ಖಾಸಗಿ ನ್ಯೂಸ್ ಚಾನೆಲ್‍ಗಳು - 400
ದಿನಪತ್ರಿಕೆಗಳು - 1000
ರೇಡಿಯೋ ಸ್ಟೇಶನ್‍ಗಳು - 3000
ಈ ಮೇಲಿನ ಉಲ್ಲೇಖಕ್ಕೆ ಮುಖ್ಯ ಕಾರಣ- ಕಾಶ್ಮೀರ. 1984ರ ಅಕ್ಟೋಬರ್ ಕೊನೆಯಲ್ಲಿ ಒಂದು ಭೀಕರ ಘಟನೆ ನಡೆಯಿತು. ಆ ದಿನ ಬೆಳಿಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಜೀವ್ ಗಾಂಧಿಯವರು ಕೊಲ್ಕತ್ತಾದಲ್ಲಿದ್ದರು. ಅವರು ಪ್ರಯಾಣಿಸುತ್ತಿದ್ದ ಮರ್ಸಿಡಿಸ್ ಕಾರನ್ನು ದಿಢೀರ್ ಆಗಿ ತಡೆದು ನಿಲ್ಲಿಸಿದ ಪೊಲೀಸ್ ಜೀಪೊಂದು ಅವರ ಕಿವಿಗೆ ಆಘಾತಕಾರಿ ಸುದ್ದಿಯೊಂದನ್ನು ಮುಟ್ಟಿಸಿತು. ದೆಹಲಿಯ ನಿಮ್ಮ ಮನೆಯಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ತಾವು ಕೂಡಲೇ ದೆಹಲಿಗೆ ಹಿಂತಿರುಗಬೇಕೆಂಬುದು ಆ ಮಾಹಿತಿಯ ಒಟ್ಟು ಸಾರಾಂಶವಾಗಿತ್ತು. ಅವತ್ತು ಬೆಳಿಗ್ಗೆ ಟಿ.ವಿ. ಸಂದರ್ಶನಕ್ಕೆಂದು ತನ್ನ ಮನೆಯಿಂದ ಹೊರಟ ಪ್ರಧಾನಿ ಇಂದಿರಾ ಗಾಂಧಿಯವರನ್ನು ಅವರ ಅಂಗರಕ್ಷಕರೇ ವರಾಂಡದಲ್ಲಿ ಗುಂಡಿಟ್ಟು ಸಾಯಿಸಿದ್ದರು. ರಾಜೀವ್ ಗಾಂಧಿಯವರಿಗೆ ಪೊಲೀಸರ ಮೂಲಕ ಈ ಗುಂಡಿನ ದಾಳಿಯ ಮಾಹಿತಿ ಲಭ್ಯವಾಯಿತಾದರೂ ತಾಯಿಯ ಜೀವಕ್ಕೆ ಅಪಾಯ ಒದಗಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಇಂದಿನಂತೆ ಖಾಸಗಿ ಟಿ.ವಿ. ಚಾನೆಲ್‍ಗಳು ಮತ್ತು ಸಾಮಾಜಿಕ ಜಾಲತಾಣಗಳ ಸೌಲಭ್ಯ ಆ ಕಾಲದಲ್ಲಿ ಇಲ್ಲದೇ ಇದ್ದುದರಿಂದ ಮಾಹಿತಿಗಾಗಿ ರಾಜೀವ್ ಗಾಂಧಿಯವರು ರೇಡಿಯೋ ಸ್ಟೇಶನ್‍ಗಳನ್ನು ಅವಲಂಬಿಸುವುದು ಅನಿವಾರ್ಯವಾಗಿತ್ತು. ವಿಶೇಷ ಏನೆಂದರೆ, ರಾಜೀವ್ ಗಾಂಧಿಯವರು ಮಾಹಿತಿಗಾಗಿ ಆಶ್ರಯಿಸಿದ್ದು