NRC (ರಾಷ್ಟ್ರೀಯ ಪೌರತ್ವ ನೋಂದಣಿ)ಯ ಕುರಿತಂತೆ ಅಸಂಖ್ಯ ಮಂದಿಯಲ್ಲಿ ಗೊಂದಲವಿದೆ. ಹಾಗಂತ, ಈ ಗೊಂದಲ ಶೂನ್ಯದಿಂದ ಹುಟ್ಟಿಕೊಂಡದ್ದಲ್ಲ. ಈ ಗೊಂದಲಕ್ಕೆ ಒಂದಕ್ಕಿಂತ ಹೆಚ್ಚು ಕಾರಣಗಳೂ ಇವೆ.
1. ಅಸ್ಸಾಮ್‍ನಿಂದ ಕೇಳಿ ಬರುತ್ತಿರುವ ಸುದ್ದಿಗಳು. ದೇಶ ದಲ್ಲಿ ಸದ್ಯ NRC ಜಾರಿಯಲ್ಲಿರುವುದು ಅಸ್ಸಾಮ್‍ನಲ್ಲಿ ಮಾತ್ರ. 2019 ಆಗಸ್ಟ್ 1ರಂದು ಬಿಡುಗಡೆಗೊಂಡ NRC ಅಂತಿಮ ಕರಡು ಪಟ್ಟಿಯಲ್ಲಿ 19,06,857 ಮಂದಿಯನ್ನು ಭಾರತೀಯರಲ್ಲ ಎಂದು ಘೋಷಿಸಲಾಗಿದೆ. ಈ ಪಟ್ಟಿಯ ಬಿಡುಗಡೆಗಿಂತ ಮೊದಲು ಮಾಧ್ಯಮಗಳಲ್ಲಿ ಪ್ರತಿದಿನವೆಂಬಂತೆ ಪ್ರಕಟವಾಗುತ್ತಿದ್ದ ಅಸ್ಸಾಮ್ ನಾಗರಿಕರ ಗೋಳಿನ ಸುದ್ದಿಗಳಿಗೂ ಕೂಡ ಈ ಗೊಂದಲದಲ್ಲಿ ಪಾತ್ರ ಇದೆ. ಭಾರತೀಯ ಸೇನೆಯಲ್ಲಿ ದುಡಿದವರು, ಮಾಜಿ ರಾಷ್ಟ್ರಪತಿಗಳ ಮೊಮ್ಮಕ್ಕಳು ಸಹಿತ ಅನೇಕ ಚಿರಪರಿಚಿತರು ತಮ್ಮ ನಾಗರಿಕತ್ವವನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂಬ ವರದಿಗಳು ಜನಸಾಮಾನ್ಯರಲ್ಲಿ ಸಹಜ ಆತಂಕವನ್ನು ಹುಟ್ಟು ಹಾಕಿದೆ. ತಮ್ಮನ್ನು ಭಾರತೀಯರೆಂದು ಸಾಬೀತು ಪಡಿಸಲು ಏನೆಲ್ಲ ದಾಖಲೆಗಳನ್ನು ಮಂಡಿಸಬೇಕು ಮತ್ತು ಈ ದಾಖಲೆಗಳಲ್ಲಿ ಸ್ಪೆಲ್ಲಿಂಗ್ (ಪದ) ವ್ಯತ್ಯಾಸವಿದ್ದರೆ ಅದು ತಮ್ಮನ್ನು ಅಭಾರತೀಯ ರೆಂದು ಕರೆದು ಹೊರಹಾಕುವುದಕ್ಕೆ ಆಧಾರವಾಗುತ್ತದೋ ಎಂಬುದೂ ಈ ಆತಂಕದಲ್ಲಿ ಸೇರಿಕೊಂಡಿದೆ. ಉದಾಹರಣೆಗೆ ಜನನ ಸರ್ಟಿಫಿಕೇಟ್‍ನಲ್ಲಿ ಮುಹಮ್ಮದ್ ಎಂಬ ಹೆಸರನ್ನು Mohammad ಎಂದು ದಾಖಲಿಸಿದ್ದು, ಶಾಲಾ ಸರ್ಟಿಫಿಕೇಟ್‍ನಲ್ಲಿ Mahammad ಎಂದು ದಾಖಲಿಸಿದ್ದರೆ Mo ಮತ್ತು Ma ಗಳ ಈ ವ್ಯತ್ಯಾಸವು ಭಾರತೀಯ ಮತ್ತು ಅಭಾರತೀಯಗೊಳಿಸುವುದಕ್ಕೆ ಕಾರಣ ಆಗಬಲ್ಲುದೋ ಅನ್ನುವ ಪ್ರಶ್ನೆ ಇದು. ಅಸ್ಸಾಮ್‍ನಲ್ಲಿ ನಾಗರಿಕರ ದಾಖಲೆಗಳನ್ನು ಪರಿಶೀಲಿಸಿ ಅವರು ಭಾರತೀಯರೋ ವಿದೇಶಿಗಳೋ ಎಂದು ತೀರ್ಮಾನಿಸಲು ನೇಮಕವಾಗಿರುವ ವಿದೇಶಿ ನ್ಯಾಯ ಮಂಡಳಿಯು (FT) ಇಂಥ ವ್ಯತ್ಯಾಸಗಳನ್ನು ಗಂಭೀರವಾಗಿ ಪರಿಗಣಿಸಿವೆ ಅನ್ನುವ ಸುದ್ದಿಗಳಿಗೂ ಈ ಆತಂಕದಲ್ಲಿ ಪಾಲು ಇದೆ.
