ ಹಣವಂತರು ನಿರ್ಮಾಣವಾಗದಂತೆ ನೋಡಿಕೊಳ್ಳಲಿ.

No comments:

Post a Comment