ಬಿಬಿಸಿ ರೇಡಿಯೋವನ್ನು. ತಾಯಿಯ ಮೇಲಾದ ಗುಂಡಿನ ದಾಳಿಯ ಮಾಹಿತಿ ತನಗೆ ಎಲ್ಲಿ ಲಭಿಸಿತ್ತೋ ಅಲ್ಲಿಂದ ಕೊಲ್ಕತ್ತಾಗೆ ತಕ್ಷಣ ಸಾಗಬೇಕಾದರೆ ಹೆಲಿಕಾಪ್ಟರ್ ನ ಅಗತ್ಯವಿತ್ತು. ಅದು ಬರುವವರೆಗೆ ರಾಜೀವ್ ಗಾಂಧಿಯವರು ಮಾಹಿತಿಗಾಗಿ ಬಿಬಿಸಿ ರೇಡಿಯೋವನ್ನು ಆಶ್ರಯಿಸಿದ್ದರು ಎಂದು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷರೂ ಮತ್ತು ಔಟ್‍ಲುಕ್ ಮ್ಯಾಗಸಿನ್‍ನ ಮಾಜಿ ಸಂಪಾದಕರೂ ಆದ ಕೃಷ್ಣ ಪ್ರಸಾದ್ ಅವರು ಇತ್ತೀಚೆಗೆ ಬರೆದುಕೊಂಡಿದ್ದರು.
ಪ್ರಶ್ನೆ ಹುಟ್ಟಿಕೊಳ್ಳುವುದೂ ಇಲ್ಲೇ. ಭಾರತೀಯ ರೇಡಿಯೋ ಸ್ಟೇಷನ್‍ಗಳು ಇದ್ದೂ ರಾಜೀವ್ ಗಾಂಧಿಯವರು ಬಿಬಿಸಿಯನ್ನು ಯಾಕಾಗಿ ಆಶ್ರಯಿಸಿಕೊಂಡರು? ಈ ಪ್ರಶ್ನೆ ಕ್ಷುಲ್ಲಕ ಅಲ್ಲ ಮತ್ತು ಪ್ರಚಲಿತ ಸಂದರ್ಭದಲ್ಲಂತೂ ಬಹಳ ಮಹತ್ವಪೂರ್ಣವಾದುದು. ಅಮ್ಮನ ಆಡಳಿತದಡಿಯಲ್ಲಿ ಪ್ರಸಾರವಾಗುತ್ತಿದ್ದ ರೇಡಿಯೋ ವಾರ್ತೆಗಳಿಗಿಂತ ಬ್ರಿಟಿಷ್ ರೇಡಿಯೋ ವಾರ್ತೆಗಳನ್ನು ಅವರು ವಿಶ್ವಾಸಾರ್ಹವಾಗಿ ಪರಿಗಣಿಸಲು ಕಾರಣವೇನು? ಅಮ್ಮನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದರೂ ಅದನ್ನು ಅಷ್ಟೇ ನೇರವಾಗಿ ಹೇಳುವ ಧೈರ್ಯವನ್ನು ಭಾರತೀಯ ರೇಡಿಯೋಗಳು ತೋರಲಾರವು ಎಂಬುದು ಇದಕ್ಕೆ ಕಾರಣವೇ? ಭಾರತೀಯ ರೇಡಿಯೋ ಏನಿದ್ದರೂ ಪ್ರಭುತ್ವದ ಮುಲಾಜಿಗೆ ಬಿದ್ದು ಸುದ್ದಿ ತಯಾರಿಸುತ್ತವೆ, ಬಿಬಿಸಿಗೆ ಈ ಮುಲಾಜಿನ ಅಗತ್ಯ ಇರುವುದಿಲ್ಲ ಎಂದು ಅವರು ಅಂದುಕೊಂಡಿರಬಹುದೇ? ಸತ್ಯ ಹೇಳುವ ಧೈರ್ಯವನ್ನು ಬಿಬಿಸಿಯಷ್ಟು ಭಾರತೀಯ ರೇಡಿಯೋಗಳು ತೋರಲಾರವು ಎಂದವರು ಅಂದುಕೊಂಡಿದ್ದರೇ?