2. NRC ಯನ್ನು ದೇಶದಾದ್ಯಂತ ಜಾರಿಗೊಳಿಸುತ್ತೇವೆ ಎಂಬ ಬಿಜೆಪಿಯ ಘೋಷಣೆ. 2019 ಸೆಪ್ಟೆಂಬರ್ 18ರಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮತ್ತೊಮ್ಮೆ ಈ ಘೋಷಣೆಯನ್ನು ಮಾಡಿದ್ದಾರೆ. ಈ ಘೋಷಣೆಯ ತಕ್ಷಣದ ಪರಿಣಾಮವು ಪಶ್ಚಿಮ ಬಂಗಾಲದಲ್ಲಿ ಈಗಾಗಲೇ ವ್ಯಕ್ತವಾಗಿದೆ. ತಮ್ಮ ದಾಖಲೆಗಳನ್ನು ಪಡೆದುಕೊಳ್ಳಲು ಮತ್ತು ಸರಿಪಡಿಸಲು ಜನರು ನೋಂದಣಿ ಕೇಂದ್ರಗಳ ಮುಂದೆ ಸರತಿಯಲ್ಲಿ ನಿಂತಿದ್ದಾರೆ. ನಾಲ್ಕೈದು ಮಂದಿಯ ಸಾವೂ ಸಂಭವಿಸಿದೆ.
3. ಪೌರತ್ವ ತಿದ್ದುಪಡಿ ಮಸೂದೆ (CAB). ಈ ಮಸೂದೆಯ ಪ್ರಕಾರ ಧಾರ್ಮಿಕ ಹಿಂಸೆಗೆ ತುತ್ತಾಗಿ ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದ ಹಿಂದೂ, ಕ್ರೈಸ್ತ, ಬೌದ್ಧ, ಜೈನ, ಫಾರ್ಸಿ, ಸಿಕ್ಖ್ ಸಮುದಾಯದ ಜ ನರಿಗೆ ಭಾರತೀಯ ಪೌರತ್ವವನ್ನು ನೀಡಲಾಗುವುದು. ಆದರೆ ಈ ಅವಕಾಶ ಮುಸ್ಲಿಮರಿಗೆ ಇಲ್ಲ. ಈ ಮೇಲಿನ ರಾಷ್ಟ್ರಗಳಿಂದ ಬಂದ ಮುಸ್ಲಿಮೇತರರು 5 ವರ್ಷಗಳ ಕಾಲ ಭಾರತದಲ್ಲಿ ನೆಲೆಸಿದ್ದರೆ ಅವರನ್ನು ಭಾರತೀಯ ನಾಗರಿಕರಾಗಿ ಪರಿಗಣಿಸಲಾಗುವುದು. ಹೀಗೆ ಪರಿಗಣಿಸುವುದಕ್ಕೆ ದಾಖಲೆ ಪತ್ರಗಳ ಅಗತ್ಯವೂ ಇಲ್ಲ. 2019 ಸೆಪ್ಟೆಂಬರ್ 9ರಂದು ಅಸ್ಸಾಮ್‍ನ ಗುವಾಹಟಿಯಲ್ಲಿ ನಡೆದ ಈಶಾನ್ಯ ರಾಜ್ಯಗಳ ಪ್ರಜಾತಾಂತ್ರಿಕ ಒಕ್ಕೂಟ (NEDA)ದ 4ನೇ ಸಭೆಯಲ್ಲಿ ಅಮಿತ್ ಶಾ ಅವರು CABಯ ಜಾರಿಯ ಕುರಿತು ಮತ್ತೊಮ್ಮೆ ಘೋಷಣೆಯನ್ನು ಮಾಡಿದ್ದಾರೆ. ಅಂದಹಾಗೆ, 2016 ಜುಲೈ 15ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರಕಾರವು ಪೌರತ್ವ ತಿದ್ದು ಪಡಿ ಮಸೂದೆ(CAB)ಯ ಬಗ್ಗೆ ಪಾರ್ಲಿಮೆಂಟ್‍ನಲ್ಲಿ ಪ್ರಸ್ತಾಪ ಮಾಡಿತ್ತು. ಮಾತ್ರವಲ್ಲ, ಅದರ ಕರಡು ಪರಿಶೀಲನೆಗಾಗಿ ಬಿಜೆಪಿ ಸಂಸದ ರಾಜೇಂದ್ರ ಅಗರ್‍ವಾಲ್ ಅವರ ನೇತೃತ್ವದಲ್ಲಿ ಜಂಟಿ ಪಾರ್ಲಿಮೆಂಟ್ ಸಮಿತಿಯನ್ನು (PAC) ರಚಿಸಿತ್ತು. 2019 ಜನವರಿ 8ರಂದು ಈ ಪೌರತ್ವ ತಿದ್ದುಪಡಿ ಮಸೂದೆಯನ್ನು ಸರಕಾರ ಪಾರ್ಲಿಮೆಂಟ್‍ನಲ್ಲಿ ಮಂಡಿಸಿ ಮಂಜೂರೂ ಮಾಡಿಕೊಂಡಿತ್ತು. ಆದರೆ ರಾಜ್ಯಸಭೆಯಲ್ಲಿ ಅಗತ್ಯ ಬಹುಮತ ಇಲ್ಲ ದಿರುವುದರಿಂದ ಮಂಡಿಸಿರಲಿಲ್ಲ. ಈ ಕಾರಣದಿಂದಾಗಿ ಈ ಮಸೂದೆ ಸದ್ಯ ಅನೂರ್ಜಿತ ಸ್ಥಿತಿಯಲ್ಲಿದೆ.
ನಿಜವಾಗಿ, ಅಸ್ಸಾಮ್‍ನಲ್ಲಿ ಜಾರಿಯಲ್ಲಿರುವ NRC ಗೂ ದೇಶದಾದ್ಯಂತ ಜಾರಿಯಾಗಲಿರುವ NRIC ಗೂ ಕೆಲವು ಮೂಲ ಭೂತ ವ್ಯತ್ಯಾಸಗಳಿವೆ. ಅಸ್ಸಾಮ್‍ನಲ್ಲಿ ಜಾರಿಯಲ್ಲಿರುವ NRC ಯನ್ನು NRCA (ಅಸ್ಸಾಮ್ ರಾಷ್ಟ್ರೀಯ ಪೌರತ್ವ ನೋಂದಣಿ) ಅನ್ನುವುದೇ ಸೂಕ್ತ. ಯಾಕೆಂದರೆ, ಅಸ್ಸಾಮ್‍ನದ್ದು ಬಹುಸೂಕ್ಷ್ಮ ವಿಷಯ. ಅಲ್ಲಿನ ಪೌರತ್ವ ನೋಂದಣಿ ಪ್ರಕ್ರಿಯೆಗೂ ಅಲ್ಲಿನ ಭೌಗೋಳಿಕ, ಸಾಂಸ್ಕೃತಿಕ, ಸಾಮಾಜಿಕ ಸ್ಥಿತಿಗತಿಗೂ ನೇರ ಸಂಬಂಧ ಇದೆ. ತಮ್ಮ ಸಾಂಸ್ಕೃತಿಕ ಗುರುತು ಮತ್ತು ಅಸ್ಸಾಮಿ ಅನನ್ಯತೆಗೆ ಬಾಂಗ್ಲಾದೇಶಿ ನುಸುಳುಕೋರರಿಂದ ಹಾನಿ ಉಂಟಾಗಿದೆ ಎಂಬ ಭಾವನೆ ಅಸ್ಸಾಮ್‍ನ ಬುಡಕಟ್ಟು - ಮೂಲ ನಿವಾಸಿಗಳಲ್ಲಿ ಬಹು ಹಿಂದಿನಿಂದಲೇ ಇತ್ತು. ಈ ಹಿನ್ನೆಲೆಯಲ್ಲಿ ಬಂಗಾಳಿ ಭಾಷೆ ಮಾತಾಡುವ ಹಿಂದೂಗಳು ಮತ್ತು ಮುಸ್ಲಿಮರ ಮೇಲೆ ಬಾಂಗ್ಲಾ ನುಸುಳುಕೋರರು ಎಂಬ ಹಣೆಪಟ್ಟಿಯನ್ನು ವಿವೇಚನಾರಹಿತವಾಗಿ ಅಂಟಿಸಿ ಪದೇ ಪದೇ ಪೀಡಿಸಲಾಗುತ್ತಿತ್ತು. 1980ರ ದಶಕದಲ್ಲಿ ನೆಲ್ಲಿ ಎಂಬ ಪ್ರದೇಶದಲ್ಲಿ ಮುಸ್ಲಿಮರ ಮೇಲೆ ನಡೆಸಲಾದ ಸಾಮೂಹಿಕ ಹತ್ಯಾಕಾಂಡಕ್ಕೂ ಈ ಅಸಹನೆಗೂ ಸಂಬಂಧ ಇದೆ. ಅನಧಿಕೃತ ಮೂಲಗಳ ಪ್ರಕಾರ ಸುಮಾರು 10 ಸಾವಿರ ಮಂದಿಯನ್ನು ಭೀಕರವಾಗಿ ಹತ್ಯೆ ಮಾಡಲಾದ ಈ ಕೃತ್ಯದ ಹಿಂದೆ ತೀವ್ರ ಮುಸ್ಲಿಮ್ ದ್ವೇಷಿ ಅಪಪ್ರಚಾರದ ಕತೆಯಿದೆ. ನಿಜವಾಗಿ, ಅಸ್ಸಾಮ್‍ಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ದೊಡ್ಡಮಟ್ಟದಲ್ಲಿ ವಲಸೆ ನಡೆದಿದೆ ಅನ್ನುವುದು ಸುಳ್ಳಲ್ಲ. ಅಸ್ಸಾಮ್ ಎಂಬುದು ಗುಡ್ಡಗಾಡು ಪ್ರದೇಶ. ಅಲ್ಲಿನ ಬ್ರಹ್ಮಪುತ್ರ ನದಿಗೆ ದೇಶದ ಇತರ ನದಿಗಳಿಗಿಂತ ಭಿನ್ನವಾದ ಮುಖ ಇದೆ. ಪ್ರವಾಹಕ್ಕೆ ಕುಪ್ರಸಿದ್ಧಿಯನ್ನು ಪಡೆದಿರುವ ನದಿ ಇದು. ಆದ್ದರಿಂದಲೇ ಈ ನದಿಯನ್ನು ಅವಲಂಬಿಸಿಕೊಂಡು ಬದುಕುತ್ತಿರುವ ಅಸಂಖ್ಯಾತ ಮಂದಿ ಮನೆ ಮಾರುಗಳನ್ನು ಕಳಕೊಳ್ಳುವುದು ಸಾಮಾನ್ಯ. ಮಾತ್ರವಲ್ಲ, ಹಾಗೆ ಕಳಕೊಳ್ಳುವಾಗ ತಮ್ಮ ನಾಗರಿಕತ್ವಕ್ಕೆ ಪುರಾವೆ ಯಾಗಿರುವ ದಾಖಲೆ ಪತ್ರಗಳನ್ನು ಕಳಕೊಳ್ಳುವುದೂ ಸತ್ಯ. ಇವತ್ತು ವಿದೇಶಿಯರೆಂದು ಘೋಷಿತವಾದ 19 ಲಕ್ಷ ಮಂದಿಯಲ್ಲಿ ಇವರ ಸಂಖ್ಯೆ ಸಾಕಷ್ಟಿದೆ.
ಬರ್ಮಾದ ಭಾಗವಾಗಿದ್ದ ಅಸ್ಸಾಮ್ 1826ರಲ್ಲಿ ಯಾವಾಗ ಬ್ರಿಟಿಷ್ ಭಾರತದ ವಶವಾಯಿತೋ ಆಗಿನಿಂದಲೇ ಈ ಪ್ರದೇಶದಲ್ಲಿ ಬ್ರಿಟಿಷರು ಕೃಷಿಗೆ ಮಹತ್ವ ಕೊಟ್ಟರು. ಧಾರಾಳ ಪಾಳು ಭೂಮಿ ಇದ್ದ ಕಾರಣ ಅವರಿಗೆ ಅಸ್ಸಾಮ್ ಕೃಷಿಗೆ ಯೋಗ್ಯವಾಗಿ ಕಂಡಿತು. ಅವರಿಗೆ ದುಡಿಯಲು ಜನರ ಅಗತ್ಯ ಇತ್ತು. ಆಗ ಬ್ರಿಟಿಷರು ಭಾರತದ ಭಾಗವೇ ಆಗಿದ್ದ ಮತ್ತು ಅಸ್ಸಾಮ್‍ಗೆ ತಾಗಿಕೊಂಡಂತಿರುವ ಬಾಂಗ್ಲಾದಿಂದ ಜನರನ್ನು ಕರೆತಂದು ಕೃಷಿ ಕಾರ್ಯಕ್ಕೆ ಹಚ್ಚಿದರು. ಇನ್ನೊಂದು ಕಡೆ, ಗುಡ್ಡಗಾಡು ಪ್ರದೇ ಶವನ್ನು ಚಹಾ ಬೆಳೆಗೆ ಅನುಕೂಲಕರವಾಗಿ ಪರಿವರ್ತಿಸುವ ಯೋಜನೆ ಹಾಕಿಕೊಂಡರು. ಅದಕ್ಕಾಗಿ ಝಾರ್ಖಂಡ್, ಆಂಧ್ರಪ್ರದೇಶ, ತೆಲಂಗಾಣ, ಒರಿಸ್ಸಗಳಿಂದ ಆದಿವಾಸಿಗಳನ್ನು ಕರೆತಂದು ದುಡಿಸಿದರು. ಅಸ್ಸಾಮ್‍ನ ಜನಸಂಖ್ಯೆಯಲ್ಲಿ ಈ ವಲಸೆ ಒಂದು ಹಂತದ ಬದಲಾವಣೆಗೆ ಕಾರಣವಾಯಿತು. ಹಾಗಂತ, ಈ ಪ್ರಕ್ರಿಯೆ ಇಲ್ಲಿಗೇ ನಿಲ್ಲಲಿಲ್ಲ. ಬ್ರಿಟಿಷರಿಂದ ಭಾರತ ಸ್ವತಂತ್ರಗೊಂಡ ಬಳಿಕವೂ ಈ ವಲಸೆ ಪ್ರಕ್ರಿಯೆ ಮುಂದುವರಿಯಿತು. ಬಾಂಗ್ಲಾದೇಶ ಮತ್ತು ಪಾಕ್‍ನ ಜೊತೆ ಅಸ್ಸಾಮ್ ಗಡಿ ಹಂಚಿಕೊಂಡಿರುವುದರಿಂದ ಆ ಎರಡು ರಾಷ್ಟ್ರಗಳಲ್ಲಿ ನಡೆಯುವ ಪ್ರತಿ ಬೆಳವಣಿಗೆಯೂ ಅಸ್ಸಾಮ್‍ನ ಜನಸಂಖ್ಯೆಯ ಏರಿಕೆಯಲ್ಲಿ ಪಾತ್ರ ವಹಿಸತೊಡಗಿತು. 1950ರಲ್ಲಿ ಪೂರ್ವ ಪಾಕಿಸ್ತಾನದಿಂದ (ಈಗಿನ ಬಾಂಗ್ಲಾದೇಶ) ದೊಡ್ಡಮಟ್ಟದಲ್ಲಿ ಜನರು ನಿರಾಶ್ರಿತರಾಗಿ ಅಸ್ಸಾಮ್ ಪ್ರವೇಶಿಸಿದರು. 1965ರಲ್ಲಿ ಭಾರತ-ಪಾಕ್‍ಗಳ ನಡುವೆ ಯುದ್ಧ ನಡೆದಾಗ ಬಂಗಾಳಿ ಭಾಷೆ ಯನ್ನಾಡುವ ಹಿಂದೂಗಳು ಬಹುದೊಡ್ಡ ಸಂಖ್ಯೆಯಲ್ಲಿ ಅಸ್ಸಾಮ್‍ಗೆ ಕಾಲಿಟ್ಟರು. ಆ ಬಳಿಕದ ವಲಸೆ 1971ರಲ್ಲಿ ನಡೆಯಿತು. ಪ್ರತ್ಯೇಕ ಬಾಂಗ್ಲಾದೇಶದ ರಚನೆಯ ವೇಳೆ ಬಂಗಾಳಿ ಮಾತನ್ನಾಡುವ ಹಿಂದೂ ಮತ್ತು ಮುಸ್ಲಿಮರು ಭಾರೀ ಸಂಖ್ಯೆಯಲ್ಲಿ ಭಾರತ ಪ್ರವೇಶಿಸಿದರು. 1965 ಮತ್ತು 71ರ ನಡುವೆ ಸುಮಾರು 75 ಲಕ್ಷದಿಂದ 1 ಕೋಟಿಯಷ್ಟು ಮಂದಿ ಭಾರತಕ್ಕೆ ಬಂದಿದ್ದಾರೆ ಅನ್ನುವ ಅಂದಾಜಿದೆ. ಈ ಭಾರೀ ಪ್ರಮಾಣದ ವಲಸೆಯು ಅಸ್ಸಾಮ್‍ನ ಬುಡಕಟ್ಟು ಮತ್ತು ಮೂಲ ನಿವಾಸಿಗಳ ಬದುಕಿನ ಮೇಲೆ ಭಾರೀ ಪರಿಣಾಮವನ್ನು ಬೀರಿತು. ಈ ವಲಸೆಯ ವಿರುದ್ಧ ಅಸ್ಸಾಮ್ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಪ್ರಾರಂಭವಾಯಿತು. 1979-1985ರ ನಡುವೆ ಆಲ್ ಅಸ್ಸಾಮ್ ವಿದ್ಯಾರ್ಥಿ ಸಂಘ ಮತ್ತು ಅಸ್ಸಾಮ್ ಗಣ ಪರಿಷತ್‍ಗಳು ವಲಸೆ ವಿರೋಧಿ ಹೋರಾಟದಲ್ಲಿ ತೊಡಗಿಕೊಂಡವು. ವಲಸೆಗಾರ ಹಿಂದೂ-ಮುಸ್ಲಿಮ್ ಇಬ್ಬರೂ ಈ ಹೋರಾಟದ ಗುರಿಗಳಾಗಿದ್ದರು. ಕೊನೆಗೆ 1985 ಆಗಸ್ಟ್ 14ರಂದು ಆಲ್ ಅಸ್ಸಾಮ್ ಸ್ಟೂಡೆಂಟ್ ಯೂನಿಯನ್, ಅಸ್ಸಾಮ್ ಗಣ ಪರಿಷತ್, ಅಸ್ಸಾಮ್ ರಾಜ್ಯ ಸರಕಾರ ಮತ್ತು ಪ್ರಧಾನಿ ರಾಜೀವ್ ಗಾಂಧಿಯವರ ಉಪಸ್ಥಿತಿಯಲ್ಲಿ ಅಸ್ಸಾಮ್ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಮೂಲ ನಿವಾಸಿಗಳ ಅನನ್ಯತೆಯನ್ನು ಕಾಪಾಡುವುದು, ಅಕ್ರಮ ವಲಸೆಯನ್ನು ತಡೆ ಯುವುದು ಮತ್ತು 1971 ಮಾರ್ಚ್ 24ಕ್ಕಿಂತ ಮೊದಲು ಯಾರು ಅಸ್ಸಾಮ್‍ನಲ್ಲಿ ನೆಲೆಸಿದ್ದರೋ ಅವರನ್ನು ಭಾರತೀಯರೆಂದು ಪರಿಗಣಿಸಿ ಆ ಬಳಿಕ ಬಂದವರನ್ನು ಅಕ್ರಮ ವಲಸಿಗರೆಂದು ಬಗೆದು ಹೊರ ಹಾಕುವುದು- ಈ ಒಪ್ಪಂದದ ಸಾರಾಂಶವಾಗಿತ್ತು. (1971 ಮಾರ್ಚ್ 26ರಂದು ಬಾಂಗ್ಲಾದೇಶದ ರಚನೆಯಾಯಿತು.) ಆದರೆ ಈ ಒಪ್ಪಂದವನ್ನು ಜಾರಿಗೊಳಿಸಲು ಯಾವ ಸರಕಾರವೂ ಪ್ರಾಮಾಣಿಕವಾಗಿ ಮುಂದಾಗಲಿಲ್ಲ. ಇದನ್ನು ಪ್ರಶ್ನಿಸಿ 2012ರಲ್ಲಿ ಸುಪ್ರೀಮ್ ಕೋರ್ಟ್‍ನಲ್ಲಿ ದಾವೆಯನ್ನು ಹೂಡಲಾಯಿತು. ಇದನ್ನು