ಭಾರತದಲ್ಲಿ ಮಾಧ್ಯಮ ಕ್ರಾಂತಿಗಿಂತ ಮೊದಲಿನ ಘಟನೆ ಇದು. 1991ರ ಮನ್‍ಮೋಹನೀಕರಣದ ಬಳಿಕ ಮಾಧ್ಯಮವೂ ಸೇರಿದಂತೆ ಒಟ್ಟು ವಾತಾವರಣದಲ್ಲೇ ವ್ಯಾಪಕ ಬದಲಾವಣೆಗಳಾದುವು. ಎಲ್ಲ ಕ್ಷೇತ್ರಗಳಿಗೂ ಖಾಸಗೀಕರಣ ದಾಳಿಯಿಟ್ಟಿತು. ಸರಕಾರಿ ಸ್ವಾಮ್ಯದಲ್ಲಿ ಸಡಿಲಿಕೆ ಉಂಟಾಯಿತು. ಇವತ್ತು ಖಾಸಗಿ ನ್ಯೂಸ್ ಚಾನೆಲ್‍ಗಳು ಕಣ್ಣು ದಣಿಯುವಷ್ಟು ಸುದ್ದಿಯನ್ನು ಕೊಡುತ್ತಿವೆ. ಪತ್ರಿಕೆಗಳಂತೂ ಓದಿ ಮುಗಿಸದಷ್ಟು ಸುದ್ದಿ ಭಾರ ಹೇರುತ್ತವೆ. ರೇಡಿಯೋ ಸ್ಟೇಷನ್‍ಗಳೂ ಪ್ರಭುತ್ವದಿಂದ ಬಿಡಿಸಿಕೊಂಡು ಸ್ವತಂತ್ರವಾಗಿ ಕಾರ್ಯಾಚರಿಸುತ್ತಿವೆ. ನಿಜವಾಗಿ, ಯಾವುದೇ ಕ್ಷೇತ್ರದಲ್ಲಿರುವ ಪೈಪೋಟಿಯು ಆ ಕ್ಷೇತ್ರವನ್ನು ಹೆಚ್ಚು ಜನಪರಗೊಳಿಸುತ್ತದೆ ಮತ್ತು ಹೆಚ್ಚು ವಿಶ್ವಾಸಯೋಗ್ಯವಾಗಿಸುತ್ತದೆ ಅನ್ನುವ ಸರ್ವ ಒಪ್ಪಿತ ಮಾತಿದೆ. ಪ್ರಸಾರ ಭಾರತಿಗೂ ಖಾಸಗಿ ಚಾನೆಲ್‍ಗೂ ನಡುವೆ ಇರುವ ಪ್ರಮುಖ ವ್ಯತ್ಯಾಸಗಳಲ್ಲಿ ಇದೂ ಒಂದು. ಆಲ್ ಇಂಡಿಯಾ ರೇಡಿಯೋ ಮತ್ತು ಖಾಸಗಿ ಎಫ್.ಎಂ.ಗಳನ್ನು ಬೇರ್ಪಡಿಸುವುದೂ ಈ ಖಾಸಗಿ-ಸರಕಾರಿ ಎಂಬ ಗೆರೆಗಳೇ. ಡಿ.ಡಿ.ಯಲ್ಲಿ ಪ್ರಸಾರವಾಗುವ ವಾರ್ತೆಗೂ ಖಾಸಗಿ ಚಾನೆಲ್‍ಗಳಲ್ಲಿ ಪ್ರಸಾರವಾಗುವ ವಾರ್ತೆಗೂ ಇರುವ ಅಂತರದಲ್ಲೂ ನಮಗೆ ಈ ವ್ಯತ್ಯಾಸವನ್ನು ಗುರುತಿಸಬಹುದು. ಪ್ರಧಾನಿ ಮೋದಿಯವರ ಭಾಷಣವನ್ನು ಪ್ರಸಾರ ಮಾಡದಿರುವುದಕ್ಕೆ ಇತ್ತೀಚೆಗೆ ತಮಿಳ್ನಾಡು ದೂರದರ್ಶನದ ಮುಖ್ಯಸ್ಥೆಯನ್ನು ವಜಾ ಮಾಡಿರುವ ಘಟನೆಯೂ ಇದನ್ನೇ ಸೂಚಿಸುತ್ತದೆ. ಪ್ರಭುತ್ವಕ್ಕೆ ಶರಣಾಗಿ ಸುದ್ದಿ ತಯಾರಿಸಬೇಕಾದ ಅನಿವಾರ್ಯತೆಯೊಂದು ಅಲ್ಲಿರುತ್ತದೆ. ಆದರೆ ಖಾಸಗಿ ಚಾನೆಲ್‍ಗಳು ಮತ್ತು ಪತ್ರಿಕೆಗಳ ಮಟ್ಟಿಗೆ ಈ ಅನಿವಾರ್ಯತೆ ಇಲ್ಲ. ಪ್ರತಿಪಕ್ಷವಾಗಿದ್ದುಕೊಂಡು ಸುದ್ದಿ ತಯಾರಿಸುವುದು ಮತ್ತು ಪ್ರಭುತ್ವವನ್ನೇ ಪ್ರಶ್ನೆ ಮಾಡುವುದು ಇಲ್ಲಿನ ಮುಖ್ಯ ಗುರಿಯಾಗಿರಬೇಕು. ದುರಂತ ಏನೆಂದರೆ, ರಾಜೀವ್ ಗಾಂಧಿಯವರು ವಿಶ್ವಾಸಾರ್ಹ ಸುದ್ದಿಗಾಗಿ ಹೇಗೆ ಬಿಬಿಸಿಯನ್ನು ಆಶ್ರಯಿಸಿದರೋ ಹಾಗೆಯೇ ಇವತ್ತು ವಿಶ್ವಾಸಾರ್ಹ ಸುದ್ದಿ-ವಾರ್ತೆಗಾಗಿ ಭಾರತೀಯರು ವಿದೇಶಿ ಮಾಧ್ಯಮಗಳನ್ನು ಅವಲಂಬಿಸುವ ಸ್ಥಿತಿಗೆ ತಲುಪಿದ್ದಾರೆ. ವಿಶೇಷವಾಗಿ ಕಾಶ್ಮೀರಕ್ಕೆ ಸಂಬಂಧಿಸಿ. ಆಗಸ್ಟ್ 5ರಂದು ಕಾಶ್ಮೀರದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿದ ಬಳಿಕದ ಕಾಶ್ಮೀರಿ ವಾತಾವರಣವನ್ನು ಭಾರತೀಯ ಮಾಧ್ಯಮಗಳು ಬಹುದೊಡ್ಡ ಸವಾಲಾಗಿ ಸ್ವೀಕರಿಸಬೇಕಿತ್ತು. ಅಂದ ಹಾಗೆ,
370ನೇ ವಿಧಿಯನ್ನು ರದ್ದುಗೊಳಿಸುವುದು ಇಲ್ಲವೇ ಬಿಡುವುದು ಪ್ರಭುತ್ವದ ಕೈಯಲ್ಲಿದೆ. ಅದು ಸರಿಯೋ ತಪ್ಪೋ ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ. ಆದರೆ, ಈ ಸರಿ-ತಪ್ಪುಗಳ ಆಚೆಗೆ ತಮ್ಮ ಕ್ಯಾಮರಾ ಮತ್ತು ಪೆನ್ನನ್ನು ದುಡಿಸಬೇಕಾದುದು ಮಾಧ್ಯಮದ ಕರ್ತವ್ಯ. ಮಾಧ್ಯಮ ಕ್ಷೇತ್ರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದುದನ್ನು ಸಮರ್ಥಿಸುವವರೂ ಇರಬಹುದು. ವಿರೋಧಿಸುವವರೂ ಇರಬಹುದು. ಈ ಭಿನ್ನ ಸ್ಥಿತಿ ಅಪರಾಧ ಅಲ್ಲ. ಅದನ್ನು ಹಾಗೆಯೇ ಇರಗೊಡಬೇಕಾದ ಅಗತ್ಯವೂ ಇದೆ. ಆದರೆ, 370ನೇ ವಿಧಿ ರದ್ಧತಿಯಿಂದ ಜನಸಾಮಾನ್ಯರ ಮೇಲಾದ ಪರಿಣಾಮ, ಅವರ ಪ್ರತಿಕ್ರಿಯೆಗಳು, ಈ ವಿಧಿ ರದ್ಧತಿಯನ್ನು ಜಾರಿಗೊಳಿಸುವುದಕ್ಕಾಗಿ ಪ್ರಭುತ್ವ ಎಸಗುವ ದಬ್ಬಾಳಿಕೆಗಳು, ನಾಗರಿಕರ ಸ್ವಾತಂತ್ರ್ಯ ಹರಣ.. ಇತ್ಯಾದಿ ಇತ್ಯಾದಿಗಳು ಈ ಭಿನ್ನಾಭಿಪ್ರಾಯಕ್ಕೆ ಬಲಿಯಾಗಬಾರದು. 370 ವಿಧಿ ರದ್ಧತಿಯ ಪರ ಇಲ್ಲವೇ ವಿರುದ್ಧ ಇರುವುದು ಬೇರೆ, ಈ ವಿಧಿ ರದ್ಧತಿಯನ್ನು ಜಾರಿಗೊಳಿಸುವ ಹೆಸರಲ್ಲಿ ಪ್ರಭುತ್ವದಿಂದ ಉಂಟಾಗುವ ಅನ್ಯಾಯಗಳನ್ನು ವರದಿ ಮಾಡದಿರುವುದು ಬೇರೆ. 370ನೇ ವಿಧಿ ರದ್ಧತಿಯನ್ನು ಬೆಂಬಲಿಸುತ್ತಲೇ ಅದರ ಹೆಸರಲ್ಲಾಗುವ ದೌರ್ಜನ್ಯವನ್ನು ಅಷ್ಟೇ ಪ್ರಬಲವಾಗಿ ಖಂಡಿಸುವುದಕ್ಕೂ ಮಾಧ್ಯಮ ಕ್ಷೇತ್ರಕ್ಕೆ ಸಾಧ್ಯವಾಗಬೇಕು. ಪ್ರಭುತ್ವವು ತನಗೆ ಶರಣಾಗಿ ವರದಿ ಮಾಡುವ ಜಿಹುಜೂರ್ ಮಾಧ್ಯಮವನ್ನು ಬಯಸುತ್ತದೆ. ಈ ವಿಷಯದಲ್ಲಿ ಕಾಂಗ್ರೆಸ್- ಬಿಜೆಪಿ ಎಂಬ ಭೇದವಿಲ್ಲ. ಆದರೆ ಮಾಧ್ಯಮ ಕ್ಷೇತ್ರ ಈ ಸ್ಥಿತಿಯನ್ನು ಮೀರಿ ನಿಲ್ಲಬೇಕು. ಕಾಶ್ಮೀರದಲ್ಲಿ ಏನಾಗುತ್ತಿದೆ ಅನ್ನುವುದನ್ನು ವೈಯಕ್ತಿಕ ಹಿತಾಸಕ್ತಿಯ ಹೊರಗಿಟ್ಟು ನೋಡಬೇಕು. ವಿಷಾದ ಏನೆಂದರೆ,
370ನೇ ವಿಧಿ ರದ್ಧತಿಯ ಬಳಿಕದ ಕಾಶ್ಮೀರವನ್ನು ನಮ್ಮ ಹೆಚ್ಚಿನ ಸುದ್ದಿ ಮಾಧ್ಯಮಗಳು ಅತ್ಯಂತ ಶಾಂತಚಿತ್ತತೆಯಿಂದ ಮತ್ತು ಎಲ್ಲವೂ ಚೆನ್ನಾಗಿದೆ ಎಂಬ ಭಾವದಲ್ಲಿ ಕಟ್ಟಿಕೊಟ್ಟಿವೆ. ಪ್ರಭುತ್ವ ಏನನ್ನು ಹೇಳಲು ಬಯಸುತ್ತದೋ ಅದನ್ನು ಇನ್ನಷ್ಟು ಸುಂದರವಾಗಿ ಮತ್ತು ಆಕರ್ಷಕವಾಗಿ ಹೇಳಿವೆ. ಬಿಬಿಸಿ, ಅಲ್ ಜಝೀರಾ, ರಾಯಿಟರ್ಸ್, ಎಎಫ್‍ಪಿ, ಎ.ಪಿ., ಟೈಮ್, ದ ನ್ಯೂಯಾರ್ಕ್ ಟೈಮ್ಸ್, ದ ವಾಷಿಂಗ್ಟನ್ ಪೋಸ್ಟ್, ಹಪ್ಫಿಂಗ್ಟನ್ ಪೋಸ್ಟ್, ಫ್ರಾನ್ಸ್ 24, ದ ಇಂಡಿಪೆಂಡೆಂಟ್, ದಾಸ್ಚೆ ವೆಲ್ಜಿ, ದ ವಾಲ್‍ಸ್ಟ್ರೀಟ್ ಜರ್ನಲ್, ದ ಲ್ಯಾನ್ಸೆಟ್ ಇತ್ಯಾದಿ ಇತ್ಯಾದಿ ಪತ್ರಿಕೆಗಳು ಕಾಶ್ಮೀರದ ಕುರಿತಂತೆ ಏನೆಲ್ಲ ವರದಿ ಮಾಡಿದುವೋ ಮತ್ತು ಏನೆಲ್ಲ ವೀಡಿಯೋಗಳನ್ನು ಹಂಚಿಕೊಂಡವೋ ಅದಕ್ಕೆ ತೀರಾ ವಿರುದ್ಧವಾಗಿ ಹೆಚ್ಚಿನ ಭಾರತೀಯ ಮಾಧ್ಯಮಗಳು ಸುದ್ದಿ ಪ್ರಕಟಿಸಿದುವು. ‘ವಿದೇಶಿ ಮತ್ತು ಸ್ವದೇಶಿ ಮಾಧ್ಯಮಗಳು ಮಾಡುತ್ತಿರುವ ವರದಿಗಳು ಒಂದೇ ರಾಜ್ಯದಿಂದ ಅಲ್ಲವೇ’ ಎಂದು ಪ್ರಶ್ನಿಸಬೇಕಾದ ರೀತಿಯಲ್ಲಿ ಭಾರತೀಯ ಮತ್ತು ವಿದೇಶಿ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟವಾದುವು. ನಿಜವಾಗಿ,
2014ರ ಬಳಿಕ ಮಾಧ್ಯಮ ಕ್ಷೇತ್ರದಲ್ಲಿ ಕಾಣಿಸಿಕೊಂಡ ‘ಪ್ರಭುತ್ವ ಪ್ರೇಮಿ’ ಕಾಯಿಲೆಯ ಮುಂದುವರಿದ ಭಾಗ ಇದು. ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರಕಾರವು ಆ ಬಳಿಕ ವಿದೇಶಿ ಪತ್ರಕರ್ತರಿಗೆ ಕಾಶ್ಮೀರಕ್ಕೆ ತೆರಳಲು ಅನುಮತಿಯನ್ನು ನಿರಾಕರಿಸಿದಾಗ ಅವು ಸ್ಥಳೀಯ ಪತ್ರಕರ್ತರ ನೆರವನ್ನು ಪಡೆದುಕೊಂಡವು. ಒಂದು ರೀತಿಯಲ್ಲಿ ನಿರ್ಬಂಧಕ್ಕೆ ನೀಡಿದ ಏಟು ಇದು. ಜನರ ಸ್ಥಿತಿ- ಗತಿಯನ್ನು ವರದಿ ಮಾಡದಂತೆ ತಡೆಯುವುದನ್ನು ಯಾವ ಸ್ಥಿತಿಯಲ್ಲಾದರೂ ಉಲ್ಲಂಘಿಸುವೆವು ಎಂಬ ಕಠಿಣ ಎಚ್ಚರಿಕೆ ಇದು. ಆ ಬಗೆಯ ಕೆಚ್ಚು ವಿದೇಶಿ ಮಾಧ್ಯಮಗಳ ಪಾಲಿಗೆ ವಿಫುಲ ಸುದ್ದಿಯನ್ನು ಒದಗಿಸಿದುವು. ಆದರೆ ಭಾರತೀಯ ಮಾಧ್ಯಮಗಳು ಈ ವಿಷಯದಲ್ಲಿ ತೀವ್ರ ವೈಫಲ್ಯವನ್ನು ಕಂಡವು. ಅವು ಕಾಶ್ಮೀರದ ಸ್ಥಿತಿಗತಿಯನ್ನು ಜನರ ಮುಂದಿಡುವ ಬದಲು ಇದು ದೇಶ ಕಟ್ಟುವ ಸಮಯವೆಂದು ಬಗೆದು ದೇಶಭಕ್ತಿ ಪ್ರದರ್ಶಿಸತೊಡಗಿದುವು. ಮಾರುಕಟ್ಟೆಯಲ್ಲಿ ಯಾವುದು ಹೆಚ್ಚು ಮಾರಾಟವಾಗಬಲ್ಲುದೋ ಅದನ್ನೇ ಉತ್ಪಾದಿಸಿ ಉತ್ಪಾದಿಸಿ ಹಂಚಿದುವು.
ಮಾಧ್ಯಮಗಳ ‘ಪ್ರಭುತ್ವ ಪ್ರೇಮಿ’ ಧೋರಣೆಯು ಅಂತಿಮವಾಗಿ ಯಾವ ಫಲಿತಾಂಶವನ್ನು ತರಬಲ್ಲುದೋ ಅದುವೇ ಇವತ್ತು ಸಾಮಾಜಿಕವಾಗಿ ವ್ಯಕ್ತಗೊಳ್ಳುತ್ತಿದೆ. ಜನರು ಖಾಸಗಿ ಮಾಧ್ಯಮಗಳ ಮೇಲೆ ವಿಶ್ವಾಸವನ್ನು ಕಳಕೊಳ್ಳುತ್ತಿದ್ದಾರೆ. ಮಾಧ್ಯಮ ಕ್ಷೇತ್ರ ಬಿತ್ತರಿಸುವ ಮತ್ತು ಪ್ರಕಟಿಸುವ ಯಾವುದೇ ಸುದ್ದಿ-ವಾರ್ತೆಯನ್ನು ತಕರಾರಿಲ್ಲದೇ ಸ್ವೀಕರಿಸುವ ಸ್ಥಿತಿ ಇವತ್ತು ಯಾರಲ್ಲೂ ಇಲ್ಲ. ಯಾವುದೇ ಪತ್ರಿಕೆಯ ಹೆಸರನ್ನು ಉಲ್ಲೇಖಿಸಿದ ಕೂಡಲೇ ಅದು ‘ಪ್ರಭುತ್ವ ಪ್ರೇಮಿ’ ಮತ್ತು ‘ನಂಬಲರ್ಹವಲ್ಲ’ ಎಂದು ಓದುಗರು ತಕ್ಷಣ ಷರಾ ಬರೆಯುವ ಸ್ಥಿತಿಗೆ ವಾತಾವರಣ ಬಂದುಮುಟ್ಟಿದೆ. ಮಾಧ್ಯಮ ಕ್ಷೇತ್ರದ ಹೆಚ್ಚಿನವರು ಹೀಗೆ ತಮ್ಮ ಕ್ರೆಡಿಬಿಲಿಟಿಯನ್ನು ಸಾರ್ವಜನಿಕವಾಗಿ ಕಳಕೊಂಡ ಸ್ಥಿತಿಯಲ್ಲಿದ್ದಾರೆ. ಇದಕ್ಕೆ ಇನ್ನೊಂದು ಉತ್ತಮ ಉದಾಹರಣೆ- ವಿಧಾನಸಭಾ ಕಲಾಪಕ್ಕೆ ಮಾಧ್ಯಮ ನಿರ್ಬಂಧವನ್ನು ಹೇರಿದ ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರದ ನಿರ್ಧಾರವನ್ನು ಪ್ರತಿಭಟಿಸುವುದಕ್ಕಾಗಿ ಬೆಂಗಳೂರಿನಲ್ಲಿ ನಡೆದ ಪತ್ರಕರ್ತರ ಪ್ರತಿಭಟನೆ. ಈ ಪ್ರತಿಭಟನೆಯಲ್ಲಿ ಪ್ರಮುಖ ಟಿ.ವಿ. ಚಾನೆಲ್‍ಗಳ ಖ್ಯಾತನಾಮರು ಭಾಗವಹಿಸಿದ್ದರು. ಆದರೆ, ಕುಮಾರ ಸ್ವಾಮಿಯನ್ನು ಇಳಿಸಿ ಯಡಿಯೂರಪ್ಪರನ್ನು ಮುಖ್ಯಮಂತ್ರಿಯಾಗಿ ಕೂರಿಸುವಲ್ಲಿ ಹಗಲಿರುಳು ಕಂಠ ಶೋಷಣೆ ಮತ್ತು ಪದ ಜೋಡಣೆ ಮಾಡಿದವರೇ ಹೀಗೆ ಬೀದಿಗಿಳಿದುದನ್ನು ಜನರು ಅನುಮಾನದಿಂದಲೇ ನೋಡಿದರು. ಸಾಮಾಜಿಕ ಜಾಲತಾಣಗಳಲ್ಲಂತೂ ಆ ಪ್ರತಿಭಟನೆ ಬೆಂಬಲ ಗಿಟ್ಟಿಸುವುದಕ್ಕಿಂತ ಹೆಚ್ಚು ಕುಹಕಕ್ಕೆ ಒಳಗಾಯಿತು. ಜನರು ಹರಿತ ಪದಗಳಿಂದ ತಿವಿದರು. ಕುಟುಕಿದರು. ವ್ಯಂಗ್ಯವಾಡಿದರು. ನಿಜವಾಗಿ,
ವಿಶ್ವಾಸಾರ್ಹತೆ ಕಳಕೊಂಡರೆ ಎದುರಾಗುವ ಸ್ಥಿತಿ ಇದು. ಅಂದು ಆಲ್ ಇಂಡಿಯಾ ರೇಡಿಯೋವಾದರೆ ಇಂದು ಖಾಸಗಿ ಟಿ.ವಿ. ಚಾನೆಲ್‍ಗಳು. ಅಷ್ಟೇ ವ್ಯತ್ಯಾಸ.
No comments:
Post a Comment