ಪರಿಗಣಿಸಿದ ಸುಪ್ರೀಮ್ ಕೋರ್ಟ್ ತಕ್ಷಣ ಈ ಒಪ್ಪಂದವನ್ನು ಜಾರಿಗೊಳಿಸುವಂತೆ ಆದೇಶಿಸಿತು. ಅಲ್ಲದೇ, 2016ರಲ್ಲಿ ಈ ಕೆಲಸ ಪೂರ್ಣಗೊಳ್ಳಬೇಕೆಂದೂ ಗಡು ವಿಧಿಸಿತು. ಮಾತ್ರವಲ್ಲ, 1971ರ ಮತದಾರರ ಪಟ್ಟಿಯಲ್ಲಿ ಹೆಸರಿರುವ ದಾಖಲೆ ಅಥವಾ LIC ಸರ್ಟಿಫಿಕೇಟ್, ಭೂಮಿ ಪಹಣಿ ಪತ್ರ ಇತ್ಯಾದಿ ದಾಖಲೆಗಳಲ್ಲಿ ಯಾವುದನ್ನಾದರೂ ಅಧಿಕಾರಿಗಳ ಮುಂದೆ ಅಸ್ಸಾಮಿಗರು ಹಾಜರುಪಡಿಸಬೇಕಿತ್ತು. ಅಷ್ಟಕ್ಕೂ,
ಕಳೆದ ಅಸ್ಸಾಮ್ ವಿಧಾನಸಭಾ ಚುನಾವಣೆಯ ವೇಳೆ, ಅಕ್ರಮ ಬಾಂಗ್ಲಾದೇಶಿ ವಲಸಿಗರ ಬಗ್ಗೆ ಬಿಜೆಪಿ ದೊಡ್ಡ ಧ್ವನಿಯಲ್ಲಿ ಮಾತಾಡಿತ್ತು. ಒಂದು ಕೋಟಿಗಿಂತಲೂ ಅಧಿಕವಿರುವ ಈ ವಲಸಿಗರನ್ನು ಹೊರದಬ್ಬುವುದಾಗಿ ಅದು ಹೇಳಿಕೊಂಡಿತ್ತು. ಆದರೆ ಓಖಅಯ ಮೊದಲ ಕರಡು ಪಟ್ಟಿ ಬಿಡುಗಡೆಗೊಂಡಾಗ ಬಿಜೆಪಿ ಪ್ರಚಾರ ಮಾಡಿರುವ ಒಂದು ಕೋಟಿ ಬಲುದೊಡ್ಡ ಸುಳ್ಳು ಅನ್ನುವುದು ಸ್ಪಷ್ಟಗೊಂಡಿತು. 40 ಲಕ್ಷ ಅಕ್ರಮ ವಲಸಿಗರಿದ್ದಾರೆ ಎಂದು ಮೊದಲ ಕರಡು ಪ್ರತಿ ಹೇಳಿದರೆ ಇದೀಗ ಅವರ ಸಂಖ್ಯೆ 19 ಲಕ್ಷಕ್ಕೆ ಇಳಿದಿದೆ. ಈ ಇಳಿಕೆ ಇನ್ನೂ ಮುಂದು ವರಿದು 10 ಲಕ್ಷದಲ್ಲಿ ನಿಲ್ಲಬಹುದು ಎಂಬ ಲೆಕ್ಕಾಚಾರವಿದೆ. ಭಾರತದ ಪ್ರತಿ ನಾಗರಿಕನಿಗೂ 15 ಲಕ್ಪ ರೂಪಾಯಿಯನ್ನು ಹಂಚುವಷ್ಟು ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರ ಕಪ್ಪು ಹಣವಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಮಾತು ಎಷ್ಟು ದೊಡ್ಡ ಸುಳ್ಳೋ ಅಂಥದ್ದೇ ಒಂದು ಸುಳ್ಳು ಒಂದು ಕೋಟಿ ಅಕ್ರಮ ಬಾಂಗ್ಲಾದೇಶಿ ವಲಸಿಗರು ಅನ್ನುವುದಾಗಿತ್ತು. ಇದೀಗ ಬಿಜೆಪಿ ಈ ಸುಳ್ಳಿನಿಂದ ಬಿಡಿಸಿಕೊಳ್ಳುವ ಯತ್ನದಲ್ಲಿದೆ. ಈಗ ಬಿಡುಗಡೆಗೊಂಡಿರುವ ಅಂತಿಮ ಕರಡು ಪಟ್ಟಿಯಲ್ಲಿರುವ 19 ಲಕ್ಷದಲ್ಲಿ ಕೇವಲ 7 ಲಕ್ಷ ದಷ್ಟು ಮಂದಿ ಮಾತ್ರ ಮುಸ್ಲಿಮರಿದ್ದಾರೆ ಮತ್ತು 12 ಲಕ್ಷದಷ್ಟು ಮಂದಿ ಹಿಂದೂಗಳಿದ್ದಾರೆ ಅನ್ನುವುದು ಬಿಜೆಪಿಯನ್ನು ಗಾಢ ನಿರಾಶೆಗೆ ತಳ್ಳಿದೆ. ‘NRC ಪಟ್ಟಿಯಲ್ಲಿರುವ 10ರಿಂದ 20% ಮಂದಿಯ ಹಿನ್ನೆಲೆಯನ್ನು ಮರು ಪರಿಶೀಲಿಸಬೇಕೆಂದು’ ಕೋರಿ ಜುಲೈಯಲ್ಲಿ ಕೇಂದ್ರ ಮತ್ತು ಅಸ್ಸಾಮ್‍ನ ಬಿಜೆಪಿ ಸರಕಾರಗಳು ಸುಪ್ರೀಮ್ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದು ಇದೇ ಆತಂಕದಿಂದ. ಆದರೆ, ಸುಪ್ರೀಮ್ ಈ ಮ ನವಿಯನ್ನು ತಿರಸ್ಕರಿಸಿತ್ತು. ಸುಪ್ರೀಮ್ ನೇಮಿಸಿರುವ ಅಸ್ಸಾಮ್ ಓಖಅ ಸಂಚಾಲಕ ಪ್ರತೀಕ್ ಹಜೇಲ ಅವರು ಇಂಥದ್ದೊಂದು ಮರು ಪರಿಶೀಲನೆಯ ಅಗತ್ಯವಿಲ್ಲ ಎಂದು ಕೋರ್ಟ್‍ಗೆ ತಿಳಿಸಿದ್ದರು. ಇದಕ್ಕಾಗಿ ಬಿಜೆಪಿಯು ಪ್ರತೀಕ್ ಹಜೇಲರನ್ನು ದೂಷಿಸಿತ್ತು. ಇದೀಗ ಈ ಇಡೀ ಪ್ರಕ್ರಿಯೆಗೆ ಬಿಜೆಪಿ ಹೊಸ ತಿರುವು ಕೊಡುವ ಪ್ರಯತ್ನದಲ್ಲಿದೆ. ಈಗಾಗಲೇ NRC ಅಂತಿಮ ಕರಡನ್ನು ರದ್ದಿ ಕಾಗದ ಎಂದು ಅದರ ನಾಯಕರು ಕರೆದಿದ್ದಾರೆ. ಇನ್ನೊಂದು ಕಡೆ, ಅಂತಿಮ ಕರಡು ಅಂತಿಮವಲ್ಲ, ಅದರಲ್ಲಿ ಹೆಸರಿಲ್ಲದವರು ಹೈಕೋರ್ಟ್ ಮತ್ತು ಸುಪ್ರೀಮ್‍ಗೂ ಹೋಗಬಹುದು ಮತ್ತು ಅಲ್ಲಿವರೆಗೂ ಪಟ್ಟಿಯಲ್ಲಿ ಹೆಸರಿಲ್ಲದವರ ಮೇಲೆ ಕ್ರಮ ಕೈಗೊಳ್ಳಲಾಗುವುದಿಲ್ಲ ಅನ್ನುವ ಸೂಚನೆಯನ್ನು ಬಿಜೆಪಿ ನೀಡತೊಡಗಿದೆ. NRC ಪಟ್ಟಿಯಲ್ಲಿ ಹೆಸರಿಲ್ಲದವರು ಹೈಕೋರ್ಟು-ಸುಪ್ರೀಮ್‍ಗೆ ಹೋಗುವುದೆಂದರೆ, ಅದೊಂದು ದೀರ್ಘ ಪ್ರಕ್ರಿಯೆ. ಆ ಪ್ರಕ್ರಿಯೆ ಮುಗಿಯುವವರೆಗೆ ಅವರು ಭಾರತೀಯರೇ ಆಗಿ ಇರುತ್ತಾರೆ. ಈ ತಂತ್ರವನ್ನು ಬಿಜೆಪಿ ಯಾಕೆ ಮುನ್ನೆಲೆಗೆ ತಂದಿದೆಯೆಂದರೆ, ಅದಕ್ಕಿಂತ ಮೊದಲು ಪೌರತ್ವ ತಿದ್ದುಪಡಿ ಮಸೂದೆ(CAB)ಯನ್ನು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮಂಜೂರುಗೊಳಿಸಿ ಮುಸ್ಲಿಮೇತರ ವಲಸಿಗರನ್ನು ರಕ್ಷಿಸಿಕೊಳ್ಳುವುದು. ಓಖಅ ಪಟ್ಟಿಯಲ್ಲಿ ಮುಸ್ಲಿಮರು ಮಾತ್ರ ಉಳಿದುಕೊಳ್ಳುವಂತೆ ನೋಡಿಕೊಳ್ಳುವುದು. ಅಂದಹಾಗೆ,
ಅಸ್ಸಾಮ್‍ನಲ್ಲಿ ಜಾರಿಯಲ್ಲಿರುವ ಓಖಅಗೆ ನಿರ್ದಿಷ್ಟ ಒಪ್ಪಂದವೊಂದರ ಹಿನ್ನೆಲೆಯಿದೆ. 1971 ಮಾರ್ಚ್ 24ರ ಒಳಗೆ ಅಸ್ಸಾಮ್ ನಲ್ಲಿ ನೆಲೆಸಿದ್ದ ಮತ್ತು ಮತದಾರರ ಪಟ್ಟಿಯಲ್ಲಿ ಹೆಸರಿದ್ದ ಎಲ್ಲರೂ ಭಾರತೀಯರು ಅನ್ನುವುದು ಈ ಹಿನ್ನೆಲೆ. ಇದೊಂದು ಗಡು. ಆದರೆ, NRC ಯನ್ನು ಭಾರತದಾದ್ಯಂತ ಜಾರಿಗೊಳಿಸುವಾಗ ಅದಕ್ಕೆ ಈ ಒಪ್ಪಂದ ಅನ್ವಯವಾಗುವುದಿಲ್ಲ. ಆದ್ದರಿಂದ ಅಸ್ಸಾಮ್ ಹೊರತುಪಡಿಸಿ ಭಾರತದಾದ್ಯಂತ ಜಾರಿಗೊಳ್ಳಲಿರುವ NRC ಯ ಸ್ವರೂಪದಲ್ಲಿ ಖಂಡಿತ ವ್ಯತ್ಯಾಸವಿದೆ. 2020 ಎಪ್ರಿಲ್‍ನಿಂದ 2020 ಸೆಪ್ಟೆಂಬರ್ 30ರೊಳಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR)ಯನ್ನು ಕೈಗೊಳ್ಳುವುದು ಮತ್ತು ಇದರ ಆಧಾರದಲ್ಲಿ ಭಾರತೀಯ ನಾಗರಿಕರ ರಾಷ್ಟ್ರೀಯ ನೋಂದಣಿ (NRIC)ಯನ್ನು ಜಾರಿ ಮಾಡುವುದು ಕೇಂದ್ರದ ಉದ್ದೇಶ ಎಂದು ಹೇಳಲಾಗಿದೆ. ಅಸ್ಸಾಮ್‍ನಲ್ಲಿರುವ NRC ಹೇಗೆಯೋ ಹಾಗೆಯೇ ಈ NRIC. NPR ಎಂಬುದು ಭಾರತದ ನಿವಾಸಿಗಳ ಮಾಹಿತಿ ಸಂಗ್ರಹವಾಗಿದ್ದು, ಇದರಲ್ಲಿ ಜನಸಂಖ್ಯಾ ಅಂಕಿ ಅಂಶಗಳು ಮತ್ತು ಬಯೋಮೆಟ್ರಿಕ್ ವಿವರಗಳು ಒಳಗೊಂಡಿರುತ್ತವೆ ಎನ್ನಲಾಗುತ್ತಿದೆ. ಇದು ದೇಶದ ಸಾಮಾನ್ಯ ನಿವಾಸಿಗಳ ಪಟ್ಟಿ. ಸಾಮಾನ್ಯ ದಾಖಲೆ ಪತ್ರಗಳು ಇದರ ನೋಂದಣಿಗೆ ಸಾಕಾಗುತ್ತದೆ. ಇದರ ಬಳಿಕ NRIC ಯನ್ನು ಜಾರಿ ಮಾಡಲು ಕೇಂದ್ರ ಸರಕಾರ ತೀರ್ಮಾನಿಸಿದೆ. ನಿಜವಾಗಿ,
ಬಿಜೆಪಿಯ ಉದ್ದೇಶ ವಲಸೆಗಾರರನ್ನು ಹೊರಗಟ್ಟುವುದಲ್ಲ, ವಲಸೆಗಾರ ಮುಸ್ಲಿಮರನ್ನು ಮಾತ್ರ ಹೊರಗಟ್ಟುವುದು. ಪೌರತ್ವ ತಿದ್ದುಪಡಿ ಮಸೂದೆ ಸ್ಪಷ್ಟಪಡಿಸುವುದು ಇದನ್ನೇ. NRC ಅಥವಾ NRIC ಯ ಅತಿ ದಾರುಣ ಮುಖ ಇದು. ಭಾರತೀಯರನ್ನು ಹಿಂದೂಗಳು ಮತ್ತು ಮುಸ್ಲಿಮರೆಂದು ವಿಭಜಿಸಿ ಮುಸ್ಲಿಮರನ್ನು ಶಂಕಿತರಂತೆ ಕಾಣುವ ಮತ್ತು ಅವರ ಬದುಕನ್ನು ಅಭದ್ರತೆಗೆ ನೂಕುವ ಈ ಕ್ರಮ ಅತ್ಯಂತ ಕೆಟ್ಟದು.
No comments:
Post a Comment